ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

15.01.22

ಮೊದಲನೆಯ ವಾಚನ: ಸಮುವೇಲ 9:1-4, 17-19

ಬೆನ್ಯಾಮೀನ ಕುಲದಲ್ಲಿ ಕೀಷನೆಂಬ ಒಬ್ಬ ಐಶ್ವರ್ಯವಂತನಿದ್ದನು. ಇವನು ಚೆರೋನನ ಮಗನೂ ಬೆಕೋರತನ ಮೊಮ್ಮಗನೂ ಆಫೀಹನ ಮರಿಮಗನೂ ಆದ ಅಬೀಯೇಲನ ಮಗ. ಇವನಿಗೆ ಸೌಲನೆಂಬ ಒಬ್ಬ ಮಗನಿದ್ದನು. ಈ ಸೌಲನು ಉತ್ತಮನೂ ಇಸ್ರಯೇಲರಲ್ಲೆಲ್ಲಾ ಅತಿ ಸುಂದರನೂ ಆಗಿದ್ದನು. ಜನರ ಗುಂಪಿನಲ್ಲಿ ಅವನ ಹೆಗಲೂ ತಲೆಯೂ ಕಾಣುವಷ್ಟು ಎತ್ತರ ಆಗಿದ್ದನು. ಒಂದು ದಿನ ಸೌಲನ ತಂದೆಯಾದ ಕೀಷನ ಕತ್ತೆಗಳು ಕಾಣದೆಹೋದವು. ಅವನು ತನ್ನ ಮಗ ಸೌಲನಿಗೆ, ನೀನೆದ್ದು ಆಳುಗಳಲ್ಲೊಬ್ಬನನ್ನು ಕರೆದುಕೊಂಡು ಕತ್ತೆಗಳನ್ನು ಹುಡುಕಲು ಹೋಗು, ಎಂದು ಹೇಳಿದನು. ಅದರಂತೆಯೇ ಸೌಲನು ಹೊರಟು ಎಫ್ರಯಿಮ್ ಪರ್ವತಪ್ರಾಂತ್ಯ ಹಾಗೂ ಶಾಲಿಷಾನಾಡು ಇವುಗಳಲ್ಲಿ ಸುತ್ತಾಡಿದರೂ ಅವು ಸಿಕ್ಕಲಿಲ್ಲ. ಶಾಲೀಮ್, ಬೆನ್ಯಾಮೀನ ಈ ಪ್ರಾಂತ್ಯಗಳಲ್ಲಿಯೂ ಸಿಕ್ಕಲಿಲ್ಲ. ಸಮುವೇಲನು ಸೌಲನನ್ನು ಕಂಡಾಗ ಸರ್ವೇಶ್ವರ ಅವನಿಗೆ ನಾನು ತಿಳಿಸಿದ್ದ ವ್ಯಕ್ತಿ ಇವನೇ; ಇವನೇ ನನ್ನ ಪ್ರಜೆಯನ್ನು ಆಳತಕ್ಕವನು, ಎಂದು ಸೂಚಿಸಿದನು. ಊರಬಾಗಿಲಿಗೆ ಬಂದ ಸೌಲನು ಎದುರಿಗೆ ಬಂದ ಸಮುವೇಲನನ್ನು ನೋಡಿ, ದಾರ್ಶನಿಕರ ಮನೆ ಎಲ್ಲಿದೆ ಎಂಬುದನ್ನು ದಯವಿಟ್ಟು ತಿಳಿಸುವಿರಾ? ಎಂದನು. ಸಮುವೇಲನು, ನಾನೇ ಆ ದಾರ್ಶನಿಕ; ನೀನು ನನ್ನ ಜೊತೆ ಗುಡ್ಡಕ್ಕೆ ಬಾ, ನೀನು ಈ ಹೊತ್ತು ನನ್ನ ಸಂಗಡ ಊಟಮಾಡಬೇಕು. ನಿನ್ನ ಚಿಂತೆಯನ್ನೆಲ್ಲಾ ಪರಿಹರಿಸಿ ನಾಳೆ ಬೆಳಗ್ಗೆ ನಿನ್ನನ್ನು ಕಳುಹಿಸಿಕೊಡುವೆನು, ಎಂದನು. ಆ ಮೇಲೆ ಸಮುವೇಲನು ಓಲಿವ್ ಎಣ್ಣೇಕುಪ್ಪಿಯಿಂದ ಅವನ ಮೇಲೆ ತೈಲವನ್ನು ಹೊಯ್ದು, ಅವನನ್ನು ಮುದ್ದಿಟ್ಟು ಅವನಿಗೆ, ಸರ್ವೇಶ್ವರ ತಮ್ಮ ಜನರ ಮೇಲೆ ರಾಜ್ಯವಾಳಲು ನಿಜವಾಗಿ ನಿನ್ನನ್ನು ಅಭಿಷೇಕಿಸಿದ್ದಾರೆ. ಎಂದನು.

ಕೀರ್ತನೆ: 21:1-2, 5-6
ಶ್ಲೋಕ: ಅರಸನಿಗೆ ಹರ್ಷವಾಯಿತು ಪ್ರಭೂ, ನೀ ತೋರಿದ ಪರಾಕ್ರಮಕ್ಕಾಗಿ.


ಅರಸನಿಗೆ ಹರ್ಷವಾಯಿತು ಪ್ರಭೂ|
ನೀ ತೋರಿದ ಪರಾಕ್ರಮಕ್ಕಾಗಿ
ಆತನ ಮನದಾಸೆಯನು ನೀ ಪೂರೈಸಿದೆ|
ಆತನಧರ ಬಯಕೆಯನು ಅನುಗ್ರಹಿಸಿದೆ||
ನೀನಾತನನು ಸ್ವಾಗತಿಸಿದ ಶುಭಾಶಯದೊಂದಿಗೆ|
ಚಿನ್ನದ ಕಿರೀಟವನು ಮುಡಿಸಿದೆ ಆತನ ಶಿರಸ್ಸಿಗೆ||

ಕೋರಿದನಾತನು ಜೀವಮಾನ ಕಾಲವನು|
ನೀನಿತ್ತೆ ಯುಗಯುಗಾಂತರದ ಆಯುಷ್ಯವನು||

ನಿನ್ನ ನೆರವಿಂದೇರಿತು ಆತನ ಘನತೆ|
ಶೋಭೆ, ಪ್ರಭಾವಗಳ ನೀನವನಿಗಿತ್ತೆ||
ಅಮರ ಭಾಗ್ಯಗಳನು ನೀನನುಗ್ರಹಿಸಿದೆ|
ಶ್ರೀಸನ್ನಿಧಿಯಲಾತನನು ತೋಷಗೊಳಿಸಿದೆ||

ಶುಭಸಂದೇಶ ವಾಚನ: ಮಾರ್ಕ 2: 13-17


ಆ ಕಾಲದಲ್ಲಿ ಯೇಸು ಪುನಃ ಗಲಿಲೇಯ ಸರೋವರದ ತೀರಕ್ಕೆ ಹೋದರು. ಜನರ ಗುಂಪು ಅವರನ್ನು ಸುತ್ತುಗಟ್ಟಿತು. ಯೇಸು ಅವರಿಗೆ ಪ್ರಬೋಧಿಸಿದರು. ಅಲ್ಲಿಂದ ಹೊರಟುಹೋಗುತ್ತಿರುವಾಗ, ಅಲ್ಫಾಯನ ಮಗನಾದ ಲೇವಿಯು ಸುಂಕ ವಸೂಲಿಗಾಗಿ ಉಕ್ಕಡದಲ್ಲಿ ಕುಳಿತಿರುವುದನ್ನು ಯೇಸು ಕಂಡರು. “ನನ್ನನ್ನು ಹಿಂಬಾಲಿಸು, ” ಎಂದು ಹೇಳಿ ಕರೆದರು. ಲೇವಿ ಎದ್ದು ಅವರನ್ನು ಹಿಂಬಾಲಿಸಿದನು. ತದನಂತರ ಯೇಸು ಲೇವಿಯ ಮನೆಯಲ್ಲಿ ಊಟಕ್ಕೆ ಕುಳಿತಿದ್ದರು. ಬಹುಮಂದಿ ಸುಂಕದವರು, ಪಾಪಿಷ್ಠರು, ಅಲ್ಲಿಗೆ ಬಂದರು. ಇವರೆಲ್ಲರೂ ಯೇಸು ಮತ್ತು ಅವರ ಶಿಷ್ಯರ ಪಂಕ್ತಿಯಲ್ಲೇ ಊಟಕ್ಕೆ ಕುಳಿತರು. ಇಂಥವರು ಬಹುಮಂದಿ ಯೇಸುವನ್ನು ಹಿಂಬಾಲಿಸುತ್ತಿದ್ದರು. ಫರಿಸಾಯ ಪಂಥಕ್ಕೆ ಸೇರಿದ್ದ ಧರ್ಮಶಾಸ್ತ್ರಿಗಳಲ್ಲಿ ಕೆಲವರು, ಸುಂಕದವರ ಮತ್ತು ಇತರ ಪಾಪಿಗಳ ಪಂಕ್ತಿಯಲ್ಲಿ ಯೇಸು ಊಟ ಮಾಡುವುದನ್ನು ಕಂಡು, “ಈತನು ಇಂಥಾ ಬಹಿಷ್ಕøತ ಜನರ ಜೊತೆಯಲ್ಲಿ ಊಟ ಮಾಡುವುದೇಕೆ?” ಎಂದು ಯೇಸುವಿನ ಶಿಷ್ಯರೊಡನೆ ಆಕ್ಷೇಪಿಸಿದರು. ಇದನ್ನು ಕೇಳಿಸಿಕೊಂಡ ಯೇಸು ಅವರಿಗೆ, “ವೈದ್ಯನ ಅವಶ್ಯಕತೆ ಇರುವುದು ರೋಗಿಗಳಿಗೆ, ಆರೋಗ್ಯವಂತರಿಗಲ್ಲ; ನಾನು ಕರೆಯಲು ಬಂದಿರುವುದು ಧರ್ಮಿಷ್ಠರನ್ನಲ್ಲ, ಪಾಪಿಷ್ಠರನ್ನು, ” ಎಂದರು.

No comments:

Post a Comment