ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

27.11.21

ಮೊದಲನೆಯ ವಾಚನ: ದಾನಿಯೇಲ 7:15-27

ದಾನಿಯೇಲನಾದ ನನ್ನ ಮನ ಒಳಗೇ ವ್ಯಥೆಗೊಂಡಿತು. ನನ್ನ ಮನಸ್ಸಿನಲ್ಲಿ ತೋಚದ ದರ್ಶನಗಳು ನನ್ನನ್ನು ಕಳವಳಪಡಿಸಿದವು. ಹತ್ತಿರದಲ್ಲೇ ನಿಂತಿದ್ದವರಲ್ಲಿ ಒಬ್ಬನ ಬಳಿಗೆ ಹೋಗಿ ಇವುಗಳ ಸರಿಯಾದ ಅರ್ಥ ಏನೆಂದು ವಿಚಾರಿಸಿದೆ. ಅವನು ನನಗೆ: " ಆ ನಾಲ್ಕು ದೊಡ್ಡ ಮೃಗಗಳು ಲೋಕಸಾಗರಗಳಿಂದ ಏರತಕ್ಕ ನಾಲ್ಕು ರಾಜ್ಯಗಳು. ಆದರೆ ರಾಜ್ಯಾಧಿಕಾರ ಲಭಿಸುವುದು ಮಹೋನ್ನತರ ಪವಿತ್ರ ಪ್ರಜೆಗೆ. ಅದನ್ನು ತಲೆತಲಾಂತರಕ್ಕೂ ಶಾಶ್ವತವಾಗಿ ಅನುಭವಿಸುವವರು ಅವರೇ, " ಎಂದು ಆ ವಿಷಯಗಳ ತಾತ್ಪರ್ಯವನ್ನು ವಿವರಿಸಿ ತಿಳಿಸಿದನು. ಆದಾದ ಮೇಲೆ ಇತರ ಮೃಗಗಳಿಗಿಂತ ವಿಲಕ್ಷಣವಾಗಿಯೂ ಅತಿ ಭಯಂಕರವಾಗಿಯೂ ಕಬ್ಬಿಣದ ಹಲ್ಲು, ಕಂಚಿನ ಉಗುರುಳ್ಳದ್ದಾಗಿಯೂ ತನ್ನ ಬಲಿಯನ್ನು ತುಂಡುತುಂಡಾಗಿಸಿ ಕಬಳಿಸುತ್ತಿದ್ದ ಆ ನಾಲ್ಕನೆಯ ಮೃಗದ ವಿಷಯವನ್ನು ತಿಳಿದುಕೊಳ್ಳಲು ಬಯಸಿದೆ. ಅದರ ತಲೆಯ ಮೇಲಿದ್ದ ಹತ್ತು ಕೊಂಬುಗಳ ವಿಷಯವಾಗಿಯೂ, ನಾನು ನೋಡುತ್ತಿದ್ದ ಹಾಗೆ ಯಾವ ಕೊಂಬು ಮೊಳೆತು ಮೂರು ಕೊಂಬುಗಳನ್ನು ಬೀಳಿಸಿ, ತನ್ನಲ್ಲೆ ಕಣ್ಣುಳ್ಳದಾಗಿ ಬಡಾಯಿ ಕೊಚ್ಚಿಕೊಳ್ಳುವ ಬಾಯುಳ್ಳದ್ದಾಗಿ, ಮಿಕ್ಕ ಕೊಂಬುಗಳಿಗಿಂತ ಭಯಂಕರವಾಗಿ ಕಾಣಿಸುತ್ತಾ ಇತ್ತೋ, ಆ ಕೊಂಬಿನ ವಿಷಯವಾಗಿ ಸತ್ಯಾರ್ಥವನ್ನೂ ತಿಳಿದುಕೊಳ್ಳಬೇಕೆಂದು ವಿಚಾರಿಸಿದೆ. ಆ ಕೊಂಬು ಪವಿತ್ರ ಪ್ರಜೆಯೊಂದಿಗೆ ಯುದ್ಧಮಾಡುತ್ತಿತ್ತು. ಮಹಾವೃದ್ಧನು ಬಂದು ಮಹೋನ್ನತರ ಆ ಪವಿತ್ರ ಪ್ರಜೆಗೆ ನ್ಯಾಯತೀರಿಸಿ ಅವರಿಗೆ ರಾಜ್ಯವನ್ನು ದೊರಕಿಸುವ ತನಕ ಅವರನ್ನು ಗೆಲ್ಲುತ್ತಾ ಬಂದಿತ್ತು. ಆಗ ಅವನು ನನಗೆ ಕೊಟ್ಟ ವಿವರ ಇದು: " ಆ ನಾಲ್ಕನೆಯ ಮೃಗ ಲೋಕದಲ್ಲಿ ತಲೆಯೆತ್ತುವ ನಾಲ್ಕನೆಯ ರಾಜ್ಯ. ಅದು ಮಿಕ್ಕ ರಾಜ್ಯಗಳಿಗಿಂತ ವಿಲಕ್ಷಣವಾದುದು. ಲೋಕವನ್ನೇ ಕಾಲಿನಿಂದ ತುಳಿದು ಚೂರುಚೂರು ಮಾಡಿ ಕಬಳಿಸುವುದು. ಆ ಹತ್ತು ಕೊಂಬುಗಳು ಅದೇ ರಾಜ್ಯವನ್ನು ಆಳುವ ಹತ್ತು ಮಂದಿ ಅರಸರು. ಅವರ ತರುವಾಯ ಮತ್ತೊಬ್ಬನು ತಲೆದೋರುವನು. ಅವನು ಮುಂಚಿನ ಅರಸರಿಗಿಂತ ವಿಲಕ್ಷಣವಾಗಿರುವನು, ಆ ಮೂವರು ಅರಸರನ್ನು ಸದೆಬಡಿದುಬಿಡುವನು. ಅವನು ಮಹೋನ್ನತ ದೇವರಿಗೆ ವಿರುದ್ದವಾಗಿ ಕೊಚ್ಚಿಕೊಳ್ಳುವನು. ಮಹೋನ್ನತರ ಪವಿತ್ರ ಪ್ರಜೆಯನ್ನು ಶೋಷಣೆಗೆ ಗುರಿಮಾಡುವನು. ಆ ಪ್ರಜೆ ಅವನಿಗೆ ಮೂರುವರೆ ವರ್ಷ ಅಧೀನರಾಗಿರುವರು. ಆದರೆ ದೇವರ ನ್ಯಾಯಸಭೆ ತೀರ್ಪಿತ್ತು, ಅವನ ದೊರೆತನವನ್ನು ಕಿತ್ತು, ವಿನಾಶಮಾಡಿ, ಕೊನೆಗಾಣಿಸಿಬಿಡುವುದು. ರಾಜ್ಯಭಾರವೂ ದೊರೆತನವೂ ಸಮಸ್ತಲೋಕದಲ್ಲಿನ ರಾಜ್ಯಗಳ ಮಹಿಮೆಯೂ ಮಹೋನ್ನತರ ಭಕ್ತಜನರಿಗೆ ಕೊಡಲಾಗುವುದು. ಅವರ ರಾಜ್ಯ ಶಾಶ್ವತ ರಾಜ್ಯ. ಎಲ್ಲ ದೇಶಾಧಿಪತಿಗಳೂ ಅವರಿಗೆ ಅಧೀನರಾಗಿ ಸೇವೆ ಮಾಡುವರು, " ಎಂದು ಹೇಳಿದನು.

ಕೀರ್ತನೆ ಅಜರ್ಯ 60:65
ಶ್ಲೋಕ: ಸರ್ವೇಶ್ವರನನ್ನು ಕೊಂಡಾಡಿ, ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ.

ಮಾನವ ಜನಾಂಗಗಳೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||
ಇಸ್ರಯೇಲ್ ನಾಡೇ, ಸರ್ವೇಶ್ವರನನ್ನು ಕೊಂಡಾಡು|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸು||

ಸರ್ವೇಶ್ವರನ ಯಾಜಕರೇ,, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||
ಸರ್ವೇಶ್ವರನ ದಾಸರೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||

ಸಜ್ಜನರ ಜೀವಾತ್ಮಗಳೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||
ಸಂತರೇ, ದೀನಮನಸ್ಕರೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||

ಶುಭಸಂದೇಶ: ಲೂಕ 21:34-36

ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಮಿತಿಮೀರಿದ ಭೋಜನದಿಂದಾಗಲಿ, ಕುಡಿತದಿಂದಾಗಲಿ, ಲೌಕಿಕ ಚಿಂತೆಗಳಿಂದಾಗಲಿ ಮಂದಮತಿಗಳಾಗಬೇಡಿ. ಆ ದಿನವು ಅನಿರೀಕ್ಷಿತ ಉರುಲಿನಂತೆ ನಿಮ್ಮನ್ನು ಸಿಕ್ಕಿಸೀತು, ಜಾಗುರೂಕರಾಗಿರಿ! ಜಗತ್ತಿನ ಎಲ್ಲಾ ನಿವಾಸಿಗಳೂ ಅದಕ್ಕೆ ಸಿದ್ಧರಾಗಿರಬೇಕು. ಬಂದೊದಗಲಿರುವ ಇವೆಲ್ಲವುಗಳಿಂದ ಪಾರಾಗಿ ನರಪುತ್ರರ ಮುಂದೆ ನಿಲ್ಲಲು ನೀವು ಶಕ್ತರಾಗುವಂತೆ ನಿರಂತರವಾಗಿ ಪ್ರಾರ್ಥನೆ ಮಾಡುತ್ತಾ ಎಚ್ಚರಿಕೆಯಿಂದಿರಿ, " ಎಂದರು.

No comments:

Post a Comment