ಮೊದಲನೆಯ ವಾಚನ: ಮಕ್ಕಬಿ 6:18-31
ಧರ್ಮಶಾಸ್ತ್ರ ಪಂಡಿತರಲ್ಲಿ ಅತೀ ನಿಪುಣನಾದ ಎಲ್ಲಾಜಾರನು ವಯೋವೃದ್ದನು, ಉಜ್ಜಲರೂಪ ಉಳ್ಳವನು. ಅವನು ಹಂದಿಮಾಂಸವನ್ನು ತಿನ್ನಲು ಬಲತ್ಕಾರದಿಂದ ಬಾಯ್ದೆರೆಯ ಮಾಡಿದರು. ಅವನಾದರೋ, ಹೊಲಸಾದ ಜೀವನ ನಡೆಸುವುದಕ್ಕಿಂತ ಮರ್ಯಾದೆಯಿಂದ ಸಾಯುವುದು ಲೇಸೆಂದು ಎಣಿಸಿದನು. ಬಾಯೊಳಗಿಂದ ಆ ಮಾಂಸವನ್ನು ಉಗಿದುಬಿಟ್ಟನು. ಬದುಕುವುದಕ್ಕಿಂತ ಹೆಚ್ಚಾಗಿ ನಿಷೇಧಿಸಲಾದ ಆಹಾರವನ್ನು ರುಚಿಸಲು ಧೈರ್ಯದಿಂದ ನಿರಾಕರಿಸಿದನು. ಹೀಗೆ ತಾನೇ ಯಾತನೆಯ ಸ್ಥಳಕ್ಕೆ ಮುನ್ನಡೆದು ಬಂದನು. ನಿಷಿದ್ಧ ಬಲಿಭೋಜನದ ಉಸ್ತುವಾರಿ ನೋಡುವಂಥವರು, ಎಲ್ಲಾಜಾರನನ್ನು ಬಹುಕಾಲ ಅರಿತವರಾದ್ದರಿಂದ, ಅವನನ್ನು ರಹಸ್ಯವಾಗಿ ಕೊಂಡೊಯ್ದು ಬೇರೆ ಯಾವುದಾದರೂ ತಿನ್ನಬಹುದಾದ ಮಾಂಸವನ್ನು ಸ್ವಿಕರಿಸಿ, ಅರಸನ ಆಜ್ಞೆಗನುಣವಾಗಿ ಬಲಿಭೋಜನ ಆಹಾರವನ್ನು ತಿನ್ನುವಂತೆ ನಟಿಸಬೇಕೆಂದು ಗುಟ್ಟಾಗಿ ಸಲಹೆಕೊಟ್ಟರು. ಹೀಗೆ ಅವರೊಂದಿಗಿದ್ದ ಸ್ನೇಹದ ನಿಮಿತ್ತ, ಅವನನ್ನು ಮರಣಶಿಕ್ಷೆಯಿಂದ ತಪ್ಪಿಸಲು ಕರುಣೆಯ ಒಂದು ದಾರಿಯನ್ನು ತೋರಿಸಿದರು. ಆದರೆ ಅವನು ತನ್ನ ವಯಸ್ಸಿನ ಯೋಗ್ಯತೆಗೆ, ಮುಪ್ಪಿನ ಘನತೆಗೆ, ನೆರೆಕೂದಲಿಗೆ ಸಲ್ಲತಕ್ಕ ಗೌರವಕ್ಕೆ, ಬಾಲ್ಯದಿಂದಲೂ ಕಾಪಾಡಿಕೊಂಡು ಬಂದ ಸನ್ನಡತೆಗೆ ತಕ್ಕಂತೆ, ಎಲ್ಲಕ್ಕಿಂತಲೂ ಹೆಚ್ಚಾಗಿ ದೇವರು ತಾವೇ ನೀಡಿದ ಪವಿತ್ರ ನಿಯಮಕ್ಕೆ ಅನುಗುಣವಾಗಿ, ಉದಾತ್ತ ನಿರ್ಧಾರವನ್ನು ಕೈಗೊಂಡು, ಕೂಡಲೇ ಮೃತ್ಯುಲೋಕಕ್ಕೆ ತನ್ನನ್ನು ಕಳುಹಿಸಿಬಿಡಬೇಕೆಂದು ಕೇಳಿಕೊಂಡನು. " ಇಂಥಾ ನಟನೆ ವಯೋವೃದ್ದನಾದ ನನಗೆ ತಕ್ಕುದಲ್ಲ. ತೊಂಬತ್ತು ವರ್ಷದ ವ್ಯಕ್ತಿಯಾದ ಎಲ್ಲಾಜಾರನೇ ತನ್ನ ಧರ್ಮವನ್ನು ಉಲ್ಲಘಿಸಿ, ಪರಕೀಯರ ಪದ್ಧತಿಯನ್ನು ಅನುಸರಿಸಿದ್ದಾನೆಂದು ಹೇಳುತ್ತಾರೆ. ಬದುಕಲು ಸ್ವಲ್ಪಕಾಲಕ್ಕೆ ಈ ರೀತಿ ವರ್ತಿಸುವುದರಿಂದ ಯುವಕರನ್ನು ತಪ್ಪುದಾರಿಗೆ ಎಳೆದಂತಾಗುತ್ತದೆ. ನನ್ನ ಮುಪ್ಪಿನ ಕಳಂಕವನ್ನೂ ನಿಂದೆಯನ್ನೂ ತಂದುಕೊಂಡಂತಾಗುತ್ತದೆ. ತಾತ್ಕಾಲಿಕವಾಗಿ ನಾನು ನರಮಾನವರ ಶಿಕ್ಷೆಯಿಂದ ಸಧ್ಯಕ್ಕೆ ತಪ್ಪಿಸಿಕೊಂಡರೂ, ಸರ್ವಶಕ್ತ ದೇವರ ಕೈಯಿಂದ ಜೀವಂತವಾಗಿ ಆಗಲಿ, ಸತ್ತಾಗ ಆಗಲಿ, ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದುದರಿಂದ, ಅವರು ಈಗ ನನ್ನ ಪ್ರಾಣತೆಗೆಯುವುದಕ್ಕೆ ನಾನೇ ಧೈರ್ಯದಿಂದ ಸಮ್ಮತಿಸುವುದರಿಂದ ನನ್ನ ಮುಪ್ಪಿನ ಘನತೆಗೆ ಯೋಗ್ಯನೆಂದು ಸ್ಪಷ್ಟೀಕರಿಸುತ್ತೇನೆ. ಹೀಗೆ ಪೂಜ್ಯ ಹಾಗೂ ಪವಿತ್ರ ನಿಯಮಕ್ಕಾಗಿ ಆಸಕ್ತಿಯಿಂದ ಮತ್ತು ಧಾರಳ ಮನಸ್ಸಿನಿಂದ ಒಳ್ಳೆಯವನಾಗಿ ಹೇಗೆ ಮರಣಹೊಂದಬಹುದು ಎಂಬ ಭವ್ಯ ಆದರ್ಶವನ್ನು ಚಿಕ್ಕವರಿಗೆ ನೀಡಿದಂತಾಗುತ್ತದೆ, " ಎಂದನು. ಇಷ್ಟನ್ನು ಹೇಳಿದ ಮೇಲೆ ಅವನು ವಧ್ಯಸ್ಥಾನಕ್ಕೆ ನೆಟ್ಟಿಗೆ ಹೋದನು. ಸ್ವಲ್ಪಹೊತ್ತಿಗೆ ಮುಂಚೆ ಸ್ನೇಹ ಪರವಾಗಿ ವರ್ತಿಸುತ್ತಿದ್ದ ಆ ಬೆಂಗಾವಲಿನವರು, ಅವನು ಮಾತಾಡಿದ್ದು ಹುಚ್ಚುತನದಿಂದ ಎಂದೆಣಿಸಿ ಅವನ ಮೇಲೆ ತಿರುಗಿಬಿದ್ದರು. ಮರಣದ ಹಂತವನ್ನು ತಲುಪುವವರೆಗೆ ಅವನನ್ನು ಹೊಡೆದರು. ಆಗ ಎಲ್ಲಾಜಾರನು ನಿಟ್ಟುಸಿರು ಬಿಡುತ್ತಾ, " ನಾನು ಮರಣದಿಂದ ತಪ್ಪಿಸಿಕೊಳ್ಳಬಹುದಾಗಿದ್ದರೂ ಸರ್ವೇಶ್ವರನಲ್ಲಿರುವ ಭಯಭಕ್ತಿಯ ನಿಮಿತ್ತವೇ ಚಾಟಿಯಿಂದಾದ ಈ ದೈಹಿಕ ಯಾತನೆಯನ್ನು ಸಂತೋಷದಿಂದ ಸಹಿಸಿಕೊಳ್ಳುತ್ತೇನೆ. ಹೀಗೆ ಹಿಂಸೆಯನ್ನು ಹೃತ್ಪೂರ್ವಕವಾಗಿ ಅನುಭವಿಸುತ್ತಿದ್ದೇನೆ ಎಂಬುದು ಪರಮ ಪವಿತ್ರ ಜ್ಞಾನಿಯಾದ ಸರ್ವೇಶ್ವರನಿಗೆ ತಿಳಿದಿದೆ, " ಎಂದನು. ಹೀಗೆ ಎಲ್ಲಾಜಾರನು ಸಾವನ್ನು ಅಪ್ಪಿದನು, ಅವನ ಮರಣ ಚಿಕ್ಕವರಿಗೆ ಮಾತ್ರವಲ್ಲ, ಜನಾಂಗದ ಬಹುಭಾಗದವರಿಗೆ ಉದಾತ್ತ ಆದರ್ಶವಾಗಿತ್ತು. ಚಿರಸ್ಮರಣೆಯ ಪುಣ್ಯ ದಾಖಲೆಯಾಗಿತ್ತು.
ಕೀರ್ತನೆ 3:1-6
ಶ್ಲೋಕ: ಕಾಯ್ದು ಕಾಪಾಡುವನು ಪ್ರಭು ನನ್ನನು.
ಪ್ರಭೂ, ನನಗೆ ವಿರೋಧಿಗಳು ಅನೇಕ|
ನನಗೆದುರಾಗಿ ನಿಂತವರು ಅತ್ಯಧಿಕ||
ಈತನಿಗೆ ದೇವರ ನೆರವೆನಿತು?|
ಇಂತಿದೆ ಹಲವರ ಕೆಣಕು ಮಾತು||
ನೀನಾದರೋ ಪ್ರಭೂ, ನನಗೆ ರಕ್ಷೆ, ವಿಜಯದಾತ|
ನಾನು ತಲೆಯೆತ್ತಿ ನಡೆಯುವಂತೆ ಮಾಡುವಾತ||
ಸ್ವರವೆತ್ತಿ ಎನ್ನ ಪ್ರಭುವಿಗೆ ನಾ ಮೊರೆಯಿಡುವೆನು|
ಸಿರಿಸಿಖರದಿಂದಾತನು ಸದುತ್ತರ ನೀಡುವನು||
ಹಾಯಾಗಿ ಮಲಗಿ ನಿದ್ರಿಸುವೆನು|
ಸುಖಿಯಾಗಿ ಮರಳಿ ಎದ್ದೇಳುವೆನು|
ಕಾಯ್ದು ಕಾಪಾಡುವನು ಪ್ರಭು ನನ್ನನು||
ಶತ್ರುಗಳು ಸಾವಿರವಿದ್ದರೂ ನಾನವರಿಗಂಜೆನು|
ಸುತ್ತುವರಿದು ಸನ್ನದ್ಧರಾಗಿದ್ದರೂ ಭಯಪಡೆನು||
ಶುಭಸಂದೇಶ ವಾಚನ: ಲೂಕ 19:1-10
ಆ ಕಾಲದಲ್ಲಿ ಯೇಸು ಜೆರಿಕೊ ಪಟ್ಟಣವನ್ನು ಪ್ರವೇಶಿಸಿ ಅದರ ಬೀದಿಗಳಲ್ಲಿ ಹಾದುಹೋಗುತ್ತಿದ್ದರು. ಅಲ್ಲಿ ಜಕ್ಕಾಯ ಎಂಬವನಿದ್ದನು. ಅವನು ಸುಂಕವಸೂಲಿಯವರ ಮುಖಂಡ ಹಾಗೂ ಧನಾಢ್ಯ. ಯೇಸು ಯಾರೆಂದು ನೋಡಬೇಕೆಂಬ ಅಪೇಕ್ಷೆ ಅವನದು. ಆದರೆ ಅವನು ಗಿಡ್ಡ ವ್ಯಕ್ತಿ. ಜನಜಂಗುಳಿಯ ಮಧ್ಯೆ ಯೇಸುವನ್ನು ನೋಡಲು ಪ್ರಯತ್ನಿಸಿದರೂ ಅವನಿಂದಾಗಲಿಲ್ಲ. ಆದಕಾರಣ ಮುಂದಕ್ಕೆ ಓಡಿಹೋಗಿ ಯೇಸು ಬರುತ್ತಿದ್ದ ಆ ಮಾರ್ಗದಲ್ಲಿ ಒಂದು ಆಲದ ಮರವನ್ನು ಕಂಡು ಅದನ್ನು ಹತ್ತಿದನು. ಯೇಸು ಆ ಸ್ಥಳಕ್ಕೆ ಬಂದು ತಲೆಯೆತ್ತಿ ನೋಡಿ, " ಜಕ್ಕಾಯಾ, ಒಡನೆ ಇಳಿದು ಬಾ, ಈ ದಿನ ನಿನ್ನ ಮನೆಯಲ್ಲಿ ನಾನು ತಂಗಬೇಕು, " ಎಂದರು. ಜಕ್ಕಾಯನು ತಕ್ಷಣವೇ ಇಳಿದು ಬಂದು ಯೇಸುವನ್ನು ಸಂತೋಷದಿಂದ ಸ್ವಾಗತಿಸಿದನು. ಇದನ್ನು ನೋಡಿದವರೆಲ್ಲರು, " ಯೇಸು ಪಾಪಿಷ್ಠನ ಮನೆಗೆ ಅತಿಥಿಯಾಗಿ ಹೋಗುತ್ತಾನಲ್ಲಾ? " ಎಂದು ಗೊಣಗುಟ್ಟಿದರು. ಜಕ್ಕಾಯನು ನೆರೆದಿದ್ದ ಜನರ ಮುಂದೆ ಎದ್ದುನಿಂತು ಯೇಸುವಿಗೆ, " ಪ್ರಭುವೇ, ನನ್ನ ಆಸ್ತಿಪಾಸ್ತಿಯಲ್ಲಿ ಅರ್ಧಭಾಗವನ್ನು ಬಡಬಗ್ಗರಿಗೆ ಕೊಟ್ಟುಬಿಡುತ್ತೇನೆ. ಯಾರಿಗಾದರೂ ಮೋಸಮಾಡಿ ಅವರಿಂದೇನಾದರೂ ನಾನು ಕಸಿದುಕೊಂಡಿದ್ದರೆ ಅದಕ್ಕೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ, " ಎಂದನು. ಆಗ ಯೇಸು, " ಇಂದು ಈ ಮನೆ ಉದ್ಧಾರವಾಯಿತು. ಇವನು ಕೂಡ ಅಬ್ರಹಾಮನ ವಂಶಕ್ಕೆ ಸೇರಿದವನಲ್ಲವೆ? ನರಪುತ್ರನು ಬಂದಿರುವುದು ಪತಿತರನ್ನು ಅರಸಿ ಉದ್ಧರಿಸುವುದಕ್ಕೆ, " ಎಂದು ಹೇಳಿದರು.
No comments:
Post a Comment