ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

06.11.21 - " ಸಣ್ಣ ವಿಷಯಗಳಲ್ಲಿ ದ್ರೋಹಮಾಡುವವನು ದೊಡ್ಡ ವಿಷಯಗಳಲ್ಲೂ ದ್ರೋಹಮಾಡುತ್ತಾನೆ."

ಮೊದಲನೇ ವಾಚನ: ರೋಮನರಿಗೆ 16:3-9, 16, 22-27

ಕ್ರಿಸ್ತ ಯೇಸುವಿನ ಸೇವೆಯಲ್ಲಿ ನನ್ನ ಸಹೋದ್ಯೋಗಿಗಳಾದ ಪ್ರಿಸಿಲ್ಲಳಿಗೂ ಅಕ್ವಿಲನಿಗೂ ನನ್ನ ವಂದನೆಗಳನ್ನು ತಿಳಿಸಿರಿ. ಅವರು ನನ್ನ ಪ್ರಾಣರಕ್ಷೆಣೆಗಾಗಿ ತಮ್ಮ ಪ್ರಾಣಗಳನ್ನೇ ಅಪಾಯಕ್ಕೆ ಈಡಾಗಿಸಿದವರು. ಅದಕ್ಕಾಗಿ ನಾನು ಅವರಿಗೆ ಚಿರಋಣಿ. ನಾನು ಮಾತ್ರವಲ್ಲ, ಯೆಹೂದ್ಯೇತರ ಸಭೆಗಳ ಎಲ್ಲರೂ ಅವರು ಮಾಡಿದ ಉಪಕಾರಕ್ಕೆ ಚಿರಋಣಿಗಳಾಗಿದ್ದಾರೆ. ಅವರ ಮನೆಯಲ್ಲಿ ಸೇರುವ ಸಭೆಗೂ ನನ್ನ ಶುಭಾಶಯಗಳು. ನನ್ನ ಆಪ್ತ ಗೆಳೆಯ ಎಪೈನೆತನಿಗೆ ನನ್ನ ಪ್ರಣಾಮಗಳು, ಏಷ್ಯಸೀಮೆಯಲ್ಲಿ ಮೊತ್ತಮೊದಲಿಗೆ ಕ್ರಿಸ್ತ ಯೇಸುವನ್ನು ವಿಶ್ವಾಸಿಸಿದವನು ಆತನೇ. ನಿಮಗಾಗಿ ಬಹಳ ಶ್ರಮ ವಹಿಸಿದ ಮರಿಯಳಿಗೂ ನನ್ನ ನಮಸ್ಕಾರಗಳು. ನನ್ನ ಸ್ವದೇಶಿಯರೂ ನನ್ನೊಡನೆ ಸೆರೆಯಲ್ಲಿ ಇದ್ದವರೂ ಆದ ಅಂದ್ರೋನಿಕನಿಗೂ ಯೂನ್ಯನಿಗೂ ನನ್ನ ನಮನಗಳು. ಅವರು ಪ್ರೇಷಿತರಂತೆ ಸನ್ಮಾನಿತರು, ಕ್ರಿಸ್ತ ಯೇಸುವನ್ನು ವಿಶ್ವಾಸಿಸುವುದರಲ್ಲಿ ನನಗಿಂತಲೂ ಮೊದಲಿಗರು. ಪ್ರಭುವಿನಲ್ಲಿ ನನ್ನ ಆಪ್ತ ಗೆಳೆಯನಾದ ಅಂಪ್ಲಿಯಾತನಿಗೆ ನನ್ನ ವಂದನೆಗಳು. ಯೇಸುಕ್ರಿಸ್ತರ ಸೇವೆಯಲ್ಲಿ ನನ್ನ ಸಹೋದ್ಯೋಗಿಯಾದ ಉರ್ಬಾನನಿಗೂ ನನ್ನ ಮಿತ್ರ ಸ್ತಾಕುನಿಗೂ ವಂದನೆಗಳು. ಪವಿತ್ರವಾದ ಮುದ್ದನ್ನಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಎಲ್ಲಾ ಕ್ರೈಸ್ತ ಸಭೆಗಳವರು ನಿಮಗೆ ತಮ್ಮ ವಂದನೆಗಳನ್ನು ಕಳುಹಿಸಿದ್ದಾರೆ. ಈ ಪತ್ರವನ್ನು ಬರೆದುಕೊಟ್ಟ ತೆರ್ತ್ಯನೆಂಬ ನಾನೂ ನಿಮ್ಮನ್ನು ಪ್ರಭುವಿನಲ್ಲಿ ವಂದಿಸುತ್ತೇನೆ. ನನಗೂ ಸಮಸ್ತ ಸಭೆಗೂ ಅತಿಥಿಸತ್ಕಾರ ನೀಡುತ್ತಿರುವ ಗಾಯನು ನಿಮ್ಮನ್ನು ವಂದಿಸುತ್ತಾನೆ. ಈ ಪಟ್ಟಣದ ಖಜಾಂಚಿ ಎರಸ್ತನೂ ಸಹೋದರ ಕ್ವರ್ತನೂ ನಿಮಗೆ ವಂದನೆಗಳನ್ನು ಹೇಳಿದ್ದಾರೆ. ನಮ್ಮ ಪ್ರಭು ಯೇಸುಕ್ರಿಸ್ತರ ಅನುಗ್ರಹವು ನಿಮ್ಮೆಲ್ಲರೊಡನೆ ಇರಲಿ ! ಆಮೆನ್. ಅನಾದಿಯಿಂದಲೂ ಗುಪ್ತವಾಗಿದ್ದ ರಹಸ್ಯವು ಈಗ ಪ್ರಕಟವಾಗಿದೆ. ಶಾಶ್ವತ ದೇವರ ಆಜ್ಞೆಯ ಮೇರೆಗೆ ಅನ್ಯಧರ್ಮಿಯರೂ ವಿಧೇಯರಾಗಿ ವಿಶ್ವಾಸಿಸುವಂತೆ ಪ್ರವಾದನಾ ಗ್ರಂಥಗಳ ಮೂಲಕ ಆ ರಹಸ್ಯವನ್ನು ಈಗ ಅವರಿಗೆ ತಿಳಿಸಲಾಗುತ್ತಿದೆ. ಇದನ್ನು ಬೆಳಕಿಗೆ ತರುವ ನನ್ನ ಸಂದೇಶದ ಮೂಲಕ ಮತ್ತು ಯೇಸುಕ್ರಿಸ್ತರನ್ನು ಕುರಿತ ಬೋಧನೆಯ ಮೂಲಕ ದೇವರು ನಿಮ್ಮನ್ನು ವಿಶ್ವಾಸದಲ್ಲಿ ದೃಢಪಡಿಸಲು ಶಕ್ತರು. ಜ್ಞಾನಾಂಬುದಿಯಾದ ಆ ಏಕೈಕ ದೇವರಿಗೆ ಯೇಸುಕ್ರಿಸ್ತರ ಮುಖಾಂತರ ಯುಗಯುಗಾಂತರಕ್ಕೂ ಮಹಿಮೆ ಸಲ್ಲಲಿ ! ಆಮೆನ್.

ಕೀರ್ತನೆ 144:2-5, 10-11
ಶ್ಲೋಕ: ಯುಗಯುಗಾಂತರಕೂ ನಿನ್ನ ನಾಮಕ್ಕೆ ನಮನ.

ಹೊಗಳುವೆನು ನಾ ದಿನದಿನವೂ ನಿನ್ನನ್ನು|
ಭಜಿಸುವೆನೆಂದಿಗೂ ನಿನ್ನ ಹೆಸರನು||
ಪ್ರಭು ಮಹಾತ್ಮನು, ಸುತ್ಯಾರ್ಹನು|
ಆತನ ಮಹಿಮೆ ಅಗಮ್ಯವಾದದು||

ತಲೆಮಾರು ತಲೆಮಾರಿಗೆ ನುತಿಸುವುದು ನಿನ್ನ ಕಾರ್ಯಗಳನು|
ತಿಳಿಸುವುದು ಪ್ರಭೂ, ನೀ ಮಾಡಿದೆಲ್ಲಾ ಮಹತ್ಕಾರ್ಯಗಳನು||
ಧ್ಯಾನಿಸುವೆನು ನಿನ್ನ ಅದ್ಭುತಕಾರ್ಯಗಳನು|
ನಿನ್ನ ಮಹೋನ್ನತ ಮಹಿಮಾ ಪ್ರಭಾವವನು||

ಪ್ರಭೂ, ನಿನ್ನನು ಸ್ತುತಿಪುದು ಸೃಷ್ಟಿಯೆಲ್ಲವು|
ಕೊಂಡಾಡುವುದು ನಿನ್ನನು ಭಕ್ತಸಮೂಹವು||
ಪ್ರಸಿದ್ದಪಡಿಸುವರು ನಿನ್ನ ರಾಜ್ಯದ ಮಹತ್ವವನು|
ವರ್ಣಿಸುವರವರು ನಿನ್ನ ಶಕ್ತಿಸಾಮರ್ಥ್ಯವನು||

ಶುಭಸಂದೇಶ: ಲೂಕ 16:9-15

ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ನಾನು ಹೇಳುವುದನ್ನು ಗಮನಿಸಿರಿ, ಲೌಕಿಕ ಆಸ್ತಿಪಾಸ್ತಿಯಿಂದ ಗೆಳೆಯರನ್ನು ಗಳಿಸಿಕೊಳ್ಳಿರಿ. ಅದು ವ್ಯಯವಾಗಿಹೋದಾಗ ನಿಮ್ಮನ್ನು ಅಮರ ನಿವಾಸಕ್ಕೆ ಸ್ವಾಗತಿಸಲಾಗುವುದು. ಸಣ್ಣ ವಿಷಯಗಳಲ್ಲಿ ಪ್ರಾಮಾಣಿಕನಾಗಿ ನಡೆದುಕೊಳ್ಳುವವನು ದೊಡ್ಡ ವಿಷಯಗಳಲ್ಲೂ ಪ್ರಾಮಾಣಿಕನಾಗಿ ನಡೆದುಕೊಳ್ಳುತ್ತಾನೆ. ಸಣ್ಣ ವಿಷಯಗಳಲ್ಲಿ ದ್ರೋಹಮಾಡುವವನು ದೊಡ್ಡ ವಿಷಯಗಳಲ್ಲೂ ದ್ರೋಹಮಾಡುತ್ತಾನೆ. ಲೌಕಿಕ ಆಸ್ತಿಪಾಸ್ತಿಗಳ ವಿಷಯದಲ್ಲಿ ನೀವು ಪ್ರಾಮಾಣಿಕರಾಗಿ ನಡೆದುಕೊಳ್ಳದೆ ಹೋದರೆ, ನಿಮ್ಮನ್ನು ನಂಬಿ ನೈಜ ಸಂಪತ್ತನ್ನು ನಿಮ್ಮ ವಶಕ್ಕೆ ಕೊಡುವವರಾರು? ಇನ್ನೊಬ್ಬರಿಗೆ ಸೇರಿದ ವಸ್ತುಗಳ ವಿಷಯದಲ್ಲಿ ನೀವು ಪ್ರಾಮಾಣಿಕರಾಗಿ ನಡೆದುಕೊಳ್ಳದೆ ಹೋದರೆ, ನಿಮ್ಮ ಸ್ವಂತಕ್ಕೆ ಏನನ್ನಾದರೂ ಕೊಡುವವರಾರು ? ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾಗದು, ಅವನು ಒಬ್ಬನನ್ನು ದ್ವೇಷಿಸಿ, ಇನ್ನೊಬ್ಬನನ್ನು ಪ್ರೀತಿಸುತ್ತಾನೆ, ಅಥವಾ ಒಬ್ಬನೊಡನೆ ಹೊಂದಿಕೊಂಡು ಇನ್ನೊಬ್ಬನನ್ನು ತಾತ್ಸಾರ ಮಾಡುತ್ತಾನೆ. ದೇವರಿಗೂ ದ್ರವ್ಯಕ್ಕೂ ಒಟ್ಟಿಗೆ ಸೇವೆಮಾಡಲು ನಿಮ್ಮಿಂದಾಗದು. " ಹಣದಾಶೆಯಿಂದ ಕೂಡಿದ್ದ ಫರಿಸಾಯರು ಈ ಮಾಗುಗಳನ್ನೆಲ್ಲಾ ಕೇಳಿ, ಯೇಸುವನ್ನು ಪರಿಹಾಸ್ಯಮಾಡಿದರು. ಅದಕ್ಕೆ ಯೇಸು, " ನೀವು ಮಾನವರ ಮುಂದೆ ಸತ್ಪುರುಷರೆಂದು ತೋರಿಸಿಕೊಳ್ಳುತ್ತೀರಿ, ದೇವರಾದರೋ ನಿಮ್ಮ ಅಂತರಂಗವನ್ನು ಅರಿತಿದ್ದಾರೆ. ಮಾನವರಿಗೆ ಅಮೂಲ್ಯವಾದುದು ದೇವರಿಗೆ ಅಸಹ್ಯವಾದುದು, " ಎಂದರು.

No comments:

Post a Comment