ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

06.12.21 - 'ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ," ಎನ್ನುವುದು ಸುಲಭವೋ ಅಥವಾ 'ಎದ್ದು ನಡೆ' ಎನ್ನುವುದು ಸುಲಭವೋ?

ಮೊದಲನೇ ವಾಚನ: ಯೆಶಾಯ  35:1-10

ಆನಂದಿಸಲಿ ಅರಣ್ಯವೂ ಮರಭೂಮಿಯೂ, ಹೂಗಳಂತೆ ಅರಳಿ ಹರ್ಷಿಸಲಿ ಒಣನೆಲವು. ಉಲ್ಲಾಷಿಸಲಿ ಅದು ಹುಲುಸಾಗಿ ಹೂಬಿಟ್ಟು, ಹೌದು, ಸಂತಸ ಸಂಗೀತ ಹಾಡುವಷ್ಟು. ದೊರಕಲಿ ಅದಕ್ಕೆ ಲೆಬನೋನಿನ ಮಹಿಮೆಯು; ಕರ್ಮೆಲಿನ ಮತ್ತು ಶಾರೋನಿನ ವೈಭವವು.  ಕಾಣುವುವು ಸರ್ವೇಶ್ವರನ ಮಹಿಮೆಯನು, ನೋಡುವುವು ಇವೆಲ್ಲ ನಮ್ಮ ದೇವರ ವೈಭವವನ್ನು. ಜೋಲುಬಿದ್ದ ಕೈಗಳನ್ನು ಬಲಗೊಳಿಸಿರಿ. ನಡುಗುವ ಕಾಲುಗಳನ್ನು ದೃಢಗೊಳಿಸಿರಿ. ಚಂಚಲ ಹೃದಯರಿಗೆ ಹೀಗೆಂದು ಹೇಳಿ: "ಭಯಪಡಬೇಡಿ, ಎದೆಗುಂದಬೇಡಿ, ಬರುವನು ಆ ದೇವನು ಮುಯ್ಯಿತೀರಿಸಲು; ಬರುವನು ಆ ದೇವನು ಪ್ರತೀಕಾರವೆಸಗಲು; ತಾನೇ ಬರುವನು ನಿಮ್ಮನ್ನು ರಕ್ಷಿಸಲು." ಕುರುಡರ ಕಣ್ಣು ಕಾಣುವುದಾಗ, ಕಿವುಡರ ಕಿವಿ ತೆರೆಯುವುದಾಗ, ಜಿಗಿಯುವನು ಕುಂಟನು ಜಿಂಕೆಯಂತೆ ಹಾಡುವುದು ಮೂಕನ ನಾಲಿಗೆ ಹರ್ಷಗೀತೆ, ಒರತೆಗಳು ಒಡೆಯುವುವು ಅರಣ್ಯದಲ್ಲಿ ನದಿಗಳು ಹುಟ್ಟಿಹರಿಯುವುವು ಒಣನೆಲದಲ್ಲಿ. ಸರೋವರವಾಗುವುದಾ ಉರಿಗಾಡು ಬುಗ್ಗೆಯಾಗುವುದಾ ಬುವಿ ಬರಡು, ನರಿಗಳು ನಿವಾಸಿಸುವ ಗುಹೆಗಳು ಆಗುವುವು ಹುಲುಸಾದ  ಹುಲ್ಲುಗಾವಲುಗಳು. ಅಲ್ಲಿರುವುದೊಂದು ರಾಜಮಾರ್ಗ ಅದೆನಿಸಿಕೊಳ್ಳುವುದು ಪವಿತ್ರಮಾರ್ಗ ನಡೆಯನು ಅದರೊಳು ಪಾಪಾತ್ಮನು; ಅದಾಗುವುದು ಜನರಿಗೆ ಮೀಸಲು ದಾರಿತಪ್ಪನು ಅಲ್ಲ ನಡೆಯುವ ಮೂಢನು. ಅಲ್ಲಿರದು ಸಿಂಹ ಸಿಂಹಿಣಿ, ಅಲ್ಲಿ ಸೇರದು ಕ್ರೂರ ಪ್ರಾಣಿ, ಕಾಣಸಿಗದಲ್ಲಿ ಇದಾವ ಹಾನಿ, ಪಾಪವಿಮುಕ್ತರೇ ನಡೆವರಲ್ಲಿ. ಹಿಂದಿರುಗುವರು ಸರ್ವೇಶ್ವರನಿಂದ ವಿಮೋಚನೆ ಪಡೆದವರು ಜಯಜಯಕಾರದೊಂದಿಗೆ ಸಿಯೋನನು ಸೇರುವರು. ನಿತ್ಯಾನಂದ ಸುಖವಿರುವುದು ಕಿರೀಟಪ್ರದವಾಗಿ ಸಿಗುವುದವರಿಗೆ ಹರ್ಷಾನಂದದ ಸವಿ ತೊಲಗುವುದು ದುಃಖ ದುಗುಡದ ಕಹಿ.

ಕೀರ್ತನೆ: 85:9, 10, 11-12, 13-14
ಶ್ಲೋಕ: ಅಗೋ, ದೇವನು ತಾನೇ ಬರುವನು ನಿಮ್ಮನ್ನು ರಕ್ಷಿಸಲು.

ಶುಭಸಂದೇಶ: ಲೂಕ 5:17-26

ಒಮ್ಮೆ ಯೇಸುಸ್ವಾಮಿ ಬೋಧನೆ ಮಾಡುತ್ತಾ ಇದ್ದಾಗ, ಫರಿಸಾಯರೂ ಧರ್ಮಶಾಸ್ತ್ರಜ್ಞರೂ ಅವರ ಹತ್ತಿರ ಕುಳಿತ್ತಿದ್ದರು. ಇವರು ಗಲಿಲೇಯ ಹಾಗೂ ಜುದೇಯ ಪ್ರಾಂತ್ಯದ ಊರೂರುಗಳಿಂದಲೂ ಜೆರುಸಲೇಮ್ ಪಟ್ಟಣದಿಂದಲೂ ಬಂದಿದ್ದರು. ಗುಣಪಡಿಸುವಂತಹ ದೈವಶಕ್ತಿ ಯೇಸುವಿನಲ್ಲಿತ್ತು. ಆಗ ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಹಾಸಿಗೆಯ ಸಮೇತ ಹೊತ್ತುಕೊಂಡು ಅಲ್ಲಿಗೆ ಬಂದರು. ರೋಗಿಯನ್ನು ಒಳಕ್ಕೆ ತೆಗೆದುಕೊಂಡು ಹೋಗಿ ಯೇಸುವಿನ ಮುಂದೆ ಇಡಬೇಕೆಂದು ಪ್ರಯತ್ನಿಸಿದರು. ಆದರೆ ಜನಸಂದಣಿಯ ನಿಮಿತ್ತ ದಾರಿ ಮಾಡಲಾಗಲಿಲ್ಲ. ಆಗ ಅವರು ಮನೆಯ ಮೇಲೆ ಹತ್ತಿ , ಹೆಂಚುಗಳನ್ನು ತೆಗೆದು, ಅಲ್ಲಿಂದ ರೋಗಿಯನ್ನು ಹಾಸಿಗೆಯ ಸಹಿತ ಯೇಸುವಿನ ಮುಂದೆ ಇಳಿಸಿದರು. ಯೇಸು ಅವರ ವಿಶ್ವಾಸವನ್ನು ಮೇಚ್ಚಿ,  "ತಮ್ಮಾ, ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ," ಎಂದರು. ಇದನ್ನು ಕೇಳಿದ ಧರ್ಮಶಾಸ್ತ್ರಿಗಳೂ ಫರಿಸಾಯರೂ, "ದೇವದೂಷಣೆ ಆಡುತ್ತಿರುವ ಇವನಾರು? ದೇವರೊಬ್ಬರನ್ನು ಬಿಟ್ಟರೆ ಪಾಪಗಳನ್ನು ಕ್ಷಮಿಸಿ ಪರಿಹರಿಸಲು ಬೇರೆ ಯಾರಿಂದ ಸಾಧ್ಯ?" ಎಂದು ತಮ್ಮಲ್ಲೇ ಹೇಳಿಕೊಳ್ಳಲು  ಆರಂಭಿಸಿದರು. ಯೇಸು ಅವರ ಆಲೋಚನೆಗಳನ್ನು ಗ್ರಹಿಸಿಕೊಂಡು, "ನೀವು ನಿಮ್ಮ ಮನಸ್ಸಿನಲ್ಲಿ ಆಲೋಚಿಸುತ್ತಾ ಇರುವುದೇನು? 'ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ," ಎನ್ನುವುದು ಸುಲಭವೋ ಅಥವಾ 'ಎದ್ದು ನಡೆ' ಎನ್ನುವುದು ಸುಲಭವೋ? ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸಲು ನರಪುತ್ರನಿಗೆ ಅಧಿಕಾರ ಉಂಟೆಂದು ಈ ಮೂಲಕ ನಿಮಗೆ ಖಚಿತವಾಗಬೇಕು," ಎಂದು ಹೇಳಿ, ಅ ಪಾರ್ಶ್ವವಾಯು ರೋಗಿಯ ಕಡೆ ನೋಡಿ,  'ಏಳು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೊರಡು,' ಎಂದು ನಿನಗೆ ಆಜ್ಞಾಪಿಸುತ್ತೇನೆ" ಎಂದರು. ತಕ್ಷಣವೇ ಅವರೆಲ್ಲರೂ ನೋಡುತ್ತಿದ್ದ ಹಾಗೆ ಅವನು ಎದ್ದು, ಮಲಗಿದ್ದ ಹಾಸಿಗೆಯನ್ನು ಎತ್ತಿಕೊಂಡು, ದೇವರನ್ನು ಸ್ತುತಿಸುತ್ತಾ ತನ್ನ ಮನೆಗೆ ಹೋದನು. ಎಲ್ಲರೂ ನಿಬ್ಬೆರಗಾಗಿ, ನಾವು ಈ ದಿನ ಎಂಥ ಅಪೂರ್ವ ಕಾರ್ಯವನ್ನು ಕಂಡೆವು!" ಎಂದು ಭಯಭಕ್ತಿಯಿಂದ ದೇವರನ್ನು ಕೊಂಡಾಡಿದರು.

No comments:

Post a Comment