ಮೊದಲನೇ ವಾಚನ: ದಾನಿಯೇಲ 2:31-45
ರಾಜರೇ ಕೇಳಿ, ತಾವು ಕಂಡದ್ದು ಒಂದು ಅದ್ಭುತ ಪ್ರತಿಮೆ. ಥಳಥಳನೆ ಹೊಳೆಯುವ ಆ ದೊಡ್ಡ ಪ್ರತಿಮೆ ನಿಮ್ಮೆದುರಿಗೆ ನಿಂತಿತ್ತು. ಭಯಂಕರವಾಗಿ ಕಾಣಿಸುತ್ತಿತ್ತು. ಆ ಪ್ರತಿಮೆಯ ತಲೆ ಅಪ್ಪಟ ಬಂಗಾರದ್ದು. ಎದೆ ತೊಳುಗಳು ಬೆಳ್ಳಿಯವು. ಹೊಟ್ಟೆಸೊಂಟಗಳು ಕಂಚಿನವು. ಕಾಲುಗಳು ಕಬ್ಬಿಣದವು. ಪಾದಗಳು ಕಬ್ಬಿಣ ಮತ್ತು ಮಣ್ಣಿನಿಂದ ಮಾಡಿದವು. ನೀವು ನೋಡುತ್ತಿದ್ದ ಹಾಗೆ ಬೆಟ್ಟದಿಂದ ಒಂದು ಗುಂಡು ಬಂಡೆ, ಯಾವ ಕೈಯೂ ಮುಟ್ಟದೆಯೇ, ಸಿಡಿದುಬಂದು ಆ ಪ್ರತಿಮೆಯ ಕಬ್ಬಿಣ ಮಣ್ಣಿನಿಂದಾದ ಆ ಪಾದಗಳಿಗೆ ಬಡಿದು ಚೂರುಚೂರು ಮಾಡಿಬಿಟ್ಟಿತು. ಆಗ ಕಬ್ಬಿಣ - ಮಣ್ಣು - ಕಂಚು - ಬೆಳ್ಳಿ - ಬಂಗಾರ ಇವುಗಳೆಲ್ಲವೂ ಪುಡಿಪುಡಿಯಾದವು: ಸುಗ್ಗಿಯ ಕಣಗಳ ಹೊಟ್ಟಿನಂತಾದವು. ಗಾಳಿ ಅವುಗಳನ್ನು ತೂರಿಕೊಂಡು ಹೋಯಿತು. ಅವುಗಳಿಗೆ ನೆಲೆಯೇ ಇಲ್ಲವಾಯಿತು. ಪ್ರತಿಮೆಗೆ ಬಡಿದ ಆ ಬಂಡೆ ಮಹಾ ಪರ್ವತವಾಗಿ ಭೂಲೋಕದಲ್ಲೆಲ್ಲಾ ತುಂಬಿಕೊಂಡಿತು. ಅರಸರೇ, ಇದೇ ನೀವು ಕಂಡ ಕನಸು. ಇದರ ಅರ್ಥವನ್ನೂ ತಮ್ಮ ಸನ್ನಿಧಿಯಲ್ಲಿ ಅರಿಕೆ ಮಾಡುತ್ತೇವೆ. ನೀವು ರಾಜಾಧಿರಾಜರು, ಪರಲೋಕ ದೇವರು ನಿಮಗೆ ರಾಜ್ಯಬಲ, ಪರಾಕ್ರಮ ಹಾಗು ವೈಭವಗಳನ್ನು ದಯಪಾಲಿಸಿದ್ದಾರೆ. ನರಮಾನವರು ವಾಸಿಸುವ ಸಕಲ ಪ್ರಾಂತ್ಯಗಳಲ್ಲಿ ಆಕಾಶಪಕ್ಷಿಗಳನ್ನೂ ಭೂಜಂತುಗಳನ್ನೂ ನಿಮ್ಮ ಕೈಗೆ ಒಪ್ಪಿಸಿದ್ದಾರೆ. ನಿಮ್ಮ ಕಾಲವಾದ ಮೇಲೆ ನಿಮಗಿಂತ ಬೀಳಾದ ಮತ್ತೊಂದು ರಾಜ್ಯ ತಲೆಯೆತ್ತಿಕೊಳ್ಳುವುದು. ಆನಂತರ ಬೇರೊಂದು ರಾಜ್ಯ ಕಂಚಿನದಾಗಿ ಕಾಣಿಸಿಕೊಂಡು ಭೂಮಂಡಲವನ್ನೆಲ್ಲ ಆಳುವುದು. ನಾಲ್ಕನೆಯ ರಾಜ್ಯ ಕಬ್ಬಿಣದಷ್ಟು ಗಟ್ಟಿಗೆ ಕಬ್ಬಿಣದ ಎಲ್ಲ ವಸ್ತುಗಳನ್ನು ಚೂರುಚೂರಾಗಿ ಒಡೆದುಹಾಕುತ್ತದೆ. ಅಂತೆಯೇ ಅದು ಎಲ್ಲರನ್ನು ಚೂರು ಚೂರಾಗಿಸಿ ಧ್ವಂಸ ಮಾಡುವುದು.ಪಾದಗಳಲ್ಲಿ ಹಾಗು ಪಾದಬೆರಳುಗಳಲ್ಲಿ ಒಂದು ಅಂಶ ಕಬ್ಬಿಣ ಮತ್ತೊಂದು ಅಂಶ ಮಣ್ಣು ಆಗಿದ್ದನ್ನು ನೀವು ನೋಡಿದಿರಿ. ಅಂತೆಯೇ ಆ ರಾಜ್ಯವು ಭಿನ್ನಭಿನ್ನವಾಗಿರುವುದು. ಜೇಡಿಮಣ್ಣಿನೊಂದಿಗೆ ಕಬ್ಬಿಣ ಮಿಶ್ರವಾಗಿದ್ದನ್ನು ನೀವು ನೋಡಿದಂತೆ ಆ ರಾಜ್ಯದಲ್ಲಿ ಕಬ್ಬಿಣದ ಬಲ ಸೇರಿರುವುದು. ಕಾಲ್ಬೆರಳು ಒಂದಂಶ ಮಣ್ಣು ಆಗಿದ್ದ ಹಾಗೆ ಆ ರಾಜ್ಯದ ಒಂದಂಶ ಗಟ್ಟಿ ಇನ್ನೊಂದು ಅಂಶ ಬೆಂಡು. ಕಬ್ಬಿಣ ಜೇಡಿಮಣ್ಣಿನೊಂದಿಗೆ ಬೆರೆತಿರುವುದನ್ನು ನೀವು ನೋಡಿದ ಮೇರೆಗೆ ಆ ರಾಜ್ಯಾಂಶಗಳು ಮದುವೆ ಸಂಬಂಧದಿಂದ ಬೆರೆತುಕೊಳ್ಳುವುವು. ಆದರೆ ಕಬ್ಬಿಣ ಮಣ್ಣಿನೊಂದಿಗೆ ಹೇಗೆ ಕಲೆಯುವುದಿಲ್ಲವೋ ಹಾಗೆ ಅವು ಒಂದಕ್ಕೊಂದು ಅಂಟಿಕೊಳ್ಳುವುದಿಲ್ಲ. ಆ ರಾಜರ ಕಾಲದಲ್ಲಿ ಪರಲೋಕ ದೇವರು ಒಂದು ಸಾಮ್ರಾಜ್ಯವನ್ನು ಸ್ಥಾಪಿಸುವರು. ಅದು ಎಂದಿಗೂ ಅಳಿಯದು. ಅದರ ಪ್ರಾಬಲ್ಯವು ಬೇರೆ ರಾಷ್ಪ್ರಕ್ಕೆ ಜಾರಿಹೋಗದು. ರಾಷ್ಪ್ರಗಳನ್ನೆಲ್ಲಾ ಭಂಗಪಡಿಸಿ, ನಿರ್ನಾಮಮಾಡಿ ಆ ಸಾಮ್ರಾಜ್ಯ ಶಾಶ್ವತವಾಗಿ ನಿಲ್ಲುವುದು. ಬೆಟ್ಟದಿಂದ ಒಂದು ಗುಂಡುಬಂಡೆ, ಯಾವ ಕೈಯೂ ಮುಟ್ಟದೆಯೇ, ಸಿಡಿದುಬಂದು ಕಬ್ಬಿಣ - ಕಂಚು - ಮಣ್ಣು - ಬೆಳ್ಳಿ - ಬಂಗಾರ ಇವುಗಳನ್ನು ಚೂರುಚೂರು ಮಾಡಿದ್ದನ್ನು ನೀವು ನೋಡಿದಿರಿ. ಇದರಿಂದ ಪರಲೋಕ ದೇವರು ಮುಂದೆ ನಡೆಯಲಿರುವ ವಿಷಯಗಳನ್ನು ರಾಜರಾದ ತಮಗೆ ತಿಳಿಯಪಡಿಸಿದ್ದಾರೆ. ಆ ಕನಸು ನಿಜವಾದುದು ಅದರ ಅರ್ಥವೂ ನಂಬತಕ್ಕದ್ದು," ಎಂದು ವಿವರಿಸಿದನು.
ಅಜರ್ಯ: 1:35-39
ಶ್ಲೋಕ: ಸರ್ವೇಶ್ವರನನ್ನು ಕೊಂಡಾಡಿರಿ, ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿರಿ
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||
ದೇವರ ದಿವ್ಯದೂತರೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||
ಆಕಾಶಗಳೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||
ಆಕಾಶದ ಮೇಲಿರುವ ಸಕಲ ಜಲರಾಶಿಗಳೇ, ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿರಿ||
ಸರ್ವೇಶ್ವರನ ಸಕಲ ಶಕ್ತಿಗಳೇ ಸರ್ವೇಶ್ವರನನ್ನು ಕೊಂಡಾಡಿ|
ಅವರನ್ನು ಸ್ತುತಿಸಿ ಸದಾ ಸಂಕೀರ್ತಿಸಿ||
ಶುಭಸಂದೇಶ: ಲೂಕ 21:5-11
"ಈ ಮಹಾದೇವಾಲಯವು ಅಂದವಾದ ಕಲ್ಲುಗಳಿಂದಲೂ ಅಮೂಲ್ಯವಾದ ಕೊಡುಗೆಗಳಿಂದಲೂ ಎಷ್ಟು ಅಲಂಕೃತವಾಗಿದೆ!" ಎಂದು ಕೆಲವರು ಮಾತನಾಡುತ್ತಿದ್ದರು. ಆಗ ಯೇಸು, "ಇವುಗಳನ್ನು ನೀವು ನೋಡುತ್ತಿದ್ದೀರಲ್ಲವೆ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದು; ಎಲ್ಲವನ್ನೂ ಕೆಡವಿಹಾಕುವ ಕಾಲವೊಂದು ಬರುವುದು," ಎಂದರು. "ಗುರುವೇ, ಇದು ಸಂಭವಿಸುವುದು ಯಾವಾಗ? ಇದೀಗಲೆ ಸಂಭವಿಸಲಿದೆ ಎಂದು ತಿಳಿಸುವ ಪೂರ್ವಸೂಚನೆ ಯಾವುದು?" ಎಂದು ಕೆಲವರು ಕೇಳಿದರು. ಅದಕ್ಕೆ ಯೇಸುಸ್ವಾಮಿ, "ನೀವು ಮೋಸಹೋಗದಂತೆ ಜಾಗರೂಕರಾಗಿರಿ. ಅನೇಕರು "ನಾನೇ ಆತ, ನಾನೇ ಆತ," ಎನ್ನುತ್ತಾ ನನ್ನ ಹೆಸರನ್ನೇ ಇಟ್ಟುಕೊಂಡು ಬಂದು "ಕಾಲವು ಸಮೀಪಿಸಿಬಿಟ್ಟಿತು," ಎಂದು ಹೇಳುತ್ತಾರೆ. ಅವರನ್ನು ಹಿಂಬಾಲಿಸಬೇಡಿ. ಸಮರ ಸಂಕಲಹಗಳ ಸುದ್ದಿ ಬಂದಾಗ ದಿಗಿಲುಗೊಳ್ಳಬೇಡಿ; ಇವೆಲ್ಲವೂ ಮೊದಲು ಸಂಭವಿಸಲೇಬೇಕು. ಆದರೂ ಆಂತ್ಯವು ಕೂಡಲೇ ಬರುವುದಿಲ್ಲ," ಎಂದರು. ಅದೂ ಅಲ್ಲದೆ ಯೇಸು ಇಂತೆಂದರು: "ಜನಾಂಗಕ್ಕೆ ವಿರುದ್ಧವಾಗಿ ಜನಾಂಗ, ರಾಷ್ಟ್ರಕ್ಕೆ ವಿರುದ್ಧವಾಗಿ ರಾಷ್ಟ್ರ ಯುದ್ಧಕಿಳಿಯುವುವು; ಭೀಕರ ಭೂಕಂಪಗಳಾಗುವುವು; ಕ್ಷಾಮಡಾಮರಗಳು ತಲೆದೋರುವುವು; ಭಯಂಕರ ಘಟನೆಗಳೂ ಬಾಹ್ಯಾಕಾಶದಲ್ಲಿ ಅಪೂರ್ವ ಸೂಚನೆಗಳೂ ಕಾಣಿಸಿಕೊಳ್ಳುವುವು.
No comments:
Post a Comment