ಮೊದಲನೇ ವಾಚನ: ಯೆಶಾಯ 29:17-24
ಸ್ವಾಮಿ ಸರ್ವೇಶ್ವರ ಹೀಗೆನ್ನುತ್ತಾರೆ; ಕೊಂಚ ಕಾಲದೊಳಗೆ ಲೆಬನೋನ್ ಅರಣ್ಯವು ತೋಟವಾಗುವುದು. ಈಗಿನ ತೋಟವಾದರೋ ಅರಣ್ಯವಾಗಿ ಕಾಣಿಸುವುದು. ಆ ದಿನದಂದು ಕಿವುಡರು ಗ್ರಂಥ ವಾಕ್ಯಗಳನ್ನು ಓದುವುದನ್ನು ಕೇಳುವರು. ಕುರುಡರಿಗೆ ಮಬ್ಬಿನಲ್ಲೂ ಕತ್ತಲಲ್ಲೂ ಕಣ್ಣು ಕಾಣಿಸುವುದು. ದೀನದಲಿತರು ಸರ್ವೇಶ್ವರನಲ್ಲಿ ಅತಿಯಾಗಿ ಆನಂದಿಸುವರು. ಬಡಬಗ್ಗರು ಇಸ್ರಯೇಲಿನ ಪರಮಪಾವನ ಸ್ವಾಮಿಯಲ್ಲಿ ಉಲ್ಲಾಸಿಸುವರು. ಏಕೆಂದರೆ ಭಯೋತ್ಪಾದಕರು ನಿಶ್ಯೇಷರಾಗುವರು, ಧರ್ಮನಿಂದಕರು ನಿರ್ನಾಮವಾಗುವರು. ಸುಳ್ಳುಸಾಕ್ಷಿ ಹೇಳಿ ತಪ್ಪು ಹೊರಿಸುವವರು, ನ್ಯಾಯಸ್ಥಾನದಲ್ಲಿ ದೋಷವನ್ನು ಖಂಡಿಸುವವರಿಗೆ ಉರುಲೊಡ್ಡುವವರು, ನೀತಿವಂತನಿಗೆ ನ್ಯಾಯತಪ್ಪಿಸುವವರು, ಹೀಗೆ ಅಧರ್ಮದಲ್ಲಿ ನಿರತರಾಗಿರುವ ಇವರೆಲ್ಲರು ನಿರ್ಮೂಲವಾಗುವರು. ಹೀಗಿರಲು ಅಬ್ರಹಾಮನನ್ನು ಉದ್ಧರಿಸುವ ಸರ್ವೇಶ್ವರಸ್ವಾಮಿ ಯಕೋಬನ ಮನೆತನದ ವಿಷಯವಾಗಿ ಹೀಗೆನ್ನುತ್ತಾರೆ: "ಯಕೋಬನ ವಂಶದವರೇ, ಇನ್ನು ಮೇಲೆ ನೀವು ನಾಚಿಕೆಗೀಡಾಗುವುದಿಲ್ಲ, ನಿಮ್ಮ ಮುಖ ಇನ್ನು ಬಾಡುವುದಿಲ್ಲ. ನಿಮ್ಮ ವಂಶಜರು ತಮ್ಮ ಮಧ್ಯದಲ್ಲಿ ನಾನು ಎಸಗುವ ಕಾರ್ಯಗಳನ್ನು ನೋಡಿ, ನನ್ನ ನಾಮವೇ ಪರಮ ಪೂಜಿತವೆಂದು ಸ್ಥಿರಪಡಿಸುವರು. ಹೌದು, ಯಕೋಬ ವಂಶದ ಪರಮ ಪಾವನ ಸ್ವಾಮಿಯಾದ ನನ್ನನ್ನು ಪ್ರತಿಷ್ಠಾಪಿಸುವರು. ಇಸ್ರಯೇಲರ ದೇವರಾದ ನನ್ನಲ್ಲಿ ಭಯ ಭಕ್ತಿಯಿಂದಿರುವರು, ಚಂಚಲಚಿತ್ತರು ಬುದ್ಧಿವಂತರಾಗುವರು. ಗೊಣಗುಟ್ಟುವವರು ಧ್ಯಾನ ಮಗ್ನರಾಗುವರು.
ಕೀರ್ತನೆ: 27:1, 4, 13-14
ಶ್ಲೋಕ: ನನಗೆ ಬೆಳಕು, ನನಗೆ ರಕ್ಷೆ ಪ್ರಭುವೇ
ಶುಭಸಂದೇಶ: ಮತ್ತಾಯ 9:27-31
ಯೇಸುಸ್ವಾಮಿ ಅಲ್ಲಿಂದ ಹೋಗುತ್ತಿರುವಾಗ ಇಬ್ಬರು ಕುರುಡರು, "ಸ್ವಾಮಿಾ, ದಾವೀದ ಕುಲಪುತ್ರರೇ, ನಮಗೆ ದಯೆತೋರಿ," ಎಂದು ದನಿಯೆತ್ತಿ ಕೂಗಿಕೊಳ್ಳುತ್ತಾ ಅವರ ಹಿಂದೆ ಹೋದರು. ಯೇಸು ಮನೆ ಸೇರಿದಾಗ ಆ ಕುರುಡರು ಸಮಿಾಪಕ್ಕೆ ಬಂದರು. "ನಾನು ನಿಮ್ಮನ್ನು ಗುಣಪಡಿಸಬಲ್ಲೆನೆಂದು ನೀವು ವಿಶ್ವಾಸವಿಡುತ್ತೀರೋ?" ಎಂದು ಯೇಸು ಪ್ರಶ್ನಿಸಿದರು. "ಹೌದು ಸ್ವಾಮಿಾ, ಹೌದು," ಎಂದು ಅವರು ಉತ್ತರವಿತ್ತರು. ಆಗ ಯೇಸು ಅವರ ಕಣ್ಣುಗಳನ್ನು ಮುಟ್ಟಿ, "ನೀವು ವಿಶ್ವಾಸವಿಟ್ಟ ಪ್ರಕಾರವೇ ನಿಮಗೆ ಗುಣವಾಗಲಿ," ಎಂದರು. ಅವರಿಗೆ ದೃಷ್ಟಿ ಬಂದಿತು, "ಈ ವಿಷಯ ಯಾರಿಗೂ, ತಿಳಿಯಬಾರದು, ಎಚ್ಚರಿಕೆ!" ಎಂದು ಯೇಸು ಅವರಿಗೆ ಕಟ್ಟಪ್ಪಣೆ ಮಾಡಿದರು. ಆದರೂ ಅವರು ಹೋಗಿ ಆ ಪ್ರಾಂತ್ಯದಲ್ಲೆಲ್ಲಾ ಸ್ವಾಮಿಯ ಕೀರ್ತಿಯನ್ನು ಹರಡಿದರು.
No comments:
Post a Comment