ಮೊದಲನೇ ವಾಚನ: ಬಾರೂಕ 5:1-9
ಜೆರುಸಲೇಮೇ, ಕಳಚಿಬಿಡು ನಿನ್ನ ಶೋಕಾರ್ಥ ವಸ್ತ್ರಗಳನ್ನು ಧರಿಸಿಕೋ ನಿತ್ಯಕ್ಕೆಂದು ದೇವರಿಂದ ಬರುವ ಪ್ರಭಾವದ ಸೊಬಗನ್ನು. ತೊಟ್ಟುಕೋ ದೇವರಿಂದ ಬರುವ ನೀತಿಯೆಂಬ ನಿಲುವಂಗಿಯನ್ನು ಇಟ್ಟುಕೋ ತಲೆಯ ಮೇಲೆ ಮಹಿಮೆಯೆಂಬ ಮುಕುಟವನ್ನು. ದೇವರೇ ನಿನ್ನ ತೇಜಸ್ಸನ್ನು ಹರಡುವರು. ಆಕಾಶದಡಿಯಿರುವ ಎಲ್ಲಾ ದಿಕ್ಕುಗಳಿಗು. "ನೀತಿಯಿಂದ ಶಾಂತಿ", "ಭಕ್ತಿಯಿಂದ ಕೀರ್ತಿ" ಎಂದು ದೇವರೇ ನಿನ್ನನ್ನು ಹೆಸರಿಸುವರು ಎಂದೆಂದಿಗು. ಜೆರುಸಲೇಮೇ, ಎದ್ದೇಳು, ಉನ್ನತಸ್ಥಾನದಲ್ಲಿ ನಿಲ್ಲು ಪೂರ್ವಾಭಿಮುಖವಾಗಿ ತಿರುಗಿಸು ನಿನ್ನ ಕಣ್ಣುಗಳನ್ನು. ದೇವರು ತಮ್ಮನ್ನು ನೆನೆಸಿಕೊಂಡರೆಂದು ಹಿಗ್ಗುತಿಹರು ನಿನ್ನ ಮಕ್ಕಳು ಪರಮಪಾವನನ ನುಡಿಯಂತೆ ಪೂರ್ವ ಪಶ್ಚಿಮದಿಂದ ಕೂಡಿಬರುತಹರು ನೋಡು. ಶತ್ರುಗಳಿಂದ ಒಯ್ಯಲ್ಪಟ್ಟು ಕಾಲ್ನಡೆಯಲ್ಲಿ ಅವರು ನಿನ್ನನ್ನು ಬಿಟ್ಟುಹೋದರು. ಈಗ ವೈಭವದಿಂದ ಹೊರಟು ಸಿಂಹಾಸನರೂಢರಾದವರಂತೆ ಬರುತ್ತಿಹರು ದೇವರೇ ಅವರನ್ನು ನಿನ್ನ ಬಳಿಗೆ ಬರಮಾಡುತ್ತಿಹರು. ಇಸ್ರಯೇಲ್ ದೈವಪ್ರಭೆಯಲ್ಲಿ ಸುರಕ್ಷಿತವಾಗಿ ಸಾಗಬೇಕಂದು ಅದಕ್ಕಾಗಿ ಉನ್ನತಬೆಟ್ಟಗಳು, ನೆಲೆಯಾದ ಗುಡ್ಡಗಳು ತಗ್ಗಬೇಕೆಂದು ಹಳ್ಳಕೊಳ್ಳಗಳು ತುಂಬಿ ಭರ್ತಿಯಾಗಿ ನೆಲಸಮವಾಗಬೇಕೆಂದು ದೇವರೇ ನೇಮಕಮಾಡಿರುವರು. ಆ ದೇವರ ಅಪ್ಪಣೆಯ ಪ್ರಕಾರ ಇಸ್ರಯೇಲಿಗೆ ನೆರಳು ನೀಡುವುವು ಕಾಡುಗಳು. ಸುಗಂಧವಾಸನೆಯನ್ನು ಬೀರುವುವು ಗಿಡಮರಗಳು. ದೇವರು ಇಸ್ರಯೇಲನ್ನು ನಡೆಸುವರು ತಮ್ಮ ಮಹಿಮೆ ಪ್ರಕಾಶದಲ್ಲೇ ಹರುಷದೊಡನೆ ತಮ್ಮಿಂದ ಬರುವ ಕರುಣೆ ಹಾಗು ನ್ಯಾಯನೀತಿಗಳೊಡನೆ.
ಕೀರ್ತನೆ: 126:1-2, 2-3, 4-5, 6
ಶ್ಲೋಕ: ಪ್ರಭು ನಮಗೆ ಮಹತ್ಕಾರ್ಯ ಮಾಡಿದುದು ಖಚಿತ ಎಂತೆಲೇ ನಾವು ಆನಂದಭರಿತರಾಗುವುದು ಉಚಿತ.
ಎರಡನೇ ವಾಚನ: ಫಿಲಿಪ್ಪಿಯರಿಗೆ 1:4-6, 8-11
ನಿಮಗೋಸ್ಕರ ಯಾವಾಗಲೂ ತುಂಬುಹೃದಯದಿಂದ ಪ್ರಾರ್ಥಿಸುತ್ತೇನೆ. ಏಕೆಂದರೆ, ನಾನು ನಿಮ್ಮನ್ನು ಸಂದಿಸಿದ ಮೊದಲ ದಿನದಿಂದ ಇಂದಿನವರೆಗೂ ನೀವು ನನ್ನೊಡನೆ ಶುಭಸಂದೇಶದ ಪ್ರಚಾರಕಾರ್ಯದಲ್ಲಿ ಸಹಕರಿಸುತ್ತಿರುವಿರಿ. ಈ ಸತ್ಕಾರ್ಯವನ್ನು ನಿಮ್ಮಲ್ಲಿ ಪ್ರಾರಂಭಿಸಿದ ದೇವರು ಅದನ್ನು ಮುಂದುವರಿಸುತ್ತಾ, ಯೇಸುಕ್ರಿಸ್ತರು ಪುನರಾಗಮಿಸುವಷ್ಟರಲ್ಲಿ ಪೂರೈಸುವರು ಎಂಬುದೇ ನನ್ನ ದೃಢ ನಂಬಿಕೆ. ಕ್ರಿಸ್ತಯೇಸುವಿನಲ್ಲಿರುವ ಉತ್ಕಟ ಪ್ರೀತಿಯಿಂದಲೇ ನಾನು ನಿಮ್ಮೆಲ್ಲರಿಗಾಗಿ ಹಂಬಲಿಸುತ್ತಿದ್ದೇನೆ; ಇದಕ್ಕೆ ದೇವರೇ ಸಾಕ್ಷಿ. ನೀವು ಪ್ರೀತಿಯಲ್ಲಿ ಪ್ರವರ್ಧಿಸುತ್ತಾ, ಪೂರ್ಣ ಜ್ಞಾನ ಹಾಗೂ ವಿವೇಕದಂದ ಕೂಡಿದವರಾಗಬೇಕೆಂಬುದೇ ನನ್ನ ಪ್ರಾರ್ಥನೆ. ಹೀಗೆ ನೀವು ಉತ್ತಮೋತ್ತಮವಾದುವುಗಳನ್ನೇ ಆರಿಸಿಕೊಂಡು, ಪ್ರಭುಕ್ರಿಸ್ತರ ದಿನದಂದು ನಿರ್ದೋಷಿಗಳೂ ನಿಷ್ಕಳಂಕರೂ ಆಗಿ ಕಾಣಿಸಿಕೊಳ್ಳುವಿರಿ. ಯೇಸುಕ್ರಿಸ್ತರ ಮುಖಾಂತರ ಲಭಿಸುವ ಸತ್ಸಂಬಂಧದ ಫಲಗಳಿಂದ ತುಂಬಿದವರಾಗಿ ದೇವರಿಗೆ ಸ್ತುತಿಸಲ್ಲಿಸಿ, ಅವರ ಮಹಿಮೆ ಬೆಳಗುವಂತೆ ಮಾಡಿವಿರಿ.
ಶುಭಸಂದೇಶ: ಲೂಕ 3:1-6
ಅದು ತಿಬೇರಿಯಸ್ ಚಕ್ರವರ್ತಿಯ ಆಡಲಿತದ ಹದಿನೈದನೆಯ ವರ್ಷ. ಆ ಕಾಲದಲ್ಲಿ ಜುದೇಯ ಪ್ರಾಂತ್ಯಕ್ಕೆ ಪೊನ್ಸಿಯುಸ್ ಪಿಲಾತನು ರಾಜ್ಯಪಾಲನಾಗಿದ್ದನು. ಗಲಿಲೇಯ ಪ್ರಾಂತ್ಯಕ್ಕೆ ಹೆರೋದನೂ ಇತುರೆಯ ಮತ್ತು ತ್ರಕೋನಿತಿ ಪ್ರಾಂತ್ಯಗಳಿಗೆ ಇವನ ತಮ್ಮನಾದ ಫಿಲಿಪ್ಪನೂ ಮತ್ತು ಅಬಿಲೇನೆ ಪ್ರಾಂತ್ಯಕ್ಕೆ ಲುಸಾನಿಯನೂ ಸಾಮಂತರಾಗಿದ್ದರು. ಅನ್ನನು ಮತ್ತು ಕಾಯಿಫನು ಅಂದಿನ ಪ್ರದಾನ ಯಾಜಕರು. ಆಗ ಬೆಂಗಾಡಿನಲ್ಲಿ ಜಕರಿಯನ ಮಗ ಯೊವಾನ್ನನಿಗೆ ದೇವರ ಸಂದೇಶದ ಬೋದೆ ಆಯಿತು. ಆತನು ಜೋರ್ಡಾನ್ ನದಿಯ ಪರಿಸರ ಪ್ರಾಂತ್ಯದಲ್ಲೆಲ್ಲಾ ಸಂಚರಿಸುತ್ತಾ, "ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ ಮತ್ತು ಸ್ನಾನದೀಕ್ಷೆ ಪಡೆದುಕೊಳ್ಳಿರಿ; ದೇವರು ನಿಮ್ಮ ಪಾಪಗಳನ್ನು ಕ್ಷಮಿಸಿಬಿಡುವರು," ಎಂದು ಸಾರಿ ಹೇಳುತ್ತಿದ್ದನು. ಈ ಬಗ್ಗೆ ಪ್ರವಾದಿ ಯೆಶಾಯನ ಗ್ರಂಥದಲ್ಲಿ ಮುಂಚಿತವಾಗಿಯೇ ಹೀಗೆಂದು ಬರೆದಿಡಲಾಗಿದೆ:" ಪ್ರಭುವಿಗಾಗಿ ಮಾರ್ಗವನ್ನು ಸಿದ್ದಪಡಿಸಿರಿ, ಆತನ ಆಗಮನಕ್ಕಾಗಿ ಹಾದಿಯನ್ನು ಸರಾಗ ಮಾಡಿರಿ" ಎಂದು ಬೆಂಗಾಡಿನಲ್ಲಿ ಒಬ್ಬನು ಘೋಷಿಸುತ್ತಿದ್ದಾನೆ. ಹಳ್ಳಕೊಳ್ಳಗಳೆಲ್ಲ ಭರ್ತಿಯಾಗಬೇಕು; ಬೆಟ್ಟಗುಡ್ಡಗಳು ಮಟ್ಟವಾಗಬೇಕು; ಅಂಕು ಡೊಂಕಾದವು ನೆಟ್ಟಗಾಗಬೇಕು; ತಗ್ಗುಮುಗ್ಗಾದ ಹಾದಿಗಳು ಹಸನಾಗಬೇಕು. ಆಗ ದೇವರು ದಯಪಾಲಿಸುವ ಜೀವೋದ್ಧಾರವನ್ನು ಮಾನವರೆಲ್ಲರೂ ಕಾಣುವರು."
No comments:
Post a Comment