01.10.21

ಮೊದಲನೆಯ ವಾಚನ: ಯೆಶಾಯ 66:10-14

"ಜೆರುಸಲೇಮನ್ನು ಪ್ರೀತಿಸುವವರೇ, ನೀವೆಲ್ಲರೂ ಆನಂದಿಸಿರಿ ಆಕೆಯೊಂದಿಗೆ, ಹರ್ಷಗೊಳ್ಳಿರಿ ಆಕೆಯ ಬಗ್ಗೆ. ಆಕೆಯ ನಿಮಿತ್ತ ದುಃಖಿಸುವವರೇ, ' ಸಾಂತ್ವನ ನೀಡುವ ಆಕೆಯ ಸ್ತನ್ಯದಿಂದ ತೃಪ್ತಿಗೊಳ್ಳುವೆವು, ' ಹೌದು ಆಕೆಯ ಸಿರಿಸಮೃದ್ದಿಯನ್ನು ಹೀರುತ್ತಾ ಹಿಗ್ಗುವೆವು, ಎಂದು ನೀವೆಲ್ಲರು ಉಲ್ಲಾಸಪಡಿ ಆಕೆಯೊಂದಿಗೆ." ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ: "ಇಗೋ, ಆಕೆಗೆ ಹರಿಯಮಾಡುವೆನು ಸುಖಶಾಂತಿಯನು ನದಿಯಂತೆ ನೀಡುವೆ ರಾಷ್ಟ್ರಗಳ ವೈಭವವನ್ನು ತುಂಬಿತುಳುಕುವ ತೊರೆಯಂತೆ ನೀವಿರುವಿರಿ ಹಾಲುಕುಡಿವ ಹಸುಳೆಯಂತೆ ಎತ್ತಿಕೊಳ್ಳಲಾಗುವುದು ನಿಮ್ಮನ್ನು ತಾಯ ಕಂಕುಳಲಿ ನಲಿದಾಡುವಿರಿ ನೀವು ಆಕೆಯ ಮಡಿಲಲಿ. ನಾನೇ ನಿಮ್ಮನ್ನು ಸಂತೈಸುವೆನು ತಾಯಿಯಂತೆ ಸಾಂತ್ವನ ದೊರಕುವುದು ನಿಮಗೆ ಜೆರುಸಲೇಮಿನಲೆ. ಇದನ್ನು ಕಂಡಾಗ ನಿಮ್ಮೆದೆ ಸಂತಸದಿಂದ ಉಬ್ಬುವುದು ಚಿಗುರುವುದು ಹಸಿಹುಲ್ಲಂತೆ ನಿಮ್ಮೆಲುಬು. 'ಸರ್ವೇಶ್ವರನ ಕೃಪಾಹಸ್ತ ತನ್ನ ಭಕ್ತರ ಮೇಲೆ ಆತನ ರೋಷಾವೇಶ ಶತ್ರುಗಳ ಮೇಲೆ ' ಎಂಬುವುದು ವ್ಯಕ್ತವಾಗುವುದು ನಿಮಗೆ.

ಕೀರ್ತನೆ 131:1-3
ಶ್ಲೋಕ: ಹೇ ಪ್ರಭೂ, ನನ್ನಾತ್ಮವನ್ನು ನಿಮ್ಮ ಕೃಪೆ ಶಾಂತಿಯಿಂದ ರಕ್ಷಿಸಿರಿ.

ಹಮ್ಮಿಲ್ಲ ಪ್ರಭೂ, ನನ್ನೆದೆಯೊಳು|
ನನಗಿಲ್ಲ ಸೊಕ್ಕಿನ ಕಣ್ಣುಗಳು||
ಶಕ್ತಿಮಿರಿದ ಕಾರ್ಯಕ್ಕೆ ನಾ ಕೈ ಹಾಕಿಲ್ಲ|
ಅಸಾಧ್ಯವಾದುದನು ನಾ ಕೈಗೊಂಡಿಲ್ಲ||

ಎಂದೇ ನನ್ನಾತ್ಮ ಸಮಾಧಾನದಿಂದಿದೆ|
ಮೌನದಿಂದಿದೆ ತಾಯ್ಮಡಿಲಾ ಕೂಸಂತೆ|
ನೆಮ್ಮದಿಯಿಂದಿದೆ ತಾಯ್ಮಡಿಲಾ ಶಿಶುವಂತೆ||

ಇಸ್ರಯೇಲೇ, ಪ್ರಭುವಿನಲಿ ನಂಬಿಕೆಯಿಂದಿರು|
ಇಂದಿಗೂ ಎಂದೆಂದಿಗೂ ಭರವಸೆಯಿಂದಿರು||

ಎರಡನೆಯ ವಾಚನ: ಹಿಬ್ರಿರಿಯರಿಗೆ  1:2-3

ಇತ್ತೀಚಿನ ಅಂತಿಮ ದಿನಗಳಲ್ಲಿ ಅವರು ತಮ್ಮ ಪುತ್ರನ ಮುಖೇನ ನಮ್ಮೊಡನೆ ಮಾತನಾಡಿದ್ದಾರೆ. ದೇವರು ಇಡೀ ವಿಶ್ವವನ್ನು ಉಂಟುಮಾಡಿದ್ದು ಇವರ ಮುಖಾಂತರವೇ, ಸಮಸ್ತಕ್ಕೂ ಬಾಧ್ಯನನ್ನಾಗಿ ನೇಮಿಸಿರುವುದು ಇವರನ್ನೇ. ಇವರೇ ದೇವರ ಮಹಿಮೆಯ ತೇಜಸ್ಸು, ಇವರೇ ದೈವತ್ವದ ಪಡಿಯಚ್ಚು, ತಮ್ಮ ಶಕ್ತಿಯುತ ವಾಕ್ಯದಿಂದ ಇವರೇ ಸಮಸ್ಥಕ್ಕೂ ಆಧಾರ, ನಮ್ಮ ಪಾಪಗಳನ್ನು ತೊಡೆದುಹಾಕಿ, ಸ್ವರ್ಗದಲ್ಲಿ ಮಹೋನ್ನತ ದೇವರ ಬಲಪಾರ್ಶ್ವದಲ್ಲಿ ಆಸೀನನಾಗಿರುವವರೂ ಇವರೇ.

ಶುಭಸಂದೇಶ ವಾಚನ: ಮತ್ತಾಯ 18:1-5

ಆ ಕಾಲದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, " ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರು? " ಎಂದು ಕೇಳಿದರು. ಯೇಸು ಒಂದು ಚಿಕ್ಕ ಮಗುವನ್ನು ತಮ್ಮ ಹತ್ತಿರಕ್ಕೆ ಕರೆದು, ಅದನ್ನು ಶಿಷ್ಯರ ನಡುವೆ ನಿಲ್ಲಿಸಿ ಹೀಗೆಂದರು: "ನೀವು ಪರಿವರ್ತನೆ ಹೊಂದಿ ಮಕ್ಕಳಂತೆ ಆಗದಿದ್ದರೆ ಸ್ವರ್ಗ ಸಾಮ್ರಾಜ್ಯವನ್ನು ಸೇರಲಾರಿರಿ, ಎಂದು ನಿಶ್ಚಯವಾಗಿ ಹೇಳುತ್ತೇನೆ. ಈ ಮಗುವಿನಂತೆ ನಮ್ರಭಾವವುಳ್ಳವನೇ ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತ ದೊಡ್ಡವನು. ನನ್ನ ಹೆಸರಿನಲ್ಲಿ ಇಂತಹ ಮಗುವೊಂದನ್ನು ಸ್ವೀಕರಿಸುವವನು ನನ್ನನ್ನೇ ಸ್ವೀಕರಿಸುತ್ತಾನೆ."

No comments:

Post a Comment

16.10.2026 - IIಶುಕ್ರವಾರ IIನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಭಯಪಡಬೇಡಿ

  ಮೊದಲನೆಯ ವಾಚನ: ರೋಮನರಿಗೆ 4:1-8 ಸಹೋದರರೇ, ವಂಶಾನುಕ್ರಮವಾಗಿ ನಮ್ಮ ಮೂಲಪಿತನಾದ ಅಬ್ರಹಾಮನ ಅನುಭವವನ್ನು ಕುರಿತು ಏನು ಹೇಳೋಣ? ಆತನು ತನ್ನ ಸತ್ಕಾರ್ಯಗಳಿಂದ ದೇವರೊಡನೆ...