ಮೊದಲನೇ ವಾಚನ: 1 ತಿಮೊಥೇಯನಿಗೆ 4:12-16
ಅತಿ ಪ್ರಿಯನೇ, ನೀನಿನ್ನೂ ಯುವಕನೆಂದು ನಿನ್ನನ್ನು ತಾತ್ಸಾರ ಮಾಡುವುದಕ್ಕೆ ಯಾರಿಗೂ ಅವಕಾಶ ಕೊಡಬೇಡ. ನಿನ್ನ ನಡೆನುಡಿ, ಪ್ರೀತಿವಿಶ್ವಾಸ ಹಾಗೂ ಪರಿಶುದ್ಧತೆಯ ವಿಷಯದಲ್ಲಿ ವಿಶ್ವಾಸಿಗಳೆಲ್ಲರಿಗೂ ನೀನೇ ಆದರ್ಶಪ್ರಾಯನಾಗಿರು. ನಾನು ಬರುವವರೆಗೂ ಪವಿತ್ರಗ್ರಂಥವನ್ನು ಪಠಿಸುವುದರಲ್ಲಿಯೂ ಪ್ರಬೋಧಿಸುವುದರಲ್ಲೂ ಉಪದೇಶಿಸುವುದರಲ್ಲೂ ಆಸಕ್ತನಾಗಿರು. ನಿನ್ನಲ್ಲಿರುವ ವರದಾನವನ್ನು ಅಲಕ್ಷಿಸಬೇಡ. ಸಭೆಯ ಹಿರಿಯರು ನಿನ್ನ ಮೇಲೆ ದೈವವಾಕ್ಯದ ಉಚ್ಚಾರದೊಂದಿಗೆ ಹಸ್ತ ನಿಕ್ಷೇಪಮಾಡಿದಾಗ ಈ ವರವು ನಿನಗೆ ಲಭಿಸಿತಲ್ಲವೇ? ನಿನ್ನ ಆಧ್ಯಾತ್ಮಿಕ ಪ್ರಗತಿ ಎಲ್ಲರಿಗೂ ಗೋಚರವಾಗುವಂತೆ ಈ ಕಾರ್ಯಸಾಧನೆಗಳಲ್ಲಿ ನಿರತನಾಗಿರು; ಇವುಗಳಲ್ಲೇ ಮಗ್ನನಾಗಿರು. ಇದರಿಃದ ನಿನ್ನ ಮತ್ತು ನಿನ್ನ ಉಪದೇಶವನ್ನು ಕೇಳುವವರ ಜೀವೋದ್ಧಾರವನ್ನು ಸಾಧಿಸುವೆ.
ಕೀರ್ತನೆ: 111:7-8, 8, 9, 10
ಶ್ಲೋಕ: ಮಹತ್ತಾದವು ಪ್ರಭುವಿನ ಕಾರ್ಯಗಳು
ನೀತಿ ಸತ್ಯತೆಯುಳ್ಳವು ಆತನ ಸತ್ಕಾರ್ಯಗಳು I
ಸುಸ್ಥಿರವಾದವು ಆತನ ನಿಯಮ ನಿಬಂಧನೆಗಳು II
ಯುಗಯುಗಾಂತರಕು ದೃಢವಾಗಿರುವುವು I
ಸತ್ಯನೀತಿಗಳು ಅವುಗಳಿಗೆ ಅಡಿಪಾಯವು II
ವಿಮೋಚನೆಯನಿತ್ತಿಹನು ಪ್ರಭು ತನ್ನ ಪ್ರಜೆಗೆ I
ಸ್ಥಿರಸ್ಥಾಪಿತವಾಗಿಹುದು ಆತನ ಒಡಂಬಡಿಕೆ I
ಪರಿಶುದ್ಧ, ಪರಮಪೂಜ್ಯ ಆತನ ನಾಮಾಂಕೆ II
ಸುಜ್ಞಾನಕ್ಕೆ ಮೂಲವು ದೈವಭಯವು I
ಅದರ ಪಾಲನೆಯು ವಿವೇಕತನವು I
ಪ್ರಭುವಿಗೆ ಸ್ತೋತ್ರ ಸದಾಕಾಲವು II
ಶುಭಸಂದೇಶ: ಲೂಕ 7:36-50

ಒಬ್ಬ ಫರಿಸಾಯನು ಯೇಸುಸ್ವಾಮಿಯನ್ನು ಊಟಕ್ಕೆ ಆಹ್ವಾನಿಸಿದನು. ಯೇಸು ಅವನ ಮನೆಗೆ ಹೋಗಿ ಊಟಕ್ಕೆ ಕುಳಿತರು. ಅದೇ ಊರಿನಲ್ಲಿ ಪತಿತೆಯೊಬ್ಬಳು ಇದ್ದಳು, ಆಕೆ, ಫರಿಸಾಯನ ಮನೆಯಲ್ಲಿ ಯೇಸು ಊಟಕ್ಕೆ ಕುಳಿತ್ತಿದ್ದಾರೆಂದು ಕೇಳಿ ಬಂದು ಅಮೃತಶಿಲೆಯ ಭರಣಿ ತುಂಬ ಸುಗಂಧ ತೈಲವನ್ನು ತೆಗೆದುಕೊಂಡು ಅಲ್ಲಿಗೆ ಬಂದಳು. ಅವಳು ಯೇಸುವಿನ ಹಿಂಬದಿಯಲ್ಲಿ ಅಳುತ್ತಾ ನಿಂತು, ತನ್ನ ಕಂಬನಿಯಿಂದ ಅವರ ಪಾದಗಳನ್ನು ತೊಳೆದು ತಲೆಕೂದಲಿನಿಂದ ಒರಸಿ, ಆ ಪಾದಗಳಿಗೆ ಮುತ್ತಿಟ್ಟು, ಸುಗಂಧ ತೈಲವನ್ನು ಹಚ್ಚಿದಳು ಯೇಸುವನ್ನು ಆಹ್ವಾನಿಸಿದ ಫರಿಸಾಯನು ಇದನ್ನು ನೋಡಿ, "ಇವನು ನಿಜವಾಗಿಯೂ ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟುತ್ತಿರುವ ಇವಳು ಯಾರು, ಎಂಥಾ ಪತಿತಳು ಎಂದು ತಿದುಕೊಳ್ಳುತ್ತಿದ್ದನು" ಎಂದು ತನ್ನೊಳಗೆ ಅಂದುಕೊಂಡನು. ಅದಕ್ಕೆ ಯೇಸು, "ಒಬ್ಬ ಸಾಲಿಗನಿಗೆ ಇಬ್ಬರು ಸಾಲಗಾರರಿದ್ದರು. ಒಬ್ಬನು ಐನೂರು, ಇನ್ನೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ಅವನಿಗೆ ಸಾಲ ಕೊಡಬೇಕಾಗಿತ್ತು ಆ ಇಬ್ಬರಿಗೂ ಸಾಲ ತೀರಿಸಲು ಸಾಧ್ಯವಾಗಲಿಲ್ಲ. ಸಾಲಿಗನು ಇಬ್ಬರ ಸಾಲವನ್ನೂ ಮನ್ನ ಮಾಡಿದನು. ಈಗ ಹೇಳು, ಈ ಇಬ್ಬರಲ್ಲಿ ಯಾರಿಗೆ ಆ ಸಾಲಿಗನ ಮೇಲೆ ಹೆಚ್ಚು ಪ್ರೀತಿ?" ಎಂದು ಕೇಳಿದರು. ಅದಕ್ಕೆ ಸಿಮೋನನು, "ಯಾರು ಹೆಚ್ಚು ಸಾಲದಿಂದ ಬಿಡುಗಡೆ ಹೊಂದಿದ್ದಾನೋ ಅವನೇ ಎಂದು ತೋರುತ್ತದೆ," ಎಂದನು. "ಸರಿಯಾಗಿ ಹೇಳಿದೆ," ಎಂದರು ಯೇಸು. ಅನಂತರ ಆ ಮಹಿಳೆಯ ಕಡೆ ತಿರುಗಿ ಸಿಮೋನನಿಗೆ, "ಈಕೆಯನ್ನು ನೋಡಿದೆಯಾ ನಾನು ನಿನ್ನ ಮನೆಗೆ ಬಂದಾಗ ನೀನು ನನ್ನ ಕಾಲಿಗೆ ನೀರು ಕೊಡಲಿಲ್ಲ; ಈಕೆಯಾದರೋ ನನ್ನ ಪಾದಗಳನ್ನು ತನ್ನ ಕಣ್ಣೀರಿನಿಂದ ತೊಳೆದು ತಲೆಗೂದಲಿನಿಂದ ಒರೆಸಿದಳು. ನೀನು ನನಗೆ ಮುತ್ತಿಟ್ಟು ಸ್ವಾಗತಿಸಲಿಲ್ಲ; ಆದರೆ ಈಕೆ ಒಳಗೆ ಬಂದಾಗಿನಿಂದ ನನ್ನ ಪಾದಗಳಿಗೆ ಮುತ್ತಿಡುವುದನ್ನು ನಿಲ್ಲಿಸಿಲ್ಲ; ನನ್ನ ತಲೆಗೆ ನೀನು ಎಣ್ಣೆ ಹಚ್ಚಲಿಲ್ಲ ಈಕೆಯೋ ನನ್ನ ಪಾದಗಳಿಗೆ ಸುಗಂಧ ತೈಲವನ್ನು ಹಚ್ಚಿರುವಳು. ಆದ್ದರಿಂದ ನಾನು ನಿನಗೆ ಹೇಳುವುದೇನೆಂದರೆ, ಈಕೆ ಮಾಡಿದ ಪಾಪಗಳು ಅಪಾರವಾದರು ಅವನ್ನು ಕ್ಷಮಿಸಲಾಗಿವೆ; ಇದಕ್ಕೆ ಈಕೆ ತೋರಿಸಿರುವ ಅಧಿಕವಾದ ಪ್ರೀತಿಯೇ ಸಾಕ್ಷಿ. ಕಡಿಮೆ ಕ್ಷಮೆಪಡೆದವನು ಕಡಿಮೆ ಪ್ರೀತಿ ತೋರಿಸುತ್ತಾನೆ," ಎಂದರು. ಆನಂತರ ಯೇಸು ಆ ಮಹಿಳೆಗೆ: "ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ," ಎಂದರು. ಜೊತೆಯಲ್ಲಿ ಊಟಕ್ಕೆ ಕುಳಿತಿದ್ದವರು ಇದನ್ನು ಕೇಳಿ, "ಪಾಪಗಳನ್ನು ಕೂಡ ಕ್ಷಮಿಸುವ ಈತ ಯಾರು?" ಎಂದು ತಮ್ಮತಮ್ಮಲ್ಲೇ ಹೇಳಿಕೊಂಡರು. ಯೇಸು ಆಕೆಗೆ, "ನಿನ್ನ ವಿಶ್ವಾಸ ನಿನ್ನನ್ನು ಉದ್ಧಾರಮಾಡಿದೆ; ಸಮಾಧಾನದಿಂದ ಹೋಗು," ಎಂದರು.
No comments:
Post a Comment