ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

24.09.21

ಮೊದಲನೆಯ ವಾಚನ: ಹಗ್ಗಾಯ 2:1-9

ಅದೇ ವರ್ಷದ ಏಳನೇ ತಿಂಗಳಿನ ಇಪ್ಪತ್ತೊಂದನೆಯ ದಿನದಲ್ಲಿ ಪ್ರವಾದಿ ಹಗ್ಗಾಯನ ಮೂಲಕ ಸರ್ವೇಶ್ವರ ಈ ಸಂದೇಶವನ್ನು ದಯಪಾಲಿಸಿದರು : ಶೆಯಲ್ತೀಯೇಲನ ಮಗನೂ ಜುದೇಯ ನಾಡಿನ ಅಧಿಪತಿಯೂ ಆದ ಜೆರುಬ್ಬಾಬೆಲನಿಗೆ ಮತ್ತು ಮಹಾಯಾಜಕ ಯೆಹೋಶುವನಿಗೆ ಮತ್ತು ಅಳಿದುಳಿದ ಜನರೆಲ್ಲರಿಗೆ ಹೀಗೆ ತಿಳಿಸು -- " ಈ ದೇವಾಲಯದ ಪೂರ್ವ ವೈಭವವನ್ನು ನೋಡಿದವರು ನಿಮ್ಮಲ್ಲಿ ಎಷ್ಟು ಮಂದಿ ಉಳಿದಿದ್ದೀರಿ ? ಇದರ ಈಗಿನ ಸ್ಥಿತಿ ನಿಮಗೆ ಹೇಗೆ ತೋರುತ್ತದೆ ? ನಿಮ್ಮ ದೃಷ್ಟಿಗೆ ಏನೂ ಇಲ್ಲದಂತೆ ಕಾಣಿಸುತ್ತದಲ್ಲವೇ ? ಸರ್ವೇಶ್ವರನಾದ ನಾನು ಹೇಳುವುದನ್ನು ಕೇಳಿ : ಜೆರುಬ್ಬಾಬೆಲನೇ, ಈಗ ಧೈರ್ಯದಿಂದಿರು. ಯೆಹೋಚಾದಾಕನ ಮಗನೂ ಮಹಾಯಾಜಕನೂ ಆದ ಯೆಹೋಶುವನೇ, ಎದೆಗುಂದಬೇಡ. ನಾಡಿನ ಜನರೇ, ನೀವೆಲ್ಲರು ಧೈರ್ಯದಿಂದ ಕೆಲಸ ಮಾಡಿ. ಇದು ಸೇನಾಧೀಶ್ವರ ಸರ್ವೇಶ್ವರನಾದ ನನ್ನ ನುಡಿ. ನಾನು ನಿಮ್ಮೊಡನೆ ಇದ್ದೇನೆ. ನೀವು ಈಜಿಪ್ಟ್ ದೇಶದಿಂದ ಹೊರಟುಬಂದಾಗ ನಾನು ನಿಮಗೆ ಪ್ರಮಾಣವಾಗಿ ಕೊಟ್ಟ ಮಾತನ್ನು ನೆರವೇರಿಸುವೆನು. ನನ್ನ ಆತ್ಮವು ನಿಮ್ಮಲ್ಲಿ ನೆಲೆಗೊಂಡಿದೆ, ಭಯಪಡದಿರಿ. ಸ್ವಲ್ಪಕಾಲದಲ್ಲೇ ಮತ್ತೊಮ್ಮೆ ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಮರುಭೂಮಿಯನ್ನೂ ಅದರಿಸುವೆನು. ಸಕಲ ಜನಾಂಗಗಳನ್ನು ನಡುಗಿಸುವೆನು. ಆಗ ಎಲ್ಲ ರಾಷ್ಟ್ರಗಳ ಸಿರಿಸಂಪತ್ತು ಇಲ್ಲಿಗೆ ಬರುವುದು. ಈ ಆಲಯವನ್ನು ವೈಭವದಿಂದ ತುಂಬಿಸುವೆನು. ಇದು ಸರ್ವಶಕ್ತ ಸರ್ವೇಶ್ವರನ ನುಡಿ. ಬೆಳ್ಳಿ ನನ್ನದು, ಬಂಗಾರವೆಲ್ಲ ನನ್ನದು. ಈ ಆಲಯದ ಮುಂದಿನ ವೈಭವವು ಹಿಂದಿನ ವೈಭವಕ್ಕಿಂತ ಶ್ರೇಷ್ಠವಾಗಿರುವುದು. ಈ ಸ್ಥಳದಲ್ಲಿ ಶಾಂತಿ ಸಮೃದ್ದಿಯನ್ನು ಅನುಗ್ರಹಿಸುವೆನು. ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ."

ಕೀರ್ತನೆ 43:1-4
ಶ್ಲೋಕ: ಸ್ತುತಿಸುವೆ ನಾನಾತನನು, ಮುಕ್ತಿದಾತ ಪರಮಾತ್ಮ ಆತನೆನಗೆ.

ನಿರ್ಣಯಿಸು ನನ್ನ ನ್ಯಾಯವನು ಓ ದೇವಾ|
ವಾದಿಸು ಆ ಭಕ್ತಹೀನ ಜನತೆಯ ವಿರುದ್ಧ|
ಬಿಡಿಸೆನ್ನನು ವಂಚಕರಿಂದ ಅಧರ್ಮಿಗಳಿಂದ||

ನನಗೆ ಕೋಟೆ ನೀನಲವೆ? ನನ್ನ ಕೈಬಿಟ್ಟಿರುವೆ ಏಕೆ?|
ಶತ್ರು ಬಾಧೆಯಿಂದ ಭಿಕಾರಿಯಂತೆ ನಾನಲೆಯಬೇಕೆ?||
ಕಳುಹಿಸು ನಿನ್ನ ಜ್ಯೋತಿಯನು, ನಿನ್ನ ಸತ್ಯವನು, ನನ್ನ ನಡೆಸಲಿಕೆ|
ಸೇರಿಸೆನ್ನನು ನಿನ್ನ ಪವಿತ್ರ ಪರ್ವತಕೆ, ನಿನ್ನಯ ನಿವಾಸಕ್ಕೆ||

ಬರುವೆನಾಗ ನಿನ್ನ ಬಲಿಪೀಠದ ಬಳಿಗೆ|
ನನ್ನಾನಂದ ನಿಧಿಯಾಗಿ ನಿನ್ನ ಸನ್ನಿಧಿಗೆ|
ವೀಣೆ ನುಡಿಸಿ ದೇವಾ, ನಿನ್ನ ಸ್ತುತಿಸಲಿಕೆ||

ಶುಭಸಂದೇಶ: ಲೂಕ 9:18-22

ಆ ಕಾಲದಲ್ಲಿ ಒಮ್ಮೆ ಯೇಸು ಏಕಾಂಗಿಯಾಗಿ ಪ್ರಾರ್ಥನೆಮಾಡುತ್ತಿದ್ದಾಗ ಶಿಷ್ಯರು ಸಮೀಪದಲ್ಲೇ ಇದ್ದರು. " ಜನಸಾಮಾನ್ಯರು ನನ್ನನ್ನು ಯಾರೆನ್ನುತ್ತಾರೆ? " ಎಂದು ಯೇಸು ಅವರನ್ನು ಪ್ರಶ್ನಿಸಿದರು. ಅದಕ್ಕೆ ಅವರು, " ಹಲವರು ತಮ್ಮನ್ನು ' ಸ್ನಾನಿಕ ಯೊವಾನ್ನ ' ಎನ್ನುತ್ತಾರೆ, ಕೆಲವರು ' ಎಲೀಯನು ' ಎನ್ನುತ್ತಾರೆ, ಮತ್ತೆ ಕೆಲವರು ' ಪ್ರಾಚೀನ ಪ್ರವಾದಿಗಳಲ್ಲಿ ಒಬ್ಬನು ಮರಳಿ ಜೀವಂತನಾಗಿದ್ದಾನೆ ' ಎನ್ನುತ್ತಾರೆ, " ಎಂದು ಉತ್ತರವಿತ್ತರು. ಆಗ ಯೇಸು, " ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ? " ಎಂದು ಪುನಃ ಪ್ರಶ್ನಿಸಿದರು. ಅದಕ್ಕೆ ಪೇತ್ರನು, " ದೇವರಿಂದ ಅಭಿಷಿಕ್ತರಾದ ಲೋಕೋದ್ಧಾರಕ ತಾವೇ " ಎಂದು ಉತ್ತರ ಕೊಟ್ಟನು. ಈ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಯೇಸು ಶಿಷ್ಯರನ್ನು ಆಜ್ಞಾಪೂರ್ವಕವಾಗಿ ಎಚ್ಚರಿಸಿದರು. ಇದಲ್ಲದೆ, " ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾಪ್ರಮುಖರಿಂದಲೂ ಮುಖ್ಯಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಆತನು ತಿರಸ್ಕ್ರತನಾಗಿ ಕೊಲ್ಲಲ್ಪಡುವನು. ಆದರೆ ಮೂರನೇ ದಿನ ಆತನು ಪುನರುತ್ಥಾನ ಹೊಂದುವನು, " ಎಂದು ಅವರಿಗೆ ತಿಳಿಸಿದರು.

No comments:

Post a Comment