ಮೊದಲನೇ ವಾಚನ: ಕೊಲೊಸ್ಸೆಯರಿಗೆ 1:21-23
ಸಹೋದರರೇ, ಹಿಂದೆ ನೀವು ಆಚಾರವಿಚಾರಗಳಲ್ಲಿ ಕೆಟ್ಟವರಾಗಿದ್ದರಿಂದ ದೇವರ ವಿರೋಧಿಗಳಾಗಿದ್ದು ಅವರಿಂದ ದೂರವಿದ್ದೀರಿ. ಈಗಲಾದರೋ ಯೇಸುಕ್ರಿಸ್ತರ ದೈಹಿಕ ಮರಣದ ಫಲವಾಗಿ ನಿಮಗೂ ದೇವರಿಗೂ ಸಂಧಾನ ನಡೆದಿದೆ. ಹೀಗೆ ದೇವರು ನಿಮ್ಮನ್ನು ತಮ್ಮ ಸನ್ನಿಧಿಗೆ ಸೇರಿಸಿಕೊಳ್ಳಲು ನೀವು ಪವಿತ್ರರೂ ನಿಷ್ಕಳಂಕರೂ ದೋಷರಹಿತರೂ ಆಗಿರುವಂತೆ ಮಾಡಿದ್ದಾರೆ. ಇನ್ನು ನೀವು ವಿಶ್ವಾಸದಲ್ಲಿ ದೃಡವಾಗಿ ಮುನ್ನಡೆಯಬೇಕು. ಶುಭಸಂದೇಶವನ್ನು ಕೇಳಿದಾಗ ನೀವು ಹೊಂದಿದ ಭರವಸೆಯನ್ನು ಕಳೆದುಕೊಳ್ಳದಂತೆ ಜಾಗರೂಕರಾಗಿರಬೇಕು. ಪೌಲನಾದ ನಾನು ಇದೇ ಶುಭಸಂದೇಶದ ಪ್ರಚಾರಕ. ಈ ಶುಭಸಂದೇಶವನ್ನು ಜಗತ್ತಿನಲ್ಲಿರುವ ಸರ್ವ ಸೃಷ್ಟಿಗೂ ಸಾರಲಾಗುತ್ತಿದೆ.
ಕೀರ್ತನೆ: 54:3-4, 6, 8
ಶ್ಲೋಕ: ನನಗಿದೋ ದೇವನೇ ಸಹಾಯಕನು
ರಕ್ಷಿಸೆನ್ನನು ದೇವ, ನಿನ್ನ ನಾಮ ಶಕ್ತಿಯಿಂದ I
ನ್ಯಾಯ ದೊರಕಿಸೆನಗೆ ನಿನ್ನ ಪರಾಕ್ರಮದಿಂದ II
ನನ್ನ ಪ್ರಾರ್ಥನೆಯನು ಆಲಿಸಯ್ಯಾ I
ನನ್ನ ಮಾತುಗಳಿಗೆ ಕಿವಿಗೊಡು ದೇವಾ II ಶ್ಲೋಕ
ನನಗಿದೋ ದೇವನೆ ಸಹಾಯಕನು I
ಸರ್ವಾಪತ್ತುಗಳಿಂದ ತಪ್ಪಿಸಿದೆ ಪ್ರಭು, ನನ್ನನು I
ಎಂತಲೆ ಸ್ವಂತ ಇಚ್ಛೆಯಿಂದ ಬಲಿಯನರ್ಪಿಸುವೆ ನಿನಗೆ I
ಧನ್ಯವಾದ ಪ್ರಭು, ನಿನ್ನ ಸರ್ವೋತ್ತಮ ನಾಮಕೆ II
ಶುಭಸಂದೇಶ: ಲೂಕ 6:1-5
ಒಂದು ಸಬ್ಬತ್ ದಿನ ಯೇಸುಸ್ವಾಮಿ, ಗೋದಿಯ ಹೊಲಗಳನ್ನು ಹಾದುಹೋಗುತ್ತಿದ್ದರು. ಅವರ ಶಿಷ್ಯರು ಕೆಲವು ತೆನೆಗಳನ್ನು ಕಿತ್ತು ಕೈಗಳಲ್ಲಿ ಹೊಸಕಿ ತಿನ್ನಲಾಂಭಿಸಿದರು. ಅದನ್ನು ಕಂಡ ಫರಿಸಾಯರಲ್ಲಿ ಕೆಲವರು, "ಸಬ್ಬತ್ ದಿನದಲ್ಲಿ ನಿಷಿದ್ದವಾದುದನ್ನು ನೀವು ಮಾಡುವುದೇಕೆ?" ಎಂದು ಅವರನ್ನು ಆಕ್ಷೇಪಿಸಿದರು. ಅದಕ್ಕೆ ಯೇಸು, "ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಏನು ಮಾಡಿದರೆಂಬುದನ್ನು ನೀವು ಓದಿರಬೇಕಲ್ಲವೆ? ದಾವೀದನು ದೇವಮಂದಿರದೊಳಕ್ಕೆ ಹೋಗಿ ಯಾಜಕರ ಹೊರತು ಬೇರೆ ಯಾರೂ ತಿನ್ನಬಾರದಾಗಿದ್ದ ನೈವೇದ್ಯದ ರೊಟ್ಟಿಗಳನ್ನೇ ತೆಗೆದುಕೊಂಡು ತಿಂದುದಲ್ಲದೆ ತನ್ನ ಸಂಗಡಿಗರಿಗೂ ಕೊಟ್ಟನು ಅಲ್ಲವೆ? ನರಪುತ್ರನು ಸಬ್ಬತ್ತಿಗೆ ಒಡೆಯನಾಗಿದ್ದಾನೆ," ಎಂದು ಉತ್ತರಕೊಟ್ಟರು.
No comments:
Post a Comment