ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

28.03.21- ‘ನನ್ನ ಕಾಲ ಸವಿೂಪಿಸಿತು, ಪಾಸ್ಕವನ್ನು ನನ್ನ ಶಿಷ್ಯರ ಸಮೇತ ನಿನ್ನ ಮನೆಯಲ್ಲಿಯೇ ಆಚರಿಸಬೇಕೆಂದಿದ್ದೇನೆ’

ಗರಿಗಳ ಭಾನುವಾರ   



 ಮೊದಲನೇ ವಾಚನ: ಯೆಶಾಯ: 50:4-7

ದಣಿದವರನ್ನು ಹಿತನುಡಿಗಳಿಂದ ತಣಿಸುವಂತೆ ಅನುಗ್ರಹಿಸುತ್ತಾನೆನಗೆ ಸ್ವಾಮಿ ಸರ್ವೇಶ್ವರ ಶಿಕ್ಷಿತರ ನಾಲಗೆಯನು; ಶಿಷ್ಯನೋಪಾದಿ ನಾನು ಆತನನ್ನು ಆಲಿಸುವಂತೆ ಬೆಳಬೆಳಗೂ ನನ್ನನೆಚ್ಚರಿಸಿ ಚೇತನಗೊಳಿಸುತ್ತಾನೆ ನನ್ನ ಕಿವಿಯನು. ತೆರೆದಿಹನು ಸ್ವಾಮಿ ಸರ್ವೇಶ್ವರ ನನ್ನ ಕಿವಿಯನು ಎಂದೇ ವಿಮುಖನಾಗಲಿಲ್ಲ ನಾನು, ಪ್ರತಿಭಟಿಸಲಿಲ್ಲ ಆತನನು. ಬೆನ್ನುಕೊಟ್ಟೆನು ಹೊಡೆಯುವವರಿಗೆ ಗಡ್ಡ ಒಡ್ಡಿದೆನು ಅದನ್ನು ಕೀಳುವವರಿಗೆ ಮುಖ ಮರೆಮಾಡಲಿಲ್ಲ ಉಗುಳುಬುಗುಳಿಗೆ. ನೆರವಾಗಿಹನು ನನಗೆ ಸ್ವಾಮಿ ಸರ್ವೇಶ್ವರ ಎಂದೇ ತಲೆತಗ್ಗಿಸಲಿಲ್ಲ ನಾನು ನಾಚಿಕೆಯಿಂದ ಗಟ್ಟಿಮಾಡಿಕೊಂಡೆ ಮುಖವನು ಕಗ್ಗಲ್ಲಿನ ಹಾಗೆ ಆಶಾಭಂಗಪಡಲಾರೆನೆಂದು ಗೊತ್ತು ನನಗೆ.

ಕೀರ್ತನೆ: 22:8-9, 17-18, 19-20, 23-24
ಶ್ಲೋಕ: ದೇವಾ, ಓ ಎನ್ನ ದೇವಾ, ಏಕೆನ್ನ ಕೈ ಬಿಟ್ಟೆ?

ದೇವಾ ಓ ಎನ್ನ ದೇವಾ ಏಕೆನ್ನ ಕೈ ಬಿಟ್ಟೆ ? |
ಕಿವಿಗೊಡದೆ ಏಕೆ ದೂರವಾಗಿ ಬಿಟ್ಟೆ ? ||

ಇತ್ತನಿವನು ಭರವಸೆ , ಪ್ರಭುವೆ ತನ್ನುದ್ಧಾರಕ ನೆಂದು |
ಅತನಿಗಿವನು ಮೆಚ್ಚುಗೆಯಾದರೆ
ರಕ್ಷಿಸಲಿ ಇಂತೆಂದು ||

ಮಾತೆಯುದರದಿಂದ ಎನ್ನನು ಹೊರ ಬರಿಸಿದವನು ನೀನು |
ನಿಶ್ಚಿಂತೆಯಾ ಕೂಸನು ಆಕೆಯ ಮಡಿಲಿನಲಿ ಇರಿಸಿದವನು ನೀನು ||

ಎಣಿಸಬಹುದಿದೆ ನನ್ನೆಲುಬುಗಳನ್ನೆಲ್ಲವನು |
ಹಿಗ್ಗುತ್ತಹರು ದುರುಗುಟ್ಟಿ ನೋಡೆನ್ನನು ||
ನನ್ನ ಉಡುಗೆಗಳನ್ನು ಹಂಚಿಕೊಂಡರು |
ನನ್ನ ಅಂಗಿಗೋಸ್ಕರ ಚೀಟು ಹಾಕಿದರು ||

ನನ್ನಿಂದ ದೂರ ಸರಿಯಲು ಬೇಡ, ಪ್ರಭು |
ನೀನೆನ್ನ ಶಕ್ತಿ, ನೆರವಾಗಲು ತ್ವರೆ ಮಾಡು ||
ಕತ್ತಿಗೆ ತುತ್ತಾಗದಂತೆ ತಪ್ಪಿಸು |
ಕುಕ್ಕುರಗಳಿಂದ ಪ್ರಾಣವನುಳಿಸು ||

ಮಣಿಯಿರಿ, ಪ್ರಭುವಿನಲಿ ಭಯ ಭಕುತಿಯುಳ್ಳವರೆ  |
ಭಜಿಸಿರಿ ಇಸ್ರಯೇಲರೆ , ಯಾಕೋಬ ಕುಲಜರೇ ||

ತೃಣೀಕರಿಸನು, ತಿರಸ್ಕರಿಸನು ದಲಿತನನು |
ವಿಮುಖನಾಗನು, ಪ್ರಾರ್ಥನೆಗೆ ಕಿವಿಗೊಡುವನು ||


ಎರಡನೇ ವಾಚನ: ಪಿಲಿಪ್ಪಿಯರಿಗೆ: 2:6-11

ದೇವಸ್ವರೂಪಿ ತಾನಾಗಿದ್ದರೂ ನಿರುತ ದೇವರಿಗೆ ಸಮನಾದ ಆ ಸಿರಿ ಪದವಿಯನಾತ ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ. ತನ್ನನೇ ಬರಿದು ಮಾಡಿಕೊಂಡು ದಾಸನ ರೂಪವನು ಧರಿಸಿಕೊಂಡು ಮನುಜನಾಕಾರದಲಿ ಕಾಣಿಸಿಕೊಂಡು ನರಮಾನವರಿಗೆ ಸರಿಸಮನಾದ. ತನ್ನನೇ ಆತ ತಗ್ಗಿಸಿಕೊಂಡು ವಿಧೇಯನಾಗಿ ನಡೆದುಕೊಂಡು ಮರಣಪರಿಯಂತ, ಹೌದೌದು, ಶಿಲುಬೆಯ ಮರಣಪರಿಯಂತ ವಿಧೇಯನಾದ. ಎಂತಲೇ ಪರಮೋನ್ನತ ಸ್ಥಾನಕ್ಕೇರಿಸಿದನಾತನನು ಇತ್ತನು ಹೆಸರುಗಳೊಳುತ್ತಮ ಹೆಸರನು ದೇವಪರಮನು. ಯೇಸುವಿನ ಹೆಸರಿಗೆಂದೇ ಮೊಣಕಾಲೂರಿ ಮಣಿವರು ಸ್ವರ್ಗವಾಸಿಗಳು, ಭೂನಿವಾಸಿಗಳು, ಪಾತಾಳ ಜೀವರಾಶಿಗಳು. ‘ಕ್ರಿಸ್ತ ಯೇಸುವೇ ಪ್ರಭು’ ಎಂದೆಲ್ಲರಿಗೆ ಅರಿಕೆ ಮಾಡುವರು ಪಿತದೇವನ ಮಹಿಮೆಯನು ಈ ಪರಿ ಹೊಗಳಿ ಸಾರುವರವರು.

ಶುಭಸಂದೇಶ: ಮಾರ್ಕ 14: 1-15:47 (15: 1-39)


ಬೆಳಗಾದ ಕೂಡಲೇ, ಮುಖ್ಯಯಾಜಕರೂ ಪ್ರಮುಖರೂ ಧರ್ಮಶಾಸ್ತ್ರಿಗಳೂ ಹಾಗು ನ್ಯಾಯಸಭೆಯ ಇತರೆ ಸದಸ್ಯರೂ ಒಟ್ಟುಗೂಡಿ ಸಮಾಲೋಚನೆ ನಡೆಸಿದರು. ಯೇಸುಸ್ವಾಮಿಗೆ ಬೇಡಿಹಾಕಿ ಪಿಲಾತನ ಬಳಿಗೆ ಕರೆದೊಯ್ದು ಆತನ ವಶಕ್ಕೊಪ್ಪಿಸಿದರು. ಪಿಲಾತನು ಯೇಸುವನ್ನು, “ನೀನು ಯೆಹೂದ್ಯರ ಅರಸನೋ?” ಎಂದು ಪ್ರಶ್ನಿಸಿದನು. “ಅದು ನಿಮ್ಮ ಬಾಯಿಂದಲೇ ಬಂದಿದೆ,” ಎಂದು ಯೇಸು ಮರುನುಡಿದರು. ಮುಖ್ಯ ಯಾಜಕರು ಯೇಸುವಿನ ಮೇಲೆ ಅನೇಕ ಆಪಾದನೆಗಳನ್ನು ಹೊರಿಸುತ್ತಿದ್ದರು. ಆದುದರಿಂದ ಪಿಲಾತನು ಪುನಃ ಯೇಸುವನ್ನು, “ಇವರು ಇಷ್ಟೊಂದು ಆಪಾದನೆಗಳನ್ನು ನಿನ್ನ ಮೇಲೆ ಹೊರಿಸುತ್ತಿರುವಾಗ ನೀನು ಯಾವ ಉತ್ತರವನ್ನೂ ಕೊಡುವುದಿಲ್ಲವೇ?” ಎಂದು ಕೇಳಿದನು. ಆದರೆ ಯೇಸು ಇನ್ನೊಂದು ಮಾತನ್ನೂ ಆಡದೆ ಮೌನವಾಗಿದ್ದರು. ಇದನ್ನು ಕಂಡು ಪಿಲಾತನು ಆಶ್ಚರ್ಯಪಟ್ಟನು. ಪ್ರತಿ ಪಾಸ್ಕಹಬ್ಬದ ಸಂದರ್ಭದಲ್ಲಿ, ಜನರು ಕೇಳಿಕೊಂಡ ಒಬ್ಬ ಸೆರೆಯಾಳನ್ನು ಬಿಡುಗಡೆ ಮಾಡುವುದು ಪಿಲಾತನ ಪದ್ಧತಿಯಾಗಿತ್ತು. ದಂಗೆಯೊಂದರಲ್ಲಿ ಕೊಲೆಮಾಡಿದ್ದ ಕೆಲವರು ಈ ಸಮಯದಲ್ಲಿ ಸೆರೆಮನೆಯಲ್ಲಿ ಇದ್ದರು. ಇವರೊಡನೆ ಬರಬ್ಬ ಎಂಬವನೂ ಸೆರೆಯಲ್ಲಿದ್ದನು. ಜನರ ಗುಂಪು ಪಿಲಾತನ ಬಳಿಗೆ ಹೋಗಿ, ಪದ್ಧತಿಯಂತೆ ಈ ವರ್ಷವೂ ಒಬ್ಬ ಕೈದಿಯನ್ನು ತಮಗೆ ಬಿಟ್ಟು ಕೊಡಬೇಕೆಂದು ಕೇಳಿದಾಗ ಪಿಲಾತನು, “ಯೆಹೂದ್ಯರ ಅರಸನನ್ನು ನಾನು ನಿಮಗೆ ಬಿಟ್ಟುಕೊಡಬಹುದೋ?” ಎಂದು ಅವರನ್ನು ಕೇಳಿದನು. ಏಕೆಂದರೆ, ಮುಖ್ಯಯಾಜಕರು ಅಸೂಯೆಯಿಂದಲೇ ಯೇಸುವನ್ನು ತನಗೆ ಒಪ್ಪಿಸಿದ್ದಾರೆ ಎಂದು ಅವನಿಗೆ ಚೆನ್ನಾಗಿ ತಿಳಿದಿತ್ತು. ಆದರೆ ಬರಬ್ಬನನ್ನೇ ಬಿಡುಗಡೆ ಮಾಡುವಂತೆ ಪಿಲಾತನನ್ನು ಕೇಳಿಕೊಳ್ಳಬೇಕೆಂದು ಮುಖ್ಯ ಯಾಜಕರು ಜನರನ್ನು ಪ್ರಚೋದಿಸಿದರು. ಆಗ ಪಿಲಾತನು ಪುನಃ “ಹಾಗಾದರೆ ಯೆಹೂದ್ಯರ ಅರಸನೆಂದು ನೀವು ಕರೆಯುವ ಈತನನ್ನು ನಾನೇನು ಮಾಡಲಿ?” ಎಂದು ಜನರನ್ನು ಕೇಳಿದನು. ಅದಕ್ಕೆ ಅವರು, “ಅವನನ್ನು ಶಿಲುಬೆಗೇರಿಸಿ,” ಎಂದು ಬೊಬ್ಬೆ ಹಾಕಿದರು. “ಏಕೆ, ಇವನೇನು ಮಾಡಿದ್ದಾನೆ?” ಎಂದು ಪಿಲಾತನು ಮತ್ತೆ ಅವರನ್ನು ಪ್ರಶ್ನಿಸಲು ಅವರು, “ಅವನನ್ನು ಶಿಲುಬೆಗೇರಿಸಿ, ಶಿಲುಬೆಗೇರಿಸಿ,” ಎಂದು ಇನ್ನೂ ಹೆಚ್ಚಾಗಿ ಆರ್ಭಟಿಸಿದರು. ಪಿಲಾತನು ಜನಸಮೂಹವನ್ನು ಮೆಚ್ಚಿಸುವ ಸಲುವಾಗಿ ಬರಬ್ಬನನ್ನು ಬಿಡುಗಡೆ ಮಾಡಿದನು. ಯೇಸುವನ್ನು ಕೊರಡೆಗಳಿಂದ ಹೊಡೆಸಿ, ಶಿಲುಬೆಗೇರಿಸುವುದಕ್ಕೆ ಒಪ್ಪಿಸಿಬಿಟ್ಟನು. ಅನಂತರ ಸೈನಿಕರು ಯೇಸುಸ್ವಾಮಿಯನ್ನು ರಾಜಭವನದ ಅಂಗಣದೊಳಕ್ಕೆ ಕೊಂಡೊಯ್ದು, ತಮ್ಮ ಪಡೆಯೆಲ್ಲವನ್ನೂ ಒಟ್ಟಿಗೆ ಕರೆದರು. ಯೇಸುವಿಗೆ ನಸುಗೆಂಪು ಮೇಲಂಗಿಯನ್ನು ಹೊದಿಸಿದರು. ಮುಳ್ಳಿನಿಂದ ಒಂದು ಕಿರೀಟವನ್ನು ಹೆಣೆದು, ಅವರ ತಲೆಯ ಮೇಲೆ ಇರಿಸಿದರು. ತರುವಾಯ, “ಯೆಹೂದ್ಯರ ಅರಸನಿಗೆ ಜಯವಾಗಲಿ,” ಎಂದು ನಾಟಕೀಯವಾಗಿ ವಂದಿಸಿದರು. ಕೋಲಿನಿಂದ ಅವರ ತಲೆಯ ಮೇಲೆ ಹೊಡೆದು, ಉಗುಳಿ, ಮೊಣಕಾಲೂರಿ ಗೌರವಿಸುವಂತೆ ನಟಿಸಿದರು. ಹೀಗೆ ಯೇಸುವನ್ನು ಪರಿಹಾಸ್ಯ ಮಾಡಿದ ಬಳಿಕ, ಆ ನಸುಗೆಂಪು ಮೇಲಂಗಿಯನ್ನು ತೆಗೆದುಹಾಕಿ, ಅವರ ಬಟ್ಟೆಯನ್ನೇ ಮತ್ತೆ ತೊಡಿಸಿದರು. ಬಳಿಕ ಶಿಲುಬೆಗೆ ಏರಿಸುವುದಕ್ಕಾಗಿ ಅವರನ್ನು ಕರೆದುಕೊಂಡು ಹೋದರು. ಆಗ ಸಿರೇನ್ ಪಟ್ಟಣದ ಸಿಮೋನ ಎಂಬುವನು ಹಳ್ಳಿಯ ಕಡೆಯಿಂದ ಆ ಮಾರ್ಗವಾಗಿ ಬರುತ್ತಿದ್ದನು. ಈತನು ಅಲೆಕ್ಸಾಂಡರ್ ಹಾಗೂ ರೂಫ ಎಂಬವರ ತಂದೆ. ಯೇಸುಸ್ವಾಮಿಯ ಶಿಲುಬೆಯನ್ನು ಹೊರುವಂತೆ ಸೈನಿಕರು ಅವನನ್ನು ಬಲವಂತಮಾಡಿದರು. ಬಳಿಕ ಯೇಸುವನ್ನು ಗೊಲ್ಗೊಥ ಎಂಬ ಸ್ಥಳಕ್ಕೆ ಕರೆದುಕೊಂಡು ಬಂದರು. ಗೊಲ್ಗೊಥ ಎಂದರೆ ‘ಕಪಾಲ ಸ್ಥಳ’ ಎಂದು ಅರ್ಥ. ಅಲ್ಲಿ ರಕ್ತಬೋಳ ಮಿಶ್ರಿತ ದ್ರಾಕ್ಷಾರಸವನ್ನು ಯೇಸುವಿಗೆ ಕೊಟ್ಟರು. ಆದರೆ ಅದನ್ನು ಅವರು ಕುಡಿಯಲಿಲ್ಲ. ಕೊನೆಗೆ ಅವರನ್ನು ಶಿಲುಬೆಗೆ ಏರಿಸಿದರು. ಅವರ ಬಟ್ಟೆಗಳನ್ನು ಯಾವು ಯಾವುದು, ಯಾರು ಯಾರಿಗೆ ಸಿಗಬೇಕೆಂದು ತಿಳಿಯಲು ಚೀಟುಹಾಕಿ ತಮ್ಮತಮ್ಮೊಳಗೆ ಹಂಚಿಕೊಂಡರು. ಯೇಸುವನ್ನು ಶಿಲುಬೆಗೇರಿಸಿದಾಗ, ಬೆಳಿಗ್ಗೆ ಸುಮಾರು ಒಂಬತ್ತು ಗಂಟೆಯಾಗಿತ್ತು. ಅವರ ಮೇಲೆ ಹೊರಿಸಿದ್ದ ದೋಷಾರೋಪಣೆಯನ್ನು, ‘ಈತ ಯೆಹೂದ್ಯರ ಅರಸ’ ಎಂದು ಬರೆಯಲಾಗಿತ್ತು. ಅಲ್ಲದೆ ಯೇಸುವಿನ ಬಲಗಡೆ ಒಬ್ಬನು, ಎಡಗಡೆ ಒಬ್ಬನು, ಹೀಗೆ ಇಬ್ಬರು ಕಳ್ಳರನ್ನು ಅವರ ಸಂಗಡ ಶಿಲುಬೆಗೇರಿಸಿದರು. (ಹೀಗೆ ‘ಅವರನ್ನು ದ್ರೋಹಿಗಳ ಸಾಲಿನಲ್ಲಿ ಸೇರಿಸಿದರು,’ ಎಂಬ ಪವಿತ್ರಗ್ರಂಥದ ವಾಕ್ಯವು ನೆರವೇರಿತು). ಪಕ್ಕದಲ್ಲಿ ಹಾದುಹೋಗುತ್ತಿದ್ದ ಜನರು ತಲೆಯಾಡಿಸುತ್ತಾ, “ಆಹಾ, ಮಹಾದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಅದನ್ನು ಮತ್ತೆ ಕಟ್ಟಬಲ್ಲವನೇ, ಶಿಲುಬೆಯಿಂದ ಇಳಿದು ಬಂದು ನಿನ್ನನ್ನು ನೀನೇ ಈಗ ರಕ್ಷಿಸಿಕೋ!” ಎಂದು ಯೇಸುವನ್ನು ಮೂದಲಿಸಿದರು. ಅದೇ ಪ್ರಕಾರ ಮುಖ್ಯಯಾಜಕರೂ ಧರ್ಮಶಾಸ್ತ್ರಿಗಳೂ ಸೇರಿ ಅವರನ್ನು ಪರಿಹಾಸ್ಯ ಮಾಡುತ್ತಾ, “ಇವನು ಇತರರನ್ನು ರಕ್ಷಿಸಿದ, ಆದರೆ ತನ್ನನ್ನು ತಾನೇ ರಕ್ಷಿಸಿಕೊಳ್ಳಲು ಇವನಿಂದಾಗದು; ಇಸ್ರಯೇಲರ ಅರಸನಾದ ಈ ಕ್ರಿಸ್ತನು ಶಿಲುಬೆಯಿಂದ ಇಳಿದು ಬರಲಿ; ಆಗ ನೋಡಿ ನಂಬುತ್ತೇವೆ,” ಎಂದು ಪರಸ್ಪರ ಮಾತನಾಡಿಕೊಂಡರು. ಯೇಸುವಿನೊಡನೆ ಶಿಲುಬೆಗೇರಿಸಲಾಗಿದ್ದವರು ಸಹ ಅವರನ್ನು ಹಂಗಿಸುತ್ತಿದ್ದರು. ಆಗ ನಡುಮಧ್ಯಾಹ್ನ. ಆ ಹೊತ್ತಿನಿಂದ ಮೂರುಗಂಟೆಯವರೆಗೂ ನಾಡಿನಲ್ಲೆಲ್ಲಾ ಕತ್ತಲೆ ಕವಿಯಿತು. ಮೂರನೆಯ ಗಂಟೆಯ ಸಮಯದಲ್ಲಿ, ಯೇಸುಸ್ವಾಮಿ: “ಎಲೋಹಿ, ಎಲೋಹಿ, ಲಮಾ ಸಬಕ್ತಾನಿ?” ಎಂದರೆ, “ನನ್ನ ದೇವರೇ, ನನ್ನ ದೇವರೇ, ನನ್ನನ್ನೇಕೆ ಕೈಬಿಟ್ಟಿದ್ದೀರಿ?” ಎಂದು ಗಟ್ಟಿಯಾಗಿ ಕೂಗಿಕೊಂಡರು. ಅಲ್ಲಿ ನಿಂತಿದ್ದವರಲ್ಲಿ ಕೆಲವರು ಇದನ್ನು ಕೇಳಿ, “ಇಗೋ, ಇವನು ಎಲೀಯನನ್ನು ಕರೆಯುತ್ತಿದ್ದಾನೆ!” ಎಂದರು. ಆಗ ಅವರಲ್ಲೊಬ್ಬನು ಓಡಿಹೋಗಿ, ಸ್ಪಂಜನ್ನು ಹುಳಿರಸದಲ್ಲಿ ತೋಯಿಸಿ, ಅದನ್ನು ಒಂದು ಕೋಲಿನ ತುದಿಗೆ ಸಿಕ್ಕಿಸಿ, ಯೇಸುವಿಗೆ ಕುಡಿಯಲು ಕೊಡುತ್ತಾ, “ತಾಳಿ, ಇವನನ್ನು ಶಿಲುಬೆಯಿಂದ ಬಿಡುಗಡೆ ಮಾಡಿ ಇಳಿಸುವುದಕ್ಕೆ ಎಲೀಯನು ಬರುವನೋ, ನೋಡೋಣ,” ಎಂದನು. ಯೇಸುವಾದರೋ ಗಟ್ಟಿಯಾಗಿ ಕೂಗಿ ಪ್ರಾಣಬಿಟ್ಟರು. ಆಗ ಮಹಾದೇವಾಲಯದ ತೆರೆ ಮೇಲಿನಿಂದ ಕೆಳಗಿನವರೆಗೂ ಇಬ್ಭಾಗವಾಗಿ ಸೀಳಿಹೋಯಿತು. ಯೇಸು ಹೀಗೆ ಪ್ರಾಣಬಿಟ್ಟದ್ದನ್ನು ಎದುರುನಿಂತು ನೋಡುತ್ತಿದ್ದ ಶತಾಧಿಪತಿ, “ಸತ್ಯವಾಗಿಯೂ ಈ ಮನುಷ್ಯ ದೇವರ ಪುತ್ರ!” ಎಂದನು.

ಮನಸ್ಸಿಗೊಂದಿಷ್ಟು : ಯೇಸುಕ್ರಿಸ್ತರು ಜೆರುಸಲೇಮನ್ನು ಪ್ರವೇಶಿಸಿದ ಘಟನೆ ಮೈನವಿರೇಳಿಸುವಂಥದ್ದು. 
ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನ ಯೇಸುವಿಗೆ ಕೊಟ್ಟ ಸ್ವಾಗತ ಐತಿಹಾಸಿಕ. ಯೇಸು ಬದುಕಿದ್ದ ಸುಮಾರು 160 ವರ್ಷಗಳ ಹಿಂದೆ ತಮ್ಮ ವೈರಿಗಳನ್ನು ಬಗ್ಗು ಬಡಿದ ಸೈಮನ್ ಮೆಕಾಭಿಯಸ್ ಎಂಬ ಸೈನ್ಯಾಧಿಕಾರಿಗೆ ಇದೇ ರೀತಿಯಸ್ವಾಗತವನ್ನು ಜನ ಜೆರುಸಲೇಮಿನಲ್ಲಿ ಕೊಟ್ಟಿದ್ದರು. ಯೇಸು ಸಹಾ ತಮ್ಮನ್ನು ಕಷ್ಟಗಳಿಂದ ಬಿಡಿಸುವ ಅದೇ 
ರೀತಿಯ ಕ್ರಾಂತಿಕಾರಿ ರಾಜ ಎಂಬ ಬಲವಾದ ನಂಬಿಕೆಯಿಂದಲೇ, ಒಬ್ಬ ರಾಜನಿಗೆ ಕೊಡುವ ಸ್ವಾಗತವನ್ನು 
ಗೌರವವನ್ನು ಯೇಸುವಿಗೆ ನೀಡುತ್ತಾರೆ.

ಆದರೆ ಯೇಸುವಿನ ಆಶಯವೇ ಬೇರೆಯಾಗಿತ್ತು ಯೇಸು ಒಂದು ಕತ್ತೆಯ ಮೇಲೆ ಶಾಂತಿದೂತನಾಗಿ ಪ್ರವೇಶಿಸುತ್ತಾರೆ. ಅಂದಿನ ಸಮಾಜದಲ್ಲಿ ಕತ್ತೆಗೆ ಮಹತ್ವದ ಸ್ಥಾನವಿತ್ತು. ಯುದ್ಧಕ್ಕೆ ಹೊರಟ ರಾಜ ಕುದುರೆಯ ಮೇಲೂ, ಶಾಂತಿಯನ್ನು ಸಾರುವ ರಾಜ ಕತ್ತೆಯ ಮೇಲೆ ಕೂತು ಸಾಗುವ ಪದ್ಧತಿಯಿತ್ತು. ಜನ ಅಂದು ಸಂಭ್ರಮಿಸಿದರೂ, ಕೆಲವೇ ದಿನಗಳ ಅಂತರದಲ್ಲಿ ಯೇಸು ನಿಸ್ಸಹಾಯಕರಾಗಿ ಪಿಲಾತನ ಎದುರು ನಿಂತಿರುವುದನ್ನು ಕಂಡು ಅವರ ನಿರೀಕ್ಷೆಗೆ ಪೆಟ್ಟು ಬಿತ್ತು. ಇಂದು ಗರಿಗಳನ್ನು ಹಿಡಿದು ಸ್ತುತಿಗೀತೆ ಹಾಡುತ್ತಿರುವ ನಾವು ಯೇಸುವಿನಿಂದ ಏನನ್ನು ನಿರೀಕ್ಷಿಸುತ್ತಿದ್ದೇವೆ?

ಹೊಸಾನ್ನ  ಎಂಬುದರ ಮೂಲ ಅರ್ಥ ’ರಕ್ಷಿಸು’  ಎಂದು ಪಂಡಿತರ ಅಭಿಪ್ರಾಯ. ರೋಗದ ಭಯದ ಮೇಲೆ ಮನೆಯಲ್ಲಿರುವ  ಸಂದರ್ಭದಲ್ಲಿ ಹೊಸಾನ್ನದ ’ರಕ್ಷಿಸು’ ಎಂಬ ಮೊತೆ ನಮ್ಮದಾಗಲಿದೇವಾಲಯಕ್ಕೆ ಹೋಗಲು ಸಾಧ್ಯವಾಗಿಲ್ಲದಿರಿವುದರಿಂದ ನಮ್ಮ ಮನೆಗೇ ಮನಕ್ಕೆ ಯೇಸುವನ್ನು ಸಂಭ್ರಮದಿಂದ ಸ್ವಾಗತಿಸೋಣ.

ಪ್ರಶ್ನೆ :  ರಕ್ಷಿಸು ಎಂಬ ನಮ್ಮ ಮೊರೆ ಯಾವುದೆಲ್ಲದರಿಂದ?

ಪ್ರಭುವೇ,
ಜೆರುಸಲೇಮ್ ದ್ವಾರಕ್ಕೆ
ಬಂದಿರಿ ಗರಿ ಜಯಘೋಷಗಳ 
ನಡುವೆ ರಾಜನಂತೆ

ದಿನಗಳಂತರದಲ್ಲಿ ನಿಂತಿರಿ  
ಮೌನದಿ ಪಿಲಾತನ 
ಮುಂದೆ ಅಪರಾಧಿಯಂತೆ

ಹೊತ್ತಿರಿ ಶಿಲುಬೆಯನ್ನು  
ಕಲ್ವಾರಿಯೆಡೆಗೆ ದೀನನಂತೆ
ತೂಗಿ ಮಡಿದಿರಿ ಘೋರ
ನೋವಿನಿಂದ ಕಳ್ಳನಂತೆ

ನಾನಾದರೋ ಇರುವೆ
ಏನೂ ಅಗಿಲ್ಲದಂತೆ
ಬನ್ನಿರಿ ಈ ಮನದ ದ್ವಾರಕ್ಕೆ
ನನ್ನ ಪಶ್ಚಾತ್ತಾಪದ
ಗರಿಗಳ ನಡುವೆ
ನಿಮ್ಮೊಡನೆ ನಾನೂ 
ಬರುವೆ ಸಿಮೋನನಂತೆ

No comments:

Post a Comment