ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

03.04.21 - "ಅವರು ಇಲ್ಲಿಲ್ಲ; ಅವರೇ ಹೇಳಿದಂತೆ ಪುನರುತ್ಥಾನ ಹೊಂದಿದ್ದಾರೆ. ಬನ್ನಿ, ಅವರನ್ನಿಟ್ಟಿದ್ದ ಸ್ಥಳವನ್ನು ನೋಡಿ"

 ಮೊದಲನೇ ವಾಚನ: ಆದಿಕಾಂಡ 1:1-2:2 (1:1, 26-31)


ಆದಿಯಲ್ಲಿ ದೇವರು ಪರಲೋಕ - ಭೂಲೋಕವನ್ನು ಸೃಷ್ಟಿಮಾಡಿದರು. ಅದಾದನಂತರ ದೇವರು, “ನಮ್ಮಂತೆಯೇ ಇರುವ ಹಾಗು ನಮ್ಮನ್ನು ಹೋಲುವ, ಮನುಷ್ಯರನ್ನು ಉಂಟುಮಾಡೋಣ. ಅವರು ಸಮುದ್ರದಲ್ಲಿರುವ ವಿೂನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ದೊಡ್ಡ - ಚಿಕ್ಕ ಸಾಕುಪ್ರಾಣಿ ಹಾಗು ಕಾಡುಮೃಗಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳ ಮೇಲೆಯೂ ದೊರೆತನ ಮಾಡಲಿ,” ಎಂದರು. ಹೀಗೆ ದೇವರು: ಸೃಷ್ಟಿಸಿದರು ನರರನ್ನು ತಮ್ಮ ಹೋಲಿಕೆಯಲ್ಲಿ ಸೃಷ್ಟಿಸಿದರವರನ್ನು ದೇವಾನುರೂಪದಲ್ಲಿ ಸೃಷ್ಟಿಸಿದರವರನ್ನು ಸ್ತ್ರೀಪುರುಷರನ್ನಾಗಿ. ಅವರನ್ನು ದೇವರು ಆಶೀರ್ವದಿಸಿ, “ನೀವು ಅಭಿವೃದ್ಧಿಯಾಗಿ, ಅನೇಕ ಮಕ್ಕಳನ್ನು ಪಡೆಯಿರಿ; ಭೂಮಿಯಲ್ಲಿ ಹರಡಿಕೊಂಡು ಅದನ್ನು ವಶಪಡಿಸಿ ಕೊಳ್ಳಿರಿ; ಸಮುದ್ರದ ವಿೂನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲ ಪ್ರಾಣಿಗಳ ಮೇಲೆಯೂ ದೊರೆತನ ಮಾಡಿರಿ. ಇನ್ನೂ, ಭೂಮಿಯಲ್ಲಿರುವ ಎಲ್ಲ ತರದ ದವಸ ಧಾನ್ಯಗಳನ್ನೂ ಹಣ್ಣು ಹಂಪಲುಗಳನ್ನೂ ನಿಮಗೆ ಆಹಾರವಾಗಿ ಕೊಟ್ಟಿದ್ದೇನೆ. ಇದಲ್ಲದೆ, ಭೂಮಿಯ ಮೇಲೆ ತಿರುಗಾಡುವ ದೊಡ್ಡ - ಚಿಕ್ಕ ಮೃಗಗಳಿಗೂ ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೂ ನೆಲದಲ್ಲಿ ಹರಿದಾಡುವ ಕ್ರಿಮಿ ಕೀಟಗಳಿಗೂ ಹುಲ್ಲು ಸೊಪ್ಪುಗಳನ್ನು ಆಹಾರವಾಗಿ ಕೊಟ್ಟಿದ್ದೇನೆ,” ಎಂದು ಹೇಳಿದರು. ಹಾಗೆಯೇ ಆಯಿತು. ತಾವು ಸೃಷ್ಟಿಸಿದ ಎಲ್ಲವನ್ನು ದೇವರು ನೋಡಿದರು. ಅವೆಲ್ಲವೂ ಬಹಳ ಚೆನ್ನಾಗಿತ್ತು. ಹೀಗೆ ಬೈಗೂ ಬೆಳಗೂ ಆಗಿ ಆರನೆಯ ದಿನ ಆಯಿತು.

ಎರಡನೇ ವಾಚನ: ಆದಿಕಾಂಡ 22:1-1 8 (22:1-2, 9, 10-13, 15-18)


ಈ ಘಟನೆಗಳಾದ ಬಳಿಕ ದೇವರು ಅಬ್ರಹಾಮನನ್ನು ಪರೀಕ್ಷಿಸುವುದಕ್ಕೋಸ್ಕರ, “ಅಬ್ರಹಾಮನೇ,” ಎಂದು ಕರೆದರು. ಅವನು “ಇಗೋ, ಸಿದ್ಧನಿದ್ದೇನೆ” ಎಂದನು. ಆಗ ದೇವರು, “ನಿನಗೆ ಒಬ್ಬನೇ ಒಬ್ಬನೂ ಮುದ್ದು ಮಗನೂ ಆದ ಇಸಾಕನನ್ನು ಕರೆದುಕೊಂಡು ಮೊರೀಯ ಪ್ರಾಂತಕ್ಕೆ ಹೋಗು. ಅಲ್ಲಿ ನಾನು ತೋರಿಸುವ ಬೆಟ್ಟದ ಮೇಲೆ ಅವನನ್ನು ದಹನ ಬಲಿಯಾಗಿ ಅರ್ಪಿಸು” ಎಂದರು. ದೇವರು ಹೇಳಿದ ಸ್ಥಳಕ್ಕೆ ಬಂದು ಸೇರಿದಾಗ ಅಬ್ರಹಾಮನು ಅಲ್ಲಿ ಒಂದು ಬಲಿಪೀಠವನ್ನು ಕಟ್ಟಿದ. ಕಟ್ಟಿಗೆಯನ್ನು ಅದರ ಮೇಲೆ ಒಟ್ಟಿ, ಮಗ ಇಸಾಕನ ಕೈಕಾಲುಗಳನ್ನು ಬಿಗಿದು, ಕಟ್ಟಿಗೆಗಳ ಮೇಲೆ ಅವನನ್ನು ಕೆಡವಿದ. ಬಳಿಕ ಮಗನನ್ನು ವಧಿಸಲು ಕೈಚಾಚಿ ಕತ್ತಿಯನ್ನು ಎತ್ತಿದ. ಆದರೆ ಸರ್ವೇಶ್ವರನ ದೂತನು ಆಕಾಶದಿಂದ, “ಅಬ್ರಹಾಮನೇ, ಹೇ ಅಬ್ರಹಾಮನೇ” ಎಂದು ಕರೆದನು. ಅದಕ್ಕೆ ಅಬ್ರಹಾಮನು, “ಇಗೋ ಸಿದ್ಧನಿದ್ದೇನೆ” ಎಂದ. ದೂತನು ಅವನಿಗೆ, “ಹುಡುಗನ ಮೇಲೆ ಕೈಯೆತ್ತಬೇಡ; ಅವನಿಗೆ ಯಾವ ಹಾನಿಯನ್ನೂ ಮಾಡಬೇಡ; ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಬಲಿಕೊಡಲು ಹಿಂತೆಗೆಯಲಿಲ್ಲ; ಎಂತಲೇ, ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂದು ಈಗ ನನಗೆ ಚೆನ್ನಾಗಿ ಗೊತ್ತಾಯಿತು,” ಎಂದು ಹೇಳಿದನು. ಅಬ್ರಹಾಮನು ಕಣ್ಣೆತ್ತಿನೋಡಿದ. ತನ್ನ ಹಿಂದುಗಡೆ ಒಂದು ಟಗರು ಪೊದೆಯಲ್ಲಿ ಕೊಂಬುಗಳಿಂದ ಸಿಕ್ಕಿಕೊಂಡಿತ್ತು. ಅವನು ಹೋಗಿ ಅದನ್ನು ಹಿಡಿದು ತಂದು ತನ್ನ ಮಗನಿಗೆ ಬದಲಾಗಿ ಅದನ್ನು ದಹನಬಲಿಯನ್ನಾಗಿ ಅರ್ಪಿಸಿದ. “ಬೆಟ್ಟದ ಮೇಲೆ ಸರ್ವೇಶ್ವರಸ್ವಾಮಿಯೇ ಒದಗಿಸುತ್ತಾರೆ” ಎಂಬ ಹೇಳಿಕೆ ಇಂದಿಗೂ ರೂಢಿಯಲ್ಲಿದೆ. ಸರ್ವೇಶ್ವರಸ್ವಾಮಿಯ ದೂತನು ಆಕಾಶದಿಂದ ಮತ್ತೊಮ್ಮೆ ಅಬ್ರಹಾಮನನ್ನು ಕರೆದು, “ಸರ್ವೇಶ್ವರನ ವಾಕ್ಯವನ್ನು ಕೇಳು: ನೀನು ನಿನ್ನ ಒಬ್ಬನೇ ಮಗನನ್ನು ಬಲಿಕೊಡಲು ಹಿಂತೆಗೆಯದೆ ಹೋದುದರಿಂದ ನಾನು ನಿನ್ನನ್ನು ತಪ್ಪದೆ ಆಶೀರ್ವದಿಸುತ್ತೇನೆ; ನಿನ್ನ ಸಂತತಿಯನ್ನು ಹೆಚ್ಚಿಸಿಯೇ ಹೆಚ್ಚಿಸುತ್ತೇನೆ; ಅದನ್ನು ಆಕಾಶದ ನಕ್ಷತ್ರಗಳಂತೆಯೂ ಸಮುದ್ರ ತೀರದ ಮರಳಿನಂತೆಯೂ ಅಸಂಖ್ಯವಾಗಿ ಮಾಡುತ್ತೇನೆ. ಅವರು ಶತ್ರುಗಳ ಪಟ್ಟಣಗಳನ್ನು ಸ್ವಾಧೀನ ಪಡಿಸಿಕೊಳ್ಳುವರು. ನೀನು ನನ್ನ ಮಾತನ್ನು ಕೇಳಿದ್ದರಿಂದ ವಿಶ್ವದ ಎಲ್ಲ ರಾಷ್ಟ್ರಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವುದು ಎಂಬುದಾಗಿ ಸರ್ವೇಶ್ವರನೇ ಆಣೆಯಿಟ್ಟು ಹೇಳಿದ್ದಾರೆ,” ಎಂದನು.

ಮೂರನೇ ವಾಚನ: ವಿಮೋಚನಾಕಾಂಡ 14:15-15:1


ಆಗ ಸರ್ವೇಶ್ವರ: “ನೀನೇಕೆ ನನಗೆ ಮೊರೆಯಿಡುತ್ತಿರುವೆ? ಮುಂದಕ್ಕೆ ಹೊರಡಬೇಕೆಂದು ಇಸ್ರಯೇಲರಿಗೆ ಹೇಳು. ನೀನು ನಿನ್ನ ಕೋಲನ್ನು ಎತ್ತಿ ಸಮುದ್ರದ ಮೇಲೆ ಚಾಚಿ ಅದನ್ನು ವಿಭಾಗಿಸು; ಆಗ ಇಸ್ರಯೇಲರು ಸಮುದ್ರದ ಮಧ್ಯೆ ಒಣಗಿದ ನೆಲದ ಮೇಲೆ ನಡೆದುಹೋಗುವರು. ನಾನು ಈಜಿಪ್ಟಿನವರ ಹೃದಯಗಳನ್ನು ಕಠಿಣಪಡಿಸುವೆನು; ಎಂದೇ ಅವರು ಇವರ ಹಿಂದೆ ಸಮುದ್ರದೊಳಕ್ಕೆ ಹೋಗುವರು. ಆಗ ನಾನು ಫರೋಹನನ್ನು, ಅವನ ಸಮಸ್ತ ಸೈನ್ಯವನ್ನು, ರಥಗಳನ್ನು ಹಾಗು ರಾಹುತರನ್ನು ಸೋಲಿಸಿ ಪ್ರಖ್ಯಾತಿ ಹೊಂದಿದ ನಂತರ ನಾನೇ ಸರ್ವೇಶ್ವರ ಎಂಬುದನ್ನು ಈಜಿಪ್ಟಿನವರು ತಿಳಿದುಕೊಳ್ಳುವರು,” ಎಂದರು ಮೋಶೆಗೆ. ಇಸ್ರಯೇಲರ ದಂಡಿನ ಮುಂದೆ ಹೋಗುತ್ತಿದ್ದ ದೇವದೂತನು ಸ್ಥಳ ಬದಲಾಯಿಸಿ ಅವರ ಹಿಂದಕ್ಕೆ ಬಂದನು. ಅವರ ಮುಂಭಾಗದಲ್ಲಿದ್ದ ಮೇಘಸ್ತಂಭವು ಅಲ್ಲಿಂದ ಬಂದು ಅವರ ಹಿಂದೆ ನಿಂತುಕೊಂಡಿತು. ಆ ಮೇಘಸ್ತಂಭವು ಈಜಿಪ್ಟಿನವರ ಪಡೆಗೂ ಇಸ್ರಯೇಲರ ಪಡೆಗೂ ನಡುವೆ ಬಂದು ಈಜಿಪ್ಟಿನವರಿಗೆ ಕತ್ತಲೆಯನ್ನು ಉಂಟುಮಾಡಿತು; ಇಸ್ರಯೇಲರಿಗೆ ರಾತ್ರಿಯನ್ನು ಬೆಳಕಾಗಿಸಿತು. ಈ ಕಾರಣ ಆ ರಾತ್ರಿಯೆಲ್ಲಾ ಒಂದು ಪಡೆಯವರು ಇನ್ನೊಂದು ಪಡೆಯವರ ಬಳಿಗೆ ಬರಲಾಗಲಿಲ್ಲ. ಮೋಶೆ ಸಮುದ್ರದ ಮೇಲೆ ಕೈಚಾಚಿದಾಗ ಸರ್ವೇಶ್ವರಸ್ವಾಮಿ ಆ ರಾತ್ರಿಯೆಲ್ಲಾ ಪೂರ್ವದಿಕ್ಕಿನಿಂದ ಬಲವಾದ ಬಿರುಗಾಳಿ ಬೀಸುವಂತೆ ಮಾಡಿ ಸಮುದ್ರದ ನೀರನ್ನು ಒಂದುಕಡೆ ನೂಕಿ ಅದರ ತಳದಲ್ಲಿ ಒಣನೆಲವು ಕಾಣಿಸುವಂತೆ ಮಾಡಿದರು. ನೀರು ಇಬ್ಭಾಗವಾಯಿತು. ಇಸ್ರಯೇಲರು ಸಮುದ್ರದ ಮಧ್ಯದಲ್ಲಿ ಒಣನೆಲದಲ್ಲೇ ನಡೆದುಹೋದರು. ನೀರು ಅವರ ಎಡಗಡೆ ಬಲಗಡೆಗಳಲ್ಲಿ ಗೋಡೆಯಂತೆ ನಿಂತಿತು. ಈಜಿಪ್ಟಿನವರು, ಅಂದರೆ ಫರೋಹನ ಕುದುರೆಗಳು, ರಥಗಳು, ರಾಹುತರು ಇಸ್ರಯೇಲರನ್ನು ಬೆನ್ನಟ್ಟಿ ಬಂದು ಅವರ ಹಿಂದೆಯೇ ಸಮುದ್ರದೊಳಗೆ ಹೋದರು. ಬೆಳಗಿನ ಜಾವದಲ್ಲಿ ಸರ್ವೇಶ್ವರ ಆ ಅಗ್ನಿಸ್ತಂಭದಿಂದ ಈಜಿಪ್ಟಿನವರ ದಂಡಿನ ಕಡೆಗೆ ನೋಡಿ ಅದನ್ನು ಗಲಿಬಿಲಿ ಮಾಡಿದರು. ಸರ್ವೇಶ್ವರ ಅವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟದರಿಂದ ಈಜಿಪ್ಟಿನವರು ಬಹುಕಷ್ಟದಿಂದ ಅವುಗಳನ್ನು ಸಾಗಿಸಿಕೊಂಡು ಹೋದರು. ಆಗ ಈಜಿಪ್ಟಿನವರು, “ನಾವು ಇಸ್ರಯೇಲರ ಮುಂದೆ ಗೆಲ್ಲಲಾರೆವು, ಓಡಿಹೋಗೋಣ ಬನ್ನಿ; ಸರ್ವೇಶ್ವರನು ಅವರ ಪರವಾಗಿ, ನಮಗೆ ವಿರುದ್ಧವಾಗಿ ಯುದ್ಧ ಮಾಡುತ್ತಿದ್ದಾನೆ,” ಎಂದುಕೊಂಡರು. ಅಷ್ಟರಲ್ಲಿ ಸರ್ವೇಶ್ವರ, “ಸಮುದ್ರದ ಮೇಲೆ ನಿನ್ನ ಕೈಚಾಚು; ಆಗ ಅದರ ನೀರು ಮೊದಲಿನಂತೆ ಬಂದು ಈಜಿಪ್ಟಿನವರನ್ನೂ ಅವರ ರಥಗಳನ್ನೂ ರಾಹುತರನ್ನೂ ಮುಳುಗಿಸುವುದು,” ಎಂದು ಮೋಶೆಗೆ ಹೇಳಿದರು. ಅಂತೆಯೇ ಮೋಶೆ ಸಮುದ್ರದ ಮೇಲೆ ಕೈಚಾಚಿದನು. ಬೆಳಗಾಗುವಾಗಲೇ ಸಮುದ್ರದ ನೀರು ಮೊದಲಿದ್ದಂತೆಯೇ ತುಂಬಿಕೊಂಡಿತು. ಈಜಿಪ್ಟಿನವರು ಓಡಿ ಹೋಗತ್ತಾ ಅದಕ್ಕೆ ಎದುರಾಗಿಯೇ ಬಂದರು. ಹೀಗೆ ಸರ್ವೇಶ್ವರ ಈಜಿಪ್ಟಿನವರನ್ನು ಸಮುದ್ರದೊಳಗೆ ಕೆಡವಿಬಿಟ್ಟರು. ನೀರು ಮೊದಲಿನಂತೆ ಬಂದು ಆ ರಥಗಳನ್ನು, ರಾಹುತರನ್ನು ಹಾಗು ಅವರ ಹಿಂದೆ ಸಮುದ್ರದೊಳಗೆ ಹೋಗಿದ್ದ ಫರೋಹನ ಸೈನ್ಯದವರೆಲ್ಲರನ್ನು ಮುಳುಗಿಸಿತು. ಅವರಲ್ಲಿ ಒಬ್ಬರಾದರೂ ಉಳಿಯಲಿಲ್ಲ. ಇಸ್ರಯೇಲರಾದರೋ, ಸಮುದ್ರದೊಳಗೆ ಒಣ ನೆಲದಲ್ಲೇ ನಡೆದುಹೋದರು. ನೀರು ಅವರ ಎಡಬಲಗಳಲ್ಲಿ ಗೋಡೆಯಂತೆ ನಿಂತಿತ್ತು. ಆ ದಿನ ಸರ್ವೇಶ್ವರಸ್ವಾಮಿ ಇಸ್ರಯೇಲರನ್ನು ಈಜಿಪ್ಟಿನವರ ಕೈಯಿಂದ ರಕ್ಷಿಸಿದರು. ಈಜಿಪ್ಟಿನವರು ಸತ್ತು ಸಮುದ್ರ ತೀರದಲ್ಲಿ ಬಿದ್ದಿರುವುದನ್ನು ಇಸ್ರಯೇಲರು ಕಂಡರು. ಸರ್ವೇಶ್ವರ ಈಜಿಪ್ಟಿನವರಲ್ಲಿ ಮಾಡಿದ ಈ ಪರಾಕ್ರಮ ಕಾರ್ಯವನ್ನು ಇಸ್ರಯೇಲರು ನೋಡಿ ಸರ್ವೇಶ್ವರನಿಗೆ ಭಯಪಟ್ಟು ಅವರಲ್ಲೂ ಅವರ ದಾಸ ಮೋಶೆಯಲ್ಲೂ ನಂಬಿಕೆಯಿಟ್ಟರು. ಆಗ ಮೋಶೆ ಮತ್ತು ಇಸ್ರಯೇಲರು ಸರ್ವೇಶ್ವರಸ್ವಾಮಿಗೆ ಸ್ತೋತ್ರವಾಗಿ ಈ ಕೀರ್ತನೆಯನ್ನು ಹಾಡಿದರು: “ಮಾಡೋಣ ಸರ್ವೇಶ್ವರನ ಗುಣಗಾನ ಮಹೋನ್ನತ ಆತ ಗಳಿಸಿದ ವಿಜಯ! ಕುದುರೆಗಳನು, ರಾಹುತರನು ಕಡಲಲ್ಲಿ ಕೆಡವಿ ನಾಶಮಾಡಿಹನು.

ನಾಲ್ಕನೇ ವಾಚನ: ಯೆಶಾಯ 54:5-14

ನಿನ್ನ ಸೃಷ್ಟಿಕರ್ತನೆ ನಿನಗೆ ಪತಿಯು ‘ಸೇನಾಧೀಶ್ವರನಾದ ಸರ್ವೇಶ್ವರ’ ಆತನ ಹೆಸರು. ಇಸ್ರಯೇಲಿನ ಪರಮಪಾವನನೆ ನಿನ್ನ ಉದ್ಧಾರಕನು. ‘ಸರ್ವಲೋಕದ ದೇವ’ ಆತನ ನಾಮಧೇಯ. ಗಂಡಬಿಟ್ಟು ಮನನೊಂದಿರುವ ಪತ್ನಿ ನೀನು ಹೌದು, ತ್ಯಜಿಸಲಾದ ಯೌವನದ ಪತ್ನಿ ನೀನು. ಸರ್ವೇಶ್ವರ ಕನಿಕರಿಸಿ ಕರೆದಿಹನು ನಿನ್ನನು. ಆ ನಿನ್ನ ದೇವರ ನುಡಿಯಿದು: "ಬಿಟ್ಟಿದ್ದೆನು ನಿನ್ನನು ಕ್ಷಣಮಾತ್ರ ಪ್ರೀತಿಯಿಂದ ಸೇರಿಸಿಕೊಳ್ಳುವೆ ಹತ್ತಿರ. ತಟ್ಟನೆ ಉಕ್ಕು ಹರಿಯುವ ಕೋಪದಿಂದ ಕ್ಷಣಮಾತ್ರ ಮುಖಮರೆಸಿಕೊಂಡೆ ನಿನ್ನಿಂದ ಕರುಣಿಸುವೆನು ನಿನ್ನನು ಶಾಶ್ವತ ಕೃಪೆಯಿಂದ.” ಇಂತೆನ್ನುತಿಹನು ನಿನ್ನ ಉದ್ಧಾರಕ ಸರ್ವೇಶ್ವರ. “ಶಪಥಮಾಡಿದೆ ನಾನು ನೋಹನ ದಿನದಂದು: ಜಲಪ್ರಳಯವು ಭೂಮಿಯನು ಇನ್ನು ಮುಳುಗಿಸದೆಂದು. ಶಪಥಮಾಡುವೆ ಈಗ ‘ಕೋಪಮಾಡೆನು’ ಎಂದು ‘ಇನ್ನು ನಿನ್ನನು ಗದರಿಸೆನು’ ಎಂದು. ಬಿರುಕುಬಿಟ್ಟಾವು ಬೆಟ್ಟಗಳು, ಕದಲಿಯಾವು ಗುಡ್ಡಗಳು, ನನ್ನ ಅಚಲ ಪ್ರೀತಿಯಾದರೊ ಬಿಟ್ಟುಹೋಗದು ನಿನ್ನನು. ಶಾಂತಿಸಮಾಧಾನದ ನನ್ನೀ ಒಪ್ಪಂದವು ಕದಲದು. ನಿನ್ನ ಮೇಲೆ ಕರುಣೆಯಿಟ್ಟಿರುವ ಸರ್ವೇಶ್ವರನ ನುಡಿಯಿದು.” ಜೆರುಸಲೇಮಿನ ಭವ್ಯ ಭವಿಷ್ಯ “ಶೋಷಣೆಗೆ, ಬಿರುಗಾಳಿಗೆ, ನಿರ್ಗತಿಗೆ ಗುರಿಯಾದವಳೇ, ನಿರ್ಮಿಸುವೆ ನಿನ್ನನು ವಜ್ರವೈಡೂರ್ಯಗಳಿಂದ ಅಸ್ತಿವಾರ ಹಾಕುವೆ ನಿನಗೆ ನೀಲಮಣಿ ಗಳಿಂದ. ನಿರ್ಮಿಸುವೆ ನಿನ್ನ ಗೋಪುರಗಳನು ಮಾಣಿಕ್ಯಗಳಿಂದ ನಿನ್ನ ಪೌಳಿಗೋಡೆಯನು ಅನಘ್ರ್ಯ ರತ್ನಗಳಿಂದ. ನಿನ್ನ ಮಕ್ಕಳು ಶಿಕ್ಷಿತರಾಗುವರು ನನ್ನಿಂದ ಸಮೃದ್ಧವಾಗಿ ಬಾಳುವರು ಅವರು ಸುಖಶಾಂತಿಯಿಂದ. ನ್ಯಾಯನೀತಿ ನಿನಗಾಧಾರ; ದೂರವಿರುವುದು ಹಿಂಸಾಚಾರ. ಭಯಭೀತಿಗೆ ದೂರ, ಅವು ಬಾರವು ನಿನ್ನ ಹತ್ತಿರ.

ಐದನೇ ವಾಚನ: ಯೆಶಾಯ 55:1-11

ಎಲೈ ಬಾಯಾರಿದ ಜನರೇ, ನೀರಿನ ಬಳಿಗೆ ಬನ್ನಿ ಹಣವಿಲ್ಲದವರೇ ಬನ್ನಿ, ಅನ್ನವನ್ನು ತೆಗೆದು ಕೊಂಡು ತಿನ್ನಿ. ಹಾಲನು, ದ್ರಾಕ್ಷಾರಸವನು ಕ್ರಯವಿಲ್ಲದೆ ಕೊಂಡುಕೊಳ್ಳಿ. ಆಹಾರವಲ್ಲದ್ದಕ್ಕೆ ಹಣವನು ವ್ಯಯಮಾಡುವುದೇಕೆ? ತೃಪ್ತಿ ತರದ ಪದಾರ್ಥಕ್ಕೆ ನಿಮ್ಮ ದುಡಿತದ ವೆಚ್ಚವೇಕೆ? ಕಿವಿಗೊಡಿ ನನಗೆ, ಒಳಿತನ್ನು ತಿಂದು ಆನಂದಪಡಿ ಆ ಮೃಷ್ಟಾನ್ನವನುಂಡು. ಕಿವಿಯನ್ನಿತ್ತ ತಿರುಗಿಸಿ ಬನ್ನಿ ನನ್ನ ಬಳಿಗೆ, ಬದುಕಿಬಾಳುವಿರಿ ನೀವು ಕಿವಿಗೊಟ್ಟರೆನಗೆ. ದಾವೀದನಿಗೆ ವಾಗ್ದಾನವಿತ್ತ ವರವ ಈವೆ ನಿಮಗೆ ಮಾಡಿಕೊಳ್ಳುವೆ-ಚಿರವಾದ ಒಡಂಬಡಿಕೆಯನು ನಿಮ್ಮೊಂದಿಗೆ. ನೇಮಿಸಿರುವೆ ಆತನನು ಜನಗಳಿಗೆ ಸಾಕ್ಷಿಯನ್ನಾಗಿ ಜನಾಂಗಗಳಿಗೆ ನಾಯಕನನ್ನಾಗಿ, ಅಧಿಪತಿಯನ್ನಾಗಿ. ಎಲೈ ಇಸ್ರಯೇಲೇ, ನಿನ್ನ ದೇವರಾದ ಸರ್ವೇಶ್ವರನಿಗೋಸ್ಕರ ನಿನ್ನ ಮಹಿಮೆಪಡಿಸಿದ ಇಸ್ರಯೇಲಿನ ಪರಮಪಾವನನಿಗೋಸ್ಕರ ನೀ ಕರೆಗೊಡುವೆ ನಿನಗೆ ಗೊತ್ತಿಲ್ಲದ ಜನಾಂಗಕೆ. ಆಗ ಅಪರಿಚಿತರೂ ಓಡಿಬರುವರು ನಿನ್ನಾಶ್ರಯಕೆ. ಅರಸಿರಿ ಸರ್ವೇಶ್ವರನನು ಆತ ದೊರಕುವ ವೇಳೆಯಲಿ ವಿನಂತಿಸಿರಿ ಆತನಿರುವಾಗಲೆ ಸಮೀಪದಲಿ. ಬಿಟ್ಟುಬಿಡಲಿ ದುಷ್ಟನು ತನ್ನ ದುರ್ಮಾರ್ಗವನು ತೊರೆದುಬಿಡಲಿ ದುರುಳನು ದುರಾಲೋಚನೆಗಳನು. ಹಿಂದಿರುಗಿ ಬರಲಿ ಸರ್ವೇಶ್ವರನ ಬಳಿಗೆ ಕರುಣೆ ತೋರುವನು ಆತನು ಅವನಿಗೆ.  ಪಡೆಯಲಿ ಅವನು ನಮ್ಮ ದೇವರಿಂದ ಕ್ಷಮಿಸುವನಾತನು ಮಹಾಕೃಪೆಯಿಂದ. “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಂಥಲ್ಲ ನನ್ನ ಮಾರ್ಗಗಳು ನಿಮ್ಮ ಮಾರ್ಗಗಳಂಥಲ್ಲ” ಎಂದಿಹನು ಸರ್ವೇಶ್ವರ. “ಎಷ್ಟೋ ಉನ್ನತ ಆಕಾಶವು ಭೂಮಿಯಿಂದ ಅಷ್ಟೂ ಉನ್ನತ ನನ್ನ ಮಾರ್ಗ ನಿಮ್ಮ ಮಾರ್ಗಗಳಿಗಿಂತ, ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಿಗಿಂತ. ಮಳೆಯೂ ಹಿಮವೂ ಆಕಾಶಮಂಡಲದಿಂದಿಳಿದು ಬಂದು ತೋಯಿಸಿ, ಹಸಿರುಗೊಳಿಸಿ, ಹುಲುಸು ಮಾಡುತ್ತವೆ ಭೂಮಿಯನು. ಬಿತ್ತುವವನಿಗೆ ಬೀಜ, ಉಣ್ಣುವವನಿಗೆ ಆಹಾರ ಒದಗಿಸದೆ, ಹಿಂದಿರುಗಿ ಬರುವುದಿಲ್ಲ ಅವು ಸುಮ್ಮನೆ ಬಂದಲ್ಲಿಗೆ. ಅಂತೆಯೇ, ನನ್ನ ಬಾಯಿಂದ ಹೊರಡುವ ಮಾತು ನನ್ನ ಇಷ್ಟಾರ್ಥವನು ನೆರವೇರಿಸಿದ ಹೊರತು, ನನ್ನ ಉದ್ದೇಶವನು ಕೈಗೂಡಿಸಿದ ಹೊರತು, ನನ್ನ ಬಳಿಗೆ ವ್ಯರ್ಥವಾಗಿ ಹಿಂದಿರುಗದು.

ಆರನೇ ವಾಚನ: ಬಾರೂಕ 3:9-15, 32-4:4

ಇಸ್ರಯೇಲೇ, ಜೀವದಾಯಕ ಆಜ್ಞೆಗಳನ್ನು ಕೇಳು, ಸುಜ್ಞಾನವನ್ನು ಕಲಿತುಕೊ ಕಿವಿಗೊಟ್ಟು. ಇಸ್ರಯೇಲೇ, ಇದು ಸಂಭವಿಸಿದ್ದು ಹೇಗೆ? ನಿನ್ನ ಶತ್ರುಗಳ ದೇಶದೊಳಕ್ಕೆ ನೀನು ಬಂದುದು ಹೇಗೆ? ಪರದೇಶದಲ್ಲಿ ನೀನು ಮುಪ್ಪಾದುದು ಹೇಗೆ? ಸತ್ತವರಂತೆ ನೀನು ಹೊಲೆಯಾದುದು ಹೇಗೆ? ಪಾತಾಳಲೋಕ ಸೇರಿದವರಂತೆ ನೀನು ಪರಿಗಣಿತನಾದುದು ಹೇಗೆ? ಸುಜ್ಞಾನದ ಬುಗ್ಗೆಯನ್ನೇ ನೀ ಮರೆತು ಬಿಟ್ಟಿರುವೆ. ದೇವರ ಮಾರ್ಗದಲ್ಲಿ ನೀನು ನಡೆದಿದ್ದರೆ ನಿರಂತರ ಶಾಂತಿಸಮಾಧಾನದಿಂದ ವಾಸಿಸುತ್ತಿದ್ದೆ. ಸುಜ್ಞಾನವೆಲ್ಲಿದೆ, ಶಕ್ತಿಯೆಲ್ಲಿದೆ, ವಿವೇಕವೆಲ್ಲಿದೆ ಎಂಬುದನ್ನು ಕಲಿ; ಆಗ ಕಂಡುಕೊಳ್ಳುವೆ ದೀರ್ಘಾಯುಸ್ಸು ಮತ್ತು ಜೀವ ಎಲ್ಲಿವೆಯೆಂದು ದಾರಿತೋರುವ ಬೆಳಕು ಮತ್ತು ಶಾಂತಿ ಎಲ್ಲಿವೆಯೆಂದು. ಸುಜ್ಞಾನದ ನೆಲೆಯನ್ನು ಕಂಡು ಹಿಡಿದಿರುವವರಾರು? ಅದರ ನಿಧಿಗೃಹವನ್ನು ಪ್ರವೇಶಿಸಿರುವವರಾರು? ಆದರೆ ಸುಜ್ಞಾನವನ್ನು ಬಲ್ಲ ಸರ್ವಜ್ಞನೊಬ್ಬನಿದ್ದಾನೆ. ಆತ ತನ್ನ ಸ್ವಂತ ಬುದ್ಧಿವಿವೇಕದಿಂದ ಅದನ್ನು ತಿಳಿದಿದ್ದಾನೆ. ಜಗತ್ತನ್ನು ಚಿರಕಾಲ ಸ್ಥಿರವಾಗಿರಿಸಿದವನು ಆತನೆ ನಾಲ್ಕು ಕಾಲಿನ ಪಶುಪ್ರಾಣಿಗಳಿಂದ ಅದನ್ನು ತುಂಬಿಸಿದವನು ಆತನೆ. ಆತ ಬೆಳಕನ್ನು ಕಳುಹಿಸುತ್ತಾನೆ – ಅದು ಬರುತ್ತದೆ ಹಿಂದಕ್ಕೆ ಕರೆದಾಗ ಭಯದಿಂದ ಹಿಂದಿರುಗುತ್ತದೆ. ತಾರೆಗಳು ನಿಯಮಿತ ಸ್ಥಳದಲ್ಲಿ ಸಂತಸದಿಂದ ಮಿನುಗುತ್ತವೆ ಆತ ಕರೆದಾಗ “ಇಗೋ ಇಲ್ಲಿದ್ದೇವೆ,” ಎಂದು ಹೇಳುತ್ತವೆ, ತಮ್ಮನ್ನು ಸೃಷ್ಟಿಸಿದಾತನ ಆನಂದಕ್ಕಾಗಿ ಅವು ಹೊಳೆಯುತ್ತವೆ. ಆತನೇ ನಮ್ಮ ದೇವರು; ಯಾರೂ ಇಲ್ಲ ಆತನಿಗೆ ಸಮಾನರು. ಜ್ಞಾನದ ಇಡೀ ಮಾರ್ಗವನ್ನು ಅರಿತಿದ್ದಾರೆ ಆ ದೇವರು. ತಮ್ಮ ದಾಸ ಯಕೋಬನಿಗೂ ತಮ್ಮ ಪ್ರಿಯ ಇಸ್ರಯೇಲರಿಗೂಹಿಂದಿರುಗುತ್ತದೆ. ಅನಂತರವೇ ಸುಜ್ಞಾನ ಧರೆಯ ಮೇಲೆ ಕಾಣಿಸಿಕೊಂಡಿತು, ಮಾನವರ ಮಧ್ಯೆ ಅದು ವಾಸಮಾಡಿತು. ಜ್ಞಾನವೇ ದೈವಾಜ್ಞೆಗಳ ಗ್ರಂಥ ಸದಾಕಾಲಕ್ಕೂ ಸ್ಥಿರವಾದ ಧರ್ಮಶಾಸ್ತ್ರ. ಪಡೆಯುವರು ಸಜೀವ ಅದನ್ನು ಪ್ರಾಮಾಣಿಕವಾಗಿ ಪಾಲಿಸುವವರು; ಅದನ್ನು ಬಿಟ್ಟುಬಿಡುವವರು ಸಾಯುವರು. ಇಸ್ರಯೇಲೇ, ಹಿಂದಿರುಗಿ ಬಾ, ಸುಜ್ಞಾನವನ್ನು ಸ್ವೀಕರಿಸು, ಅದರ ಪ್ರಕಾಶದಲ್ಲಿ ಬೆಳಕಿನತ್ತ ಪ್ರವರ್ಧಿಸು. ನಿನ್ನ ಗೌರವವನ್ನು ಇನ್ನೊಬ್ಬನಿಗೆ ಸಲ್ಲಗೊಡಬೇಡ ನಿನ್ನ ಸೌಲಭ್ಯಗಳನ್ನು ಅನ್ಯಜನರಿಗೆ ಬಿಟ್ಟುಬಿಡಬೇಡ. ಇಸ್ರಯೇಲೇ, ನಾವು ಧನ್ಯರು ! ದೇವರಿಗೆ ಪ್ರಿಯವಾದುದು ನಮಗೆ ಬಯಲಾಗಿರುವುದು. ಜೆರುಸಲೇಮಿನ ವಿಲಾಪ ಹಾಗು ಸಾಂತ್ವನ

ಏಳನೇ ವಾಚನ: ಯೆಜೆಕಿಯೇಲ 36:16-17, 18-26

ಸರ್ವೇಶ್ವರ ಈ ವಾಣಿಯನ್ನು ನನಗೆ ದಯಪಾಲಿಸಿದರು “ನರಪುತ್ರನೇ, ಇಸ್ರಯೇಲ್ ವಂಶದವರು ಸ್ವದೇಶದಲ್ಲಿ ವಾಸಿಸುತ್ತಿದ್ದಾಗ ತಮ್ಮ ದುರ್ಮಾರ್ಗ ದುರಾಚಾರಗಳಿಂದ ಅದನ್ನು ಅಶುದ್ಧಗೊಳಿಸಿದರು. ಅವರ ನಡತೆ ಮುಟ್ಟಿನ ಹೊಲಸಿನಂತೆ ನನಗೆ ಅಸಹ್ಯವಾಗಿತ್ತು. ಅವರು ನಾಡಿನ ಮೇಲೆ ರಕ್ತವನ್ನು ಸುರಿಸಿ, ತಮ್ಮ ವಿಗ್ರಹಗಳಿಂದ ಅದನ್ನು ಹೊಲೆಗೈದಕಾರಣ ನಾನು ಅವರ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿವೆನು; ಜನಾಂಗಗಳೊಳಗೆ ಅವರನ್ನು ಚದರಿಸುವೆನು; ದೇಶಗಳಿಗೆ ತೂರಿಬಿಟ್ಟು, ಅವರ ದುರ್ಮಾರ್ಗ ದುರಾಚಾರಗಳಿಗೆ ಸರಿಯಾಗಿ ದಂಡಿಸಿದೆನು. ಅವರು ಆ ಜನಾಂಗಗಳೊಳಗೆ ಸೇರಿಕೊಂಡ ಮೇಲೆ, ‘ಓಹೋ, ಇವರು ಸರ್ವೇಶ್ವರನ ಪ್ರಜೆಗಳು, ಆತನ ದೇಶದಿಂದ ಭ್ರಷ್ಟರಾಗಿ ಬಂದಿದ್ದಾರೆ’ ಎಂದೆನಿಸಿಕೊಂಡರು. ನನ್ನ ಪರಿಶುದ್ಧನಾಮಕ್ಕೆ ಅಪಕೀರ್ತಿಯನ್ನು ತಂದರು. ಇಸ್ರಯೇಲ್ ವಂಶದವರು ಜನಾಂಗಗಳೊಳಗೆ ಸೇರಿ, ಅಲ್ಲಿ ಅಪಕೀರ್ತಿಗೆ ಗುರಿಮಾಡಿದ ನನ್ನ ಪರಿಶುದ್ಧ ನಾಮವನ್ನು ಕುರಿತು, ನಾನು ಮರುಗಿದೆನು. “ಆದಕಾರಣ - ನೀನು ಇಸ್ರಯೇಲ್ ವಂಶದವರಿಗೆ ಹೀಗೆ ನುಡಿ - ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ – ಇಸ್ರಯೇಲ್ ವಂಶದವರೇ, ನಿಮ್ಮ ನಿಮಿತ್ತವಲ್ಲ, ನೀವು ಜನಾಂಗಗಳೊಳಗೆ ಸೇರಿ ಅಪಕೀರ್ತಿಗೆ ಗುರಿಮಾಡಿದ ನನ್ನ ಪರಿಶುದ್ಧನಾಮದ ನಿಮಿತ್ತವೆ, ಈ ರಕ್ಷಣಾ ಕಾರ್ಯವನ್ನು ಮಾಡುತ್ತೇನೆ. ಜನಾಂಗಗಳಲ್ಲಿ ಅಪಕೀರ್ತಿಗೆ ಗುರಿಯಾದ, ಅಂದರೆ ನೀವು ಜನಾಂಗಗಳ ನಡುವೆ ಅಪಕೀರ್ತಿಗೆ ಗುರಿಮಾಡಿದ ನನ್ನ ಶ್ರೀನಾಮದ ಗೌರವವನ್ನು ನಾನು ಕಾಪಾಡಿಕೊಳ್ಳುವೆನು. ಹೀಗೆ ನಾನು ಅವುಗಳ ಕಣ್ಣೆದುರಿಗೆ, ನಿಮ್ಮ ರಕ್ಷಣೆಯ ಮೂಲಕ ನನ್ನ ಗೌರವವನ್ನು ಕಾಪಾಡಿಕೊಳ್ಳುವೆನು. ಆಗ ನಾನೇ ಸರ್ವೇಶ್ವರ ಎಂದು ಅವುಗಳಿಗೆ ನಿಶ್ಚಿತವಾಗುವುದು. ಇದು ಸರ್ವೇಶ್ವರನಾದ ದೇವರ ನುಡಿ. ನಾನು ನಿಮ್ಮನ್ನು ಜನಾಂಗಗಳಿಂದ ಬಿಡಿಸಿ, ಸಕಲ ದೇಶಗಳಿಂದ ಒಟ್ಟುಗೂಡಿಸಿ, ಸ್ವದೇಶಕ್ಕೆ ಬರಮಾಡುವೆನು. ನಾನು ನಿಮ್ಮ ಮೇಲೆ ನಿರ್ಮಲೋದಕವನ್ನು ಪ್ರೋಕ್ಷಿಸುವೆನು, ನೀವು ನಿರ್ಮಲರಾಗುವಿರಿ; ನಿಮ್ಮ ಸಮಸ್ತ ವಿಗ್ರಹಗಳಿಂದಲೂ ಸಕಲ ವಿಧವಾದ ಹೊಲಸಿನಿಂದಲೂ ನಿಮ್ಮನ್ನು ಶುದ್ಧಿಮಾಡುವೆನು. ನಾನು ನಿಮಗೆ ಹೊಸ ಮನಸ್ಸನ್ನು ಕೊಟ್ಟು, ನಿಮ್ಮಲ್ಲಿ ನನ್ನ ಸ್ವಭಾವವನ್ನು ಹುಟ್ಟಿಸುವೆನು. ಕಲ್ಲಾದ ಹೃದಯವನ್ನು ನಿಮ್ಮೊಳಗಿಂದ ತೆಗೆದು, ಮೃದುವಾದ ಹೃದಯವನ್ನು ನಿಮಗೆ ದಯಪಾಲಿಸುವೆನು. ನನ್ನ ಆತ್ಮವನ್ನು ನಿಮ್ಮಲ್ಲಿ ನೆಲೆಸಿರುವಂತೆ ಅನುಗ್ರಹಿಸಿ, ನೀವು ನನ್ನ ನಿಯಮಗಳನ್ನು ಅನುಸರಿಸುವ ಹಾಗೆ ಮಾಡುವೆನು. ನೀವು ನನ್ನ ವಿಧಿಗಳನ್ನು ಕೈಗೊಂಡು ಆಚರಿಸುವಿರಿ. ನಾನು ನಿಮ್ಮ ಪಿತೃಗಳಿಗೆ ಅನುಗ್ರಹಿಸಿದ ನಾಡಿನಲ್ಲಿ ನೀವು ವಾಸಿಸುವಿರಿ. ನೀವು ನನಗೆ ಪ್ರಜೆಯಾಗಿರುವಿರಿ, ನಾನು ನಿಮಗೆ ದೇವರಾಗಿರುವೆನು.

ಮೊದಲನೇ ವಾಚನ: ರೋಮನರಿಗೆ 6:3-11

ಕ್ರಿಸ್ತಯೇಸುವಿನವರಾಗಲು ದೀಕ್ಷಾಸ್ನಾನ ಹೊಂದಿರುವ ನಾವು, ಅವರ ಮರಣದಲ್ಲಿ ಪಾಲುಗಾರರಾಗಲು ದೀಕ್ಷಾಸ್ನಾನ ಪಡೆದೆವು ಎಂಬುದು ನಿಮಗೆ ತಿಳಿಯದೆ? ಹೀಗಿರಲಾಗಿ, ದೀಕ್ಷಾಸ್ನಾನ ಮಾಡಿಸಿಕೊಂಡಾಗ ಅವರ ಮರಣದಲ್ಲಿ ಪಾಲುಗಾರರಾದ ನಮಗೆ ಅವರೊಡನೆ ಸಮಾಧಿಯೂ ಆಯಿತು. ಆದುದರಿಂದ ತಂದೆಯ ಮಹಿಮಾಶಕ್ತಿಯಿಂದ ಕ್ರಿಸ್ತಯೇಸು ಮರಣದಿಂದ ಪುನರುತ್ಥಾನ ಹೊಂದಿದಂತೆಯೇ ನಾವು ಸಹ ಹೊಸ ಜೀವವನ್ನು ಹೊಂದಿ ಬಾಳುತ್ತೇವೆ. ಅವರು ಮರಣ ಹೊಂದಿದಂತೆ ನಾವೂ ಅವರೊಂದಿಗೆ ಐಕ್ಯವಾಗಿ ಮರಣವನ್ನು ಹೊಂದುತ್ತೇವೆ. ಅಂತೆಯೇ, ಅವರು ಪುನರುತ್ಥಾನ ಆದಂತೆ ನಾವೂ ಅವರೊಡನೆ ಐಕ್ಯವಾಗಿ ಪುನರುತ್ಥಾನ ಹೊಂದುತ್ತೇವೆ. ನಮಗೆ ತಿಳಿದಿರುವಂತೆ ಪಾಪಾಧೀನವಾದ ನಮ್ಮ ಸ್ವಭಾವವು ನಾಶವಾಗುವಂತೆಯೂ ಇನ್ನು ಮುಂದೆ ನಾವು ಪಾಪಕ್ಕೆ ದಾಸರಾಗಿರದಂತೆಯೂ ಯೇಸುಕ್ರಿಸ್ತರೊಡನೆ ನಮ್ಮ ಹಳೆಯ ಸ್ವಭಾವವನ್ನು ಶಿಲುಬೆಗೆ ಜಡಿಯಲಾಗಿದೆ. ಹೀಗೆ ಸತ್ತವನು ಪಾಪಬಂಧದಿಂದ ಬಿಡುಗಡೆ ಹೊಂದಿದವನು. ಕ್ರಿಸ್ತ ಯೇಸುವಿನೊಂದಿಗೆ ನಾವು ಮರಣ ಹೊಂದಿದ್ದರೆ ಅವರೊಡನೆ ನಾವೂ ಜೀವಿಸುತ್ತೇವೆ; ಇದೇ ನಮ್ಮ ವಿಶ್ವಾಸ. ಯೇಸುಕ್ರಿಸ್ತರನ್ನು ಮರಣದಿಂದ ಎಬ್ಬಿಸಲಾಯಿತು ಎಂಬುದನ್ನು ನಾವು ಬಲ್ಲೆವು. ಆದ್ದರಿಂದ ಅವರು ಇನ್ನು ಎಂದಿಗೂ ಸಾಯುವುದಿಲ್ಲ; ಸಾವಿಗೆ ಅವರ ಮೇಲೆ ಯಾವ ಅಧಿಕಾರವೂ ಇಲ್ಲ. ಏಕೆಂದರೆ, ಅವರು ಪಾಪದ ಪಾಲಿಗೆ ಒಂದೇ ಸಾರಿಗೆ ಮಾತ್ರವಲ್ಲ, ಎಂದೆಂದಿಗೂ ಸತ್ತವರು. ಅವರು ಈಗ ಜೀವಿಸುವುದು ದೇವರಿಗಾಗಿಯೇ. ಅಂತೆಯೇ ನೀವೂ ಸಹ ಪಾಪದ ಪಾಲಿಗೆ ಸತ್ತವರೆಂದೂ ದೇವರಿಗಾಗಿ ಮಾತ್ರ ಯೇಸುಕ್ರಿಸ್ತರಲ್ಲಿ ಜೀವಿಸುವವರೆಂದೂ ಪರಿಗಣಿಸಿರಿ.

ಕೀರ್ತನೆ: 104:1-2, 5-6, 10, 12-14, 24, 35
ಶ್ಲೋಕ: ನೀ ಉಸಿರನ್ನೂದಲು ಹೊಸದಾಗುವುವು ಪುನಶ್ಚೇತನಗೊಳ್ಳುವುದು ಜಗವೆಲ್ಲವು

ಶುಭಸಂದೇಶ: ಮಾರ್ಕ 16: 1-7


ಸಬ್ಬತ್‍ದಿನ ಕಳೆದದ್ದೇ ಮಗ್ದಲದ ಮರಿಯಳು, ಯಕೋಬನ ತಾಯಿ ಮರಿಯಳು ಮತ್ತು ಸಲೋಮೆ ಯೇಸುವಿನ ಪಾರ್ಥಿವ ಶರೀರಕ್ಕೆ ಲೇಪಿಸಲೆಂದು ಸುಗಂಧ ದ್ರವ್ಯಗಳನ್ನು ಕೊಂಡುಕೊಂಡರು. ಭಾನುವಾರ ಮುಂಜಾನೆ ಬೇಗನೆ ಹೊರಟು ಸೂರ್ಯೋದಯ ಸಮಯಕ್ಕೆ ಸಮಾಧಿಯನ್ನು ತಲುಪಿದರು. “ಸಮಾಧಿಯ ದ್ವಾರಕ್ಕೆ ಮುಚ್ಚಿರುವ ಕಲ್ಲನ್ನು ನಮಗೆ ಉರುಳಿಸಿ ಕೊಡುವವರು ಯಾರು?” ಎಂದು ಅವರು ತಮ್ಮತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಏಕೆಂದರೆ, ಆ ಕಲ್ಲು ಬಹಳ ದೊಡ್ಡದಾಗಿತ್ತು. ತಲೆಯೆತ್ತಿ ನೋಡಿದಾಗ, ಕಲ್ಲು ಪಕ್ಕದಲ್ಲಿ ಬಿದ್ದಿರುವುದನ್ನು ಕಂಡರು. ಸಮಾಧಿಯೊಳಕ್ಕೆ ಪ್ರವೇಶಿಸಿ ನೋಡುವಾಗ, ಬಿಳಿಯ ಬಟ್ಟೆ ಧರಿಸಿದ್ದ ಯುವಕನೊಬ್ಬನು ಅಲ್ಲಿ ಬಲಗಡೆ ಕುಳಿತಿರುವುದನ್ನು ಕಂಡು, ಅವರು ಬೆಚ್ಚಿಬಿದ್ದರು. ಆತನು, “ಭಯಪಡಬೇಡಿ, ಶಿಲುಬೆಗೇರಿಸಿದ್ದ ನಜರೇತಿನ ಯೇಸುವನ್ನು ನೀವು ಹುಡುಕುತ್ತಾ ಇದ್ದೀರೆಂದು ನನಗೆ ತಿಳಿದಿದೆ. ಅವರು ಇಲ್ಲಿಲ್ಲ, ಪುನರುತ್ಥಾನ ಹೊಂದಿದ್ದಾರೆ. ನೋಡಿ, ಇದೇ ಅವರನ್ನು ಇಟ್ಟ ಸ್ಥಳ. ಈಗ ನೀವು ಹೋಗಿ, ಪೇತ್ರನಿಗೂ ಮಿಕ್ಕ ಶಿಷ್ಯರಿಗೂ, ‘ಯೇಸು ನಿಮಗೆ ಮೊದಲೇ ತಿಳಿಸಿದಂತೆ, ನಿಮಗಿಂತ ಮುಂಚಿತವಾಗಿ ಗಲಿಲೇಯಕ್ಕೆ ಹೋಗುವರು. ಅವರನ್ನು ಅಲ್ಲೇ ಕಾಣುವಿರಿ,’ ಎಂದು ತಿಳಿಸಿರಿ,” ಎಂದನು.

No comments:

Post a Comment