ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

09.03.21 - “ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು ”

ಮೊದಲನೇ ವಾಚನ: ಅಜರ್ಯ 1:2, 11-20

ಅಜರ್ಯನು ಬೆ೦ಕಿಯ ನಡುವೆ ನಿ೦ತುಕೊ೦ಡು ಗಟ್ಟಿಯಾಗಿ ಕೂಗಿ ಹೀಗೆ೦ದು ಪ್ರಾರ್ಥನೆ ಮಾಡಿದ: ಪ್ರಭೂದೇವಾ, ನಿಮ್ಮ ನಾಮದ ಪ್ರಯುಕ್ತ ನಮ್ಮನ್ನು ಎ೦ದೆ೦ದಿಗೂ ತ್ಯಜಿಸಬೇಡಿ. ನಿಮ್ಮ ಮಿತ್ರ ಅಬ್ರಹಾಮನ ನಿಮಿತ್ತ ನಿಮ್ಮ ದಾಸ ಇಸಾಕನ, ನಿಮ್ಮ ಭಕ್ತ ಯಕೋಬನ ಪ್ರಯುಕ್ತ ನಿಮ್ಮ ಕೃಪೆ ನಮ್ಮನ್ನು ಬಿಟ್ಟಗಲದಿರಲಿ. ಇವರಿಗೆ, "ನಿಮ್ಮ ಸ೦ತಾನವನ್ನು ಆಕಾಶದ ನಕ್ಷತ್ರಗಳ೦ತೆ ಸಮುದ್ರ ತೀರದ ಮರಳಿನ೦ತೆ ಅಸ೦ಖ್ಯವಾಗಿಸುವೆ" ಎ೦ದು ನೀವು ವಾಗ್ಧಾನ ಮಾಡಿದಿರಲ್ಲವೆ? ಒಡೆಯಾ, ಉಳಿದ ರಾಷ್ಟ್ರಗಳಿಗಿ೦ತ ನಾವು ಕನಿಷ್ಟರಾಗಿಬಿಟ್ಟೆವು, ನಮ್ಮ ಪಾಪಗಳ ಕಾರಣ ಜಗದಲ್ಲಿನ ಹೀನಸ್ಥಿತಿಗೆ ಇಳಿದುಬಿಟ್ಟೆವು. ನಮಗೀಗ ರಾಜರಿಲ್ಲ, ಪ್ರವಾದಿಗಳಿಲ್ಲ, ನಾಯಕರಿಲ್ಲ; ಹೋಮವಿಲ್ಲ, ಬಲಿದಾನವಿಲ್ಲ, ನೈವೇದ್ಯವಿಲ್ಲ, ಧೂಪವಿಲ್ಲ. ಕಾಣಿಕೆಯನ್ನರ್ಪಿಸಿ ನಿಮ್ಮ ಕೃಪೆ ಪಡೆಯಲು ಸ್ಥಳವೂ ಇಲ್ಲ; ಆದರೂ ಪಶ್ಚಾತ್ತಾಪದ ಹೃದಯ, ದೀನಮನ ನಿಮಗೆ ಅ೦ಗೀಕೃತವಾಗಲಿ. ಹೋತಹೋರಿಗಳ, ಸಾವಿರಾರು ಕೊಬ್ಬಿದ ಕುರಿಮರಿಗಳ ದಹನಬಲಿದಾನದ೦ತೆ ನಮ್ಮೀ ಅ೦ತರ೦ಗದ ಬಲಿ ನಿಮಗಿ೦ದು ಅ೦ಗೀಕೃತವಾಗಲಿ. ಪೂರ್ಣ ಹೃದಯದಿ೦ದ ನಿಮ್ಮನ್ನೀಗ ಹಿ೦ಬಾಲಿಸುತ್ತೇವೆ ನಿಮ್ಮಲ್ಲಿ ಭಯಭಕ್ತಿಯಿಡುತ್ತೇವೆ ನಿಮ್ಮ ಸನ್ನಿಧಿಯನ್ನು ಮತ್ತೆ ಅರಸುತ್ತೇವೆ. ನಮ್ಮನ್ನು ನಿರಾಶೆಗೊಳಿಸಬೇಡಿ ನಿಮ್ಮ ಸೈರಣೆಗೆ ತಕ್ಕ೦ತೆ, ನಿಮ್ಮ ಕೃಪಾತಿಶಯದ ಪ್ರಕಾರ ನಮ್ಮ ಸ೦ಗಡ ವರ್ತಿಸಿ.

ಕೀರ್ತನೆ: 25:4-5, 6-7, 8-9
ಶ್ಲೋಕ: ನೆನೆಸಿಕೋ ಪ್ರಭು, ನಿನ್ನ ನಿರಂತರ ಕರುಣೆಯನು I

ನಿನ್ನ ಮಾರ್ಗವನು ಪ್ರಭು ನನಗೆ ತೋರಿಸು I
ನೀನೊಪ್ಪುವ ಪಥದಲಿ ನಾ ನಡೆಯ ಕಲಿಸು II

ಸನ್ಮಾರ್ಗದಲಿ ಮುನ್ನಡೆಸೆನ್ನ ದೇವಾ, ಮುಕ್ತಿದಾತ I
ಕಲಿಸೆನಗೆ, ನಿನಗಾಗಿ ಕಾದಿರುವೆ ಸತತ II

ನೆನೆಸಿಕೋ ಪ್ರಭು, ನಿನ್ನ ನಿರಂತರ ಕರುಣೆಯನು I
ಆದಿಯಿಂದ ನೀ ತೋರಿದಚಲ ಪ್ರೀತಿಯನು II

ಯೌವನದೆನ್ನ ಪಾಪಪ್ರವೃತ್ತಿಗಳ ಮನದಲ್ಲಿಟ್ಟುಕೊಳ್ಳಬೇಡ I
ನಿನ್ನೊಲುಮೆ ನಲ್ಮೆಗಳ ನಿಮಿತ್ತ ಪ್ರಭು, ನನ್ನ ನೆನೆಯದಿರಬೇಡ II

ಸತ್ಯಸ್ವರೂಪನು, ದಯಾವಂತನು ಪ್ರಭು I
ದಾರಿತಪ್ಪಿದವರಿಗೆ ಬೋಧಕನು ವಿಭು II

ದೀನರನು ನಡೆಸುವನು ತನ್ನ ವಿಧಿಗನುಸಾರ I
ದಲಿತರಿಗೆ ಕಲಿಸುವನು ತನ್ನ ಧರ್ಮಾಚಾರ II

ಶುಭಸ೦ದೇಶ: ಮತ್ತಾಯ 18:21-35


ಪೇತ್ರನು ಯೇಸುವಿನ ಬಳಿಗೆ ಬಂದು, “ಸ್ವಾವಿೂ, ನನಗೆ ವಿರುದ್ಧ ದ್ರೋಹ ಮಾಡುತ್ತಾ ಇರುವ ನನ್ನ ಸಹೋದರನನ್ನು ಎಷ್ಟು ಸಲ ಕ್ಷಮಿಸಬೇಕು? ಏಳುಸಲವೇ?” ಎಂದು ಕೇಳಿದನು. “ಏಳುಸಲವಲ್ಲ, ಏಳೆಪ್ಪತ್ತುಸಲ ಕ್ಷಮಿಸಬೇಕು ಎಂದು ನಾನು ನಿನಗೆ ಒತ್ತಿ ಹೇಳುತ್ತೇನೆ” ಎಂದು ಯೇಸು ಉತ್ತರವಿತ್ತರು. ಯೇಸು ತಮ್ಮ ಮಾತನ್ನು ಮುಂದುವರಿಸುತ್ತಾ, “ಸ್ವರ್ಗಸಾಮ್ರಾಜ್ಯಕ್ಕೆ ಈ ಹೋಲಿಕೆ ಅನ್ವಯಿಸುತ್ತದೆ: ಒಬ್ಬ ರಾಜನಿದ್ದ. ಅವನು ತನ್ನ ಸೇವಕರಿಂದ ಲೆಕ್ಕ ಕೇಳಲು ನಿರ್ಧರಿಸಿದ. ಲೆಕ್ಕ ತೆಗೆದುಕೊಳ್ಳಲು ಆರಂಭಿಸಿದಾಗ ಹತ್ತು ಸಾವಿರ ‘ಚಿನ್ನದ ನಾಣ್ಯ’ಗಳನ್ನು ಸಾಲವಾಗಿ ತೆರಬೇಕಾಗಿದ್ದ ಒಬ್ಬನನ್ನು ಅವನ ಸಮ್ಮುಖಕ್ಕೆ ಕರೆತರಲಾಯಿತು. ಆದರೆ ಸಾಲ ತೀರಿಸಲು ಅವನ ಕೈಯಲ್ಲಿ ಹಣವಿರಲಿಲ್ಲ. ಆದುದರಿಂದ ಅವನಿಗಿದ್ದುದೆಲ್ಲವನ್ನು ಮಾತ್ರವಲ್ಲ, ಅವನನ್ನೂ ಅವನ ಮಡದಿ ಮಕ್ಕಳನ್ನೂ ಗುಲಾಮಗಿರಿಗೆ ಮಾರಿ, ಸಾಲ ತೀರಿಸುವಂತೆ ರಾಜ ಆಜ್ಞಾಪಿಸಿದ. ಆಗ ಆ ಸೇವಕ ರಾಜನ ಕಾಲಿಗೆ ಬಿದ್ದು ಬೇಡಿಕೊಂಡ: ‘ಸ್ವಲ್ಪ ಸೈರಿಸಿಕೊಳ್ಳಿ ಸ್ವಾವಿೂ, ನಿಮ್ಮ ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,’ ಎಂದು ಅಂಗಲಾಚಿದ. ರಾಜನಿಗೆ ಕನಿಕರ ಉಂಟಾಯಿತು. ಆ ಸೇವಕನನ್ನು ಬಿಡುಗಡೆಮಾಡಿ ಅವನ ಸಾಲವನ್ನು ಮನ್ನಿಸಿ ಬಿಟ್ಟ. “ಆದರೆ ಅದೇ ಸೇವಕ ಹೊರಗೆ ಬಂದದ್ದೇ ತನಗೆ ಕೇವಲ ನೂರು ‘ಬೆಳ್ಳಿಕಾಸು’ ಸಾಲ ತೆರಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಎದುರುಗೊಂಡ. ಅವನನ್ನು ಹಿಡಿದು, ‘ನನಗೆ ಕೊಡಬೇಕಾದ ಸಾಲವನ್ನು ಈಗಲೇ ಕೊಟ್ಟು ತೀರಿಸು,’ ಎಂದು ಕುತ್ತಿಗೆ ಹಿಸುಕಿದ. ಆಗ ಆ ಜೊತೆಗಾರ, ‘ಸ್ವಲ್ಪ ಸೈರಿಸಿಕೊ, ಕೊಟ್ಟುಬಿಡುತ್ತೇನೆ,’ ಎಂದು ಕಾಲಿಗೆ ಬಿದ್ದು ಕೇಳಿಕೊಂಡ. ಆದರೂ ಅವನು ಒಪ್ಪಲಿಲ್ಲ. ಅಷ್ಟುಮಾತ್ರವಲ್ಲ, ಸಾಲ ತೀರಿಸುವ ತನಕ ಆ ಜೊತೆಗಾರನನ್ನು ಸೆರೆಗೆ ಹಾಕಿಸಿದ. ಇದೆಲ್ಲವನ್ನು ಕಂಡ ಇತರ ಸೇವಕರು ಬಹಳವಾಗಿ ನೊಂದುಕೊಂಡರು. ರಾಜನ ಬಳಿಗೆ ಹೋಗಿ ನಡೆದುದೆಲ್ಲವನ್ನೂ ವರದಿಮಾಡಿದರು. ರಾಜನು ಅವನನ್ನು ಕರೆಯಿಸಿ, ‘ಎಲೋ ನೀಚ, ನೀನು ಬೇಡಿಕೊಂಡಿದ್ದರಿಂದ ಪೂರ್ತಿ ಸಾಲವನ್ನು ನಾನು ಮನ್ನಾಮಾಡಿದೆ. ನಾನು ನಿನಗೆ ದಯೆ ತೋರಿಸಿದಂತೆ ನೀನೂ ನಿನ್ನ ಜೊತೆಗಾರನಿಗೆ ದಯೆ ತೋರಿಸಬೇಕಿತ್ತು ಅಲ್ಲವೇ?’ ಎಂದು ಸಿಟ್ಟುಗೊಂಡ. ಬಳಿಕ ತನಗೆ ಬರಬೇಕಾಗಿದ್ದ ಸಾಲವನ್ನು ತೀರಿಸುವವರೆಗೂ ಅವನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದ. “ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು. ಇಲ್ಲದಿದ್ದರೆ ಸ್ವರ್ಗದಲ್ಲಿರುವ ನನ್ನ ತಂದೆ ನಿಮಗೆ ಇದರಂತೆಯೇ ಮಾಡುವರು,” ಎಂದರು.

ಮನಸ್ಸಿಗೊಂದಿಷ್ಟು ನಾವು ಪೇತ್ರರಿಗೆ ಧನ್ಯವಾದಗಳನ್ನು ಸಲ್ಲಿಸಬೇಕು . ನಮ್ಮಲ್ಲಿ ಏಳಬಹುದಾದ ಎಷ್ಟೋ ಪ್ರಶ್ನೆ ಅನುಮಾನಗಳನ್ನು ಯೇಸುವಿನ ಬಳಿ ಕೇಳಿ ಬೈಸಿಕೊಂಡವರು ಪೇತ್ರರು. ಇಂದಿನ ಶುಭಸಂದೇಶದಲ್ಲಿ ಆದದ್ದೂ ಅದೇ. ಅಂದಿನ ಯಹೂದ್ಯ ಪದ್ದತಿಯಲ್ಲಿ ಒಬ್ಬನ ತಪ್ಪನ್ನು ಮೂರು ಬಾರಿ ಕ್ಷಮಿಸಬಹುದಿತ್ತು. ಅದೇ ವಾಡಿಕೆಯಲ್ಲಿ ಪೇತ್ರ ಒಂದಷ್ಟು ಮುಂದೆ ಹೋಗಿ ಮೂರನ್ನು ದುಪ್ಪಟ್ಟು ಪಡಿಸಿ ಅದಕ್ಕೆ ಮತ್ತೊಂದು ಸೇರಿಸಿ ಏಳು ಬಾರಿ ಕ್ಷಮಿಸಬಹುದೇ ಎಂದು ಕೇಳಿ ಯೇಸುವಿನ ಮೆಚ್ಚುಗೆ ಪಡೆಯಲು  ಪ್ರಯತ್ನಿಸುತ್ತಾನೆ. 

ಯೇಸು, ಕ್ಷಮೆ ನೀಡಿದ ರಾಜ - ಕ್ಷಮೆ ನೀಡದ ಸೇವಕನ ಸಾಮತಿ ಹೇಳುತ್ತಾರೆ. ಒಂದು ಅಂದಾಜಿನ ಪ್ರಕಾರ ಆ ರಾಜ ತನ್ನ ಸೇವಕನಿಗೆ  ನೀಡಿದ ಸಾಲದ  ಮೊತ್ತ ಆ ಸೇವಕ ಮತ್ತೊಬ್ಬನಿಗೆ ನೀಡಿದಕ್ಕೆ  ೫೦೦೦ ಪಟ್ಟಷ್ಟು ಹೆಚ್ಚು.  ಆದರೂ ರಾಜ ಸಾಲ ಮನ್ನಿಸುತ್ತಾನೆ, ಅದೇ ಸೇವಕ ಉದಾರಿಯಾಗದೆ ಕ್ಷಮಿಸದೇ ಹೋಗುತ್ತಾನೆ.

ನಾವು ದೇವರ ಮುಂದೆ ಮಾಡಿದ ತಪ್ಪುಗಳು , ಮತ್ತೊಬ್ಬರು ನಮಗೆ ಮಾಡಿದ ತಪ್ಪಿಗಿಂತ ಎಷ್ಟೋ ಪಟ್ಟುಗಳು ಹೆಚ್ಚು. ಉದಾರಿಯಾಗಿ ಕ್ಷಮಿಸುವ ದೇವರ ಮನಸ್ಸು ನಮ್ಮದಾಗಬೇಕೆಂದು ಯೇಸು ಬಯಸುತ್ತಾರೆ. ಹಾಗೆ ಆದರೆ ಎಷ್ಟು ಚೆಂದವಲ್ಲವೇ?

No comments:

Post a Comment