14.03.21 - "ಪುತ್ರನಲ್ಲಿ ವಿಶ್ವಾಸವಿಟ್ಟವನಿಗೆ ತೀರ್ಪಿಲ್ಲ. ಆತನಲ್ಲಿ ವಿಶ್ವಾಸವಿಡದವನಾದರೋ ಈಗಾಗಲೇ ತೀರ್ಪಿಗೆ ಗುರಿಯಾಗಿದ್ದಾನೆ"

ಮೊದಲನೇಯ ವಾಚನ : 2 ಅರಸರುಗಳು 36 : 14-16 , 19-23

ಪ್ರಧಾನ ಯಾಜಕರೂ ಪ್ರಜೆಗಳೂ ಕೂಡ ಮಹಾದ್ರೋಹಿಗಳಾಗಿ, ಅನ್ಯಜನಾಂಗಗಳ ಅಸಹ್ಯಕೃತ್ಯಗಳನ್ನು ಅನುಸರಿಸಿ, ಸರ್ವೇಶ್ವರ ತಮಗೆ ಪ್ರತಿಷ್ಠಿಸಿಕೊಂಡಿದ್ದ ಜೆರುಸಲೇಮಿನ ದೇವಾಲಯವನ್ನು ಹೊಲೆ ಮಾಡಿದರು. ಅವರ ಪಿತೃಗಳ ದೇವರಾದ ಸರ್ವೇಶ್ವರ ತಮ್ಮ ಪ್ರಜೆಯನ್ನೂ ನಿವಾಸಸ್ಥಾನವನ್ನೂ ಕನಿಕರಿಸಿ, ಸಾವಕಾಶ ಮಾಡದೆ, ತಮ್ಮ ದೂತರ ಮುಖಾಂತರ ಅವರನ್ನು ಎಚ್ಚರಿಸುತ್ತಾ ಬಂದರು. ಆದರೂ ಅವರು ದೇವಸಂದೇಶಕರನ್ನು ಗೇಲಿಮಾಡಿದರು. ದೇವರ ಮಾತುಗಳನ್ನು ತುಚ್ಛೀಕರಿಸಿ ಅವರ ಪ್ರವಾದಿಗಳನ್ನು ಹೀಯಾಳಿಸಿದರು. ಆದ್ದರಿಂದ ದೇವಕೋಪಾಗ್ನಿ ಅವರ ಪ್ರಜೆಯ ಮೇಲೆ ಉರಿಯತೊಡಗಿತು. ಅದರ ತಾಪ ಆರಿಹೋಗಲೇ ಇಲ್ಲ.

ಅವನ ಜನರು ಜೆರುಸಲೇಮಿನ ಪೌಳಿಗೋಡೆಗಳನ್ನು ಕೆಡವಿದರು. ಅದರ ಎಲ್ಲ ರಾಜಮಂದಿರಗಳನ್ನೂ ದೇವಾಲಯವನ್ನೂ ಸುಟ್ಟು ನೆಲಸಮ ಮಾಡಿದರು; ಅಮೂಲ್ಯವಾದ ವಸ್ತುಗಳನ್ನು ನಾಶಮಾಡಿದರು. ಕತ್ತಿಗೆ ತಪ್ಪಿಸಿಕೊಂಡವರನ್ನು ಅರಸನು ಬಾಬಿಲೋನಿಗೆ ಸೆರೆ ಒಯ್ದನು. ಪರ್ಷಿಯದ ಪ್ರಭುತ್ವ ಅಲ್ಲಿ ಸ್ಥಾಪಿತವಾಗುವವರೆಗೆ ಅವರು ಅವನಿಗೂ ಅವನ ಮಕ್ಕಳಿಗೂ ಗುಲಾಮರಾಗಿದ್ದರು.  ಪ್ರಕಾರ ಸರ್ವೇಶ್ವರ ಯೆರೆಮೀಯನ ಮುಖಾಂತರ ಹೇಳಿಸಿದ ಮಾತು ನೆರವೇರಿತು; ನಾಡು ತನ್ನ ಸಬ್ಬತ್‍ಕಾಲವನ್ನು ಅನುಭವಿಸುವುದಕ್ಕೆ ಮಾರ್ಗವಾಯಿತು. ಅದು ಎಪ್ಪತ್ತು ವರ್ಷ ಹಾಳುಬಿದ್ದು ಕಾಲಾವಧಿಯಲ್ಲಿ ವಿಶ್ರಾಂತಿಯನ್ನು ಅನುಭವಿಸುತ್ತಿತ್ತು.

ಪರ್ಷಿಯದ ಅರಸ ಸೈರಸನ ಮೊದಲನೆಯ ವರ್ಷದಲ್ಲಿ ಸರ್ವೇಶ್ವರಸ್ವಾಮಿ ತಾವು ಯೆರೆಮೀಯನ ಮುಖಾಂತರ ಹೇಳಿಸಿದ ವಾಕ್ಯವನ್ನು ಕಾರ್ಯಗತ ಮಾಡಿದರು: ಪರ್ಷಿಯದ ರಾಜ ಕೋರೆಷನ ಮನಸ್ಸನ್ನು ಪ್ರೇರಿಸಿದರು; ಅವನು ತನ್ನ ರಾಜ್ಯದಲ್ಲೆಲ್ಲಾ ಡಂಗುರದಿಂದಲೂ ಪತ್ರಗಳಿಂದಲೂ, "ಪರ್ಷಿಯದ ರಾಜ ಸೈರಸ್ ಎಂಬ ನನ್ನ ಮಾತಿಗೆ ಕಿವಿಗೊಡಿ; ಪರಲೋಕ ದೇವರಾದ ಸರ್ವೇಶ್ವರ ನನಗೆ ಭೂಲೋಕದ ಎಲ್ಲಾ ರಾಜ್ಯಗಳನ್ನು ಒಪ್ಪಿಸಿದ್ದಾರೆ; ತಮಗಾಗಿ ಜುದೇಯ ನಾಡಿನ ಜೆರುಸಲೇಮಿನಲ್ಲಿ ಆಲಯವನ್ನು ಕಟ್ಟಬೇಕೆಂದು ಆಜ್ಞಾಪಿಸಿದ್ದಾರೆ; ನಿಮ್ಮಲ್ಲಿ ಯಾರು ಅವರ ಪ್ರಜೆಗಳಾಗಿರುತ್ತಾರೋ ಅವರು ಸ್ವಂತನಾಡಿಗೆ ಹೋಗಬಹುದು; ಅವರ ದೇವರಾದ ಸರ್ವೇಶ್ವರ ಅವರೊಂದಿಗೆ ಇರುತ್ತಾರೆ!ಎಂದು ಪ್ರಕಟಿಸಿದನು.

ಎರಡನೇಯ ವಾಚನ : ಎಫಿಸಿಯರಿಗೆ 2 :4-10



ಕರುಣಾಮಯ ದೇವರು ನಮ್ಮನ್ನು ಅಪಾರವಾಗಿ ಪ್ರೀತಿಸಿ, ನಮ್ಮ ಅಪರಾಧಗಳ ನಿಮಿತ್ತ ಆಧ್ಯಾತ್ಮಿಕವಾಗಿ ಮೃತರಾಗಿದ್ದ ನಮ್ಮನ್ನು ಕ್ರಿಸ್ತಯೇಸುವಿನೊಡನೆ ಜೀವಂತರನ್ನಾಗಿ ಮಾಡಿದರು. (ದೈವಾನುಗ್ರಹದಿಂದಲೇ ನೀವೀಗ ಜೀವೋದ್ಧಾರ ಹೊಂದಿದ್ದೀರಿ). ಯೇಸುಕ್ರಿಸ್ತರೊಡನೆ ನಮ್ಮನ್ನೂ ಎಬ್ಬಿಸಿ, ಸ್ವರ್ಗಲೋಕದಲ್ಲಿ ಅವರ ಸನ್ನಿಧಿಯಲ್ಲಿಯೇ ಮಂಡಿಸುವ ಅವಕಾಶ  ಮಾಡಿಕೊಟ್ಟರು. ದೇವರು ಯೇಸುಕ್ರಿಸ್ತರಲ್ಲಿ ನಮಗೆ ತೋರಿದ ದಯೆಯ ಮೂಲಕ ತಮ್ಮ ಅನುಗ್ರಹದ ಶ್ರೀಮಂತಿಕೆಯನ್ನು ಮುಂದಣ ಯುಗಗಳಲ್ಲಿ ತಿಳಿಯಪಡಿಸುವುದೇ ಅವರ ಉದ್ದೇಶವಾಗಿತ್ತು. ದೈವಾನುಗ್ರಹದಿಂದಲೇ ನೀವು ವಿಶ್ವಾಸದ ಮೂಲಕ ಜೀವೋದ್ಧಾರ ಹೊಂದಿದ್ದೀರಿ. ಇದು ನಿಮ್ಮ ಪ್ರಯತ್ನದ ಫಲವಲ್ಲ; ದೇವರಿತ್ತ ವರಪ್ರಸಾದ. ಇದು ಮಾನವರ ಪುಣ್ಯಕಾರ್ಯಗಳ ಪರಿಣಾಮವೂ ಅಲ್ಲ. ಆದುದರಿಂದ ಯಾರೂ ಹೆಮ್ಮೆಪಡಲು ಆಸ್ಪದವಿಲ್ಲ. ನಾವಾದರೋ ದೇವರ ಕಲಾಕೃತಿಗಳು. ಕ್ರಿಸ್ತಯೇಸುವಿನಲ್ಲಿ ನಾವು ಸತ್ಕಾರ್ಯಗಳನ್ನು ಮಾಡುತ್ತಾ ಬಾಳಬೇಕೆಂದು ತಾವು ಮೊದಲೇ ನಿರ್ಣಯಿಸಿದ್ದಂತೆ ದೇವರು ನಮ್ಮನ್ನು ಸೃಷ್ಟಿಸಿದ್ದಾರೆ.

 ಶುಭಸಂದೇಶ  3 : 14-21

ಮೋಶೆ ಮರುಭೂಮಿಯಲ್ಲಿ ಸರ್ಪವನ್ನು ಮೇಲಕ್ಕೆ ಏರಿಸಿದನು. ಅಂತೆಯೇ ನರಪುತ್ರನಲ್ಲಿ ವಿಶ್ವಾಸವಿಟ್ಟವರೆಲ್ಲರೂ ನಿತ್ಯಜೀವವನ್ನು ಪಡೆಯುವಂತೆ ನರಪುತ್ರನನ್ನು ಸಹ ಮೇಲಕ್ಕೆ ಏರಿಸಬೇಕು. ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು; ಆತನಲ್ಲಿ ವಿಶ್ವಾಸವಿಟ್ಟ ಯಾರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ದೇಶ. ದೇವರು ತಮ್ಮ ಪುತ್ರನನ್ನು ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿಮಾಡಲೆಂದಲ್ಲ; ಪುತ್ರನ ಮುಖಾಂತರ ಲೋಕ ಉದ್ಧಾರವಾಗಲೆಂದು. ಪುತ್ರನಲ್ಲಿ ವಿಶ್ವಾಸವಿಟ್ಟವನಿಗೆ ತೀರ್ಪಿಲ್ಲ. ಆತನಲ್ಲಿ ವಿಶ್ವಾಸವಿಡದವನಾದರೋ ಈಗಾಗಲೇ ತೀರ್ಪಿಗೆ ಗುರಿಯಾಗಿದ್ದಾನೆ. ಏಕೆಂದರೆ, ಅವನಿಗೆ ದೇವರ ಏಕೈಕ ಪುತ್ರನಲ್ಲಿ ವಿಶ್ವಾಸವಿಲ್ಲ.  ತೀರ್ಪು ಏನೆಂದರೆ: ಜ್ಯೋತಿ ಜಗತ್ತಿಗೆ ಬಂದಿತು: ಮಾನವರಾದರೋ ತಮ್ಮ ದುಷ್ಕೃತ್ಯಗಳಿಂದಾಗಿ ಜ್ಯೋತಿಗೆ ಬದಲು ಅಂಧಕಾರವನ್ನೇ ಅವಲಂಭಿಸಿದರು. ಕೇಡನ್ನು ಮಾಡುವವನಿಗೆ ಬೆಳಕೆಂದರೆ ಆಗದು. ತನ್ನ ದುಷ್ಕೃತ್ಯಗಳು ಬಯಲಾಗಬಾರದೆಂದು ಅವನು ಬೆಳಕಿನ ಬಳಿಗೆ ಸುಳಿಯುವುದೂ ಇಲ್ಲ. ಸತ್ಯಸಂಧನಾದರೋ ಬೆಳಕಿನ ಬಳಿಗೆ ಬರುತ್ತಾನೆ. ತಾನು ಮಾಡುವುದು ದೇವರು ಮೆಚ್ಚುವುದನ್ನೇ ಎಂಬುದನ್ನು ತೋರ್ಪಡಿಸುತ್ತಾನೆ.

ಮನಸ್ಸಿಗೊಂದಿಷ್ಟು :  ಸಾಮಾನ್ಯವಾಗಿ ದೇವರೆಂದರೆ ಕಠಿಣ ಮನಸ್ಸುಳ್ಳವರು,  ದಂಡನೆ ತೀರ್ಪು ಕೊಡುವವರು, ಕ್ಷಮೆ ನೀಡಲು ಸಮಯ ತೆಗೆದುಕೊಳ್ಳುವವರು ಎಂಬ ಭಾವವಿತ್ತು. ಈಗಲೂ ಇದೆ. ದೈವ ಪ್ರೀತಿಗಿಂತ ದೈವ ಭಯವೇ ನಮ್ಮ ಆಧ್ಯಾತ್ಮಿಕತೆಯನ್ನು ಮುನ್ನಡೆಸುತ್ತದೆ.

ಇದಕ್ಕೆ ಭಿನ್ನವಾಗಿದೆ ಇಂದಿನ ಶುಭ ಸಂದೇಶ. ದೇವರ ಈ ಲೋಕದ ಮೇಲಿನ ಪ್ರೀತಿ ಎಲ್ಲಕ್ಕಿಂತ ದೊಡ್ಡದು ಎನ್ನುತ್ತದೆ.  ತಮ್ಮ ಮಗನನ್ನೇ ಲೋಕಕ್ಕೆ ಕಳುಹಿಸಿ ಘೋರ ಮರಣಕ್ಕೆ ಈಡು ಮಾಡುವಷ್ಟು ದೊಡ್ಡ ಪ್ರೀತಿ ಅವರದು. ತೀರ್ಪಿಗಿಂತ ಪ್ರೀತಿ ಇಲ್ಲಿ ಹೆಚ್ಚು ಮಹತ್ವ ಪಡೆಯುತ್ತದೆ.  “ನೀವು ಜನರ ಬಗ್ಗೆ ತೀರ್ಪು ನೀಡುತ್ತಲೇ ಇದ್ದರೆ ನಿಮಗೆ ಅವರನ್ನು ಪ್ರೀತಿಸಲು ಸಮಯ ಸಿಗುವುದಿಲ್ಲ” ಎಂದು ಮದರ್ ತೆರೇಸಾ ಹೇಳಿದ್ದು ಇದೇ ಅರ್ಥದಲ್ಲಿ.

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...