ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

12.03.21 - “ನೀನು ದೇವರ ಸಾಮ್ರಾಜ್ಯದಿಂದ ದೂರವಿಲ್ಲ,”

ಮೊದಲನೇ ವಾಚನ: ಹೊಶೇಯ: 14: 1-9


ಇಸ್ರಯೇಲ್, ನಿನ್ನ ಸರ್ವೇಶ್ವರನಾದ ದೇವರ ಬಳಿಗೆ ಹಿಂದಿರುಗು. ನಿನ್ನ ಪಾಪದ್ರೋಹಗಳೇ ನಿನ್ನ ಪತನಕ್ಕೆ ಕಾರಣ. ಆದುದರಿಂದ ಪಶ್ಚಾತ್ತಾಪದ ಮಾತುಗಳೊಂದಿಗೆ ದೇವರಿಗೆ ಅಭಿಮುಖವಾಗಿ, “ಪ್ರಭುವೇ, ನಮ್ಮ ಅಪರಾಧವನ್ನು ತೊಡೆದುಹಾಕು. ನಮ್ಮಲ್ಲಿ ಒಳಿತಾದುದನ್ನೇ ಅಂಗೀಕರಿಸು. ನಿನಗೆ ಸ್ತುತಿಬಲಿಯನ್ನು ಸಮರ್ಪಿಸುವೆವು. ಅಸ್ಸೀರಿಯದಿಂದ ನಮಗೆ ರಕ್ಷಣೆ ದೊರಕದು. ನಾವು ಕಾಳಗದ ಕುದುರೆಗಳ ಮೇಲೆ ಇನ್ನೆಂದೂ ಸವಾರಿ ಮಾಡೆವು. ನಮ್ಮ ಕೈಗಳು ನಿರ್ಮಿಸಿರುವ ವಿಗ್ರಹಗಳನ್ನು ವೀಕ್ಷಿಸಿ, ‘ನೀವೇ ನಮ್ಮ ದೇವರು’ ಎಂದು ಜಪಿಸೆವು. ಓ ದೇವಾ, ದಿಕ್ಕಿಲ್ಲದವರಿಗೆ ಕರುಣೆತೋರಿಸುವವನು ನೀನೇ,” ಎಂದು ಹೇಳು. ಸರ್ವೇಶ್ವರ ಇಂತೆನ್ನುತ್ತಾರೆ: ಪರಿಹರಿಸುವೆನು ಜನರ ಭ್ರಷ್ಟತನವನು ಪ್ರೀತಿಸುವೆನು ಮನಪೂರ್ವಕವಾಗಿ ಅವರನು ತ್ಯಜಿಸಿಬಿಡುವೆನು ಅವರ ಮೇಲಿದ್ದ ಕೋಪವನು. ಇರುವೆನು ಇಸ್ರಯೇಲಿಗೆ ಇಬ್ಬನಿಯಂತೆ ಅರಳುವುದು ಆ ನಾಡು ತಾವರೆಯಂತೆ ಬೇರೂರುವುದು ಲೆಬನೋನಿನ ದೇವದಾರು ವೃಕ್ಷದಂತೆ. ಹರಡಿಕೊಳ್ಳುವುದದು ಮರದ ರೆಂಬೆಗಳಂತೆ ಕಂಗೊಳಿಸುವುದು ಚೆಲುವಾದ ಓಲಿವ ಮರದಂತೆ ಅದರ ಪರಿಮಳ ಮನೋಹರ ಲೆಬನೋನಿನ ಲತೆಗಳಂತೆ. ಮರಳಿ ಆಶ್ರಯಿಸುವರು ನನ್ನ ನೆರಳನ್ನು ಆ ಜನತೆ ಅಭಿವೃದ್ಧಿಯಾಗುವರು ಉದ್ಯಾನವನದಂತೆ ಫಲಪ್ರದವಾಗುವರು ಆ ಜನರು ದ್ರಾಕ್ಷಾಲತೆಯಂತೆ ಸುಪ್ರಸಿದ್ಧ ಅವರ ಕೀರ್ತಿ ಲೆಬನೋನಿನ ದ್ರಾಕ್ಷಾರಸದಂತೆ. ನುಡಿವುದು ಎಫ್ರಯಿಮ್, “ನನಗಿನ್ನು ಬೇಡ ವಿಗ್ರಹಗಳ ಗೊಡವೆ”. ಅದಕ್ಕೆ ಒಲಿದು ಕಟಾಕ್ಷಿಸುವವನು ನಾನೇ ಅದಕ್ಕೆ ಹಚ್ಚಹಸಿರಾದ ತುರಾಯಿಮರದಂತಿರುವೆ ಅದಕ್ಕೆ ಫಲವನ್ನು ನೀಡುವವನು ನಾನೇ.” ಬುದ್ಧಿವಂತನು ಈ ಮಾತುಗಳನ್ನು ಗ್ರಹಿಸಿಕೊಳ್ಳಲಿ. ವಿವೇಕಿಯು ಈ ನುಡಿಗಳನ್ನು ಅರ್ಥಮಾಡಿ ಕೊಳ್ಳಲಿ. ಸರ್ವೇಶ್ವರಸ್ವಾಮಿಯ ಮಾರ್ಗಗಳು ನೇರವಾದವುಗಳು. ಸನ್ಮಾರ್ಗಿಗಳು ಅವುಗಳನ್ನು ಕೈಗೊಂಡು ನಡೆಯುವರು. ದುರ್ಮಾರ್ಗಿಗಳು ಅವುಗಳನ್ನು ಕೈಬಿಟ್ಟು ಮುಗ್ಗರಿಸಿ ಬೀಳುವರು.

ಕೀರ್ತನೆ: 81: 6-7, 8-10, 13, 16
ಶ್ಲೋಕ: ಈಜಿಪ್ಟಿನಿಂದ ಕರೆತಂದ ಸ್ವಾಮಿ ದೇವನು ನಾನು, ನನ್ನ ಜನರೇ, ಕಿವಿಗೊಡಿ ನನ್ನ ಬುದ್ಧಿಮಾತಿಗೆ.

ಅಪರಿಚಿತ ವಾಣಿಯೊಂದು ನುಡಿಯಿತೀ ಮಾತನು:/
“ತಪ್ಪಿಸಿದೆ ನಾನು ಹೆಗಲಮೇಲೆ ನೀ ಹೊರೆಹೊರುವುದನು
ಬಿಡುಗಡೆ ಮಾಡಿದೆ ಗೂಡೆಯೆತ್ತುವ ಕೈಗಳನು //
“ಸಂಕಟದಲಿ ಮೊರೆಯಿಟ್ಟಾಗ ವಿಮೋಚಿಸಿದೆ ನಿನ್ನನು / 

ಗುಡುಗುವ ಮೇಘದಿಂದ ಕೊಟ್ಟೆ ನಿನಗೆ ಸದುತ್ತರವನು /
ಮೆರೀಬಾ ಪ್ರವಾಹಗಳ ಬಳಿ ಪರೀಕ್ಷಿಸಿದೆ ನಿನ್ನನು,//
“ನನ್ನ ಜನರೇ, ಕಿವಿಗೊಡಿ ನನ್ನ ಬುದ್ಧಿಮಾತಿಗೆ /
ಹಾಗೆ ಮಾಡಿದರೆ ಇಸ್ರಯೇಲರೆ, ಹಿತ ನಿಮಗೆ, // 

“ಇರಬಾರದು ಅನ್ಯದೇವತೆಗಳು ನಿಮ್ಮಲಿ /
ಪರದೇವತೆಗಳ ಪೂಜೆ ಕೂಡದು ನಿಮ್ಮಲಿ,//
“ಈಜಿಪ್ಟಿನಿಂದ ನಿಮ್ಮನು ಕರೆತಂದ ಸ್ವಾಮಿ ದೇವನು ನಾನು / 
ಒಳಿತಾಗಿರುತ್ತಿತ್ತು ನನ್ನ ಜನರು ನನಗೆ ಕಿವಿಗೊಟ್ಟಿದ್ದರೆ /

ಮೇಲಾಗಿರುತ್ತಿತ್ತು ಇಸ್ರಯೇಲರು ನನ್ನ ಹಾದಿ ಹಿಡಿದಿದ್ದರೆ, //
“ನಿಮಗಾದರೋ ಬಡಿಸುತ್ತಿದ್ದೆ ಅತ್ಯುತ್ತಮ ಗೋದಿಯನು /
ಉಣಿಸುತ್ತಿದ್ದೆ ನಾ ನಿಮಗೆ ಬೆಟ್ಟದ ಜೇನುತುಪ್ಪವನು” // 

ಶುಭಸ೦ದೇಶ:  ಮಾರ್ಕ: 12: 28-34

ಈ ತರ್ಕವನ್ನು ಕೇಳುತ್ತಿದ ಧರ್ಮಶಾಸ್ತ್ರಿ ಒಬ್ಬನು, ಯೇಸುಸ್ವಾಮಿ ಸದ್ದುಕಾಯರಿಗೆ ಸಮರ್ಪಕವಾದ ಉತ್ತರವನ್ನು ಕೊಟ್ಟಿದ್ದನ್ನು ಮೆಚ್ಚಿ, ಅವರ ಬಳಿಗೆ ಬಂದು, “ಆಜ್ಞೆಗಳಲ್ಲೆಲ್ಲಾ ಪ್ರಪ್ರಥಮ ಆಜ್ಞೆ ಯಾವುದು?” ಎಂದು ಕೇಳಿದನು. ಯೇಸು ಅವನಿಗೆ, “ಇಸ್ರಯೇಲ್ ಸಮಾಜವೇ ಕೇಳು: ನಮ್ಮ ದೇವರಾದ ಸರ್ವೇಶ್ವರ ಏಕೈಕ ಸರ್ವೇಶ್ವರ; ನಿನ್ನ ದೇವರಾದ ಸರ್ವೇಶ್ವರನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ಪ್ರೀತಿಸು. ಇದೇ ಪ್ರಪ್ರಥಮ ಆಜ್ಞೆ. “ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು. ಇದೇ ಎರಡನೆಯ ಆಜ್ಞೆ. ಇವೆರಡು ಆಜ್ಞೆಗಳಿಗಿಂತ ಶ್ರೇಷ್ಠವಾದ ಆಜ್ಞೆ ಬೇರೊಂದೂ ಇಲ್ಲ,” ಎಂದರು. ಇದನ್ನು ಕೇಳಿದ ಆ ಧರ್ಮಶಾಸ್ತ್ರಿ, “ಬೋಧಕರೇ, ಚೆನ್ನಾಗಿ ಹೇಳಿದಿರಿ. ದೇವರು ಒಬ್ಬರೇ, ಅವರ ಹೊರತು ಬೇರೆ ದೇವರಿಲ್ಲ, ಎಂದು ನೀವು ಹೇಳಿದ್ದು ಸತ್ಯ; ಅವರನ್ನು ನಾವು ಪೂರ್ಣ ಹೃದಯದಿಂದಲೂ ಪೂರ್ಣ ಜ್ಞಾನದಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು. ಇದಲ್ಲದೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವಂತೆಯೇ ನಮ್ಮ ನೆರೆಯವರನ್ನೂ ಪ್ರೀತಿಸತಕ್ಕದ್ದು. ಇವು ಎಲ್ಲಾ ದಹನಬಲಿಗಳಿಗಿಂತಲೂ ಯಜ್ಞಯಾಗಾದಿಗಳಿಗಿಂತಲೂ ಎಷ್ಟೋ ಮೇಲಾದುವು,” ಎಂದನು. ಅವನ ವಿವೇಕಪೂರ್ಣವಾದ ಉತ್ತರವನ್ನು ಮೆಚ್ಚಿ ಯೇಸು, “ನೀನು ದೇವರ ಸಾಮ್ರಾಜ್ಯದಿಂದ ದೂರವಿಲ್ಲ,” ಎಂದರು. ಇದಾದ ಬಳಿಕ ಯೇಸುವನ್ನು ಪ್ರಶ್ನಿಸುವುದಕ್ಕೆ ಯಾರೊಬ್ಬರೂ ಧೈರ್ಯಗೊಳ್ಳಲಿಲ್ಲ.

ಮನಸ್ಸಿಗೊಂದಿಷ್ಟು : ಇಂದಿನ ಶುಭಸಂದೇಶದಲ್ಲಿ ಧರ್ಮಶಾಸ್ತ್ರೀ ಯೇಸುವಿನ ಮಾತನ್ನು ಒಪ್ಪುವುದು, ಯೇಸು ಅವನನ್ನು ಮೆಚ್ಚುವುದನ್ನು ಕಾಣುತ್ತೇವೆ. ಯೇಸು ವಿನಾಕಾರಣ ಯಾರನ್ನೂ ಖಂಡಿಸುತ್ತಿರಲಿಲ್ಲ ಎಂಬುದರ ಮೇಲೆ ಮಾರ್ಕರು  ಬೆಳಕು ಚೆಲ್ಲುತ್ತಾರೆ.  

ಯೇಸು ನೀಡಿದ ಎರಡೂ ಆಜ್ಞೆಗಳು ಈಗಾಗಲೇ ಹಳೆಯ ಒಡಂಬಡಿಕೆಯಲ್ಲಿ ಚರ್ಚೆಯಾಗಿದೆ. ಆದರೆ ಯೇಸು ದೈವ ಪ್ರೀತಿ ಹಾಗು ಪರ ಪ್ರೀತಿಗೆ  ಸಮನಾದ ಮಹತ್ವ ನೀಡುತ್ತಾರೆ. ದೈವ ಶಾಸ್ತ್ರದ ಕಟ್ಟಲೆ ನಿಯಮಗಳನ್ನು ಪಾಲಿಸುವುದೇನೋ ಸರಿ. ಆದರೆ ಅವು ಪ್ರೀತಿಗಿಂತ ಹೆಚ್ಚು ಮಹತ್ವ ಪಡೆಯುವ ಅಪಾಯವೇ ಹೆಚ್ಚು . 

ಜೆರಿಕೋ ಮಾರ್ಗದಲ್ಲಿ ಗಾಯಗೊಂಡ ಪ್ರಯಾಣಿಕನನ್ನು ಆರೈಕೆ ಮಾಡದೆ ಹೋದ ಯಾಜಕ ಹಾಗು ಲೇವಿ ಈ ವಿಷಯದಲ್ಲಿ ಉದಾಹರಣೆ. ಅವರಲ್ಲಿ ಪ್ರೀತಿ ಕರುಣೆಗಿಂತ ವಿಧಿ, ನಿಯಮದ ಕರ್ತವ್ಯವೇ ಹೆಚ್ಚು ಮಹತ್ವ ಪಡೆಯಿತು. 

ಈ ನಿಟ್ಟಿನಲ್ಲಿ ಯೇಸು ಹೇಳಿದ ಈ ಎರಡು ಆಜ್ಞೆಗಳೇ  ನಮ್ಮ ದಾರಿ ದೀಪವಾಗಬೇಕು

No comments:

Post a Comment