ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

02.04.21 - "ನನ್ನ ಪಿತನೇ ಕೊಟ್ಟಿರುವ ಕಷ್ಟದ ಕೊಡವಿದು; ಇದರಲ್ಲಿರುವುದನ್ನು ನಾನು ಕುಡಿಯದೆ ಹೋದರೆ ಹೇಗೆ?”

 ಮೊದಲನೇ ವಾಚನ: ಯೆಶಾಯ 52:13-53:12



ನನ್ನ ದಾಸನಿದೋ, ಕೃತಾರ್ಥ ಆಗುವವನಾತ ಮಹಿಮಾನ್ವಿತ ಏರುವನು ಉನ್ನತ ಪದವಿಗಾತ. ಆತನ ಮುಖ ನರಮಾನವರ ಮುಖಕ್ಕಿಂತ ಆತನ ರೂಪ ನರಪುತ್ರರ ರೂಪಕ್ಕಿಂತ ವಿಕಾರಗೊಂಡಿದೆ ನಿಜ; ಆದರೆ ಹಲವರು ನೋಡಿ ಆದರು ಚಕಿತ. ಅಂತೆಯೆ ಹಲರಾಷ್ಟ್ರಗಳು ಚಕಿತವಾಗುವುವು ಅಚ್ಚರಿಗೊಂಡು ಬಾಯಿಮುಚ್ಚಿಕೊಳ್ಳುವರು ಅರಸರು ಆತನನು ಕಂಡು. ಏಕೆನೆ, ನೋಡುವರವರು ಅಪೂರ್ವ ಸಂಗತಿಯೊಂದನು ಗ್ರಹಿಸಿಕೊಳ್ಳುವರವರು ಎಂದೂ ಕೇಳದ ವಿಷಯವನು. ನಂಬುವರಾರು ನಾವು ಕೇಳಿದ ಸಂಗತಿಯನು? ಗುರುತಿಸುವರಾರು ಸರ್ವೇಶ್ವರನ ಶಕ್ತಿಯನು? ಸರ್ವೇಶ್ವರನ ಮುಂದೆ ಬೆಳೆದನಾತ ಸಸಿಯಂತೆ ಒಣನೆಲದೊಳಗೆ ಇಳಿಯುವ ಬೇರಿನಂತೆ. ಆತನಲಿ ಅಂದಚೆಂದಗಳಾವುವೂ ಇರಲಿಲ್ಲ, ನೋಡಲು ಲಕ್ಷಣವಾದುವು ಏನೂ ಕಾಣಲಿಲ್ಲ. ಧಿಕ್ಕರಿಸಲ್ಪಟ್ಟವನು, ಮನುಜರಿಂದ ತಿರಸ್ಕೃತನು, ದುಃಖಕ್ರಾಂತನು, ಕಷ್ಟಸಂಕಟ ಅನುಭವಿಸಿದವನು. ನೋಡಿದವರು ಮುಖ ತಿರುಗಿಸುವಷ್ಟು ನಿಂದಕನು ! ನಾವೋ ಲಕ್ಷ್ಯಕ್ಕೂ ತೆಗೆದುಕೊಳ್ಳಲಿಲ್ಲ ಆತನನು. ನಿಜವಾಗಿ ವಹಿಸಿಕೊಂಡನಾತ ನಮ್ಮ ಬಾಧೆಗಳನು ಹೊರೆಯಂತೆ ಹೊತ್ತನಾತ ನಮ್ಮ ಕಷ್ಟಸಂಕಟಗಳನು ನಾವು ಭಾವಿಸಿದ್ದಾದರು ಏನು? ಆತ ದೇವರಿಂದ ಬಾಧಿತನೆಂದು ದಂಡನೆಗೆ ಗುರಿಯಾದವನು, ತಿರಸ್ಕೃತನಾದವನೆಂದು ! ನಿನ್ನ ಸೃಷ್ಟಿಕರ್ತನೆ ನಿನಗೆ ಪತಿಯು ‘ಸೇನಾಧೀಶ್ವರನಾದ ಸರ್ವೇಶ್ವರ’ ಆತನ ಹೆಸರು. ಇಸ್ರಯೇಲಿನ ಪರಮಪಾವನನೆ ನಿನ್ನ ಉದ್ಧಾರಕನು. ‘ಸರ್ವಲೋಕದ ದೇವ’ ಆತನ ನಾಮಧೇಯ. ತೊಳಲುತ್ತಿದ್ದೆವು ನಾವೆಲ್ಲರು ದಾರಿತಪ್ಪಿದ ಕುರಿಗಳಂತೆ ಹಿಡಿಯುತ್ತಿದ್ದನು ಪ್ರತಿಯೊಬ್ಬನು ತನ್ನ ತನ್ನ ದಾರಿಯನ್ನೆ. ನಮ್ಮೆಲ್ಲರ ದೋಷವನು ಸರ್ವೇಶ್ವರ ಹಾಕಿದ್ದ ಆತನ ಮೇಲೆ. ಬಾಧೆಗಳಿಗೊಳಗಾದ, ಹಿಂಸೆ ಸಹಿಸಿದ ಆತ ಬಾಯ್ದೆರೆಯದೆ. ಹೌದು, ಬಾಯ್ದೆರೆಯದಿದ್ದ ಬಲಿಗೊಯ್ದ ಕುರಿಮರಿಯಂತೆ ತುಪ್ಪಟ ಕತ್ತರಿಸುವವನ ಮುಂದಿರುವ ಮೂಕ ಕುರಿಮರಿಯಂತೆ. ಎಳೆದೊಯ್ದರು ಬಂಧನದಿಂದ, ನ್ಯಾಯಸ್ಥಾನದಿಂದ ಹೌದು, ದೂರಮಾಡಿದರು ಆತನನು ಜೀವಲೋಕದಿಂದ. ವಧೆಯಾದನಾತ ನಮ್ಮ ಜನರ ಪಾಪದ ದೆಸೆಯಿಂದ. ಆದರೂ ಸಮಕಾಲೀನವರಾರು ಮರುಗಲಿಲ್ಲ ಕನಿಕರದಿಂದ. ಮಾಡಲಿಲ್ಲ ಆತ ಯಾವ ಪಾಪಕೃತ್ಯ ಅವನ ಬಾಯಲಿರಲಿಲ್ಲ ವಂಚನೆಯ ವಾಕ್ಯ ಹೂಣಿದರಾತನನು ಸತ್ತಮೇಲೆ ದುರುಳರ ಹಾಗೂ ದುಷ್ಕರ್ಮಿಗಳ ನಡುವೆ. ಸರ್ವೇಶ್ವರನ ಚಿತ್ತದಂತೆ ಜಜ್ಜರಿತನಾದ ಹಿಂಸೆಬಾಧೆಗಳಿಂದ ಪಾಪ ಪ್ರಾಯಶ್ಚಿತ್ತಕ್ಕಾಗಿ ತನ್ನ ಪ್ರಾಣವನೆ ಸಮರ್ಪಿಸಿದ. ಈ ಪರಿ ಕಾಣುವನು ತನ್ನ ಸಿರಿಸಂತಾನವನು ಪಡೆಯುವನು ಚಿರಜೀವವನು ತಾನೇ ನೆರವೇರಿಸುವೆನು ಸರ್ವೇಶ್ವರನ ಸಂಕಲ್ಪವನು. ತೃಪ್ತನಾಗುವನಾತ ಕಂಡು ತನ್ನ ಪ್ರಾಣಯಾತನೆಯ ಫಲವನು. ಸಜ್ಜನನಾದ ಆ ನನ್ನ ದಾಸ ತರುವನು ಸನ್ಮಾರ್ಗಕೆ ಬಹು ಜನರನು. ತಾನೇ ಹೊತ್ತುಕೊಳ್ಳುವನು ಅವರ ಅಪರಾಧಗಳ ಹೊರೆಯನು. ಎಂತಲೆ ನೀಡುವೆ ಇವನಿಗೆ ಪಾಲನ್ನು ದೊಡ್ಡವರ ಸಂಗಡ ಹಂಚಿಕೊಳ್ಳುವನು ಸೂರೆಯನ್ನು ಬಲಿಷ್ಠರ ಸಂಗಡ ಏಕೆನೆ ಪ್ರಾಣವನ್ನೆ ಧಾರೆಯೆರೆದು ಮರಣಹೊಂದಿದ ದ್ರೋಹಿಗಳೊಂದಿಗೆ ತನ್ನನೆ ಒಂದಾಗಿ ಎಣಿಸಿಕೊಂಡ. ಅನೇಕರ ಪಾಪವನ್ನು ಹೊತ್ತು ಅವರಿಗಾಗಿ ಪ್ರಾರ್ಥಿಸಿದ.

ಕೀರ್ತನೆ: 31:2, 6, 12-13, 15-16, 17, 25

ಶ್ಲೋಕ: ಪಿತನೇ, ನನ್ನಾತ್ಮವನ್ನು ನಿಮ್ಮ ಕೈಗೊಪ್ಪಿಸುತ್ತೇನೆ

ನನಗೆ ಕಿವಿಗೊಡು ಪ್ರಭು, ನನ್ನನು ಬಿಡಿಸು ಬೇಗನೆ |
ನನ್ನಾಶ್ರಯಗಿರಿ, ದುರ್ಗಾಸ್ಥಾನವಾಗಿರು
ನೀನೆ ||
ಇಲ್ಲಸಲ್ಲದ ದೇವರನು ಅವಲಂಬಿಪರನು ನೀ ಒಲ್ಲೆ |
ನಾನಾದರೋ ಪ್ರಭು ಭರವಸೆಯಿಟ್ಟಿರುವುದು ನಿನ್ನಲ್ಲೆ ||

ನುಚ್ಚು ನೂರಾದೆ, ಮಡಕೆಚಿಪ್ಪಿನಂತಾದೆ |
ಸತ್ತವರಂತಾದೆ : ನೆನಪಿಗೆ ಬಾರದಾದೆ ||
ನನಗೆ ವಿರುದ್ಧ ಜನರಾಡುವ ಗುಸುಗುಸು
ಮಾತು ಕೇಳಿ ಬರುತಿದೆ |
ಭಯಭೀತಿ ಎನ್ನನಾವರಿಸಿದೆ, ಒಳಸಂಚು,
ಪ್ರಾಣಹರಣ ನಡೆಯುತಿವೆ

ನಿನ್ನ ಕೈಯಲ್ಲಿದೆ ನನ್ನ ಇಡೀ
ಜೀವಮಾನ |
ಬೆನ್ನಟ್ಟಿ ಬರುವ ವೈರಿಯಂದ ರಕ್ಷಿಸೆನ್ನ ||
ಬೆಳಗಿಸಲಿ‌ ದಾಸನನು ನಿನ್ನ ಮುಖ ತೇಜವು |
ಕಾಪಾಡಲಿ ಎನ್ನನು ನಿನ್ನನಂತ ಪ್ರೇಮವು ||

ನಿನಗೆ ಮೊರೆಯಿಡುವೆ, ನನಗಾಗದಿರಲಿ
ಹೇ ಪ್ರಭು ಮಾನಭಂಗ |

ದುರುಳರಿಗಾಗಲಿ‌ ಆಶಾಭಂಗ ಮೂಕರಾಗವರು ಸೇರಲಿ ನರಕ |

ಎರಡನೇ ವಾಚನ: ಹಿಬ್ರಿಯರಿಗೆ 4:14-16, 5:7-9

ಸ್ವರ್ಗಲೋಕಕ್ಕೆ ಏರಿಹೋದ ದೇವರ ಪುತ್ರನಾದ ಯೇಸುವೇ ನಮಗೆ ಶ್ರೇಷ್ಠ ಹಾಗೂ ಪ್ರಧಾನಯಾಜಕ ಆಗಿರುವುದರಿಂದ ನಾವು ನಿವೇದಿಸುವ ವಿಶ್ವಾಸದಲ್ಲಿ ಸದೃಢರಾಗಿರೋಣ. ಈ ಪ್ರಧಾನ ಯಾಜಕ, ನಮ್ಮ ದೌರ್ಬಲ್ಯಗಳನ್ನು ಕಂಡು ಅನುಕಂಪ ತೋರದೆ ಇರುವವರಲ್ಲ. ಅವರು, ನಮ್ಮಂತೆಯೇ ಇದ್ದುಕೊಂಡು ಎಲ್ಲಾ ವಿಷಯಗಳಲ್ಲೂ ಶೋಧನೆ-ಸಂಕಟಗಳನ್ನು ಅನುಭವಿಸಿದರು. ಆದರೆ ಪಾಪವನ್ನು ಮಾತ್ರ ಮಾಡಲಿಲ್ಲ. ಆದಕಾರಣ, ನಾವು ಸಮಯೋಚಿತ ಸಹಾಯವನ್ನು ಅವರ ಅನುಗ್ರಹದಿಂದ ಪಡೆಯಲು ಮತ್ತು ಅವರ ಕರುಣೆಯನ್ನು ಸವಿಯಲು ಧೈರ್ಯದಿಂದ ಅವರ ಕೃಪಾಸನವನ್ನು ಸಮೀಪಿಸೋಣ. ಕ್ರಿಸ್ತಯೇಸು ಈ ಭೂಲೋಕದಲ್ಲಿದ್ದಾಗ, ತಮ್ಮನ್ನು ಮರಣದಿಂದ ಕಾಪಾಡಲು ಶಕ್ತರಾದ ದೇವರನ್ನು ಉಚ್ಚಸ್ವರದಿಂದ ಕೂಗುತ್ತಾ ಕಣ್ಣೀರಿಡುತ್ತಾ ವಿನಂತಿಸಿ ಪ್ರಾರ್ಥಿಸಿದರು. ಅವರ ಭಯಭಕ್ತಿಯನ್ನು ನೋಡಿ ದೇವರು ಅವರ ಮೊರೆಯನ್ನು ಆಲಿಸಿದರು. ಯೇಸು, ದೇವರ ಪುತ್ರರಾಗಿದ್ದರೂ ಹಿಂಸೆಬಾಧೆಗಳನ್ನು ತಪ್ಪಿಸಿಕೊಳ್ಳದೆ ವಿಧೇಯತೆಯನ್ನು ಅನುಭವದಿಂದ ಅರಿತುಕೊಂಡರು. ಹೀಗೆ, ಅವರು ಸ್ವತಃ ಪರಿಪೂರ್ಣರಾಗಿ ತಮಗೆ ವಿಧೇಯರಾಗುವ ಎಲ್ಲರಿಗೂ ಶಾಶ್ವತ ಜೀವೋದ್ಧಾರಕ್ಕೆ ಕಾರಣರಾದರು.

ಶುಭಸಂದೇಶ: ಯೊವಾನ್ನ 18:1-19:42


ಯೇಸುಸ್ವಾಮಿ ತಮ್ಮ ಶಿಷ್ಯರೊಡನೆ ಹೊರಟು, ಕೆದ್ರೋನ್ ಹಳ್ಳವನ್ನು ದಾಟಿ, ಅಲ್ಲೇ ಇದ್ದ ತೋಟವನ್ನು ಹೊಕ್ಕರು. ಅವರು ತಮ್ಮ ಶಿಷ್ಯರೊಡನೆ ಆಗಾಗ ಅಲ್ಲಿಗೆ ಬರುವುದು ವಾಡಿಕೆ. ಅವರನ್ನು ಹಿಡಿದುಕೊಡಲಿದ್ದ ಯೂದನಿಗೆ ಆ ಸ್ಥಳ ಚೆನ್ನಾಗಿ ಗೊತ್ತಿತ್ತು ಆದುದರಿಂದ ಯೂದನು ಸೈನಿಕರ ಒಂದು ತಂಡವನ್ನೂ ಮುಖ್ಯ ಯಾಜಕರು ಮತ್ತು ಫರಿಸಾಯರು ಕಳುಹಿಸಿದ ಕಾವಲಾಳುಗಳನ್ನೂ ಕರೆದುಕೊಂಡು ದೀವಟಿಗೆ, ಪಂಜು ಮತ್ತು ಆಯುಧಗಳ ಸಮೇತ ಅಲ್ಲಿಗೆ ಬಂದನು. ಯೇಸುಸ್ವಾಮಿಗೆ ತಮಗೆ ಸಂಭವಿಸಲಿರುವುದೆಲ್ಲವೂ ತಿಳಿದಿತ್ತು ಎಂದೇ ಮುಂದೆ ಬಂದು, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಿದರು. ಅವರು, “ನಜರೇತಿನ ಯೇಸುವನ್ನು” ಎಂದರು. ಯೇಸು, “ನಾನೇ ಆತನು” ಎಂದು ಉತ್ತರಕೊಟ್ಟರು. ಅವರನ್ನು ಹಿಡಿದುಕೊಡಲಿದ್ದ ಗುರುದ್ರೋಹಿ ಯೂದನು ಅವರ ಸಂಗಡವೇ ನಿಂತುಕೊಂಡಿದ್ದನು. “ನಾನೇ ಆತನು,” ಎಂದು ಯೇಸು ನುಡಿಯುತ್ತಲೇ, ಅವರೆಲ್ಲರೂ ಹಿಂದೆ ಸರಿದು ನೆಲದ ಮೇಲೆ ಬಿದ್ದರು. ಯೇಸು ಮತ್ತೊಮ್ಮೆ, “ನೀವು ಯಾರನ್ನು ಹುಡುಕುತ್ತಿದ್ದೀರಿ?” ಎಂದು ಕೇಳಲು, “ನಜರೇತಿನ ಯೇಸುವನ್ನು” ಎಂದು ಉತ್ತರ ಬಂದಿತು. ಅದಕ್ಕೆ ಯೇಸು, “ನಾನೇ ಆತನೆಂದು ನಿಮಗೆ ಆಗಲೇ ಹೇಳಿದೆ. ನೀವು ಹುಡುಕುತ್ತಾ ಇರುವುದು ನನ್ನನ್ನಾದರೆ, ಮಿಕ್ಕ ಇವರನ್ನು ಹೋಗಬಿಡಿ,” ಎಂದು ನುಡಿದರು. ‘ನೀವು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ಕಳೆದು ಕೊಳ್ಳಲಿಲ್ಲ’ ಎಂದು ತಾವೇ ನುಡಿದ ಮಾತು ನೆರವೇರುವಂತೆ ಯೇಸು ಹೀಗೆಂದರು ಅಷ್ಟರೊಳಗೆ ಸಿಮೋನ ಪೇತ್ರನು ತನ್ನಲ್ಲಿದ್ದ ಖಡ್ಗವನ್ನು ಹಿರಿದು, ಪ್ರಧಾನ ಯಾಜಕನ ಸೇವಕನಾದ ಮಾಲ್ಕನ ಬಲಗಿವಿಯನ್ನು ಕತ್ತರಿಸಿಬಿಟ್ಟನು. ಆಗ ಯೇಸು ಪೇತ್ರನಿಗೆ, “ನಿನ್ನ ಖಡ್ಗವನ್ನು ಒರೆಯಲ್ಲಿ ಹಾಕು. ನನ್ನ ಪಿತನೇ ಕೊಟ್ಟಿರುವ ಕಷ್ಟದ ಕೊಡವಿದು; ಇದರಲ್ಲಿರುವುದನ್ನು ನಾನು ಕುಡಿಯದೆ ಹೋದರೆ ಹೇಗೆ?” ಎಂದು ನುಡಿದರು.

ಅನ್ನನ ಮುಂದೆ ಯೇಸು ಅನಂತರ ಸೈನಿಕರು, ಸಹಸ್ರಾಧಿಪತಿ ಹಾಗು ಯೆಹೂದ್ಯರು ಕಳುಹಿಸಿದ್ದ ಕಾವಲಾಳುಗಳು ಯೇಸುವನ್ನು ಹಿಡಿದು ಕಟ್ಟಿ ಮೊದಲು ಅನ್ನನ ಬಳಿಗೆ ಕೊಂಡೊಯ್ದರು. ಅನ್ನನು, ಆ ವರ್ಷ ಪ್ರಧಾನ ಯಜಕನಾಗಿದ್ದ ಕಾಯಫನ ಮಾವ. ಸಮಸ್ತ ಜನತೆಗಾಗಿ ಒಬ್ಬನು ಸತ್ತರೆ ವಿಹಿತವೆಂದು ಸಲಹೆ ಕೊಟ್ಟವನು ಈ ಕಾಯಫನೇ. ಗುರುವನ್ನು ಅಲ್ಲಗಳೆದ ಪೇತ್ರ ಸಿಮೋನ್ ಪೇತ್ರನು ಮತ್ತು ಪ್ರಧಾನ ಯಾಜಕನಿಗೆ ಪರಿಚಿತನಾಗಿದ್ದ ಇನ್ನೊಬ್ಬ ಶಿಷ್ಯನು ಯೇಸುಸ್ವಾಮಿಯನ್ನು ಹಿಂಬಾಲಿಸುತ್ತಾ ಹೋದರು. ಪರಿಚಿತನಾಗಿದ್ದ ಶಿಷ್ಯನು ಯೇಸುವಿನೊಡನೆ ಪ್ರಧಾನ ಯಾಜಕನ ಮನೆಯ ಅಂಗಳವನ್ನು ಹೊಕ್ಕನು. ಪೇತ್ರನು ಹೊರಗಡೆ ಬಾಗಿಲ ಬಳಿಯಲ್ಲೇ ನಿಂತನು. ಪರಿಚಿತನಾಗಿದ್ದವನು ಅನಂತರ ಹೊರಗೆ ಬಂದು ದ್ವಾರಪಾಲಕಿಗೆ ಹೇಳಿ ಪೇತ್ರನನ್ನು ಒಳಕ್ಕೆ ಕರೆದುಕೊಂಡು ಹೋದನು. ಆ ದ್ವಾರಪಾಲಕಿಯು ಪೇತ್ರನನ್ನು ನೋಡಿ, “ನೀನೂ ಯೇಸುವಿನ ಶಿಷ್ಯರಲ್ಲಿ ಒಬ್ಬನಲ್ಲವೆ?” ಎಂದು ಕೇಳಿದಳು. ಅದಕ್ಕೆ ಪೇತ್ರನು, “ಇಲ್ಲ, ನಾನಲ್ಲ,” ಎಂದುಬಿಟ್ಟನು. ಆಗ ಚಳಿಯಿದ್ದುದರಿಂದ ಸೇವಕರೂ ಕಾವಲಾಳುಗಳೂ ಇದ್ದಲಿನ ಬೆಂಕಿ ಮಾಡಿ, ಸುತ್ತಲೂ ನಿಂತು ಚಳಿಕಾಯಿಸಿಕೊಳ್ಳುತ್ತಿದ್ದರು. ಪೇತ್ರನೂ ಅವರ ಸಂಗಡ ನಿಂತುಕೊಂಡು ಚಳಿಕಾಯಿಸಿಕೊಳ್ಳತೊಡಗಿದನು. ಅಷ್ಟರಲ್ಲಿ ಪ್ರಧಾನಯಾಜಕನು ಯೇಸುಸ್ವಾಮಿಯನ್ನು ಅವರ ಶಿಷ್ಯರ ವಿಷಯವಾಗಿ ಹಾಗು ಬೋಧನೆಯ ವಿಷಯವಾಗಿ ವಿಚಾರಿಸಿದನು.

ಮನಸ್ಸಿಗೊಂದಿಷ್ಟು :  ಪಾದ ತೊಳೆದು ದೀನತೆಯನ್ನು ಮೆರೆದ ಯೇಸು, ಈಗ ತಮ್ಮ ಹಿಡಿಯ ಬಂದವರ ಮುಂದೆ ತೋರುವ ಅಧಿಕಾರಯುತ ವರ್ತನೆಗೆ ಕಾರಣವಾದರು ಏನು? ಎರಡೂ ಭಾವಗಳ ಹಿಂದಿನ ಸ್ಫೂರ್ತಿ ಸೆಲೆ ಪ್ರೀತಿಯೇ. ಅಡಗಿ ಕುಳಿತ್ತಿರಬಹುದು ಎಂದುಕೊಂಡು ಬಂದ ಸೈನಿಕರನ್ನು ಯೇಸು ದೈರ್ಯವಾಗಿ ಎದುರಿಸುತ್ತಾರೆ. "ನಾನೇ ಯೇಸು" ಎನ್ನುತ್ತಾರೆ, "ಶಿಷ್ಯರನ್ನು ಬಿಡಿ" ಎನ್ನುತ್ತಾರೆ, "ಈ ರೀತಿ ಬರಬೇಕಾಗಿತ್ತೇ" ಎಂದು ವ್ಯಂಗ್ಯವಾಗಿ ಕೇಳುತ್ತಾರೆ. ಒಟ್ಟಿನಲ್ಲಿ ಕೆಲವೇ ಘಂಟೆಗಳಲ್ಲಿನ ಸಾವು ನೋವು  ಅವರನ್ನು ವಿಚಲಿತರನ್ನಾಗಿಸಿಲ್ಲ. ಅದು ತಾವು ಮಾಡಬೇಕಾದ ಕಾರ್ಯದ ಕಡೆಗಿನ ಪ್ರೀತಿ, ಕಾರ್ಯವನ್ನು ವಹಿಸಿದ ಪಿತನ ಮೇಲಿನ ಪ್ರೀತಿ, ತಾವು ಪ್ರಾಣ ನೀಡಬೇಕಾಗಿರುವ ಮಾನವನ  ಮೇಲಿನ ಪ್ರೀತಿ. ಈ ಕಷ್ಟದ ಸಮಯದಲ್ಲೂ ಪ್ರೀತಿ ಬರಿದಾಗಲಿಲ್ಲ .   

ಇತ್ತ ಯೇಸು ಜೊತೆಗಿದ್ದಾಗ ಇಡೀ ಗುಂಪನ್ನೇ ಎದುರು ಹಾಕಿಕೊಳ್ಳುವಷ್ಟು   ಧೈರ್ಯ ತೋರಿದ ಪೇತ್ರ, ನಂತರ ಒಬ್ಬ ದ್ವಾರಪಾಲಕಿಯ ಮುಂದೆ ಧೈರ್ಯ ಕಳೆದುಕೊಳ್ಳುತ್ತಾನೆ. 

ಯೇಸು ಸದಾ ನಮ್ಮೊಡನಿರಲಿ.

ಪ್ರಶ್ನೆ : ನಿಜಕ್ಕೂ ನಮ್ಮ ಮನ ಯೇಸುವಿನ ಯಾತನೆಯ ಧ್ಯಾನ ಮಾಡುತ್ತಿದೆಯೇ?

ಪ್ರಭುವೇ,
ತಾವಾಗಿಯೇ ಒಪ್ಪಿಸಿಕೊಂಡಿರಿ
ವೈರಿಗಳ ಮುಂದೆ
ಪಡೆಯಲೆಂದು ಪಾಪ ಪರಿಹಾರವ 
ನಿಮ್ಮ ಮಂದೆ
ದುಗುಡವಿಲ್ಲ ಬರಲಾಗದಿದ್ದರೂ 
ಯಾರೂ ನಿಮ್ಮ ಹಿಂದೆ
ಭರವಸೆ ಸದಾ 
ಜೊತೆಗಿರುವರೆಂದು ತಂದೆ
ನಮ್ಮದೋ ನಿಮ್ಮಿಂದಲೇ 
ತಪ್ಪಿಸಿಕೊಳ್ಳುವ ಹುನ್ನಾರ
ದುಗುಡವಿಲ್ಲ ಕಂಡೂ ಕಂಡೂ
ನಿಮ್ಮ ಆ ಹಿಂಸೆ ನೋವ 
ಪೇತ್ರನಂತೆ ಅರಿಯಲಾರೆ 
ಎನ್ನುತ್ತಲೇ ಇರುವೆನಲ್ಲ 
ಮಿಡಿಯಲಿ ನಿಮಗಾಗಿ 
ನಮ್ಮ ಈ ಮನ
ನುಡಿ ನಡೆಯಲ್ಲಿ 
ಮಾಡುತ್ತಿರಲಿ 
ನಿಮ್ಮ ಶಿಲುಬೆಯ ಸನ್ಮಾನ     

No comments:

Post a Comment