ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

27.03.21 - “ಇಡೀ ರಾಷ್ಟ್ರವೇ ನಿರ್ನಾಮವಾಗುವುದಕ್ಕಿಂತ ಜನತೆಗೋಸ್ಕರ ಒಬ್ಬನು ಸಾಯುವುದೇ ವಿಹಿತವೆಂದು ನಿಮಗೆ ಅರ್ಥವಾಗುತ್ತಿಲ್ಲವಲ್ಲಾ,”

ಮೊದಲನೇ ವಾಚನ: ಯೆಜೆಕಿಯೇಲ 37:21-28

ಸರ್ವೇಶ್ವರ ಇನ್ನೊಂದು ವಾಣಿಯನ್ನು ನನಗೆ ದಯಪಾಲಿಸಿದರು: "ನರಪುತ್ರನೇ, ಇದನ್ನು ಅವರಿಗೆ ನುಡಿ. ‘ಸರ್ವೇಶ್ವರನಾದ ದೇವರು ಇಂತೆನ್ನುತ್ತಾರೆ: ಇಗೋ, ಇಸ್ರಯೇಲರು ವಶವಾಗಿರುವ ಜನಾಂಗಗಳಿಂದ ನಾನು ಅವರನ್ನು ಉದ್ಧರಿಸಿ, ಎಲ್ಲ ಕಡೆಯಿಂದಲು ಒಟ್ಟುಗೂಡಿಸಿ, ಸ್ವದೇಶಕ್ಕೆ ಕರೆದು ತರುವೆನು. ಅಲ್ಲಿ ಇಸ್ರಯೇಲಿನ ಪರ್ವತಗಳ ಮೇಲೆ, ಒಂದೇ ಜನಾಂಗವನ್ನಾಗಿ ಮಾಡುವೆನು; ಒಬ್ಬನೇ ಅವರೆಲ್ಲರಿಗೂ ರಾಜನಾಗಿರುವನು; ಅವರು ಇನ್ನೆಂದಿಗೂ ಎರಡು ಜನಾಂಗದವರಾಗಿರರು; ಭಿನ್ನರಾಜ್ಯದವರಾಗಿ ಇರರು. ತಮ್ಮ ವಿಗ್ರಹಗಳಿಂದಾಗಲಿ, ಅಸಹ್ಯ ವಸ್ತುಗಳಿಂದಾಗಲಿ, ಯಾವ ದುರಾಚಾರದಿಂದಲೇ ಆಗಲಿ, ತಮ್ಮನ್ನು ಇನ್ನು ಮುಂದೆ ಹೊಲೆಗೆ ಹೊಯ್ದುಕೊಳ್ಳರು. ಅವರು ಪಾಪ ಮಾಡಿಮಾಡಿ ಸಿಕ್ಕಿಬಿದ್ದ ದೇವದ್ರೋಹದಿಂದೆಲ್ಲಾ ನಾನು ಅವರನ್ನು ಉದ್ಧರಿಸಿ ಶುದ್ಧೀಕರಿಸುವೆನು; ಅವರು ನನಗೆ ಪ್ರಜೆಯಾಗಿರುವರು, ನಾನು ಅವರಿಗೆ ದೇವರಾಗಿರುವೆನು. ನನ್ನ ದಾಸ ದಾವೀದನು ಅವರಿಗೆ ರಾಜನಾಗಿರುವನು; ಅವರೆಲ್ಲರಿಗು ಒಬ್ಬನೇ ಪಾಲಕನಿರುವನು; ಅವರು ನನ್ನ ನಿಯಮಗಳನ್ನು ಅನುಸರಿಸಿ, ನನ್ನ ವಿಧಿಗಳನ್ನು ಕೈಕೊಂಡು ಆಚರಿಸುವರು. ನನ್ನ ದಾಸ ಯಕೋಬನಿಗೆ ನಾನು ದಯಪಾಲಿಸಿದ ನಾಡಿನಲ್ಲಿ ಅವರು ವಾಸಿಸುವರು. ಹೌದು, ನಿಮ್ಮ ಪಿತೃಗಳು ವಾಸಿಸಿದ ನಾಡಿನಲ್ಲಿ ಅವರೂ ಅವರ ಸಂತಾನದವರೂ ತಲತಲಾಂತರವಾಗಿ ವಾಸಿಸುವರು; ನನ್ನ ದಾಸ ದಾವೀದನು ಅವರಿಗೆ ಸದಾ ಪ್ರಭುವಾಗಿರುವನು. ನಾನು ಅವರೊಂದಿಗೆ ಶಾಂತಿಸಮಾಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಅದು ಶಾಶ್ವತವಾಗಿರುವುದು. ನಾನು ಅವರನ್ನು ನೆಲೆಗೊಳಿಸಿ, ವೃದ್ಧಿಮಾಡಿ, ನನ್ನ ಪವಿತ್ರಾಲಯವನ್ನು ಅವರ ನಡುವೆ ಯುಗಯುಗಾಂತರಕ್ಕೂ ನಿಲ್ಲಿಸುವೆನು. ಹೌದು, ನನ್ನ ವಾಸಸ್ಥಾನವು ಅವರ ಮಧ್ಯೆಯಿರುವುದು; ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು. ನನ್ನ ಪವಿತ್ರಾಲಯ ಅವರ ಮಧ್ಯೆ ಶಾಶ್ವತವಾಗಿರಲು ಇಸ್ರಯೇಲನ್ನು ವಿೂಸಲು ಮಾಡಿಕೊಂಡಾತ ಸರ್ವೇಶ್ವರ ನಾನೇ ಎಂದು ಜನಾಂಗಗಳಿಗೆ ತಿಳಿದುಬರುವುದು”.

ಯೆರೆಮೀಯ: 31:10, 11, 12, 13
ಶ್ಲೋಕ: ಕುರಿಮಂದೆಯನ್ನು ಕಾಯುವ ಕುರುಬನಂತೆ,
ಅವರನ್ನು ಕೂಡಿಸಿ ಕಾಪಾಡುವನೆಂದು ಪ್ರಕಟಿಸಿರಿ

ಎನ್ನನುದ್ಧರಿಸು ಪ್ರಭು, ನಿನ್ನ ನೀತಿಗನುಸಾರ
ನಿನ್ನ ಶರಣನಾದೆ ನನಗಾಗದಿರಲಿ ತಾತ್ಸಾರ
ಕರಗುತ್ತಿದೆ ಬದುಕು ತಾಪದಲಿ; ಕುಂದುತ್ತಿದೆ ಶಕ್ತಿ ಪಾಪದಲಿ |
ಸವೆದು ಹೋಗುತ್ತವೆ ನನ್ನ ದೇಹದೆಲುಬುಗಳು ಕಾಲ ಚಕ್ರದಲಿ ||

ಶತ್ರುಗಳ ದೂಷಣೆಗೆ ಗುರಿಯಾದೆ,
ನೆರೆಯವರಿಗೆ ನಿಂದಾಸ್ಪದನಾದೆ |
ಮಿತ್ರರೂ ಬೆದರುವಂತಾದೆ;
ದಾರಿಹೋಕರು ದೂರವಾಗುವಂತಾದೆ ||

ನುಚ್ಚು ನೂರಾದೆ, ಮಡಕೆಚಿಪ್ಪಿನಂತಾದೆ |
ಸತ್ತವರಂತಾದೆ : ನೆನಪಿಗೆ ಬಾರದಾದೆ ||
ನನಗೆ ವಿರುದ್ಧ ಜನರಾಡುವ ಗುಸುಗುಸು
ಮಾತು ಕೇಳಿ ಬರುತಿದೆ |
ಭಯಭೀತಿ ಎನ್ನನಾವರಿಸಿದೆ, ಒಳಸಂಚು,
ಪ್ರಾಣಹರಣ ನಡೆಯುತಿವೆ ||

ಶುಭಸಂದೇಶ: ಯೊವಾನ್ನ 11:45-57


ಮರಿಯಳನ್ನು ನೋಡಲು ಬಂದಿದ್ದ ಹಲವು ಮಂದಿ ಯೆಹೂದ್ಯರು ನಡೆದ ಸಂಗತಿಯನ್ನು ನೋಡಿ ಯೇಸುವನ್ನು ವಿಶ್ವಾಸಿಸಿದರು. ಕೆಲವರಾದರೋ ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ್ದೆಲ್ಲವನ್ನೂ ತಿಳಿಸಿದರು. ಮುಖ್ಯ ಯಾಜಕರೂ ಫರಿಸಾಯರೂ ‘ನ್ಯಾಯಸಭೆ’ಯನ್ನು ಕರೆದರು. “ಈಗ ನಾವೇನು ಮಾಡೋಣ? ಈ ಮನುಷ್ಯನು ಎಷ್ಟೋ ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ; ಇವನನ್ನು ಹೀಗೆಯೇ ಬಿಟ್ಟರೆ ಜನರೆಲ್ಲರೂ ಇವನನ್ನೇ ನಂಬುವರು. ರೋಮನರು ಬಂದು ನಮ್ಮ ಪವಿತ್ರ ದೇವಾಲಯವನ್ನೂ ರಾಷ್ಟ್ರವನ್ನೂ ನೆಲಸಮ ಮಾಡುವರು,” ಎಂದು ವಾದಿಸಿದರು. ಆ ವರ್ಷ ಪ್ರಧಾನ ಯಾಜಕನಾಗಿದ್ದ ಕಾಯಫನು, “ಇಡೀ ರಾಷ್ಟ್ರವೇ ನಿರ್ನಾಮವಾಗುವುದಕ್ಕಿಂತ ಜನತೆಗೋಸ್ಕರ ಒಬ್ಬನು ಸಾಯುವುದೇ ವಿಹಿತವೆಂದು ನಿಮಗೆ ಅರ್ಥವಾಗುತ್ತಿಲ್ಲವಲ್ಲಾ,” ಎಂದು ನುಡಿದನು. ಇದನ್ನು ಅವನು ತಾನಾಗಿಯೇ ಹೇಳಲಿಲ್ಲ. ಆ ವರ್ಷ ಆತನು ಪ್ರಧಾನ ಯಾಜಕನಾಗಿದ್ದ ಕಾರಣ, ಯೇಸು ಜನತೆಗಾಗಿ ಪ್ರಾಣತ್ಯಾಗ ಮಾಡಲಿದ್ದಾರೆ ಎಂದು ಹೀಗೆ ಪ್ರವಾದಿಸಿದನು. ಆ ಜನತೆಗಾಗಿ ಮಾತ್ರವಲ್ಲ, ಚದರಿಹೋಗಿದ್ದ ದೇವಜನರನ್ನು ಒಂದುಗೂಡಿಸುವ ಸಲುವಾಗಿಯೂ ಪ್ರಾಣತ್ಯಾಗ ಮಾಡಲಿದ್ದಾರೆಂಬುದು ಆ ಮಾತಿನ ಇಂಗಿತ. ಅಂದಿನಿಂದಲೇ ಯೆಹೂದ್ಯ ಅಧಿಕಾರಿಗಳು ಯೇಸುವನ್ನು ಕೊಲ್ಲಬೇಕೆಂದು ನಿರ್ಧಾರ ಮಾಡಿಕೊಂಡರು. ಎಂದೇ ಯೇಸು ಜುದೇಯದಲ್ಲಿ ಬಹಿರಂಗವಾಗಿ ಓಡಾಡುವುದನ್ನು ಕೈಬಿಟ್ಟರು. ಬೆಂಗಾಡಿನ ಪಕ್ಕದಲ್ಲಿದ್ದ ಪ್ರದೇಶಕ್ಕೆ ತೆರಳಿ ಎಫ್ರಯಿಮ್ ಎಂಬ ಗ್ರಾಮದಲ್ಲಿ ತಮ್ಮ ಶಿಷ್ಯರ ಸಂಗಡ ತಂಗಿದರು. ಆಗ ಯೆಹೂದ್ಯರ ಪಾಸ್ಕಹಬ್ಬವು ಸಮೀಪಿಸಿತ್ತು. ಹಬ್ಬಕ್ಕೆ ಮುಂಚೆ ನಡೆಯುವ ಶುದ್ದೀಕರಣಕ್ಕಾಗಿ ಹಲವರು ಜೆರುಸಲೇಮಿಗೆ ಗ್ರಾಮಾಂತರ ಪ್ರದೇಶಗಳಿಂದ ಮೊದಲೇ ಬಂದಿದ್ದರು. ಯೇಸುವನ್ನು ನೋಡಬೇಕೆಂಬ ಆಸೆ ಅವರಿಗಿತ್ತು. “ಆತ ಹಬ್ಬಕ್ಕೆ ಬರುತ್ತಾನೋ ಇಲ್ಲವೋ ನಿಮ್ಮ ಎಣಿಕೆ ಏನು?” ಎಂದು ಮಹಾದೇವಾಲಯದಲ್ಲಿ ತಮ್ಮತಮ್ಮೊಳಗೆ ವಿಚಾರಿಸಿಕೊಳ್ಳುತ್ತಿದ್ದರು. ಯೇಸುವನ್ನು ಬಂಧಿಸುವ ಉದ್ದೇಶದಿಂದ ಮುಖ್ಯಯಾಜಕರೂ ಫರಿಸಾಯರೂ ಆತನ ಸುಳಿವು ಯಾರಿಗಾದರೂ ಸಿಕ್ಕಿದ್ದೇ ಆದರೆ ತಮಗೆ ತಿಳಿಸಬೇಕೆಂದು ಆಜ್ಞೆ ಹೊರಡಿಸಿದ್ದರು.

ಮನಸ್ಸಿಗೊಂದಿಷ್ಟು : ಯೇಸುವಿನ ಮರಣದ ಬಗ್ಗೆ ಶತ್ರು ಕಾಯಿಫನೇ ಪ್ರವಾದಿಸುವಂತೆ ದೇವರ ಚಿತ್ತವಾಗಿರುವುದನ್ನು ಕಾಣುತ್ತೇವೆ. ದೇವರ ಸಾಧನವಾಗುವುದು ಎಲ್ಲರಿಗೂ ಸಾಧ್ಯ. ನಾವೂ ಸಹ ದೇವರ ಸಾಧನಗಳಾಗುವ ಅವಕಾಶವಿದೆ. ಆ ಅವಕಾಶಕ್ಕಾಗಿ ಹಾತೊರೆಯೋಣ. "ಎನ್ನನುದ್ಧರಿಸು ಪ್ರಭು, ನಿನ್ನ ನೀತಿಗನುಸಾರ" ಎಂಬ ಇಂದಿನ ಕೀರ್ತನೆ ನಮ್ಮ ಬಾಳಿನ ಧ್ಯೇಯವಾಗಲಿ.

ಪ್ರಶ್ನೆ : ಪ್ರಭುವಿನ ನೀತಿ ನಮ್ಮ ಬಾಳಿನ ರೀತಿಯಾಗಿದೆಯೇ?

ಪ್ರಭುವೇ,
ನಿನ್ನ ನೀತಿಗನುಸಾರ
ಬಾಳುವುದಾಗಲಿ
ನನ್ನ ಬಾಳ ಸಾರ
ನಿನ್ನ ರೀತಿಗನುಸಾರ
ನಡೆವುದಾಗಲಿ
ಗಮ್ಯ ಅದೆಷ್ಟೇ ಇದ್ದರು ದೂರ
ಕ್ಷಣ ಕ್ಷಣವೂ ಆಗುತ್ತಾ
ನಿನ್ನ ಸಾಧನ
ನಲಿಯಲಿ ಈ ಮನ
ನಿತ್ಯ ನೂತನ

No comments:

Post a Comment