ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 20:28-38
ಪೌಲನು ಎಫೆಸದ ಸಭೆಯ ಹಿರಿಯರನ್ನು ಉದ್ದೇಶಿಸಿ ಮಾತನಾಡುತ್ತಾ ಹೀಗೆಂದನು: "ನೀವು ನಿಮ್ಮ ವಿಷಯದಲ್ಲಿ ಹಾಗೂ ಪವಿತ್ರಾತ್ಮ ನಿಮ್ಮ ಪಾಲನೆಗೆ ವಹಿಸಿರುವ ಮಂದೆಯ ವಿಷಯದಲ್ಲಿ ಜಾಗರೂಕರಾಗಿರಿ. ಪ್ರಭು ತಮ್ಮ ಸ್ವಂತ ರಕ್ತ ಸುರಿಸಿ ಸಂಪಾದಿಸಿದ ಧರ್ಮಸಭೆಗೆ ಉತ್ತಮ ಕುರಿಗಾಹಿಗಳಾಗಿರಿ. ನಾನು ಹೋದ ಬಳಿಕ ಕ್ರೂರವಾದ ತೋಳಗಳು ನಿಮ್ಮ ಮಧ್ಯೆ ನುಗ್ಗುವುವು ಎಂದು ನಾನು ಬಲ್ಲೆ. ಅವು ಮಂದೆಗೆ ಹಾನಿಮಾಡದೆ ಬಿಡವು. ಇದಲ್ಲದೆ ನಿಮ್ಮಲ್ಲೇ ಕೆಲವರು ಎದ್ದು ಭಕ್ತವಿಶ್ವಾಸಿಗಳನ್ನು ತಮ್ಮ ಕಡೆ ಸೆಳೆದುಕೊಳ್ಳಲು ಅಸತ್ಯವಾದವುಗಳನ್ನು ಹೇಳುವರು. ಆದುದರಿಂದ ಎಚ್ಚರಿಕೆ! ನಾನು ಮೂರು ವರ್ಷಗಳ ಕಾಲ ಹಗಲಿರುಳು ಕಣ್ಣೀರಿಡುತ್ತಾ ಪ್ರತಿಯೊಬ್ಬನಿಗೂ ಬುದ್ಧಿ ಹೇಳಿದ್ದೇನೆಂಬುದನ್ನು ಮರೆಯಬೇಡಿ. “ಈಗ ನಿಮ್ಮನ್ನು ದೇವರ ಕೈಗೂ, ಅವರ ಅನುಗ್ರಹ ಸಂದೇಶಕ್ಕೂ ಒಪ್ಪಿಸಿಕೊಡುತ್ತೇನೆ. ಅದು ನಿಮ್ಮನ್ನು ಅಭಿವೃದ್ಧಿಗೊಳಿಸಬಲ್ಲದು. ಮಾತ್ರವಲ್ಲ, ಪಾವನ ಪುರುಷರ ಬಾಧ್ಯತೆಯಲ್ಲಿ ಭಾಗಿಗಳಾಗುವಂತೆ ಮಾಡಬಲ್ಲದು. ನಾನು ಯಾರ ಬೆಳ್ಳಿ ಬಂಗಾರಕ್ಕೂ ಬಟ್ಟೆಬರೆಗೂ ಆಶೆಪಟ್ಟವನಲ್ಲ. ನನ್ನ ಹಾಗೂ ನನ್ನ ಸಂಗಡಿಗರ ಅವಶ್ಯಕತೆಗಳನ್ನು ನೀಗಿಸಲು ಈ ಕೈಗಳೇ ದುಡಿದಿವೆಯೆಂಬುದು ನಿಮ್ಮೆಲ್ಲರಿಗೂ ತಿಳಿದಿದೆ. ಹೀಗೆ ಕಷ್ಟಪಟ್ಟು ದುಡಿದು, ದುರ್ಬಲರಿಗೆ ನೆರವಾಗಬೇಕೆಂದು ನಾನು ನಿಮಗೆ ಹಲವಾರು ವಿಧದಲ್ಲಿ ತೋರಿಸಿಕೊಟ್ಟಿದ್ದೇನೆ. ‘ಕೊಳ್ಳುವ ಕೈಗಿಂತ ಕೊಡುವ ಕೈ ಧನ್ಯವಾದುದು’ ಎಂಬ ಯೇಸುಸ್ವಾಮಿಯ ಮಾತುಗಳನ್ನು ನೆನಪಿನಲ್ಲಿಡಿ.” ಇಷ್ಟು ಹೇಳಿದ ಮೇಲೆ ಪೌಲನು ಅವರೆಲ್ಲರ ಸಂಗಡ ಮೊಣಕಾಲೂರಿ ಪ್ರಾರ್ಥನೆ ಮಾಡಿದನು. ಅನಂತರ ಅವರು ಅವನನ್ನು ತಬ್ಬಿಕೊಂಡು ಮುದ್ದಿಟ್ಟು ಬೀಳ್ಕೊಟ್ಟರು. ಅವರ ಕಣ್ಣಲ್ಲಾದರೋ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ‘ಇನ್ನೆಂದೂ ನೀವು ನನ್ನ ಮುಖವನ್ನು ಕಾಣಲಾರಿರಿ,’ ಎಂಬ ಅವನ ಮಾತು ಅವರನ್ನು ಅತೀವ ದುಃಖಕ್ಕೆ ಈಡುಮಾಡಿತ್ತು. ಅವರು ಹಡಗಿನವರೆಗೂ ಹೋಗಿ ಅವನನ್ನು ಬೀಳ್ಕೊಟ್ಟರು.
ಕೀರ್ತನೆ: 68:29-30, 33-35, 35-36
ಶ್ಲೋಕ: ಭೂರಾಜ್ಯಗಳೇ, ಸ್ತುತಿಸಿರಿ ದೇವರನು!
ವಸತಿಯಾಯಿತದು ನಿನ್ನ
ಜನಮಂದೆಗೆ I
ಆಸ್ಥೆಯಿಂದೊದಗಿಸಿದೆ
ದೀನ ದಲಿತರಿಗೆ II
ಹೊರಡಿಸಿದನು ಪ್ರಭು
ಶುಭವಾರ್ತೆಯೊಂದನು I
ಹರಡಿತು ಜನಸ್ತೋಮ ಆ
ಸಂದೇಶವನು II
ನಮ್ಮ ದೇವರು
ಜೀವೋದ್ಧಾರಕ ದೇವರು ಹೌದು I
ಸಾವಿಂದ ತಪ್ಪಿಸುವ
ಶಕ್ತಿ, ಸ್ವಾಮಿ ದೇವರದು II
ಸಂಹರಿಸುವನಾತನು
ಶತ್ರುಗಳಾ ಶಿರಸ್ಸನು I
ನಸುಕುವನು
ದುರ್ಮಾರ್ಗಿಗಳ ಕೇಶ ಕಿರೀಟವನು II
ಶುಭಸಂದೇಶ: ಯೊವಾನ್ನ 17:11-19
ಯೇಸುಸ್ವಾಮಿ ಆಕಾಶದತ್ತ ಕಣ್ಣೇತ್ತಿ ಹೀಗೆಂದು ಪ್ರಾರ್ಥಿಸಿದರು: ಪವಿತ್ರ ಪಿತನೇ, ನಾವು ಒಂದಾಗಿರುವಂತೆ ನೀವು ನನಗೆ ಕೊಟ್ಟಿರುವ ಇವರೂ ಒಂದಾಗಿರುವ ಹಾಗೆ ನಿಮ್ಮ ನಾಮದ ಶಕ್ತಿಯಿಂದ ಇವರನ್ನು ಸುರಕ್ಷಿತವಾಗಿರಿಸಿರಿ. ನಾನು ಇವರೊಡನೆ ಇದ್ದಾಗ ಇವರನ್ನು ಕಾಪಾಡಿದೆನು. ನೀವಿತ್ತ ಇವರನ್ನು ನಿಮ್ಮ ನಾಮದ ಶಕ್ತಿಯಿಂದ ಸುರಕ್ಷಿತವಾಗಿ ನೋಡಿಕೊಂಡು ಬಂದೆನು. ಪವಿತ್ರಗ್ರಂಥದ ಮಾತು ನೆರವೇರುವಂತೆ ವಿನಾಶಕ್ಕೆ ಗುರಿಯಾಗಬೇಕಿದ್ದ ಒಬ್ಬನನ್ನು ಬಿಟ್ಟರೆ, ಇವರಲ್ಲಿ ಬೇರೆ ಯಾರೂ ನಾಶವಾಗಲಿಲ್ಲ. ಈಗ ನಾನು ನಿಮ್ಮ ಬಳಿಗೆ ಬರುತ್ತಿದ್ದೇನೆ. ನನ್ನ ಆನಂದವು ಅವರ ಹೃದಯದಲ್ಲಿ ತುಂಬಿ ತುಳುಕುವಂತೆ ಈ ಲೋಕದಲ್ಲಿರುವಾಗಲೇ ಇವುಗಳನ್ನು ಹೇಳುತ್ತಿದ್ದೇನೆ. ನಿಮ್ಮ ಸಂದೇಶವನ್ನು ಇವರಿಗೆ ತಿಳಿಸಿದ್ದೇನೆ. ನಾನು ಲೋಕಕ್ಕೆ ಸೇರಿದವನಲ್ಲ. ಅಂತೆಯೇ, ಇವರೂ ಲೋಕಕ್ಕೆ ಸೇರಿದವರಲ್ಲ. ಈ ಕಾರಣ, ಲೋಕಕ್ಕೆ ಇವರ ಮೇಲೆ ದ್ವೇಷವಿದೆ. ಇವರನ್ನು ಲೋಕದಿಂದ ತೆಗೆದುಬಿಡಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತಿಲ್ಲ. ಆದರೆ ಕೇಡಿಗನಿಂದ ಇವರನ್ನು ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಾನು ಲೋಕಕ್ಕೆ ಹೇಗೆ ಸೇರಿದವನಲ್ಲವೋ ಹಾಗೆಯೇ ಇವರೂ ಲೋಕಕ್ಕೆ ಸೇರಿದವರಲ್ಲ. ಇವರನ್ನು ಸತ್ಯಸಂಧರನ್ನಾಗಿಸಿ ನಿಮ್ಮ ಸೇವೆಗೆ ಮೀಸಲಾಗಿಡಿ. ನಿಮ್ಮ ಮಾತೇ ಸತ್ಯ. ನೀವು ನನ್ನನ್ನು ಲೋಕಕ್ಕೆ ಕಳಿಸಿದಂತೆ ನಾನು ಇವರನ್ನು ಲೋಕಕ್ಕೆ ಕಳಿಸಿದ್ದೇನೆ. ಸತ್ಯಸಂಧರಾಗಿ ಇವರು ನಿಮ್ಮ ಸೇವೆಗೆ ಮೀಸಲಾಗಬೇಕೆಂದು ನನ್ನನ್ನು ನಾನೇ ಮೀಸಲಾಗಿಸಿಕೊಂಡಿದ್ದೇನೆ.
No comments:
Post a Comment