ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 18:1-8
ಪೌಲನು ಅಥೆನ್ಸ್ ಅನ್ನು ಬಿಟ್ಟು ಕೊರಿಂಥಕ್ಕೆ ಹೋದನು. ಪೊಂತ ಎಂಬ ಊರಿನ ಅಕ್ವಿಲ ಎಂಬ ಯೆಹೂದ್ಯನನ್ನು ಅಲ್ಲಿ ಕಂಡನು. ಚಕ್ರವರ್ತಿ ಕ್ಲಾಡಿಯಸನು ಯೆಹೂದ್ಯರೆಲ್ಲರೂ ರೋಮ್‍ನಗರವನ್ನು ಬಿಟ್ಟುಹೋಗಬೇಕೆಂದು ಆಜ್ಞಾಪಿಸಿದ್ದರಿಂದ, ಈ ಅಕ್ವಿಲನು ತನ್ನ ಪತ್ನಿ ಪ್ರಿಸ್ಸಿಲಳೊಂದಿಗೆ ಇಟಲಿಯಿಂದ ಇತ್ತೀಚೆಗೆ ಬಂದಿದ್ದನು. ಪೌಲನು ಅವರನ್ನು ನೋಡಲು ಹೋದನು. ಅವರು ತನ್ನಂತೆಯೇ ಗುಡಾರ ಮಾಡುವ ಕಸುಬಿನವರಾಗಿದ್ದರಿಂದ ಅವರಲ್ಲೇ ತಂಗಿದ್ದು ಅವರೊಡನೆ ಕೆಲಸ ಮಾಡುತ್ತಾ ಬಂದನು. ಪ್ರತಿ ಸಬ್ಬತ್ ದಿನ ಅವನು ಪ್ರಾರ್ಥನಾಮಂದಿರದಲ್ಲಿ ಚರ್ಚಿಸುತ್ತಾ ಯೆಹೂದ್ಯರನ್ನು ಮತ್ತು ಗ್ರೀಕರನ್ನು ವಿಶ್ವಾಸಿಗಳನ್ನಾಗಿಸಲು ಪ್ರಯತ್ನಿಸುತ್ತಿದ್ದನು. ಸೀಲ ಮತ್ತು ತಿಮೊಥೇಯ ಮಕೆದೋನಿಯದಿಂದ ಬಂದ ಮೇಲೆ ಪೌಲನು ಶುಭಸಂದೇಶವನ್ನು ಸಾರುವುದರಲ್ಲೂ ಯೇಸುವೇ ಬರಬೇಕಾದ ಲೋಕೋದ್ಧಾರಕ ಎಂದು ಯೆಹೂದ್ಯರಿಗೆ ರುಜುವಾತುಪಡಿಸುವುದರಲ್ಲೂ ತನ್ನ ಸಮಯವನ್ನು ಕಳೆದನು. ಆದರೆ ಆ ಯೆಹೂದ್ಯರು ಅವನನ್ನು ಪ್ರತಿಭಟಿಸಿ ದೂಷಿಸಿದರು. ಆಗ ಪೌಲನು ತನ್ನ ಹೊದಿಕೆಯನ್ನು ಒದರಿ, “ನಿಮ್ಮ ವಿನಾಶಕ್ಕೆ ನೀವೇ ಹೊಣೆ; ಅದಕ್ಕೆ ನಾನು ಬಾಧ್ಯನಲ್ಲ. ಇಂದಿನಿಂದ ನಾನು ಅನ್ಯಧರ್ಮೀಯರ ಕಡೆಗೆ ಹೋಗುತ್ತೇನೆ,” ಎಂದನು. ಅಂತೆಯೇ ಅವರನ್ನು ಬಿಟ್ಟು ದೇವರಲ್ಲಿ ಭಯಭಕ್ತಿಯುಳ್ಳವನಾಗಿದ್ದ ತೀತಯುಸ್ತ ಎಂಬವನ ಮನೆಗೆ ಹೋದನು. ಅವನ ಮನೆ ಪ್ರಾರ್ಥನಾ ಮಂದಿರದ ಪಕ್ಕದಲ್ಲೇ ಇತ್ತು. ಪ್ರಾರ್ಥನಾಮಂದಿರದ ಅಧ್ಯಕ್ಷ ಕ್ರಿಸ್ಪ ಎಂಬವನೂ ಅವನ ಮನೆಯವರೆಲ್ಲರೂ ಪ್ರಭುವಿನಲ್ಲಿ ವಿಶ್ವಾಸವಿಟ್ಟರು. ಕೊರಿಂಥದ ಇನ್ನೂ ಅನೇಕ ಜನರು ಪೌಲನ ಬೋಧನೆಯನ್ನು ಕೇಳಿ ವಿಶ್ವಾಸವಿಟ್ಟರು ಮತ್ತು ದೀಕ್ಷಾಸ್ನಾನ ಪಡೆದರು.
ಕೀರ್ತನೆ: 98:1, 2-3, 3-4
ಶ್ಲೋಕ: ರಾಷ್ಟ್ರಗಳಿಗೆ ತೋರಿಸಿಹನು ಪ್ರಭು ಜೀವೋದ್ಧಾರಕ ಶಕ್ತಿಯನು
ಹಾಡಿರಿ ಪ್ರಭುವಿಗೆ
ಹೊಸಗೀತೆಯೊಂದನು
ಎಸಗಿಹನಾತನು
ಪವಾಡಕಾರ್ಯಗಳನು I
ಗಳಿಸಿತಾತನ ಕೈ
ಪೂತಭುಜ ಗೆಲುವನು II
ಪ್ರಕಟಿಸಿಹನಾ ಪ್ರಭು
ತನ್ನ ಮುಕ್ತಿವಿಧಾನವನು I
ರಾಷ್ಟ್ರಗಳಿಗೆ
ತೋರಿಸಿಹನು ಜೀವೋದ್ಧಾರಕಾ ಶಕ್ತಿಯನು II
ಕಂಡುಬಂದಿತು ಜಗದ
ಎಲ್ಲೆ ಎಲ್ಲೆಗೆ I
ನಮ್ಮ ದೇವ ಸಾಧಿಸಿದ
ಜಯಗಳಿಕೆ II
ಸ್ಮರಿಸಿಕೊಂಡನಾ
ಪ್ರಭು ತನ್ನ ಪ್ರೀತಿಯನು I
ಇಸ್ರಯೇಲ್ ಕುಲದ
ಬಗ್ಗೆ ತನ್ನ ಸತ್ಯತೆಯನು II
ಕಂಡುಬಂದಿತು ಜಗದ
ಎಲ್ಲೆ ಎಲ್ಲೆಗೆ I
ನಮ್ಮ ದೇವ ಸಾಧಿಸಿದ
ಜಯಗಳಿಕೆ II
ಸ್ಮರಿಸಿಕೊಂಡನಾ
ಪ್ರಭು ತನ್ನ ಪ್ರೀತಿಯನು I
ಇಸ್ರಯೇಲ್ ಕುಲದ
ಬಗ್ಗೆ ತನ್ನ ಸತ್ಯತೆಯನು II
ಭೂನಿವಾಸಿಗಳೇ, ಮಾಡಿರಿ ಜಯಕಾರ
ಪ್ರಭುವಿಗೆ I
ಶುಭಸಂದೇಶ: ಯೊವಾನ್ನ16:16-20
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ತುಸುಕಾಲವಾದ ನಂತರ ನೀವು ನನ್ನನ್ನು ಕಾಣಲಾರಿರಿ. ಅನಂತರ ತುಸುಕಾಲ ಕಳೆಯುತ್ತಲೇ ನನ್ನನ್ನು ಪುನಃ ಕಾಣುವಿರಿ,” ಎಂದರು ಯೇಸುಸ್ವಾಮಿ. ಇದನ್ನು ಕೇಳಿದ ಕೆಲವು ಮಂದಿ ಶಿಷ್ಯರು, “ಇದೇನು ಇವರು ಹೇಳುತ್ತಿರುವುದು? ‘ತುಸುಕಾಲವಾದ ನಂತರ ನೀವು ನನ್ನನ್ನು ಕಾಣಲಾರಿರಿ. ಅನಂತರ ತುಸುಕಾಲ ಕಳೆಯುತ್ತಲೇ ನೀವು ನನ್ನನ್ನು ಪುನಃ ಕಾಣುವಿರಿ ಮತ್ತು ಪಿತನಲ್ಲಿಗೆ ನಾನು ಹೋಗುತ್ತೇನೆ,’ ಎನ್ನುತ್ತಾರಲ್ಲ? ತುಸುಕಾಲ’ ಎಂದರೇನು? ಇವರ ಮಾತೇ ನಮಗೆ ಅರ್ಥವಾಗುತ್ತಿಲ್ಲವಲ್ಲಾ,” ಎಂದು ತಮ್ಮ ತಮ್ಮೊಳಗೆ ಮಾತನಾಡತೊಡಗಿದರು. ಯೇಸು, ತಮ್ಮಲ್ಲಿ ಅವರು ವಿಚಾರಿಸಬೇಕೆಂದಿದ್ದಾರೆಂದು ತಿಳಿದುಕೊಂಡು, ‘ತುಸುಕಾಲದ ನಂತರ ನೀವು ನನ್ನನ್ನು ಕಾಣಲಾರಿರಿ. ಅನಂತರ ತುಸುಕಾಲ ಕಳೆಯುತ್ತಲೇ ನನ್ನನ್ನು ಪುನಃ ಕಾಣುವಿರಿ’ ಎಂದು ನಾನು ಹೇಳಿದ್ದನ್ನು ಕುರಿತು ನಿಮ್ಮ ನಿಮ್ಮಲ್ಲಿಯೇ ನೀವು ಚರ್ಚಿಸುತ್ತಿರುವುದೇನು? ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ಅತ್ತು ಗೋಳಾಡುವಿರಿ; ಲೋಕವಾದರೋ ನಕ್ಕು ನಲಿದಾಡುವುದು. ನೀವು ದುಃಖಪಡುವಿರಿ. ಆದರೆ ನಿಮ್ಮ ದುಃಖ ಆನಂದವಾಗಿ ಮಾರ್ಪಡುವುದು."
No comments:
Post a Comment