ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 15:1-6
ಕೀರ್ತನೆ: 122:1-2, 3-4, 4-5
ಶ್ಲೋಕ: ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ, ಆಯಿತೆನಗೆ ಆನಂದ, ಜನರೆನ್ನ ಕರೆದಾಗ.
ಪ್ರಭುವಿನಾಲಯಕೆ ಹೋಗೋಣ ಬಾ ಎಂದಾಗ I
ಆಯಿತೆನಗೆ ಆನಂದ, ಜನರೆನ್ನ ಕರೆದಾಗ II
ನನ್ನ ಕಾಲುಗಳು ಓ ಜೆರುಸಲೇಮೇ I
ತಲುಪಿವೆ ನಿನ್ನ ಪುರದ್ವಾರಗಳನೇ II
ನೋಡು, ಜೆರುಸಲೇಮ್ ಪಟ್ಟಣವಿದು I
ಗಟ್ಟಿಯಾಗಿಯೆ ಕಟ್ಟಲ್ಪಟ್ಟಿಹುದು II
ಕುಲಗಳು ಯಾತ್ರೆಯಾಗಿ ಬರುವುವು ಇಲ್ಲಿಗೆ I
ಮಾಡುವರಿಲ್ಲಿಯೆ ಪ್ರಭುವಿನ ನಾಮ ಕೀರ್ತನೆ I
ಪಾಲಿಪರಿಂತು ಇಸ್ರೇಲರಿಗೆ ವಿಧಿಸಿದಾಜ್ಞೆ II
ಸ್ಥಾಪಿತವಾಗಿವೆಯಿಲ್ಲಿ ನ್ಯಾಯಪೀಠಗಳು I
ದಾವೀದನ ಮನೆತನದವರ ಸಿಂಹಾಸನಗಳು II
ಶುಭಸಂದೇಶ: ಯೊವಾನ್ನ 15:1-8
“ನಾನೇ ನಿಜವಾದ ದ್ರಾಕ್ಷಾಬಳ್ಳಿ. ನನ್ನ ಪಿತನೇ ತೋಟಗಾರ. ನನ್ನಲ್ಲಿದ್ದೂ ಫಲಕೊಡದ ಕವಲುಬಳ್ಳಿಗಳನ್ನೆಲ್ಲಾ ಅವರು ಕತ್ತರಿಸಿಹಾಕುವರು. ಫಲಕೊಡುವ ಕವಲುಬಳ್ಳಿಗಳು ಮತ್ತಷ್ಟು ಫಲಕೊಡುವಂತೆ ಅವನ್ನು ಸವರಿ ಶುದ್ಧಗೊಳಿಸುವರು. ನೀವಾದರೋ, ನಾನು ನಿಮ್ಮೊಡನೆ ಆಡಿದ ಮಾತಿನಿಂದಾಗಿ ಸವರಿದ ಕವಲುಗಳಂತೆ ಶುದ್ಧರಾಗಿದ್ದೀರಿ. ನೀವು ನನ್ನಲ್ಲಿ ನೆಲೆಗೊಂಡಿರಿ, ಆಗ ನಾನು ನಿಮ್ಮಲ್ಲಿ ನೆಲೆಗೊಂಡಿರುವೆನು. ಕವಲು ಮೂಲಬಳ್ಳಿಯಲ್ಲಿ ಒಂದಾಗಿ ನೆಲಸದಿದ್ದರೆ ತನ್ನಷ್ಟಕ್ಕೆ ತಾನೇ ಫಲಕೊಡಲಾಗದು. ಹಾಗೆಯೇ ನೀವು ಕೂಡ ನನ್ನಲ್ಲಿ ಒಂದಾಗಿ ನೆಲಸದಿದ್ದರೆ ಫಲಕೊಡಲಾರಿರಿ. “ಹೌದು, ನಾನೇ ದ್ರಾಕ್ಷಾಬಳ್ಳಿ; ನೀವೇ ಅದರ ಕವಲುಬಳ್ಳಿಗಳು. ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅಂಥವನು ಸಮೃದ್ಧಿಯಾಗಿ ಫಲಕೊಡುವನು. ಏಕೆಂದರೆ, ನನ್ನಿಂದ ಬೇರ್ಪಟ್ಟು ನಿಮ್ಮಿಂದ ಏನೂ ಮಾಡಲಾಗದು. ನನ್ನಲ್ಲಿ ನೆಲಸದವನನ್ನು ಕವಲುಬಳ್ಳಿಯಂತೆ ಕತ್ತರಿಸಿ ಎಸೆಯಲಾಗುವುದು; ಅವನು ಒಣಗಿಹೋಗುವನು. ಒಣಗಿದ ಕವಲುಗಳನ್ನು ಒಟ್ಟುಗೂಡಿಸಿ ಬೆಂಕಿಯಲ್ಲಿ ಸುಟ್ಟುಹಾಕಲಾಗುವುದು. “ನೀವು ನನ್ನಲ್ಲಿಯೂ ನನ್ನ ವಾಕ್ಯವು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನೀವು ಏನು ಬೇಕಾದರೂ ಕೇಳಬಹುದು. ನಿಮಗದು ಸಿಗುವುದು. ನೀವು ಸಮೃದ್ಧಿಯಾಗಿ ಫಲಕೊಟ್ಟು ನನ್ನ ಶಿಷ್ಯರಾಗಿ ಬೆಳಗುವುದರಿಂದಲೇ ನನ್ನ ಪಿತನ ಮಹಿಮೆ ಪ್ರಕಟವಾಗುವುದು.
No comments:
Post a Comment