ಮೊದಲನೇ ವಾಚನ ಪ್ರೇಷಿತರ ಕಾರ್ಯಕಲಾಪಗಳು 9:31-42
ಇಂತಿರಲು ಜುದೇಯ, ಗಲಿಲೇಯ ಮತ್ತು ಸಮಾರಿಯದ ಧರ್ಮಸಭೆಯಲ್ಲಿ ಶಾಂತಿ ನೆಲಸಿತು. ಸಭೆ ಬೆಳೆಯುತ್ತಾ ಪ್ರಭುವಿನ ಭಯಭಕ್ತಿಯಲ್ಲಿ ಬಾಳುತ್ತಾ ಪವಿತ್ರಾತ್ಮ ಅವರ ನೆರವಿನಿಂದ ಪ್ರವರ್ಧಿಸುತ್ತಾ ಇತ್ತು. ಪೇತ್ರನು ಅಲ್ಲಲ್ಲಿದ್ದ ಭಕ್ತವಿಶ್ವಾಸಿಗಳಿಗೆ ಭೇಟಿಕೊಡುತ್ತಾ ಲುದ್ದ ಎಂಬ ಊರಿನಲ್ಲಿ ವಾಸವಾಗಿದ್ದ ಭಕ್ತರ ಬಳಿಗೆ ಬಂದನು. ಅಲ್ಲಿ ಪಾರ್ಶ್ವವಾಯು ಪೀಡಿತನಾಗಿ ಎಂಟು ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಐನೇಯಾ ಎಂಬವನನ್ನು ಕಂಡನು. ಪೇತ್ರನು ಅವನಿಗೆ, “ಐನೇಯಾ, ಯೇಸುಕ್ರಿಸ್ತರು ನಿನ್ನನ್ನು ಸ್ವಸ್ಥಪಡಿಸುತ್ತಾರೆ, ಎದ್ದು ನಿನ್ನ ಹಾಸಿಗೆಯನ್ನು ಎತ್ತಿಡು,” ಎಂದನು. ಆ ಕ್ಷಣವೇ ಅವನು ಎದ್ದನು. ಲುದ್ದ ಮತ್ತು ಸಾರೋನಿನ ನಿವಾಸಿಗಳೆಲ್ಲರೂ ಅವನನ್ನು ಕಂಡು ಪ್ರಭುವಿನ ಭಕ್ತರಾದರು. ಜೊಪ್ಪ ಎಂಬ ಊರಿನಲ್ಲಿ ತಬಿಥ ಎಂಬ ಒಬ್ಬ ಭಕ್ತೆ ಇದ್ದಳು. (ಗ್ರೀಕ್ ಭಾಷೆಯಲ್ಲಿ ಅವಳ ಹೆಸರು ‘ದೋರ್ಕ’) ಅವಳು ಸತ್ಕಾರ್ಯಗಳಲ್ಲೂ ದಾನಧರ್ಮಗಳಲ್ಲೂ ಸದಾ ನಿರತಳಾಗಿದ್ದವಳು. ಅವಳು ಕಾಯಿಲೆಯಿಂದ ಒಂದು ದಿನ ಸತ್ತಳು. ಜನರು ಅವಳ ಶವಕ್ಕೆ ಸ್ನಾನಮಾಡಿಸಿ ಮೇಲಂತಸ್ತಿನ ಕೋಣೆಯಲ್ಲಿ ಇರಿಸಿದರು. ಲುದ್ದವು ಜೊಪ್ಪಕ್ಕೆ ಸಮೀಪದಲ್ಲೇ ಇತ್ತು. ಪೇತ್ರನು ಲುದ್ದದಲ್ಲಿರುವುದನ್ನು ಕೇಳಿದ ಭಕ್ತಾದಿಗಳು, “ದಯವಿಟ್ಟು ಬೇಗನೆ ನಮ್ಮೂರಿಗೆ ಬನ್ನಿ,” ಎಂದು ಇಬ್ಬರ ಮುಖಾಂತರ ಹೇಳಿ ಕಳುಹಿಸಿದರು. ಪೇತ್ರನು ಎದ್ದು ಅವರ ಜೊತೆಯಲ್ಲೇ ಹೊರಟುಬಂದನು. ಅವನನ್ನು ಮೇಲಂತಸ್ತಿನ ಕೋಣೆಗೆ ಕರೆದುಕೊಂಡು ಹೋದರು. ಅಲ್ಲಿ ಕೂಡಿದ್ದ ವಿಧವೆಯರೆಲ್ಲರೂ ಅವನ ಸುತ್ತುವರಿದು ಅಳುತ್ತಾ, ದೋರ್ಕಳು ಜೀವದಿಂದ ಇದ್ದಾಗ ತಮಗೆ ಮಾಡಿಕೊಟ್ಟ ಬಟ್ಟೆಬರೆಗಳನ್ನು ಅವನಿಗೆ ತೋರಿಸಿದರು. ಪೇತ್ರನು ಅವರೆಲ್ಲರನ್ನೂ ಹೊರಗೆ ಕಳುಹಿಸಿ ಮೊಣಕಾಲೂರಿ ಪ್ರಾರ್ಥಿಸಿದನು. ಅನಂತರ ಶವದ ಕಡೆಗೆ ತಿರುಗಿ, “ತಬಿಥಾ, ಮೇಲಕ್ಕೇಳು,” ಎಂದನು. ಆಕೆ ಕಣ್ತೆರೆದು ಪೇತ್ರನನ್ನು ನೋಡಿ ಎದ್ದು ಕುಳಿತಳು. ಪೇತ್ರನು ಕೈ ನೀಡಿ ಆಕೆಯನ್ನು ಎತ್ತಿ ನಿಲ್ಲಿಸಿದನು. ಭಕ್ತರನ್ನೂ ವಿಧವೆಯರನ್ನೂ ಕರೆದು ಜೀವಂತಳಾದ ತಬಿಥಳನ್ನು ಅವರಿಗೆ ತೋರಿಸಿದನು. ಈ ಸಮಾಚಾರ ಜೊಪ್ಪದಲ್ಲೆಲ್ಲಾ ಹರಡಿತು. ಅನೇಕರು ಪ್ರಭುವನ್ನು ವಿಶ್ವಾಸಿಸಿದರು
ಕೀರ್ತನೆ: 116:12-13, 14-15, 16-17
ಶ್ಲೋಕ: ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ?
ಶುಭಸಂದೇಶ: ಯೊವಾನ್ನ 6:60-69
ಶುಭಸಂದೇಶ: ಯೊವಾನ್ನ 6:60-69
ಯೇಸುಸ್ವಾಮಿಯ ಶಿಷ್ಯರಲ್ಲಿ ಹಲವರು, “ಇವು ಕಟುವಾದ ಮಾತುಗಳು, ಇವನ್ನು ಯಾರುತಾನೆ ಕೇಳಿಯಾರು?” ಎಂದು ಮಾತನಾಡಿಕೊಂಡರು. ಈ ವಿಷಯವಾಗಿ ತಮ್ಮ ಶಿಷ್ಯರು ಗೊಣಗುಟ್ಟುತ್ತಿರುವುದನ್ನು ಯೇಸು ತಾವಾಗಿಯೇ ಅರಿತು, “ಇಷ್ಟುಮಾತ್ರಕ್ಕೆ ನೀವು ಕಂಗೆಡಬೇಕೆ? ಹಾಗಾದರೆ ನರಪುತ್ರನು ತಾನು ಮೊದಲಿದ್ದ ಸ್ಥಳಕ್ಕೆ ಮರಳಿ ಏರುವುದನ್ನು ನೀವು ಕಂಡಾಗ ಏನನ್ನುವಿರಿ? ಸಜ್ಜೀವವನ್ನು ಕೊಡುವಂಥಾದ್ದು ದೇವರ ಆತ್ಮವೇ. ನರಮಾಂಸದಿಂದ ಏನೂ ಆಗದು. ನಾನು ನಿಮ್ಮೊಡನೆ ಆಡಿದ ಮಾತುಗಳು ಜೀವದಾಯಕ ದೇವರಾತ್ಮವನ್ನು ತರುತ್ತವೆ. ಆದರೂ ನಿಮ್ಮಲ್ಲಿ ಕೆಲವರಿಗೆ ವಿಶ್ವಾಸವಿಲ್ಲ,” ಎಂದು ಹೇಳಿದರು. (ವಿಶ್ವಾಸವಿಲ್ಲದವರು ಯಾರು, ತಮ್ಮನ್ನು ಹಿಡಿದುಕೊಡುವ ಗುರುದ್ರೋಹಿ ಯಾರು, ಎಂದು ಯೇಸುವಿಗೆ ಮೊದಲಿನಿಂದಲೂ ತಿಳಿದಿತ್ತು.) “ ‘ಪಿತನು ಅನುಗ್ರಹಿಸಿದ ಹೊರತು ಯಾರೂ ನನ್ನ ಬಳಿಗೆ ಬರಲಾರರು,’ ಎಂದು ನಾನು ಹೇಳಿದುದು ಇದಕ್ಕಾಗಿಯೇ,” ಎಂದು ಯೇಸು ಮತ್ತೆ ನುಡಿದರು. ಅಂದಿನಿಂದ ಯೇಸುಸ್ವಾಮಿಯ ಹಿಂಬಾಲಕರಲ್ಲಿ ಹಲವರು ಅವರ ಸಹವಾಸವನ್ನು ಬಿಟ್ಟುಬಿಟ್ಟರು. ಹೋದವರು ಹಿಂದಿರುಗಿ ಬರಲಿಲ್ಲ. ಆಗ ಯೇಸು ಹನ್ನೆರಡು ಮಂದಿ ಶಿಷ್ಯರಿಗೆ, “ನೀವು ಕೂಡ ಹೋಗಬೇಕೆಂದು ಇದ್ದೀರಾ?’ ಎಂದು ಕೇಳಿದರು. ಅದಕ್ಕೆ ಸಿಮೋನ ಪೇತ್ರನು, “ಪ್ರಭುವೇ, ನಾವು ಹೋಗುವುದಾದರೂ ಯಾರ ಬಳಿಗೆ? ನಿತ್ಯಜೀವವನ್ನು ಈಯುವ ನುಡಿ ಇರುವುದು ತಮ್ಮಲ್ಲೇ. ತಾವೇ ದೇವರಿಂದ ಬಂದ ಪರಮಪೂಜ್ಯರು. ಹೌದು, ಇದೇ ನಮ್ಮ ವಿಶ್ವಾಸ ಮತ್ತು ಗ್ರಹಿಕೆ,” ಎಂದು ಹೇಳಿದನು.
No comments:
Post a Comment