ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 6:1-7
ಇತ್ತ ಭಕ್ತವಿಶ್ವಾಸಿಗಳ ಸಂಖ್ಯೆ ಹೆಚ್ಚುತ್ತಾ ಬಂದಿತು. ಆಗ ಗ್ರೀಕ್ ಮಾತನಾಡುತ್ತಾ ಇದ್ದವರ ಹಾಗೂ ಸ್ಥಳೀಯ ಭಾಷೆ ಮಾತನಾಡುತ್ತಿದ್ದವರ ನಡುವೆ ಬಿನ್ನಾಭಿಪ್ರಾಯ ಉಂಟಾಯಿತು. ದಿನನಿತ್ಯ ಮಾಡುವ ದೀನದಲಿತರ ಸೇವೆಯಲ್ಲಿ ತಮ್ಮ ಕಡೆಯ ವಿಧವೆಯರನ್ನು ಅಲಕ್ಷ್ಯಮಾಡಲಾಗುತ್ತಿದೆ ಎಂದು ಗ್ರೀಕರು ಗೊಣಗುಟ್ಟಿದರು. ಆಗ ಹನ್ನೆರಡುಮಂದಿ ಪ್ರೇಷಿತರು ಭಕ್ತವಿಶ್ವಾಸಿಗಳ ಸಭೆಯನ್ನು ಕರೆದು, “ನಾವು ದೇವರ ವಾಕ್ಯದ ಬೋಧನೆಯನ್ನು ಅವಗಣಿಸಿ ಊಟೋಪಚಾರಗಳ ಸೇವೆಯಲ್ಲಿ ಮಗ್ನರಾಗಿ ಇರುವುದು ಸರಿಯಲ್ಲ. ಆದುದರಿಂದ ಸಹೋದರರೇ, ಪವಿತ್ರಾತ್ಮಭರಿತರೂ ಜ್ಞಾನಸಂಪನ್ನರೂ ಸನ್ಮಾನಿತರೂ ಆಗಿರುವ ಏಳು ವ್ಯಕ್ತಿಗಳನ್ನು ನಿಮ್ಮಿಂದ ಆರಿಸಿಕೊಳ್ಳಿ, ನಾವು ಅವರಿಗೆ ಈ ಜವಾಬ್ದಾರಿಯನ್ನು ವಹಿಸುತ್ತೇವೆ. ನಾವಾದರೋ ಪ್ರಾರ್ಥನೆಯಲ್ಲೂ ವಾಕ್ಯೋಪದೇಶದಲ್ಲೂ ನಿರತರಾಗುತ್ತೇವೆ,” ಎಂದರು. ಪ್ರೇಷಿತರ ಈ ಸಲಹೆಯನ್ನು ಇಡೀ ಸಭೆ ಅನುಮೋದಿಸಿತು. ಅಂತೆಯೇ ಅಗಾಧ ವಿಶ್ವಾಸ ಉಳ್ಳವನೂ ಪವಿತ್ರಾತ್ಮಭರಿತನೂ ಆದ ಸ್ತೇಫನ, ಫಿಲಿಪ್ಪ, ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ ಮತ್ತು ಯೆಹೂದ್ಯ ಮತಾವಲಂಬಿಯಾದ ಅಂತಿಯೋಕ್ಯದ ನಿಕೊಲಾಯ ಎಂಬ ಏಳುಮಂದಿಯನ್ನು ಆರಿಸಿಕೊಂಡರು. ಪ್ರೇಷಿತರ ಮುಂದೆ ಅವರನ್ನು ನಿಲ್ಲಿಸಿದರು. ಪ್ರೇಷಿತರು ಪ್ರಾರ್ಥನೆಮಾಡಿ ಅವರ ಮೇಲೆ ಹಸ್ತನಿಕ್ಷೇಪ ಮಾಡಿದರು. ದೇವರವಾಕ್ಯವು ಪ್ರವರ್ಧಿಸತೊಡಗಿತು. ವಿಶ್ವಾಸಿಗಳ ಸಂಖ್ಯೆ ಜೆರುಸಲೇಮಿನಲ್ಲಿ ಬಹಳವಾಗಿ ಹೆಚ್ಚಿತು. ಬಹುಮಂದಿ ಯಾಜಕರೂ ಆ ವಿಶ್ವಾಸಕ್ಕೆ ಶರಣಾದರು.
ಕೀರ್ತನೆ: 33:1-2, 4-5, 18-19
ಶ್ಲೋಕ: ನಮ್ಮ ಮೇಲಿರಲಿ ಪ್ರಭೂ, ನಿನ್ನಚಲ ಪ್ರೀತಿ, ಕಾದಿಹೆವು ಇದೋ ನಿನ್ನ ನಂಬಿ ಭರವಸದಿ
ಎರಡನೇ ವಾಚನ: ೧ ಪೇತ್ರನು 2:4-9
ಪ್ರಭುವಿನ ಬಳಿಗೆ ಬನ್ನಿ; ಸಜೀವ ಶಿಲೆಯಾದ ಅವರನ್ನು ಮಾನವರು ನಿಷ್ಪ್ರಯೋಜಕ ಎಂದು ತಿರಸ್ಕರಿಸಿದರೂ ದೇವರು ಅಮೂಲ್ಯರೆಂದು ಆರಿಸಿಕೊಂಡರು. ನೀವೂ ಸಹ ಸಜೀವ ಶಿಲೆಗಳಾಗಿದ್ದೀರಿ; ಆಧ್ಯಾತ್ಮಿಕ ದೇವಾಲಯವನ್ನು ನಿರ್ಮಿಸಲು ನಿಮ್ಮನ್ನೇ ಅರ್ಪಿಸಿಕೊಳ್ಳಿ. ಆ ದೇವಾಲಯದಲ್ಲೇ ಯೇಸುಕ್ರಿಸ್ತರ ಮುಖಾಂತರ ದೇವರಿಗೆ ಮೆಚ್ಚುಗೆಯಾಗಿರುವ ಆಧ್ಯಾತ್ಮಿಕ ಬಲಿಗಳನ್ನು ಸಮರ್ಪಿಸುವ ಪವಿತ್ರ ಯಾಜಕವರ್ಗದವರು ನೀವಾಗಿರುವಿರಿ. ಈ ಕಾರಣದಿಂದಲೇ ಪವಿತ್ರಗ್ರಂಥ ಇಂತೆನ್ನುತ್ತದೆ : “ಅಮೂಲ್ಯ ಶಿಲೆಯೊಂದನ್ನು ನಾನಾರಿಸಿಕೊಂಡೆ. ಸಿಯೋನಿನಲ್ಲಿ ಅದನ್ನೇ ಮುಖ್ಯ ಮೂಲೆಗಲ್ಲನ್ನಾಗಿರಿಸಿದೆ. ಎಂದಿಗೂ ಆಶಾಭಂಗವಾಗದು ಅದರ ಮೇಲೆ ವಿಶ್ವಾಸವಿಡುವವರಿಗೆ.” ವಿಶ್ವಾಸವಿಟ್ಟಿರುವ ನಿಮಗಂತೂ ಈ ಶಿಲೆ ಅತ್ಯಮೂಲ್ಯವಾದುದು. “ಮನೆಕಟ್ಟುವವರು ಬೇಡವೆಂದು ಮೂಲೆಗೆಸೆದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು.” “ಜನರು ಎಡವಿಬೀಳುವ ಕಲ್ಲಿದು; ಅವರು ಮುಗ್ಗರಿಸಿ ಬೀಳುವ ಬಂಡೆಯಿದು.” ವಿಶ್ವಾಸವಿಡದವರಿಗಾದರೋ ಮೇಲಿನ ವಾಕ್ಯಗಳು ಅನ್ವಯಿಸುತ್ತವೆ. ಜನರು ದೇವರ ವಾಕ್ಯದಲ್ಲಿ ವಿಶ್ವಾಸವಿಡದಿರುವುದರಿಂದಲೇ ಎಡವಿಬೀಳುತ್ತಾರೆ. ಅವರ ಬಗ್ಗೆ ದೈವಸಂಕಲ್ಪವೂ ಇದೇ ಆಗಿತ್ತು. ನೀವು ದೇವರು ಆಯ್ದುಕೊಂಡ ಜನಾಂಗ, ರಾಜಯಾಜಕರು, ಪವಿತ್ರ ಪ್ರಜೆ, ದೇವರ ಸ್ವಕೀಯ ಜನ; ಅವರ ಅದ್ಭುತ ಕಾರ್ಯಗಳನ್ನು ಪ್ರಚುರಪಡಿಸುವುದಕ್ಕಾಗಿಯೇ ಆಯ್ಕೆಯಾದವರು. ಕಾರ್ಗತ್ತಲಿನಿಂದ ತಮ್ಮ ಅದ್ಭುತಕರವಾದ ಬೆಳಕಿಗೆ ನಿಮ್ಮನ್ನು ಕರೆತಂದವರು ಅವರೇ.
ಶುಭಸಂದೇಶ: ಯೊವಾನ್ನ 14:1-12
ಯೇಸು ಸ್ವಾಮಿ ತಮ್ಮ ಮಾತನ್ನು ಮುಂದುವರಿಸುತ್ತಾ ಶಿಷ್ಯರಿಗೆ, “ನೀವು ಹೃದಯದಲ್ಲಿ ಕಳವಳಗೊಳ್ಳದಿರಿ; ದೇವರಲ್ಲಿ ವಿಶ್ವಾಸವಿಡಿ; ನನ್ನಲ್ಲಿಯೂ ವಿಶ್ವಾಸವಿಡಿ. ನನ್ನ ಪಿತನ ಆಸ್ಥಾನದಲ್ಲಿ ಅನೇಕ ನಿವಾಸಗಳು ಇವೆ. ಹಾಗಿಲ್ಲದ ಪಕ್ಷದಲ್ಲಿ ನಿಮಗೆ ತಿಳಿಸುತ್ತಿದ್ದೆ. ನಾನು ಹೋಗಿ ನಿಮಗೆ ಸ್ಥಳವನ್ನು ಅಣಿಗೊಳಿಸುತ್ತೇನೆ. ಅಣಿಗೊಳಿಸಿದ ಬಳಿಕ ಹಿಂದಿರುಗಿ ಬಂದು ನಿಮ್ಮನ್ನು ಕರೆದೊಯ್ಯುತ್ತೇನೆ. ನಾನಿರುವೆಡೆಯಲ್ಲಿಯೇ ನೀವೂ ಇರಬೇಕು. ನಾನು ಹೋಗುವ ಎಡೆಗೆ ಮಾರ್ಗವು ನಿಮಗೆ ತಿಳಿದೇ ಇದೆ,” ಎಂದು ಹೇಳಿದರು. ಆಗ ತೋಮನು, “ಪ್ರಭುವೇ, ನೀವು ಎಲ್ಲಿಗೆ ಹೋಗುತ್ತೀರೆಂದು ನಮಗೆ ತಿಳಿಯದು; ಅಂದಮೇಲೆ ಅಲ್ಲಿಗೆ ಹೋಗುವ ಮಾರ್ಗವು ಹೇಗೆ ತಿಳಿದೀತು?” ಎಂದು ಕೇಳಿದನು. ಅದಕ್ಕೆ ಯೇಸು, “ಮಾರ್ಗವೂ ಸತ್ಯವೂ ಜೀವವೂ ನಾನೇ. ನನ್ನ ಮುಖಾಂತರ ಬಾರದ ಹೊರತು ಯಾರೂ ಪಿತನ ಬಳಿಗೆ ಬರಲಾರರು. ನೀವು ನನ್ನನ್ನು ಅರಿತವರಾಗಿದ್ದರೆ ನನ್ನ ಪಿತನನ್ನು ಕೂಡ ಅರಿಯುತ್ತಿದ್ದಿರಿ. ಈಗಿನಿಂದ ಅವರನ್ನು ನೀವು ಅರಿತವರಾಗಿದ್ದೀರಿ ಹಾಗೂ ಕಂಡೂ ಇದ್ದೀರಿ,” ಎಂದು ನುಡಿದರು. ಆಗ ಫಿಲಿಪ್ಪನು, “ಪ್ರಭೂ, ನಮಗೆ ಪಿತನನ್ನು ತೋರಿಸಿ; ಅಷ್ಟೇ ಸಾಕು,” ಎಂದನು. ಅದಕ್ಕೆ ಉತ್ತರವಾಗಿ ಯೇಸು, “ನಾನು ಇಷ್ಟುಕಾಲ ನಿಮ್ಮೊಡನೆ ಇದ್ದರೂ ನಾನು ಯಾರೆಂಬುದನ್ನು ನೀನು ಅರಿತುಕೊಳ್ಳಲಿಲ್ಲವೆ? ನನ್ನನ್ನು ನೋಡಿದವನು ಪಿತನನ್ನೇ ನೋಡಿದವನಾಗಿದ್ದಾನೆ. ಹೀಗಿರುವಾಗ, ಫಿಲಿಪ್ಪನೇ, ‘ನಮಗೆ ಪಿತನನ್ನು ತೋರಿಸಿ’ ಎಂದು ಹೇಗೆ ಕೇಳುತ್ತೀ? ನಾನು ಪಿತನಲ್ಲಿ ಇದ್ದೇನೆ, ಪಿತನು ನನ್ನಲ್ಲಿ ಇದ್ದಾರೆ. ಇದನ್ನು ನೀನು ವಿಶ್ವಾಸಿಸುವುದಿಲ್ಲವೇ? ನಾನು ನಿಮಗೆ ಹೇಳುವ ಮಾತುಗಳನ್ನು ನನ್ನಷ್ಟಕ್ಕೆ ನಾನೇ ಆಡುತ್ತಿಲ್ಲ. ಪಿತನೇ ನನ್ನಲ್ಲಿದ್ದುಕೊಂಡು ತಮ್ಮ ಕಾರ್ಯವನ್ನು ಸಾಧಿಸುತ್ತಾರೆ. ‘ನಾನು ಪಿತನಲ್ಲಿ ಇದ್ದೇನೆ. ಪಿತನು ನನ್ನಲ್ಲಿ ಇದ್ದಾರೆ,’ ಎನ್ನುವ ನನ್ನ ಮಾತುಗಳನ್ನು ವಿಶ್ವಾಸಿಸಿರಿ; ಇಲ್ಲವೇ, ನಾನು ಸಾಧಿಸಿದ ಸುಕೃತ್ಯಗಳ ನಿಮಿತ್ತದಿಂದಾದರೂ ವಿಶ್ವಾಸಿಸಿರಿ. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನನ್ನಲ್ಲಿ ವಿಶ್ವಾಸವುಳ್ಳವನು ನಾನು ಸಾಧಿಸುವ ಕಾರ್ಯಗಳನ್ನು ಆತನೂ ಸಾಧಿಸುವನು. ಅಷ್ಟೇ ಏಕೆ, ಅವುಗಳಿಗಿಂತಲೂ ಮಹತ್ತಾದುವುಗಳನ್ನು ಸಾಧಿಸುವನು. ಏಕೆಂದರೆ ನಾನು ಪಿತನ ಬಳಿಗೆ ಹೋಗುತ್ತೇನೆ." ಎಂದರು.
No comments:
Post a Comment