ಮೊದಲನೇ ವಾಚನ: ಪ್ರೇಷಿತರಕಾರ್ಯಕಲಾಪಗಳು 11:1-18
ಅನ್ಯಧರ್ಮದವರೂ ಸಹ ದೈವವಾಕ್ಯವನ್ನು ಸ್ವೀಕರಿಸಿದರೆಂಬ ಸುದ್ದಿ ಜುದೇಯದಲ್ಲಿದ್ದ ಪ್ರೇಷಿತರಿಗೂ ವಿಶ್ವಾಸಿಗಳಿಗೂ ಮುಟ್ಟಿತು. ಪೇತ್ರನು ಜೆರುಸಲೇಮಿಗೆ ಹೋದಾಗ ಅನ್ಯಧರ್ಮದವರಿಗೆ ಸುನ್ನತಿಯಾಗಬೇಕು ಎನ್ನುತ್ತಿದ್ದ ಪಂಗಡದವರು ಮುಂದೆ ಬಂದು, “ನೀನು ಸುನ್ನತಿಯಿಲ್ಲದ ಅನ್ಯಧರ್ಮದವರ ಮನೆಗೆ ಭೇಟಿಕೊಟ್ಟು ಅವರೊಡನೆ ಊಟ ಮಾಡಿದ್ದೇಕೆ?” ಎಂದು ಆಕ್ಷೇಪಿಸಿದರು. ಅದಕ್ಕೆ ಪೇತ್ರನು ನಡೆದ ವೃತ್ತಾಂತವನ್ನು ಆಮೂಲಾಗ್ರವಾಗಿ ಅವರಿಗೆ ವಿವರಿಸಿದನು: “ಜೊಪ್ಪ ಪಟ್ಟಣದಲ್ಲಿ ನಾನು ಧ್ಯಾನಪರವಶನಾಗಿದ್ದಾಗ ದರ್ಶನವೊಂದನ್ನು ಕಂಡೆ. ಸ್ವರ್ಗದಿಂದ ದೊಡ್ಡ ದುಪ್ಪಟಿಯಂಥ ವಸ್ತು ಒಂದು ಕೆಳಕ್ಕೆ ಇಳಿಯಿತು. ಅದರ ನಾಲ್ಕು ಮೂಲೆಗಳನ್ನು ಹಿಡಿದು ಕೆಳಕ್ಕೆ ಇಳಿಬಿಡಲಾಗಿತ್ತು. ಅದು ಬಂದು ನನ್ನ ಪಕ್ಕದಲ್ಲೇ ನಿಂತಿತು. ಅದನ್ನು ಗಮನಿಸಿ ನೋಡಿದಾಗ ಅದರಲ್ಲಿ ಪ್ರಾಣಿಗಳೂ ಕಾಡುಮೃಗಗಳೂ ಹರಿದಾಡುವ ಕ್ರಿಮಿಕೀಟಗಳೂ ಹಾರಾಡುವ ಪಕ್ಷಿಗಳೂ ಕಂಡುಬಂದವು. ಆಗ, ‘ಪೇತ್ರ, ಏಳು, ಕೊಯ್ದು ತಿನ್ನು’ ಎಂಬ ವಾಣಿ ನನಗೆ ಕೇಳಿಸಿತು. ಅದಕ್ಕೆ ನಾನು, ‘ಬೇಡವೇ ಬೇಡ ಸ್ವಾಮಿ, ಅಶುದ್ಧ ಹಾಗು ಅಸ್ಪೃಶ್ಯವಾದುದು ಯಾವುದೂ ನನ್ನ ಬಾಯನ್ನು ಎಂದೂ ಹೊಕ್ಕಿಲ್ಲ,’ ಎಂದೆ. ಮತ್ತೊಮ್ಮೆ ಆ ವಾಣಿ ಸ್ವರ್ಗಲೋಕದಿಂದ, ‘ದೇವರೇ ಶುದ್ಧಿಕರಿಸಿರುವ ಏನನ್ನೂ ನೀನು ಅಶುದ್ಧವೆನ್ನಬೇಡ,’ ಎಂದು ಉತ್ತರಿಸಿತು. ಹೀಗೆ ಮೂರು ಬಾರಿ ನಡೆದ ಮೇಲೆ, ಅವೆಲ್ಲವನ್ನೂ ಒಟ್ಟಿಗೆ ಸ್ವರ್ಗಕ್ಕೆ ಮರಳಿ ಎಳೆದುಕೊಳ್ಳಲಾಯಿತು. ಅದೇ ಸಮಯಕ್ಕೆ ಸರಿಯಾಗಿ, ಸೆಜರೇಯದಿಂದ ಕಳುಹಿಸಲಾದ ಮೂರು ಮಂದಿ ನನ್ನನ್ನು ಹುಡುಕಿಕೊಂಡು, ನಾನು ತಂಗಿದ್ದ ಮನೆಗೆ ಬಂದರು. ನಾನು ಸಂಕೋಚ ಪಡದೆ ಅವರೊಡನೆ ಹೋಗಬೇಕೆಂದು ಪವಿತ್ರಾತ್ಮ ತಿಳಿಸಿದರು. ಜೊಪ್ಪದ ಈ ಆರು ಮಂದಿ ಭಕ್ತರೂ ನನ್ನೊಡನೆ ಸೆಜರೇಯಕ್ಕೆ ಬಂದರು. ನಾವೆಲ್ಲರೂ ಕೊರ್ನೇಲಿಯನ ಮನೆಯನ್ನು ಪ್ರವೇಶಿಸಿದೆವು. ಅವನು, “ನನ್ನ ಮನೆಯಲ್ಲೇ ದೂತನೊಬ್ಬನು ಕಾಣಿಸಿಕೊಂಡು, ‘ಈಗಲೇ ಯಾರನ್ನಾದರೂ ಜೊಪ್ಪಕ್ಕೆ ಕಳುಹಿಸಿ ಪೇತ್ರ ಎಂದು ಕರೆಯಲಾಗುವ ಸಿಮೋನನನ್ನು ಬರಹೇಳು. ಅವನು ನೀನೂ ನಿನ್ನ ಕುಟುಂಬದವರೆಲ್ಲರೂ ಪಡೆಯಬಹುದಾದಂಥ ಜೀವೋದ್ಧಾರದ ಸಂದೇಶವನ್ನು ನೀಡುವನು,’ ಎಂದು ತಿಳಿಸಿದನು” ಎಂದು ನಮಗೆ ಹೇಳಿದನು. ನಾನು ಉಪದೇಶ ಮಾಡಲು ಪ್ರಾರಂಭಿಸಿದ ಕೂಡಲೇ ನಮ್ಮ ಮೇಲೆ ಇಳಿದಂತೆ ಅವರ ಮೇಲೂ ಪವಿತ್ರಾತ್ಮ ಇಳಿದು ಬಂದರು. ಆಗ ನನಗೆ, ‘ಯೊವಾನ್ನನು ನೀರಿನಿಂದ ಸ್ನಾನದೀಕ್ಷೆಯನ್ನು ಕೊಟ್ಟನು. ನೀವಾದರೋ ಪವಿತ್ರಾತ್ಮ ಅವರಿಂದ ದೀಕ್ಷಾಸ್ನಾನವನ್ನು ಪಡೆಯುವಿರಿ,’ ಎಂಬ ಪ್ರಭುವಿನ ಮಾತುಗಳು ನೆನಪಿಗೆ ಬಂದವು. ನಾನುಪ್ರಭು ಯೇಸುಕ್ರಿಸ್ತರನ್ನು ವಿಶ್ವಾಸಿಸಿದಾಗ ನಮಗೆ ಕೊಟ್ಟ ವರವನ್ನೇ ದೇವರು ಆ ಅನ್ಯ ಧರ್ಮದವರಿಗೂ ಕೊಟ್ಟಿರುವರು. ಹೀಗಿರುವಲ್ಲಿ ದೇವರನ್ನು ತಡೆಗಟ್ಟಲು ನಾನಾರು?” ಎಂದನು. ಈ ಮಾತುಗಳನ್ನು ಕೇಳಿದ ಮೇಲೆ ಅವರು ತಮ್ಮ ಆಕ್ಷೇಪಣೆಯನ್ನು ನಿಲ್ಲಿಸಿದರು, ಮಾತ್ರವಲ್ಲ, ‘ಅನ್ಯ ಧರ್ಮದವರೂ ಪಶ್ಚಾತ್ತಾಪಪಟ್ಟು ನವ ಜೀವ ಪಡೆಯುವ ಸದವಕಾಶವನ್ನು ದೇವರು ದಯಪಾಲಿಸಿದ್ದಾರಲ್ಲಾ!’ ಎಂದು ದೈವ ಸ್ತುತಿ ಮಾಡಿದರು.
ಕೀರ್ತನೆ: 42:2-3; 43:3-4
ಶ್ಲೋಕ: ಜೀವಂತ ದೇವನಿಗಾಗಿ ದಾಹದಿಂದಿದೆ ಎನ್ನ ಮನ,
ನಾ ತೆರಳಿ ಪಡೆವುದೆಂತು ಆ ದೇವನ ಮುಖದರ್ಶನ
ಜೀವಂತ ದೇವನಿಗಾಗಿ ದಾಹದಿಂದಿದೆ ಎನ್ನ ಮನ
/
ನಾ ತೆರಳಿ
ಪಡೆವುದೆಂತು ಆ ದೇವನ ಮುಖದರ್ಶನ? //
“ಎಲ್ಲಿ? ನಿನ್ನ ದೇವನೆಲ್ಲಿ?” ಎಂದು ಜನ ಜರೆಯುತಿರಲು
/
ಕಂಬನಿಯೆ
ನನಗನ್ನಪಾನವಾಗಿಹುದು ಹಗಲಿರುಳು
//
ಕಳುಹಿಸು ನಿನ್ನ ಜ್ಯೋತಿಯನು,
ನಿನ್ನ ಸತ್ಯವನ್ನು ನನ್ನ
ನಡೆಸಲಿಕೆ /
ಸೇರಿಸಲೆನ್ನನು
ನಿನ್ನ ಪವಿತ್ರ ಪರ್ವತಕೆ,
ನಿನ್ನಯ ನಿವಾಸಕೆ
//
ಬರುವೆನಾಗ ನಿನ್ನ ಬಲಿಪೀಠದ ಬಳಿಗೆ /
ನನ್ನಾನಂದ ನಿಧಿಯಾದ
ನಿನ್ನ ಸನ್ನಿಧಿಗೆ /
ವೀಣೆ ನುಡಿಸಿ ದೇವಾ, ನಿನ್ನ ಸ್ತುತಿಸಲಿಕೆ //
ಯೊವಾನ್ನ 10:11-18
“ನಾನೇ ಉತ್ತಮ ಕುರಿಗಾಹಿ. ಉತ್ತಮ ಕುರಿಗಾಹಿಯು ಕುರಿಗಳಿಗೋಸ್ಕರ ತನ್ನ ಪ್ರಾಣವನ್ನೇ ಕೊಡುತ್ತಾನೆ. ಕುರಿಗಾಹಿಯಾಗಲಿ, ಕುರಿಗಳ ಒಡೆಯನಾಗಲಿ ಅಲ್ಲದ ಕೂಲಿಯಾಳು, ತೋಳ ಬರುವುದನ್ನು ಕಂಡದ್ದೇ, ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ. ತೋಳವು ಬಂದು ಕುರಿಗಳ ಮೇಲೆ ಎರಗಿ, ಮಂದೆಯನ್ನು ಚದರಿಸುತ್ತದೆ. ಅವನು ಕೇವಲ ಕೂಲಿಯಾಳು; ಕುರಿಗಳ ಚಿಂತೆ ಅವನಿಗಿಲ್ಲ. ನಾನಾದರೋ ಉತ್ತಮ ಕುರಿಗಾಹಿ. ಪಿತನು ನನ್ನನ್ನು ಬಲ್ಲರು; ನಾನೂ ಪಿತನನ್ನು ಬಲ್ಲೆ. ಅಂತೆಯೇ ನಾನು ನನ್ನ ಕುರಿಗಳನ್ನು ಬಲ್ಲೆನು; ಅವು ನನ್ನನ್ನು ಬಲ್ಲವು. ಅವುಗಳಿಗೋಸ್ಕರ ನಾನು ನನ್ನ ಪ್ರಾಣವನ್ನೇ ಕೊಡುತ್ತೇನೆ. ಈ ಮಂದೆಗೆ ಸೇರದ ಬೇರೆ ಕುರಿಗಳೂ ನನಗಿವೆ. ಅವನ್ನೂ ನಾನು ಕರೆತರಬೇಕು. ಅವು ಸಹ ನನ್ನ ಸ್ವರಕ್ಕೆ ಕಿವಿಗೊಡುತ್ತವೆ. ಆಗ ಒಂದೇ ಕುರಿಹಿಂಡು ಆಗುವುದು. ಒಬ್ಬನೇ ಕುರಿಗಾಹಿ ಇರುವನು. “ಏಕೆಂದರೆ, ನನ್ನ ಪಿತನಿಗೆ ನನ್ನಲ್ಲಿ ಪ್ರೀತಿ ಇದೆ. ನನ್ನ ಪ್ರಾಣವನ್ನು ಮರಳಿ ಪಡೆಯುವಂತೆ ನಾನದನ್ನು ಧಾರೆಯೆರೆಯುತ್ತೇನೆ. ನನ್ನ ಪ್ರಾಣವನ್ನು ಯಾರೂ ನನ್ನಿಂದ ಕಸಿದುಕೊಳ್ಳಲಾರರು; ನಾನಾಗಿಯೇ ಅದನ್ನು ಧಾರೆಯೆರೆಯುತ್ತೇನೆ. ಅದನ್ನು ಧಾರೆಯೆರೆಯುವ ಹಕ್ಕು ನನಗಿದೆ. ಅದನ್ನು ಪುನಃ ಪಡೆಯುವ ಹಕ್ಕು ಸಹ ನನಗಿದೆ. ಈ ಆಜ್ಞೆಯನ್ನು ನಾನು ನನ್ನ ಪಿತನಿಂದ ಪಡೆದಿದ್ದೇನೆ,” ಎಂದು ನುಡಿದರು.
No comments:
Post a Comment