ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 18:9-18
ಒಂದು ರಾತ್ರಿ ಪೌಲನಿಗೆ ಪ್ರಭು ದರ್ಶನ ಇತ್ತು, “ಭಯಪಡಬೇಡ, ಬೋಧನೆ ಮಾಡುವುದನ್ನು ಮುಂದುವರಿಸು, ನಾನು ನಿನ್ನೊಡನೆ ಇದ್ದೇನೆ. ಯಾರೂ ನಿನ್ನ ಮೇಲೆ ಬಿದ್ದು ಹಾನಿಮಾಡುವುದಿಲ್ಲ. ಪಟ್ಟಣದ ಅನೇಕ ಜನರು ನನ್ನ ಪರವಾಗಿದ್ದಾರೆ,” ಎಂದರು. ಅಂತೆಯೇ ಪೌಲನು ಒಂದೂವರೆ ವರ್ಷಕಾಲ ಅಲ್ಲಿದ್ದು ದೇವರವಾಕ್ಯವನ್ನು ಜನರಿಗೆ ಬೋಧಿಸಿದನು. ಗಲ್ಲಿಯೋ ಎಂಬವನು ಅಖಾಯದಲ್ಲಿ ರಾಜ್ಯಪಾಲನಾಗಿದ್ದಾಗ, ಯೆಹೂದ್ಯರು ಪೌಲನ ವಿರುದ್ಧ ಒಟ್ಟುಗೂಡಿ ಅವನನ್ನು ಬಂಧಿಸಿ ನ್ಯಾಯಸ್ಥಾನಕ್ಕೆ ಕೊಂಡೊಯ್ದರು. “ಧರ್ಮಶಾಸ್ತ್ರಕ್ಕೆ ವ್ಯತಿರಿಕ್ತವಾದ ರೀತಿಯಲ್ಲಿ ದೇವರನ್ನು ಆರಾಧಿಸುವಂತೆ ಈ ಮನುಷ್ಯ ಜನರನ್ನು ಪ್ರೇರೇಪಿಸುತ್ತಾ ಇದ್ದಾನೆ,” ಎಂದು ಅಲ್ಲಿ ದೂರಿತ್ತರು. ಪೌಲನು ಮಾತನಾಡಬೇಕೆಂದಿರುವಾಗ, ಗಲ್ಲಿಯೋ ಯೆಹೂದ್ಯರನ್ನು ಸಂಬೋಧಿಸಿ, “ಯೆಹೂದ್ಯರೇ, ಅನ್ಯಾಯವಾಗಲಿ, ಅಕ್ರಮವಾಗಲಿ ನಡೆದಿದ್ದ ಪಕ್ಷದಲ್ಲಿ, ನಿಮ್ಮ ಅಪಾದನೆಗಳನ್ನು ತಾಳ್ಮೆಯಿಂದ ಕೇಳಬೇಕಾದುದು ಸರಿಯಷ್ಟೆ. ಆದರೆ ಇದು ನಾಮನೇಮಗಳಿಗೆ ಹಾಗು ನಿಮ್ಮ ಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟ ಪ್ರಶ್ನೆ. ಅದನ್ನು ನಿಮ್ಮನಿಮ್ಮಲ್ಲೇ ಇತ್ಯರ್ಥಮಾಡಿಕೊಳ್ಳಿ. ಇಂಥ ವಿಷಯಗಳನ್ನು ವಿಚಾರಣೆಮಾಡಲು ನನಗೆ ಮನಸ್ಸಿಲ್ಲ,” ಎಂದು ಹೇಳಿ ಅವರನ್ನು ನ್ಯಾಯಸ್ಥಾನದಿಂದ ಹೊರಗಟ್ಟಿದನು. ಆಗ ಅವರೆಲ್ಲರೂ ಪ್ರಾರ್ಥನಾಮಂದಿರದ ಅಧ್ಯಕ್ಷ ಸೋಸ್ಥೆನನನ್ನು ಬಂಧಿಸಿ, ನ್ಯಾಯಸ್ಥಾನದ ಮುಂದೆಯೇ ಹೊಡೆದರು. ಗಲ್ಲಿಯೋ ಇದೊಂದನ್ನೂ ಲಕ್ಷಿಸಲಿಲ್ಲ. ಇದಾದ ಮೇಲೆ ಪೌಲನು ಕೊರಿಂಥದಲ್ಲಿ ಅನೇಕ ದಿನ ಇದ್ದನು. ಅನಂತರ ಭಕ್ತವಿಶ್ವಾಸಿಗಳನ್ನು ಬೀಳ್ಕೊಟ್ಟು ಅಕ್ವಿಲ ಮತ್ತು ಪ್ರಿಸ್ಸಿಲರೊಡನೆ ಸಿರಿಯಕ್ಕೆ ನೌಕಾಯಾನ ಹೊರಟನು. ತಾನು ಮಾಡಿದ್ದ ಹರಕೆಯ ಪ್ರಕಾರ ಕೆಂಖ್ರೆಯೆಂಬ ಸ್ಥಳದಲ್ಲಿ ಮುಂಡನ ಮಾಡಿಸಿಕೊಂಡನು.
ಕೀರ್ತನೆ: 47:2-3, 4-5, 6-7
ಶ್ಲೋಕ: ದೇವನು ಭೂಮಂಡಲಕ್ಕೆಲ್ಲಾ ಒಡೆಯನು
ಪರಾತ್ಪರನಾದ ಪ್ರಭುವು ಘನಗಂಭೀರನು I
ಶ್ಲೋಕ: ದೇವನು ಭೂಮಂಡಲಕ್ಕೆಲ್ಲಾ ಒಡೆಯನು
ಪರಾತ್ಪರನಾದ ಪ್ರಭುವು ಘನಗಂಭೀರನು I
ಪ್ರಪಂಚಕ್ಕೆಲ್ಲ ರಾಜಾಧಿರಾಜನು II
ಜನಾಂಗಗಳನಾತ ನಮಗಧೀನಪಡಿಸಿಹನು I
ರಾಷ್ಟ್ರಗಳನು ನಮಗೆ ಪಾದಪೀಠವಾಗಿಸಿಹನು II
ರಾಷ್ಟ್ರಗಳನು ನಮಗೆ ಪಾದಪೀಠವಾಗಿಸಿಹನು II
ಆಯ್ದನಾಡನು ಸೊತ್ತಾಗಿ
ನೀಡಿದನೆಮಗೆ I
ಪ್ರತಿಷ್ಠಿತರು ನಾವು, ಆತನೊಲಿದ ಯಕೋಬಿಗೆ II
ಏರಿದನು ಪ್ರಭು ಜಯಜಯಕಾರದೊಂದಿಗೆ I
ಆರೋಹಣವಾದನು ತುತೂರಿನಾದ ಜೊತೆಗೆ II
ಕೀರ್ತಿಸಿರಿ, ನಮ್ಮ ದೇವನನು ಸಂಕೀರ್ತಿಸಿರಿ I
ಕೀರ್ತಿಸಿರಿ, ನಮ್ಮ ರಾಜನನು ಸಂಕೀರ್ತಿಸಿರಿ II
ದೇವನು ಭೂಮಂಡಲಕ್ಕೆಲ್ಲಾ ಒಡೆಯನು I
ಕೀರ್ತನೆಯಿಂದ ಕೊಂಡಾಡಿರಿ ಆತನನು IIಶುಭಸಂದೇಶ: ಯೊವಾನ್ನ 16:20-23
ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ನೀವು ಅತ್ತುಗೋಳಾಡುವಿರಿ; ಲೋಕವಾದರೋ ನಕ್ಕು ನಲಿದಾಡುವುದು. ನೀವು ದುಃಖಪಡುವಿರಿ. ಆದರೆ ನಿಮ್ಮ ದುಃಖ ಆನಂದವಾಗಿ ಮಾರ್ಪಡುವುದು. ಗರ್ಭಿಣಿಯಾದ ಸ್ತ್ರೀಯು ಪ್ರಸವಿಸುವ ಗಳಿಗೆ ಬಂದಾಗ ವೇದನೆಪಡುತ್ತಾಳೆ; ಮಗುವನ್ನು ಹೆರುತ್ತಲೇ ಜಗದಲ್ಲಿ ಮಾನವನೊಬ್ಬನು ಜನಿಸಿದನೆಂಬ ಉಲ್ಲಾಸದಿಂದ ತಾನು ಪಟ್ಟ ವೇದನೆಯನ್ನು ಮರೆತುಬಿಡುತ್ತಾಳೆ; ನಿಮಗೆ ಈಗ ದುಃಖವಿದೆ; ನಾನು ನಿಮ್ಮನ್ನು ಮರಳಿ ಕಂಡಾಗ, ಹರ್ಷಿಸುವಿರಿ. ಆ ಹರ್ಷವನ್ನು ಯಾರೂ ನಿಮ್ಮಿಂದ ಕಸಿದುಕೊಳ್ಳುವುದಿಲ್ಲ. ಆ ದಿನದಂದು ನನ್ನಿಂದ ನೀವೇನನ್ನೂ ಕೇಳುವಂತಿಲ್ಲ. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ಪಿತನಲ್ಲಿ ಏನನ್ನು ಬೇಡಿಕೊಂಡರೂ ನಿಮಗೆ ಅವರು ನನ್ನ ಹೆಸರಿನಲ್ಲಿ ಕೊಟ್ಟೇತೀರುವರು."
No comments:
Post a Comment