ಮೊದಲನೇ ವಾಚನ: ಪ್ರಕಟನಾ ಗ್ರಂಥ 7:2-4, 9-14
ಪೂರ್ವದಿಕ್ಕಿನಿಂದ ಒಬ್ಬ ದೇವದೂತನು ಏರಿಬಂದದ್ದನ್ನು ಕಂಡೆನು. ಅವನು ಜೀವಸ್ವರೂಪಿಯಾದ ದೇವರ ಮುದ್ರೆಯನ್ನು ಕೈಯಲ್ಲಿ ಹಿಡಿದಿದ್ದನು. ಅವನು ಭೂಮಿಗೂ ಸಮುದ್ರಕ್ಕೂ ಕೇಡನ್ನು ಮಾಡುವ ಅಧಿಕಾರವನ್ನು ಪಡೆದಿದ್ದ ನಾಲ್ಕು ಮಂದಿ ದೇವದೂತರಿಗೆ: "ನಮ್ಮ ದೇವರ ದಾಸರಿಗೆ ಹಣೆಯ ಮೇಲೆ ನಾವು ಮುದ್ರೆಯೊತ್ತುವ ತನಕ ಭೂಮಿಗಾಗಲಿ, ಸಮುದ್ರಕ್ಕಾಗಲಿ, ಇಲ್ಲವೇ ಮರಗಳಿಗಾಗಲಿ ಕೇಡನ್ನು ಮಾಡಬೇಡಿ," ಎಂದು ಗಟ್ಟಿಯಾಗಿ ಕೂಗಿ ಹೇಳಿದನು. ಮುದ್ರೆಯೊತ್ತಿಸಿಕೊಂಡವರ ಸಂಖ್ಯೆ ನನಗೆ ಕೇಳಿಬಂತು. ಇಸ್ರಯೇಲರು ಪ್ರತಿಯೊಂದು ಕಾಲದಲ್ಲಿ ಮುದ್ರೆಯೊತ್ತಿಸಿಕೊಂಡವರು ಒಂದು ಲಕ್ಷದ ನಲವತ್ತನಾಲ್ಕು ಸಾವಿರ ಮಂದಿ. ಇದಾದ ಬಳಿಕ ನಾನು ಇನ್ನೊಂದು ದಿವ್ಯದರ್ಶನವನ್ನು ಕಂಡೆ: ಯಾರಿಂದಲೂ ಎಣಿಸಲಾಗದಷ್ಟು ಒಂದು ದೊಡ್ಡ ಜನಸಮೂಹವು ನೆರೆದಿತ್ತು. ಅವರು ಎಲ್ಲಾ ದೇಶ, ಭಾಷೆ, ಕುಲ ಗೋತ್ರಗಳಿಂದ ಬಂದವರಾಗಿದ್ದರು. ಶ್ವೇತಾಂಬರರಾಗಿ ಸಿಂಹಾಸನದ ಮತ್ತು ಯಜ್ಞದ ಕುರಿಮರಿಯಾದಾತನ ಸಾನ್ನಿಧ್ಯದಲ್ಲಿ ನಿಂತಿದ್ದರು. ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದಿದ್ದರು. ಅವರು ಗಟ್ಟಿಯಾದ ಧ್ವನಿಯಿಂದ: "ಸಿಂಹಾಸನರೂಢರಾದ ದೇವರಿಂದ, ಬಲಿಯರ್ಪಿತವಾದ ಯಜ್ಞದ ಕುರಿಮರಿಯಿಂದ ಲಭಿಸುತ್ತದೆಮಗೆ ಜೀವೋದ್ಧಾರ," ಎಂದು ಹಾಡಿದರು. ಆಗ ಸಭಾಪ್ರಮುಖರ ಮತ್ತು ನಾಲ್ಕು ಜೀವಿಗಳ ಸಮೇತ ದೇವದೂತರೆಲ್ಲರೂ ಸಿಂಹಾಸನದ ಸುತ್ತಲಲೂ ನಿಂತಿದ್ದರು. ಅವರೆಲ್ಲರೂ ಸಿಂಹಾಸನದ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿ, "ಆಮೆನ್, ಸ್ತುತಿಸ್ತೋತ್ರವೂ ಘನಮಾನವೂ ಜ್ಞಾನವೂ ಧನ್ಯವಾದವೂ ಶಕ್ತಿಯೂ ಪರಾಕ್ರಮವೂ ಸಲ್ಲಲಿ ಯುಗಯುಗಾಂತರಕ್ಕೂ ಆಮೆನ್," ಎಂದು ಹಾಡುತ್ತಾ ದೇವರನ್ನು ಆರಾಧಿಸಿದರು. ಸಭಾಪ್ರಮುಖರಲ್ಲಿ ಒಬ್ಬನು, "ಶ್ವೇತಾಂಬರರಾದ ಇವರೆಲ್ಲರೂ ಯಾರು? ಎಲ್ಲಿಂದ ಬಂದವರು? ಎಂದು ನನ್ನನ್ನು ಪ್ರಶ್ನಿಸಿದರು. ಅದಕ್ಕೆ ನಾನು, "ಸ್ವಾಮಿಾ ನೀವೇ ಬಲ್ಲಿರಿ," ಎಂದು ಉತ್ತರಕೊಟ್ಟೆ, ಆಗ ಆತನು ನನಗೆ ಹೀಗೆಂದನು; "ಇವರು ಆ ಭೀಕರ ಹಿಂಸೆ ಬಾಧೆಯನ್ನು ಅನುಭವಿಸಿ ಬಂದವರು. ತಮ್ಮ ನಿಲುವಂಗಿಗಳನ್ನು ಯಜ್ಞದ ಕುರಿಮರಿಯ ರಕ್ತದಿಂದ ತೊಳೆದು ಬಿಳುಪಾಗಿಸಿಕೊಂಡಿದ್ದಾರೆ.
ಕೀರ್ತನೆ: 24:1-2, 3-4,5-6
ಶ್ಲೋಕ: ಇಂಥವರೇ ದೇವರ ದರ್ಶನಾಭ್ಯರ್ಥಿಗಳು
ಎರಡನೇ ವಾಚನ: 1 ಯೊವಾನ್ನ 3:1-3
ನಾವು ದೇವರ ಮಕ್ಕಳು ಎನಿಸಿಕೊಂಡಿರಬೇಕಾದರೆ ಪಿತನು ನಮ್ಮನ್ನು ಎಷ್ಟಾಗಿ ಪ್ರೀತಿಸುತ್ತಾರೆಂಬುದನ್ನು ಗಮನಿಸಿರಿ. ನಿಜಕ್ಕೂ ನಾವು ದೇವರ ಮಕ್ಕಳೇ, ಲೋಕವು ಅವರನ್ನು ಅರಿತುಕೊಳ್ಳಲಿಲ್ಲವಾದ ಕಾರಣ ನಾವು ಎಂಥವರೆಂದು ಅದು ಅರಿತಿಲ್ಲ. ಪ್ರಿಯರೇ, ನಾವೀಗ ದೇವರ ಮಕ್ಕಳು. ಮುಂದೆ ನಾವು ಎಂಥವರಾಗುತ್ತೇವೆ ಎಂಬುದು ಇನ್ನೂ ವಿಷದವಾಗಿಲ್ಲ. ಆದರೆ ಕ್ರಿಸ್ತ ಯೇಸು ಪ್ರತ್ಯಕ್ಷವಾಗುವಾಗ ನಾವೂ ಅವರಂತೆಯೇ ಇರುತ್ತೇವೆಂದು ಬಲ್ಲೆವು. ಏಕೆಂದರೆ, ಅವರನ್ನು ನಾವು ಅವರ ಯಥಾರ್ಥ ರೂಪದಲ್ಲೇ ಕಾಣುತ್ತೇವೆ. ಕ್ರಿಸ್ತ ಯೇಸುವಿನಲ್ಲಿ ನಂಬಿಕೆ ನಿರೀಕ್ಷೆಯನ್ನಿಟ್ಟಿರುವ ಪ್ರತಿಯೊಬ್ಬನೂ ಅವರು ಶುದ್ಧರಾಗಿರುವಂತೆಯೇ ತನ್ನನ್ನು ಶುದ್ಧವಾಗಿಟ್ಟುಕೊಳ್ಳುತ್ತಾನೆ.
ಶುಭಸಂದೇಶ: ಮತ್ತಾಯ 5:1-12
