ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

14.11.2018

ಸಾಧಾರಣ ಕಾಲದ 32ನೇ ಬುಧವಾರ  

ಮೊದಲನೇ ವಾಚನ: ತೀತನಿಗೆ  3:1-7 

ಆಳುವವರಿಗೂ ಅಧಿಕಾರಿಗಳಿಗೂ ಕ್ರೈಸ್ತ ವಿಶ್ವಾಸಿಗಳು ವಿಧೇಯರಾಗಿ ನಡೆದುಕೊಳ್ಳಬೇಕೆಂದು ಜ್ಞಾಪಕಪಡಿಸು. ಎಲ್ಲಾ ಸತ್ಕಾರ್ಯಗಳನ್ನು ಕೈಗೊಳ್ಳಲು ಅವರು ಸಿದ್ದರಿರಬೇಕು. ಅವರು ಯಾರನ್ನೂ ದೂಷಿಸದೆ, ಯಾರೊಡನೆಯೂ ಜಗಳವಾಡದೆ, ಸಾಧುಗುಣದಿಂದ ಎಲ್ಲರೊಡನೆ ಸೌಜನ್ಯದಿಂದ ನಡೆದುಕೊಳ್ಳಲಿ. ಹಿಂದೆ ನಾವು ಅವಿವೇಕಿಗಳೂ ಅವಿಧೇಯರೂ ಆಗಿ ದಾರಿತಪ್ಪಿಹೊಗಿದ್ದೆವು. ಅನೇಕ ಪ್ರಲೋಭನೆಗಳಿಗೂ ದುರಿಚ್ಛೆಗಳಿಗೂ ಗುಲಾಮರಾಗಿದ್ದೆವು. ದುಷ್ಟತನ ಹಾಗೂ ಮತ್ಸರಗಳಲ್ಲಿ ಕಾಲ ಕಳೆಯುತ್ತಾ ಅಸಹ್ಯರೂ ಪರಸ್ಪರ ದ್ವೇಷಿಗಳೂ ಆಗಿದ್ದೆವು. ಹೀಗಿರುವಾಗ, ಜಗದ್ರಕ್ಷಕರಾದ ದೇವರ ದಯೆಯೂ ಅವರ ಜನಪ್ರೇಮವೂ ಪ್ರಕಟವಾದವು. ಆಗ ಅವರೇ ನಮ್ಮನ್ನು ಉದ್ಧರಿಸಿದರು. ನಮ್ಮ ಸ್ವಂತ ಪುಣ್ಯಕಾರ್ಯಗಳು ನಮಗೆ ಈ ಉದ್ಧಾರವನ್ನು ತರಲಿಲ್ಲ. ಪುನರ್ಜನ್ಮವನ್ನು ಸೂಚಿಸುವ ಸ್ನಾನ ಹಾಗು ನೂತನ ಜೀವವನ್ನೀಯುವ ಪವಿತ್ರಾತ್ಮ ಈ ಮೂಲಕ ಅವರೇ ನಮ್ಮನ್ನು ಕರುಣೆಯಿಂದ ಉದ್ಧಾರ ಮಾಡಿದರು. ಪವಿತ್ರಾತ್ಮರನ್ನು ನಮ್ಮ ಉದ್ಧಾರಕ ಯೇಸುಕ್ರಿಸ್ತರ ಮುಖಾಂತರ ದೇವರು ನಮಗೆ ಧಾರಾಳವಾಗಿ ಅನುಗ್ರಹಿಸಿದ್ದಾರೆ. ಹೀಗೆ ದೈವಾನುಗ್ರಹದಿಂದ ನಾವು ದೇವರೊಡನೆ ಸತ್ಸಂಬಂದವನ್ನು ಹೊಂದಿದೆವು. ನಿತ್ಯಜೀವದ ಭರವಸೆಯನ್ನು ಪಡೆದು ಆ ಜೀವಕ್ಕೆ ಬಾಧ್ಯಸ್ಥರಾದೆವು. ಇದು ಸತ್ಯವಾದ ಮಾತು. 

ಕೀರ್ತನೆ: 23:1b-3a, 3bc-4, 5, 6 
ಶ್ಲೋಕ: ಪ್ರಭು ಕುರಿಗಾಹಿಯಾಗಿರಲು ನನಗೆ ಕುಂದುಕೊರತೆಗಳೆಲ್ಲಿಯವು ಎನಗೆ. 

ಶುಭಸಂದೇಶ: ಲೂಕ 17:11-19 

ಯೇಸುಸ್ವಾಮಿ ಜೆರುಸಲೇಮಿಗೆ ಪ್ರಯಾಣ ಮಾಡುತ್ತಾ ಸಮಾರಿಯ ಹಾಗೂ ಗಲಿಲೇಯ ಗಡಿಗಳ ನಡುವೆ ಹಾದುಹೋಗುತ್ತಿದ್ದರು. ಒಂದು ಗ್ರಾಮವನ್ನು ಸಮೀಪಿಸಿದಾಗ ಕುಷ್ಟರೋಗದಿಂದ ನರಳುತ್ತಿದ್ದ ಹತ್ತು ಮಂದಿ ಅವರಿಗೆ ಎದುರಾಗಿ ಬಂದರು. ದೂರದಲ್ಲೇ ನಿಂತು, "ಯೇಸುವೇ, ಗುರುವೇ, ನಮ್ಮ ಮೇಲೆ ಕರುಣೆಯಿಡಿ,"ಎಂದು ಕೂಗಿ ಕೇಳಿಕೊಂಡರು. ಯೇಸು ಅವರನ್ನು ನೋಡಿ, "ನೀವು ಯಾಜಕರ ಬಳಿಗೆ ಹೋಗಿರಿ. ಅವರು ನಿಮ್ಮನ್ನು ಪರಿಕ್ಷಿಸಲಿ," ಎಂದರು. ಅಂತೆಯೇ ಅವರು ದಾರಿಯಲ್ಲಿ ಹೋಗುತ್ತಿರುವಾಗಲೇ ಗುಣಹೊಂದಿದರು. ಅವರಲ್ಲಿ ಒಬ್ಬನು ತಾನು ಗುಣಹೊಂದಿದ್ದನ್ನು ಕಂಡು, ಹರ್ಷೋದ್ಗಾರದಿಂದ ದೇವರನ್ನು ಸ್ತುತಿಸುತ್ತಾ ಹಿಂದಿರುಗಿ ಬಂದನು. ಯೇಸುವಿನ ಪಾದಕ್ಕೆ ಸಾಷ್ಟಾಂಗವೆರಗಿ ಕೃತಜ್ಞತೆಯನ್ನು ಸಲ್ಲಿಸಿದನು. ಇವನೋ ಸಮಾರಿಯದವನು! ಆಗ ಯೇಸು, "ಹತ್ತುಮಂದಿ ಗುಣ ಹೊಂದಿದರಲ್ಲವೇ? ಮಿಕ್ಕ ಒಂಭತ್ತು ಮಂದಿ ಎಲ್ಲಿ? ದೇವರನ್ನು ಸ್ತುತಿಸುವುದಕ್ಕೆ ಈ ಹೊರನಾಡಿನವನ ಹೊರತು ಬೇರಾರೂ ಬರಲಿಲ್ಲವೇ?" ಎಂದರು. ಆನಂತರ ಆ ಸಮಾರಿಯದವನಿಗೆ, ಎದ್ದು ಹೋಗು; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಪಡಿಸಿದೆ," ಎಂದು ಹೇಳಿದರು.

1 comment: