ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

24.11.2018

ಸಾಧಾರಣ ಕಾಲದ 33ನೇ ಶನಿವಾರ  

ಮೊದಲನೇ ವಾಚನ: ಪ್ರಕಟನೆ 11:4-12 

ಲೋಕಾಧಿಪತಿಯಾದ ದೇವರ ಸಾನ್ನಿಧ್ಯದಲ್ಲಿರುವ ಎರಡು ಓಲಿವ್ ಮರಗಳು ಮತ್ತು ಎರಡು ದೀಪಸ್ತಂಭಗಳು ಇವರೇ. ಯಾವನಾದರೂ ಇವರಿಗೆ ಕೇಡು ಬಗೆದರೆ ಇವರ ಬಾಯಿಯಿಂದ ಬೆಂಕಿ ಹೊರಟು ಇವರ ಶತ್ರುಗಳನ್ನು ದಹಿಸಿಬಿಡುತ್ತದೆ. ಇವರಿಗೆ ಕೇಡು ಬಗೆಯಬೇಕೆಂದಿರುವವನು ಹೀಗೆಯೇ ಹತನಾಗುತ್ತಾನೆ. ತಾವು ಪ್ರವಾದನೆ ಮಾಡುವ ದಿನಗಳಲ್ಲಿ ಮಳೆಬಾರದಂತೆ ಆಕಾಶವನ್ನು ಮುಚ್ಚಿಬಿಡುವ ಸಾಮರ್ಥ್ಯ ಇವರಿಗಿದೆ. ಇದಲ್ಲದೆ, ಇವರಿಗೆ ಇಷ್ಟ ಬಂದಾಗಲೆಲ್ಲಾ ನೀರನ್ನು ರಕ್ತವನ್ನಾಗಿ ಪರಿವರ್ತಿಸುವ ಹಾಗು ಸಕಲ ವಿಧವಾದ ಉಪದ್ರವಗಳಿಂದ ಜಗತ್ತನ್ನು ಪೀಡಿಸುವ ಅಧಿಕಾರ ಇವರಿಗೆ ಇರುತ್ತದೆ. ಇವರ ಸಾಕ್ಷ್ಯ ನೀಡಿಕೆ ಮುಗಿದನಂತರ ಪಾತಾಳಕೂಪದಿಂದ ಮೃಗವೊಂದು ಮೇಲೇರಿ ಬರುತ್ತದೆ; ಅದು ಇವರೊಡನೆ ಯುದ್ದಮಾಡಿ, ಜಯಗಳಿಸಿ, ಇವರನ್ನು ಕೊಂದುಹಾಕುತ್ತದೆ. ಈ ಸಾಕ್ಷಿಗಳ ಶವಗಳು ಆ ಮಹಾನಗರದ ಬೀದಿ ಪಾಲಾಗುವುವು. ಆ ನಗರವನ್ನು ಸೊದೋಮ್ ಇಲ್ಲವೆ ಈಜಿಪ್ಪ್ ಎಂದು ಸೂಚ್ಯವಾಗಿ ಕರೆಯಲಾಗಿದೆ. ಈ ಸಾಕ್ಷಿಗಳ ಪ್ರಭುವನ್ನು ಸಹ ಇಲ್ಲಿಯೇ ಶಿಲುಬೆಗೇರಿಸಲಾಯಿತು. ಸಕಲ ದೇಶ, ಭಾಷೆ, ಕುಲ, ಗೋತ್ರಗಳ ಜನರು ಈ ಸಾಕ್ಷಿಗಳ ಶವಗಳನ್ನು ಮೂರುವರೆ ದಿನಗಳ ತನಕ ದಿಟ್ಟಿಸಿ ನೋಡುವರು; ಅವುಗಳನ್ನು ಸಮಾಧಿ ಮಾಡಲು ಬಿಡಲೊಲ್ಲರು. ಭೂ ನಿವಾಸಿಗಳನ್ನು ಪೀಡಿಸಿದ್ದ ಆ ಇಬ್ಬರು ಪ್ರವಾದಿಗಳು ಸತ್ತದ್ದಕ್ಕಾಗಿ ಲೋಕದ ಜನರು ಸಂತೋಷದಿಂದ ಸಂಭ್ರಮಿಸುವರು. ಒಬ್ಬರಿಗೊಬ್ಬರು ಬಹುಮಾನಗಳನ್ನು ಹಂಚಿಕೊಳ್ಳುವರು. ಮೂರುವರೆ  ದಿನಗಳಾದ ಮೇಲೆ ದೇವರಿಂದ ಜೀವದಾಯಕ ಉಸಿರು ಬಂದು ಆ ಶವಗಳನ್ನು ಹೊಕ್ಕಾಗ ಅವರು ಎದ್ದು ನಿಂತರು. ಇದನ್ನು ಕಂಡವರೆಲ್ಲರೂ ಭಯದಿಂದ ನಡುಗಿದರು. ಆನಂತರ ಆ ಪ್ರವಾದಿಗಳಿಗೆ, "ಮೇಲೇರಿ ಬನ್ನಿ," ಎಂದು ಸ್ವರ್ಗದಿಂದ ಒಂದು ಮಹಾವಾಣಿ ತಿಳಿಸಿತು. ಶತ್ರುಗಳು ಅವರನ್ನು ನೋಡುತ್ತಿದ್ದಂತೆಯೇ ಅವರು ಮೇಘಾರೂಢರಾಗಿ ಸ್ವರ್ಗಕ್ಕೇರಿದರು. 

ಕೀರ್ತನೆ:144:1, 2, 9-10 
ಶ್ಲೋಕ: ಸ್ತುತಿಸ್ತೋತ್ರ ಪ್ರಭುವಿಗೆ, ನನ್ನಾಶ್ರಯದುರ್ಗಕೆ. 

ಶುಭಸಂದೇಶ: ಲೂಕ 20: 27-40 

ಅನಂತರ,  ಸತ್ತಮೇಲೆ ಪುನರುತ್ದಾನ ಇಲ್ಲ ಎಂದು ವಾದಿಸುತ್ತಿದ್ದ ಸದ್ದುಕಾಯರಲ್ಲಿ ಕೆಲವರು ಯೇಸುಸ್ವಾಮಿಯ ಬಳಿಗೆ ಬಂದು ಈ ಪ್ರಶ್ನೆ ಹಾಕಿದರು: "ಭೋದಕರೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ಅಣ್ಣನಿಗೆ ಸಂತಾನ ಪಡೆಯಬೇಕು," ಎಂದು ಮೋಶೆ ನಮಗಾಗಿ ಬರೆದಿಟ್ಟಿದ್ದಾನಲ್ಲವೆ? ಒಮ್ಮೆ ಏಳುಮಂದಿ ಅಣ್ಣತಮ್ಮಂದಿರಿದ್ದರು. ಅವರಲ್ಲಿ ಮೊದಲನೆಯವನಿಗೆ ಮದುವೆಯಾಯಿತು; ಆದರೆ ಅವನು ಮಕ್ಕಳಿಲ್ಲದೆ ಮೃತನಾದ. ಅವನ ಹೆಂಡತಿಯನ್ನು ಎರಡನೆಯವನು, ಆನಂತರ ಮೂರನೆಯವನು, ತದನಂತರ ಮಿಕ್ಕವರು, ಹೀಗೆ ಏಳು ಮಂದಿಯೂ ಒಬ್ಬರಾದ ಮೇಲೆ ಒಬ್ಬರು ಮದುವೆಯಾಗಿ ಸಂತಾನ ಇಲ್ಲದೆಯೇ ನಿಧನರಾದರು. ಕಟ್ಟಕಡೆಗೆ ಆ ಮಹಿಳೆಯೂ ಮರಣಹೊಂದಿದಳು. ಹೀಗಿರುವಲ್ಲಿ ಪುನರುತ್ದಾನದ ದಿನ ಸತ್ತವರೆಲ್ಲರೂ ಜೀವದಿಂದ ಎದ್ದುಬರುವಾಗ, ಆಕೆ ಯಾರ ಪತ್ನಿಯಾಗುವಳು? ಏಳು ಮಂದಿ ಸಹೋದರರು ಆಕೆಯನ್ನು ವಿವಾಹ ಆಗಿದ್ದರಲ್ಲವೇ?" ಎಂದರು. ಅದಕ್ಕೆ ಯೇಸು, "ಈ ಲೋಕದ ಜೀವನದಲ್ಲಿ ಜನರು ಮದುವೆ ಮಾಡಿಕೊಳ್ಳುತ್ತಾರೆ, ಮದುವೆ ಮಾಡಿಕೊಡುತ್ತಾರೆ, ಆದರೆ ಸತ್ತವರು ಪುನರುತ್ದಾನ ಹೊಂದಿ ಮರುಲೋಕ ಜೀವಕ್ಕೆ ಯೋಗ್ಯರಾದಗ ಮದುವೆ ಮಾಡಿಕೊಳ್ಳುವುದೂ ಇಲ್ಲ, ಮದುವೆ ಮಾಡಿಕೊಡುವುದೂ ಇಲ್ಲ. ಅವರು ಅಲ್ಲಿ ದೇವದೂತರಿಗೆ ಸಮಾನರಾಗಿರುವರು; ಅವರು ಎಂದಿಗೂ ಸಾಯುವಂತಿಲ್ಲ; ಪುನರುತ್ದಾನದ ಫಲ ಆಗಿರುವ ಅವರು ದೇವರ ಮಕ್ಕಳಾಗಿರುವರು. ಸತ್ತವರು ಪುನರುತ್ಥಾನ ಹೊಂದುವುದನ್ನು ಮೋಶೆಯ ಗ್ರಂಥದಲ್ಲಿ, ಅಂದರೆ ’ಉರಿಯುವ ಪೂದೆ'ಯ ಪ್ರಸ್ತಾಪವಿರುವ ಭಾಗದಲ್ಲಿ ಸ್ಪಷ್ಟ ಪಡಿಸಲಾಗಿದೆ. ಅಲ್ಲಿ ಸರ್ವೇಶ್ವರನನ್ನು, 'ಅಬ್ರಹಾಮನ ದೇವರು, ಇಸಾಕನ ದೇವರು, ಯಕೊಬನ ದೇವರು ಆಗಿದ್ದಾರೆ' ಎಂದು ಹೇಳಲಾಗಿದೆ. "ಹೀಗಿರುವಲ್ಲಿ ದೇವರು ಜೀವಂತರ ದೇವರೆ ಹೊರತು ಮೃತರ ದೇವರಲ್ಲ ಅವರ ದೃಷ್ಟಿಯಲ್ಲಿ ಸರ್ವರೂ ಜೀವಂತರು," ಎಂದರು. ಇದನ್ನು ಕೇಳಿದ ಕೆಲವು ಧರ್ಮಶಾಸ್ತ್ರಿಗಳು,  "ಭೋದಕರೇ, ಚೆನ್ನಾಗಿ ಹೇಳಿದಿರಿ, ಎಂದರು. ಮುಂದೆ ಯಾವ ಪ್ರಶ್ನೆ ಕೇಳುವುದಕ್ಕೂ ಅವರಾರು ಧೈರ್ಯಗೊಳ್ಳಲಿಲ್ಲ.

No comments:

Post a Comment