07.11.2018

ಸಾಧಾರಣ ಕಾಲದ 31ನೇ ಬುಧವಾರ 

ಮೊದಲನೇ ವಾಚನ: ಫಿಲಿಪ್ಪಿಯರಿಗೆ  2:12-18

ಪ್ರಿಯ ಸಹೋದರರೇ, ನಾನು ನಿಮ್ಮಲ್ಲಿದ್ದಾಗ ನೀವು ಯಾವಾಗಲೂ ನನ್ನ ಮಾತಿನಂತೆ ನಡೆದುಕೊಂಡಿರಿ. ಈಗ, ನಾನು ದೂರವಿರುವಾಗ ಇನ್ನೂ ಹೆಚ್ಚಿನ ಆಸಕ್ತಿಯಿಂದ ನಡೆದುಕೊಳ್ಳಿ. ನಿಮ್ಮ ಜೀವೋದ್ಧಾರಕ್ಕಾಗಿ ಭಯಭಕ್ತಿಯಿಂದ ಶ್ರಮಿಸಿರಿ. ಏಕೆಂದರೆ ದೈವಚಿತ್ತವನ್ನು ನೀವು ನೆರವೇರಿಸುವಂತೆ ಅವರೇ ನಿಮ್ಮಲ್ಲಿ ಸತ್ಪ್ರೇರಣೆಯನ್ನೂ ಸಫಲವನ್ನೂ ನೀಡುತ್ತಾರೆ. ನೀವು ಮಾಡುವ ಎಲ್ಲಾ ಕಾರ್ಯಗಳನ್ನು ಗೊಣಗುಟ್ಟದೆ, ವಿವಾದವಿಲ್ಲದೆ, ಏಕಮನಸ್ಸಿನಿಂದ ಮಾಡಿ. ನಿರ್ಧೋಷಿಗಳೂ ನಿಷ್ಕಳಂಕರೂ ಆಗಿರಿ. ವಕ್ರಬುದ್ಧಿಯ ದುಷ್ಟಜನರ ನಡುವೆ ದೇವರ ಪರಿಶುದ್ಧ ಮಕ್ಕಳಂತೆ ಬಾಳಿರಿ. ಜೀವದಾಯಕ ಸಂದೇಶವನ್ನು ಎತ್ತಿಹಿಡಿಯಿರಿ; ಆಗ ನಕ್ಷತ್ರಗಳು ಆಕಾಶವನ್ನು ಬೆಳಗಿಸುವಂತೆ ಪ್ರಪಂಚದಲ್ಲಿ ನೀವು ಕಂಗೊಳಿಸುವಿರಿ.ಹೀಗೆ ನೀವು ನಡೆದುಕೊಂಡರೆ  ನನ್ನ ಸೇವೆ ವ್ಯರ್ಥವಾಗದೆ, ಶ್ರಮ ವಿಫಲವಾಗದೆ ಫಲಪ್ರದವಾಯಿತೆಂದು ಕ್ರಿಸ್ತರ ದಿನದಂದು ನಾನು ಹೆಮ್ಮೆ ಪಡಬಹುದು. ನಿಮ್ಮ ವಿಶ್ವಾಸವೆಂಬ ಬಲಿಕಾಣಿಕೆಯ ಮೇಲೆ ನನ್ನ ರಕ್ತವನ್ನು ಧಾರೆಯಾಗಿ ಹರಿಸಬೇಕಾಗಿ ಬಂದರೂ ನನಗೆ ಸಂತೋಷವೇ; ನಿಮ್ಮೆಲ್ಲರೊಡನೆ ಸೇರಿ ಸಂತೋಷಿಸುತ್ತೇನೆ. ಅದೇ ರೀತಿ ನೀವು ಸಹ ನನ್ನೊಡನೆ ಸಂತೊಷದಿಂದ ಸಂಭ್ರಮಿಸುವಿರಿ.

ಕೀರ್ತನೆ: 27:1, 4, 13-14
ಶ್ಲೋಕ: ನನಗೆ ಬೆಳಕು, ನನಗೆ ರಕ್ಷೆ ಪ್ರಭುವೇ.

ಶುಭಸಂದೇಶ: ಲೂಕ 14: 25-33

ಜನರು ಗುಂಪಾಗಿ ಯೇಸುಸ್ವಾಮಿಯ ಸಂಗಡ ಹೋಗುತ್ತಿದ್ದರು. ಆಗ ಯೇಸು ಅವರ ಕಡೆಗೆ ತಿರುಗಿ ಹೀಗೆಂದರು: "ನನ್ನಲ್ಲಿಗೆ ಬರುವ ಯಾರೊಬ್ಬನೂ ತನ್ನ ತಂದೆ-ತಾಯಿ, ಹೆಂಡತಿ-ಮಕ್ಕಳು, ಸೋದರ-ಸೋದರಿಯರನ್ನು ಮಾತ್ರವಲ್ಲ, ತನ್ನ ಪ್ರಾಣವನ್ನು ಕೂಡ ತ್ಯಜಿಸದ ಹೊರತು, ನನ್ನ ಶಿಷ್ಯನಾಗಲಾರನು.    ತನ್ನ ಶಿಲುಬೆಯನ್ನು ಹೊತ್ತು ನನ್ನ ಹಿಂದೆ ಬಾರದವನು ನನ್ನ ಶಿಷ್ಯನಾಗಲಾರನು. ನಿಮ್ಮಲ್ಲಿ ಒಬ್ಬನು ಒಂದು ಗೋಪುರವನ್ನು ಕಟ್ಟಲು ಇಚ್ಚಿಸಿದರೆ, ಕೆಲಸವನ್ನು ಮುಗಿಸಲು ತನ್ನಿಂದ ಸಾಧ್ಯವೇ ಎಂದು ನೋಡಲು, ಮೊದಲು ಕುಳಿತು, ಬೇಕಾಗುವ ಖರ್ಚು ವೆಚ್ಚವನ್ನು ಲೆಕ್ಕ ಹಾಕುವುದಿಲ್ಲವೇ? ಇಲ್ಲದೆ ಹೋದರೆ, ಇವನು ಅಸ್ತಿವಾರ ಹಾಕಿದ ಮೇಲೆ ಕೆಲಸ ಪೂರೈಸದೆ ಇರುವುದನ್ನು ಕಂಡು, "ಕಟ್ಟಲಾರಂಬಿಸಿದ; ಮುಗಿಸಲು ಇವನಿಂದಾಗಲಿಲ್ಲ!" ಎಂದು ನೋಡುವವರೆಲ್ಲರೂ ಅವನನ್ನು ಪರಿಹಾಸ್ಯಮಾಡುವರು.  ಹಾಗೆಯೇ, ಅರಸನೊಬ್ಬನು ಇನ್ನೊಬ್ಬ ಅರಸನ ವಿರುದ್ಧ ಯುದ್ಧಕ್ಕೆ ಹೋಗುವುದಕ್ಕೆ ಮುಂಚೆ ಇಪ್ಪತ್ತು ಸಾವಿರ ಸೈನ್ಯದೊಡನೆ ಬರುವ ಶತ್ರುವನ್ನು ತನ್ನ ಹತ್ತು ಸಾವಿರ ಸೈನ್ಯದಿಂದ ಎದುರಿಸಲು ಸಾಧ್ಯವೇ ಎಂದು ಮೊದಲು ಕುಳಿತು ಆಲೋಚನೆ ಮಾಡುವುದಿಲ್ಲವೇ? ಸಾಧ್ಯವಿಲ್ಲದಿದ್ದರೆ, ಶತ್ರುರಾಜನು ದೂರದಲ್ಲಿರುವಾಗಲೇ ದೂತರನ್ನು ಕಳುಹಿಸಿ, ಸಂಧಾನಕ್ಕೆ ಷರತ್ತುಗಳೇನೆಂದು ವಿಚಾರಿಸುತ್ತಾನೆ. ಅದೇ ಮೇರೆಗೆ, ನಿಮ್ಮಲ್ಲಿ ಯಾವನು ತನಗಿರುವುದನ್ನೆಲ್ಲಾ ಪರಿತ್ಯಾಗ ಮಾಡುವುದಿಲ್ಲವೋ ಅವನು ನನ್ನ ಶಿಷ್ಯನಾಗಲಾರ.

No comments:

Post a Comment

15.07.2026 - ಯೇಸುಸ್ವಾಮಿ ಅದ್ಭುತ ಕಾರ್ಯಗಳನ್ನು ಹೇರಳವಾಗಿ ಮಾಡಿದ್ದರೋ ಆ ಪಟ್ಟಣಗಳ ಜನರೇ ಪಾಪಕ್ಕೆ ವಿಮುಖರಾಗಲಿಲ್ಲ

  ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 7:1-9 ಅದು ಆಹಾಜನ ಕಾಲ. ಇವನು ಯೋತಾಮನ ಮಗ, ಉಜ್ಜೀಯನ ಮೊಮ್ಮಗ, ಜುದೇಯದ ಅರಸ. ಇವನ ಕಾಲದಲ್ಲಿ ಸಿರಿಯದ ಅರಸ ರೆಚೀನ ಮತ್ತು ರೆಮ...