08.12.24

ಮೊದಲನೆಯ ವಾಚನ: ಪ್ರವಾದಿ ಬಾರೂಕನ ಗ್ರಂಥದಿಂದ ಇಂದಿನ ಮೊದಲನೆಯ ವಾಚನ 5:1-9

ಜೆರುಸಲೇಮೇ, ಕಳಚಿಬಿಡು ನಿನ್ನ ಶೋಕಾರ್ಥ ವಸ್ತ್ರಗಳನ್ನು ಧರಿಸಿಕೋ ನಿತ್ಯಕ್ಕೆಂದು ದೇವರಿಂದ ಬರುವ ಪ್ರಭಾವದ ಸೊಬಗನ್ನು. ತೊಟ್ಟುಕೋ ದೇವರಿಂದ ಬರುವ ನೀತಿಯೆಂಬ ನಿಲುವಂಗಿಯನ್ನು ಇಟ್ಟುಕೋ ತಲೆಯ ಮೇಲೆ ಮಹಿಮೆಯೆಂಬ ಮುಕುಟವನ್ನು. ದೇವರೇ ನಿನ್ನ ತೇಜಸ್ಸನ್ನು ಹರಡುವರು ಆಕಾಶದಡಿಯಿರುವ ಎಲ್ಲ ದಿಕ್ಕುಗಳಿಗು. ‘ನೀತಿಯಿಂದ ಶಾಂತಿ’, ‘ಭಕ್ತಿಯಿಂದ ಕೀರ್ತಿ’ ಎಂದು ದೇವರೇ ನಿನ್ನನ್ನು ಹೆಸರಿಸುವರು ಎಂದೆಂದಿಗು. ಜೆರುಸಲೇಮೇ, ಎದ್ದೇಳು, ಉನ್ನತ ಸ್ಥಾನದಲ್ಲಿ ನಿಲ್ಲು ಪೂರ್ವಾಭಿಮುಖವಾಗಿ ತಿರುಗಿಸು ನಿನ್ನ ಕಣ್ಣುಗಳನ್ನು. ದೇವರು ತಮ್ಮನ್ನು ನೆನೆಸಿಕೊಂಡರೆಂದು ಹಿಗ್ಗುತಿಹರು ನಿನ್ನ ಮಕ್ಕಳು ಪರಮ ಪಾವನನ ನುಡಿಯಂತೆ ಪೂರ್ವ ಪಶ್ಚಿಮದಿಂದ ಕೂಡಿಬರುತಿಹರು ನೋಡು. ಶತ್ರುಗಳಿಂದ ಒಯ್ಯಲ್ಪಟ್ಟು ಕಾಲ್ನಡೆಯಲ್ಲಿ ಅವರು ನಿನ್ನ ಬಿಟ್ಟುಹೋದರು. ಈಗ ವೈಭವದಿಂದ ಹೊರಟು, ಸಿಂಹಾಸನಾರೂಢರಾದವರಂತೆ ಬರುತ್ತಿಹರು ದೇವರೇ ಅವರನ್ನು ನಿನ್ನ ಬಳಿಗೆ ಬರಮಾಡುತ್ತಿಹರು. ಇಸ್ರಯೇಲ್ ದೈವಪ್ರಭೆಯಲಿ ಸುರಕ್ಷಿತವಾಗಿ ಸಾಗಬೇಕೆಂದು ಅದಕ್ಕಾಗಿ ಉನ್ನತ ಬೆಟ್ಟಗಳು, ನೆಲೆಯಾದ ಗುಡ್ಡಗಳು ತಗ್ಗಬೇಕೆಂದು ಹಳ್ಳಕೊಳ್ಳಗಳು ತುಂಬಿ ಭರ್ತಿಯಾಗಿ ನೆಲಸಮವಾಗಬೇಕೆಂದು ದೇವರೇ ನೇಮಕ ಮಾಡಿರುವರು. ಆ ದೇವರ ಅಪ್ಪಣೆಯ ಪ್ರಕಾರ ಇಸ್ರಯೇಲಿಗೆ ನೆರಳು ನೀಡುವುವು ಕಾಡುಗಳು, ಸುಗಂಧವಾಸನೆಯನ್ನು ಬೀರುವುವು ಗಿಡಮರಗಳು. ದೇವರು ಇಸ್ರಯೇಲನ್ನು ನಡೆಸುವರು ತಮ್ಮ ಮಹಿಮೆ ಪ್ರಕಾಶದಲ್ಲೆ ಹರುಷದೊಡನೆ ತಮ್ಮಿಂದ ಬರುವ ಕರುಣೆ ಹಾಗು ನ್ಯಾಯನೀತಿಗಳೊಡನೆ.

ಕೀರ್ತನೆ 126:1-6
ಶ್ಲೋಕ: ಪ್ರಭು ನಮಗೆ ಮಹತ್ಕಾರ್ಯ ಮಾಡಿದುದು ಖಚಿತ, ಎಂತಲೇ ನಾವಾನಂದಭರಿತರಾಗಗುವುದು ಉಚಿತ.

ಸೆರೆಯಿಂದೆಮ್ಮನು ಪ್ರಭು ಸಿಯೋನಿಗೆ ಮರಳಿಸಿದಾಗ|
ಅದೊಂದು ಕನಸು ಕಂಡಂತಿತ್ತು ನಮಗೆ ಆವಾಗ|
ಉಕ್ಕಿತಾಗ ಮುಖತುಂಬ ನಗು, ಬಾಯ್ತುಂಬ ಹರ್ಷಗೀತೆ||

ಎಂಥ ಮಹತ್ಕಾರ್ಯವೆಸಗಿದನಾ ಪ್ರಭು ಇವರ ಪರತೆ|
ಇಂತಂದು ಆಡಿಕೊಂಡರು ತಂತಮ್ಮೊಳಗೆ ಅನ್ಯಜನತೆ||
ಪ್ರಭು ನಮಗೆ ಮಹತ್ಕಾರ್ಯ ಮಾಡಿದುದು ಖಚಿತ|
ಎಂತಲೆ ನಾವಾನಂದಭರಿತರಾಗುವುದು ಉಚಿತ||

ಬತ್ತಿದ ನದಿಯಲ್ಲಿ ನೀರು ಮರಳಿ ಉಕ್ಕಿ ಹರಿಯುವಂತೆ|
ನೀಡು ಸಿರಿಸೌಭಾಗ್ಯ, ಹೇ ಪ್ರಭೂ ಮತ್ತೆ||
ಅಳುತಳುತಾ ಬಿತ್ತುವವರು, ನಲಿನಲಿಯುತಾ ಕೊಯ್ಯುವರು|
ದುಃಖಿಸುತ್ತಾ ಬೀಜ ಬಿತ್ತಲು ಹೋದವನು, ಹರ್ಷಿಸುತ್ತಾ ಕೊಯ್ದು ತರುವನು ತೆನೆಗಳನು||

ಎರಡನೆಯ ವಾಚನ: ಪೌಲನು ಫಿಲಿಪ್ಪಿಯರಿಗೆ ಬರೆದ ಪತ್ರದಿಂದ ಇಂದಿನ ಎರಡನೆಯ ವಾಚನ 1: 3-6,8-11

" ಸಹೋದರರೇ ನಿಮ್ಮನ್ನು ಜ್ಞಾಪಿಸಿಕೊಳ್ಳುವಾಗಲೆಲ್ಲಾ ನಾನು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ತುಂಬುಹೃದಯದಿಂದ ಪ್ರಾರ್ಥಿಸುತ್ತೇನೆ. ಏಕೆಂದರೆ, ನಾನು ನಿಮ್ಮನ್ನು ಸಂಧಿಸಿದ ಮೊದಲ ದಿನದಿಂದ ಇಂದಿನವರೆಗೂ ನೀವು ನನ್ನೊಡನೆ ಶುಭಸಂದೇಶದ ಪ್ರಚಾರಕಾರ್ಯದಲ್ಲಿ ಸಹಕರಿಸುತ್ತಿರುವಿರಿ. ಈ ಸತ್ಕಾರ್ಯವನ್ನು ನಿಮ್ಮಲ್ಲಿ ಪ್ರಾರಂಭಿಸಿದ ದೇವರು ಅದನ್ನು ಮುಂದುವರೆಸುತ್ತಾ, ಯೇಸುಕ್ರಿಸ್ತರು ಪುನರಾಗಮಿಸುವಷ್ಟರಲ್ಲಿ ಪೂರೈಸುವರು. ಎಂಬುದೇ ನನ್ನ ದೃಢನಂಬಿಕೆ. ಕ್ರಿಸ್ತ ಯೇಸುವಿನಲ್ಲಿರುವ ಉತ್ಕಟ ಪ್ರೀತಿಯಿಂದಲೇ ನಾನು ನಿಮ್ಮೆಲ್ಲರಿಗಾಗಿ ಹಂಬಲಿಸುತ್ತಿದ್ದೇನೆ; ಇದಕ್ಕೆ ದೇವರೇ ಸಾಕ್ಷಿ. ನೀವು ಪ್ರೀತಿಯಲ್ಲಿ ಪ್ರವರ್ಧಿಸುತ್ತಾ, ಪೂರ್ಣ ಜ್ಞಾನ ಹಾಗೂ ವಿವೇಕದಿಂದ ಕೂಡಿದವರಾಗಬೇಕೆಂಬುದೇ ನನ್ನ ಪ್ರಾರ್ಥನೆ. ಹೀಗೆ ನೀವು ಉತ್ತಮೋತ್ತಮವಾದುವುಗಳನ್ನೇ ಆರಿಸಿಕೊಂಡು ಪ್ರಭುಕ್ರಿಸ್ತರ ದಿನದಂದು ನಿರ್ದೋಷಿಗಳೂ ನಿಷ್ಕಳಂಕರೂ ಆಗಿ ಕಾಣಿಸಿಕೊಳ್ಳುವಿರಿ. ಯೇಸುಕ್ರಿಸ್ತರ ಮುಖಾಂತರ ಲಭಿಸುವ ಸತ್ಸಂಬಂಧದ ಫಲಗಳಿಂದ ತುಂಬಿದವರಾಗಿ ದೇವರಿಗೆ ಸ್ತುತಿ ಸಲ್ಲಿಸಿ, ಅವರ ಮಹಿಮೆ ಬೆಳಗುವಂತೆ ಮಾಡುವಿರಿ.

ಘೋಷಣೆ: 
ಅಲ್ಲೆಲೂಯ, ಅಲ್ಲೆಲೂಯ!

"ಪ್ರಭುವಿನ ಮಾರ್ಗವನ್ನು ಸಿದ್ಧಪಡಿಸಿರಿ ಆತನ ಆಗಮನಕ್ಕಾಗಿ ಹಾದಿಯನ್ನು ಸರಾಗಮಾಡಿರಿ ! ಆಗ ದೇವರು ದಯಪಾಲಿಸುವ ಜೀವೋದ್ಧಾರವನ್ನು ಮಾನವರೆಲ್ಲರು ಕಾಣುವರು !!

ಅಲ್ಲೆಲೂಯ!

ಶುಭಸಂದೇಶ: ಲೂಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 3:1-6

"ಅದು ತಿಬೇರಿಯಸ್ ಚಕ್ರವರ್ತಿಯ ಆಡಳಿತದ ಹದಿನೈದನೆಯ ವರ್ಷ. ಆ ಕಾಲದಲ್ಲಿ ಜುದೇಯ ಪ್ರಾಂತ್ಯಕ್ಕೆ ಪೋಂತ್ಸಿಯುಸ್ ಪಿಲಾತನು ರಾಜ್ಯಪಾಲನಾಗಿದ್ದನು. ಗಲಿಲೇಯ ಪ್ರಾಂತ್ಯಕ್ಕೆ ಹೆರೋದನೂ ಇತುರೆಯ ಮತ್ತು ತ್ರಕೋನಿತಿ ಪ್ರಾಂತ್ಯಗಳಿಗೆ ಇವನ ತಮ್ಮನಾದ ಫಿಲಿಪ್ಪನೂ ಮತ್ತು ಅಬಿಲೇನೆ ಪ್ರಾಂತ್ಯಕ್ಕೆ ಲುಸಾನಿಯನೂ ಸಾಮಂತರಾಗಿದ್ದರು. ಅನ್ನನು ಮತ್ತು ಕಾಯಿಫನು ಅಂದಿನ ಪ್ರಧಾನ ಯಾಜಕರು. ಆಗ ಬೆಂಗಾಡಿನಲ್ಲಿ ಜಕರೀಯನ ಮಗ ಯೊವಾನ್ನನಿಗೆ ದೇವರ ಸಂದೇಶದ ಬೋಧೆ ಆಯಿತು. ಆತನು ಜೋರ್ಡನ್ ನದಿಯ ಪರಿಸರ ಪ್ರಾಂತ್ಯದಲ್ಲೆಲ್ಲಾ ಸಂಚರಿಸುತ್ತಾ, "ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ, ದೇವರಿಗೆ ಅಭಿಮುಖರಾಗಿರಿ ಮತ್ತು ಸ್ನಾನದೀಕ್ಷೆ ಪಡೆದುಕೊಳ್ಳಿರಿ; ದೇವರು ನಿಮ್ಮ ಪಾಪಗಳನ್ನು ಕ್ಷಮಿಸಿಬಿಡುವರು, "ಎಂದು ಸಾರಿ ಹೇಳುತ್ತಿದ್ದನು. ಈ ಬಗ್ಗೆ ಪ್ರವಾದಿ ಯೆಶಾಯನ ಗ್ರಂಥದಲ್ಲಿ ಮುಂಚಿತವಾಗಿಯೇ ಹೀಗೆಂದು ಬರೆದಿಡಲಾಗಿದೆ: "'ಪ್ರಭುವಿಗೆ ಮಾರ್ಗವನ್ನು ಸಿದ್ಧಪಡಿಸಿರಿ, ಆತನ ಆಗಮನಕ್ಕಾಗಿ ಹಾದಿಯನ್ನು ಸರಾಗಮಾಡಿರಿ' ಎಂದು ಬೆಂಗಾಡಿನಲ್ಲಿ ಒಬ್ಬನು ಘೋಷಿಸುತ್ತಿದ್ದಾನೆ. ಹಳ್ಳಕೊಳ್ಳಗಳೆಲ್ಲ ಭರ್ತಿ ಯಾಗಬೇಕು; ಬೆಟ್ಟಗುಡ್ಡಗಳು ಮಟ್ಟವಾಗಬೇಕು; ಅಂಕು ಡೊಂಕಾದವು ನೆಟ್ಟಗಾಗಬೇಕು; ತಗ್ಗುಮುಗ್ಗಾದ ಹಾದಿಗಳು ಹಸನಾಗಬೇಕು. ಆಗ ದೇವರು ದಯಪಾಲಿಸುವ ಜೀವೋದ್ಧಾರವನ್ನು ಮಾನವರೆಲ್ಲರು ಕಾಣುವರು."

07.12.24 - "ಬೆಳೆಯೇನೋ ಹೇರಳ; ಕೊಯಿಲಿಗಾರರೋ ವಿರಳ;"

ಮೊದಲನೇ ವಾಚನ: ಯೆಶಾಯ 30: 19-21, 23-26 


ಜೆರುಸಲೇಮಿನಲ್ಲಿ ವಾಸಿಸುವ ಸಿಯೋನಿನ ಜನರೇ, ನೀವಿನ್ನು ಅಳಬೇಕಾಗಿಲ್ಲ. ನಿಮ್ಮ ಕೂಗನ್ನು ಕೇಳಿದ್ದೇ, ಸರ್ವೇಶ್ವರ ನಿಮಗೆ ಕೃಪೆತೋರಿಸುವರು. ನಿಮ್ಮ ಸ್ವರವನ್ನು ಕೇಳಿದಾಕ್ಷಣ ಸದುತ್ತರವನ್ನು ದಯಪಾಲಿಸುವರು. ಅವರು ನಿಮಗೆ ಕಷ್ಟಸಂಕಟವನ್ನು ಅನ್ನಪಾನವಾಗಿ ಕೊಟ್ಟರೂ ನಿಮ್ಮ ಬೋಧಕರು ಇನ್ನು ನಿಮಗೆ ಮರೆಯಾಗಿ ಇರುವುದಿಲ್ಲ. ನೀವು ಅವರನ್ನು ಕಣ್ಣಾರೆ ಕಾಣುವಿರಿ. ನೀವು ಬಲಕ್ಕಾಗಲೀ ಎಡಕ್ಕಾಗಲೀ ತಿರುಗಿದರೆ ‘ಇದೇ ಮಾರ್ಗ, ಇದರಲ್ಲೇ ನಡೆಯಿರಿ’ ಎಂಬ ಮಾತು ಹಿಂದಿನಿಂದ ನಿಮ್ಮ ಕಿವಿಗೆ ಕೇಳಿಸುವುದು. ಆಗ ಸರ್ವೇಶ್ವರ ಹೊಲದ ಬಿತ್ತನೆಗೆ ಬೇಕಾದ ಮಳೆಯನ್ನು ನಿಮಗೆ ಸುರಿಸುವರು. ಆ ಹೊಲದ ಬೆಳೆಯಿಂದ ಸಾರವತ್ತಾದ ಆಹಾರವನ್ನು ಸಮೃದ್ಧಿಯಾಗಿ ಒದಗಿಸುವರು. ಅಂದು ನಿಮ್ಮ ದನಕರುಗಳು ವಿಶಾಲವಾದ ಹುಲ್ಲು ಗಾವಲುಗಳಲ್ಲಿ ಮೇಯುವುವು. ಹೊಲಗೇಯುವ ನಿಮ್ಮ ಎತ್ತು ಕತ್ತೆಗಳು ಮೊರದಿಂದಲೂ ಕವೆಗೋಲಿನಿಂದಲೂ ತೂರಿದ ರುಚಿಕರವಾದ ಮೇವನ್ನು ತಿನ್ನುವುವು. ಕೋಟೆಕೊತ್ತಲಗಳು ಬಿದ್ದುಹೋಗುವುವು. ಶತ್ರುಗಳ ಮಹಾಸಂಹಾರ ನಡೆಯುವ ಆ ದಿನದಂದು ಉನ್ನತ ಪರ್ವತಗಳಿಂದಲೂ ಎತ್ತರವಾದ ಗುಡ್ಡಗಳಿಂದಲೂ ತೊರೆಗಳೂ ನೀರಿನ ಕಾಲುವೆಗಳೂ ಹರಿಯುವುವು. ಇದಲ್ಲದೆ ಚಂದ್ರನ ಬೆಳಕು ಸೂರ್ಯನ ಬೆಳಕಿನಂತಿರುವುದು. ಸೂರ್ಯನ ಬೆಳಕು ಏಳ್ಮಡಿ ಹೆಚ್ಚುವುದು. ಏಳು ದಿನಗಳ ಬೆಳಕು ಒಂದೇ ದಿನದ ಬೆಳಕಿನಂತಾಗುವುದು. ಅಂದು ಸರ್ವೇಶ್ವರ ತಮ್ಮ ಜನರ ಹುಣ್ಣುಗಳನ್ನು ಕಟ್ಟುವರು. ತಮ್ಮ ಪೆಟ್ಟಿನಿಂದ ಜನರಿಗಾದ ಗಾಯಗಳನ್ನು ಗುಣಪಡಿಸುವರು. 

ಕೀರ್ತನೆ: 147: 1-2, 3-4, 5-6

ಶ್ಲೋಕ: ಪ್ರಭುವಿನಲ್ಲಿ ವಿಶ್ವಾಸವಿಡುವವರು ಉಲ್ಲಾಸಿಸುತ್ತಾರೆ  

ಶುಭಸಂದೇಶ: ಮತ್ತಾಯ 9: 35 – 10: 1, 5a, 6-8 


ಯೇಸುಸ್ವಾಮಿ, ಊರೂರುಗಳಲ್ಲೂ ಹಳ್ಳಿಹಳ್ಳಿಗಳಲ್ಲೂ ಸಂಚಾರ ಮಾಡುತ್ತಾ ಅಲ್ಲಿಯ ಪ್ರಾರ್ಥನಾಮಂದಿರಗಳಲ್ಲಿ ಬೋಧಿಸಿದರು. ಶ್ರೀ ಸಾಮ್ರಾಜ್ಯದ ಶುಭಸಂದೇಶವನ್ನು ಸಾರಿದರು. ಎಲ್ಲಾ ತರಹದ ರೋಗರುಜಿನಗಳನ್ನು ಗುಣಪಡಿಸಿದರು. ಆ ಜನಸಮೂಹವನ್ನು ಕಂಡಾಗ ಅವರ ಮನ ಕರಗಿತು. ಏಕೆಂದರೆ, ಕುರುಬನಿಲ್ಲದ ಕುರಿಗಳಂತೆ ಅವರು ತೊಳಲಿದ್ದರು ಹಾಗೂ ಬಳಲಿದ್ದರು. ಆದುದರಿಂದ ಯೇಸು ತಮ್ಮ ಶಿಷ್ಯರಿಗೆ, "ಬೆಳೆಯೇನೋ ಹೇರಳ; ಕೊಯಿಲಿಗಾರರೋ ವಿರಳ; ಈ ಕಾರಣ ತನ್ನ ಕೊಯಿಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಪ್ರಾರ್ಥಿಸಿರಿ," ಎಂದರು. ಯೇಸುಸ್ವಾಮಿ ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಒಟ್ಟಿಗೆ ಕರೆದು, ಎಲ್ಲ ರೋಗರುಜಿನಗಳನ್ನು ಗುಣಪಡಿಸುವುದಕ್ಕೂ ದೆವ್ವಗಳನ್ನು ಬಿಡಿಸುವುದಕ್ಕೂ ಅವರಿಗೆ ಅಧಿಕಾರವನ್ನು ಕೊಟ್ಟರು. ಅದಕ್ಕೆ ಬದಲು ತಪ್ಪಿಹೋದ ಕುರಿಗಳಂತೆ ಇರುವ ಇಸ್ರಯೇಲ್ ಜನರ ಬಳಿಗೆ ಹೋಗಿರಿ; ಹೋಗುತ್ತಾ, ‘ಸ್ವರ್ಗಸಾಮ್ರಾಜ್ಯವು ಸಮೀಪಿಸಿದೆ’ ಎಂದು ಬೋಧನೆ ಮಾಡಿರಿ. ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಮತ್ತೆ ಬದುಕಿಸಿರಿ, ಕುಷ್ಠರೋಗಿಗಳನ್ನು ಸ್ವಸ್ಥಮಾಡಿರಿ, ದೆವ್ವಗಳನ್ನು ಬಿಡಿಸಿರಿ. ಉಚಿತವಾಗಿ ಪಡೆದಿರುವಿರಿ, ಉಚಿತವಾಗಿ ಕೊಡಿ.

06.12.24 "ಬೆಳೆಯೇನೋ ಹೇರಳ; ಕೊಯಿಲುಗಾರರೋ ವಿರಳ; ಈ ಕಾರಣ ತನ್ನ ಕೊಯಿಲಿಗೆ ಆಳುಗಳನ್ನು ಕಳುಹಿಸುವಂತೆ ಬೆಳೆಯ ಯಜಮಾನನನ್ನು ಪ್ರಾರ್ಥಿಸಿರಿ,

ಪ್ರವಾದಿ ಯೆಶಾಯನ ಗ್ರಂಥದಿಂದ ಇಂದಿನ ವಾಚನ 30: 19-21, 23-26

ಜೆರುಸಲೇಮಿನಲ್ಲಿ ವಾಸಿಸುವ  ಸಿಯೋನಿನ ಜನರೇ,  ನೀವಿನ್ನು ಅಳಬೇಕಾಗಿಲ್ಲ.  ನಿಮ್ಮ ಕೂಗನ್ನು  ಕೇಳಿದ್ದೇ, ಸರ್ವೇಶ್ವರ  ನಿಮಗೆ ಕೃಪೆತೋರಿಸುವರು. ನಿಮ್ಮ  ಸ್ವರವನ್ನು ಕೇಳಿದಾಕ್ಷಣ ಸದುತ್ತರವನ್ನು ದಯಪಾಲಿಸುವರು. ಅವರು  ನಿಮಗೆ ಕಷ್ಟಸಂಕಟವನ್ನು ಅನ್ನಪಾನವಾಗಿ ಕೊಟ್ಟರೂ  ನಿಮ್ಮ ಬೋಧಕರು  ಇನ್ನು ನಿಮಗೆ  ಮರೆಯಾಗಿ ಇರುವುದಿಲ್ಲ.  ನೀವು ಅವರನ್ನು  ಕಣ್ಣಾರೆ ಕಾಣುವಿರಿ.

ನೀವು  ಬಲಕ್ಕಾಗಲೀ ಎಡಕ್ಕಾಗಲೀ ತಿರುಗಿದರೆ  'ಇದೇ ಮಾರ್ಗ,  ಇದರಲ್ಲೇ ನಡೆಯಿರಿ’ಎಂಬ ಮಾತು  ಹಿಂದಿನಿಂದ ನಿಮ್ಮ  ಕಿವಿಗೆ ಕೇಳಿಸುವುದು. ಆಗ  ಸರ್ವೇಶ್ವರ ಹೊಲದ  ಬಿತ್ತನೆಗೆ ಬೇಕಾದ  ಮಳೆಯನ್ನು ನಿಮಗೆ  ಸುರಿಸುವರು. ಆ  ಹೊಲದ ಬೆಳೆಯಿಂದ ಸಾರವತ್ತಾದ ಆಹಾರವನ್ನು ಸಮೃದ್ಧಿಯಾಗಿ ಒದಗಿಸುವರು.  ಅಂದು ನಿಮ್ಮ  ದನಕರುಗಳು ವಿಶಾಲವಾದ ಹುಲ್ಲುಗಾವಲುಗಳಲ್ಲಿ ಮೇಯುವುವು.

ಹೊಲಗೇಯುವ  ನಿಮ್ಮ ಎತ್ತು  ಕತ್ತೆಗಳು ಮೊರದಿಂದಲೂ ಕವೆಗೋಲಿನಿಂದಲೂ ತೂರಿದ  ರುಚಿಕರವಾದ ಮೇವನ್ನು  ತಿನ್ನುವುವು. ಕೋಟೆಕೊತ್ತಲಗಳು ಬಿದ್ದುಹೋಗುವುವು. ಶತ್ರುಗಳ ಮಹಾಸಂಹಾರ ನಡೆಯುವ  ಆ ದಿನದಂದು  ಉನ್ನತ ಪರ್ವತಗಳಿಂದಲೂ ಎತ್ತರವಾದ ಗುಡ್ಡಗಳಿಂದಲೂ ತೊರೆಗಳೂ  ನೀರಿನ ಕಾಲುವೆಗಳೂ ಹರಿಯುವುವು.

ಇದಲ್ಲದೆ  ಚಂದ್ರನ ಬೆಳಕು  ಸೂರ್ಯನ ಬೆಳಕಿನಂತಿರುವುದು. ಸೂರ್ಯನ  ಬೆಳಕು ಏಳ್ಮಡಿ  ಹೆಚ್ಚುವುದು. ಏಳು  ದಿನಗಳ  ಬೆಳಕು ಒಂದೇ  ದಿನದ ಬೆಳಕಿನಂತಾಗುವುದು. ಅಂದು  ಸರ್ವೇಶ್ವರ ತಮ್ಮ  ಜನರ ಹುಣ್ಣುಗಳನ್ನು ಕಟ್ಟುವರು.  ತಮ್ಮ ಪೆಟ್ಟಿನಿಂದ  ಜನರಿಗಾದ ಗಾಯಗಳನ್ನು ಗುಣಪಡಿಸುವರು.

ಪ್ರಭುವಿನ ವಾಕ್ಯ

ದೇವರಿಗೆ ಕೃತಜ್ಞತೆ ಸಲ್ಲಲಿ


ಕೀರ್ತನೆ  147: 1-2,3-4,5-6

ಶ್ಲೋಕಪ್ರಭುವಿನಲ್ಲಿ  ವಿಶ್ವಾಸವಿಡುವವರು  ಉಲ್ಲಾಸಿಸುತ್ತಾರೆ.

1.  ನಮ್ಮ ದೇವರನು ಹೊಗಳಿ ಹಾಡುವುದು ಉಚಿತ|

ಆತನ ಸ್ತುತಿ ಮನೋಹರ, ಅದು ಬಲು ಸೂಕ್ತ||

ನಿರ್ಮಿಸುತಿಹರು ಪ್ರಭು ಮರಳಿ ಜೆರುಸಲೇಮನು|

ಬಂದು ಸೇರಿಸುತಿಹನು ಚದುರಿದ ಇಸ್ರಯೇಲರನು||

ಶ್ಲೋಕ

2.  ವಾಸಿಮಾಡುವನು ಮುರಿದ ಮನಸ್ಸುಳ್ಳವರನು|

ಕಟ್ಟಿ ಗುಣಪಡಿಸುವನು ಅವರ ಗಾಯಗಳನು||

ನಿಯಮಿಸಿಹನು ತಾರೆಗಳ ಸಂಖ್ಯೆಯನು|

ಇಟ್ಟಿಹನು ಪ್ರತಿಯೊಂದಕೂ ಹೆಸರನು||

ಶ್ಲೋಕ

3.  ನಮ್ಮ ಪ್ರಭು ಘನವಂತ, ಪರಾಕ್ರಮಿ|

ಅಪರಿಮಿತವಾದುದು ಆತನ ಜ್ಞಾನನಿಧಿ||

ಆಧಾರವಾಗಿಹನು ಪ್ರಭು ದೀನರಿಗೆ|

ತುಳಿದುಬಿಡುವನು ದುರ್ಜನರನು ನೆಲಕೆ||

ಶ್ಲೋಕ


ಘೋಷಣೆ  ಯೆಶಾಯ 33:22

ಅಲ್ಲೆಲೂಯ, ಅಲ್ಲೆಲೂಯ!

ಸರ್ವೇಶ್ವರಸ್ವಾಮಿಯೇ  ನಮ್ಮ  ನ್ಯಾಯಾಧಿಪತಿ,  ಸರ್ವೇಶ್ವರಸ್ವಾಮಿಯೇ  ನಮಗೆ  ಶಾಸನದಾಯಕ | ಸರ್ವೇಶ್ವರಸ್ವಾಮಿಯೇ  ನಮ್ಮ  ಅರಸ  ಅವರೇ  ನಮ್ಮ  ಉದ್ಧಾರಕ ||

ಅಲ್ಲೆಲೂಯ!

ಶುಭಸಂದೇಶ 

ಸಂತ ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 9:35-10:1,6-8


ಆ  ಕಾಲದಲ್ಲಿ  ಯೇಸು,  ಊರೂರುಗಳಲ್ಲೂ ಹಳ್ಳಿಹಳ್ಳಿಗಳಲ್ಲೂ ಸಂಚಾರ ಮಾಡುತ್ತಾ ಅಲ್ಲಿಯ ಪ್ರಾರ್ಥನಾ ಮಂದಿರಗಳಲ್ಲಿ ಬೋಧಿಸಿದರು.  ಶ್ರೀಸಾಮ್ರಾಜ್ಯದ ಶುಭಸಂದೇಶವನ್ನು  ಸಾರಿದರು.  ಎಲ್ಲಾ  ತರಹದ  ರೋಗರುಜಿನಗಳನ್ನು  ಗುಣಪಡಿಸಿದರು.  ಆ  ಜನಸಮೂಹವನ್ನು ಕಂಡಾಗ  ಅವರ  ಮನ  ಕರಗಿತು.  ಏಕೆಂದರೆ,  ಕುರುಬನಿಲ್ಲದ  ಕುರಿಗಳಂತೆ  ಅವರು  ತೊಳಲಿದ್ದರು  ಹಾಗೂ  ಬಳಲಿದ್ದರು.  ಆದುದರಿಂದ  ಯೇಸು  ತಮ್ಮ  ಶಿಷ್ಯರಿಗೆ,  "ಬೆಳೆಯೇನೋ ಹೇರಳ;  ಕೊಯಿಲುಗಾರರೋ ವಿರಳ;  ಈ  ಕಾರಣ  ತನ್ನ  ಕೊಯಿಲಿಗೆ  ಆಳುಗಳನ್ನು  ಕಳುಹಿಸುವಂತೆ  ಬೆಳೆಯ ಯಜಮಾನನನ್ನು  ಪ್ರಾರ್ಥಿಸಿರಿ, "ಎಂದರು.  ಯೇಸು  ತಮ್ಮ  ಹನ್ನೆರಡು  ಮಂದಿ  ಶಿಷ್ಯರನ್ನು  ಒಟ್ಟಿಗೆ  ಕರೆದು,  ಎಲ್ಲ  ರೋಗರುಜಿನಗಳನ್ನು  ಗುಣಪಡಿಸುವುದಕ್ಕೂ  ದೆವ್ವಗಳನ್ನು  ಬಿಡಿಸುವುದಕ್ಕೂ  ಅವರಿಗೆ  ಅಧಿಕಾರವನ್ನು  ಕೊಟ್ಟರು.  ಆ  ಹನ್ನೆರಡು  ಮಂದಿಯ  ನಿಯೋಗವನ್ನು  ಕಳುಹಿಸುವಾಗ  ಯೇಸು  ಅವರಿಗೆ  ಕೊಟ್ಟ  ಆದೇಶವೇನೆಂದರೆ : ತಪ್ಪಿಹೋದ  ಕುರಿಗಳಂತೆ  ಇರುವ  ಇಸ್ರಯೇಲ್  ಜನರ  ಬಳಿಗೆ  ಹೋಗಿರಿ;  ಹೋಗುತ್ತಾ,  'ಸ್ವರ್ಗಸಾಮ್ರಾಜ್ಯವು  ಸಮೀಪಿಸಿದೆ'  ಎಂದು  ಬೋಧನೆಮಾಡಿರಿ.  ರೋಗಿಗಳನ್ನು  ಗುಣಪಡಿಸಿರಿ,  ಸತ್ತವರನ್ನು  ಮತ್ತೆ  ಬದುಕಿಸಿರಿ,  ಕುಷ್ಠರೋಗಿಗಳನ್ನು  ಸ್ವಸ್ಥಮಾಡಿರಿ,  ದೆವ್ವಗಳನ್ನು  ಬಿಡಿಸಿರಿ,  ಉಚಿತವಾಗಿ  ಪಡೆದಿರುವಿರಿ,  ಉಚಿತವಾಗಿ  ಕೊಡಿರಿ.

ಪ್ರಭುಕ್ರಿಸ್ತರ ಶುಭಸಂದೇಶ

ಕ್ರಿಸ್ತರೇ, ನಿಮಗೆ ಸ್ತುತಿ ಸಲ್ಲಲಿ


05.12.24 - ನನ್ನನ್ನು"ಸ್ವಾಮೀ, ಸ್ವಾಮೀ, "ಎನ್ನುವ ಪ್ರತಿಯೊಬ್ಬನೂ ಸ್ವರ್ಗ ಸಾಮ್ರಾಜ್ಯವನ್ನು ಪ್ರವೇಶಿಸನು.

ಮೊದಲನೆಯ ವಾಚನ: ಪ್ರವಾದಿ ಯೆಶಾಯನ ಗ್ರಂಥದಿಂದ ಇಂದಿನ ವಾಚನ: 26:1-6



ನಮಗಿದೆ ಸುಭದ್ರ ನಗರ, ದೇವರೇ ಅದರ ದುರ್ಗ, ಪ್ರಕಾರ. ತೆರೆಯಿರಿ ನಗರ ದ್ವಾರಗಳನ್ನು, ಪ್ರವೇಶಿಸಲಿ ವಿಶ್ವಾಸವುಳ್ಳ ಸಜ್ಜನರು. ನಿನ್ನ ನೆಚ್ಚಿದವರಿಗೆ, ಸ್ಥಿರಚಿತ್ತವುಳ್ಳವರಿಗೆ, ಚಿರಶಾಂತಿಯ ನೀ ನೀಡುವೆ ಶಾಶ್ವತ ಆಶ್ರಯಗಿರಿ. ಸ್ವಾಮಿ ಸರ್ವೇಶ್ವರನೇ, ಸತತ ಭರವಸೆಯಿಡಿರಿ ಆತನಲ್ಲೇ. ತಗ್ಗಿಸುವನಾತ ಎತ್ತರದಲಿ ವಾಸಿಸುವವರನ್ನು; ಕೆಡವಿ ನೆಲಸಮಮಾಡಿ, ಧೂಳಾಗಿಸುವನು ಅವರು ವಾಸಮಾಡುವ ಉನ್ನತ ನಗರವನು. ಈಡಾಗುವುದದು ಕಾಲ ತುಳಿತಕ್ಕೆ, ದೀನದಲಿತರ ಪಾದ ತುಳಿತಕೆ.

ಕೀರ್ತನೆ 118:1,8-9,19-21,25-27
ಶ್ಲೋಕ: ಪ್ರಭುವಿನ ನಾಮದಲ್ಲಿ ಬರುವವನಿಗೆ ಜಯಮಂಗಳ.

ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ|
ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ||
ಪ್ರಭುವನು ಆಶ್ರಯಿಸಿಕೊಳ್ಳುವುದು ಹಿತ,|
ರಾಜನಲ್ಲಿ ಭರವಸೆಯಿಡುವುದಕ್ಕಿಂತ ಪ್ರಭುವನು ಆಶ್ರಯಿಸಿಕೊಳ್ಳುವುದು ಹಿತ||

ತೆರೆಯಿರಿ ಎನಗೆ ನೀತಿದ್ವಾರಗಳನು, ಒಳನುಗ್ಗಿ ಹೊಗಳುವೆನು ಪ್ರಭುವನು|
ಇದುವೇ ದ್ವಾರ ಪ್ರಭುವಿನ ಮಂದಿರಕೆ||
ಇದುವೇ ಪ್ರವೇಶಮಾರ್ಗ ಸಜ್ಜನರಿಗೆ|
ಸದುತ್ತರ ಪಾಲಿಸಿದೆ ಪ್ರಭೂ, ನಿನಗೆ ವಂದನೆ|
ಉದ್ಧಾರಮಾಡಿದೆ, ನಿನಗೆ ಕೃತಜ್ಞತಾ ವಂದನೆ||

ರಕ್ಷಿಸು ಪ್ರಭೂ, ರಕ್ಷಿಸು ದಯವಿಟ್ಟು, ಸುಕ್ಷೇಮ ನೀಡು ಪ್ರಭು ಕರುಣೆಯಿಟ್ಟು|
ಪ್ರಭುವಿನ ನಾಮದಲಿ ಬರುವವನಿಗೆ ಜಯಮಂಗಳ||
ಪ್ರಭುವಿನ ಮಂದಿರದಲ್ಲಿಹ ನಮ್ಮಿಂದ ಶುಭಮಂಗಳ||
ಪ್ರಭುವೇ ದೇವನು, ನಮ್ಮ ಮೇಲೆ ಜ್ಯೋತಿಯ ಬೆಳಗಿದವನು|
ಪ್ರದಕ್ಷಿಣೆ ಮಾಡಿರಿ, ಬಲಿಪೀಠದ ಸುತ್ತ ಹಿಡಿದು ರೆಂಬೆಗಳನು||

ಘೋಷಣೆ ಯೆಶಾಯ 40:9-10
ಅಲ್ಲೆಲೂಯ, ಅಲ್ಲೆಲೂಯ!

ಧ್ವನಿಯೇರಿಸು, ಶುಭವಾರ್ತೆಸಾರಬಲ್ಲ ಜೆರುಸಲೇಮೇ | ಇಗೋ, ಬರುತಿಹನು ಸ್ವಾಮಿಸರ್ವೇಶ್ವರ ಶೂರನಂತೆ ||

ಶುಭಸಂದೇಶ: ಸಂತ ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 7:21,24-27



"ನನ್ನನ್ನು"ಸ್ವಾಮೀ, ಸ್ವಾಮೀ, "ಎನ್ನುವ ಪ್ರತಿಯೊಬ್ಬನೂ ಸ್ವರ್ಗ ಸಾಮ್ರಾಜ್ಯವನ್ನು ಪ್ರವೇಶಿಸನು. ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತಾನುಸಾರ ನಡೆಯುವವನು ಮಾತ್ರ ಅದನ್ನು ಪ್ರವೇಶಿಸುವನು. ನನ್ನ ಈ ಮಾತುಗಳನ್ನು ಕೇಳಿ ಅದರಂತೆ ನಡೆಯುವ ಪ್ರತಿಯೊಬ್ಬನೂ ಬಂಡೆಯ ಮೇಲೆ ಮನೆ ಕಟ್ಟಿಕೊಂಡ ಬುದ್ಧಿವಂತನನ್ನು ಹೋಲುತ್ತಾನೆ. ಮಳೆ ಬಂತು ನೆರೆ ಬಂತು ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು. ಆದರೂ ಅದು ಬೀಳಲಿಲ್ಲ. ಕಾರಣ ಅದರ ಅಡಿಗಟ್ಟು ಬಂಡೆಯ ಮೇಲಿತ್ತು. ನನ್ನ ಈ ಮಾತುಗಳನ್ನು ಕೇಳಿಯೂ ಅದರಂತೆ ನಡೆಯದ ಪ್ರತಿಯೊಬ್ಬನೂ ಮರಳಿನ ಮೇಲೆ ಮನೆ ಕಟ್ಟಿಕೊಂಡ ಬುದ್ಧಿಹೀನನನ್ನು ಹೋಲುತ್ತಾನೆೆ. ಮಳೆ ಬಂತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು; ಅದು ಕುಸಿದು ಬಿತ್ತು. ಅದಕ್ಕಾದ ಪತನವೋ ಅಗಾಧ!

04.12.24

ಮೊದಲನೆಯ ವಾಚನ: ಪ್ರವಾದಿ ಯೆಶಾಯನ ಗ್ರಂಥದಿಂದ ಇಂದಿನ ವಾಚನ 25:6-10

ಇದಲ್ಲದೆ ಸೇನಾಧೀಶ್ವರ ಸರ್ವೇಶ್ವರ ಈ ಪರ್ವತದಲ್ಲಿ ಸಕಲ ರಾಷ್ಟ್ರಗಳಿಗೆ ಸಾರವತ್ತಾದ ಮೃಷ್ಟಾನ್ನವನ್ನೂ ಶ್ರೇಷ್ಠವಾದ ದ್ರಾಕ್ಷರಸವನ್ನೂ ಭೋಜನಕ್ಕಾಗಿ ಅಣಿಗೊಳಿಸುವರು. ಸಮಸ್ತ ರಾಷ್ಟ್ರಗಳನ್ನು ಆವರಿಸಿರುವ ಮುಸುಕನ್ನೂ ಸಕಲ ದೇಶಗಳನ್ನು ಮುಚ್ಚಿರುವ ತೆರೆಯನ್ನೂ ಇದೇ ಪರ್ವತದಲ್ಲಿ ನಾಶಮಾಡುವರು. ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವರು. ಸರ್ವೇಶ್ವರಸ್ವಾಮಿ ಎಲ್ಲರ ಕಣ್ಣೀರನ್ನು ಒರೆಸಿ ಬಿಡುವರು. ತಮ್ಮ ಪ್ರಜೆಗಾದ ಅವಮಾನವನ್ನು ಜಗದಿಂದಲೇ ತೊಲಗಿಸಿಬಿಡುವರು. ಸರ್ವೇಶ್ವರ ಸ್ವಾಮಿಯೇ ಇಂತೆಂದು ನುಡಿದಿದ್ದಾರೆ. ಇದು ನೆರವೇರಿದಾಗ ಜನರು "ಇವರೇ ನಮ್ಮ ದೇವರು; ನಮ್ಮನ್ನು ರಕ್ಷಿಸುವರೆಂದು ಇವರನ್ನೆ ನೆಚ್ಚಿಕೊಂಡಿದ್ದೆವು. ಇವರು ನೀಡುವ ರಕ್ಷಣೆಯಲ್ಲಿ ಆನಂದಿಸೋಣ ! "ಎಂದು ಹೇಳಿಕೊಳ್ಳುವರು. ಸರ್ವೇಶ್ವರಸ್ವಾಮಿಯ ಅಭಯ ಹಸ್ತವು ಈ ಪರ್ವತದ ಮೇಲೆ ಶಾಶ್ವತವಾಗಿ ನೆಲಸುವುದು. ಮೋವಾಬಾದರೋ ತಿಪ್ಪೆಗುಂಡಿಯ ರೊಚ್ಚಿನಲ್ಲಿ ಒಣಹುಲ್ಲು ತುಳಿತಕ್ಕೆ ಈಡಾಗುವಂತೆ ತಾನಿದ್ದಲ್ಲೇ ತುಳಿತಕ್ಕೀಡಾಗುವುದು.

ಕೀರ್ತನೆ: 23:1-2,3-4,5-6
ಶ್ಲೋಕ: ದೇವಮಂದಿರದಲ್ಲಿ ನಾ ವಾಸಿಸುವೆ ಚಿರಕಾಲವೆಲ್ಲ.

ಪ್ರಭು ಕುರಿಗಾಹಿಯಾಗಿರಲು ನನಗೆ|
ಕುಂದುಕೊರತೆಗಳೆಲ್ಲಿಯವು ಎನಗೆ?||
ಹಸಿರುಗಾವಲುಗಳಲೆನ್ನ ತಂಗಿಸುವನು|
ತಿಳಿಕೊಳಗಳ ಬಳಿಗೆನ್ನ ಕರೆದೊಯ್ಯುವನು||

ಪುನಶ್ಚೇತನಗೊಳಿಸುವನು ನನ್ನ ಪ್ರಾಣವನಾತ|
ಸನ್ಮಾರ್ಗದಲ್ಲಿ ನಡೆಸುವನು ತನ್ನ ನಾಮ ನಿಮಿತ್ತ||
ಕಾರ್ಗತ್ತಲ ಕಣಿವೆಯಲಿ ನಾ ನಡೆವಾಗಲು, ಅಂಜೆನು ಕೇಡಿಗೆ|
ನಿನ್ನ ಕುರಿಗೋಲು ಊರುಗೋಲು ಧೈರ್ಯವನ್ನು ತರುವುದೆನಗೆ|
ಕಾಣೆನೆಂದಿಗೂ ನಾ ದಿಗಿಲನು, ನೀನಿರಲು ನನ್ನೊಂದಿಗೆ||

ಸಜ್ಜುಗೊಳಿಸಿರುವೆ ನೀ ಶತ್ರುಗಳ ಕಣ್ಣುಂದೆಯೇ ನನಗೌತಣವನು|
ಹಚ್ಚುವೆ ತಲೆಗೆ ತೈಲವನು, ತುಂಬಿತುಳುಕಿಸುವ ಪಾನಪಾತ್ರೆಯನು||
ಶುಭಕಾಂತಿಯಿಂದ ನಾ ಬಾಳುವೆ ಜೀವಮಾನವೆಲ್ಲ|
ದೇವಮಂದಿರದಲಿ ನಾ ವಾಸಿಸುವೆ ಚಿರಕಾಲವೆಲ್ಲ||

ಘೋಷಣೆ ಯೆಶಾಯ 33:22

ಅಲ್ಲೆಲೂಯ, ಅಲ್ಲೆಲೂಯ!

ಸರ್ವೇಶ್ವರಸ್ವಾಮಿಯೇ ನಮ್ಮ ನ್ಯಾಯಾಧಿಪತಿ, ಸರ್ವೇಶ್ವರಸ್ವಾಮಿಯೇ ನಮಗೆ ಶಾಸನದಾಯಕ | ಸರ್ವೇಶ್ವರಸ್ವಾಮಿಯೇ ನಮ್ಮ ಅರಸ, ಅವರೇ ನಮ್ಮ ರಾಜ, ಅವರೇ ನಮ್ಮ ಉದ್ಧಾರಕ ||

ಶುಭಸಂದೇಶ: ಸಂತ ಮತ್ತಾಯನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 15:29-37

ಆ ಕಾಲದಲ್ಲಿ ಯೇಸು ಆ ಸ್ಥಳವನ್ನು ಬಿಟ್ಟು, ಗಲಿಲೇಯ ಸರೋವರದ ತೀರದಲ್ಲೇ ನಡೆದು, ಒಂದು ಗುಡ್ಡವನ್ನು ಹತ್ತಿ ಅಲ್ಲಿ ಕುಳಿತುಕೊಂಡರು. ಜನರು ಗುಂಪುಗುಂಪಾಗಿ ಅಲ್ಲಿಗೆ ಬಂದರು. ಕುಂಟರು, ಕುರುಡರು, ಮೂಕರು, ಅಂಗವಿಕಲರು ಮುಂತಾದ ಅನೇಕರನ್ನು ತಮ್ಮೊಡನೆ ಕರೆತಂದು ಯೇಸುವಿನ ಪಾದಸನ್ನಿಧಿಯಲ್ಲಿ ಬಿಟ್ಟರು. ಯೇಸು ಅವರನ್ನು ಗುಣಪಡಿಸಿದರು. ಮೂಕರು ಮಾತನಾಡುವುದನ್ನೂ ಅಂಗವಿಕಲರು ಸ್ವಸ್ತರಾಗುವುದನ್ನೂ ಕುಂಟರು ನಡೆಯುವುದನ್ನೂ ಕುರುಡರು ನೋಡುವುದನ್ನೂ ಈ ಜನರು ಕಂಡು ಆಶ್ಚರ್ಯ ಚಕಿತರಾಗಿ ಇಸ್ರಯೇಲಿನ ದೇವರನ್ನು ಕೊಂಡಾಡಿದರು. ಯೇಸು ತಮ್ಮ ಶಿಷ್ಯರನ್ನು ಹತ್ತಿರಕ್ಕೆ ಕರೆದು, " ಈ ಜನಸ್ತೋಮ ಕಳೆದ ಮೂರು ದಿನಗಳಿಂದಲೂ ನನ್ನ ಬಳಿ ಇದೆ. ಊಟಕ್ಕೆ ಇವರಲ್ಲಿ ಏನೂ ಇಲ್ಲ. ಇವರನ್ನು ಕಂಡು ನನ್ನ ಹೃದಯ ಕರಗುತ್ತದೆ. ಇವರನ್ನು ಹಸಿದ ಹೊಟ್ಟೆಯಲ್ಲಿ ಕಳಿಸಿಬಿಡಲು ನನಗೆ ಇಷ್ಟವಿಲ್ಲ, ದಾರಿಯಲ್ಲಿ ಬಳಲಿ ಬಿದ್ದಾರು, "ಎಂದರು. ಅದಕ್ಕೆ ಶಿಷ್ಯರು, "ಇಷ್ಟು ದೊಡ್ಡ ಗುಂಪಿಗೆ ಆಗುವಷ್ಟು ರೊಟ್ಟಿಯನ್ನು ಈ ಅಡವಿಯಲ್ಲಿ ನಾವು ತರುವುದಾದರೂ ಎಲ್ಲಿಂದ? "ಎಂದು ಕೇಳಿದರು. "ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ? "ಎಂದು ಯೇಸು ಕೇಳಿದರು. "ಏಳು ರೊಟ್ಟಿಗಳು ಮತ್ತು ಕೆಲವು ಮೀನುಗಳಿವೆ, "ಎಂದು ಶಿಷ್ಯರು ಉತ್ತರಕೊಟ್ಟರು. ಆಗ ಜನಸಮೂಹಕ್ಕೆ ನೆಲದ ಮೇಲೆ ಕುಳಿತುಕೊಳ್ಳುವಂತೆ ಯೇಸು ಆಜ್ಞಾಪಿಸಿದರು. ಅನಂತರ ಆ ಏಳು ರೊಟ್ಟಿಗಳನ್ನೂ ಮೀನುಗಳನ್ನೂ ತೆಗೆದುಕೊಂಡು, ದೇವರಿಗೆ ಸ್ತೋತ್ರಸಲ್ಲಿಸಿ, ಅವುಗಳನ್ನು ಮುರಿದು ತಮ್ಮ ಶಿಷ್ಯರಿಗೆ ಕೊಟ್ಟರು; ಶಿಷ್ಯರು ಜನರಿಗೆ ಬಡಿಸಿದರು. ಜನರೆಲ್ಲರೂ ಉಂಡು ತೃಪ್ತರಾದರು. ಉಳಿದ ತುಂಡುಗಳನ್ನು ಶಿಷ್ಯರು ಏಳು ಕುಕ್ಕೆಗಳ ತುಂಬ ತುಂಬಿಸಿಕೊಂಡರು.

03.12.24 - “ನೀವು ಕಾಣುವುದನ್ನು ಕಾಣುವ ಕಣ್ಣುಗಳು ಭಾಗ್ಯವುಳ್ಳವು"

ಮೊದಲನೇ ವಾಚನ: ಯೆಶಾಯ 11: 1-10 


ಜೆಸ್ಸೆಯನ ಬುಡದಿಂದ ಒಡೆಯುವು ದೊಂದು ಚಿಗುರು; ಅದರ ಬೇರಿನಿಂದ ಫಲಿಸುವುದೊಂದು ತಳಿರು. ನೆಲಸುವುದಾತನ ಮೇಲೆ ಜ್ಞಾನವಿವೇಕ ದಾಯಕ ಆತ್ಮ; ಶಕ್ತಿ ಸಮಾಲೋಚನೆಯನ್ನೀಯುವ ಆತ್ಮ; ಸರ್ವೇಶ್ವರನ ಅರಿವನು, ಭಯವನು ಹುಟ್ಟಿಸುವ ಆತ್ಮ ಅಹುದು, ನೆಲಸುವುದಾತನ ಮೇಲೆ ಸರ್ವೇಶ್ವರನ ಆತ್ಮ ಸರ್ವೇಶ್ವರನ ಭಯಭಕ್ತಿ ಅವಗೆ ಪರಿಮಳದಂತೆ. ತೀರ್ಪಿಡನಾತ ಕಣ್ಣಿಗೆ ತೋಚಿದಂತೆ ನಿರ್ಣಯಿಸನಾತ ಕಿವಿಗೆ ಬಿದ್ದಂತೆ. ಆದರೆ ಬಡಬಗ್ಗರಿಗೆ ತೀರ್ಪಿಡುವನು ನ್ಯಾಯನೀತಿಯಿಂದ ನಾಡ ದಲಿತರಿಗೆ ನಿರ್ಣಯಿಸುವನು ಯಥಾರ್ಥತೆಯಿಂದ ದಂಡಿಸುವನು ಲೋಕವನು ನುಡಿಯೆಂಬ ದಂಡದಿಂದ ಕೊಲ್ಲುವನು ಕೆಡುಕರನು ಉಸಿರೆಂಬ ಕತ್ತಿಯಿಂದ. ಸದ್ಧರ್ಮವೇ ಆತನಿಗೆ ನಡುಕಟ್ಟು ಪ್ರಾಮಾಣಿಕತೆಯೇ ಸೊಂಟಪಟ್ಟಿ. ಬಾಳುವುವು ತೋಳಕುರಿಮರಿಗಳು ಒಂದಿಗೆ ಮಲಗುವುವು ಮೇಕೆಚಿರತೆಗಳು ಜೊತೆಗೆ ಮೊಲೆಯುಣ್ಣುವುವು ಕರುಕೇಸರಿಗಳು ಒಟ್ಟಿಗೆ ನಡೆಸುವುದವುಗಳನು ಚಿಕ್ಕಮಗು ಮೇಯಿಸುವುದಕೆ. ಮೇಯುವುವು ಕರಡಿ, ಆಕಳುಗಳು ಒಟ್ಟಿಗೆ ಮಲಗುವುವು ಅವುಗಳ ಮರಿಗಳು ಜೊತೆಗೆ ಎತ್ತಿನ ಹುಲ್ಲು ಮೇವಾಗುವುದು ಸಿಂಹಕೆ. ಆಡುವುದು ಮೊಲೆಗೂಸು ನಾಗರ ಹುತ್ತದ ಮೇಲೆ ಕೈ ಹಾಕುವುದು ಮೊಲೆಬಿಟ್ಟ ಮಗು ಹಾವಿನಬಿಲದ ಒಳಗೆ. ಹಾನಿಯನು, ಕೇಡನು ಮಾಡರಾರೂ ನನ್ನ ಪರ್ವತದ ಮೇಲೆ. ಸಮುದ್ರದಂತೆ ತುಂಬಿರುವುದು ಸರ್ವೇಶ್ವರನ ಜ್ಞಾನ, ಧರೆಯ ಮೇಲೆ. ಆ ದಿನದಂದು ಜೆಸ್ಸೆಯನ ಸಂತಾನದ ಕುಡಿ ಸರ್ವಜನಾಂಗಗಳಿಗೆ ಧ್ವಜಪ್ರಾಯವಾಗಿ ನಿಲ್ಲುವುದು. ಆತನನ್ನು ರಾಷ್ಟ್ರಗಳು ಆಶ್ರಯಿಸುವುವು; ವೈಭವದಿಂದಿರುವುದಾತನ ವಿಶ್ರಾಂತಿ ನಿಲಯವು.

ಕೀರ್ತನೆ: 72: 1-2, 7-8, 12-13, 17 
ಶ್ಲೋಕ: ಬೆಳೆಯಲಿ ಆತನ ಪಾಲನೆಯಲ್ಲಿ ನ್ಯಾಯನೀತಿ, ಬೆಳಗಲಿ ಚಂದ್ರನಂತೆ ಸದಾ ಸಂಪೂರ್ಣ ಶಾಂತಿ. 

ಶುಭಸಂದೇಶ: ಲೂಕ 10: 21-24 

ಯೇಸುಸ್ವಾಮಿ ಪವಿತ್ರಾತ್ಮರಿಂದ ಹರ್ಷಾವೇಶಗೊಂಡು, “ಪಿತನೇ, ಭೂಸ್ವರ್ಗಗಳ ಒಡೆಯನೇ, ಈ ವಿಷಯಗಳನ್ನು ಜ್ಞಾನಿಗಳಿಗೂ ಮೇಧಾವಿಗಳಿಗೂ ಮರೆಮಾಡಿ, ಮಕ್ಕಳಂಥವರಿಗೆ ನೀವು ಶ್ರುತಪಡಿಸಿದ್ದೀರಿ; ಇದಕ್ಕಾಗಿ ನಿಮ್ಮನ್ನು ವಂದಿಸುತ್ತೇನೆ. ಹೌದು ಪಿತನೇ, ಇದೇ ನಿಮ್ಮ ಸುಪ್ರೀತ ಸಂಕಲ್ಪ. ನನ್ನ ಪಿತ ಸಮಸ್ತವನ್ನೂ ನನ್ನ ವಶಕ್ಕೆ ಒಪ್ಪಿಸಿದ್ದಾರೆ. ಪುತ್ರನು ಯಾರೆಂದು ಪಿತನ ಹೊರತು ಬೇರಾರೂ ಅರಿಯರು. ಪಿತನು ಯಾರೆಂದು ಪುತ್ರನು ಮತ್ತು ಯಾರಿಗೆ ಪುತ್ರನು ಅವರನ್ನು ಶ್ರುತಪಡಿಸಲು ಇಚ್ಛಿಸುತ್ತಾನೋ ಅವರೇ ಹೊರತು ಮತ್ತಾರೂ ಅರಿಯರು,” ಎಂದು ಹೇಳಿದರು. ಅನಂತರ ಯೇಸು ಶಿಷ್ಯರ ಕಡೆ ತಿರುಗಿ, ಅವರಿಗೆ ಪ್ರತ್ಯೇಕವಾಗಿ, “ನೀವು ಕಾಣುವುದನ್ನು ಕಾಣುವ ಕಣ್ಣುಗಳು ಭಾಗ್ಯವುಳ್ಳವು. ಏಕೆಂದರೆ, ಎಷ್ಟೋ ಪ್ರವಾದಿಗಳು ಹಾಗೂ ಅರಸರು ನೀವು ನೋಡುವುದನ್ನು ನೋಡುವುದಕ್ಕೂ, ನೀವು ಕೇಳುವುದನ್ನು ಕೇಳುವುದಕ್ಕೂ ಆಶಿಸಿದರು. ಆದರೂ ಅದನ್ನು ಅವರು ನೋಡಲೂ ಇಲ್ಲ, ಕೇಳಲೂ ಇಲ್ಲ ಎಂದು ನಿಮಗೆ ಹೇಳುತ್ತೇನೆ,” ಎಂದರು.

02.12.24 - "ತಾವು ಒಂದೇ ಒಂದು ಮಾತು ಹೇಳಿದರೆ ಸಾಕು"

ಮೊದಲನೇ ವಾಚನ: ಯೆಶಾಯ 4:2-6 


ಆ ದಿನದಂದು ಸರ್ವೇಶ್ವರಸ್ವಾಮಿ ಅನುಗ್ರಹಿಸುವ ಗಿಡಮರಗಳು ಸುಂದರವಾಗಿರುವುವು, ಸಮೃದ್ಧಿಯಾಗಿ ಬೆಳೆಯುವುವು. ಭೂಮಿಯ ಸಿರಿಸುಗ್ಗಿ ಅಳಿದುಳಿದ ಇಸ್ರಯೇಲರಿಗೆ ಹಿಗ್ಗನ್ನೂ ಹೆಮ್ಮೆಯನ್ನೂ ತರುವುದು. ಸಿಯೋನಿನಲ್ಲಿ ಉಳಿದವರು, ಜೆರುಸಲೇಮಿನಲ್ಲಿ ಮಿಕ್ಕವರು - ಅಂದರೆ ಜೀವಬಾಧ್ಯರ ಪಟ್ಟಿಯಲ್ಲಿ ಲಿಖಿತವಾಗಿರುವ ಜೆರುಸಲೇಮಿನ ನಿವಾಸಿಗಳೆಲ್ಲರು - ಪವಿತ್ರರೆನಿಸಿಕೊಳ್ಳುವರು. ಆಗ ಒಡೆಯರಾದ ಸ್ವಾಮಿ ನ್ಯಾಯ ನಿರ್ಣಯ ಮಾಡುವ ತಮ್ಮ ಚೈತನ್ಯದಿಂದಲೂ ಸುಟ್ಟು ಶುಚಿ ಮಾಡುವ ಚೈತನ್ಯದಿಂದಲೂ ಸಿಯೋನಿನ ಮಹಿಳೆಯರ ಕಲ್ಮಶವನ್ನು ತೊಡೆದು ಹಾಕುವರು. ಸಿಯೋನ್ ಪರ್ವತದ ಮೇಲೆಲ್ಲಾ, ಅಲ್ಲಿನ ಸಭಾ ಕೂಟಗಳ ಮೇಲೆಲ್ಲಾ ಹಗಲಲ್ಲಿ ಧೂಮ ಮೇಘವನ್ನು, ರಾತ್ರಿಯಲ್ಲಿ ಪ್ರಜ್ವಲಿಸುವ ಅಗ್ನಿ ಪ್ರಕಾಶವನ್ನು ಉಂಟು ಮಾಡುವರು. ದೇವರ ಮಹಿಮೆ ಛತ್ರಿಯಂತೆಯೂ ಚಪ್ಪರದಂತೆಯೂ ಎಲ್ಲರನ್ನು ಆವರಿಸುವುದು. ಅದು ಹಗಲಿನ ಬಿಸಿಲಲ್ಲಿ ನೆರಳನ್ನೂ ಮಳೆ ಗಾಳಿ ಬಂದಾಗ ಆಶ್ರಯವನ್ನೂ ಕೊಡುವ ಮಂಟಪವಾಗಿರುವುದು. 

ಕೀರ್ತನೆ: 122:1-2, 3-4, 4-5, 6-7, 8-9 

ಶ್ಲೋಕ: ಪ್ರಭುವಿನಾಲಯಕ್ಕೆ ಹೋಗೋಣ ಬಾ ಎಂದಾಗ ಆಯಿತೆನಗೆ ಆನಂದ, ಜನರೆನ್ನ ಕರೆದಾಗ 

ಶುಭಸಂದೇಶ: ಮತ್ತಾಯ 8:5-11 

ಯೇಸುಸ್ವಾಮಿ ಕಫೆರ್ನವುಮ್ ಊರಿಗೆ ಬಂದಾಗ ಶತಾಧಿಪತಿಯೊಬ್ಬನು ಅವರನ್ನು ಎದುರುಗೊಂಡನು. "ಪ್ರಭೂ, ನನ್ನ ಸೇವಕ ಮನೆಯಲ್ಲಿ ಪಾರ್ಶ್ವವಾಯು ರೋಗದಿಂದ ಹಾಸಿಗೆ ಹಿಡಿದಿದ್ದಾನೆ. ಬಹಳವಾಗಿ ನರಳುತ್ತಿದ್ದಾನೆ," ಎಂದು ವಿನಂತಿಸಿದನು. ಯೇಸು, "ನಾನೇ ಬಂದು ಅವನನ್ನು ಗುಣಪಡಿಸುತ್ತೇನೆ," ಎಂದರು. ಅದಕ್ಕೆ ಆ ಶತಾಧಿಪತಿ, "ಪ್ರಭುವೇ, ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ. ತಾವು ಒಂದೇ ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು. ಏಕೆಂದರೆ, ನಾನೂ ಮತ್ತೊಬ್ಬರ ಕೈ ಕೆಳಗಿರುವವನು, ನನ್ನ ಅಧೀನದಲ್ಲೂ ಸೈನಿಕರಿದ್ದಾರೆ. ಅವರಲ್ಲಿ ಒಬ್ಬನಿಗೆ ನಾನು, "ಬಾ"  ಎಂದರೆ ಬರುತ್ತಾನೆ. ಇನ್ನೊಬ್ಬನಿಗೆ, "ಹೋಗು" ಎಂದರೆ ಹೋಗುತ್ತಾನೆ. ಸೇವಕನಿಗೆ, "ಇಂಥದ್ದನ್ನು ಮಾಡು" ಎಂದರೆ  ಮಾಡುತ್ತಾನೆ," ಎಂದನು. ಈ ಮಾತನ್ನು ಕೇಳಿದ್ದೇ ಯೇಸುವಿಗೆ ಅತ್ಯಾಶ್ಚರ್ಯವಾಯಿತು. ತಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಜನರನ್ನು ನೋಡಿ ಹೀಗೆಂದರು: "ಇಂಥ ಗಾಢ ವಿಶ್ವಾಸವನ್ನು ನಾನು ಇಸ್ರಯೇಲ್ ಜನರಲ್ಲಿ ಕೂಡ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಪೂರ್ವ ಪಶ್ಚಿಮ ದಿಕ್ಕುಗಳಿಂದ ಆನೇಕ ಜನರು ಬಂದು ಅಬ್ರಾಹಾಮ, ಇಸಾಕ, ಯಕೋಬರ ಸಮೇತ ಸ್ವರ್ಗಸಾಮ್ರಾಜ್ಯ ಹಬ್ಬದೂಟದಲ್ಲಿ ಭಾಗಿಗಳಾಗುವರು.

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...