04.06.24 - "ಚಕ್ರವರ್ತಿಗೆ ಸಲ್ಲತಕ್ಕದನ್ನು ಚಕ್ರವರ್ತಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ"

ಮೊದಲನೇ ವಾಚನ: ೨ ಪೇತ್ರ3:12-15, 17-18

ಇವೆಲ್ಲವೂ ಹೀಗೆ ನಾಶವಾಗಿ ಹೋಗುವುದರಿಂದ ನೀವು ಎಂಥವರಾಗಿ ಜೀವಿಸಬೇಕು? ಪರಿಶುದ್ದರಾಗಿಯೂ ಭಕ್ತಿಪೂರಿತರಾಗಿಯೂ ಬಾಳಬೇಕು. ದೇವರ ಆ ದಿನವನ್ನು ಎದುರುನೋಡುತ್ತಾ ಅದು ಬೇಗನೆ ಬರಲೆಂದು ಹಾರೈಸಬೇಕು. ಆ ದಿನ, ಆಕಾಶಮಂಡಲವು ಅಗ್ನಿಯಿಂದ ಉರಿದುಹೋಗುವುದು; ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳು ಶಾಖದಿಂದ ಕರಗಿಹೋಗುವುವು. ನಾವಾದರೋ, ದೇವರ ವಾಗ್ದಾನದ ಪ್ರಕಾರ ನೀತಿಯ ನೆಲೆಯಾಗಿರುವ ನೂತನ ಆಕಾಶಮಂಡಲವೂ ನೂತನ ಭೂಮಂಡಲವೂ ಬರುವುದನ್ನು ಎದುರು ನೋಡುತ್ತಿರುವೆವು. ಪ್ರಿಯರೇ, ಇವುಗಳನ್ನು ಎದುರುನೋಡುವವರಾಗಿರುವ ನೀವು ದೇವರ ದೃಷ್ಟಿಯಲ್ಲಿ ನಿರ್ಮಲರೂ ನಿರ್ದೋಷಿಗಳೂ ಆಗಿದ್ದು ಶಾಂತಿಸಮಾಧಾನದಿಂದಿರಲು ಪ್ರಯತ್ನಿಸಿರಿ. ನಮ್ಮ ಪ್ರಭುವಿನ ದೀರ್ಘಶಾಂತಿ ಹಾಗು ಸಹನೆ ನಮ್ಮ ಜೀವೋದ್ಧಾರಕ್ಕಾಗಿಯೇ ಎಂದು ತಿಳಿದುಕೊಳ್ಳಿ. ನಮ್ಮ ಪ್ರಿಯ ಸಹೋದರನಾದ ಪೌಲನೂ ಸಹ ತನಗೆ ದೇವರಿತ್ತ ಜ್ಞಾನದ ಪ್ರಕಾರ ಹೀಗೆಯೇ ನಿಮಗೆ ಬರೆದಿದ್ದಾನೆ ಆದಕಾರಣ ಪ್ರಿಯರೇ, ಈ ವಿಷಯಗಳನ್ನು ಮುಂಚಿತವಾಗಿಯೇ ತಿಳಿದುಕೊಂಡಿರುವ ನೀವು ಎಚ್ಚರಿಕೆಯಿಂದಿರಿ. ದುರ್ಜನರ ದುರ್ಬೋಧನೆಗೆ ಮರುಳಾಗದಿರಿ. ನಿಮ್ಮ ಸ್ಥಿರವಿಶ್ವಾಸವನ್ನು ಬಿಟ್ಟು ಭ್ರಷ್ಟರಾಗದಿರಿ. ನಮ್ಮ ಪ್ರಭು ಮತ್ತು ಉದ್ಧಾರಕರಾದ ಯೇಸುಕ್ರಿಸ್ತರ ಅನುಗ್ರಹದಲ್ಲೂ ಅವರನ್ನು ಕುರಿತ ಜ್ಞಾನದಲ್ಲೂ ನೀವು ಅಭಿವೃದ್ಧಿಹೊಂದಿರಿ. ಅವರಿಗೆ ಈಗಲೂ ಯುಗಯುಗಾಂತರಕ್ಕೂ ಮಹಿಮೆಯುಂಟಾಗಲಿ! ಆಮೆನ್.

ಕೀರ್ತನೆ: 90:2, 3-4, 10, 14, 16
ಶ್ಲೋಕ: ಪ್ರಭೂ, ತಲತಲಾಂತರಕ್ಕೆ ಶ್ರೀನಿವಾಸ ನೀನೆಮಗೆ

ಶುಭಸಂದೇಶ: ಮಾರ್ಕ12:13-17


ಆಮೇಲೆ ಅವರು ಯೇಸುಸ್ವಾಮಿಯನ್ನು ಮಾತಿನಲ್ಲೇ ಸಿಕ್ಕಿಸುವ ಉದ್ದೇಶದಿಂದ ಕೆಲವು ಫರಿಸಾಯರನ್ನೂ ಹೆರೋದನ ಪಕ್ಷದ ಕೆಲವರನ್ನೂ ಅವರ ಬಳಿಗೆ ಕಳುಹಿಸಿದರು. ಇವರು ಬಂದು, “ಬೋಧಕರೇ, ತಾವು ಸತ್ಯವಂತರು, ಸ್ಥಾನಮಾನಕ್ಕೆ ಮಣಿಯದವರು, ಮುಖದಾಕ್ಷಿಣ್ಯಕ್ಕೆ ಎಡೆಕೊಡದವರು, ಸತ್ಯಕ್ಕನುಸಾರ ದೈವಮಾರ್ಗವನ್ನು ಬೋಧಿಸುವವರು ಎಂದು ನಾವು ಬಲ್ಲೆವು. ಹೀಗಿರುವಲ್ಲಿ ರೋಮ್ಚಕ್ರಾಧಿಪತಿಗೆ ತೆರಿಗೆ ಕೊಡುವುದು ಧರ್ಮಸಮ್ಮತವೋ, ಅಲ್ಲವೋ? ನಾವದನ್ನು ಕೊಡಬೇಕೋ, ಬೇಡವೋ?” ಎಂದು ಕೇಳಿದರು. ಅವರ ಕಪಟತನವನ್ನು ಯೇಸು ಗ್ರಹಿಸಿ, “ನೀವು ನನ್ನನ್ನು ಪರೀಕ್ಷಿಸುವುದೇಕೆ? ಒಂದು ನಾಣ್ಯವನ್ನು ತನ್ನಿ, ಅದನ್ನು ನೋಡೋಣ,” ಎಂದರು. ಅವರೊಂದು ನಾಣ್ಯವನ್ನು ತಂದರು. “ಇದರ ಮೇಲಿರುವುದು ಯಾರ ಮುದ್ರೆ? ಯಾರ ಲಿಪಿ?” ಎಂದು ಯೇಸು ಕೇಳಿದರು. ಅದಕ್ಕೆ ಅವರು, “ಅವು ರೋಮ್ಚಕ್ರವರ್ತಿಯವು,” ಎಂದರು. ಆಗ ಯೇಸು, “ಹಾಗಾದರೆ ಚಕ್ರವರ್ತಿಗೆ ಸಲ್ಲತಕ್ಕದ್ದನ್ನು ಚಕ್ರವರ್ತಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ,” ಎಂದರು. ಇದನ್ನು ಕೇಳಿದ್ದೇ ಆ ಜನರು ಯೇಸುವಿನ ಬಗ್ಗೆ ಅತ್ಯಾಶ್ಚರ್ಯಪಟ್ಟರು.

03.06.24 - ಮನೆ ಕಟ್ಟುವವರು ಬೇಡವೆಂದು ಬಿಸಾಡಿದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು

ಮೊದಲನೇ ವಾಚನ: 2 ಪೇತ್ರನು1:2-7

ದೇವರ ಮತ್ತು ಪ್ರಭು ಯೇಸುಕ್ರಿಸ್ತರ ಬಗ್ಗೆ ನೀವು ಪಡೆಯುತ್ತಿರುವ ಜ್ಞಾನಾರ್ಜನೆಯು ನಿಮಗೆ ಕೃಪಾಶೀರ್ವಾದವನ್ನೂ ಶಾಂತಿಸಮಾಧಾನವನ್ನೂ ಅಧಿಕಾಧಿಕವಾಗಿ ತರಲಿ! ತಮ್ಮ ಸ್ವಂತ ಮಹಿಮೆಯಲ್ಲೂ ಸೌಭಾಗ್ಯದಲ್ಲೂ ಭಾಗಿಗಳಾಗಲು ದೇವರು ನಮ್ಮನ್ನು ಕರೆದಿದ್ದಾರೆ. ಅವರನ್ನು ಅರಿತುಕೊಳ್ಳುವುದರ ಮೂಲಕ ನಾವು ಭಕ್ತಿಯುತ ಜೀವನವನ್ನು ನಡೆಸಲು ಬೇಕಾದುದೆಲ್ಲವನ್ನೂ ಆ ಯೇಸುವಿನ ದಿವ್ಯಶಕ್ತಿಯಿಂದ ಪಡೆದಿದ್ದೇವೆ. ಹೀಗೆ ನೀವು ಲೋಕದಲ್ಲಿ ಆಶಾಪಾಶಗಳಿಂದ ಉಂಟಾಗುವ ಭ್ರಷ್ಟಾಚಾರದಿಂದ ತಪ್ಪಿಸಿಕೊಂಡು ದೈವಿಕಸ್ವಭಾವದಲ್ಲಿ ಪಾಲುಗಾರರಾಗುವಂತೆ, ದೇವರು ಅಮೂಲ್ಯವೂ ಅತ್ಯುತ್ತಮವೂ ಆದ ವಾಗ್ದಾನಗಳನ್ನು ಅನುಗ್ರಹಿಸಿದ್ದಾರೆ. ಈ ಕಾರಣ, ನೀವು ಪೂರ್ಣಾಸಕ್ತಿಯಿಂದ ನಿಮ್ಮ ವಿಶ್ವಾಸಕ್ಕೆ ಸದ್ಗುಣವನ್ನು, ಸದ್ಗುಣಕ್ಕೆ ಸುಜ್ಞಾನವನ್ನು ಸೇರಿಸಿರಿ. ಸುಜ್ಞಾನಕ್ಕೆ ಸಂಯಮವನ್ನು, ಸಂಯಮಕ್ಕೆ ಸ್ಥೈರ್ಯವನ್ನು, ಸ್ಥೈರ್ಯಕ್ಕೆ ಸದ್ಭಕ್ತಿಯನ್ನು ಕೂಡಿಸಿರಿ. ಈ ನಿಮ್ಮ ಸದ್ಭಕ್ತಿಗೆ ಸೋದರ ಸ್ನೇಹವನ್ನು, ಸೋದರ ಸ್ನೇಹಕ್ಕೆ ಪ್ರೀತಿಯನ್ನು ಬೆರೆಸಿರಿ.

ಕೀರ್ತನೆ: 91:1-2, 14-15, 15-16

ಶ್ಲೋಕ: ಪ್ರಭುವೇ ದುರ್ಗವೂ ನಾ ನಂಬಿದ ದೇವನೂ

ಶುಭಸಂದೇಶ: ಮಾರ್ಕ 12:1-12

ಅನಂತರ ಯೇಸು

ಸ್ವಾಮಿ ಅವರೊಡನೆ ಸಾಮತಿಗಳ ರೂಪದಲ್ಲಿ ಮಾತನಾಡತೊಡಗಿದರು: “ಒಬ್ಬನು ದ್ರಾಕ್ಷಿಯತೋಟ ಒಂದನ್ನು ಮಾಡಿ, ಅದರ ಸುತ್ತ ಬೇಲಿ ಹಾಕಿಸಿದ; ದ್ರಾಕ್ಷಾರಸವನ್ನು ತೆಗೆಯಲು ಆಲೆಯನ್ನು ಹೂಡಿಸಿ, ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದ. ಬಳಿಕ ತೋಟವನ್ನು ಗೇಣಿದಾರರಿಗೆ ವಹಿಸಿ, ಹೊರನಾಡಿಗೆ ಹೊರಟುಹೋದ. ಫಲಕಾಲವು ಬಂದಾಗ ತನಗೆ ಬರತಕ್ಕ ಪಾಲನ್ನು ತರುವುದಕ್ಕಾಗಿ ಒಬ್ಬ ಸೇವಕನನ್ನು ಗೇಣಿದಾರರ ಬಳಿಗೆ ಕಳುಹಿಸಿದ. ಆದರೆ ಅವರು ಆ ಸೇವಕನನ್ನು ಹಿಡಿದು, ಹೊಡೆದು, ಬರಿಗೈಯಲ್ಲಿ ಹಿಂದಕ್ಕೆ ಅಟ್ಟಿದರು. ತೋಟದ ಯಜಮಾನ ಪುನಃ ಇನ್ನೊಬ್ಬ ಸೇವಕನನ್ನು ಕಳುಹಿಸಿದ. ಅವರು ಅವನ ತಲೆಯ ಮೇಲೆ ಹೊಡೆದು, ಅವಮಾನ ಮಾಡಿ ಕಳುಹಿಸಿದರು. ಯಜಮಾನ ಆಮೇಲೆ ಮತ್ತೊಬ್ಬ ಸೇವಕನನ್ನು ಕಳುಹಿಸಿದ. ಇವನನ್ನು ಅವರು ಕೊಂದುಹಾಕಿದರು. ಇನ್ನೂ ಅನೇಕರನ್ನು ಕಳುಹಿಸಲು, ಅವರಲ್ಲಿ ಕೆಲವರನ್ನು ಹೊಡೆದರು, ಕೆಲವರನ್ನು ಕಡಿದುಹಾಕಿದರು. ಯಜಮಾನನಿಗೆ ಇನ್ನು ಉಳಿದಿದ್ದವನೆಂದರೆ ಅವನ ಮುದ್ದುಮಗನೊಬ್ಬನೇ, “ನನ್ನ ಮಗನಿಗಾದರೂ ಅವರು ಮರ್ಯಾದೆಕೊಟ್ಟಾರು,” ಎಂದು ಭಾವಿಸಿ, ಕಟ್ಟಕಡೆಗೆ ಆ ಯಜಮಾನ ತನ್ನ ಮಗನನ್ನೇ ಅವರ ಬಳಿಗೆ ಕಳುಹಿಸಿದ. ಆದರೆ ಆ ಗೇಣಿದಾರರು, ‘ತೋಟಕ್ಕೆ ಇವನೇ ಉತ್ತರಾಧಿಕಾರಿ; ಬನ್ನಿ, ಇವನನ್ನು ಮುಗಿಸಿಬಿಡೋಣ. ಆಗ ಈ ಆಸ್ತಿ ನಮ್ಮದಾಗುವುದು,’ ಎಂದು ಒಳಸಂಚು ಹೂಡಿ, ಅವನನ್ನು ಹಿಡಿದು, ಕೊಂದುಹಾಕಿ ತೋಟದ ಆಚೆಗೆ ಎಸೆದುಬಿಟ್ಟರು. ಇಂತಹ ಪರಿಸ್ಥಿತಿಯಲ್ಲಿ ಆ ತೋಟದ ಯಜಮಾನ ಏನು ಮಾಡುವನು? ಅವನು ಬಂದು ಆ ಗೇಣಿದಾರರನ್ನು ಸಂಹರಿಸಿ ತೋಟವನ್ನು ಬೇರೆ ಗೇಣಿದಾರರಿಗೆ ಒಪ್ಪಿಸುವನು. ಪವಿತ್ರಗ್ರಂಥದಲ್ಲಿ : ಮನೆ ಕಟ್ಟುವವರು ಬೇಡವೆಂದು ಬಿಸಾಡಿದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು; ಸರ್ವೇಶ್ವರನಿಂದಲೇ ಆದ ಈ ಕಾರ್ಯ ನಮ್ಮ ಕಣ್ಣಿಗೆ ಅದೆಂಥ ಆಶ್ಚರ್ಯ! ಎಂಬ ವಾಕ್ಯವನ್ನು ನೀವು ಓದಲಿಲ್ಲವೇ?" ಎಂದರು. ತಮ್ಮನ್ನು ಕುರಿತೇ ಈ ಸಾಮತಿಯನ್ನು ಹೇಳುತ್ತಿದ್ದಾರೆಂದು ಅರ್ಥಮಾಡಿಕೊಂಡ ಆ ಯೆಹೂದ್ಯ ಮುಖಂಡರು ಯೇಸುವನ್ನು ಹಿಡಿದು ಬಂಧಿಸಲು ಯತ್ನಿಸಿದರು. ಆದರೆ ಜನಸಮೂಹಕ್ಕೆ ಭಯಪಟ್ಟು ಅವರನ್ನು ಬಿಟ್ಟುಹೋದರು.

02.06.24 - "ಇದು ನನ್ನ ರಕ್ತ, ಸಮಸ್ತ ಜನರಿಗಾಗಿ ಸುರಿಸಲಾಗುವ ಒಡಂಬಡಿಕೆಯ ರಕ್ತ"

ಮೊದಲನೇ ವಾಚನ: ವಿಮೋಚನಕಾಂಡ 24: 3-8


ಮೋಶೆ ಜನರ ಬಳಿಗೆ ಬಂದು ಸರ್ವೇಶ್ವರನ ಎಲ್ಲ ಆಜ್ಞೆಗಳನ್ನೂ, ವಿಧಿವಿಧಾನಗಳನ್ನೂ ವಿವರಿಸಿದನು. ಜನರೆಲ್ಲರು, “ಸರ್ವೇಶ್ವರಸ್ವಾಮಿಯ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆಯುತ್ತೇವೆ,” ಎಂದು ಒಕ್ಕೊರಳಿನಿಂದ ಉತ್ತರ ಕೊಟ್ಟರು ಮೋಶೆ ಸರ್ವೇಶ್ವರನ ಆಜ್ಞೆಗಳನ್ನೆಲ್ಲ ಬರೆದಿಟ್ಟನು. ಬೆಳಿಗ್ಗೆ ಎದ್ದು ಆ ಬೆಟ್ಟದಡಿಯಲ್ಲಿ ಒಂದು ಬಲಿಪೀಠವನ್ನು ಕಟ್ಟಿಸಿದನು. ಇಸ್ರಯೇಲರ ಹನ್ನೆರಡು ಕುಲಗಳಿಗೆ ಹನ್ನೆರಡು ಕಲ್ಲಿನ ಕಂಬಗಳನ್ನು ಸ್ಥಾಪನೆಮಾಡಿಸಿದನು. ಇಸ್ರಯೇಲರ ಯೌವನಸ್ಥರು ಸರ್ವೇಶ್ವರಸ್ವಾಮಿಗೆ ದಹನ ಬಲಿಗಳನ್ನು ಅರ್ಪಿಸುವಂತೆಯೂ ಸಮಾಧಾನದ ಬಲಿಗಾಗಿ ಹೋರಿಗಳನ್ನು ಅರ್ಪಿಸುವಂತೆಯೂ ಅಪ್ಪಣೆಕೊಟ್ಟನು. ಆ ಬಲಿಪಶುಗಳ ರಕ್ತದಲ್ಲಿ ಅರ್ಧವನ್ನು ತೆಗೆದು ಬಟ್ಟಲುಗಳಲ್ಲಿ ತುಂಬಿದನು. ಮಿಕ್ಕ ಅರ್ಧವನ್ನು, ಬಲಿಪೀಠದ ಮೇಲೆ ಪ್ರೋಕ್ಷಿಸಿದನು. ತರುವಾಯ, ನಿಬಂಧನ ಗ್ರಂಥವನ್ನು ತೆಗೆದುಕೊಂಡು ಜನರಿಗೆ ಕೇಳಿಸುವಂತೆ ಓದಿದನು. ಅವರು ಅದನ್ನು ಕೇಳಿದ ಮೇಲೆ, “ಸರ್ವೇಶ್ವರಸ್ವಾಮಿಯ ಆಜ್ಞೆಗಳನ್ನೆಲ್ಲಾ ಅನುಸರಿಸುತ್ತೇವೆ; ಅವುಗಳಿಗೆ ವಿಧೇಯರಾಗಿರುತ್ತೇವೆ,” ಎಂದರು ಆಗ ಮೋಶೆ ಬಟ್ಟಲುಗಳಲ್ಲಿದ್ದ ರಕ್ತವನ್ನು ತೆಗೆದುಕೊಂಡು ಜನರ ಮೇಲೆ ಚಿಮುಕಿಸಿ, “ಇಗೋ, ಈ ಗ್ರಂಥದಲ್ಲಿ ಹೇಳಿರುವ ಎಲ್ಲ ಆಜ್ಞೆಗಳ ಪ್ರಕಾರ ಸರ್ವೇಶ್ವರ ನಿಮ್ಮ ಸಂಗಡ ಮಾಡಿಕೊಂಡ ಒಡಂಬಡಿಕೆಯನ್ನು ಸ್ಥಿರಪಡಿಸುವ ರಕ್ತ ಇದೇ,” ಎಂದನು.

ಕೀರ್ತನೆ: 116: 12-13, 15-18
ಶ್ಲೋಕ: ಎತ್ತಿ ಹಿಡಿವೆನು ರಕ್ಷಣೆಯ ಪಾನಪಾತ್ರೆಯನು, ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು II

ಪ್ರಭು ಎನಗೆ ಮಾಡಿದ ಮಹೋಪಕಾರಗಳಿಗಾಗಿ I
ನನ್ನಿಂದೇನು ಮಾಡಲು ಸಾಧ್ಯ ಪ್ರತಿಯಾಗಿ? II
ಎತ್ತಿ ಹಿಡಿವೆನು ರಕ್ಷಣೆಯ ಪಾನಪಾತ್ರೆಯನು I
ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು II ಶ್ಲೋಕ

ಪ್ರಭು ಅಲ್ಪವೆಂದೆಣಿಸನು ತನ್ನ ಭಕ್ತರ ಮರಣವನು II
ಹೇ ಪ್ರಭು, ಕರುಣಿಸು, ನಾ ನಿನ್ನ ಕಿಂಕರನು I
ನಿನ್ನ ದಾಸಿಯ ಮಗನು, ನಿನ್ನ ಸೇವಕನು I
ಬಿಡಿಸಿರುವೆ ನೀನು ನನ್ನ ಬಂಧನಗಳನು II ಶ್ಲೋಕ

ಅರ್ಪಿಸುವೆ ನಾ ನಿನಗೆ ಕೃತಜ್ಞತಾ ಬಲಿಗಳನು I
ಪ್ರಖ್ಯಾತಪಡಿಸುವೆನು ಪ್ರಭುವಿನ ನಾಮವನು II
ಹೇ ಜೆರುಸಲೇಮೇ, ನಿನ್ನ ಮಧ್ಯದೊಳು I
ಆತನಿರುವ ಮಂದಿರದ ಅಂಗಳದೊಳು I ಶ್ಲೋಕ

ಎರಡನೆಯ ವಾಚನ: ಹಿಬ್ರಿಯರಿಗೆ 9: 11-15

ಆದರೆ ಕ್ರಿಸ್ತಯೇಸು ಈಗಾಗಲೇ ಪ್ರಧಾನ ಯಾಜಕರಾಗಿ ಬಂದಿದ್ದಾರೆ. ಅವರು ಅನುಗ್ರಹಿಸುವ ಸತ್ಫಲಗಳು ಈಗಾಗಲೇ ನಮಗೆ ದೊರೆತಿವೆ. ಅವರು ಸೇವೆ ಸಲ್ಲಿಸುತ್ತಿರುವ ಗುಡಾರವು ಹಿಂದಿನವುಗಳಿಗಿಂತ ಶ್ರೇಷ್ಠವಾದುದು ಮತ್ತು ಪರಿಪೂರ್ಣವಾದುದು. ಇದು ಕೈಯಿಂದ ಕಟ್ಟಿದ್ದಲ್ಲ, ಇಹಲೋಕದ ಸೃಷ್ಟಿಗೆ ಸಂಬಂಧಪಟ್ಟಿದ್ದಲ್ಲ. ಇಂಥ ಗರ್ಭಗುಡಿಯನ್ನು ಅವರು ಒಮ್ಮೆಗೇ ಶಾಶ್ವತವಾಗಿ ಪ್ರವೇಶಿಸಿದ್ದಾರೆ. ಹೋತಗಳ ಅಥವಾ ಹೋರಿಕರುಗಳ ರಕ್ತವನ್ನು ತೆಗೆದುಕೊಂಡು ಅವರು ಪ್ರವೇಶಿಸಲಿಲ್ಲ. ತಮ್ಮ ಸ್ವಂತ ರಕ್ತವನ್ನೇ ತೆಗೆದುಕೊಂಡು ಪ್ರವೇಶಿಸಿ ನಮಗೆ ಶಾಶ್ವತ ಜೀವೋದ್ಧಾರವು ದೊರಕುವಂತೆ ಮಾಡಿದ್ದಾರೆ. ಹೋತಹೋರಿಗಳ ರಕ್ತವನ್ನೂ ಯಜ್ಞಪಶುಗಳ ಬೂದಿಯನ್ನೂ ಮಲಿನರಾದವರ ಮೇಲೆ ಚಿಮುಕಿಸುವುದರ ಮೂಲಕ ಶಾರೀರಿಕ ಮೈಲಿಗೆಯನ್ನು ಹೋಗಲಾಡಿಸಿ ಅವರನ್ನು ಪರಿಶುದ್ಧಗೊಳಿಸಬಹುದಾದರೆ, ಯೇಸುವಿನ ರಕ್ತವು ಮತ್ತಷ್ಟು ಹೆಚ್ಚಾಗಿ ನಮ್ಮನ್ನು ಪರಿಶುದ್ಧಗೊಳಿಸುತ್ತದಲ್ಲವೇ? ನಿತ್ಯಾತ್ಮದ ಮೂಲಕ ಅವರು ತಮ್ಮನ್ನೇ ನಿಷ್ಕಳಂಕ ಬಲಿಯಾಗಿ ದೇವರಿಗೆ ಸಮರ್ಪಿಸಿದ್ದಾರೆ; ನಾವು ಜೀವಸ್ವರೂಪರಾದ ದೇವರನ್ನು ಆರಾಧಿಸುವಂತೆ, ಜಡ ಕರ್ಮಗಳಿಂದ ನಮ್ಮನ್ನು ಬಿಡುಗಡೆಮಾಡಿ ನಮ್ಮ ಅಂತರಂಗವನ್ನು ಪರಿಶುದ್ಧಗೊಳಿಸುತ್ತಾರೆ. ಈ ಕಾರಣ, ಯೇಸು ಹೊಸ ಒಡಂಬಡಿಕೆಯನ್ನು ಏರ್ಪಡಿಸಿದ ಮಧ್ಯಸ್ಥರಾಗಿದ್ದಾರೆ. ದೈವಕರೆ ಹೊಂದಿದವರು ದೇವರು ವಾಗ್ದಾನ ಮಾಡಿದ ಅಮರ ಸೌಭಾಗ್ಯವನ್ನು ಬಾಧ್ಯವಾಗಿ ಪಡೆಯುವಂತೆ ಈ ಒಡಂಬಡಿಕೆಯನ್ನು ಏರ್ಪಡಿಸಲಾಯಿತು. ಇದು ಯೇಸುವಿನ ಮರಣದ ಮೂಲಕವೇ ಉಂಟಾಯಿತು. ಈ ಮರಣವು ಹಳೆಯ ಒಡಂಬಡಿಕೆಯನ್ನು ವಿೂರಿ ಮಾಡಿದ ಅಪರಾಧಗಳನ್ನೂ ಪರಿಹರಿಸುತ್ತದೆ.

ಶುಭಸಂದೇಶ: ಮಾರ್ಕ 14: 12-16, 22-26


ಅಂದು ಹುಳಿರಹಿತ ರೊಟ್ಟಿಯ ಹಬ್ಬದ ಮೊದಲನೆಯ ದಿನ. ಅಂದರೆ, ಪಾಸ್ಕಹಬ್ಬದ ಕುರಿಮರಿಯನ್ನು ಕೊಯ್ಯುವ ದಿನ. ಶಿಷ್ಯರು ಯೇಸುಸ್ವಾಮಿಯ ಬಳಿಗೆ ಬಂದು, “ತಮಗೆ ಪಾಸ್ಕಭೋಜನವನ್ನು ನಾವು ಎಲ್ಲಿ ಸಿದ್ಧಪಡಿಸಬೇಕೆನ್ನುತ್ತೀರಿ?” ಎಂದು ಕೇಳಿದರು. ಯೇಸು ಅವರಲ್ಲಿ ಇಬ್ಬರಿಗೆ, “ನೀವು ಪಟ್ಟಣಕ್ಕೆ ಹೋಗಿರಿ. ಅಲ್ಲಿ ನೀರಿನ ಕೊಡವನ್ನು ಹೊತ್ತವನೊಬ್ಬನು ನಿಮ್ಮನ್ನು ಎದುರುಗೊಳ್ಳುವನು. ಅವನ ಹಿಂದೆಯೇ ಹೋಗಿ, ಅವನು ಯಾವ ಮನೆಗೆ ಹೋಗುತ್ತಾನೋ ಆ ಮನೆಯ ಯಜಮಾನನಿಗೆ, “ನಮ್ಮ ಗುರು, ‘ನನ್ನ ಶಿಷ್ಯರ ಜೊತೆಯಲ್ಲಿ ಪಾಸ್ಕ ಭೋಜನ ಮಾಡಲು ನನಗೆ ಕೊಠಡಿ ಎಲ್ಲಿ?’ ಎಂದು ಕೇಳುತ್ತಾರೆ,” ಎಂದು ವಿಚಾರಿಸಿರಿ. ಅವನು ಮೇಲುಪ್ಪರಿಗೆಯಲ್ಲಿ ಸಿದ್ಧವಾಗಿರುವ ಹಾಗೂ ಸುಸಜ್ಜಿತವಾದ ದೊಡ್ಡ ಕೊಠಡಿಯನ್ನು ತೋರಿಸುವನು. ಅಲ್ಲಿ ನಮಗೆ ಊಟ ಸಿದ್ದಮಾಡಿರಿ,” ಎಂದು ಹೇಳಿಕಳುಹಿಸಿದರು. ಅವರು ಪಟ್ಟಣಕ್ಕೆ ಹೋಗಿ, ಯೇಸು ತಮಗೆ ಹೇಳಿದ ಪ್ರಕಾರ ಎಲ್ಲಾ ವ್ಯವಸ್ಥಿತವಾಗಿರುವುದನ್ನು ಕಂಡು, ಪಾಸ್ಕ ಭೋಜನವನ್ನು ತಯಾರಿಸಿದರು. ಅವರೆಲ್ಲರೂ ಊಟಮಾಡುತ್ತಿರುವಾಗ, ಯೇಸುಸ್ವಾಮಿ ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತುತಿಮಾಡಿ, ಅದನ್ನು ಮುರಿದು, ಶಿಷ್ಯರಿಗೆ ಕೊಡುತ್ತಾ, “ಇದನ್ನು ಸ್ವೀಕರಿಸಿರಿ, ಇದು ನನ್ನ ಶರೀರ,” ಎಂದರು. ಬಳಿಕ ಪಾನಪಾತ್ರೆಯನ್ನು ತೆಗೆದುಕೊಂಡು ಕೃತಜ್ಞತಾಸ್ತೋತ್ರವನ್ನು ಸಲ್ಲಿಸಿ, ಅದನ್ನು ಅವರಿಗೆ ಕೊಟ್ಟರು. ಅವರೆಲ್ಲರೂ ಅದರಿಂದ ಕುಡಿದರು. ಯೇಸು ಅವರಿಗೆ, “ಇದು ನನ್ನ ರಕ್ತ, ಸಮಸ್ತ ಜನರಿಗಾಗಿ ಸುರಿಸಲಾಗುವ ಒಡಂಬಡಿಕೆಯ ರಕ್ತ. ನಾನು ದೇವರ ಸಾಮ್ರಾಜ್ಯದಲ್ಲಿ ದ್ರಾಕ್ಷಾರಸವನ್ನು ಹೊಸದಾಗಿ ಕುಡಿಯುವ ದಿನದವರೆಗೂ ಅದನ್ನು ಇನ್ನು ಕುಡಿಯುವುದಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ,” ಎಂದರು. ಬಳಿಕ ಅವರೆಲ್ಲರೂ ಕೀರ್ತನೆ ಹಾಡಿ, ಓಲಿವ್ ಗುಡ್ಡಕ್ಕೆ ಹೊರಟರು.

01.06.24

ಮೊದಲನೆಯ ವಾಚನ: ಯೂದ 1:20-25

ಪ್ರಿಯರೇ, ನೀವಾದರೋ ಅತಿ ಪರಿಶುದ್ಧ ವಿವ್ವಾಸದ ಆಧಾರದ ಮೇಲೆ ನಿರ್ಮಿಸಲಾದ ಮಂರಿರದಂತೆ ಪ್ರವರ್ಧಿಸಿರಿ; ಪವಿತ್ರಾತ್ಮ ಅವರಿಂದ ಪ್ರೇರಿತರಾಗಿ ಪ್ರಾರ್ಥಿಸಿರಿ. ನಿತ್ಯ ಜೀವವನ್ನು ದಯಪಾಲಿಸುವ ಕರುಣಾಮಯ ಪ್ರಭು ಯೇಸುಕ್ರಿಸ್ತರನ್ನು ಎದುರು ನೋಡುತ್ತಾ ದೇವರ ಪ್ರೀತಿಯಲ್ಲಿ ನೆಲಗೊಂಡಿರಿ. ಸಂಶಯಪಡುವವರಿಗೆ ಸಹೃದಯದಿಂದ ನೆರವಾಗಿರಿ. ಬೆಂಕಿಯ ಬಾಯಲ್ಲಿ ಇರುವವರನ್ನು ಎಳೆದು ಸಂರಕ್ಷಿಸಿರಿ. ಕೆಲವರಿಗೆ ದಯೆತೋರಿಸುವಾಗ ಭಯವಿರಲಿ. ಪಾಪದ ನಡತೆಯಿಂದ ಹೊಲಸಾದ ಅವರ ಬಟ್ಟೆಬರೆಗಳನ್ನೂ ಮುಟ್ಟದಿರಿ. ಪಾಪದಲ್ಲಿ ಎಡವಿ ಬೀಳದಂತೆ ನಿಮ್ಮನ್ನು ಕಾಪಾಡುವ ತಮ್ಮ ಮಹಿಮಾಸನ್ನಿಧಿಯಲ್ಲಿ ನಿಮ್ಮನ್ನು ನಿರ್ದೋಷಿಗಳನ್ನಾಗಿಯೂ ಹರ್ಷಭರಿತರನ್ನಾಗಿಯೂ ನಿಲ್ಲಿಸಲು ಶಕ್ತರಾಗಿರುವ ನಮ್ಮ ಉದ್ಧಾರಕರಾದ ಏಕೈಕ ದೇವರಿಗೆ ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ಮಹಿಮೆ, ಮಹತ್ವ, ಅಧಿಪತ್ಯ, ಅಧಿಕಾರ ಆಧಿಯಲ್ಲಿ ಇದ್ದ ಹಾಗೆ ಈಗಲೂ ಯಾವಾಗಲೂ ಸಲ್ಲಲಿ! ಆಮೆನ್.

ಕೀರ್ತನೆ: 63:3-4,5-6
ಶ್ಲೋಕ: ದೇವಾ, ನೀ ಎನ್ನ ದೇವ, ನಿನಗಾಗಿ ನಾ ಕಾದಿರುವೆ |

ದೇವಾ, ನೀ ಎನ್ನ ದೇವ, ನಿನಗಾಗಿ ನಾ ಕಾದಿರುವೆ|
ನಿರ್ಜಲ ಮರುಭೂಮಿಯಲಿ ನೀರಿಗಾಗಿ ಹಾತೊರೆಯುವಂತೆ||
ನಿನಗೋಸ್ಕರ ಎನ್ನ ತನು ಸೊರಗಿದೆ, ಮನ ಬಾಯಾರಿದೆ|
ನಿನ್ನ ಮಂದಿರದಲಿ ನನಗಾದ ದರ್ಶನದಲಿ||

ನಿನ್ನ ಶಕ್ತಿ ಪ್ರತಿಭೆಯನ್ನು ಕಂಡಿರುವೆನಲ್ಲಿ|
ಪ್ರಾಣಕ್ಕಿಂತ ಮಿಗಿಲಾದುದು ನಿನ್ನಚಲ ಪ್ರೀತಿ||
ಎಡೆಬಿಡದೆ ಮಾಳ್ವುದು ನನ್ನೀ ತುಟಿ ನಿನ್ನ ಸ್ತುತಿ|
ನಿನ್ನ ಸ್ತುತಿಸುವೆ ಜೀವಮಾನ ಪರಿಯಂತ|
ಕೈ ಮುಗಿವೆ ನಿನ್ನ ನಾಮದ ಸ್ಮರಣಾರ್ಥ||

ಮೃಷ್ಟಾನ್ನ ತಿಂದತೆ ಎನ್ನ ಮನ ಸಂತೃಪ್ತ|
ಸಂಭ್ರಮದಿಂದ ನಿನ್ನ ಹೊಗಳುವುದು ಬಾಯ್ತುಂಬ ||

ಘೋಷಣೆ ಕೀರ್ತನೆ 119:27
ಅಲ್ಲೆಲೂಯ, ಅಲ್ಲೆಲೂಯ!

ನಿನ್ನ ನಿಯಮಗಳ ಪಥವೆನಗೆ ತಿಳಿಯಪಡಿಸಯ್ಯಾ | ನಿನ್ನ ಅದ್ಭುತ ಕಾರ್ಯಗಳನು ನಾ ಧ್ಯಾನಿಸುವೆನಯ್ಯಾ ||

ಅಲ್ಲೆಲೂಯ!

ಶುಭಸಂದೇಶ: ಮಾರ್ಕ 11:27-33

ಆ ಕಾಲದಲ್ಲಿ ಯೇಸು ಮತ್ತು ಶಿಷ್ಯರು ಪುನಃ ಜೆರುಸಲೇಮಿಗೆ ಬಂದರು. ಯೇಸು ದೇವಾಲಯದ ಆವರಣದಲ್ಲಿ ತಿರುಗಾಡುತ್ತಿದ್ದಾಗ ಮುಖ್ಯ ಯಾಜಕರು, ಧರ್ಮಶಾಸ್ತ್ರಿಗಳು ಮತ್ತು ಸಭಾಪ್ರಮುಖರು ಅವರ ಬಳಿಗೆ ಬಂದು, "ಇದನ್ನೆಲ್ಲಾ ನೀನು ಯಾವ ಅಧಿಕಾರದಿಂದ ಮಾಡುತ್ತಿರುವೆ? ನಿನಗೆ ಈ ಅಧಿಕಾರವನ್ನು ಕೊಟ್ಟವರು ಯಾರು? "ಎಂದು ಕೇಳಿದರು. ಅದಕ್ಕೆ ಯೇಸು, "ನಾನೂ ನಿಮಗೆ ಒಂದು ಪ್ರಶ್ನೆ ಹಾಕುತ್ತೇನೆ; ಅದಕ್ಕೆ ಉತ್ತರ ಕೊಡಿ. ಆಗ ಯಾವ ಅಧಿಕಾರದಿಂದ ನಾನು ಇದೆಲ್ಲವನ್ನು ಮಾಡುತ್ತೇನೆಂದು ನಿಮಗೆ ಹೇಳುತ್ತೇನೆ. ಸ್ನಾನದೀಕ್ಷೆ ಕೊಡುವ ಅಧಿಕಾರ ಯೊವಾನ್ನನಿಗೆ ಎಲ್ಲಿಂದ ಬಂದಿತು? ದೇವರಿಂದಲೋ? ಮನುಷ್ಯರಿಂದಲೋ? ಉತ್ತರಕೊಡಿ, " ಎಂದರು. ಇದನ್ನು ಕೇಳಿದ ಅವರು ತಮ್ಮತಮ್ಮೊಳಗೇ ತರ್ಕ ಮಾಡುತ್ತಾ. "ದೇವರಿಂದ ಬಂದಿತೆಂದು ಹೇಳಿದರೆ, 'ಹಾಗದರೆ ನೀವೇಕೆ ಅವನನ್ನು ನಂಬಲಿಲ್ಲ?' ಎಂದು ಕೇಳುವನು. 'ಮನುಷ್ಯರಿಂದ ಬಂದಿತು' ಎಂದು ಹೇಳೋಣ ಎಂದರೆ ಅದೂ ಆಗದು, ಎಂದುಕೊಂಡರು. ಯೊವಾನ್ನನು ನಿಜವಾದ ಪ್ರವಾದಿಯೆಂದು ಸರ್ವರು ನಂಬಿದ್ದರಿಂದ ಅವರಿಗೆ ಜನರ ಭಯವಿತ್ತು. ಆದುದರಿಂದ ಅವರು, "ನಮಗೆ ಗೊತ್ತಿಲ್ಲ " ಎಂದು ಉತ್ತರಕೊಟ್ಟರು. ಅದಕ್ಕೆ ಯೇಸು, "ಹಾಗಾದರೆ ನಾನು ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ, "ಎಂದರು.

31.05.24 - ಆತನಲ್ಲಿ ಭಮಭಕ್ತಿಯುಳ್ಳವರಿಗೆ ಆತನ ಪ್ರೀತಿ ತಲತಲಾಂತರದವರೆಗೆ

ಮೊದಲನೆಯ ವಾಚನ: ಜೆಫನ್ಯ 3:14-18


ಹರ್ಷಧ್ವನಿಗೈ ಸಿಯೋನ್ ಕುವರಿಯೇ. ಘೋಷಿಸು ಇಸ್ರಯೇಲ್ ದೇಶವೇ, ಹೃತ್ಪೂರ್ವಕವಾಗಿ ಸಂತೋಷಿಸು ಜೆರುಸಲೇಮ್ ನಗರವೇ, ತಪ್ಪಿಸಿಹನು ಸರ್ವೇಶ್ವರ ನಿನಗೆ ವಿಧಿಸಿರುವ ದಂಡನೆಗಳನು, ತಳ್ಳಿ ಹೊರಗಟ್ಟಿಹನು ನಿನ್ನ ಶತ್ರುಗಳನು, ಇಸ್ರಯೇಲಿನ ರಾಜನಾದ ಸರ್ವೇಶ ಇಹನು ನಿನ್ನ ಮಧ್ಯೆ ನೀನಿರುವೆ ಇನ್ನೆಂದಿಗೂ ಕೇಡಿಗಂಜದೆ. ಜೆರುಸಲೇಮಿಗೆ ಈ ಪರಿ ಹೇಳುವರು ಆ ದಿನದೊಳು: "ಅಂಜಬೇಡ ಸಿಯೋನ್, ಸೋತು ಜೋಲುಬೀಳದಿರಲಿ ನಿನ್ನ ಕೈಗಳು. "ಪ್ರಸನ್ನವಾಗಿಹನು ದೇವಾ, ಸರ್ವೇಶ ನಿನ್ನ ಮಧ್ಯೆ, ಕೊಡುವನಾಶೂರ ನಿನಗೆ ರಕ್ಷಣೆ, ಹರ್ಷಾನಂದಗೊಳ್ಳುವನು ನಿನ್ನ ವಿಷಯದಲಿ. ಪುನಶ್ಚೇತನಗೊಳಿಸುವನು ನಿನ್ನನ್ನು ಪ್ರಶಾಂತ ಪ್ರೀತಿಯಲಿ, ಗಾನಗೀತೆಗಳಿಂದ ತೋಷಿಸುವನು ನಿನ್ನಲ್ಲಿ, ಹಬ್ಬಹುಣ್ಣಿಮೆಗಳ ತರದಲಿ.

ಪರ್ಯಾಯ ವಾಚನ: ರೋಮನರಿಗೆ 12:9-18

ಸಹೋದರರೇ, ನಿಮ್ಮ ಪ್ರೀತಿ ನಿಷ್ಠಪಟವಾಗಿರಲಿ. ಕೆಟ್ಟದ್ದನ್ನು ದ್ವೇಷಿಸಿರಿ. ಒಳ್ಳೆಯದನ್ನು ಕೈಬಿಡದಿರಿ. ಸೋದರಭಾವನೆಯಿಂದ ಒಬ್ಬರನ್ನೊಬ್ಬರು ಹೃತ್ಪೂರ್ವಕವಾಗಿ ಪ್ರೀತಿಸಿರಿ. ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ. ಪ್ರಭುವಿನ ಸೇವೆಯಲ್ಲಿ ಆಲಸಿಗಳಾಗದೆ ಅತ್ಯಾಸಕ್ತರಾಗಿರಿ. ನಂಬಿಕೆ ನಿರೀಕ್ಷೆಯನ್ನು ಹೊಂದಿರುವ ನೀವು ಉಲ್ಲಾಸದಿಂದಿರಿ. ಸಂಕಟ ಬಂದಾಗ ಸಹನೆಯಿಂದಿರಿ. ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ. ಕೊರತೆಯಲ್ಲಿರುವ ದೇವಜನರಿಗೆ ನೆರವು ನೀಡಿರಿ. ಅತಿಥಿ ಸತ್ಕಾರದಲ್ಲಿ ತತ್ಪರರಾಗಿರಿ. ನಿಮ್ಮನ್ನು ಹಿಂಸಿಸುವವರನ್ನು ಆಶೀರ್ವದಿಸಿರಿ. ಹೌದು, ಶಪಿಸದೆ ಆಶೀರ್ವದಿಸಿರಿ. ಸಂತೋಷಪಡುವವರೊಂದಿಗೆ ಸಂತೋಷಪಡಿಸಿರಿ; ದುಃಖಿಸುವವರೊಡನೆ ದುಃಖಿಸಿರಿ. ನಿಮ್ಮ ನಿಮ್ಮಲ್ಲಿ ಸಾಮರಸ್ಯವಿರಲಿ. ದೊಡ್ಡಸ್ತಿಕೆಯಿಂದ ವರ್ತಿಸಬೇಡಿ. ದೀನರೊಡನೆ ಗೆಳೆತನ ಬೆಳೆಸಿರಿ, ನೀವೇ ಜಾಣರೆಂದು ಭಾವಿಸದಿರಿ.

ಕೀರ್ತನೆ: ಯೆಶಾಯ 12:2-6
ಶ್ಲೋಕ: ಸಿಯೋನಿನ ನಿವಾಸಿಗಳೇ, ಹಾಡಿರಿ ಮಾಡಿರಿ ಭಜನ ಇಸ್ರಯೇಲಿನಾ ಸ್ವಾಮಿ ಪರಮ ಪಾವನ 

ದೇವರೇ ಉದ್ಧಾರಕನೆನಗೆ, ಆತನಲ್ಲಿದೆ ನನಗೆ ನಿರ್ಭಿತ ನಂಬಿಕೆ|
ದೇವಾದಿದೇವನೇ ಎನಗೆ ಶಕ್ತಿ|
ಆತನೆನ್ನ ಕೀರ್ತನೆಯ ವ್ಯಕ್ತಿ|
ತಂದಿಹನಾತ ಎನಗೆ ಮುಕ್ತಿ||
ಉದ್ಧರಿಸುವಾ ಒರತೆಗಳಿಂದ|
ಸೇದುವಿರಿ ನೀರನ್ನು ಹರುಷದಿಂದ||

ಸಲ್ಲಿಸಿರಿ ಸರ್ವೇಶ್ವರನಿಗೆ ಕೃತಜ್ಞತೆಯನು|
ಸ್ಮರಿಸಿರಿ ಆತನ ಶ್ರೀನಾಮವನು||
ಸಾರಿರಿ ಜನತೆಗೆ ಆತನ ಕಾವ್ಯಗಳನು|
ಘೋಷಿಸಿರಿ ಆತನ ನಾಮ ಘನತೆಯನು||

ಹಾಡಿರಿ ಸರ್ವೇಶ್ವರನಿಗೆ ಸ್ತುತಿಯನು|
ಎಸಗಿಹನಾತ ಮಹಿಮಾಕಾರ್ಯಗಳನು|
ತಿಳಿಸಿರಿ ಜಗದಾದ್ಯಂತಕೆ ಈ ವಿಷಯವನು||
ಸಿಯೋನಿನ ನಿವಾಸಿಗಳೇ, ಹಾಡಿರಿ ಮಾಡಿರಿ ಭಜನ||
ನಿಮ್ಮ ಮಧ್ಯೆಯಿರುವ ಆ ಘನವಂತನ|
ಇಸ್ರಯೇಲಿನಾ ಸ್ವಾಮಿ ಪರಮ ಪಾವನ||

ಘೋಷಣೆ ಲೂಕ 1:45
ಅಲ್ಲೆಲೂಯ, ಅಲ್ಲೆಲೂಯ!

ನಂಬಿ ಧನ್ಯಳಾದೆ ನೀನು | ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು ||

ಅಲ್ಲೆಲೂಯ!

ಶುಭಸಂದೇಶ: ಲೂಕ 1:39-56



ಆ ಕಾಲದಲ್ಲಿ ಮರಿಯಳು ಪ್ರಯಾಣ ಹೊರಟು ಜುದೇಯದ ಗುಡ್ಡಗಾಡಿನಲ್ಲಿರುವ ಒಂದು ಊರಿಗೆ ತ್ವರೆಯಾಗಿ ಬಂದಳು. ಅಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೆತಳನ್ನು ವಂದಿಸಿದಳು. ಮರಿಯಳ ವಂದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿದ್ದ ಶಿಶು ನಲಿದಾಡಿತು; ಎಲಿಜಬೇತಳು ಪವಿತ್ರಾತ್ಮಭರಿತಳಾಗಿ ಹರ್ಷೋದ್ಗಾರದಿಂದ ಹೀಗೆಂದಳು: "ಸ್ತ್ರೀಯರಲ್ಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ. ನನ್ನ ಪ್ರಭುವಿನ ತಾಯಿ ನೀನು; ನನ್ನ ಬಳಿಗೆ ಬಂದುದು ಅದೆಂಥ ಭಾಗ್ಯ. ನಿನ್ನ ವಂದನೆಯ ದನಿ ನನ್ನ ಕಿವಿ ತಾಕಿದೊಡನೆ ನಲಿದಾಡಿತು ಆನಂದದಿಂದ, ನನ್ನ ಕರುಳ ಕುಡಿ. ನಂಬಿ ಧನ್ಯಳಾದೆ ನೀನು, ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು. " ಆಗ ಹೀಗೆಂದು ಮರಿಯಳು ಹೊಗಳಿದಳು. " ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ, ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ. ತನ್ನ ದಾಸಿಯ ದೀನತೆಯನು ನೆನಪಿಗೆ ತಂದುಕೊಂಡನಾತ. ಧನ್ಯಳೆಂದು ಹೊಗಳುವರೆನ್ನನು ಇಂದಿನಿಂದ ಸರ್ವಜನಾಂಗ. ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ, ನಿಜಕ್ಕೂ ಆತನ ನಾಮಧೇಯ ಪರಮಪೂಜ್ಯ. ಆತನಲ್ಲಿ ಭಮಭಕ್ತಿಯುಳ್ಳವರಿಗೆ ಆತನ ಪ್ರೀತಿ ತಲತಲಾಂತರದವರೆಗೆ. ಗರ್ವಹೃದಯಿಗಳನಾತ ಚದುರಿಸಿರುವನು, ಪ್ರದರ್ಶಿಸಿರುವನು ತನ್ನ ಬಾಹುಬಲವನ್ನು. ಇಳಿಸಿಹನು ಗದ್ದುಗೆಯಿಂದ ಘನಾಧಿಪತಿಗಳನು, ಏರಿಸಿರುವನು ಉನ್ನತಿಗೆ ದೀನದಲಿತರನು. ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ, ಹೊರದೂಡಿರುವನು ಸಿರಿವಂತರನು ಬರಗೈಯಲಿ. ನೆರವಾದನು ತನ್ನ ದಾಸ ಇಸ್ರಯೇಲನಿಗೆ, ಪೂರ್ವಜರಿಗಿತ್ತ ವಾಗ್ದಾನದ ಮೇರೆಗೆ. ಮರೆಯಲಿಲ್ಲ ಆತ ಕರುಣೆತೋರಲು ಅಬ್ರಹಾಮನಿಗೆ, ಅವನ ಸಂತತಿಗೆ, ಯುಗಯುಗಾಂತರದವರೆಗೆ." ಮರಿಯಳು ಸುಮಾರು ಮೂರು ತಿಂಗಳು ಎಲಿಜಬೇತಳೊಡನೆ ತಂಗಿದ್ದು ತನ್ನ ಮನೆಗೆ ಹಿಂದಿರುಗಿದಳು.

30.05.24 - ಹೋಗು, ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ

ಮೊದಲನೆಯ ವಾಚನ: 1 ಪೇತ್ರ 2:2-5,9-12


ಸಹೋದರರೇ, ಹೊಸಜನ್ಮ ಪಡೆದ ಶಿಶುಗಳಂತೆ, ಶುದ್ಧವಾದ ಆಧ್ಯಾತ್ಮಿಕ ಹಾಲಿಗಾಗಿ ಹಂಬಲಿಸಿರಿ; ಅದನ್ನು ಕುಡಿದು ಬೆಳೆಯುತ್ತಾ. ಜೀವೋದ್ಧಾರವನ್ನು ಹೊಂದುವಿರಿ. ಪ್ರಭು ಎಂಥಾ ದಯಾಳು ಎಂಬುದನ್ನು ನೀವು ಅನುಭವದಿಂದ ಅರಿತುಕೊಂಡಿದ್ದೀರಿ. ಪ್ರಭುವಿನ ಬಳಿಗೆ ಬನ್ನಿ ಸಜೀವ ಶಿಲೆಯಾದ ಅವರನ್ನು ಮಾನವರು ನಿಯೋಜಕ ಎಂದು ತಿರಸ್ಕರಿಸಿದರೂ ದೇವರು ಅಮೂಲ್ಯರೆಂದು ಆರಿಸಿಕೊಂಡರು. ನೀವೂ ಶಿಲೆಗಳಾಗಿದ್ದೀರಿ; ಆಧ್ಯಾತ್ಮಿಕ ದೇವಾಲಯವನ್ನು ನಿರ್ಮಿಸಲು ನಿಮ್ಮನ್ನೇ ಅರ್ಪಿಸಿಕೊಳ್ಳಿ. ಆ ದೇವಾಲಯದಲ್ಲೇ ಯೇಸು ಕ್ರಿಸ್ತರ ಮುಖಾಂತರ ದೇವರಿಗೆ ಮೆಚ್ಚುಗೆಯಾಗಿರುವ ಆಧ್ಯಾತ್ಮಿಕ ಬಲಿಗಳನ್ನು ಸಮರ್ಪಿಸುವ ಪವಿತ್ರ ಯಾಜಕ ವರ್ಗದವರು ನೀವಾಗಿರುವಿರಿ. ನೀವು ದೇವರು ಆಯ್ದುಕೊಂಡ ಜನಾಂಗ; ರಾಜಯಾಜಕರು, ಪವಿತ್ರ ಪ್ರಜೆ, ದೇವರ ಸ್ವಕೀಯ ಜನ; ಅವರ ಅದ್ಭುತಕಾರ್ಯಗಳನ್ನು ಪ್ರಚುರಪಡಿಸುವುದಕ್ಕಾಗಿ ಆಯ್ಕೆಯಾದವರು. ಗಾರ್ಗತ್ತಲಿನಿಂದ ತಮ್ಮ ಅದ್ಭುತಕರವಾದ ಬೆಳಕಿಗೆ ನಿಮ್ಮನ್ನು ಕರೆತಂದವರು. ಒಮ್ಮೆ ನೀವು ಗಣನೆಗೆ ಬಾರದ ಜನರಾಗಿದ್ದೀರಿ. ಈಗಲಾದರೋ ದೇವ ಪ್ರಜೆಗಳೇ ಆಗಿದ್ದೀರಿ. ಹಿಂದೊಮ್ಮೆ, ದೇವರ ಕರುಣೆ ಏನೆಂಬುದೇ ನಿಮಗೆ ತಿಳಿದಿರಲಿಲ್ಲ. ಈಗ ಅವರ ಕರುಣೆಯನ್ನು ಸವಿದಿದ್ದೀರಿ. ಪ್ರಿಯರೇ, ಈ ಲೋಕದಲ್ಲಿ ಆಗಂತುಕರಂತೆಯೂ ಅಪರಿಚಿತರಂತೆಯೂ ಬಾಳುವ ನೀವು ಆತ್ಮಕ್ಕೆ ವಿರುದ್ಧ ಹೋರಾಡುವ ದೈಹಿಕ ವ್ಯಾಮೋಹಗಳಿಂದ ದೂರವಿರಬೇಕೆಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಅನ್ಯ ಧರ್ಮೀಯರ ಮಧ್ಯೆ ನಿಮ್ಮ ನಡತೆ ಆದರ್ಶಪ್ರಾಯವಾಗಿರಲಿ. ಅವರು ನಿಮ್ಮನ್ನು ದುಷ್ಠರ್ಮಿಗಳೆಂದು ದೂಷಿಸಿದರೂ ನಿಮ್ಮ ಸತ್ಕಾರ್ಯಗಳನ್ನು ಮೆಚ್ಚಿಕೊಂಡು ಕ್ರಿಸ್ತ ಯೇಸುವಿನ ಪುನರಾಗಮನದ ದಿನದಂದು ದೇವರನ್ನು ಕೊಂಡಾಡುವರು.

ಕೀರ್ತನೆ: 100:2,3,4,5,
ಶ್ಲೋಕ: ಹಾಡುತ ಪಾಡುತ ಬನ್ನಿ ಪ್ರಭುವಿನ ಸನ್ನಿಧಿಗೆ|

ಅತಿ ಸಂತೋಷದಿಂದ ಸೇವೆ ಮಾಡಿ ಆತನಿಗೆ|
ಹಾಡುತ ಪಾಡುತ ಬನ್ನಿ ಆತನ ಸನ್ನಿಧಿಗೆ||
ಪ್ರಭುವೆ ದೇವರೆಂಬುದನು ಮರೆತುಬಿಡಬೇಡಿ ನೀವು|
ನಮ್ಮ ಸೃಷ್ಟಿಕರ್ತ ಆತನು, ಆತನವರು ನಾವು ||

ಆತನ ಜನ, ಆತನೇ ಮೇಯಿಸುವ ಕುರಿಗಳು ನಾವು|
ಆತನ ಗೃಹದ್ವಾರವನು ಪ್ರವೇಶಿಸಿ ಧನ್ಯವಾದದೊಂದಿಗೆ||
ಆತನ ಆವರಣದಲಿ ನಿಲ್ಲಿರಿ ಸ್ತುತಿಸ್ತೋತ್ರಗಳೊಂದಿಗೆ||

ಆತನ ನಾಮವನು ಕೊಂಡಾಡಿ ಉಪಕಾರಸ್ಮರಣೆಯೊಂದಿಗೆ|
ಹೌದು, ಪ್ರಭುವೆನಿತೋ ಒಳ್ಳೆಯವನು||
ಇರುವುದಾತನ ಪ್ರೀತಿ ಯುಗಯುಗಕು|
ಆತನ ಸತ್ಯತೆ ತಲತಲಾಂತರಕು||

ಘೋಷಣೆ ಕೀರ್ತನೆ 111:7,8
ಅಲ್ಲೆಲೂಯ, ಅಲ್ಲೆಲೂಯ!

ಸುಸ್ಥಿರವಾದುವು ಆತನ ನಿಯಮ ನಿಬಂಧನೆಗಳು | ಯುಗಯುಗಾಂತರಕೂ ದೃಢವಾಗಿರುವುವು ||

ಅಲ್ಲೆಲೂಯ!

ಶುಭಸಂದೇಶ: ಮಾರ್ಕ 10:46-52



ಆ ಕಾಲದಲ್ಲಿ ಯೇಸು ಮತ್ತು ಅವರ ಶಿಷ್ಯರು ಜೆರಿಕೊ ಪಟ್ಟಣವನ್ನು ತಲುಪಿದರು. ಅಲ್ಲಿಂದ ಹೊರಡುವಾಗ ಜನರ ದೊಡ್ಡ ಗುಂಪು ಅವರನ್ನು ಹಿಂಬಾಲಿಸಿತು. ಕುರುಡು ಭಿಕ್ಷುಗಾರನಾದ, ತಿಮಾಯನ ಮಗ ಬಾರ್ ತಿಮಾಯನು ದಾರಿಯ ಮಗ್ಗುಲಲ್ಲಿ ಕುಳಿತಿದ್ದನು. ಆ ಮಾರ್ಗವಾಗಿ ಹೋಗುತ್ತಿರುವಾತನು ನಜರೇತಿನ ಯೇಸು ಎಂದು ಕೇಳಿದೊಡನೆಯೇ, ಅವನು, " ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆತೋರಿ, "ಎಂದು ಗಟ್ಟಿಯಾಗಿ ಕೂಗಿಕೊಂಡನು. ಆನೇಕರು " ಸುಮ್ಮನಿರು " ಎಂದು ಅವನನ್ನು ಗದರಿಸಿದರು. ಅವನಾದರೋ, "ದಾವೀದ ಕುಲಪುತ್ರರೇ, ನನಗೆ ದಯೆತೋರಿ, "ಎಂದು ಇನ್ನಷ್ಟು. ಗಟ್ಟಿಯಾಗಿ ಕೂಗಿಕೊಂಡನು. ಇದನ್ನು ಕೇಳಿ ಯೇಸು ಅಲ್ಲೇ ನಿಂತು, "ಅವನನ್ನು ಕರೆದುಕೊಂಡು ಬನ್ನಿ " ಎಂದು ಅಪ್ಪಣೆ ಮಾಡಿದರು. ಅವರು ಹೋಗಿ, " ಏಳು, ಭಯಪಡಬೇಡ, ಯೇಸು ನಿನ್ನನ್ನು ಕರೆಯುತ್ತಿದ್ದಾರೆ, " ಎಂದು ಹೇಳಿದರು. ಅವನು ತನ್ನ ಮೇಲುಹೊದಿಕೆಯನ್ನು ಅಲ್ಲೆ ಬಿಟ್ಟು, ತಟ್ಟನೆ ಎದ್ದು, ಯೇಸುವಿನ ಬಳಿಗೆ ಬಂದನು. ಯೇಸು, "ನನ್ನಿಂದ ನಿನಗೆ ಏನಾಗಬೇಕು " ಎಂದು ಕೇಳಿದರು. ಅದಕ್ಕೆ ಅವನು, "ಗುರುದೇವಾ! ನನಗೆ ಕಣ್ಣು ಕಾಣುವಂತೆ ಮಾಡಿ, " ಎಂದು ಪ್ರಾರ್ಥಿಸಿದನು. ಯೇಸು ಅವನಿಗೆ, " ಹೋಗು, ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ, ಎಂದರು. ಆ ಕ್ಷಣವೇ ಅವನಿಗೆ ದೃಷ್ಟಿ ಬಂದಿತು. ಅವನೂ ಯೇಸುವನ್ನು ಹಿಂಬಾಲಿಸಿ ಹಿಂದೆ ಹೋದನು.

29.05.24 - ನಿಮ್ಮಲ್ಲಿ ಶ್ರೇಷ್ಠನಾಗಿರಲು ಇಚ್ಛಿಸುವವನು ನಿಮ್ಮ ಸೇವಕನಾಗಿರಲಿ; ಪ್ರಥಮನಾಗಿರಲು ಆಶಿಸುವವನು ಎಲ್ಲರ ದಾಸನಾಗಿರಲಿ

ಮೊದಲನೆಯ ವಾಚನ: 1 ಪೇತ್ರ 1:18-25


ಸಹೋದರರೇ, ನಿಮ್ಮ ಪೂರ್ವಜರಿಂದ ಪರಂಪರೆಯಾಗಿ ಬಂದಿರುವ ನಿರರ್ಥಕ ನಡವಳಿಕೆಯಿಂದ ನಿಮ್ಮನ್ನು ಬಿಡುಗಡೆಮಾಡಲು ಕೊಡಲಾದ ಬೆಲೆಯು ಎಂಥದ್ದೆಂದು ನಿಮಗೆ ತಿಳಿದಿದೆ. ಅದು ನಶಿಸಿಹೋಗುವ ಬೆಳ್ಳಿಬಂಗಾರವಲ್ಲ. ಬದಲಿಗೆ, ಯಾವ ನ್ಯೂನತೆಯೂ ಇಲ್ಲದ, ಯಾವ ಕಳಂಕವೂ ಇಲ್ಲದ ಬಲಿಯ ಕುರಿಮರಿಯಂಥ ಕ್ರಿಸ್ತ ಯೇಸುವಿನ ಅಮೂಲ್ಯ ರಕ್ತವೇ ಆ ಬೆಲೆ. ವಿಶ್ವಸೃಷ್ಟಿಗೆ ಮೊದಲೇ ಯೇಸುಕ್ರಿಸ್ತರನ್ನು ದೇವರು ಇದಕ್ಕೆಂದು ಗೊತ್ತುಮಾಡಿದ್ದರು. ಈ ಅಂತಿಮ ದಿನಗಳಲ್ಲಿ ನಿಮಗೋಸ್ಕರ ಯೇಸು ಪ್ರತ್ಯಕ್ಷರಾದರು. ಮರಣದಿಂದ ಪುನರುತ್ಥಾನಗೊಳಿಸಿ ಮಹಿಮೆಪಡಿಸಿದ ದೇವರಲ್ಲಿ ನೀವು ವಿಶ್ವಾಸವಿಟ್ಟದ್ದು ಇವರ ಮುಖಾಂತರವೇ. ಹೀಗೆ ನಿಮ್ಮ ವಿಶ್ವಾಸವೂ ನಿರೀಕ್ಷೆಯೂ ದೇವರಲ್ಲೇ ನೆಲೆಗೊಂಡಿವೆ. ಸತ್ಯಕ್ಕೆ ಶರಣಾಗಿ ಆತ್ಮಶುದ್ದಿ ಹೊಂದಿರುವ ನಿಮ್ಮ ಸಹೋದರನನ್ನು ನಿಷ್ಠಪಟದಿಂದ ಪ್ರೀತಿಸಬಲ್ಲಿರಿ. ಎಂದೇ, ಒಬ್ಬರನ್ನೊಬ್ಬರು ಹೃತ್ಪೂರ್ವಕವಾಗಿಯೂ ಯಥಾರ್ಥವಾಗಿಯೂ ಪ್ರೀತಿಸಿರಿ. ನೀವು ಸಜೀವವಾದ ಅನಂತ ದೈವವಾಕ್ಯದ ಮೂಲಕ ಹೊಸಜನ್ಮವನ್ನು ಪಡೆದಿದ್ದೀರಿ; ಈ ಜನ್ಮವನ್ನು ನೀವು ಪಡೆದಿರುವುದು ಮರ್ತ್ಯಮಾನವನಿಂದಲ್ಲ, ಅಮರ ದೇವರಿಂದ. ಪವಿತ್ರಗ್ರಂಥದಲ್ಲಿ ಬರೆದಿರುವಂತೆ: ನರಮಾನವರೆಲ್ಲರೂ ಗರಿಹುಲ್ಲಿನಂತೆ ಅವರ ವೈಭವವೆಲ್ಲವೂ ಹುಲ್ಲಿನ ಹೂವಿನಂತೆ. ಹುಲ್ಲೊಣಗಿ ಹೂ ಬಾಡಿಬೀಳುವುದು ಪ್ರಭುವಿನ ವಾಕ್ಯವಾದರೋ ಶಾಶ್ವತವಾಗಿ ನಿಲ್ಲುವುದು. ಈ ವಾಕ್ಯವೇ ನಿಮಗೆ ಸಾರಾಲಾದ ಶುಭಸಂದೇಶ.

ಕೀರ್ತನೆ: 147:12-15,19-20
ಶ್ಲೋಕ: ಜೆರುಸಲೇಮೇ, ಕೀರ್ತಿಸು ಪ್ರಭುವನು|

ಜೆರುಸಲೇಮೇ, ಕೀರ್ತಿಸು ಪ್ರಭುವನು|
ಸಿಯೋನೇ, ಸ್ತುತಿಸು ನಿನ್ನ ದೇವರನು||
ಬಲಪಡಿಸಿದನಾತ ನಿನ್ನ ಹೆಬ್ಬಾಗಿಲುಗಳನು|
ಆಶೀರ್ವದಿಸಿಹನು ನಿನ್ನಲ್ಲಿರುವ ಮಕ್ಕಳನು||

ನಿನ್ನ ಪ್ರಾಂತದೊಳಗೆಲ್ಲ ಇರುವುದು ನೆಮ್ಮದಿ|
ನೀಡುವನು ನಿನಗೆ ಅತ್ಯುತ್ತಮವಾದ ಗೋದಿ||
ಕಳಿಸುವನು ಧರೆಗೆ ತನ್ನ ಆಣತಿ|
ಸಿದ್ಧಿಯಾಗುವುದದು ಬಲು ಶೀಘ್ರದಿ||

ತಿಳಿಸಿಹನು ತನ್ನ ವಾಕ್ಯವನು ಯಕೋಬರಿಗೆ|
ತನ್ನ ವಿಧಿನಿಯಮಗಳನು ಇಸ್ರಾಯೇಲರಿಗೆ||
ಬೇರಾವ ಜನಾಂಗಕೂ ಆತ ‌ಹೀಗೆ ಮಾಡಿಲ್ಲ|
ಆತನ ವಿಧಿನಿಯಮಗಳನು ಅವರಿಗೆ ತಿಳಿಸಲಿಲ್ಲ||

ಘೋಷಣೆ ಕೀರ್ತನೆ 95:8
ಅಲ್ಲೆಲೂಯ, ಅಲ್ಲೆಲೂಯ!

ಆತನ ಕರೆಗೆ ಕಿವಿಗೊಟ್ಟರೆನಿತೋ ಒಳಿತು ನೀವಿಂದೇ | ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ ||

ಅಲ್ಲೆಲೂಯ!

ಶುಭಸಂದೇಶ: ಮಾರ್ಕ 10:32-45


ಆ ಕಾಲದಲ್ಲಿ ಜೆರುಸಲೇಮಿಗೆ ಪ್ರಯಾಣ ಮಾಡುತ್ತಾ ಇದ್ದಾಗ ಯೇಸು ಎಲ್ಲರಿಗಿಂತ ಮುಂದೆ ನಡೆಯುತ್ತಿದ್ದರು. ಅದನ್ನು ನೋಡಿ ಶಿಷ್ಯರು ಆಶ್ಚರ್ಯಪಟ್ಟರು. ಅವರ ಹಿಂದೆ ಬರುತ್ತಿದ್ದವರು ದಿಗಿಲುಗೊಂಡರು. ಆಗ ಯೇಸು ಹನ್ನೆರಡು ಮಂದಿ ಶಿಷ್ಯರನ್ನು ತಮ್ಮ ಬಳಿಗೆ ಕರೆದು, ತಮಗೆ ಸಂಭವಿಸಲಿರುವ ವಿಷಯಗಳನ್ನು ಮತ್ತೊಮ್ಮೆ ಅವರಿಗೆ ಹೇಳತೊಡಗಿದರು: " ನೋಡಿ, ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಅಲ್ಲಿ ನರಪುತ್ರನನ್ನು ಮುಖ್ಯಯಾಜಕರ ಮತ್ತು ಧರ್ಮಶಾಸ್ತ್ರಿಗಳ ವಶಕ್ಕೆ ಒಪ್ಪಿಸುವರು. ಆತನು ಮರಣದಂಡನೆಗೆ ಅರ್ಹನೆಂದು ಅವರು ತೀರ್ಮಾನಿಸಿ, ಪರಕೀಯರ ಕೈಗೊಪ್ಪಿಸುವರು. ಇವರು ಆತನನ್ನು ಪರಿಹಾಸ್ಯ ಮಾಡುವರು; ಆತನ ಮೇಲೆ ಉಗುಳುವರು; ಕೊರಡೆಯಿಂದ ಹೊಡೆಯುವರು; ಅನಂತರ ಕೊಂದುಹಾಕುವರು. ಆತನಾದರೋ ಮೂರು ದಿನದ ಮೇಲೆ ಪುನರುತ್ಥಾನ ಹೊಂದುವನು, " ಎಂದರು. ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನ ಯೇಸುವಿನ ಬಳಿಗೆ ಬಂದು, " ಗುರುವೇ, ನಮ್ಮದೊಂದು ಬಿನ್ನಹವಿದೆ, ಅದನ್ನು ನಡೆಸಿಕೊಡಬೇಕು, "ಎಂದು ವಿಜ್ಞಾಪಿಸಿಕೊಂಡರು. "ನನ್ನಿಂದ ನಿಮಗೇನಾಗಬೇಕು? "ಎಂದು ಯೇಸು ಕೇಳಿದರು. "ತಮ್ಮ ಮಹಿಮಾಸ್ಥಾನದಲ್ಲಿ ನಮ್ಮಲ್ಲಿ ಒಬ್ಬನು ತಮ್ಮ ಬಲಗಡೆಯಲ್ಲೂ ಇನ್ನೊಬ್ಬನು ಎಡಗಡೆಯಲ್ಲೂ ಆಸೀನರಾಗುವಂತೆ ಅನುಗ್ರಹಿಸಬೇಕು, ಎಂದು ತಮ್ಮ ಬಯಕೆಯನ್ನು ತೋಡಿಕೊಂಡರು. ಅದಕ್ಕೆ ಯೇಸು, " ನೀವು ಕೋರಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಯಲಿರುವ ಪಾತ್ರೆಯಿಂದ ಕುಡಿಯಲು ನಿಮ್ಮಿಂದಾದೀತೆ? ನಾನು ಪಡೆಯಲಿರುವ ಸ್ಥಾನವನ್ನು ಪಡೆಯಲು ನಿಮ್ಮಿಂದ ಆದೀತೆ? " ಎಂದು ಪ್ರಶ್ನಿಸಿದರು. "ಹೌದು ಆಗುತ್ತದೆ, "ಎಂದು ಅವರು ಮರುನುಡಿದರು. ಆಗ ಯೇಸು, " ನಾನು ಕುಡಿಯುವ ಪಾತ್ರೆಯಿಂದ ನೀವೂ ಕುಡಿಯುವಿರಿ; ನಾನು ಪಡೆಯಲಿರುವ ಸ್ನಾನವನ್ನು ನೀವೂ ಪಡೆಯುವಿರಿ. ಆದರೆ ನನ್ನ ಬಲಗಡೆಯಲ್ಲಾಗಲೀ ಎಡಗಡೆಯಲ್ಲಾಗಲೀ ಆಸೀನರಾಗುವಂತೆ ಅನುಗ್ರಹಿಸುವುದು ನನ್ನದಲ್ಲ. ಅದು ಯಾರಿಗಾಗಿ ಸಿದ್ಧಮಾಡಲಾಗಿದೆಯೋ ಅವರಿಗೇ ಸಿಗುವುದು, "ಎಂದು ನುಡಿದರು. ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ ಯಕೋಬ, ಯೊವಾನ್ನರ ಮೇಲೆ ಸಿಟ್ಟುಗೊಂಡರು. ಆಗ ಯೇಸು ಶಿಷ್ಯರೆಲ್ಲರನ್ನು ತಮ್ಮ ಬಳಿಗೆ ಕರೆದು, "ಪ್ರಜಾಧಿಪತಿಗಳು ಎನಿಸಿಕೊಳ್ಳುವವರು ಪ್ರಜೆಗಳ ಮೇಲೆ ದರ್ಪದಿಂದ ದೊರೆತನ ಮಾಡುತ್ತಾರೆ; ಜನನಾಯಕರು ಎನಿಸಿಕೊಳ್ಳುವವರು ಜನರ ಮೇಲೆ ಅಧಿಕಾರ ಪ್ರದರ್ಶನ ಮಾಡುತ್ತಾರೆ; ಇದು ನಿಮಗೆ ಗೊತ್ತು. ಆದರೆ ನೀವು ಹಾಗಿರಬಾರದು. ನಿಮ್ಮಲ್ಲಿ ಶ್ರೇಷ್ಠನಾಗಿರಲು ಇಚ್ಛಿಸುವವನು ನಿಮ್ಮ ಸೇವಕನಾಗಿರಲಿ; ಪ್ರಥಮನಾಗಿರಲು ಆಶಿಸುವವನು ಎಲ್ಲರ ದಾಸನಾಗಿರಲಿ. ನರಪುತ್ರನು ಸಹ ಸೇವೆ ಮಾಡಿಸಿಕೊಳ್ಳುವುದಕ್ಕೆ ಅಲ್ಲ, ಇತರರ ಸೇವೆ ಮಾಡುವುದಕ್ಕೂ ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದಿದ್ದಾನೆ, " ಎಂದು ಬೋಧಿಸಿದರು.

29.08.2026 - ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು

  ಸಂತ ಸ್ನಾನಿಕ ಯೊವಾನ್ನನ ಶಿರಚ್ಛೇದನ ಮೊದಲನೇ ವಾಚನ: ಯೆರೆಮಿಯ: 1: 17-19 ಆದುದರಿಂದ ನೀನು ನಿನ್ನ ನಡುವನ್ನು ಕಟ್ಟಿ ನಿಂತುಕೊಂಡು ನಾನು ನಿನಗೆ ಆಜ್ಞಾಪಿಸುವುದನ್ನೆಲ್ಲ...