ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

31.05.24 - ಆತನಲ್ಲಿ ಭಮಭಕ್ತಿಯುಳ್ಳವರಿಗೆ ಆತನ ಪ್ರೀತಿ ತಲತಲಾಂತರದವರೆಗೆ

ಮೊದಲನೆಯ ವಾಚನ: ಜೆಫನ್ಯ 3:14-18


ಹರ್ಷಧ್ವನಿಗೈ ಸಿಯೋನ್ ಕುವರಿಯೇ. ಘೋಷಿಸು ಇಸ್ರಯೇಲ್ ದೇಶವೇ, ಹೃತ್ಪೂರ್ವಕವಾಗಿ ಸಂತೋಷಿಸು ಜೆರುಸಲೇಮ್ ನಗರವೇ, ತಪ್ಪಿಸಿಹನು ಸರ್ವೇಶ್ವರ ನಿನಗೆ ವಿಧಿಸಿರುವ ದಂಡನೆಗಳನು, ತಳ್ಳಿ ಹೊರಗಟ್ಟಿಹನು ನಿನ್ನ ಶತ್ರುಗಳನು, ಇಸ್ರಯೇಲಿನ ರಾಜನಾದ ಸರ್ವೇಶ ಇಹನು ನಿನ್ನ ಮಧ್ಯೆ ನೀನಿರುವೆ ಇನ್ನೆಂದಿಗೂ ಕೇಡಿಗಂಜದೆ. ಜೆರುಸಲೇಮಿಗೆ ಈ ಪರಿ ಹೇಳುವರು ಆ ದಿನದೊಳು: "ಅಂಜಬೇಡ ಸಿಯೋನ್, ಸೋತು ಜೋಲುಬೀಳದಿರಲಿ ನಿನ್ನ ಕೈಗಳು. "ಪ್ರಸನ್ನವಾಗಿಹನು ದೇವಾ, ಸರ್ವೇಶ ನಿನ್ನ ಮಧ್ಯೆ, ಕೊಡುವನಾಶೂರ ನಿನಗೆ ರಕ್ಷಣೆ, ಹರ್ಷಾನಂದಗೊಳ್ಳುವನು ನಿನ್ನ ವಿಷಯದಲಿ. ಪುನಶ್ಚೇತನಗೊಳಿಸುವನು ನಿನ್ನನ್ನು ಪ್ರಶಾಂತ ಪ್ರೀತಿಯಲಿ, ಗಾನಗೀತೆಗಳಿಂದ ತೋಷಿಸುವನು ನಿನ್ನಲ್ಲಿ, ಹಬ್ಬಹುಣ್ಣಿಮೆಗಳ ತರದಲಿ.

ಪರ್ಯಾಯ ವಾಚನ: ರೋಮನರಿಗೆ 12:9-18

ಸಹೋದರರೇ, ನಿಮ್ಮ ಪ್ರೀತಿ ನಿಷ್ಠಪಟವಾಗಿರಲಿ. ಕೆಟ್ಟದ್ದನ್ನು ದ್ವೇಷಿಸಿರಿ. ಒಳ್ಳೆಯದನ್ನು ಕೈಬಿಡದಿರಿ. ಸೋದರಭಾವನೆಯಿಂದ ಒಬ್ಬರನ್ನೊಬ್ಬರು ಹೃತ್ಪೂರ್ವಕವಾಗಿ ಪ್ರೀತಿಸಿರಿ. ಗೌರವ ತೋರಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ. ಪ್ರಭುವಿನ ಸೇವೆಯಲ್ಲಿ ಆಲಸಿಗಳಾಗದೆ ಅತ್ಯಾಸಕ್ತರಾಗಿರಿ. ನಂಬಿಕೆ ನಿರೀಕ್ಷೆಯನ್ನು ಹೊಂದಿರುವ ನೀವು ಉಲ್ಲಾಸದಿಂದಿರಿ. ಸಂಕಟ ಬಂದಾಗ ಸಹನೆಯಿಂದಿರಿ. ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ. ಕೊರತೆಯಲ್ಲಿರುವ ದೇವಜನರಿಗೆ ನೆರವು ನೀಡಿರಿ. ಅತಿಥಿ ಸತ್ಕಾರದಲ್ಲಿ ತತ್ಪರರಾಗಿರಿ. ನಿಮ್ಮನ್ನು ಹಿಂಸಿಸುವವರನ್ನು ಆಶೀರ್ವದಿಸಿರಿ. ಹೌದು, ಶಪಿಸದೆ ಆಶೀರ್ವದಿಸಿರಿ. ಸಂತೋಷಪಡುವವರೊಂದಿಗೆ ಸಂತೋಷಪಡಿಸಿರಿ; ದುಃಖಿಸುವವರೊಡನೆ ದುಃಖಿಸಿರಿ. ನಿಮ್ಮ ನಿಮ್ಮಲ್ಲಿ ಸಾಮರಸ್ಯವಿರಲಿ. ದೊಡ್ಡಸ್ತಿಕೆಯಿಂದ ವರ್ತಿಸಬೇಡಿ. ದೀನರೊಡನೆ ಗೆಳೆತನ ಬೆಳೆಸಿರಿ, ನೀವೇ ಜಾಣರೆಂದು ಭಾವಿಸದಿರಿ.

ಕೀರ್ತನೆ: ಯೆಶಾಯ 12:2-6
ಶ್ಲೋಕ: ಸಿಯೋನಿನ ನಿವಾಸಿಗಳೇ, ಹಾಡಿರಿ ಮಾಡಿರಿ ಭಜನ ಇಸ್ರಯೇಲಿನಾ ಸ್ವಾಮಿ ಪರಮ ಪಾವನ 

ದೇವರೇ ಉದ್ಧಾರಕನೆನಗೆ, ಆತನಲ್ಲಿದೆ ನನಗೆ ನಿರ್ಭಿತ ನಂಬಿಕೆ|
ದೇವಾದಿದೇವನೇ ಎನಗೆ ಶಕ್ತಿ|
ಆತನೆನ್ನ ಕೀರ್ತನೆಯ ವ್ಯಕ್ತಿ|
ತಂದಿಹನಾತ ಎನಗೆ ಮುಕ್ತಿ||
ಉದ್ಧರಿಸುವಾ ಒರತೆಗಳಿಂದ|
ಸೇದುವಿರಿ ನೀರನ್ನು ಹರುಷದಿಂದ||

ಸಲ್ಲಿಸಿರಿ ಸರ್ವೇಶ್ವರನಿಗೆ ಕೃತಜ್ಞತೆಯನು|
ಸ್ಮರಿಸಿರಿ ಆತನ ಶ್ರೀನಾಮವನು||
ಸಾರಿರಿ ಜನತೆಗೆ ಆತನ ಕಾವ್ಯಗಳನು|
ಘೋಷಿಸಿರಿ ಆತನ ನಾಮ ಘನತೆಯನು||

ಹಾಡಿರಿ ಸರ್ವೇಶ್ವರನಿಗೆ ಸ್ತುತಿಯನು|
ಎಸಗಿಹನಾತ ಮಹಿಮಾಕಾರ್ಯಗಳನು|
ತಿಳಿಸಿರಿ ಜಗದಾದ್ಯಂತಕೆ ಈ ವಿಷಯವನು||
ಸಿಯೋನಿನ ನಿವಾಸಿಗಳೇ, ಹಾಡಿರಿ ಮಾಡಿರಿ ಭಜನ||
ನಿಮ್ಮ ಮಧ್ಯೆಯಿರುವ ಆ ಘನವಂತನ|
ಇಸ್ರಯೇಲಿನಾ ಸ್ವಾಮಿ ಪರಮ ಪಾವನ||

ಘೋಷಣೆ ಲೂಕ 1:45
ಅಲ್ಲೆಲೂಯ, ಅಲ್ಲೆಲೂಯ!

ನಂಬಿ ಧನ್ಯಳಾದೆ ನೀನು | ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು ||

ಅಲ್ಲೆಲೂಯ!

ಶುಭಸಂದೇಶ: ಲೂಕ 1:39-56



ಆ ಕಾಲದಲ್ಲಿ ಮರಿಯಳು ಪ್ರಯಾಣ ಹೊರಟು ಜುದೇಯದ ಗುಡ್ಡಗಾಡಿನಲ್ಲಿರುವ ಒಂದು ಊರಿಗೆ ತ್ವರೆಯಾಗಿ ಬಂದಳು. ಅಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೆತಳನ್ನು ವಂದಿಸಿದಳು. ಮರಿಯಳ ವಂದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿದ್ದ ಶಿಶು ನಲಿದಾಡಿತು; ಎಲಿಜಬೇತಳು ಪವಿತ್ರಾತ್ಮಭರಿತಳಾಗಿ ಹರ್ಷೋದ್ಗಾರದಿಂದ ಹೀಗೆಂದಳು: "ಸ್ತ್ರೀಯರಲ್ಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ. ನನ್ನ ಪ್ರಭುವಿನ ತಾಯಿ ನೀನು; ನನ್ನ ಬಳಿಗೆ ಬಂದುದು ಅದೆಂಥ ಭಾಗ್ಯ. ನಿನ್ನ ವಂದನೆಯ ದನಿ ನನ್ನ ಕಿವಿ ತಾಕಿದೊಡನೆ ನಲಿದಾಡಿತು ಆನಂದದಿಂದ, ನನ್ನ ಕರುಳ ಕುಡಿ. ನಂಬಿ ಧನ್ಯಳಾದೆ ನೀನು, ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು. " ಆಗ ಹೀಗೆಂದು ಮರಿಯಳು ಹೊಗಳಿದಳು. " ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ, ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ. ತನ್ನ ದಾಸಿಯ ದೀನತೆಯನು ನೆನಪಿಗೆ ತಂದುಕೊಂಡನಾತ. ಧನ್ಯಳೆಂದು ಹೊಗಳುವರೆನ್ನನು ಇಂದಿನಿಂದ ಸರ್ವಜನಾಂಗ. ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ, ನಿಜಕ್ಕೂ ಆತನ ನಾಮಧೇಯ ಪರಮಪೂಜ್ಯ. ಆತನಲ್ಲಿ ಭಮಭಕ್ತಿಯುಳ್ಳವರಿಗೆ ಆತನ ಪ್ರೀತಿ ತಲತಲಾಂತರದವರೆಗೆ. ಗರ್ವಹೃದಯಿಗಳನಾತ ಚದುರಿಸಿರುವನು, ಪ್ರದರ್ಶಿಸಿರುವನು ತನ್ನ ಬಾಹುಬಲವನ್ನು. ಇಳಿಸಿಹನು ಗದ್ದುಗೆಯಿಂದ ಘನಾಧಿಪತಿಗಳನು, ಏರಿಸಿರುವನು ಉನ್ನತಿಗೆ ದೀನದಲಿತರನು. ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ, ಹೊರದೂಡಿರುವನು ಸಿರಿವಂತರನು ಬರಗೈಯಲಿ. ನೆರವಾದನು ತನ್ನ ದಾಸ ಇಸ್ರಯೇಲನಿಗೆ, ಪೂರ್ವಜರಿಗಿತ್ತ ವಾಗ್ದಾನದ ಮೇರೆಗೆ. ಮರೆಯಲಿಲ್ಲ ಆತ ಕರುಣೆತೋರಲು ಅಬ್ರಹಾಮನಿಗೆ, ಅವನ ಸಂತತಿಗೆ, ಯುಗಯುಗಾಂತರದವರೆಗೆ." ಮರಿಯಳು ಸುಮಾರು ಮೂರು ತಿಂಗಳು ಎಲಿಜಬೇತಳೊಡನೆ ತಂಗಿದ್ದು ತನ್ನ ಮನೆಗೆ ಹಿಂದಿರುಗಿದಳು.

No comments:

Post a Comment