ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

29.05.24 - ನಿಮ್ಮಲ್ಲಿ ಶ್ರೇಷ್ಠನಾಗಿರಲು ಇಚ್ಛಿಸುವವನು ನಿಮ್ಮ ಸೇವಕನಾಗಿರಲಿ; ಪ್ರಥಮನಾಗಿರಲು ಆಶಿಸುವವನು ಎಲ್ಲರ ದಾಸನಾಗಿರಲಿ

ಮೊದಲನೆಯ ವಾಚನ: 1 ಪೇತ್ರ 1:18-25


ಸಹೋದರರೇ, ನಿಮ್ಮ ಪೂರ್ವಜರಿಂದ ಪರಂಪರೆಯಾಗಿ ಬಂದಿರುವ ನಿರರ್ಥಕ ನಡವಳಿಕೆಯಿಂದ ನಿಮ್ಮನ್ನು ಬಿಡುಗಡೆಮಾಡಲು ಕೊಡಲಾದ ಬೆಲೆಯು ಎಂಥದ್ದೆಂದು ನಿಮಗೆ ತಿಳಿದಿದೆ. ಅದು ನಶಿಸಿಹೋಗುವ ಬೆಳ್ಳಿಬಂಗಾರವಲ್ಲ. ಬದಲಿಗೆ, ಯಾವ ನ್ಯೂನತೆಯೂ ಇಲ್ಲದ, ಯಾವ ಕಳಂಕವೂ ಇಲ್ಲದ ಬಲಿಯ ಕುರಿಮರಿಯಂಥ ಕ್ರಿಸ್ತ ಯೇಸುವಿನ ಅಮೂಲ್ಯ ರಕ್ತವೇ ಆ ಬೆಲೆ. ವಿಶ್ವಸೃಷ್ಟಿಗೆ ಮೊದಲೇ ಯೇಸುಕ್ರಿಸ್ತರನ್ನು ದೇವರು ಇದಕ್ಕೆಂದು ಗೊತ್ತುಮಾಡಿದ್ದರು. ಈ ಅಂತಿಮ ದಿನಗಳಲ್ಲಿ ನಿಮಗೋಸ್ಕರ ಯೇಸು ಪ್ರತ್ಯಕ್ಷರಾದರು. ಮರಣದಿಂದ ಪುನರುತ್ಥಾನಗೊಳಿಸಿ ಮಹಿಮೆಪಡಿಸಿದ ದೇವರಲ್ಲಿ ನೀವು ವಿಶ್ವಾಸವಿಟ್ಟದ್ದು ಇವರ ಮುಖಾಂತರವೇ. ಹೀಗೆ ನಿಮ್ಮ ವಿಶ್ವಾಸವೂ ನಿರೀಕ್ಷೆಯೂ ದೇವರಲ್ಲೇ ನೆಲೆಗೊಂಡಿವೆ. ಸತ್ಯಕ್ಕೆ ಶರಣಾಗಿ ಆತ್ಮಶುದ್ದಿ ಹೊಂದಿರುವ ನಿಮ್ಮ ಸಹೋದರನನ್ನು ನಿಷ್ಠಪಟದಿಂದ ಪ್ರೀತಿಸಬಲ್ಲಿರಿ. ಎಂದೇ, ಒಬ್ಬರನ್ನೊಬ್ಬರು ಹೃತ್ಪೂರ್ವಕವಾಗಿಯೂ ಯಥಾರ್ಥವಾಗಿಯೂ ಪ್ರೀತಿಸಿರಿ. ನೀವು ಸಜೀವವಾದ ಅನಂತ ದೈವವಾಕ್ಯದ ಮೂಲಕ ಹೊಸಜನ್ಮವನ್ನು ಪಡೆದಿದ್ದೀರಿ; ಈ ಜನ್ಮವನ್ನು ನೀವು ಪಡೆದಿರುವುದು ಮರ್ತ್ಯಮಾನವನಿಂದಲ್ಲ, ಅಮರ ದೇವರಿಂದ. ಪವಿತ್ರಗ್ರಂಥದಲ್ಲಿ ಬರೆದಿರುವಂತೆ: ನರಮಾನವರೆಲ್ಲರೂ ಗರಿಹುಲ್ಲಿನಂತೆ ಅವರ ವೈಭವವೆಲ್ಲವೂ ಹುಲ್ಲಿನ ಹೂವಿನಂತೆ. ಹುಲ್ಲೊಣಗಿ ಹೂ ಬಾಡಿಬೀಳುವುದು ಪ್ರಭುವಿನ ವಾಕ್ಯವಾದರೋ ಶಾಶ್ವತವಾಗಿ ನಿಲ್ಲುವುದು. ಈ ವಾಕ್ಯವೇ ನಿಮಗೆ ಸಾರಾಲಾದ ಶುಭಸಂದೇಶ.

ಕೀರ್ತನೆ: 147:12-15,19-20
ಶ್ಲೋಕ: ಜೆರುಸಲೇಮೇ, ಕೀರ್ತಿಸು ಪ್ರಭುವನು|

ಜೆರುಸಲೇಮೇ, ಕೀರ್ತಿಸು ಪ್ರಭುವನು|
ಸಿಯೋನೇ, ಸ್ತುತಿಸು ನಿನ್ನ ದೇವರನು||
ಬಲಪಡಿಸಿದನಾತ ನಿನ್ನ ಹೆಬ್ಬಾಗಿಲುಗಳನು|
ಆಶೀರ್ವದಿಸಿಹನು ನಿನ್ನಲ್ಲಿರುವ ಮಕ್ಕಳನು||

ನಿನ್ನ ಪ್ರಾಂತದೊಳಗೆಲ್ಲ ಇರುವುದು ನೆಮ್ಮದಿ|
ನೀಡುವನು ನಿನಗೆ ಅತ್ಯುತ್ತಮವಾದ ಗೋದಿ||
ಕಳಿಸುವನು ಧರೆಗೆ ತನ್ನ ಆಣತಿ|
ಸಿದ್ಧಿಯಾಗುವುದದು ಬಲು ಶೀಘ್ರದಿ||

ತಿಳಿಸಿಹನು ತನ್ನ ವಾಕ್ಯವನು ಯಕೋಬರಿಗೆ|
ತನ್ನ ವಿಧಿನಿಯಮಗಳನು ಇಸ್ರಾಯೇಲರಿಗೆ||
ಬೇರಾವ ಜನಾಂಗಕೂ ಆತ ‌ಹೀಗೆ ಮಾಡಿಲ್ಲ|
ಆತನ ವಿಧಿನಿಯಮಗಳನು ಅವರಿಗೆ ತಿಳಿಸಲಿಲ್ಲ||

ಘೋಷಣೆ ಕೀರ್ತನೆ 95:8
ಅಲ್ಲೆಲೂಯ, ಅಲ್ಲೆಲೂಯ!

ಆತನ ಕರೆಗೆ ಕಿವಿಗೊಟ್ಟರೆನಿತೋ ಒಳಿತು ನೀವಿಂದೇ | ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ ||

ಅಲ್ಲೆಲೂಯ!

ಶುಭಸಂದೇಶ: ಮಾರ್ಕ 10:32-45


ಆ ಕಾಲದಲ್ಲಿ ಜೆರುಸಲೇಮಿಗೆ ಪ್ರಯಾಣ ಮಾಡುತ್ತಾ ಇದ್ದಾಗ ಯೇಸು ಎಲ್ಲರಿಗಿಂತ ಮುಂದೆ ನಡೆಯುತ್ತಿದ್ದರು. ಅದನ್ನು ನೋಡಿ ಶಿಷ್ಯರು ಆಶ್ಚರ್ಯಪಟ್ಟರು. ಅವರ ಹಿಂದೆ ಬರುತ್ತಿದ್ದವರು ದಿಗಿಲುಗೊಂಡರು. ಆಗ ಯೇಸು ಹನ್ನೆರಡು ಮಂದಿ ಶಿಷ್ಯರನ್ನು ತಮ್ಮ ಬಳಿಗೆ ಕರೆದು, ತಮಗೆ ಸಂಭವಿಸಲಿರುವ ವಿಷಯಗಳನ್ನು ಮತ್ತೊಮ್ಮೆ ಅವರಿಗೆ ಹೇಳತೊಡಗಿದರು: " ನೋಡಿ, ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಅಲ್ಲಿ ನರಪುತ್ರನನ್ನು ಮುಖ್ಯಯಾಜಕರ ಮತ್ತು ಧರ್ಮಶಾಸ್ತ್ರಿಗಳ ವಶಕ್ಕೆ ಒಪ್ಪಿಸುವರು. ಆತನು ಮರಣದಂಡನೆಗೆ ಅರ್ಹನೆಂದು ಅವರು ತೀರ್ಮಾನಿಸಿ, ಪರಕೀಯರ ಕೈಗೊಪ್ಪಿಸುವರು. ಇವರು ಆತನನ್ನು ಪರಿಹಾಸ್ಯ ಮಾಡುವರು; ಆತನ ಮೇಲೆ ಉಗುಳುವರು; ಕೊರಡೆಯಿಂದ ಹೊಡೆಯುವರು; ಅನಂತರ ಕೊಂದುಹಾಕುವರು. ಆತನಾದರೋ ಮೂರು ದಿನದ ಮೇಲೆ ಪುನರುತ್ಥಾನ ಹೊಂದುವನು, " ಎಂದರು. ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನ ಯೇಸುವಿನ ಬಳಿಗೆ ಬಂದು, " ಗುರುವೇ, ನಮ್ಮದೊಂದು ಬಿನ್ನಹವಿದೆ, ಅದನ್ನು ನಡೆಸಿಕೊಡಬೇಕು, "ಎಂದು ವಿಜ್ಞಾಪಿಸಿಕೊಂಡರು. "ನನ್ನಿಂದ ನಿಮಗೇನಾಗಬೇಕು? "ಎಂದು ಯೇಸು ಕೇಳಿದರು. "ತಮ್ಮ ಮಹಿಮಾಸ್ಥಾನದಲ್ಲಿ ನಮ್ಮಲ್ಲಿ ಒಬ್ಬನು ತಮ್ಮ ಬಲಗಡೆಯಲ್ಲೂ ಇನ್ನೊಬ್ಬನು ಎಡಗಡೆಯಲ್ಲೂ ಆಸೀನರಾಗುವಂತೆ ಅನುಗ್ರಹಿಸಬೇಕು, ಎಂದು ತಮ್ಮ ಬಯಕೆಯನ್ನು ತೋಡಿಕೊಂಡರು. ಅದಕ್ಕೆ ಯೇಸು, " ನೀವು ಕೋರಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಯಲಿರುವ ಪಾತ್ರೆಯಿಂದ ಕುಡಿಯಲು ನಿಮ್ಮಿಂದಾದೀತೆ? ನಾನು ಪಡೆಯಲಿರುವ ಸ್ಥಾನವನ್ನು ಪಡೆಯಲು ನಿಮ್ಮಿಂದ ಆದೀತೆ? " ಎಂದು ಪ್ರಶ್ನಿಸಿದರು. "ಹೌದು ಆಗುತ್ತದೆ, "ಎಂದು ಅವರು ಮರುನುಡಿದರು. ಆಗ ಯೇಸು, " ನಾನು ಕುಡಿಯುವ ಪಾತ್ರೆಯಿಂದ ನೀವೂ ಕುಡಿಯುವಿರಿ; ನಾನು ಪಡೆಯಲಿರುವ ಸ್ನಾನವನ್ನು ನೀವೂ ಪಡೆಯುವಿರಿ. ಆದರೆ ನನ್ನ ಬಲಗಡೆಯಲ್ಲಾಗಲೀ ಎಡಗಡೆಯಲ್ಲಾಗಲೀ ಆಸೀನರಾಗುವಂತೆ ಅನುಗ್ರಹಿಸುವುದು ನನ್ನದಲ್ಲ. ಅದು ಯಾರಿಗಾಗಿ ಸಿದ್ಧಮಾಡಲಾಗಿದೆಯೋ ಅವರಿಗೇ ಸಿಗುವುದು, "ಎಂದು ನುಡಿದರು. ಉಳಿದ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ ಯಕೋಬ, ಯೊವಾನ್ನರ ಮೇಲೆ ಸಿಟ್ಟುಗೊಂಡರು. ಆಗ ಯೇಸು ಶಿಷ್ಯರೆಲ್ಲರನ್ನು ತಮ್ಮ ಬಳಿಗೆ ಕರೆದು, "ಪ್ರಜಾಧಿಪತಿಗಳು ಎನಿಸಿಕೊಳ್ಳುವವರು ಪ್ರಜೆಗಳ ಮೇಲೆ ದರ್ಪದಿಂದ ದೊರೆತನ ಮಾಡುತ್ತಾರೆ; ಜನನಾಯಕರು ಎನಿಸಿಕೊಳ್ಳುವವರು ಜನರ ಮೇಲೆ ಅಧಿಕಾರ ಪ್ರದರ್ಶನ ಮಾಡುತ್ತಾರೆ; ಇದು ನಿಮಗೆ ಗೊತ್ತು. ಆದರೆ ನೀವು ಹಾಗಿರಬಾರದು. ನಿಮ್ಮಲ್ಲಿ ಶ್ರೇಷ್ಠನಾಗಿರಲು ಇಚ್ಛಿಸುವವನು ನಿಮ್ಮ ಸೇವಕನಾಗಿರಲಿ; ಪ್ರಥಮನಾಗಿರಲು ಆಶಿಸುವವನು ಎಲ್ಲರ ದಾಸನಾಗಿರಲಿ. ನರಪುತ್ರನು ಸಹ ಸೇವೆ ಮಾಡಿಸಿಕೊಳ್ಳುವುದಕ್ಕೆ ಅಲ್ಲ, ಇತರರ ಸೇವೆ ಮಾಡುವುದಕ್ಕೂ ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದಿದ್ದಾನೆ, " ಎಂದು ಬೋಧಿಸಿದರು.

No comments:

Post a Comment