08.06.2019 - "ಇದನ್ನೆಲ್ಲಾ ಬರೆದಿಟ್ಟವನೂ ಅವನೇ. ಅವನ ಸಾಕ್ಷಿ ಸತ್ಯವಾದುದೆಂದು ನಾವು ಬಲ್ಲೆವು"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 28:16-20, 30-31

ನಾವು ರೋಮ್ ನಗರಕ್ಕೆ ಆಗಮಿಸಿದ ಮೇಲೆ, ತನ್ನನ್ನು ಕಾಯುತ್ತಿದ್ದ ಒಬ್ಬ ಸೈನಿಕನೊಂದಿಗೆ ಪ್ರತ್ಯೇಕವಾಗಿರಲು ಪೌಲನಿಗೆ ಅಪ್ಪಣೆ ಕೊಡಲಾಯಿತು. ಮೂರುದಿನಗಳ ನಂತರ ಪೌಲನು ಸ್ಥಳೀಯ ಯೆಹೂದ್ಯ ಮುಖಂಡರು ತನ್ನ ಬಳಿ ಬರುವಂತೆ ಹೇಳಿಕಳುಹಿಸಿದನು. ಅವರು ಬಂದಾಗ, "ನನ್ನ ಸೋದರ ಇಸ್ರಯೇಲರೇ, ನಾನು ನಮ್ಮ ಜನರಿಗೆ ವಿರೋಧವಾಗಿಯಾಗಿರಲಿ, ನಮ್ಮ ಪೂರ್ವಜರಿಂದ ಬಂದ ಸಂಪ್ರದಾಯಗಳಿಗೆ ವಿರೋಧವಾಗಿಯಾಗಿರಲಿ, ಏನನ್ನೂ ಮಾಡಿಲ್ಲ; ಆದರು ಜೆರುಸಲೇಮಿನಲ್ಲಿ ನನ್ನನ್ನು ಕೈದಿಯನ್ನಾಗಿಸಿ ರೋಮನರ ಕೈಗೆ ಒಪ್ಪಿಸಲಾಯಿತು. ಇವರು ನನ್ನನ್ನು ವಿಚಾರಣೆಗೆ ಒಳಪಡಿಸಿದರು. ಮರಣ ದಂಡನೆಗೆ ಗುರಿಮಾಡುವಂಥ ಅಪರಾಧ ಏನನ್ನೂ ನನ್ನಲ್ಲಿ ಕಾಣಲಿಲ್ಲ. ಈ ಕಾರಣ ನನ್ನನ್ನು ಬಿಡುಗಡೆ ಮಾಡಬೇಕೆಂದಿದ್ದರು. ಆದರೆ ಯೆಹೂದ್ಯರು ಇದನ್ನು ಪ್ರತಿಭಟಿಸಿದರು. ಆಗ ನಾನು ಚಕ್ರವರ್ತಿಗೇ  ಅಪೀಲುಮಾಡಬೇಕಾಯಿತು. ನನ್ನ ಸ್ವದೇಶಿಯರ ಮೇಲೆ ದೋಷಾರೋಪಣೆ ಮಾಡಬೇಕೆಂದು ನಾನು ಹಾಗೆ ಮಾಡಲಿಲ್ಲ ಈ ಕಾರಣದಿಂದಲೇ ನಿಮ್ಮನ್ನು ನೋಡಿ ಮಾತನಾಡಲು ಬಯಸಿದೆ. ಇಸ್ರಯೇಲ್  ಜನತೆ ಯಾರ ನಿರೀಕ್ಷೆಯಲ್ಲಿ ಇದೆಯೋ ಅವರ ನಿಮಿತ್ತವೇ ನಾನು ಹೀಗೆ ಸರಪಣಿಗಳಿಂದ ಬಂಧಿತನಾಗಿದ್ದೇನೆ," ಎಂದನು. ಪೌಲನು ತಾನು ಬಾಡಿಗೆಗೆ ತೆಗೆದುಕೊಂಡಿದ್ದ ಮನೆಯಲ್ಲಿ ಎರಡು ವರ್ಷಗಳವರೆಗೆ ವಾಸವಾಗಿದ್ದನು. ತನ್ನನ್ನು ನೋಡಲು ಬಂದವರನ್ನೆಲ್ಲಾ ಆದರದಿಂದ ಬರಮಾಡಿಕೊಳ್ಳುತ್ತಿದ್ದನು. ಭಯಭೀತಿಯಿಲ್ಲದೆ  ಹಾಗೂ ಅಡ್ಡಿಆತಂಕವಿಲ್ಲದೆ ದೇವರ ಸಾಮ್ರಾಜ್ಯವನ್ನು ಕುರಿತು ಪ್ರಬೋಧಿಸುತ್ತಿದ್ದನು; ಸ್ವಾಮಿ ಯೇಸುಕ್ರಿಸ್ತರ ವಿಷಯವಾಗಿ ಉಪದೇಶಿಸುತ್ತಿದ್ದನು.

ಕೀರ್ತನೆ: 11:4, 5, 7
ಶ್ಲೋಕ: ಪ್ರಭೂ ಸತ್ಪುರುಷನು ಸೇರುವನು ನಿಮ್ಮ ಸನ್ನಿಧಿಯನು.

ಶುಭಸಂದೇಶ: ಯೊವಾನ್ನ 21:20-25

ಪೇತ್ರನು ಹಿಂದಿರುಗಿ ನೋಡಿದಾಗ, ಯೇಸುವಿನ ಆಪ್ತನಾಗಿದ್ದ ಶಿಷ್ಯನು ಹಿಂದೆ ಬರುವುದನ್ನು ಕಂಡನು. (ಭೋಜನದ ಸಮಯದಲ್ಲಿ ಯೇಸುವಿನ ಪಕ್ಕದಲ್ಲೇ ಒರಗಿ, "ಪ್ರಭುವೇ, ನಿಮ್ಮನ್ನು ಹಿಡಿದುಕೊಡುವಂಥ ಸ್ವಾಮಿದ್ರೋಹಿ ಯಾರು?" ಎಂದು ಕೇಳಿದವನು ಅವನು.) ಇವನನ್ನು ಕಂಡು ಪೇತ್ರನು, "ಪ್ರಭೂ, ಇವನ ವಿಷಯವೇನು?" ಎಂದು ಯೇಸುವನ್ನು ಕೇಳಿದನು. ಅದಕ್ಕೆ ಯೇಸು, "ನಾನು ಬರುವ ತನಕ ಅವನು ಹಾಗೆಯೇ ಇರಬೇಕೆಂಬುದು ನನ್ನ ಬಯಕೆ; ಆದರೆ ಅದರಿಂದ ನಿನಗೇನಾಗಬೇಕು? ನೀನಂತು ನನ್ನನ್ನು ಹಿಂಬಾಲಿಸಿ ಬಾ," ಎಂದರು. ಇದರಿಂದಾಗಿ ಆ ಶಿಷ್ಯನಿಗೆ ಸಾವಿಲ್ಲವೆಂಬ ವದಂತಿ ಸೋದರರಲ್ಲಿ ಹಬ್ಬಿತು. ಯೇಸು, "ನಾನು ಬರುವ ತನಕ ಅವನು ಹಾಗೆಯೇ ಇರಬೇಕೆಂಬುದು ನನ್ನ ಬಯಕೆಯಾದರೆ ಅದರಿಂದ ನಿನಗೇನಾಗಬೇಕು?" ಎಂದು ಹೇಳಿದರೇ ಹೊರತು ಅವನಿಗೆ ಸಾವಿಲ್ಲವೆಂದು ಹೇಳಲಿಲ್ಲ. ಇವುಗಳಿಗೆ ಆ ಶಿಷ್ಯನೇ ಸಾಕ್ಷಿ. ಇದನ್ನೆಲ್ಲಾ ಬರೆದಿಟ್ಟವನೂ ಅವನೇ. ಅವನ ಸಾಕ್ಷಿ ಸತ್ಯವಾದುದೆಂದು ನಾವು ಬಲ್ಲೆವು. ಯೇಸು ಮಾಡಿದ ಕಾರ್ಯಗಳು ಇನ್ನು ಎಷ್ಟೋ ಇವೆ. ಇವನ್ನೆಲ್ಲಾ ಒಂದೊಂದಾಗಿ ಬರೆಯಲು ಹೋದರೆ, ಬರೆಯಬೇಕಾದ ಗ್ರಂಥಗಳನ್ನು ಬಹುಶಃ ಲೋಕವೇ ಹಿಡಿಸಲಾರದೆಂದು ನೆನಸುತ್ತೇನೆ.

07.06.2019 - "ನನ್ನ ಕುರಿಮರಿಗಳನ್ನು ಮೇಯಿಸು,"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 25:13-21

ಕೆಲವು ದಿನಗಳಾದ ನಂತರ ರಾಜ ಅಗ್ರಿಪ್ಪನು ಬೆರ್ನಿಸಳೊಂದಿಗೆ ಫೆಸ್ತನನ್ನು ಅಭಿನಂದಿಸಲು ಸೆಜರೇಯಕ್ಕೆ ಬಂದನು. ಅವರು ಹಲವು ದಿನಗಳವರೆಗೆ ಅಲ್ಲೇ ತಂಗಿದ್ದರು. ಫೆಸ್ತನು ಪೌಲನ ವಿಷಯವನ್ನು ಅವನ ಮುಂದೆ ಪ್ರಸ್ತಾಪಿಸುತ್ತಾ, "ಫೆಲಿಕ್ಸನು ಕೈದಿಯಾಗಿ ಬಿಟ್ಟುಹೋದ ಒಬ್ಬ ವ್ಯಕ್ತಿ ಇಲ್ಲಿದ್ದಾನೆ. ನಾನು ಜೆರುಸಲೇಮಿಗೆ ಹೋಗಿದ್ದಾಗ ಯೆಹೂದ್ಯರ ಮಖ್ಯಯಾಜಕರೂ ಪ್ರಮುಖರೂ ಅವನ ವಿರುದ್ದ ಅಪಾದನೆಗಳನ್ನು ತಂದರು. ಅವನಿಗೆ ದಂಡನೆ ವಿಧಿಸುವಂತೆ ಕೇಳಿಕೊಂಡರು. ನಾನು ಅವರಿಗೆ, "ಆಪಾದಿತನೂ ಆಪಾದಿಸುವವರೂ ಮುಖಾಮುಖಿಯಾಗಿ ನಿಲ್ಲಬೇಕು; ತನ್ನ ಮೇಲೆ ಹೊರಿಸಲಾದ ಅಪಾದನೆಗಳ ವಿರುದ್ಧ ವಾದಿಸಲು ಆಪಾದಿತನಿಗೆ ಅವಕಾಶ ಕೊಡಬೇಕು. ಹಾಗೆ ಮಾಡದೆ ಅವರ ಕೈಗೊಪ್ಪಿಸುವುದು ರೋಮನರ ಪದ್ಧತಿಯಲ್ಲ," ಎಂದು ಹೇಳಿದೆ. ಆದುದರಿಂದ ಅವರು ನನ್ನೊಡನೆ ಇಲ್ಲಿಗೆ ಬಂದರು. ನಾನು ತಡಮಾಡದೆ ಮರುದಿನವೇ ನ್ಯಾಯಸ್ಥಾನದಲ್ಲಿ ಕುಳಿತು ಅವನನ್ನು ನನ್ನ ಮುಂದೆ ತರುವಂತೆ ಆಪಾದಿಸಿದವರು ಅವನ ವಿರುದ್ಧ ಎದ್ದು ನಿಂತು ಮಾತನಾಡಿದಾಗ ನಾನು ಭಾವಿಸಿದಂತಹ ಅಪರಾಧವೊಂದನ್ನೂ ಅವನ ಮೇಲೆ ಹೊರಿಸಲಿಲ್ಲ. ಅವನೊಡನೆ ಅವರಿಗಿದ್ದ ವಾದವಿವಾದ ಅವರ ಧರ್ಮಾಚರಣೆಗಳಿಗೆ ಸಂಬಂಧಟಟ್ಟಿತ್ತು. ಯೇಸು ಎಂಬ ಒಬ್ಬ ವ್ಯಕ್ತಿಯನ್ನು ಕುರಿತು ವಿವಾದ ಇತ್ತು. ಯೇಸು ಸತ್ತಿದ್ದರೂ ಜೀವಂತವಾಗಿದ್ದಾನೆಂದು ಪೌಲನು ಸಾಧಿಸುತ್ತಿದ್ದನು. ಈ ವಿಷಯಗಳ ಬಗ್ಗೆ ಹೇಗೆ ವಿಚಾರಣೆ ಮಾಡುವುದೆಂದು ನನಗೆ ತೋಚಲಿಲ್ಲ. ಆದುದರಿಂದ, 'ನೀನು ಜೆರುಸಲೇಮಿಗೆ ಹೋಗಿ, ಅಲ್ಲಿ ಈ ವಿಷಯಗಳ ಬಗ್ಗೆ ವಿಚಾರಣೆಗೆ ಒಳಗಾಗಲು ಇಷ್ಟಪಡುತ್ತೀಯಾ?" ಎಂದು ಪೌಲನನ್ನು ಕೇಳಿದೆ. ಅದಕ್ಕೆ ಅವನು, "ಚಕ್ರವರ್ತಿಯೇ ನನ್ನ ವಾದವನ್ನು ತೀರ್ಮಾನಿಸಲಿ. ಅಲ್ಲಿಯವರೆಗೆ ನನಗೆ ರಕ್ಷಣೆ ಬೇಕು," ಎಂದು ವಿನಂತಿಸಿದ. ಅಂತೆಯೇ ಅವನನ್ನು ಚಕ್ರವರ್ತಿಯ ಬಳಿಗೆ ಕಳುಹಿಸಲಾಗುವ ತನಕ ಕಾವಲಿನಲ್ಲಿ ಇಡಬೇಕೆಂದು ಆಜ್ಞೆಮಾಡಿದೆ," ಎಂದನು.

ಕೀರ್ತನೆ: 103:1-2, 11-12, 19-20
ಶ್ಲೋಕ: ಸ್ಥಾಪಿಸಿಹನು ಪ್ರಭು ಸ್ವರ್ಗದೊಳು ಸಿಂಹಾಸನವನು

ಶುಭಸಂದೇಶ: ಯೊವಾನ್ನ 21:15-19

ಊಟವಾದ ಮೇಲೆ ಯೇಸು ಸಿಮೋನ ಪೇತ್ರನನ್ನು ನೋಡಿ, "ಯೊವಾನ್ನನ ಮಗನಾದ ಸಿಮೋನನೇ, ಇವರಿಗಿಂತಲೂ ಹೆಚ್ಚಾಗಿ ನೀನು ನನ್ನನ್ನು ಪ್ರೀತಿಸುತ್ತೀಯಾ?" ಎಂದು ಕೇಳಿದರು. ಅದಕ್ಕೆ ಪೇತ್ರನು, "ಹೌದು ಪ್ರಭೂ, ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ನೀವೇ ಬಲ್ಲಿರಿ," ಎಂದನು. ಯೇಸು ಅವನಿಗೆ , "ನನ್ನ ಕುರಿಮರಿಗಳನ್ನು ಮೇಯಿಸು," ಎಂದರು. ಯೇಸು ಎರಡನೆಯ ಬಾರಿ, "ಯೊವಾನ್ನನ ಮಗನಾದ ಸಿಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯಾ? ಎಂದು ಕೇಳಲು, "ಹೌದು ಪ್ರಭುವೇ, ನಾನು ನಿಮ್ಮನ್ನು ಪ್ರೀತಿಸುತ್ತೇನೆಂದು ನೀವೇ ಬಲ್ಲಿರಿ," ಎಂದು ಮರುನುಡಿದನು. ಯೇಸು ಅವನಿಗೆ, "ನನ್ನ ಕುರಿಗಳನ್ನು ಕಾಯಿ," ಎಂದರು. ಮೂರನೆಯ ಬಾರಿಯೂ ಯೇಸು, "ಯೊವಾನ್ನನ ಮಗನಾದ ಸಿಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯಾ?" ಎಂದು ಕೇಳಿದರು. "ನೀನು ನನ್ನನ್ನು ಪ್ರೀತಿಸುತ್ತೀಯಾ? ಎಂದು ಯೇಸು ಮೂರನೆಯ ಬಾರಿ ಕೇಳಿದ್ದನ್ನು ಕಂಡು ಪೇತ್ರನು ನೊಂದುಕೊಂಡನು. "ಪ್ರಭುವೇ," ನಿಮಗೆ ಎಲ್ಲವು ತಿಳಿದೇ ಇದೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದೂ ನಿಮಗೆ ತಿಳಿದಿದೆ," ಎಂದು ಹೇಳಿದನು. ಅದಕ್ಕೆ ಯೇಸು, "ನನ್ನ ಕುರಿಗಳನ್ನು ಮೇಯಿಸು; ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ ಕೇಳು: ತಾರುಣ್ಯದಲ್ಲಿ ನೀನೇ ನಡುಕಟ್ಟಿಕೊಂಡು ಇಷ್ಟಬಂದ ಕಡೆ ನಡೆದೆ. ವೃದ್ದಾಪ್ಯದಲ್ಲಾದರೋ ನೀನು ಕೈಚಾಚುವೆ. ಬೇರೋಬ್ಬನು ನಿನ್ನ ನಡುಕಟ್ಟಿ ನಿನಗಿಷ್ಟವಿಲ್ಲದ ಕಡೆ ನಿನ್ನನ್ನು ನಡೆಸಿಕೊಂಡು ಹೋಗುವನು." ಎಂದು ನುಡಿದರು. ಪೇತ್ರನು ಎಂಥ ಸಾವಿನಿಂದ ದೇವರ ಮಹಿಮೆಯನ್ನು ಬೆಳಗಿಸಲಿದ್ದಾನೆಂದು ಸೂಚಿಸಿ ಹಾಗೆ ಹೇಳಿದರು. ಇದಾದ ಮೇಲೆ ಯೇಸು ಪೇತ್ರನಿಗೆ, "ನೀನು ನನ್ನನ್ನು ಹಿಂಬಾಲಿಸಿ ಬಾ," ಎಂದರು.

06.06.2019 - "ಪಿತನೇ, ಇವರೆಲ್ಲಾ ಒಂದಾಗಿರಲಿ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 22:30;  23:6-11

ಯೆಹೂದ್ಯರು ಪೌಲನ ವಿರುದ್ಧ ತಂದ ಅಪಾದನೆ ಏನೆಂದು ಖಚಿತವಾಗಿ ತಿಳಿದುಕೊಳ್ಳಲು ಸಹಸ್ರಾಧಿಪತಿ ಅಪೇಕ್ಷಿಸಿದನು. ಮಾರನೆಯ ದಿನ ಪೌಲನನ್ನು ಬಿಡುಗಡೆ ಮಾಡಿದನು. ಮುಖ್ಯಯಾಜಕರು ಮತ್ತು ನ್ಯಾಯಸಭೆಯ ಪ್ರಮುಖರು ಕೂಡುವಂತೆ ಆಜ್ಞಾಪಿಸಿದನು. ಪೌಲನನ್ನು ಕರೆದುಕೊಂಡು ಹೋಗಿ  ಆ ಸಭೆಯ ಮುಂದೆ ನಿಲ್ಲಿಸಿದನು. ಸಭೆ ಸೇರಿದ್ದವರಲ್ಲಿ ಕೆಲವರು ಸದ್ದುಕಾಯ ಪಂಥದವರು ಮತ್ತೆ ಕೆಲವರು ಫರಿಸಾಯ ಪಂಥದವರು. ಇದನ್ನು ಗಮನಿಸಿದ ಪೌಲನು, "ಸಹೋದರರೇ, ಫರಿಸಾಯ, ಫರಿಸಾಯರ ವಂಶಜ. ಸತ್ತವರು ಪುನರುತ್ದಾನ ಹೊಂದುತ್ತಾರೆ ಎಂಬ ನಮ್ಮ ನಿರಿಕ್ಷೆಯ ನಿಮಿತ್ತ ನಾನು ಇಲ್ಲಿ ವಿಚಾರಣೆಗೆ ಗುರಿಯಾಗಿದ್ದೇನೆ," ಎಂದು ಧ್ವನಿಯೆತ್ತಿ ಸಭೆಯಲ್ಲಿ ಹೇಳಿದನು. ಅವನು ಹೀಗೆ ಹೇಳಿದಾಕ್ಷಣವೇ. ಫರಿಸಾಯರ ಮತ್ತು ಸದ್ದುಕಾಯರ ನಡುವೆ ವಾಗ್ವಾದ ಉಂಟಾಯಿತು. ಸಭೆಯಲ್ಲಿ ಭಿನ್ನಭೇದವುಂಟಾಯಿತು. ಏಕೆಂದರೆ, ಸದ್ದುಕಾಯರು ಪುನರುತ್ದಾನವಾಗಲಿ, ದೇವದೂತರಾಗಲಿ, ದೇಹರಹಿತ ಆತ್ಮವಾಗಲಿ ಇದೆಯೆಂದು ಒಪ್ಪುವುದಿಲ್ಲ. ಆದರೆ ಫರಿಸಾಯರು ಇವೆಲ್ಲಾ ಇವೆಯೆಂದು ನಂಬುತ್ತಾರೆ. ಆಗ ಅಲ್ಲಿ ದೊಡ್ಡ ಕೂಗಾಟವೆದ್ದಿತು. ಫರಿಸಾಯರ ಪಂಥಕ್ಕೆ ಸೇರಿದ ಕೆಲವು ಧರ್ಮಶಾಸ್ತ್ರಿಗಳು ಎದ್ದು ನಿಂತು. "ಈ ಮನುಷ್ಯನಲ್ಲಿ ನಮಗೆ ಯಾವ ದೋಷವು ಕಾಣುವುದಿಲ್ಲ. ಒಂದು ಆತ್ಮವೋ ಅಥವಾ ಒಬ್ಬ ದೂತನೋ ಇವನೊಡನೆ ಮಾತನಾಡಿದ್ದರೂ ಮಾತನಾಡಿರಬಹುದು," ಎಂದು ವಾದಿಸಿದರು. ಈ ವಾಗ್ವಾದ ವಿಕೋಪಕ್ಕೆ ಹೋದುದರಿಂದ ಪೌಲನನ್ನು ಅವರು ಖಂಡತುಂಡಾಗಿಸಬಹುದೆಂದು ಸಹಸ್ರಾಧಿಪತಿ ಹೆದರಿದನು.  ಅವನು ಸೈನಿಕರನ್ನು ಕಳುಹಿಸಿ ಪೌಲನನ್ನು ಸಭೆಯ ಮಧ್ಯೆದಿಂದ ಎತ್ತಿಕೊಂಡು ಕೋಟೆಗೆ ತರುವಂತೆ ಆಜ್ಯಾಪಿಸಿದನು. ಪ್ರಭು ಅದೇ ರಾತ್ರಿ ಪೌಲನಿಗೆ ಹತ್ತಿರದಲ್ಲೇ ಕಾಣಿಸಿಕೊಂಡು, "ಧೈರ್ಯದಿಂದಿರು, ನೀನು ಜೆರುಸಲೇಮಿನಲ್ಲಿ ನನಗೆ ಸಾಕ್ಷಿಕೊಟ್ಟಂತೆ ರೋಮಿನಲ್ಲೂ ನನಗೆ ಸಾಕ್ಷಿಕೊಡಬೇಕಾಗಿದೆ," ಎಂದರು.

ಕೀರ್ತನೆ: 16:1-2, 5, 7-8, 9-10, 11
ಶ್ಲೋಕ: ನೀಡು ದೇವಾ ರಕ್ಷಣೆಯನು ನಾ ನಿನಗೆ ಶರಣಾಗತನು

ಶುಭಸಂದೇಶ: ಯೊವಾನ್ನ 17:20-26

ಯೇಸುಸ್ವಾಮಿ ಆಕಾಶದತ್ತ ಕಣ್ಣೆತ್ತಿ ಹೀಗೆಂದು ಪ್ರಾರ್ಥಿಸಿದರು: "ಇವರಿಗಾಗಿ ಮಾತ್ರವಲ್ಲ, ಇವರ ಮಾತನ್ನು ಕೇಳಿ ನನ್ನಲ್ಲಿ ವಿಶ್ವಾಸವಿಡುವವರಿಗಾಗಿಯೂ ಪ್ರಾರ್ಥಿಸುತ್ತೇನೆ. ಪಿತನೇ, ಇವರೆಲ್ಲಾ ಒಂದಾಗಿರಲಿ. ನೀವು ನನ್ನಲ್ಲಿ, ನಾನು ನಿಮ್ಮಲ್ಲಿ ಇರುವಂತೆಯೇ ಇವರೂ ನಮ್ಮಲ್ಲಿ ಒಂದಾಗಿರಲಿ. ಹೀಗೆ, ನನ್ನನ್ನು ಕಳುಹಿಸಿದವರು ನೀವೇ ಎಂದು ಲೋಕವು ವಿಶ್ವಾಸಿಸುವಂತಾಗಲಿ. ನಾವು ಒಂದಾಗಿರುವಂತೆ ಇವರೂ ಒಂದಾಗಿರಲೆಂದು ನೀವು ನನಗಿತ್ತ ಮಹಿಮೆಯನ್ನು ನಾನು ಇವರಿಗೆ ಕೊಟ್ಟಿದ್ದೇನೆ. ನಾನು ಇವರಲ್ಲಿಯೂ ನೀವು ನನ್ನಲ್ಲಿಯೂ ಇದ್ದು, ಇವರ ಐಕ್ಯಮತ್ಯವು ಪೂರ್ಣಸಿದ್ದಿಗೆ ಬರಲಿ. ಆಗ ನೀವೇ ನನ್ನನ್ನು ಕಳುಹಿಸುವಿರಿ ಎಂದು ನನ್ನನ್ನು ಪ್ರೀತಿಸಿದಂತೆಯೇ ಇವರನ್ನು  ನೀವು ಪ್ರೀತಿಸಿರುವಿರಿ ಎಂದೂ ಲೋಕಕ್ಕೆ ಮನವರಿಕೆ ಆಗುವುದು. ಪಿತನೇ, ಇವರನ್ನು ನೀವು ನನಗೆ ಕೊಟ್ಟಿರುವಿರಿ. ಜಗತ್ತು ಉಂಟಾಗುವ ಮೊದಲೇ ನೀವು ನನ್ನನ್ನು ಪ್ರೀತಿಸಿ ನನಗಿತ್ತ ಮಹಿಮೆಯನ್ನು ಇವರೂ ಕಾಣುವಂತೆ ನಾನಿದ್ದಲ್ಲಿ ಇವರೂ ಇರಬೇಕೆಂದು ಆಶಿಸುತ್ತೇನೆ. ನೀತಿಸ್ವರೂಪಿಯಾದ ಪಿತನೇ, ಲೋಕವು ನಿಮ್ಮನ್ನು ಅರಿತುಕೊಳ್ಳಲಿಲ್ಲ. ಆದರೆ ನಾನು ಅರಿತಿದ್ದೇನೆ. ನನ್ನನ್ನು ಕಳುಹಿಸಿದವರು ನೀವೆಂದು ಇವರು ತಿಳಿದುಕೊಂಡಿದ್ದಾರೆ. ನಿಮ್ಮ ನಾಮವನ್ನು ನಾನು ಇವರಿಗೆ ತಿಳಿಯಪಡಿಸಿದ್ದೇನೆ; ಇನ್ನೂ ತಿಳಿಯಪಡಿಸುತ್ತೇನೆ. ಹೀಗೆ ನೀವು ನನ್ನಲ್ಲಿಟ್ಟ ಪ್ರೀತಿಯು ಇವರಲ್ಲಿಯೂ ಇರುವಂತಾಗುವುದು; ನಾನೂ ಅವರಲ್ಲಿ ಇರುವಂತಾಗುವುದು."

05.06.2019 - "ನಿಮ್ಮ ನಾಮದ ಶಕ್ತಿಯಿಂದ ಇವರನ್ನು ಸುರಕ್ಷಿತವಾಗಿರಿಸಿರಿ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 20:28-38

ಪೌಲನು ಎಫೆಸದ ಸಭೆಯ ಹಿರಿಯರನ್ನು ಉದ್ದೇಶಿಸಿ ಮಾತನಾಡುತ್ತಾ ಹೀಗೆಂದನು: "ನೀವು ನಿಮ್ಮ ವಿಷಯದಲ್ಲಿ ಹಾಗೂ  ಪವಿತ್ರಾತ್ಮ ನಿಮ್ಮ ಪಾಲನೆಗೆ ವಹಿಸಿರುವ ಮಂದೆಯ ವಿಷಯದಲ್ಲಿ ಜಾಗರೂಕರಾಗಿರಿ. ಪ್ರಭು ತಮ್ಮ ಸ್ವಂತ ರಕ್ತಸುರಿಸಿ ಸಂಪಾದಿಸಿದ ಧರ್ಮಸಭೆಗೆ ಉತ್ತಮ ಕುರಿಗಾಹಿಗಳಾಗಿರಿ. ನಾನು ಹೋದ ಬಳಿಕ ಕ್ರೂರವಾದ ತೋಳಗಳು ನಿಮ್ಮ ಮದ್ಯೆ ನುಗ್ಗುವುವು. ಎಂದು ನಾನು ಬಲ್ಲೆ. ಅವು ಮಂದೆಗೆ ಹಾನಿ ಮಾಡದೆ ಬಿಡವು. ಇದಲ್ಲದೆ ನಿಮ್ಮಲ್ಲೇ ಕೆಲವರು ಎದ್ದು ಭಕ್ತವಿಶ್ವಾಸಿಗಳನ್ನು ತಮ್ಮ ಕಡೆ ಸೆಳೆದುಕೊಳ್ಳಲು ಅಸತ್ಯವಾದವುಗಳನ್ನು ಹೇಳುವರು. ಆದುದರಿಂದ ಎಚ್ಚರಿಕೆ! ನಾನು ಮೂರು ವರ್ಷಗಳ ಕಾಲ ಹಗಲಿರುಳು ಕಣ್ಣೀರಿಡುತ್ತಾ ಪ್ರತಿಯೊಬ್ಬನಿಗೂ ಬುದ್ಧಿ ಹೇಳಿದ್ದೇನೆಂಬುದನ್ನು ಮರೆಯಬೇಡಿ. ಈಗ ನಿಮ್ಮನ್ನು ದೇವರ ಕೈಗೂ, ಅವರ ಅನುಗ್ರಹ ಸಂದೇಶಕ್ಕೂ ಒಪ್ಪಿಸಿಕೊಡುತ್ತೇನೆ. ಅದು ನಿಮ್ಮನ್ನು ಅಭಿವೃದ್ಧಿಗೊಳಿಸಬಲ್ಲದು. ಮಾತ್ರವಲ್ಲ, ಪಾವನಪುರುಷರ ಬಾಧ್ಯತೆಯಲ್ಲಿ ಭಾಗಿಗಳಾಗುವಂತೆ ಮಾಡಬಲ್ಲದು. ನಾನು ಯಾರ ಬೆಳ್ಳಿ ಬಂಗಾರಕ್ಕೂ ಬಟ್ಟೆಬರೆಗೂ ಆಶೆಪಟ್ಟವನಲ್ಲ. ನನ್ನ ಹಾಗೂ ನನ್ನ ಸಂಗಡಿಗರ ಅವಶ್ಯಕತೆಗಳನ್ನು ನೀಗಿಸಲು ಈ ಕೈಗಳೇ ದುಡಿದಿವೆಯೆಂಬುದು ನಿಮ್ಮೆಲ್ಲರಿಗೂ ತಿಳಿದಿದೆ. ಹೀಗೆ ಕಷ್ಟಪಟ್ಟು ದುಡಿದು, ದುರ್ಬಲರಿಗೆ ನೆರವಾಗಬೇಕೆಂದು ನಾನು ನಿಮಗೆ ಹಲವಾರು ವಿಧದಲ್ಲಿ ತೋರಿಸಿಕೊಟ್ಟಿದ್ದೇನೆ. "ಕೊಳ್ಳುವ ಕೈಗಿಂತ ಕೊಡುವ ಕೈ ಧನ್ಯವಾದುದು' ಎಂಬ ಯೇಸುಸ್ವಾಮಿಯ ಮಾತುಗಳನ್ನು ನೆನಪಿನಲ್ಲಿಡಿ." ಇಷ್ಟು ಹೇಳಿದಮೇಲೆ ಪೌಲನು ಅವರೆಲ್ಲರ ಸಂಗಡ ಮೊಣಕಾಲೂರಿ ಪ್ರಾರ್ಥನೆ ಮಾಡಿದನು. ಅನಂತರ ಅವರು ಅವನನ್ನು ತಬ್ಬಿಕೊಂಡು ಮುದ್ದಿಟ್ಟು ಬೀಳ್ಕೊಟ್ಟರು. ಅವರ ಕಣ್ಣಲ್ಲಾದರೋ ನೀರು ಧಾರಾಕಾರವಾಗಿ ಹರಿಯುತ್ತಿತ್ತು. "ಇನ್ನೆಂದೂ ನೀವು ನನ್ನ ಮುಖವನ್ನು ಕಾಣಲಾರಿರಿ," ಎಂಬ ಅವನ ಮಾತು ಅವರನ್ನು ಅತೀವ ದುಃಖಕ್ಕೆ ಈಡುಮಾಡಿತ್ತು. ಅವರು ಹಡಗಿನವರೆಗೂ ಹೋಗಿ ಅವನನ್ನು ಬೀಳ್ಕೊಟ್ಟರು.

ಕೀರ್ತನೆ: 68:29, 30, 33-35, 35-36
ಶ್ಲೋಕ: ಭೂರಾಜ್ಯಗಳೇ, ಸ್ತುತಿಸಿರಿ ದೇವರನು

ಶುಭಸಂದೇಶ: ಯೊವಾನ್ನ 17:11-19

ನಾನಿನ್ನು ಲೋಕದಲ್ಲಿ ಇರುವುದಿಲ್ಲ. ಇವರಾದರೋ ಲೋಕದಲ್ಲಿ ಇರುತ್ತಾರೆ. ನಾನು ನಿಮ್ಮ ಬಳಿಗೆ ಬರುತ್ತಿದ್ದೇನೆ. ಪವಿತ್ರ ಪಿತನೇ, ನಾವು ಒಂದಾಗಿರುವಂತೆ ನೀವು ನನಗೆ ಕೊಟ್ಟಿರುವ ಇವರೂ ಒಂದಾಗಿರುವ ಹಾಗೆ ನಿಮ್ಮ ನಾಮದ ಶಕ್ತಿಯಿಂದ ಇವರನ್ನು ಸುರಕ್ಷಿತವಾಗಿರಿಸಿರಿ. ನಾನು ಇವರೊಡನೆ ಇದ್ದಾಗ ಇವರನ್ನು ಕಾಪಾಡಿದೆನು. ನೀವಿತ್ತ ಇವರನ್ನು ನಿಮ್ಮ ನಾಮದ ಶಕ್ತಿಯಿಂದ ಸುರಕ್ಷಿತವಾಗಿ ನೋಡಿಕೊಂಡು ಬಂದೆನು. ಪವಿತ್ರಗ್ರಂಥದ ಮಾತು ನೆರವೇರುವಂತೆ ವಿನಾಶಕ್ಕೆ ಗುರಿಯಾಗಬೇಕಿದ್ದ ಒಬ್ಬನನ್ನು ಬಿಟ್ಟರೆ, ಇವರಲ್ಲಿ ಬೇರೆ ಯಾರೂ ನಾಶವಾಗಲಿಲ್ಲ. ಈಗ ನಾನು ನಿಮ್ಮ ಬಳಿಗೆ ಬರುತ್ತಿದ್ದೇನೆ. ನನ್ನ ಆನಂದವು ಅವರ ಹೃದಯದಲ್ಲಿ ತುಂಬಿತುಳುಕುವಂತೆ ಈ ಲೋಕದಲ್ಲಿರುವಾಗಲೇ ಇವುಗಳನ್ನು ಹೇಳುತ್ತಿದ್ದೇನೆ. ನಿಮ್ಮ ಸಂದೇಶವನ್ನು ಇವರಿಗೆ ತಿಳಿಸಿದ್ದೇನೆ. ನಾನು ಲೋಕಕ್ಕೆ ಸೇರಿದವನಲ್ಲ. ಈ ಕಾರಣ, ಲೋಕಕ್ಕೆ ಇವರ ಮೇಲೆ ದ್ವೇಷವಿದೆ. ಇವರನ್ನು ಲೋಕದಿಂದ ತೆಗೆದುಬಿಡಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತಿಲ್ಲ.ಆದರೆ ಕೇಡಿಗನಿಂದ ಇವರನ್ನು ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ. ನಾನು ಲೋಕಕ್ಕೆ ಹೇಗೆ ಸೇರಿದವನಲ್ಲವೋ ಹಾಗೆಯೇ ಇವರೂ ಲೋಕಕ್ಕೆ ಸೇರಿದವರಲ್ಲ. ಇವರನ್ನು ಸತ್ಯಸಂಧರನ್ನಾಗಿಸಿ ನಿಮ್ಮ ಸೇವೆಗೆ ಮೀಸಲಾಗಿಡಿ. ನಿಮ್ಮ ಮಾತೇ ಸತ್ಯ. ನೀವು ನನ್ನನ್ನು ಲೋಕಕ್ಕೆ ಕಳಿಸಿದಂತೆ ನಾನು ಇವರನ್ನು ಲೋಕಕ್ಕೆ ಕಳಿಸಿದ್ದೇನೆ. ಸತ್ವಸಂಧರಾಗಿ ಇವರು ನಿಮ್ಮ ಸೇವೆಗೆ ಮಿಸಲಾಗಬೇಕಂದು ನನ್ನನ್ನು ನಾನೇ ಮೀಸಲಾಗಿಸಿಕೊಂಡಿದ್ದೆನೆ .

04.06.2019 - "ನನ್ನನ್ನು ಈಗ ನಿಮ್ಮ ಸನ್ನಿಧಿಯಲ್ಲಿ ಮಹಿಮೆಪಡಿಸಿರಿ. "

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 20:17-27

ಪೌಲನು ಮಿಲೇತದಿಂದ ಎಫೆಸಕ್ಕೆ ಸಮಾಚಾರ ಕಳುಹಿಸಿ, ಅಲ್ಲಿನ ಧರ್ಮಸಭೆಯ ಪ್ರಮುಖರನ್ನು ಬರಮಾಡಿಕೊಂಡನು. ಬಂದಮೇಲೆ ಅವರಿಗೆ ಹೀಗೆಂದನು: "ನಾನು ಏಷ್ಯ ಪ್ರಾಂತ್ಯದಲ್ಲಿ ಕಾಲಿಟ್ಟ ದಿನ ಮೊದಲ್ಗೊಂಡು ಇಂದಿನವರೆಗೆ ನಿಮ್ಮ ಮಧ್ಯೆ ಹೇಗೆ ಬಾಳಿದೆನೆಂದು ನಿಮಗೆ ತಿಳಿದಿದೆ. ಯೆಹೂದ್ಯರ ಕುತಂತ್ರಗಳಿಂದ ನನಗೆ ಬಂದೊದಗಿದ ಸಂಕಷ್ಟಗಳಲ್ಲಿ, ನಾನು ಅತಿ ನಮ್ರತೆಯಿಂದಲೂ ಕಣ್ಣೀರಿಡುತ್ತಲೂ ಪ್ರಭುವಿನ ಸೇವೆಮಾಡಿಕೊಂಡು ಬಂದೆನು. ನಿಮಗೆ ಹಿತಕರವಾದುದೆಲ್ಲವನ್ನು ಬಹಿರಂಗದಲ್ಲೂ ಮನೆಗಳಲ್ಲೂ ಹಿಂಜರಿಯದೆ ಬೋಧಿಸಿದ್ದೇನೆ ಹಾಗೂ ಕಲಿಸಿದ್ದೇನೆ. ಪಾಪಕ್ಕೆ ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಬೇಕು, ನಮ್ಮ ಪ್ರಭು ಯೇಸುವಿನಲ್ಲಿ ವಿಶ್ವಾಸವಿಡಬೇಕು, ಎಂದು ಯೆಹೂದ್ಯರಿಗೂ ಗ್ರೀಕರಿಗೂ ಸ್ಪಷ್ಟವಾದ ಎಚ್ಚರಿಕೆಯನ್ನು ಕೊಟ್ಟಿದ್ದೇನೆ. ಈಗಲಾದರೋ, ಪವಿತ್ರಾತ್ಮಪರವಶನಾಗಿ ನಾನು ಜೆರುಸಲೇಮಿಗೆ ಹೋಗುತ್ತಿದ್ದೇನೆ. ಅಲ್ಲಿ ನನಗೇನು ಸಂಭವಿಸುವುದೋ ತಿಳಿಯದು. ಸೆರೆಮನೆಯ ಹಾಗೂ ಸಂಕಷ್ಟಗಳು ನನಗಾಗಿ ಕಾದಿವೆಯೆಂದು ಪವಿತ್ರಾತ್ಮ ಪ್ರತಿಯೊಂದು ಪಟ್ಟಣದಲ್ಲೂ ಕೊಟ್ಟ ಎಚ್ಚರಿಕೆ ಮಾತ್ರ ಸ್ಪಷ್ಟವಾಗಿದೆ. ನನಗಾದರೋ, ನನ್ನ ಪ್ರಾಣವು ತೃಣಕ್ಕೆ ಸಮಾನ. ಪ್ರಭು ಯೇಸು ನನಗೆ ವಿಧಿಸಿದ ಆಯೋಗವನ್ನು, ಅಂದರೆ ದೈವಾನುಗ್ರಹ ಕುರಿತಾದ ಶುಭಸಂದೇಶವನ್ನ ಸಾಕ್ಷ್ಯಪೂರ್ವಕವಾಗಿ  ಸಾರುವ ಆಯೋಗವನ್ನು, ಪೂರೈಸುತ್ತಾ ನನ್ನ ಬಾಳಿನ ಗುರಿಯನ್ನು ಮುಟ್ಟುವೆನಾದರೆ, ನನಗೆ ಅಷ್ಟೇ ಸಾಕಾಗಿದೆ. ಇಗೋ, ಇಷ್ಟು ದಿನ ದೇವರ ಸಾಮ್ರಾಜ್ಯವನ್ನು ಪ್ರಕಟಿಸುತ್ತಾ ನಿಮ್ಮ ಮಧೈ ಸಂಚರಿಸಿದ ನನ್ನ ಮುಖವನ್ನು ಇನ್ನು ಮುಂದೆ ನೀವು ಯಾರೂ ಕಾಣಲಾರಿರಿ ಎಂದು ನಾನು ಬಲ್ಲೆ. ಇಂತಿರಲು ನಾನು ನಿಮಗೆ ಸಾರಿ ಹೇಳುವುದೇನೆಂದರೆ - ನಿಮ್ಮಲ್ಲಿ ಯಾರಾದರು ನಾಶವಾದರೆ, ಅದಕ್ಕೆ ನಾನು ಹೊಣೆಯಲ್ಲ. ಏಕೆಂದರೆ ದೈವ ಯೋಜನೆಯನ್ನು ಕಿಂಚಿತ್ತೂ ಮರೆಮಾಚದೆ ತಿಳಿಯಪಡಿಸಿದ್ದೇನೆ."

ಕೀರ್ತನೆ: 68:10, 11, 20, 21
ಶ್ಲೋಕ: ಭೂರಾಜ್ಯಗಳೇ, ಸ್ತುತಿಸಿರಿ ದೇವರನು

ಶುಭಸಂದೇಶ: ಯೊವಾನ್ನ 17:1-11

ಯೇಸುಸ್ವಾಮಿ ಅವರೊಡನೆ ಹೀಗೆ ಮಾತನಾಡಿದ ಮೇಲೆ ಆಕಾಶದತ್ತ ಕಣ್ಣೆತ್ತಿ ನೋಡಿ, "ಪಿತನೇ, ನಿರೀಕ್ಷಿಸಿದ ಗಳಿಗೆ ಬಂದಿದೆ ನಿಮ್ಮ ಪುತ್ರನು ನಿಮ್ಮ ಮಹಿಮೆಯನ್ನು ಬೆಳಗಿಸುವಂತೆ ನೀವು ಆತನ ಮಹಿಮೆಯನ್ನು ಬೆಳಗಿಸಿರಿ. ನರಮಾನವರೆಲ್ಲರ ಮೇಲೆ ನೀವು ಆತನಿಗೆ ಅಧಿಕಾರವನ್ನು ಕೊಟ್ಟಿರುವಿರಿ ಇದರಿಂದಾಗಿ ನೀವು ಆತನಿಗೆ ಒಪ್ಪಿಸಿರುವ ಎಲ್ಲರಿಗೆ ನಿತ್ಯಜೀವವನ್ನು ಆತನು ನೀಡುವನು. ಏಕೈಕ ನಿಜ ದೇವರಾದ ನಿಮ್ಮನ್ನೂ ನೀವು ಕಳುಹಿಸಿಕೊಟ್ಟ ಯೇಸುಕ್ರಿಸ್ತನನ್ನೂ  ಅರಿತುಕೊಳ್ಳುವುದೇ ನಿತ್ಯಜೀವ. ನೀವು ನನಗೆ ಕೊಟ್ಟ ಕಾರ್ಯವನ್ನುನಾನು ಮಾಡಿ ಮುಗಿಸಿ ನಿಮ್ಮ ಮಹಿಮೆಯನ್ನು ಜಗತ್ತಿಗೆಲ್ಲ ತೋರ್ಪಡಿಸಿದೆನು. ಪಿತನೇ, ಈ ಜಗತ್ತು ಉಂಟಾಗುವ ಮೊದಲೇ ನಿಮ್ಮೊಡನೆ ನನಗಿದ್ದ ಅದೇ ಮಹಿಮೆಯನ್ನು ಕೊಟ್ಟು ನನ್ನನ್ನು ಈಗ ನಿಮ್ಮ ಸನ್ನಿಧಿಯಲ್ಲಿ ಮಹಿಮೆಪಡಿಸಿರಿ. "ನೀವು ಲೋಕದಿಂದ ಆರಿಸಿ ನನಗೆ ಕೊಟ್ಟ ಜನರಿಗೆ ನಿಮ್ಮ ನಾಮವನ್ನು ತಿಳಿಯಪಡಿಸಿದ್ದೇನೆ. ಇವರು ನಿಮ್ಮವರಾಗಿದ್ದರು. ಆದರೂ ಇವರನ್ನು ನನಗೆ ಕೊಟ್ಟಿರಿ ನಿಮ್ಮ ಮಾತಿಗೆ ವಿಧೇಯರಾಗಿ ಇವರು ನುಡಿದಿದ್ದಾರೆ. ನೀವು ನನಗೆ ಕೊಟ್ಟಿದೆಲ್ಲವೂ ನಿಜವಾಗಿ ನಿಮ್ಮಿಂದಲೇ ಬಂದಿರುವುದೆಂದು ಈಗ ಅವರಿಗೆ ತಿಳಿದಿದೆ. ನಿಮ್ಮಿಂದ ನಾನು ಕಲಿತುದೆಲ್ಲವನ್ನೂ ಇವರಿಗೆ ತಿಳಿಯಪಡಿಸಿದ್ದೇನೆ, ಅವುಗಳನ್ನು ಅವರು ಅಂಗೀಕರಿಸಿ ನಿಮ್ಮಿಂದಲೇ ನಾನು ಬಂದುದು ನಿಜವೆಂದು ಅರಿತುಕೊಂಡಿದ್ದಾರೆ. ನನ್ನನ್ನು ಕಳುಹಿಸಿದ್ದು ನೀವೇ ಎಂದು ವಿಶ್ವಾಸಿಸಿದ್ದಾರೆ. "ನಾನು ಪ್ರಾರ್ಥಿಸುವುದು ಇವರಿಗಾಗಿ, ಲೋಕಕ್ಕಾಗಿ ಅಲ್ಲ. ನೀವೇ ನನಗೆ ಕೊಟ್ಟವರಿಗಾಗಿ ಪ್ರಾರ್ಥಿಸುತ್ತೇನೆ. ಏಕೆಂದರೆ, ಇವರು ನಿಮ್ಮವರು; ಇವರಿಂದ ನನಗೆ ಮಹಿಮೆ ಉಂಟಾಗಿದೆ. ನನ್ನದೆಲ್ಲವೂ ನಿಮ್ಮದೇ; ನಿಮ್ಮದು ಎಲ್ಲವೂ ನನ್ನದೇ. ನಾನಿನ್ನು ಲೋಕದಲ್ಲಿ ಇರುವುದಿಲ್ಲ. ಇವರಾದರೋ ಲೋಕದಲ್ಲಿ ಇರುತ್ತಾರೆ. ನಾನು ನಿಮ್ಮ ಬಳಿಗೆ ಬರುತ್ತಿದ್ದೇನೆ. ಪವಿತ್ರ ಪಿತನೇ, ನಾವು ಒಂದಾಗಿರುವಂತೆ ನೀವು ನನಗೆ ಕೊಟ್ಟಿರುವ ಇವರೂ ಒಂದಾಗಿರುವ ಹಾಗೆ  ನಿಮ್ಮ ನಾಮದ ಶಕ್ತಿಯಿಂದ ಇವರನ್ನು ಸುರಕ್ಷಿತವಾಗಿರಿಸಿರಿ.

03.06.2019 - "ಆದರೆ ಧೈರ್ಯವಾಗಿರಿ. ನಾನು ಲೋಕವನ್ನು ಜಯಿಸಿದ್ದೇನೆ"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 19:1-8

ಅಪೊಲ್ಲೋಸನು ಕೊರಿಂಥದಲ್ಲಿ ಇದ್ದಾಗ, ಪೌಲನು ಮೇಲ್ನಾಡಿನ ಪ್ರಾಂತ್ಯದ ಮಾರ್ಗವಾಗಿ ಎಫೆಸಕ್ಕೆ ಬಂದನು. ಅಲ್ಲಿ ಕೆಲವು ಮಂದಿ ಶಿಷ್ಯರನ್ನು ಕಂಡು, "ನೀವು ವಿಶ್ವಾಸಿಸಿದಾಗ ಪವಿತ್ರಾತ್ಮ ಅವರನ್ನು ಪಡೆದಿರೋ?" ಎಂದು ಕೇಳಿದನು. ಅದಕ್ಕೆ ಅವರು, "ಪವಿತ್ರಾತ್ಮ ಎಂಬುವರು ಇದ್ದಾರೆಂದು ನಾವು ಕೇಳಿಯೇ ಇಲ್ಲ," ಎಂದು ಉತ್ತರಿಸಿದರು. "ಹಾಗಾದರೆ ನೀವು ಯಾವ ಸ್ನಾನದೀಕ್ಷೆಯನ್ನು ಪಡೆದಿರಿ?" ಎಂದು ಪೌಲನು ಕೇಳಲು, "ನಾವು ಯೊವಾನ್ನನ ಸ್ನಾನದೀಕ್ಷೆಯನ್ನು ಪಡೆದೆವು," ಎಂದರು. ಆಗ ಪೌಲನು, "ಯಾರು ತಮ್ಮ ಪಾಪದಿಂದ ವಿಮುಖರಾಗಿ ದೇವರಿಗೆ  ಅಭಿಮುಖರಾಗುತ್ತಿದ್ದರೋ, ಅಂಥವರಿಗೆ ಯೊವಾನ್ನನು ಸ್ನಾನದೀಕ್ಷೆ ಕೊಡುತ್ತಿದ್ದನು. ಆದರೆ ಆ ಯೊವಾನ್ನನೇ "ನನ್ನ ಬಳಿಕ ಬರುವಾತನಲ್ಲಿ ವಿಶ್ವಾಸವಿಡಿ; ಅವರೆ ಯೇಸು ಎಂದು ಇಸ್ರಯೇಲರಿಗೆ ಬೋಧಿಸಿದ್ದನು," ಎಂದನು. ಇದನ್ನು ಕೇಳಿದಾಗ ಅವರು ಪ್ರಭು ಯೇಸುವಿನ ನಾಮದಲ್ಲಿ ದೀಕ್ಷಾಸ್ನಾನವನ್ನು ಪಡೆದರು. ಪೌಲನು ಅವರ ಮೇಲೆ ಹಸ್ತನಿಕ್ಷೇಪ ಮಾಡಲು, ಪವಿತ್ರಾತ್ಮ ಅವರ ಮೇಲೆ ಬಂದರು. ಆಗ ಅವರೆಲ್ಲರೂ ನಾನಾ ಭಾಷೆಗಳನ್ನು ಮಾತನಾಡುತ್ತಾ ಪ್ರವಾದಿಸಿದರು. ಇವರು ಸುಮಾರು ಹನ್ನೆರಡು ಮಂದಿ ಇದ್ದಿರಬಹುದು. ಅನಂತರ ಮೂರು ತಿಂಗಳ ಕಾಲ ಪೌಲನು ಪ್ರಾರ್ಥನಾಮಂದಿರಕ್ಕೆ ಹೋಗಿ ಧೈರ್ಯದಿಂದ ಮಾತನಾಡಿದನು. ದೇವರ ಸಾಮ್ರಾಜ್ಯದ ಬಗ್ಗೆ ಅಲ್ಲಿದ್ದವರೊಡನೆ ಚರ್ಚಿಸುತ್ತಾ ಅವರನ್ನು ವಿಶ್ವಾಸಿಗಳನ್ನಾಗಿಸಲು ಪ್ರಯತ್ನಿಸಿದನು.

ಕೀರ್ತನೆ: 68:--3, 4-5, 6-7
ಶ್ಲೋಕ: ಭೂರಾಜ್ಯಗಳೇ, ಸ್ತುತಿಸಿರಿ ದೇವರನು!

ಶುಭಸಂದೇಶ: ಯೊವಾನ್ನ 16:29-33

ಶಿಷ್ಯರು ಯೇಸುವಿಗೆ, "ಈಗ ನೀವು ಸಾಮತಿಗಳನ್ನು ಬಳಸದೆ ಸ್ಪಷ್ಟವಾಗಿಯೇ ಮತನಾಡುತ್ತಿದ್ದೀರಿ. ನೀವು ಎಲ್ಲವನ್ನೂ ಬಲ್ಲವರು. ಪ್ರಶ್ನೆಗಳಿಗಾಗಿ ನೀವು ಕಾಯಬೇಕಿಲ್ಲ ಎಂದು ನಮಗೀಗ ತಿಳಿಯಿತು. ಆದುದರಿಂದ ನೀವು ದೇವರಿಂದ ಬಂದವರೆಂದು ನಾವು ವಿಶ್ವಾಸಿಸುತ್ತೇವೆ," ಎಂದರು. ಆಗ ಯೇಸುಸ್ವಾಮಿ, "ಈಗ ನೀವು ವಿಶ್ವಾಸಿಸುತ್ತೀರೋ? ನೀವೆಲ್ಲರೂ ನನ್ನನ್ನು ಒಬ್ಬಂಟಿಗನಾಗಿ ಬಿಟ್ಟು ನಿಮ್ಮ ನಿಮ್ಮ ಮನೆಗೆ ಚದರಿ ಹೋಗುವ ಕಾಲವು ಬರುತ್ತದೆ. ಈಗಾಗಲೇ ಬಂದಿದೆ. ಆದರೆ ಪಿತನು ನನ್ನೊಡನೆ ಇರುವುದರಿಂದ ನಾನು ಒಬ್ಬಂಟಿಗನಲ್ಲ. ನಿಮಗೆ ನನ್ನಲ್ಲಿ ಶಾಂತಿಸಮಾಧಾನ ಲಭಿಸಲೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಕಷ್ಟಸಂಕಷ್ಟಗಳು ತಪ್ಪಿದ್ದಲ್ಲ, ಆದರೆ ಧೈರ್ಯವಾಗಿರಿ. ನಾನು ಲೋಕವನ್ನು ಜಯಿಸಿದ್ದೇನೆ," ಎಂದು ಹೇಳಿದರು.

02.06.2018 - "ಶಿಷ್ಯರು ಅವರನ್ನು ಬೀಳ್ಕೊಟ್ಟರು ಮತ್ತು ಸ್ವರ್ಗಕ್ಕೆ ಒಯ್ಯಲ್ಪಟ್ಟರು."

ಪ್ರಭುವಿನ ಸ್ವರ್ಗಾರೋಹಣದ ಹಬ್ಬ

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು  1:1-11

ಸನ್ಮಾನ್ಯ ಥೆಯೊಫಿಲನೇ, ಯೇಸುಸ್ವಾಮಿ ಸ್ವರ್ಗಕ್ಕೆ ಆರೋಹಣವಾದ ದಿನದವರೆಗೆ ಮಾಡಿದ ಕಾರ್ಯಗಳನ್ನೂ ನೀಡಿದ ಬೋಧನೆಗಳನ್ನೂ ಕುರಿತು ನನ್ನ ಮೊದಲನೆಯ ಪುಸ್ತಕದಲ್ಲಿ ಬರೆದಿದ್ದೇನೆ. ಸ್ವರ್ಗರೋಹಣಕ್ಕೆ ಮೊದಲು ಪ್ರೇಷಿತರನ್ನಾಗಿ ತಾವು ಆರಿಸಿಕೊಂಡಿದ್ದವರಿಗೆ ಪವಿತ್ರಾತ್ಮ ಅವರ ಮುಖಾಂತರ ಉಪದೇಶ ಮಾಡಿದರು. ತಮ್ಮ ಮರಣದ ನಂತರ ಅವರು ನಲವತ್ತು ದಿನಗಳವರೆಗೆ ಆ ಪ್ರೇಷಿತರಿಗೆ ಪ್ರತ್ಯಕ್ಷರಾದರು. ತಾವು ಜೀವಂತವಾಗಿರುವುದನ್ನು ವಿವಿಧ ರೀತಿಯಲ್ಲಿ ಸ್ಪಷ್ಟಪಡಿಸಿದರು. ದೇವರ ಸಾಮ್ರಾಜ್ಯವನ್ನು ಕುರಿತು ಅವರಿಗೆ ಬೋಧಿಸಿದರು. ಒಮ್ಮೆ ಅವರೆಲ್ಲರೂ ಒಂದುಗೂಡಿದ್ದ ಸಂದರ್ಭದಲ್ಲಿ, "ನೀವು ಜೆರುಸಲೇಮನ್ನು ಬಿಟ್ಟುಹೋಗಬೇಡಿ; ನಾನು ನಿಮಗೆ ತಿಳಿಸಿದಂತೆ ನನ್ನ ಪಿತನು ವಾಗ್ದನಮಾಡಿರುವ ವರಕ್ಕಾಗಿ ಕಾದುಕೊಂಡಿರಿ. ಏಕೆಂದರೆ,  ಯೊವಾನ್ನನು ನೀರಿನಿಂದ ಸ್ನಾನದೀಕ್ಷೆ ಕೊಡುತ್ತಿದ್ದನು; ಆದರೆ ಇನ್ನು ಕೆಲವೇ ದಿನಗಳಲ್ಲಿ ನೀವು ಪವಿತ್ರಾತ್ಮ ಅವರಿಂದ ದೀಕ್ಷಾಸ್ನಾನ ಪಡೆಯುವಿರಿ," ಎಂದು ಆಜ್ಞಾಪಿಸಿದರು. ಮತ್ತೊಮ್ಮೆ ಯೇಸುಸ್ವಾಮಿ ತಮ್ಮೊಡನೆ ಇದ್ದಾಗ ಪ್ರೇಷಿತರು, "ಪ್ರಭೂ, ನೀವು ಇದೀಗಲೇ ಇಸ್ರಯೇಲ್ ಜನರ ರಾಜ್ಯವನ್ನು ಪುನರ್ ಸ್ಥಾಪಿಸುವಿರೋ?" ಎಂದು ಕೇಳಿದರು. ಯೇಸು ಪ್ರತ್ಯುತ್ತರವಾಗಿ "ಸಮಯ ಸಂದರ್ಭಗಳು ನನ್ನ ಪಿತನ ಸ್ವಾಧೀನದಲ್ಲಿವೆ. ಅವುಗಳನ್ನು ತಿಳಿಯುವುದು ನಿಮ್ಮ ಕೆಲಸವಲ್ಲ. ಆದರೆ ಪವಿತ್ರಾತ್ಮ ಅವರು ನಿಮ್ಮ ಮೇಲೆ ಬಂದಾಗ ನೀವು ಶಕ್ತಿಯುತರಾಗುವಿರಿ. ಆಗ ನೀವು ಜೆರುಸಲೇಮಿನಲ್ಲೂ ಜುದೇಯದಲ್ಲೂ ಸಮಾರಿಯದಲ್ಲೂ ಭೂಲೋಕದ ಕಟ್ಟಕಡೆಯವರೆಗೂ ನನಗೆ ಸಾಕ್ಷಿಗಳಾಗುವಿರಿ," ಎಂದರು. ಇದನ್ನು ಕೇಳಿದ ಮೇಲೆ ಪ್ರೇಷಿತರು ನೋಡುತ್ತಿದ್ದಂತೆಯೇ ಯೇಸು ಸ್ವರ್ಗಾರೋಹಣವಾದರು. ಮೇಘವೊಂದು ಕವಿದು ಅವರನ್ನು ಕಣ್ಮರೆಮಾಡಿತು. ಹೀಗೆ ಮೇಲೇರುತ್ತಿದ್ದ ಯೇಸುಸ್ವಾಮಿಯನ್ನು ನೋಡುತ್ತಿದ್ದ ಪ್ರೇಷಿತರ ದೃಷ್ಟಿ ಇನ್ನೂ ಆಕಾಶದತ್ತ ನಾಟಿತು. ಆಗ ಬಿಳಿಯ ವಸ್ತ್ರ ಧರಿಸಿದ್ದ ವ್ಯಕ್ತಿಗಳಿಬ್ಬರು ಇದ್ದಕ್ಕಿದ್ದಂತೆ ಅವರ ಪಕ್ಕದಲ್ಲಿ ನಿಂತರು. "ಗಲಿಲೇಯದ ಜನರೇ, ನೀವು ಆಕಾಶವನ್ನು ದಿಟ್ಟಿಸಿ ನೋಡುತ್ತಾ ನಿಂತಿರುವುದೇಕೆ? ಸ್ವರ್ಗಾರೋಹಣರಾದ ಈ ಯೇಸು ನಿಮ್ಮ ಬಳಿಯಿಂದ ಹೇಗೆ ಸ್ವರ್ಗಕ್ಕೆ ಏರಿ ಹೋಗುವುದನ್ನು ಕಂಡಿರೋ ಹಾಗೆಯೇ ಅವರು ಹಿಂದಿರುಗಿ ಬರುವರು," ಎಂದು ಹೇಳಿದರು.

ಕೀರ್ತನೆ: 47:2--3, 6--7, 8--9
ಶ್ಲೋಕ: ಏರಿದನು ಪ್ರಭು ಜಯಜಯಕಾರದೊಂದಿಗೆ ಆರೋಹಣವಾದನು ತುತೂರಿನಾದದ ಜೊತೆಗೆ

ಎರಡನೇ ವಾಚನ: ಎಫೆಸಿಯರಿಗೆ 1:17--23

ನಮ್ಮ ಪ್ರಭು ಯೇಸುಕ್ರಿಸ್ತರ ದೇವರೂ ಮಹಿಮಾನ್ವಿತ ತಂದೆಯೂ ಆದವರು, ನಿಮಗೆ ಜ್ಞಾನವನ್ನೂ ವಿವೇಚನೆಯನ್ನೂ ನೀಡುವ ಆತ್ಮವನ್ನು ದಯಪಾಲಿಸಲಿ: ತಮ್ಮನ್ನು ಸಂಪೂರ್ಣವಾಗಿ ಅರಿತುಕೊಳ್ಳುವ ವರವನ್ನು ಈಯಲಿ ಎಂದು ಪ್ರಾರ್ಥಿಸುತ್ತೇನೆ.  ದೇವರು ನಿಮ್ಮ ಮನೋನೇತ್ರಗಳನ್ನು ತೆರೆಯಲಿ; ಅವರ ಬೆಳಕು ನಿಮಗೆ ಕಾಣಿಸುವಂತೆ ಆಗಲಿ. ಹೀಗೆ, ಅವರು ಕರೆದಿರುವ ಜನರಿಗೆ ಲಭಿಸುವ ಭರವಸೆಯ ಭಾಗ್ಯ ಎಂಥದ್ದೆಂದೂ ದೇವಜನರಿಗೆ ಕಾಯ್ದಿರಿಸಿರುವ ಸ್ವಾಸ್ಥ್ಯ ಸಂಪತ್ತು ಎಂಥದ್ದೆಂದೂ ನೀವು ಅರಿತುಕೊಳ್ಳಬೇಕು. ಕ್ರೈಸ್ತವಿಶ್ವಾಸಿಗಳಾದ ನಮ್ಮಲ್ಲಿ ದೇವರು ಸಾಧಿಸಿರುವ  ಮಹತ್ಕಾರ್ಯಗಳು ಎಷ್ಟು ಶಕ್ತಿಯುತವಾದುವು ಎಂಬುದು ನಿಮಗೆ ಮನದಟ್ಟಾಗಬೇಕು. ಈ ಮಹಿಮಾಶಕ್ತಿಯಿಂದಲೇ ದೇವರು ಯೇಸುಕ್ರಿಸ್ತರನ್ನು ಮರಣದಿಂದ ಎಬ್ಬಿಸಿದರು; ಸಕಲ ಅಧಿಕಾರ, ಅಧಿಪತ್ಯ, ಪ್ರಭಾವ ಮತ್ತು ಪ್ರಭುತ್ವ ಇವೆಲ್ಲವುಗಳ ಮೇಲೆ ಯೇಸುಕ್ರಿಸ್ತರೇ ಆಡಲಿತ ನಡೆಸುವಂತೆ ಸ್ವರ್ಗಲೋಕದಲ್ಲಿ ಅವರನ್ನು ತಮ್ಮ ಬಲಗಡೆಯಲ್ಲಿ ಆಸೀನರಾಗಿಸಿದ್ದಾರೆ. ಹೀಗೆ ಇಹದಲ್ಲೂ ಪರದಲ್ಲೂ ಕೀರ್ತಿ ಗಳಿಸಿದವರೆಲ್ಲರಿಗಿಂತಲೂ ಯೇಸುಕ್ರಿಸ್ತರ ಮಹಿಮೆಯೇ ಸರ್ವಶ್ರೇಷ್ಠವಾದುದು. ದೇವರು ಸಮಸ್ತವನ್ನು ಯೇಸುಕ್ರಿಸ್ತರ ಪಾದದಡಿಯಲ್ಲಿರಿಸಿ, ಅವರನ್ನು ಧರ್ಮಸಭೆಯ ಶಿರಸ್ಸನ್ನಾಗಿ ನೇಮಿಸಿದ್ದಾರೆ. ಧರ್ಮಸಭೆಯೇ ಯೇಸುಕ್ರಿಸ್ತರ ದೇಹ. ಎಲ್ಲವನ್ನೂ ಎಲ್ಲಾ ವಿದದಲ್ಲೂ ಪೂರೈಸುವಾತನಿಂದ ಅದು ಪರಿಪೂರ್ಣವುಳ್ಳದ್ದಾಗಿದೆ.

ಶುಭಸಂದೇಶ: ಲೂಕ 24:46--53

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: "ಮೊದಲೇ ಬರೆದಿರುವ ಪ್ರಕಾರ ಕ್ರಿಸ್ತನು ಯಾತನೆಯನ್ನು ಅನುಭವಿಸಿ ಸತ್ತು ಮೂರನೆಯ ದಿನ ಪುನರುತ್ದಾನ ಹೊಂದಬೇಕಾಗಿತ್ತು: ಅಲ್ಲದೆ ಜನರು ಪಾಪಪರಿಹಾರ ಪಡೆಯಬೇಕಾದರೆ , ಪಶ್ಚಾತ್ತಾಪಪಟ್ಟು, ಪಾಪಕ್ಕೆ ವಿಮುಖರಾಗಿ, ದೈವಾಭಿಮುಖಿಗಳಾಗಬೇಕೆಂತಲೂ ಈ ಸಂದೇಶವನ್ನು ಜೆರುಸಲೇಮಿನಿಂದ ಮೊದಲ್ಗೊಂಡು ಎಲ್ಲಾ ಜನಾಂಗಗಳಿಗೂ ಆತನ ಹೆಸರಿನಲ್ಲೇ ಪ್ರಕಟಿಸಬೇಕೆಂತಲೂ ಮೊದಲೇ ಲಿಖಿತವಾಗಿತ್ತು. ಇದಕ್ಕೆಲ್ಲಾ ನೀವೇ ಸಾಕ್ಷಿಗಳು. ನನ್ನ ಪಿತ ವಾಗ್ದಾನ ಮಾಡಿದ ವ್ಯಕ್ತಿಯನ್ನು ನಾನೇ ನಿಮಗೆ ಕಳುಹಿಸಿಕೊಡುವೆನು. ಸ್ವರ್ಗದಿಂದ ಬರುವ ಶಕ್ತಿಯಿಂದ ನೀವು ಭೂಷಿತರಾಗುವ ತನಕ ಈ ಪಟ್ಟಣದಲ್ಲೇ ಕಾದಿರಿ," ಎಂದು ಹೇಳಿದರು. ಕಟ್ಟಕಡೆಗೆ ಯೇಸುಸ್ವಾಮಿ ಶಿಷ್ಯರನ್ನು ಬೆಥಾನಿಯ ಎಂಬ ಊರಿನವರೆಗೆ ಕರೆದುಕೊಂಡು ಹೋದರು. ಅಲ್ಲಿ ತಮ್ಮ ಕರಗಳನ್ನೆತ್ತಿ ಆಶೀರ್ವದಿಸಿದರು. ಆಶೀರ್ವದಿಸುತ್ತಿದ್ದ ಹಾಗೆಯೇ ಅವರನ್ನು ಬೀಳ್ಕೊಟ್ಟರು ಮತ್ತು ಸ್ವರ್ಗಕ್ಕೆ ಒಯ್ಯಲ್ಪಟ್ಟರು. ಶಿಷ್ಯರು ಅವರನ್ನು ಆರಾಧಿಸಿ ಅತ್ಯಾನಂದದಿಂದ ಜೆರುಸಲೇಮಿಗೆ ಹಿಂದಿರುಗಿದರು. ಮಹಾದೇವಾಲಯದಲ್ಲಿ ದೇವರನ್ನು ಸತತವಾಗಿ ಸ್ತುತಿ ಮಾಡಿಕೊಂಡಿದ್ದರು.

16.10.2026 - IIಶುಕ್ರವಾರ IIನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಭಯಪಡಬೇಡಿ

  ಮೊದಲನೆಯ ವಾಚನ: ರೋಮನರಿಗೆ 4:1-8 ಸಹೋದರರೇ, ವಂಶಾನುಕ್ರಮವಾಗಿ ನಮ್ಮ ಮೂಲಪಿತನಾದ ಅಬ್ರಹಾಮನ ಅನುಭವವನ್ನು ಕುರಿತು ಏನು ಹೇಳೋಣ? ಆತನು ತನ್ನ ಸತ್ಕಾರ್ಯಗಳಿಂದ ದೇವರೊಡನೆ...