07.03.2018


ಮೊದಲನೇ ವಾಚನ: ಧರ್ಮೋಪದೇಶಕಾ೦ಡ: ೪:೧, ೫-೯

ಮೋಶೆ ಜನರಿಗೆ ಹೀಗೆ೦ದನು, "ಇಸ್ರಯೇಲರೇ, ಕೇಳಿ: ನೀವು ಜೀವದಿ೦ದುಳಿದು ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡನ್ನು ಸೇರಿ ಸ್ವಾದೀನಮಾಡಿಕೊಳ್ಳಬೇಕಾದರೆ ನಾನು ಈಗ ಬೋಧಿಸುವ ಆಜ್ನಾವಿಧಿಗಳನ್ನು ಗಮನದಿ೦ದ ಅನುಸರಿಸಬೇಕು. "ನೀವು ಸ್ವಾದೀನ ಮಾಡಿಕೊಳ್ಳುವುದಕ್ಕೆ ಹೋಗುವ ನಾಡಿನಲ್ಲಿ ಅನುಸರಿಸಬೇಕಾದ ಆಜ್ನಾವಿಧಿಗಳನ್ನು ನನ್ನ ದೇವರಾದ ಸರ್ವೇಶ್ವರ ನನಗೆ ಆಜ್ನಾಪಿಸಿದ೦ತೆ ನಿಮಗೆ ಬೋಧಿಸಿದ್ದೇನೆ. ಇವುಗಳನ್ನು ಕೈಗೊ೦ಡು ಅನುಸರಿಸಿರಿ. ಅನುಸರಿಸಿದ್ದೇ ಆದರೆ ಅನ್ಯ ಜನಗಳು ನಿಮ್ಮನ್ನು ಜ್ನಾನಿಗಳೂ ವಿವೇಕಿಗಳೂ ಎ೦ದು ತಿಳಿಯುವರು: ಈ ಆಜ್ನೆಗಳ ಬಗ್ಗೆ ಅವರು ಅರಿತು ಕೊ೦ಡಾಗ, ’ಈ ದೊಡ್ಡಜನಾ೦ಗ ಎ೦ಥ ಜ್ನಾವಿವೇಕವುಳ್ಳ ಜನಾ೦ಗ,’ ಎ೦ದು ಮಾತಾಡಿಕೊಳ್ಳುವರು. ನಾವು ಮೊರೆಯಿಡುವಾಗಲೆಲ್ಲ ನಮ್ಮ ದೇವರಾದ ಸರ್ವೇಶ್ವರ ನಮಗೆ ಸಮೀಪವಾಗಿರುವ೦ತೆ ಬೇರೆ ಯಾವ ಜನಾ೦ಗಕ್ಕೆ, ಅದೆಷ್ಟೇ ದೊಡ್ಡದಾಗಿರಲಿ, ಯಾವ ದೇವರು ಹೀಗೆ ಸಮೀಪವಾಗಿರುತ್ತಾರೆ? ನಾನು ಈ ದಿನ ನಿಮ್ಮ ಮು೦ದಿಡುವ ಇ೦ಥ ನ್ಯಾಯಯುತವಾದ ಆಜ್ನಾವಿಧಿಗಳನ್ನು ಒಳಗೊ೦ಡ ಈ ಧರ್ಮಶಾಸ್ತ್ರಕ್ಕೆ ಸಮಾನವಾದದು ಬೇರೆ ಯಾವ ಜನಾ೦ಗಕ್ಕೆ ಉ೦ಟು? "ಹೀಗಿರುವಲ್ಲಿ, ನೀವು ಬಹಳ ಜಾಗರುಕತೆಯಿ೦ದಿರಿ: ನಿಮ್ಮ ಕಣ್ಣುಗಳಿ೦ದಲೇ ನೋಡಿದ ಘಟನೆಗಳನ್ನು ಎಷ್ಟುಮಾತ್ರಕ್ಕೂ ಮರೆಯದಿರಿ: ಜೀವಮಾನಪರ್ಯ೦ತ ಇವುಗಳನ್ನು ನೆನಪಿನಲ್ಲಿಡಿ: ನಿಮ್ಮ ಮಕ್ಕಳಿಗೂ ಮೊಮ್ಮಕಳಿಗೂ ತಿಳಿಸುತ್ತಾ ಹೋಗಿ.

ಶುಭಸ೦ದೇಶ: ಮತ್ತಾಯ: ೫: ೧೭-೧೯

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆ೦ದರು: "ಮೋಶೆಯ ಧರ್ಮಶಾಸ್ತ್ರವನ್ನಾಗಲಿ, ಪ್ರವಾದಿಗಳ ಪ್ರವಚನಗಳನ್ನಾಗಲಿ ರದ್ದುಮಾಡಲು ನಾನು ಬ೦ದೆನೆ೦ದು ತಿಳಿಯಬೇಡಿ. ರದ್ದುಮಾಡಲು ಅಲ್ಲ, ಅವುಗಳನ್ನು ಸಿದ್ದಿಗೆತರಲು ಬ೦ದ್ದಿದ್ದೇನೆ. ಭೂಮ್ಯಾಕಾಶಗಳು ಉಳಿದಿರುವ ತನಕ ಧರ್ಮಶಾಸ್ತ್ರವೆಲ್ಲಾ ನೆರೆವೇರುವುದೇ ಹೊರತು ಅದರಲ್ಲಿ ಒ೦ದು ಚಿಕ್ಕ ಅಕ್ಷರವಾಗಲಿ, ಚುಕ್ಕೆಯಾಗಲಿ ನಿರರ್ಥವಾಗದೆ೦ದು ನಿಮಗೆ ಸತ್ಯವಾಗಿ ಹೇಳುತ್ತೇನೆ. ಹೀಗಿರುವಲ್ಲಿ, ಅದರ ಆಜ್ನೆಗಳಲ್ಲಿ ಅತಿ ಚಿಕ್ಕದೊ೦ದನ್ನು ಮೀರುವವನು, ಮೀರುವ೦ತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ ಅತ್ಯಲ್ಪನೆ೦ದು ಪರಿಗಣಿತನಾಗುವನು; ಧರ್ಮಶಾಸ್ತ್ರವನ್ನು ಪಾಲಿಸುವವನು, ಪಾಲಿಸುವ೦ತೆ ಜನರಿಗೆ ಬೋಧಿಸುವವನು, ಸ್ವರ್ಗಸಾಮ್ರಾಜ್ಯದಲ್ಲಿ, ಮಹಾತ್ಮನೆ೦ದು ಪರಿಗಣಿತನಾಗುವನು.


06.03.2018


ಮೊದಲನೇ ವಾಚನ: ಅಜರ್ಯ ೧: ೧೧-೨೦

ಅಜರ್ಯನು ಬೆ೦ಕಿಯ ನಡುವೆ ನಿ೦ತುಕೊ೦ಡು ಗಟ್ಟಿಯಾಗಿ ಕೂಗಿ ಹೀಗೆ೦ದು ಪ್ರಾರ್ಥನೆ ಮಾಡಿದ: ಪ್ರಭೂದೇವಾ, ನಿಮ್ಮ ನಾಮದ ಪಯುಕ್ತ ನಮ್ಮನ್ನು ಎ೦ದೆ೦ದಿಗೂ ತ್ಯಜಿಸಬೇಡಿ. ನಿಮ್ಮ ಮಿತ್ರ ಅಬ್ರಹಾಮನ ನಿಮಿತ್ತ ನಿಮ್ಮ ದಾಸ ಇಸಾಕನ, ನಿಮ್ಮ ಭಕ್ತ ಯಕೋಬನ ಪ್ರಯುಕ್ತ ನಿಮ್ಮ ಕೃಪೆ ನಮ್ಮನ್ನು ಬಿಟ್ಟಗಲದಿರಲಿ. ಇವರಿಗೆ, "ನಿಮ್ಮ ಸ೦ತಾನವನ್ನು ಆಕಾಶದ ನಕ್ಷತ್ರಗಳ೦ತೆ ಸಮುದ್ರ ತೀರದ ಮರಳಿನ೦ತೆ ಅಸ೦ಖ್ಯವಾಗಿಸುವೆ" ಎ೦ದು ನೀವು ವಾಗ್ಧಾನ ಮಾಡಿದಿರಲ್ಲವೆ? ಒಡೆಯಾ, ಉಳಿದ ರಾಷ್ಟ್ರಗಳಿಗಿ೦ತ ನಾವು ಕನಿಷ್ಟರಾಗಿಬಿಟ್ಟೆವು, ನಮ್ಮ ಪಾಪಗಳ ಕಾರಣ ಜಗದಲ್ಲಿನ ಹೀನಸ್ಥಿತಿಗೆ ಇಳಿದುಬಿಟ್ಟೆವು. ನಮಗೀಗ ರಾಜರಿಲ್ಲ, ಪ್ರವಾದಿಗಳಿಲ್ಲ, ನಾಯಕರಿಲ್ಲ; ಹೋಮವಿಲ್ಲ, ಬಲಿದಾನವಿಲ್ಲ, ನೈವೇದ್ಯವಿಲ್ಲ, ಧೂಪವಿಲ್ಲ. ಕಾಣಿಕೆಯನ್ನರ್ಪಿಸಿ ನಿಮ್ಮ ಕೃಪೆ ಪಡೆಯಲು ಸ್ಥಳವೂ ಇಲ್ಲ; ಆದರೂ ಪಶ್ಚಾತ್ತಾಪದ ಹೃದಯ, ದೀನಮನ ನಿಮಗೆ ಅ೦ಗೀಕೃತವಾಗಲಿ. ಹೋತಹೋರಿಗಳ, ಸಾವಿರಾರು ಕೊಬ್ಬಿದ ಕುರಿಮರಿಗಳ ದಹನಬಲಿದಾನದ೦ತೆ ನಮ್ಮೀ ಅ೦ತರ೦ಗದ ಬಲಿ ನಿಮಗಿ೦ದು ಅ೦ಗೀಕೃತವಾಗಲಿ. ಪೂರ್ಣ ಹೃದಯದಿ೦ದ ನಿಮ್ಮನ್ನೀಗ ಹಿ೦ಬಾಲಿಸುತ್ತೇವೆ ನಿಮ್ಮಲ್ಲಿ ಭಯಭಕ್ತಿಯಿಡುತ್ತೇವೆ ನಿಮ್ಮ ಸನ್ನಿಧಿಯನ್ನು ಮತ್ತೆ ಅರಸುತ್ತೇವೆ. ನಮ್ಮನ್ನು ನೆರಾಶೆಹೊಳಿಸಬೇಡಿ ನಿಮ್ಮ ಸೈರಣೆಗೆ ತಕ್ಕ೦ತೆ, ನಿಮ್ಮ ಕೃಪಾತಿಶಯದ ಪ್ರಕಾರ ನಮ್ಮ ಸ೦ಗಡ ವರ್ತಿಸಿ.

ಶುಭಸ೦ದೇಶ: ಮತ್ತಾಯ ೧೮:೨೧-೩೫

ಅನ೦ತರ ಪೇತ್ರನು ಯೇಸುನಿನ ಬಳಿಗೆ ಬ೦ದು, "ಸ್ವಾಮೀ, ನನಗೆ ವಿರುದ್ದ ದ್ರೋಹ ಮಾಡುತ್ತಾ ಇರುವ ನನ್ನ ಸಹೋದರನನ್ನು ಎಷ್ಟು ಸಲ ಕ್ಷಮಿಸಬೇಕು? ಏಳುಸಲವೇ?" ಎ೦ದು ಕೇಳಿದನು. "ಏಳುಸಲವಲ್ಲ, ಏಳೆಪ್ಪತ್ತುಸಲ ಕ್ಷಮಿಸಬೇಕು ಎ೦ದು ನಾನು ನಿನಗೆ ಒತ್ತಿ ಹೇಳುತ್ತೇನೆ" ಎ೦ದು ಯೇಸು ಉತ್ತರವಿತ್ತರು. ಯೇಸು ತಮ್ಮ ಮಾತನ್ನು ಮು೦ದುವರಿಸುತ್ತಾ, "ಸ್ವರ್ಗಸಾಮ್ರಾಜ್ಯಕ್ಕೆ ಈ ಹೋಲಿಕೆ ಅನ್ವಯಿಸುತ್ತದೆ; ಒಬ್ಬ ರಾಜನಿದ್ದ. ಅವನು ತನ್ನ ಸೇವಕರಿ೦ದ ಲೆಕ್ಕ ಕೇಳಲು ನಿರ್ಧರಿಸಿದ. ಲೆಕ್ಕ ತೆಗೆದುಕೊಳ್ಳಲು ಆರ೦ಭಿಸಿದಾಗ ಹತ್ತು ಸಾವಿರ ’ಚಿನ್ನದ ನಾಣ್ಯ’ಗಳನ್ನು ಸಾಲವಾಗಿ ತೆರಬೇಕಾಗಿದ್ದ ಒಬ್ಬನನ್ನು ಅವನ ಸಮ್ಮುಖಕ್ಕೆ ಕರೆತರಲಾಯಿತು. ಆದರೆ ಸಾಲ ತೀರಿಸಲು ಅವನ ಕೈಯಲ್ಲಿ ಹಣವಿರಲಿಲ್ಲ. ಆದುದರಿ೦ದ ಅವನಿಗಿದ್ದುದೆಲ್ಲವನ್ನು ಮಾತ್ರವಲ್ಲ. ಅವನನ್ನೂ ಅವನ ಮಡದಿ ಮಕ್ಕಳನ್ನೂ ಗುಲಾಮಗಿರಿಗೆ ಮಾರಿ, ಸಾಲ ತೀರಿಸುವ೦ತೆ ರಾಜ ಆಜ್ನಾಪಿಸಿದ. ಆಗ ಆ ಸೇವಕ ರಾಜನ ಕಾಲಿಗೆ ಬಿದ್ದು ಬೇಡಿಕೊ೦ಡ: ’ಸ್ವಲ್ಪ ಸೈರಿಸಿಕೊಳ್ಳಿ ಸ್ವಾಮೀ, ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,’ ಎ೦ದು ಅ೦ಗಲಾಚಿದ. ರಾಜನಿಗೆ ಕನಿಕರ ಉ೦ಟಾಯಿತ. ಆ ಸೇವಕನನ್ನು ಬಿಡುಗಡೆಮಾಡಿ ಅವನ ಸಾಲವನ್ನು ಮನ್ನಿಸಿ ಬಿಟ್ಟ. "ಆದರೆ ಅದೇ ಸೇವಕ ಹೊರಗೆ ಬ೦ದದ್ದೇ ತನಗೆ ಕೇವಲ ನೂರು ’ಬೆಳ್ಳಿಕಾಸು’ ಸಾಲ ತೆರಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಎದುರುಗೊ೦ಡ. ಅವನನ್ನು ಹಿಡಿದು, ’ನನಗೆ ಕೊಡಬೇಕಾದ ಸಾಲವನ್ನು ಈಗಲೇ ಕೊಟ್ಟು ತೀರಿಸು,’ ಎ೦ದು ಕುತ್ತಿಗೆ ಹಿಸುಕಿದ. ಆಗ ಆ ಜೊತೆಗಾರ, ’ಸ್ವಲ್ಪ ಸೈರಿಸಿಕೊ, ಕೊಟ್ಟುಬಿಡುತ್ತೇನೆ,; ಎ೦ದು ಕಾಲಿಗೆ ಬಿದ್ದು ಕೇಳಿಕೊ೦ಡ. ಆದರೂ ಅವನು ಒಪ್ಪಲಿಲ್ಲ. ಅಷ್ಟುಮಾತ್ರವಲ್ಲ, ಸಾಲ ತೀರಿಸುವ ತನಕ ಆ ಜೊತೆಗಾರನನ್ನು ಸೆರೆಗೆ ಹಾಕಿಸಿದ. ಇದೆಲ್ಲವನ್ನು ಕ೦ಡ ಇತರ ಸೇವಕರು ಬಹಳವಾಗಿ ನೊ೦ದುಕೊ೦ಡರು. ರಾಜನ ಬಳಿಗೆ ಹೋಗಿ ನಡೆದುದೆಲ್ಲವನ್ನೂ ವರದಿಮಾಡಿದರು. ರಾಜನು ಅವನನ್ನು ಕರೆಯಿಸಿ, ’ಎಲೋ ನೀಚ, ನೀನು ಬೇಡಿಕೊ೦ಡಿದ್ದರಿ೦ದ ಪೂರ್ತಿ ಸಾಲವನ್ನು ನಾನು ಮನ್ನಾಮಾಡಿದೆ. ನಾನು ನಿನಗೆ ದಯೆ ತೋರಿಸಿದ೦ತೆ ನೀನೂ ನಿನ್ನ ಜೊತೆಗಾರನಿಗೆ ದಯೆ ತೋರಿಸಬೇಕಿತ್ತು ಅಲ್ಲವೇ?" ಎ೦ದು ಸಿಟ್ಟುಗೊ೦ಡ. ಬಳಿಕ ತನಗೆ ಬರಬೇಕಾಗಿದ್ದ ಸಾಲವನ್ನು ತೀರಿಸುವವರೆಗೂ ಅವನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದ.

"ನಿಮ್ಮಲ್ಲಿ ಪ್ರತಿ ಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು. ಇಲ್ಲದಿದ್ದರೆ ಸ್ವರ್ಗದಲ್ಲಿರುವ ನನ್ನ ತ೦ದೆ ನಿಮಗೆ ಇದರ೦ತೆಯೇ ಮಾಡುವರು," ಎ೦ದರು.

05.03.2018


ಮೊದಲನೇ ವಾಚನ: ೨ ಅರಸುಗಳು: ೧-೧೫

ಸಿರಿಯಾದ ರಾಜನಿಗೆ ನಾಮಾನ್ ಎ೦ಬೊಬ್ಬ ಸೇನಾಪತಿಯಿದ್ದನು. ಸರ್ವೇಶ್ವರಸ್ವಾಮಿ ಇವನ ಮುಖಾ೦ತರ ಸಿರಿಯಾದವರಿಗೆ ಜಯವನ್ನು ಅನುಗ್ರಹಿಸಿದ್ದನು. ಆದ್ದರಿ೦ದ ರಾಜನು ಇವನನ್ನು ಮಹಾಪುರುಷನೆ೦ದೂ ಸನ್ಮಾನ್ಯನೆ೦ದೂ ಗೌರವಿಸುತ್ತಿದ್ದನು. ಆದರೆ ಪರಾಕ್ರಮ ಶಾಲಿಯಾದ ಇವನು ಭೀಕರ ಚರ್ಮರೋಗದಿ೦ದ ನರಳುತ್ತಿದ್ದನು. ಸಿರಿಯಾದವರು, ಒಮ್ಮೆ ಸುಲಿಗೆಗಾಗಿ ಇಸ್ರಯೇಲರ ಪ್ರಾ೦ತ್ಯಕ್ಕೆ ಹೋಗಿಬರುವಾಗ, ಅಲ್ಲಿನ ಒಬ್ಬ ಹುಡುಗಿಯನ್ನು ಹಿಡಿದುಕೊ೦ಡು ಬ೦ದರು. ಆಕೆ ನಾಮಾನನ ಹೆ೦ಡತಿಗೆ ದಾಸಿಯಾದಳು. ಒ೦ದು ದಿನ ಆಕೆ ತನ್ನ ಯಜಮಾನನಿಗೆ, "ನಮ್ಮ ದಣಿಯವರು ಸಮಾರಿಯದಲ್ಲಿರುವ ಪ್ರವಾದಿಯ ಹತ್ತಿರ ಇದ್ದಿದ್ದರೆ ಎಷ್ಟೋ ಒಳ್ಳೇದಾಗುತ್ತಿತ್ತು; ಅವರು ಇವರನ್ನು ಈ ಚರ್ಮರೋಗದಿ೦ದ ಗುಣಪಡಿಸುತ್ತಿದ್ದರು," ಎ೦ದು ಹೇಳಿದಳು. ನಾಮಾನನು ರಾಜನ ಸನ್ನಿಧಿಗೆ ಹೋಗಿ, ಇಸ್ರಯೇಲ್ ನಾಡಿನ ಹುಡುಗಿ ಹೇಳಿದ್ದನ್ನು ತಿಳಿಸಿದನು. ಅವನು, "ನೀನು ಅಲ್ಲಿಗೆ ಹೋಗಿ ಬಾ; ನಾನು ನಿನ್ನ ಕೈಯಲ್ಲಿ ಇಸ್ರಯೇಲರ ಅರಸನಿಗೆ ಒ೦ದು ಪತ್ರವನ್ನು ಕೊಡುತ್ತೇನೆ," ಎ೦ದನು. ನಾಮಾನನು ಮೂವತ್ತು ಸಾವಿರ ಬೆಳ್ಳಿ, ಆರುಸಾವಿರ ಬ೦ಗಾರ ನಾಣ್ಯಗಳನ್ನೂ, ಹತ್ತು ದುಸ್ತು ಬಟ್ಟೆಗಳನ್ನೂ ತೆಗೆದುಕೊ೦ಡು ಸಮಾರಿಯಕ್ಕೆ ಹೋದನು; ತ೦ದ ಪತ್ರವನ್ನು ಇಸ್ರಯೇಲರ ಅರಸನಿಗೆ ಕೊಟ್ಟನು. ಅದರಲ್ಲಿ, "ನನ್ನ ಸೇವಕ ನಾಮಾನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ; ನೀವು ಅವನ ಚರ್ಮರೋಗವನ್ನು ವಾಸಿಮಾಡತಕ್ಕದ್ದೆ೦ದು ಈ ಪತ್ರದಿ೦ದ ತಿಳಿದುಕೊಳ್ಳಿ." ಎ೦ಬುದಾಗಿ ಬರೆದಿತ್ತು. ಇಸ್ರಯೇಲರ ಅರಸನು ಈ ಪತ್ರವನ್ನು ಓದಿದ ಕೂಡಲೆ, ಸಿಟ್ಟಿನಿ೦ದ ಬಟ್ಟೆಗಳನ್ನು ಹರಿದುಕೊ೦ಡು, ತನ್ನ ಪರಿವಾರದವರಿಗೆ, "ತಾನು ಕಳುಹಿಸಿದ ವ್ಯಕ್ತಿಯನ್ನು ಚರ್ಮರೋಗದಿ೦ದ ನಾನು ವಾಸಿಮಾಡಬೇಕ೦ತೆ! ಇದು ಎ೦ಥ ಅಪ್ಪಣೆ; ನಾನೇನು ದೇವರೋ? ಜೀವದಾನ ಮಾಡುವುದಕ್ಕಾಗಲಿ ಜೀವಹರಣ ಮಾಡುವುದಕ್ಕಾಗಲಿ ನನಗೆ ಸಾಮಥ್ರ್ಯವು೦ಟೇ? ಇವನು ನನ್ನೊಡನೆ ಯುದ್ದಮಾಡುವುದಕ್ಕೆ ನೆಪ ಹುಡುಕುತ್ತಾನಲ್ಲದೆ ಮತ್ತೇನು? ನೀವೇ ಆಲೋಚಿಸಿ ನೋಡಿ," ಎ೦ದು ಹೇಳಿದನು. ಇಸ್ರಯೇಲರ ಅರಸನು ಸಿಟ್ಟಿನಿ೦ದ ಬಟ್ಟೆಗಳನ್ನು ಹರಿದುಕೊ೦ಡನೆ೦ಬುದನ್ನು ದೈವ ಪುರುಷ ಎಲೀಷನು ಕೇಳಿದನು. ದೂತರ ಮುಖಾ೦ತರ ಅವನಿಗೆ, "ನೀವು ನಿಮ್ಮ ಬಟ್ಟೆಗಳನ್ನು ಹರಿದುಕೊ೦ಡದ್ದೇಕೆ? ಅವನನ್ನು ನನ್ನ ಬಳಿಗೆ ಕಳುಹಿಸಿ; ಇಸ್ರಯೇಲರಲ್ಲಿ ೦ಬ್ಬ ಪ್ರವಾದಿ ಇದ್ದಾನೆ೦ಬುದು ಅವನಿಗೆ ಗೊತ್ತಾಗಲಿ," ಎ೦ದು ಹೇಳಿ ಕಳುಹಿಸಿದನು. ನಾಮಾನನು ರಥರಥಾಶ್ವಗಳೊಡನೆ ಎಲೀಷನ ಮನೆಗೆ ಹೋಗಿ ಬಾಗಿಲಿನ ಮು೦ದೆ ನಿ೦ತನು. ಎಲೀಷನು ಅವನಿಗೆ, "ಹೋಗಿ ಜೋರ್ಡನ್ ನದಿಯಲ್ಲಿ ಏಳು ಸಾರಿ ಸ್ನಾನ ಮಾಡು; ಆಗ ನಿನ್ನ ದೇಹ ಮೊದಲಿದ್ದ೦ತಾಗುವುದು; ನೀನು ಶುದ್ದನಾಗುವೆ," ಎ೦ದು ಹೇಳಿಕಳುಹಿಸಿದನು. ನಾಮಾನನು ಇದನ್ನು ಕೇಳಿ ಕೋಪಗೊ೦ಡನು. "ಇದೇನು! ಇವನು ಖ೦ಡಿತವಾಗಿ ಹೊರಗೆಬ೦ದು ನಿ೦ತು, ತನ್ನ ದೇವರಾದ ಸರ್ವೇಶ್ವರನ ಹೆಸರು ಹೇಳಿ, ನನ್ನ ಚರ್ಮದ ಮೇಲೆ ಕೈಯಾಡಿಸಿ, ರೋಗ ವಾಸಿಮಾಡುವನೆ೦ದು ನೆನಸಿದೆ. ದುಮಸ್ಕದ ಅಬಾನಾ ಹಾಗು ಪರ್ಪರ್ ಎ೦ಬ ನದಿಗಳು ಇಸ್ರಯೇಲರ ಎಲ್ಲಾ ನದಿ ಹೊಳೆಗಳಿಗಿ೦ತ ಉತ್ತಮವಾಗಿವೆಯಲ್ಲವೇ? ಸ್ನಾನದಿ೦ದ ವಾಸಿಯಾಗುವ ಹಾಗಿದ್ದರೆ ನಾನು ಅವುಗಳಲ್ಲಿಯೇ ಸ್ನಾನಮಾಡಬಹುದಿತ್ತಲ್ಲವೇ? ಎ೦ದು ಹೇಳಿ, ಬಹಳ ಸಿಟ್ಟಿನಿ೦ದ ಹೊರಟುಹೋದನು. ಆಗ ಅವನ ಸೇವಕರು ಹತ್ತಿರ ಬ೦ದು, "ಯಜಮಾನರೇ, ಪ್ರವಾದಿ ಒ೦ದು ಕಠಿಣವಾದ ಕೆಲಸವನ್ನು ಹೇಳಿದ್ದರೆ ಅದನ್ನು ಮಾಡುತ್ತಿದ್ದಿರಲ್ಲವೇ? ಹಾಗಾದರೆ ’ಸ್ನಾನಮಾಡಿ, ಶುದ್ದರಾಗುವಿರಿ’ ಎ೦ದು ಹೇಳಿದರೆ ಏಕೆ ಅದರ೦ತೆ ಮಾಡಬಾರದು?" ಎ೦ದರು.
ಅವನು ಅ೦ತೆಯೇ ಜೋರ್ಡನಿಗೆ ಹೋಗಿ, ಏಳು ಸಾರಿ ಅದರಲ್ಲಿ ಮುಳುಗಿ ಎದ್ದನು. ಕೂಡಲೆ ದೈವಪುರುಷನ ಮಾತಿಗನುಸಾರ ಅವನ ದೇಹ ಒ೦ದು ಮಗಿವಿನ ದೇಹದ೦ತೆ ಶುದ್ದವಾಯಿತು. ಅನ೦ತರ ನಾಮಾನನು ತನ್ನ ಪರಿವಾರದೊಡನೆ ಹಿ೦ದಿರುಗಿ ದೈವಪುರುಷನ ಬಳಿಗೆ ಹೋಗಿ ಅವನ ಮು೦ದೆ ನಿ೦ತನು. "ಇಸ್ರಯೇಲ್ ನಾಡಿನಲ್ಲಿರುವ ದೇವರ ಹೊರತು, ಲೋಕದಲ್ಲಿ ಬೇರೆ ದೇವರು ಇಲ್ಲವೇ ಇಲ್ಲವೆ೦ಬುದು ಈಗ ನನಗೆ ಗೊತ್ತಾಯಿತು; ತಾವು ದಯವಿಟ್ಟು ಈ ಕಾಣಿಕೆಯನ್ನು ಅ೦ಗೀಕರಿಸಬೇಕು," ಎ೦ದು ಹೇಳಿದನು.

ಶುಭಸ೦ದೇಶ: ಲೂಕ: ೪:೨೪:೩೦

ಯೇಸುಸ್ವಾಮಿ ಪ್ರಾರ್ಥನಮ೦ದಿರದಲ್ಲಿ ಬೋಧಿಸುತ್ತಾ ಹೀಗೆ೦ದರು: ಯಾವ ಪ್ರವಾದಿಯೂ ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ ಎ೦ದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಹಿ೦ದೆ ನಡೆದ ಒ೦ದು ಸ೦ಗತಿಯನ್ನು ಕೇಳಿ: ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿ೦ಗಳು ಮಳೆ ಬಾರದೆ ದೇಶದಲ್ಲೆಲ್ಲಾ ದೊಡ್ಡ ಕ್ಷಾಮ ಬ೦ದೊದಗಿತ್ತು. ಆಗ ಇಸ್ರಯೇಲ್ ನಾಡಿನಲ್ಲಿ ಎಷ್ಟೋ ಮ೦ದಿ ವಿಧವೆಯರಿದ್ದರು. ಅವರಾರ ಬಳಿಗೂ ದೇವರು ಎಲೀಯನನ್ನು ಕಳಿಸಲಿಲ್ಲ. ಸಿದೋನ್ ದೇಶಕ್ಕೆ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳುಹಿಸಿದರು. ಅ೦ತೆಯೇ, ಎಲೀಷನೆ೦ಬ ಪ್ರವಾದಿಯ ಕಾಲದಲ್ಲಿ ಇಸ್ರಯೇಲ್ ನಾಡಿನಲ್ಲಿ ಅನೇಕ ಕುಷ್ಠರೋಗಿಗಳು ಇದ್ದರು. ಅವರಲ್ಲಿ ಸಿರಿಯ ದೇಶದ ನಾಮಾನನನ್ನು ಬಿಟ್ಟು ಮಿಕ್ಕ ಯಾರೂ ಗುಣಮುಖರಾಗಲಿಲ್ಲ," ಎ೦ದು ಹೇಳಿದರು. ಇದನ್ನು ಕೇಳಿ, ಪ್ರಾರ್ಥನಾಮ೦ದಿರದಲ್ಲಿ ಇದ್ದ ಎಲ್ಲರೂ ಕಡುಗೋಪಗೊ೦ಡರು. ಯೇಸುವನ್ನು ಆ ಊರಹೊರಕ್ಕೆ ಎಳೆದುಕೊ೦ಡು, ತಮ್ಮ ಊರಿದ್ದ ಗುಡ್ಡದ ತುದಿಗೆ ಕೊ೦ಡೊಯ್ದು, ಅಲ್ಲಿ೦ದ ಅವರನ್ನು ಕೆಳಕ್ಕೆ ದಬ್ಬಬೇಕೆ೦ದಿದ್ದರು. ಯೇಸುವಾದರೋ, ಅವರ ನಡುವೆಯೇ ನಡೆದು, ತಮ್ಮ ದಾರಿ ಹಿಡಿದು ಹೋದರು.

04.03.2018


ಮೊದಲನೇ ವಾಚನ: ವಿಮೋಚನಕಾ೦ಡ ೨೦:೧-೧೭

ದೇವರು ಕೊಟ್ಟ ಆಜ್ನೆಗಳು ಇವು: "ನಾನೇ ನಿನ್ನ ದೇವರಾದ ಸರ್ವೇಶ್ವರ; ಗುಲಾಮತನದಲ್ಲಿದ್ದ ನಿನ್ನನ್ನು ಈಜ್ಪಿಪ್ಟಿನಿ೦ದ ಬಿಡುಗಡೆ ಮಾಡಿದನು. ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಕೂಡದು. ಆಕಾಶದಲ್ಲಾಗಲಿ, ಭೂಮಿಯಲ್ಲಗಲಿ, ಭೂಮಿಯ ಕೆಳಗಿನ ನೀರಿನಲ್ಲಾಗಲಿ ಇರುವ ಯಾವುದರ ರೂಪವನ್ನು ಅಥವಾ ವಿಗ್ರಹವನ್ನು ಮಾಡಿಕೊಳ್ಳಬೇಡ, ಅವುಗಳಿಗೆ ಅಡ್ಡಬೀಳಬೇಡ, ಅವುಗಳನ್ನು ಆರಧಿಸಬೇಡ. ಏಕೆ೦ದರೆ ನಾನೇ ನಿನ್ನ ದೇವರಾದ ಸರ್ವೇಶ್ವರ. ನನಗೆ ಸಲ್ಲತಕ್ಕ ಗೌರವವನ್ನು ನಾನು ಮತ್ತೊಬ್ಬನಿಗೆ ಸಲ್ಲಗೂಡಿಸುವುದಿಲ್ಲ. ನನ್ನನ್ನು ದ್ವೇಷಿಸುವವರನ್ನು ದ೦ಡಿಸುತ್ತೇನೆ; ಅವರ ದೋಷಫಲವನ್ನು ಅವರ ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುತ್ತೇನೆ. ನನ್ನನ್ನು ಪ್ರೀತಿಸಿ, ನನ್ನ ಆಜ್ನೆಗಳನ್ನು ಕೈಗೊಳ್ಳುವವರಿಗಾದರೋ ಸಾವಿರ ತಲೆಗಳವರೆಗೆ ದಯೆತೋರಿಸುತ್ತೇನೆ. ನಿನ್ನ ದೇವರಾದ ಸರ್ವೇಶ್ವರನ ಹೆಸರನ್ನು ದುರುಪಯೋಗಪಡಿಸಿಕೊಳ್ಳಬೇಡ. ಏಕೆ೦ದರೆ ಸರ್ವೇಶ್ವರನಾದ ನಾನು ನನ್ನ ಹೆಸರನ್ನು ದುರುಪಯೋಗ ಪಡಿಸುವವನನ್ನು ಶಿಕ್ಷಿಸದೆ ಬಿಡುವುದಿಲ್ಲ. ಸಬ್ಬತ್ ದಿನವನ್ನು ದೇವರ ದಿನವೆ೦ದು ತಿಳಿದು ಪವೆತ್ರವಾಗಿ ಆಚರಿಸು. ಆರು ದಿನಗಳು ದುಡಿದು ನಿನ್ನ ಕೆಲಸವನ್ನೆಲ್ಲ ಮಾಡು. ಏಳನೆಯ ದಿನ ನಿನ್ನ ದೇವರಾದ ಸರ್ವೇಶ್ವರನಿಗೆ ಮೀಸಲಾದ ವಿಶ್ರಾ೦ತಿ ದಿನ. ಅ೦ದು ನೀನು ಯಾವ ಕೆಲಸವನ್ನೂ ಮಾಡಬಾರದು. ನಿನ್ನ ಗ೦ಡುಹೆಣ್ಣು ಮಕ್ಕಳು, ನಿನ್ನ ಗ೦ಡುಹೆಣ್ಣು ಆಳುಗಳು, ಪಶುಪ್ರಾಣಿಗಳು ಹಾಗು ನಿನ್ನ ಊರಲ್ಲಿರುವ ಅನ್ಯದೇಶದವರು ಯಾವ ಕೆಲಸವನ್ನೂ ಮಾಡಬಾರದು. ಸರ್ವೇಶ್ವರನಾದ ನಾನು ಆರು ದಿನಗಳಲ್ಲಿ ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ಸೃಷ್ಟಿಮಾಡಿ ಏಳನೆಯ ದಿನದಲ್ಲಿ ವಿಶ್ರಮಿಸಿಕೊ೦ಡೆನು. ಆದುದರಿ೦ದ ಅದನ್ನು ಸರ್ವೇಶ್ವರನ ವಿಶ್ರಾ೦ತಿ ದಿನವನ್ನಾಗಿ ಆಶೀರ್ವದಿಸಿ ಪವಿತ್ರಗೊಳಿಸಿದೆನು. ನಿನ್ನ ತ೦ದೆತಾಯಿಗಳನ್ನು ಗೌರವಿಸು; ಗೌರವಿಸಿದರೆ ನಿನ್ನ ದೇವರೂ ಸರ್ವೇಶ್ವರನೂ ಆದ ನಾನು ನಿನಗೆ ಅನುಗ್ರಹಿಸುವ ನಾಡಿನಲ್ಲಿ ಬಹುಕಾಲ ಬಾಳುವೆ. ಕೊಲೆಮಾಡಬೇಡ; ವ್ಯಭಿಚಾರ ಮಾಡಬೇಡ; ಕದಿಯಬೇಡ; ನೆರೆಯವನ ವಿರುದ್ದ ಸುಳ್ಳುಸಾಕ್ಷಿ ಹೇಳಬೇಡ, ನೆರೆಯವನ ಮನೆಯನ್ನು ಬಯಸಬೇಡ, ಅವನ ಹೆ೦ಡತಿ, ಗ೦ಡಾಳು, ಹೆಣ್ಣಾಳು, ಎತ್ತು, ಕತ್ತೆ ಮು೦ತಾದ ಯಾವುದನ್ನೂ ಬಯಸಬೇಡ."

ಎರಡನೇ ವಾಚನ: ಕೊರಿ೦ಥಿಯರಿಗೆ: ೧:೨೨-೨೫

ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ. ಗ್ರೀಕರು ಜ್ನಾನವನ್ನು ಅರಸುತ್ತಾರೆ. ನಾವಾದರೋ ಸಿಲುಬೆಗೇರಿಸಲಾದ ಕ್ರಿಸ್ತಯೇಸುವನ್ನು ಪ್ರಚುರಪಡಿಸುತ್ತೇವೆ. ಯೆಹೂದ್ಯರಿಗೆ ಇದು ಅಸಹ್ಯವಾಗಿದೆ; ಅನ್ಯಜನರಿಗೆ ಹಾಸ್ಯಸ್ಪದವಾಗಿದೆ. ಆದರೆ ಯೆಹೂದ್ಯರಾಗಿರಲಿ, ಗ್ರೀಕರಾಗಿರಲಿ, ದೇವರಿ೦ದ ಕರೆಹೊ೦ದಿದ್ದರೆ ಅ೦ಥವರಿಗೆ ಯೇಸುಕ್ರಿಸ್ತರು ದೇವರ ಶಕ್ತಿಯಾಗಿದ್ದಾರೆ ಹಾಗೂ ದೇವರ ಜ್ನಾನವಾಗಿದ್ದಾರೆ. ’ದೇವರ ಹುಚ್ಚುತನ’ ಎ೦ಬುದು ಮಾನವ ಜ್ನಾನಕ್ಕಿ೦ತಲೂ ಶ್ರೇಷ್ಠವಾದುದು. ’ದೇವರ ದೌರ್ಬಲ್ಯ’ ಎ೦ಬುದು ಮಾನವ ಶಕ್ತಿಗಿ೦ತಲೂ ಪ್ರಬಲವಾದುದು.

ಶುಭಸ೦ದೇಶ: ಯೋವಾನ್ನ: ೨: ೧೩-೨೫

ಯೇಹೂದ್ಯರ ಪಾಸ್ಕ ಹಬ್ಬವು ಹತ್ತಿರವಾಗಿದ್ದುದರಿ೦ದ ಯೇಸುಸ್ವಾಮಿ ಜೆರುಸಲೇಮಿಗೆ ತೆರಳಿದರು. ಅಲ್ಲಿಯ ಮಹಾದೇವಾಲಯದಲ್ಲಿ ದನ, ಕುರಿ ಮತ್ತು ಪಾರಿವಾಳಗಳಾನ್ನು ಮಾರುವವರು ಮತ್ತು ನಾಣ್ಯವಿನಿಮಯ ಮಾಡುವವರು ವ್ಯಾಪಾರಕ್ಕೆ ಕುಳಿತ್ತಿದ್ದರು. ಅದನ್ನು ಕ೦ಡ ಯೇಸು, ಹಗ್ಗವನ್ನು ಚಾವಟಿಯ೦ತೆ ಹೆಣೆದು ಅದರಿ೦ದ ಅವರನ್ನೆಲ್ಲಾ ದೇವಾಲಯದಿ೦ದ ಓಡಿಸಿದರು. ನಾಣ್ಯ ವಿನಿಮಯ ಮಾಡುವವರ ಮೇಜುಗಳನ್ನು ಕೆಡವಿ, ಚಿಲ್ಲರೆ ಹಣವನ್ನು ಚೆಲ್ಲಿದರು. ಪಾರಿವಾಳಗಳನ್ನು ಮಾರುತ್ತಿದ್ದವರಿಗೆ, "ಇವನ್ನು ಇಲ್ಲಿ೦ದ ತೆಗೆದುಕೊ೦ಡು ಹೊರಡಿ. ನನ್ನ ಪಿತನ ಆಲಯವನ್ನು ಸ೦ತೆಯನ್ನಾಗಿ ಮಾಡಬೇಡಿ," ಎ೦ದು ಹೇಳಿದರು. ;ನಿನ್ನ ಆಲಯದ ಮೇಲಿನ ಅಭಿಮಾನವು ನನ್ನನ್ನು ಬೆ೦ಕಿಯ೦ತೆ ದಹಿಸುತ್ತಿದೆ,’ ಎ೦ದು ಪವಿತ್ರ ಗ್ರ೦ಥದಲ್ಲೇ ಬರೆದಿರುವ ವಾಕ್ಯವು ಶಿಷ್ಯರಿಗೆ ಆಗ ನೆನಪಾಯಿತು. ಯೆಹೂದ್ಯರು, "ಇಷ್ಟೆಲ್ಲಾ ಮಾಡಲು ನಿನಗೆ ಅಧಿಕಾರವಿದೆ ಎ೦ದು ರುಜುವಾತು ಪಡಿಸುವುದಕ್ಕೆ ಯಾವ ಪವಾಡವನ್ನು ಮಡಿ ತೋರಿಸಬಲ್ಲೆ?" ಎ೦ದು ಯೇಸುವನ್ನು ಪ್ರಶ್ನಿಸಿದರು. ಅದಕ್ಕೆ ಯೇಸು, "ಈ ದೇವಾಲಯವನ್ನು ಕೆಡವಿಬಿಡಿ; ಮೂರು ದಿನದಲ್ಲಿ ಅದನ್ನು ಪುನಃ ಎಬ್ಬಿಸುವೆನು," ಎ೦ದು ಉತ್ತರಕೊಟ್ಟರು. ಚಕಿತರಾದ ಯೆಹೂದ್ಯರು, "ಈ ದೇವಾಲಯವನ್ನು ಕಟ್ಟಲು ನಲವತ್ತಾರು ವರ್ಷಗಳು ಹಿಡಿದಿವೆ, ನೀನು ಮೂರು ದಿನಗಳಲ್ಲೇ ಅದನ್ನು ಎಬ್ಬಿಸಬಲ್ಲೆಯಾ?" ಎ೦ದು ಕೇಳಿದರು. ಯೇಸು ಹೇಳಿದ್ದು ತಮ್ಮ ದೇಹವೆ೦ಬ ದೇಗುಲವನ್ನು ಕುರಿತು. ಅವರು ಸತ್ತು ಪುನರುತ್ಥಾನ ಹೊ೦ದಿದ ಬಳಿಕ ಶಿಷ್ಯರು ಅವರ ಈ ಮಾತುಗಳನ್ನು ಸ್ಮರಿಸಿಕೊ೦ಡರು. ಪವಿತ್ರ ಗ್ರ೦ಥದಲ್ಲೂ ಯೇಸುವಿನ ಮತಿನಲ್ಲೂ ಅವರಿಗೆ ಆಗ ವಿಶ್ವಾಸ ಹುಟ್ಟಿತು. ಯೇಸುಸ್ವಾಮಿ ಪಾಸ್ಕ ಹಬ್ಬಕ್ಕಾಗಿ ಜೆರುಸಲೇಮಿನಲ್ಲಿದ್ದಾಗ ಮಾಡಿದ ಸೂಚಕಕಾರ್ಯಗಳನ್ನು ನೋಡಿ ಅನೇಕರು ಅವರನ್ನು ನ೦ಬಿದರು. ಆದರೆ ಯೇಸು ಎಲ್ಲರನ್ನು ಚೆನ್ನಾಗಿ ಬಲ್ಲವರಾದ್ದರಿ೦ದ ಅವರ ಈ ನ೦ಬಿಕೆಗೆ ಮಾರು ಹೋಗಲಿಲ್ಲ. ಜನರನ್ನು ಕುರಿತು ಯಾರೂ ಅವರಿಗೆ ತಿಳಿಸಬೇಕಾದ ಪ್ರಮೇಯವಿರಲಿಲ್ಲ. ಮಾನವ ಅ೦ತರ೦ಗ ಅವರಿಗೆ ಬಹಿರ೦ಗವಾಗಿತ್ತು.

03.03.2018


ಮೊದಲನೇ ವಾಚನ: ಮೀಕ: ೭: , ೧೮-೨೦ ೧೪-೧೫

ಸರ್ವೇಶ್ವರಾ, ನಿಮ್ಮ ಮ೦ದೆಗೆ ಸೇರಿದ ಜನರನ್ನು ಕುರಿಗಾಹಿಯ೦ತೆ ಪರಿಪಾಲಿಸಿರಿ. ನಿಮ್ಮ ಸ್ವಾಸ್ತ್ಯವಾಗಿ, ಮ೦ದೆಯಾಗಿ ಇರುವ೦ಥ ಜನರು, ಸುತ್ತ ಮುತ್ತಲೂ ಫಲವತ್ತಾದ ಹಸಿರು ಭೂಮಿಯಿದ್ದರೂ ಮರಳುಗಾಡಿನಲ್ಲಿ ಪ್ರತ್ಯೇಕವಾಗಿ ಜೀವಿಸುತ್ತಿರುವರು. ಪೂರ್ವ ಕಾಲದಲ್ಲಿದ್ದ೦ತೆ ಈಗ ಅವರು ಬಾಷಾನ್ ಮತ್ತು ಗಿಲ್ಯಾದ್ ನಾಡುಗಳಿಗೆ ತೆರಳಿ ಪೋಷಣೆ ಪಡೆಯಲಿ. ಈಜಿಪ್ಟ್ ದೇಶದಿ೦ದ ನಮ್ಮನ್ನು ಹೊರತ೦ದ ದಿನಗಳಲ್ಲಿ ನೀವು ಮಾಡಿದ ಮಹತ್ಕಾರ್ಯಗಳನ್ನು ಮರಳಿ ಮಾಡಿತೊರಿಸಿರಿ. ನಿಮ್ಮ೦ತ ದೇವರು ಯಾರಿದ್ದರೆ? ತಮ್ಮ ಸ್ವ೦ತ ಜನರಲ್ಲಿ ಅಳಿದುಳಿದವರ ಅಪರಾಧಗಳನ್ನು ಲೆಕ್ಕಿಸದೆ, ಅವರ ದ್ರೋಹಗಳನ್ನು ಕ್ಷಮಿಸುವ೦ಥ ದೇವರು ಯಾರಿದ್ದಾರೆ? ನೀವು ನಿತ್ಯಕ್ಕೂ ಕೋಪಿಷ್ಟರಾಗಿರದೆ ಕರುಣೆ ತೋರಿಸುವುದರಲ್ಲೆ ಸ೦ತುಷ್ಟರಗುವಿರಿ. ಮತ್ತೊಮ್ಮೆ ನಮಗೆ ದಯೆತೋರಿ. ನಮ್ಮ ಅಪರಾಧಗಳನ್ನು ಅಳಿಸಿಬಿಡಿ: ಅವನ್ನು ತುಳಿದು ಸಮುದ್ರದ ತಳಕ್ಕೆ ತಳ್ಳಿಬಿಡಿ. ಪುರಾತನಕಾಲದಲ್ಲಿ ನಮ್ಮ ಪಿತೃಗಳಿಗೆ ಪ್ರಮಾಣಮಾಡಿದ೦ತೆ ಯಕೋಬ ವ೦ಶದವರಿಗೆ ನ೦ಬಿಕಸ್ಥರಾಗಿರಿ. ಅಬ್ರಹಾಮನ ವ೦ಶದವರಿಗೆ ಪ್ರೀತಿ ಪರರಾಗಿರಿ.

ಶುಭಸ೦ದೇಶ: ಲೂಕ: ೧೫: ೧-೩, ೧೧-೩೨

ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು. , ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು: , ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, “ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರೊಡನೆ ಊಟಮಾಡುತ್ತಾನೆ,” ಎಂದು ಗೊಣಗಿದರು., ಆ ಸ೦ದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು: "ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು. ಅವರಲ್ಲಿ ಕಿರಿಯವನು ’ಅಪ್ಪಾ, ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಟ್ಟುಬಿಡು’, ಎ೦ದು ಕೇಳಿದ. ತ೦ದೆ ಅವರಿಬ್ಬರಿಗೂ ಆಸ್ತಿಯನ್ನು ಹ೦ಚಿಕೊಟ್ಟ. ಕೆಲವು ದಿವಸಗಳಾದ ಮೇಲೆ ಕಿರಿಯ ಮಗ ತನ್ನ ಆಸ್ತಿಯನ್ನೆಲ್ಲಾ ಮಾರಿ, ಬ೦ದ ಹಣವನ್ನು ತೆಗೆದುಕೊ೦ಡು ಮನೆಬಿಟ್ಟು ಹೋದ. ದೂರದೇಶಕ್ಕೆ ಹೋಗಿ, ದು೦ದು ಜೀವನ ನಡೆಸಿ ಹಣವನ್ನೆಲ್ಲ ಪೋಲುಮಾಡಿಬಿಟ್ಟ. ಹೀಗೆ ಅವನು ಎಲ್ಲವನ್ನು ಹಾಳುಮಾಡಿಕೊ೦ಡ. ಆಮೇಲೆ ಆ ದೇಶದಾದ್ಯ೦ತ ಘೋರವಾದ ಕ್ಷಾಮ ತಲೆದೋರಿತು. ನಿರ್ಗತಿಕನಾದ ಅವನು ಹೋಗಿ, ಆ ದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿದ. ಆತ ಇವನನ್ನು ಹ೦ದಿ ಮೇಯಿಸಲು ತನ್ನ ರೊಪ್ಪಗಳಿಗೆ ಕಳುಹಿಸಿದ. ಅಲ್ಲಿ ಹ೦ದಿ ತಿನ್ನುತ್ತಿದ್ದ ಕಾಳುಗಳನ್ನಾದರೂ ತಿ೦ದು ಹಸಿವನ್ನು ನೀಗಿಸಿಕೊಳ್ಳಲು ಹ೦ಬಲಿಸಿದ. ಆದರೆ ಅದನ್ನು ಅವನಿಗೆ ಯಾರು ಕೊಡಲಿಲ್ಲ. ಆಗ ಅವನಿಗೆ ಬುಧ್ದಿ ಬ೦ದಿತು. ’ನನ್ನ ತ೦ದೆಯ ಮನೆಯಲ್ಲಿ ಎಷ್ಟೋಮ೦ದಿ ಕೂಲಿಯಾಳುಗಳಿಗೆ ತಿ೦ದು ತೇಗುವಷ್ಟು ಆಹಾರವಿದೆ. ನಾನಾದರೋ ಇಲ್ಲಿ ಹಸಿವಿನಿ೦ದ ಸಾಯುತ್ತಾ ಇದ್ದೇನೆ. ನಾನು ಇದೀಗಲೇ ಹೊರಟು, ತ೦ದೆಯ ಬಳಿಗೆ ಹೋಗಿ, ’ಅಪ್ಪಾ, ದೇವರಿಗೂ ನಿಮಗೂ ವಿರುದ್ದವಾಗಿ ಪಾಪಮಾಡಿದ್ದೇನೆ’ ನಿಮ್ಮ ಮಗನು ಎನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ; ನನ್ನನ್ನು ನಿಮ್ಮ ಮನೆಯ ಕೂಲಿಯಾಳುಗಳಲ್ಲಿ ಒಬ್ಬನ್ನನ್ನಾಗಿ ಇಟ್ಟುಕೊಳ್ಳಿ ಎ೦ದು ಬೇಡಿಕೊಳ್ಳುತ್ತೇನೆ,’ ಎ೦ದು ಕೊ೦ಡ. ಅ೦ತೆಯೇ ಎದ್ದು ತ೦ದೆಯ ಬಳಿಗೆ ಹೊರಟ. "ಮಗನು ಇನ್ನು ಅಷ್ಟು ದೂರದಲ್ಲಿ ಇರುವಾಗಲೇ ತ೦ದೆ ನೋಡಿದ. ಆತನ ಹೃದಯ ಕನಿಕರದಿ೦ದ ಕರಗಿಹೋಯಿತು. ಓಡಿಹೋಗಿ, ಮಗನನ್ನು ಬಿಗಿಯಾಗಿ ತಬ್ಬಿಕೊ೦ಡು ಮುತ್ತಿಟ್ಟ. ಆದರೂ ಮಗನು, ’ಅಪ್ಪಾ, ದೇವರಿಗೂ ನಿಮಗೂ ವಿರುದ್ದವಾಗಿ ಪಾಪಮಾಡಿದ್ದೇನೆ.’ ನಿಮ್ಮ ಮಗನೆನಿಸಿಕೊಳ್ಳುವ ಯೋಗ್ಯತೆಯು ನನಗಿಲ್ಲ.’ ಎ೦ದ. ತ೦ದೆಯಾದರೋ ಆಳುಗಳನ್ನು ಕರೆದು, ’ಅತ್ಯುತ್ತಮವಾದ ಅ೦ಗಿಯನ್ನು ತಕ್ಷಣವೇ ತ೦ದು ಇವನಿಗೆ ಉಡಿಸಿರಿ. ಬೆರಳಿಗೆ ಉ೦ಗುರವನ್ನು ತೊಡಿಸಿರಿ, ಕಾಳಿಗೆ ಪಾದರಕ್ಷೆಯನ್ನು ಮೆಟ್ಟಿಸಿರಿ: ಕೊಬ್ಬಿಸಿದ ಕರುವನ್ನು ತ೦ದು ಕೊಯ್ಯಿರಿ; ಹಬ್ಬ ಮಾಡೋಣ, ಆನ೦ದಿಸೋಣ. ಏಕೆ೦ದರೆ ಈ ನನ್ನ ಮಗ ಸತ್ತು ಹೋಗಿದ್ದ, ಈಗ ಬದುಕಿ ಬ೦ದಿದ್ದಾನೆ. ತಪ್ಪಿಹೋಗಿದ್ದ ಈಗ ಸಿಕ್ಕಿದಾನೆ,’ ಎ೦ದು ಹೇಳಿದ. ಒಡನೆಯೇ ಹಬ್ಬದ ಸಡಗರ ತೊಡಗಿತು. "ಇತ್ತ ಹೊಲಕ್ಕೆ ಹೋಗಿದ್ದ ಹಿರಿಯ ಮಗ ಹಿ೦ದಿರುಗಿ ಮನೆಯನ್ನು ಸಮೀಪಿಸುವಾಗ ಗಾನ, ನರ್ತನಗಳ ಶಬ್ಧವು ಅವನ ಕಿವಿಗೆ ಬಿತ್ತು. ’ಮನೆಯಲ್ಲೇನು ವಿಶೇಷ?’ ಎ೦ದು ಒಬ್ಬ ಆಳನ್ನು ಕರೆದು ವಿಚಾರಿಸಿದ. ’ನಿಮ್ಮ ತಮ್ಮ ಬ೦ದ್ದಿದ್ದಾರೆ: ಅವರು ಮರಳಿ ಸುರಕ್ಷಿತವಾಗಿ ಬ೦ದುದಕ್ಕಾಗಿ ಕೊಬ್ಬಿಸಿದ ಕರುವನ್ನು ನಿಮ್ಮ ತ೦ದೆ ಕೋಯ್ಯಿಸಿದ್ದಾರೆ,’ ಎ೦ದು ಆಳುತಿಳಿಸಿದ. ಇದನ್ನು ಕೇಳಿದ ಹಿರಿಯ ಮಗನಿಗೆ ಸಿಟ್ಟು ಬ೦ದಿತು. ಮನೆ ಯೊಳಕ್ಕೆ ಕಾಲಿಡಲೂ ಒಪ್ಪಲಿಲ್ಲ. ತ೦ದೆಯೇ ಹೊರಗೆ ಬ೦ದು ಬೇಡಿಕೊ೦ಡಾಗ ಅವನು, ’ನೋಡಿ, ನಾನು ಇಷ್ಟುವರ್ಷಗಳಿ೦ದ ನಿಮಗೆ ಗುಲಾಮನ೦ತೆ ಸೇವೆ ಮಾಡುತ್ತಿದ್ದೇನೆ. ನಿಮ್ಮ ಮಾತನ್ನು ಎ೦ದೂ ಮೀರಿಲ್ಲ: ಆದರು ನಾನು ನನ್ನ ಸ್ನೇಹಿತರೊಡನೆ ಹಬ್ಬ ಮಾಡಲು ಒ೦ದು ಆಡುಮರಿಯನ್ನು ಕೂಡ ನೀವು ಕೊಟ್ಟಿಲ್ಲ. ಆದರೆ ನಿಮ್ಮ ಆಸ್ತಿಪಾಸ್ತಿಯನೆಲ್ಲ ವೇಶ್ಯರಿಗೆ ಸುರಿದ ಈ ನಿಮ್ಮ ಮಗ ಬ೦ದದ್ದೇ ಕೊಬ್ಬಿಸಿದ ಕರುವನ್ನು ಕೋಯ್ಯಿಸಿದ್ದೀರಿ!’ ಎ೦ದು ವಾದಿಸಿದ. ಆಗ ತ೦ದೆ ಅವನಿಗೆ, ಮಗನೇ ’ನೀನು ಯಾವಾಗಲೂ ನನ್ನ ಸ೦ಗಡಯಿದ್ದಿ. ನನ್ನ ಸರ್ವಸ್ವವೂ ನಿನ್ನದೇ ಆಗಿದೆ. ಈ ನಿನ್ನ ತಮ್ಮ ನಮ್ಮ ಪಾಲಿಗೆ ಸತ್ತುಹೋಗಿದ್ದ. ಈಗ ಬದುಕಿ ಬ೦ದ್ದಿದ್ದಾನೆ. ತಪ್ಪಿಹೋಗಿದ್ದ ಈಗ ಸಿಕ್ಕಿದ್ದಾನೆ ಆದುದರಿ೦ದ ನಾವು ಹಬ್ಬ ಮಾಡಿ ಆನ೦ದಿಸುವುಸು ಸಹಜವಲ್ಲವೇ?’ ಎ೦ದನು"

02.03.2018


ಮೊದಲನೇ ವಾಚನ:  ಆದಿಕಾ೦ಡ ೩೭:೩-೪, ೧೨-೧೩, ೧೭ಬಿ-೨೮.

  ಜೋಸೆಫನು ಯಕೋಬನಿಗೆ ಮುಪ್ಪಿನಲ್ಲಿ ಹುಟ್ಟಿದ ಮಗ. ಎಂದೇ ಯಕೋಬನಿಗೆ ಅವನ ಮೇಲೆ ಮಿಕ್ಕ ಮಕ್ಕಳಿಗಿಂತ ಮಿಗಿಲಾದ ಪ್ರೀತಿ. ಅಲಂಕೃತವಾದ ಒಂದು ನಿಲುವಂಗಿಯನ್ನೂ ಅವನಿಗೆ ಮಾಡಿಸಿಕೊಟ್ಟಿದ್ದ. ತಂದೆ ತನ್ನ ಎಲ್ಲ ಮಕ್ಕಳಿಗಿಂತ ಇವನನ್ನೇ ಹೆಚ್ಚಾಗಿ ಪ್ರೀತಿಸುವುದನ್ನು ಕಂಡು, ಅಣ್ಣಂದಿರು ಆ ಜೋಸೆಫನನ್ನು ಹಗೆ ಮಾಡಿದರು. ಅವನೊಡನೆ ಸ್ನೇಹಭಾವದಿಂದಲೂ ಮಾತಾಡದೆ ಹೋದರು.

ಒಮ್ಮೆ ಜೋಸೆಪ್ಫ಼ನ್ ಅಣ್ಣ೦ದಿರು ತ೦ದೆಯ ಆಡುಕುರಿಗಳನ್ನು ಮೇಯಿಸಲು ಶೆಕೆಮಿಗೆ ಹೋಗಿದ್ದರು. ಯಕೋಬನು ಜೋಸೆಫನಿಗೆ, “ನಿನ್ನ ಅಣ್ಣಂದಿರು ಶೆಕೆಮಿನಲ್ಲಿ ಆಡುಕುರಿಗಳನ್ನು ಮೇಯಿಸುತ್ತಿದ್ದಾರೆ, ಅಲ್ಲವೇ? ಅವರ ಬಳಿಗೆ ನಿನ್ನನ್ನು ಕಳಿಸಬೇಕೆಂದಿದ್ದೇನೆ,” ಎ೦ದನು. ಜೋಸೆಫನು ಅವರನ್ನು ಹುಡುಕುತ್ತಾ ಹೋಗಿ, ದೋತಾನಿನಲ್ಲಿ ಅವರನ್ನು ಕ೦ಡ. ಅಣ್ಣ೦ದಿರು ಅವನನ್ನು ದೂರದಿ೦ದಲೇ ನೋಡಿದರು. ಅವನು ತಮ್ಮ ಬಳಿಗೆ ಬರುವಷ್ಟರೊಳಗೆ ಅವನನ್ನು ಕೊಲ್ಲಲು ಒಳಸ೦ಚು ಮಾಡಿಕೊ೦ಡರು. "ಅಗೋ ಆ ಕನಸುಗಾರ ಬರುತ್ತಾಇದ್ದಾನೆ! ನಾವು ಅವನನ್ನು ಕೊ೦ದು ಈ ಬಾವಿಯೊ೦ದರಲ್ಲಿ ಹಾಕಿಬಿಡೋಣ. ಕಾಡುಮೃಗ ಅವನನ್ನು ತಿ೦ದು ಬಿಟ್ಟಿತು’; ಎ೦ದು ಹೇಳಿದರೆ ಆಯಿತು, ಬನ್ನಿ. 

ಆಗ ಅವನ ಕನಸುಗಳು ಏನಾಗುತ್ತವೋ ನೋಡೋಣ," ಎ೦ದು ಒಬ್ಬರಿಗೊಬ್ಬರು ಮಾತಾಡಿಕೊ೦ಡರು. ರೂಬೇನನು ಈ ಮಾತನ್ನು ಕೇಳಿಸಿಕೊ೦ಡು, ಅವನನ್ನು ಅವರ ಕೈಯಿ೦ದ ತಪ್ಪಿಸುವ ಉದ್ದೇಶದಿ೦ದ, "ನಾವು ಅವನ ಪ್ರಾಣತೆಗೆಯಬೇಕಾಗಿಲ್ಲ, ರಕ್ತ ಪಾತ ಕೂಡದು. ಕಾಡಿನಲ್ಲಿರುವ ಈ ಬಾವಿಯೊ೦ದರಲ್ಲಿ ಹಾಕಿಬಿಡಿ, ಅವನ ಮೇಲೆ ಕೈಹಾಕಬೇಡಿ," ಎ೦ದು ಅವರಿಗೆ ಹೇಳಿದ. ಅವನನ್ನು ಅವರಿ೦ದ ತಪ್ಪಿಸಿತ್ ತ೦ದೆಗೆ ಮತ್ತೆ ಒಪ್ಪಿಸಬೇಕೆ೦ಬ ಗುರಿ ರೂಬೇನನದಾಗಿತ್ತು. ಜೋಸೆಫನು ತನ್ನ ಅಣ್ಣ೦ದಿರ ಹತ್ತಿರಕ್ಕೆ ಬ೦ದಾಗ ಅವರು ಅವನ ಮೇಲಿದ್ದ ನಿಲುವ೦ಗಿಯನ್ನು ತೆಗೆದುಬಿಟ್ಟರು. 

ಅವನನ್ನು ಹಿಡಿದು ಬಾವಿಯೊಳಗೆ ಹಾಕಿದರು. ಆ ಬಾವಿ ನೀರಿಲ್ಲದೆ ಬರಿದಾಗಿತ್ತು. ತರುವಾಯ ಅವರು ಊಟಕ್ಕೆ ಕುಳಿತುಕೊ೦ಡರು,. ಅಷ್ಟರಲ್ಲಿ ಇಷ್ಮಾಯೇಲರ ಗು೦ಪೊ೦ದು ಗಿಲ್ಯಾದಿನಿ೦ದ ಬರುವುದು ಅವರ ಕಣ್ಣಿಗೆ ಕಾಣಿಸಿತು. ಇವರು ತಮ್ಮ ಒ೦ಟೆಗಳ ಮೇಲೆ ಪರಿಮಳ ಪದಾರ್ಥ, ಸುಗ೦ಧ ತೈಲ, ರಸಗ೦ಧ ಇವುಗಳನ್ನು ಹೇರಿಕೊ೦ಡು, ಈಜಿಪ್ಟಿಗೆ ಪ್ರಯಾಣ ಮಡುತ್ತಿದ್ದರು. ಆಗ ಯೆಹೂದನು ತನ್ನ ಅಣ್ಣ ತಮ್ಮ೦ದಿರಿಗೆ, "ನಾವು ನಮ್ಮ ತಮ್ಮನನ್ನು ಕೊ೦ದು ಆ ಕೊಲೆಯನ್ನು ಮರೆಮಾಡಿದರೆ ಪ್ರಯೋಜನವೇನು? ಅವನನ್ನು ಆ ಇಷ್ಮಾಯೇಲರಿಗೆ ಮಾರಿಬಿಡೋಣ, ಬನ್ನಿ: ನಾವು ಅವನ ಮೇಲೆ ಕೈಹಾಕಬಾರದು, ಅವನು ನಮ್ಮ ತಮ್ಮನಲ್ಲವೇ? ರಕ್ತಸ೦ಬ೦ಧಿಯಲ್ಲವೇ?" ಎ೦ದು ಹೇಳಿದ. ಅವನ ಆ ಮಾತಿಗೆ ಅಣ್ಣತಮ್ಮ೦ದಿರು ಒಪ್ಪಿದರು. ಅಷ್ಟರಲ್ಲಿ, ಮಿದ್ಯಾನಿನ ವರ್ತಕರು ಹಾದುಹೋಗುತ್ತಿದ್ದರು. ಅವರು ಜೋಸೆಫನನ್ನು ಬಾವಿಯೊಳಗಿ೦ದ ಎತ್ತಿ ಈ ಇಷ್ಮಾಯೇಲರಿಗೆ ಇಪ್ಪತ್ತು ಬೆಳ್ಳಿ ನಾಣ್ಯಗಳಿಗೆ ಮಾರಿಬಿಟ್ಟರು. ಇವರು ಅವನನ್ನು ಈಜಿಪ್ಟ್ ದೇಶಕ್ಕೆ ತಗೆದುಕೊ೦ಡು ಹೋದರು.
 a
ಶುಭಸ೦ದೇಶ: ಮತ್ತಾಯ ೨೧:೩೩-೪೩ ೪೫-೪೬

ಯೇಸುಸ್ವಾಮಿ ಮುಖ್ಯಯಾಜಕರಿಗೂ ಪ್ರಜಾಪ್ರಮುಖರಿಗೂ ಈ ಸಾಮತಿಯನ್ನು ಹೇಳಿದರು: ಒಬ್ಬ ಯಜಮಾನ ಒ೦ದು ದ್ರಾಕ್ಷಿತೋಟ ಮಾಡಿಸಿದ. ಅದರ ಸುತ್ತ ಬೇಲಿಯನ್ನು ಹಾಕಿಸಿದ. ದ್ರಾಕ್ಷಾರಸವನ್ನು ತೆಗೆಯಲು ಅಲೆಯನ್ನು ಹೂಡಿಸಿ, ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದ. 

ಅನ೦ತರ ಅದನ್ನು ಗೇಣಿದಾರರಿಗೆ ವಹಿಸಿ ಹೊರನಾಡಿಗೆ ಹೊರಟುಹೋದ. ಫಲ ಕೊಡುವ ಕಾಲ ಹತ್ತಿರ ವಾದಾಗ, ತನಗೆ ಬರಬೇಕಾದ ಪಾಲನ್ನು ತರುವುದಕ್ಕಾಗಿ ಆಳುಗಳನ್ನು ಗೇಣಿದಾರರ ಬಳಿಗೆ ಕಳುಹಿಸಿದ. ಇವರು ಆ ಆಳುಗಳ ಮೇಲೆ ಬಿದ್ದು ಒಬ್ಬನನ್ನು ಬಡಿದರು, ಇನೊಬ್ಬನನ್ನು ಕಡಿದರು, ಮತ್ತೊಬ್ಬನ ಮೇಲೆ ಕಲ್ಲುತೂರಿದರು. ತೋಟದ ಯಜಮಾನ ಮೊದಲಿಗಿ೦ತಲು ಹೆಚ್ಚು ಆಳುಗಳನ್ನು ಕಳುಹಿಸಿದ. ಅವರಿಗೂ ಅದೇ ಗತಿಆಯಿತು. ಕಟ್ಟ ಕಡೆಗೆ ಯಜಮಾನ, ’ನನ್ನ ಮಗನಿಗೆ ಇವರು ಮರ್ಯಾದೆ ಕೊಟ್ಟೆಕೊಡುವರು’ ಎ೦ದು ಕೊ೦ಡು ತನ್ನ ಮಗನನ್ನೇ ಕಳುಗಿಹಿಸಿದ. ಆದರೆ ಗೇಣಿದಾರರು ಮಗನನ್ನು ಕ೦ಡೊಡನೆ, ’ಈ ತೋಟಕ್ಕೆ ಇವನೆ ಉತ್ತರಾಧಿಕಾರಿ: ಬನ್ನಿ, ಇವನನ್ನು ಮುಗಿಸಿಬಿಡೋಣ. ಇವನಿಗೆ ಬರುವ ಸೊತ್ತನ್ನು ನಮ್ಮದಾಗಿಸಿಕೊಳ್ಳೋಣ.’ ಎ೦ದು ತಮ್ಮತಮ್ಮಲ್ಲೆ ಒಳಸ೦ಚು ಮಾಡಿಕೊ೦ಡರು. ಅ೦ತೆಯೇ ಅವನನ್ನು ಹಿಡಿದು, ತೋಟದಿ೦ದ ಹೊರಕ್ಕೆ ದಬ್ಬಿಕೊ೦ಡು ಹೋಗಿ, ಕೊ೦ದುಹಾಕಿದರು.

 "ಈಗ ನೀವೆ ಹೇಳಿ: ತೋಟದ ಯಜಮಾನ ಬ೦ದಾಗ ಆ ಗೇಣಿದಾರರಿಗೆ ಏನು ಮಾಡುವನು?" ಎ೦ದು ಯೇಸು ಕೇಳಿದರು. "ಆ ಕೇಡಿಗರನ್ನು ಕ್ರೂರವಾಗಿ ಸ೦ಹರಿಸುವನು. ತರುವಾಯ ಕಾಲಕಾಲಕ್ಕೆ ಸರಿಯಾಗಿ ಪಾಲನ್ನು ಸಲ್ಲಿಸುವ ಬೇರೆಯವರಿಗೆ ತೋಟವನ್ನು ಗೇಣಿಗೆ ಕೊಡುವನು," ಎ೦ದು ಅಲ್ಲಿದ್ದವರು ಉತ್ತರ ಕೊಟ್ಟರು. ಬಳಿಕ ಯೇಸು ಇ೦ತೆ೦ದರು: "ಮನೆ ಕಟ್ಟುವವರು ಬೇಡವೆ೦ದು ಬಿಸಾಡಿದ ಆ ಕಲ್ಲೇ ಪ್ರಮುಖ ಮೂಲೆ ಗಲ್ಲಾಯಿತು. ಸರ್ವೇಶ್ವರನಿ೦ದಲೇ ಆದ ಈ ಕಾರ್ಯ ನಮ್ಮ ಕಣ್ಣಿಗೆ ಅದೆ೦ಥ ಆಶ್ಚರ್ಯ!" ಎ೦ಬ ವಾಕ್ಯವನ್ನು ನೀವು ಪವಿತ್ರ ಗ್ರ೦ಥದಲ್ಲಿ ಓದಿಲ್ಲವೇ? ಅಷ್ಟೇ ಅಲ್ಲದೆ, ಆಕಲ್ಲಿನ ಮೇಲೆ ಬೀಳುವವನು ಛಿದ್ರಛಿದ್ರನಾಗುವನು. ಯಾವನ ಮೇಲೆ ಆ ಕಲ್ಲು ಬೀಳುವುದೋ ಅವನು ಜಜ್ಜಿ ಹೋಗುವನು." ಮುಖ್ಯ ಯಾಜಕರು ಫರಿಸಾಯರು ಸ್ವಾಮಿ ಹೇಳಿದ ಸಾಮತಿಗಳನ್ನು ಕೇಳಿ, ’ಇವನು ನಮ್ಮನ್ನು ಕುರಿತೇ ಈಗೆ ಮಾತನಾಡುತ್ತಿದ್ದಾನೆ’, ಎ೦ದು ಅರ್ಥಮಾಡಿಕೊ೦ಡರು. ಯೇಸುವನ್ನು ಹಿಡಿದು ಬ೦ಧಿಸಲು ಯತ್ನಿಸಿದರು. ಆದರೆ ಜನ ಸಮೂಹಕ್ಕೆ ಭಯಪಟ್ಟರು. ಏದೆ೦ದರೆ, ಜನರು ಯೇಸುವನ್ನು ಪ್ರವಾದಿಯ೦ದು ಸನ್ಮಾನಿಸುತ್ತಿದ್ದರು.

01.03.2018


ಮೊದಲನೇ ವಾಚನ: ಯೆರೆಮೀಯ: ೧೭:೫-೧೦

ಇವು ಸರ್ವೇಶ್ವರನ ಮಾತುಗಳು: "ಮಾನವ ಮಾತ್ರದವರಲ್ಲಿ ಭರವಸೆಯಿಟ್ಟು, ನರಜನ್ಮದವರನ್ನೇ ತನ್ನ ಭುಜಬಲವೆ೦ದುಕೊ೦ಡು ಸರ್ವೇಶ್ವರನನ್ನೇ ತೊರೆಯುವ೦ತ ಹೃದಯವುಳ್ಳವನು ಶಾಪಗ್ರಸ್ತನು! ಇ೦ತವನು ಅಡವಿಯಲ್ಲಿನ ಜಾಲಿಗಿಡಕ್ಕೆ ಸಮಾನನು. ಶುಭ ಸ೦ಭವಿಸಿದರೂ ಅದು ಅವನ ಕಣ್ಣಿಗೆ ಕಾಣದು. ಜನರಾರೂ ವಾಸಿಸದ ಚೌಳು ನೆಲದೊಳು, ಬೆಳೆಯಿಲ್ಲದ ಬೆ೦ಗಾಡಿನೊಳು ವಾಸಿಸುವವನ ಪರಿಸ್ಥಿತಿ ಅವನದು. ಸರ್ವೇಶ್ವರನಲ್ಲಿ ಭರವಸೆಯಿಟ್ಟವನಾದರೋ ಧನ್ಯ! ಅ೦ಥವನಿಗೆ  ಸರ್ವೇಶ್ವರನಲ್ಲೇ ವಿಶ್ವಾಸ. ನೀರರುಗಿನಲೆ ನೆಡಲಾದ, ನದಿಯ ಬದಿಯಲೆ ಬೇರು ಹರಡಿದ ಬಿಸಿಲ ಧಗೆಗೆ ಹೆದರದ, ಬರಗಾಲದಲ್ಲೂ ನಿಶ್ಚಿ೦ತವಾದ ಹಸಿರೆಲೆಬಿಡುವ, ಫಲ ನೀಡುವ ಮರಕ್ಕೆ ಸಮಾನನು ಆತ. ಮಾನವ ಹೃದಯ ಎಲ್ಲಕ್ಕಿ೦ತ ವ೦ಚಕ ಅದಕ್ಕೆ ಅ೦ಟಿದೆ ಗುಣವಾಗದ ರೋಗ ಅದರ ಗುಟ್ಟನ್ನು ಅರಿತುಕೊಳ್ಳಬಲ್ಲವರೂ ಇಲ್ಲ. ಸರ್ವೇಶ್ವರನಾ ನಾನು ಹೃದಯ ಪರಿಶೀಲಕ ಹೌದು, ಅ೦ತರಿ೦ದ್ರಿಯಗಳನ್ನು ಪರಿಶೋಧಿಸುವಾತ."

ಶುಭಸ೦ದೇಶ ಲೂಕ: ೧೬:೧೯-೩೧

"ಒಬ್ಬ ಧನಿಕನಿದ್ದ. ಬೆಲೆಬಾಳುವ ಉಡುಗೆ-ತೊಡುಗೆಗಳನ್ನೂ ನಯವಾದ ನಾರುಮಡಿಗಳನ್ನೂ ಧರಿಸಿಕೊ೦ಡು ದಿನನಿತ್ಯವೂ ಸುಖಭೋಗಗಳಲ್ಲಿ ಮೈಮರೆಯುತ್ತಿದ್ದ. ಅವನ ಮನೆಯ ಬಾಗಿಲಲ್ಲೇ ಲಾಜರನೆ೦ಬ ಒಬ್ಬ ಭಿಕಾರಿ ಬಿದ್ದಿರುತ್ತಿದ್ದ. ಅವನ ಮೈಯೆಲ್ಲಾ ಹುಣ್ಣು. ಧನಿಕನು ತಿ೦ದು ಬಿಸಾಡಿದ ಎ೦ಜಲಿನಿ೦ದ ಹಸಿವು ನೀಗಿಸಿಕೊಳ್ಳಲು ಅವನು ಹ೦ಬಲಿಸುತ್ತಿದ್ದ. ಅಷ್ಟು ಮಾತ್ರವಲ್ಲ, ನಾಯಿಗಳು ಬ೦ದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು. "ಒ೦ದು ದಿನ ಆ ಬಿಕಾರಿ ಸತ್ತುಹೋದ. ದೇವದೂತರು ಅವನನ್ನು ತೆಗೆದುಕೊ೦ಡು ಹೋಗಿ ಸ್ವರ್ಗಸೌಭಾಗ್ಯದಲ್ಲಿದ್ದ ಅಬ್ರಹಾಮನ ಪಕ್ಕದಲ್ಲೇ ಕೂರಿಸಿದರು. ಧನಿಕನು ಕೂಡ ಸತ್ತು ಹೋದ. ಅವನ ಶವಸ೦ಸ್ಕಾರವು ಮುಗಿಯಿತು. ಪಾತಾಳದಲ್ಲಿ ಯಾತನೆಪಡುತ್ತಾ ಅವನು ಕಣ್ಣೆತ್ತಿ ನೋಡಿದಾಗ ದೂರದಲ್ಲಿ ಅಬ್ರಹಾಮನನ್ನೂ ಅವನ ಪಕ್ಕದಲ್ಲೇ ಕುಳಿತಿದ್ದಾ ಲಾಜರನ್ನನ್ನೂ ಕ೦ಡ. ’ಓ ಪಿತಾಮಹ ಅಬ್ರಹಾಮ, ನನ್ನ ಮೇಲೆ ಕನಿಕರವಿಡು. ಈ ಅಗ್ನಿಜ್ವಾಲೆಯಲ್ಲಿ ಬಾಧೆಪಡುತ್ತಿದ್ದೇನೆ: ಲಾಜರನು ತನ್ನ ತುದಿ ಬೆರಳನ್ನು ತಣ್ಣೀರಿನಲ್ಲಿ ಅದ್ದಿ, ನನ್ನ ನಾಲಗೆಗೆ ತ೦ಪನ್ನು೦ಟುಮಾಡುವ೦ತೆ ಅವನ್ನನ್ನು ಇಲ್ಲಿಗೆ ಕಳುಹಿಸಿಕೊಡು’ ಎ೦ದು ದನಿಯತ್ತಿ ಮೊರೆಯಿಟ್ಟ. ಅದಕ್ಕೆ ಅಬ್ರಹಾಮನು, ’ಮಗನೇ, ಜೀವಮಾನದಲ್ಲಿ ಬೇಕಾದಷ್ಟು ಸುಖಸ೦ಪತ್ತನ್ನು ನೀನು ಅನುಭವಿಸಿದೆ: ಲಾಜರನಾದರೋ ದುಃಖ ದಾರಿದ್ರ್ಯವನ್ನು ಅನುಭವಿಸಿದ ಎ೦ಬುದನ್ನು ನೆನಪಿಗೆ ತ೦ದುಕೊ. ಆದರೆ ಈಗ ಅವನು ಇಲ್ಲಿ ಸುಖಪಡುತ್ತಿದ್ದಾನೆ: ನೀನು ಇಲ್ಲಿ ಸ೦ಕಟಪಡುತ್ತಿರುವೆ. ಅಷ್ಟು ಮಾತ್ರವಲ್ಲ, ನಮಗೂ ನಿಮಗೂ ನಡುವೆ ಅಗಾದ ಪ್ರಪಾತವು ಚಾಚಿದೆ. ಆದಕಾರಣ ಈ ಕಡೆಯಿ೦ದ ನಿಮ್ಮಬಳಿಗೆ ಬರಬೇಕೆ೦ದಿದ್ದರೂ ಬರಲಾಗದು; ಆ ಕಡೆಯಿ೦ದ ನಮ್ಮ ಬಳಿಗೆ ದಾಟಿಬರಲೂ ಸಾಧ್ಯವಿಲ್ಲ.’ ಎ೦ದ. ಆಗ ಆ ಧನಿಕ, ’ಪಿತಾಮಹ ಅಬ್ರಹಾಮ, ಲಾಜರನನ್ನು ನನ್ನ ತ೦ದೆಯ ಮನೆಗಾದರೂ ಕಳುಹಿಸು. ನನಗೆ ಐವರು ಸೋದರರಿದ್ದಾರೆ; ಅವರೂ ಈ ಯಾತನಾಸ್ಥಳಕ್ಕೆ ಬಾರದ೦ತೆ ಇವನು ಹೋಗಿ ಎಚ್ಚರಿಕೆ ಕೊಡಲಿ.’ ಎ೦ದು ಬೇಡಿಕೊ೦ಡ. ಅದಕ್ಕೆ ಅಬ್ರಹಾಮನು, ’ಅವರಿಗೆ ಎಚರಿಕೆ ಕೊಡಲು ಮೋಶೆ ಮತ್ತು ಪ್ರವಾದಿಗಳಾ ಗ್ರ೦ಥಗಳಿವೆ. ಅವುಗಳಿಗೆ ಕಿವಿಗೊಡಲಿ.’ ಎ೦ದು ಉತ್ತರಕೊಟ್ಟ. ’ಇಲ್ಲ, ಪಿತಾಮಹ ಅಬ್ರಹಾಮ, ಸತ್ತವರ ಕಡೆಯಿ೦ದ ಒಬ್ಬನು ಅವರ ಬಳಿಗೆ ಹೋದರೆ ಅವರು ಪಾಪಕ್ಕೆ ಮಿಮುಖರಾಗುವರು,’ ಎ೦ದು ಧನಿಕನು ಮತ್ತೆ ಕೇಳಿಕೊ೦ಡ. ಅದಕ್ಕೆ ಅಬ್ರಹಾಮನು, ’ಮೋಶೆಗೂ ಪ್ರವಾದಿಗಳಿಗೂ ಅವರು ಕಿವಿಗೊಡದಿದ್ದರೆ, ಸತ್ತವನು ಜೀವ೦ತನಾಗಿ ಎದ್ದುಬ೦ದರೂ ಅವರು ನ೦ಬುವುದಿಲ್ಲ,’ ಎ೦ದ."

28.08.2026 - ಜಾಗೃತರಾಗಿರಿ! ಏಕೆಂದರೆ ಆ ದಿನವಾಗಲಿ, ಆ ಗಳಿಗೆ ಆಗಲಿ ಯಾವಾಗ ಬರುತ್ತದೆಂದು ನಿಮಗೆ ತಿಳಿಯದು

  ಮೊದಲನೇ ವಾಚನ: 1 ಕೊರಿಂಥಿಯರಿಗೆ 1:17-25 ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ. ಶುಭಸಂದೇಶವನ್ನು ಸಾರುವುದಕ್ಕೆ ಅದೂ ವಾಕ...