26.07.2026 - ಸ್ವರ್ಗಸಾಮ್ರಾಜ್ಯವನ್ನು ಹೊಲದಲ್ಲಿ ಹೂಳಿಟ್ಟ ನಿಧಿಗೆ ಹೋಲಿಸಬಹುದು

 ಮೊದಲನೇ ವಾಚನ: ಅರಸರು 3:5, 7-12



ದೇವರಾದ ಸರ್ವೇಶ್ವರ ಆ ರಾತ್ರಿ ಗಿಬ್ಯೋನಿನಲ್ಲಿ ಸೊಲೊಮೋನನಿಗೆ ಕನಸಿನಲ್ಲಿ ಕಾಣಿಸಿಕೊಂಡು; “ನಿನಗೆ ಯಾವ ವರಬೇಕು ಕೇಳಿಕೋ,” ಎಂದು ಹೇಳಿದರು. ನನ್ನ ದೇವರಾದ ಸರ್ವೇಶ್ವರಾ, ನನ್ನ ತಂದೆಗೆ ಬದಲಾಗಿ ನಿಮ್ಮಿಂದ ಅರಸನಾಗಿ ನೇಮಕಗೊಂಡಿರುವ ನಿಮ್ಮ ದಾಸನಾದ ನಾನು ಇನ್ನೂ ಚಿಕ್ಕವನು. ವ್ಯವಹಾರಜ್ಞಾನ ಇಲ್ಲದವನು; ನಿಮ್ಮ ದಾಸನಾದ ನಾನು ಅಸಂಖ್ಯಾತ ಮಹಾಜನಾಂಗವಾದ ನಿಮ್ಮ ಸ್ವಕೀಯ ಪ್ರಜೆಯ ಮಧ್ಯೆ ಇದ್ದೇನೆ. ಆದುದರಿಂದ ಅದನ್ನು ಆಳುವುದಕ್ಕೂ ನ್ಯಾಯಾನ್ಯಾಯಗಳನ್ನು ಕಂಡುಹಿಡಿಯುವುದಕ್ಕೂ ನನಗೆ ವಿವೇಕವನ್ನು ದಯಪಾಲಿಸಿರಿ. ಈ ಮಹಾಜನಾಂಗವನ್ನು ಆಳಲು ಯಾರೂ ಸಮರ್ಥರಲ್ಲ,” ಎಂದು ಬೇಡಿಕೊಂಡನು. ಸೊಲೊಮೋನನ ಈ ಬಿನ್ನಹವನ್ನು ಸರ್ವೇಶ್ವರನಾದ ದೇವರು ಮೆಚ್ಚಿದರು. ಅವರು ಆತನಿಗೆ, “ನೀನು ದೀರ್ಘಾಯುಷ್ಯವನ್ನಾಗಲಿ, ಸಿರಿಸಂಪತ್ತನ್ನಾಗಲಿ, ಶತ್ರುವಿನಾಶವನ್ನಾಗಲಿ ಕೇಳಿಕೊಳ್ಳಲಿಲ್ಲ. ನ್ಯಾಯನಿರ್ಣಯಿಸುವುದಕ್ಕೆ ಬೇಕಾದ ವಿವೇಕವನ್ನು ಬೇಡಿಕೊಂಡೆ. ಆದ್ದರಿಂದ ನಿನ್ನ ಬಿನ್ನಹವನ್ನು ನೆರವೇರಿಸಿದ್ದೇನೆ. ನೋಡು, ನಿನಗೆ ಜ್ಞಾನವನ್ನೂ ವಿವೇಕವನ್ನೂ ಅನುಗ್ರಹಿಸಿದ್ದೇನೆ; ನಿನ್ನಂಥ ಜ್ಞಾನಿಯು ಹಿಂದೆ ಇರಲಿಲ್ಲ, ಮುಂದೆಯೂ ಇರುವುದಿಲ್ಲ. ಇದಲ್ಲದೆ, ನೀನು ಕೇಳಿದಂಥದ್ದನ್ನೂ ನಿನಗೆ ಅನುಗ್ರಹಿಸಿದ್ದೇನೆ. ನಿನ್ನ ಜೀವಮಾನದಲ್ಲೆಲ್ಲಾ ಸಿರಿಸಂಪತ್ತಿನಲ್ಲಿಯೂ ಘನತೆ ಗೌರವದಲ್ಲಿಯೂ ನಿನಗೆ ಸಮಾನವಾದ ಅರಸನು ಇನ್ನೊಬ್ಬನಿರುವುದಿಲ್ಲ. ನೀನು ನಿನ್ನ ತಂದೆ ದಾವೀದನಂತೆ ನನ್ನ ಮಾರ್ಗದಲ್ಲೇ ನಡೆದು ನನ್ನ ಆಜ್ಞಾವಿಧಿಗಳನ್ನು ಕೈಗೊಳ್ಳುವುದಾದರೆ ನಿನ್ನ ಆಯುಷ್ಯವನ್ನೂ ಹೆಚ್ಚಿಸುವೆನು,” ಎಂದರು. ಸೊಲೊಮೋನನು ನಿದ್ರೆಯಿಂದ ಎಚ್ಚೆತ್ತಾಗ, ಅದು ಕನಸೆಂದು ತಿಳಿದುಕೊಂಡನು. ಅವನು ಜೆರುಸಲೇಮಿಗೆ ಬಂದನಂತರ ಸರ್ವೇಶ್ವರನ ಒಡಂಬಡಿಕೆಯ ಮಂಜೂಷದ ಮುಂದೆ ನಿಂತು ದಹನಬಲಿಗಳನ್ನೂ ಶಾಂತಿಸಮಾಧಾನದ ಬಲಿಗಳನ್ನೂ ಸಮರ್ಪಿಸಿ, ತನ್ನ ಎಲ್ಲಾ ಪರಿವಾರದವರಿಗೆ ಔತಣವನ್ನು ಏರ್ಪಡಿಸಿದನು.

ಕೀರ್ತನೆ: 119:57, 72, 76-77, 127-128, 129-130

ಶ್ಲೋಕ:  ನಿನ್ನ ಧರ್ಮಶಾಸ್ತ್ರ ಪ್ರಭೂ, ನನಗೆ ಪರಮ ಪ್ರಿಯ.

1.  ಹೇ ಪ್ರಭೂ, ನೀನೇ ನನ್ನ ಪಾಲಿನ ಸ್ವಾಸ್ತ್ಯ|
ನಿನ್ನ ವಾಕ್ಯದ ಪಾಲನೆಯೇ ನಾ ಗೈದ ನಿರ್ಣಯ||
ಸಾವಿರಾರು ಚಿನ್ನ ಬೆಳ್ಳಿ ನಾಣ್ಯಗಳಿಗಿಂತ|
ನಿನ್ನ ಬಾಯಿಂದ ಬಂದ ಧರ್ಮಶಾಸ್ತ್ರ ಉಚಿತ||
ಶ್ಲೋಕ

2.  ನಿನ್ನ ದಾಸನಿಗೆ ನೀನು ನುಡಿದ ಪ್ರಕಾರ|
ಸಾಂತ್ವನ ನೀಡಲಿ ಎನಗೆ ನಿನ್ನಚಲ ಪ್ರೀತಿ||
ನಾ ಬದಕುವಂತೆ ತೋರೆನಗೆ ನಿನ್ನ ದಯ|
ನಿನ್ನ ಧರ್ಮಶಾಸ್ತ್ರ ನನಗೆ ಪರಮ ಪ್ರಿಯ||
ಶ್ಲೋಕ

3.  ಚಿನ್ನ ಅಪರಂಜಿಗಿಂತಲೂ ಪ್ರಿಯ| ನಿನ್ನ ಆಜ್ಞೆಗಳು ನನಗೆ ಸುಪ್ರಿಯ||
ನ್ಯಾಯವಾಗಿವೆ ನಿನ್ನ ನಿಯಮಗಳೆಲ್ಲ|
ನನಗೆ ಹಗೆ ಮಿಥ್ಯ ಮಾರ್ಗಗಳೆಲ್ಲ||
ಶ್ಲೋಕ

4.  ಅಪೂರ್ವವಾದ ನಿನ್ನ ಕಟ್ಟಳೆಗಳನು|
ಹೃತ್ಪೂರ್ವಕವಾಗಿ ನಾ ಪಾಲಿಪೆನು||
ತರುವುದು ನಿನ್ನ ವಾಕ್ಯೋಪದೇಶ|
ಸರಳ ಜನರಿಗೆ ಜ್ಞಾನ ಪ್ರಕಾಶ||
ಶ್ಲೋಕ

ಎರಡನೇ ವಾಚನ: ರೋಮನರಿಗೆ 8:28-30


ದೇವರನ್ನು ಪ್ರೀತಿಸುವವರಿಗೂ ದೇವರ ಸಂಕಲ್ಪದ ಮೇರೆಗೆ ಕರೆಹೊಂದಿದವರಿಗೂ ಸಕಲವೂ ಹಿತಕರವಾಗಿ ಪರಿಣಮಿಸುವುದು.ಇದನ್ನು ನಾವು ಚೆನ್ನಾಗಿ ಅರಿತಿದ್ದೇವೆ.ದೇವರು ಯಾರನ್ನು ತಮ್ಮವರೆಂದು ಮೊದಲೇ ಆರಿಸಿಕೊಂಡರೋಅವರನ್ನು ತಮ್ಮ ಪುತ್ರನ ಅನುರೂಪಿಗಳಾಗುವಂತೆ ಆಗಲೇ ನೇಮಿಸಿದರು. ಹೀಗೆ ಅನೇಕ ಸಹೋದರರಲ್ಲಿ ತಮ್ಮ ಪುತ್ರನೇ ಜೇಷ್ಠನಾಗಿರಬೇಕೆಂಬುದು ದೇವರ ನಿರ್ಧಾರವಾಗಿದೆ. ಹೀಗೆ ಯಾರನ್ನು ಮೊದಲೇ ನೇಮಿಸಿದ್ದರೋ ಅವರನ್ನು ಕರೆದಿದ್ದಾರೆ. ಯಾರನ್ನು ಕರೆದಿದ್ದಾರೋ ಅವರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಂಡಿದ್ದಾರೆ. ಯಾರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಂಡಿದ್ದಾರೋ ಅವರನ್ನು ಮಹಿಮಾಪದವಿಗೆ ಸೇರಿಸಿಕೊಂಡಿದ್ದಾರೆ.

ಶುಭಸಂದೇಶ: ಮತ್ತಾಯ 13:44-52



“ಸ್ವರ್ಗಸಾಮ್ರಾಜ್ಯವನ್ನು ಹೊಲದಲ್ಲಿ ಹೂಳಿಟ್ಟ ನಿಧಿಗೆ ಹೋಲಿಸಬಹುದು. ಇದನ್ನು ಒಬ್ಬನು ಪತ್ತೆಹಚ್ಚಿ ಅಲ್ಲಿಯೇ ಮುಚ್ಚಿಡುತ್ತಾನೆ. ತನಗಾದ ಸಂತೋಷದಿಂದ ಹೋಗಿ ತನಗೆ ಇದ್ದು ಬದ್ದುದೆಲ್ಲವನ್ನೂ ಮಾರಿ ಈ ಹೊಲವನ್ನೇ ಕೊಂಡುಕೊಂಡುಬಿಡುತ್ತಾನೆ. “ಸ್ವರ್ಗಸಾಮ್ರಾಜ್ಯವನ್ನು ಉತ್ತಮವಾದ ಮುತ್ತುರತ್ನಗಳನ್ನು ಹುಡುಕಿಕೊಂಡು ಹೋಗುವ ವರ್ತಕನಿಗೂ ಹೋಲಿಸಬಹುದು. ಅನರ್ಘ್ಯವಾದ ಒಂದು ಮುತ್ತನ್ನು ಕಂಡ ಕೂಡಲೆ ವರ್ತಕ ತನ್ನ ಆಸ್ತಿಪಾಸ್ತಿಯನ್ನು ಮಾರಿ ಆ ಮುತ್ತನ್ನು ಕೊಂಡುಕೊಳ್ಳುತ್ತಾನೆ. “ಸ್ವರ್ಗಸಾಮ್ರಾಜ್ಯವನ್ನು ಒಂದು ಮೀನು ಬಲೆಗೆ ಹೋಲಿಸಬಹುದು. ಬೆಸ್ತರು ಬಲೆಯನ್ನು ಸಮುದ್ರದಲ್ಲಿ ಬೀಸಿ ಎಲ್ಲಾ ಜಾತಿಯ ಮೀನುಗಳನ್ನು ಹಿಡಿಯುತ್ತಾರೆ. ಬಲೆ ತುಂಬಿದ ಮೇಲೆ ಅದನ್ನು ದಡಕ್ಕೆ ಎಳೆದು, ಕುಳಿತುಕೊಂಡು ಒಳ್ಳೆಯ ಮೀನುಗಳನ್ನು ಮಾತ್ರ ಆರಿಸಿಕೊಂಡು ಬುಟ್ಟಿಗೆ ಹಾಕಿಕೊಳ್ಳುತ್ತಾರೆ; ಕೆಟ್ಟವನ್ನು ಎಸೆದುಬಿಡುತ್ತಾರೆ.  ಕಾಲಾಂತ್ಯದಲ್ಲಿ ಇದರಂತೆಯೇ ಆಗುವುದು; ದೇವದೂತರು ಹೊರಟು ಬಂದು ದುರ್ಜನರನ್ನು ಸಜ್ಜನರಿಂದ ಬೇರ್ಪಡಿಸುವರು. ದುರ್ಜನರನ್ನು ಅಗ್ನಿಕುಂಡದಲ್ಲಿ ಹಾಕುವರು.  ಅಲ್ಲಿ ಅವರು ಕಟಕಟನೆ ಹಲ್ಲುಕಡಿದುಕೊಂಡು ಗೋಳಾಡುವರು.” “ಇದೆಲ್ಲ ನಿಮಗೆ ಅರ್ಥವಾಯಿತೇ?” ಎಂದು ಯೇಸುಸ್ವಾಮಿ ಕೇಳಿದರು. ಶಿಷ್ಯರು “ಅರ್ಥವಾಯಿತು” ಎಂದರು. ಆಗ ಯೇಸು, “ಇಂತಿರಲು, ಸ್ವರ್ಗಸಾಮ್ರಾಜ್ಯದಲ್ಲಿ ಶಿಷ್ಯನಾಗಿರುವ ಪ್ರತಿಯೊಬ್ಬ ಶಾಸ್ತ್ರಜ್ಞನು ಮನೆಯ ಯಜಮಾನ ಇದ್ದ ಹಾಗೆ. ಅವನು ತನ್ನ ಉಗ್ರಾಣದಿಂದ ಹೊಸ ಹಾಗೂ ಹಳೆಯ ವಸ್ತುಗಳನ್ನು ಹೊರಗೆ ತರುತ್ತಾ ಇರುತ್ತಾನೆ,” ಎಂದರು.

No comments:

Post a Comment

26.07.2026 - ಸ್ವರ್ಗಸಾಮ್ರಾಜ್ಯವನ್ನು ಹೊಲದಲ್ಲಿ ಹೂಳಿಟ್ಟ ನಿಧಿಗೆ ಹೋಲಿಸಬಹುದು

  ಮೊದಲನೇ ವಾಚನ: ಅರಸರು 3:5, 7-12 ದೇವರಾದ ಸರ್ವೇಶ್ವರ ಆ ರಾತ್ರಿ ಗಿಬ್ಯೋನಿನಲ್ಲಿ ಸೊಲೊಮೋನನಿಗೆ ಕನಸಿನಲ್ಲಿ ಕಾಣಿಸಿಕೊಂಡು; “ನಿನಗೆ ಯಾವ ವರಬೇಕು ಕೇಳಿಕೋ,” ಎಂದು ಹೇ...