ಪ್ರವಾದಿ ಯೆರೇಮಿಯನ ಗ್ರಂಥದಿಂದ ವಾಚನ 13: 1-11
ಸರ್ವೇಶ್ವರಸ್ವಾಮಿ ನನಗೆ : “ನೀನು ಹೋಗಿ ನಾರಿನ ನಡುಕಟ್ಟೊಂದನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೋ. ಅದನ್ನು ನೀರಿನಲ್ಲಿ ನೆನಸಬೇಡ,’’ ಎಂದು ಅಪ್ಪಣೆಕೊಟ್ಟರು. ನಾನು ಅವರ ಮಾತಿನಂತೆ ನಡುಕಟ್ಟನ್ನು ಕೊಂಡುಕೊಂಡು ಸೊಂಟಕ್ಕೆ ಬಿಗಿದುಕೊಂಡೆ. ಆಮೇಲೆ, “ನೀನು ಸೊಂಟಕ್ಕೆ ಬಿಗಿದ ಆ ನಡುಕಟ್ಟನ್ನು ತೆಗೆದುಕೊಂಡು ಯೂಫ್ರೆಟಸ್ ನದಿಗೆ ಹೋಗು. ಅದನ್ನು ಅಲ್ಲಿಯ ಬಂಡೆಯ ಸಂಧಿನೊಳಗೆ ಬಚ್ಚಿಡು,’’ ಎಂಬುದಾಗಿ ಸರ್ವೇಶ್ವರಸ್ವಾಮಿಯ ಎರಡನೆಯ ಆದೇಶ ನನಗೆ ಬಂದಿತು. ಅವರ ಅಪ್ಪಣೆಯ ಮೇರೆಗೆ ನಾನು ಹೋಗಿ ಯೂಫ್ರೆಟಸ್ ನದಿಯ ಬಳಿಯಲ್ಲಿ ಅದನ್ನು ಬಚ್ಚಿಟ್ಟೆ. ಬಹು ದಿನಗಳ ಮೇಲೆ ಸರ್ವೇಶ್ವರ ನನಗೆ, “ಹೊರಡು, ಯೂಫ್ರೆಟಸ್ ನದಿಗೆ ಹೋಗಿ ಅಲ್ಲಿ ಬಚ್ಚಿಡಬೇಕೆಂದು ನಾನು ಅಪ್ಪಣೆಕೊಟ್ಟ ನಡುಕಟ್ಟನ್ನು ಅಲ್ಲಿಂದ ತೆಗೆ,’’ ಎಂದು ಹೇಳಿದರು. ಆಗ ನಾನು ಯೂಫ್ರೆಟಿಸ್ ನದಿಗೆ ಹೋಗಿ ಹುಡುಕಿ ನಾನು ಬಚ್ಚಿಟ್ಟ ಸ್ಥಳದಿಂದ ಆ ನಡುಕಟ್ಟನ್ನು ತೆಗೆದೆ. ಆದರೆ ಅದು ಕೆಟ್ಟು ಯಾವ ಕೆಲಸಕ್ಕೂ ಬಾರದ್ದಾಗಿತ್ತು. ಆಗ ಸರ್ವೇಶ್ವರ ನನಗೆ ದಯಪಾಲಿಸಿದ ವಾಕ್ಯವೇನೆಂದರೆ : “ಇದು ಸರ್ವೇಶ್ವರನಾದ ನನ್ನ ನುಡಿ, ಈ ಪ್ರಕಾರವಾಗಿಯೇ ನಾನು ಜುದೇಯದ ದೊಡ್ಡಸ್ತಿಕೆಯನ್ನು ಹಾಗು ಜೆರುಸಲೇಮಿನ ಘನವಾದ ದೊಡ್ಡಸ್ತಿಕೆಯನ್ನು ತೆಗೆದುಬಿಡುವೆನು. ಈ ದುಷ್ಟ ಜನರು ನನ್ನ ಮಾತುಗಳನ್ನು ಕೇಳಲೊಲ್ಲರು. ತಮ್ಮ ಹೃದಯದ ಒರಟುತನದಂತೆ ನಡೆದುಬಿಡುತ್ತಿದ್ದಾರೆ. ಅನ್ಯದೇವತೆಗಳನ್ನು ಹಿಂಬಾಲಿಸಿ, ಪೂಜಿಸುತ್ತಿದ್ದಾರೆ. ಇವರು ಯಾವ ಕೆಲಸಕ್ಕೂ ಬಾರದ ಈ ನಡುಕಟ್ಟಿಗೆ ಸಾಟಿಯಾಗುವರು. ಇಸ್ರಯೇಲ್ ವಂಶವೆಲ್ಲವು ಹಾಗೂ ಜುದೇಯ ವಂಶವೆಲ್ಲವು ನನಗೆ ಪ್ರಜೆಯಾಗಿರಲಿ; ನನಗೆ ಕೀರ್ತಿ, ಗೌರವ ತರಲಿ, ನನಗೆ ಆಭರಣವಾಗಿರಲಿ ಎಂದುಕೊಂಡೆ. ನಡುಕಟ್ಟನ್ನು ಸೊಂಟಕ್ಕೆ ಬಿಗಿದುಕೊಳ್ಳುವಂತೆ ಇವರನ್ನು ಬಿಗಿದುಕೊಂಡಿದ್ದೆ. ಆದರೂ ಇವರು ನನನಗೆ ಕಿವಿಗೊಡದೆ ಹೋದರು. ಇದು ಸರ್ವೇಶ್ವರನಾದ ನನ್ನ ನುಡಿ.’’
ಕೀರ್ತನೆ 32 : 18-21
ಶ್ಲೋಕ : ಜನ್ಮವಿತ್ತ ದೇವರನ್ನು ನೀವು ಸ್ಮರಿಸಲಿಲ್ಲ |
1. ಎಲೈ ಇಸ್ರಯೇಲರೇ, ಮರೆತಿರಾ ಜನ್ಮವಿತ್ತ ಪೊರೆಬಂಡೆಯನು?|
ಸ್ಮರಿಸಲಿಲ್ಲ ನೀವು ಹೆತ್ತ ತಾಯಂತಿದ್ದಾ ದೇವರನು||
ಇದಕಂಡು ಸರ್ವೇಶ್ವರ ಬೇಸರಗೊಂಡ|
ತನ್ನ ಆ ಕುವರ ಕುವರಿಯರ ನಡತೆಯ ನೋಡಿ ನೊಂದುಕೊಂಡ||
ಶ್ಲೋಕ
2. ಎಂದೇ ಇಂತೆಂದುಕೊಂಡನು: ಇವರಿಗೆ ವಿಮುಖನಾಗುವೆನು|
ಇವರಿಗೊದಗಲಿರುವ ಗತಿಯನು ನೋಡುವೆನು||
ಸತ್ಯವರಿತೂ ಅನುಸರಿಸದೆ ಹೋದರು|
ಈ ವಿದ್ರೋಹ ಮಕ್ಕಳಂತವರು||
ಶ್ಲೋಕ
3. ರೇಗಿಸಿದರೆನ್ನನು ದೇವರಲ್ಲದವರ ಮೂಲಕ|
ಸಿಟ್ಟೇರಿಸಿದರು ಅಚೇತ ವಿಗ್ರಹಗಳ ಮೂಲಕ||
ನಾನವರಲಿ ಅಸೂಯೆ ಹುಟ್ಟಿಸುವೆನು ಜನಾಂಗವಲ್ಲದವರ ಮುಖಾಂತರ|
ನಾನವರನು ಸಿಟ್ಟಿಗೆಬ್ಬಿಸುವೆನು ಸಭ್ಯರಲ್ಲದ ಆ ಜನರ ಮುಖಾಂತರ||
ಶ್ಲೋಕ
ಘೋಷಣೆ
(ಕೀರ್ತನೆ 145: 14)
ಅಲ್ಲೆಲೂಯ, ಅಲ್ಲೆಲೂಯ.
ನುಡಿಯಲಿ ಪ್ರಭು ಸದಾ ಪ್ರಾಮಾಣಿಕನು | ನಡೆಯಲಿ ಆತನು ಸದಾ ಪ್ರೀತಿಮಯನು ||
ಅಲ್ಲೆಲೂಯ.
ಸಂತ ಮತ್ತಾಯ ಬರೆದ ಶುಭಸಂದೇಶದಿಂದ ವಾಚನ 13: 31-35
ಯೇಸುಸ್ವಾಮಿ ಇನ್ನೊಂದು ಸಾಮತಿಯನ್ನು ಹೇಳಿದರು: “ಸ್ವರ್ಗಸಾಮ್ರಾಜ್ಯ ಒಂದು ಸಾಸಿವೆ ಕಾಳನ್ನು ಹೋಲುತ್ತದೆ; ಈ ಕಾಳನ್ನು ತೆಗೆದುಕೊಂಡು ಹೋಗಿ ರೈತ ತನ್ನ ಹೊಲದಲ್ಲಿ ಬಿತ್ತಿದ. ಕಾಳುಗಳಲ್ಲಿ ಅತಿ ಸಣ್ಣದಾದ ಇದನ್ನು ಬಿತ್ತಿದಾಗ ಎಲ್ಲ ಸಸ್ಯಗಳಿಗಿಂತಲೂ ದೊಡ್ಡದಾಗಿ ಬೆಳೆದು ಮರವಾಗುತ್ತದೆ. ಅಕಾಶದಲ್ಲಿ ಹಾರಾಡುವ ಹಕ್ಕಿಗಳು ಬಂದು ಇದರ ರೆಂಬೆಗಳಲ್ಲಿ ಗೂಡುಕಟ್ಟಿ ವಾಸಿಸುತ್ತವೆ.’’ ಯೇಸುಸ್ವಾಮಿ ಮತ್ತೊಂದು ಸಾಮತಿಯನ್ನು ಜನರಿಗೆ ಹೇಳಿದರು : “ಸ್ವರ್ಗಸಾಮ್ರಾಜ್ಯ ಹುದುಗೆಬ್ಬಿಸುವ ಹುಳಿಯನ್ನು ಹೋಲುತ್ತದೆ. ಅದನ್ನು ಒಬ್ಬಾಕೆ ತೆಗೆದುಕೊಂಡು ಮೂರು ಸೇರು ಹಿಟ್ಟನಲ್ಲಿ ಕಲಸಿದಳು. ಆ ಹಿಟ್ಟೆಲ್ಲಾ ಹುಳಿಯಾಯಿತು.’’ ಇದೆಲ್ಲವನ್ನೂ ಯೇಸುಸ್ವಾಮಿ ಜನರಿಗೆ ಸಾಮತಿಗಳ ರೂಪದಲ್ಲಿ ಹೇಳಿದರು. ಸಾಮತಿಗಳಿಲ್ಲದೆ ಅವರಿಗೆ ಏನನ್ನೂ ಬೋಧಿಸಲಿಲ್ಲ. “ಸಾಮತಿಗಳಲ್ಲೇ ಬೋಧಿಸುವೆನು; ಲೋಕಾದಿಯಿಂದ ರಹಸ್ಯವಾದವುಗಳನ್ನು ಬಯಲುಗೊಳಿಸುವೆನು,’’ ಎಂದು ದೇವರು ಪ್ರವಾದಿಯ ಮುಖಾಂತರ ತಿಳಿಸಿದ್ದ ಪ್ರವಚನವನ್ನು ಯೇಸು ಹೀಗೆ ನೆರವೇರಿಸಿದರು.


No comments:
Post a Comment