ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 26:7-9, 12, 16-19
ನೇರವಾಗಿದೆ ಸಜ್ಜನನ ದಾರಿ ಸುಗಮವಾಗಿದೆ ನಿನ್ನಿಂದ ಆತನ ಹಾದಿ. ನಡೆವೆವು ನಾವು, ಸರ್ವೇಶ್ವರಾ, ನಿನ್ನ ನೀತಿಮಾರ್ಗದೊಳು ಕಾದಿರುವೆವು ನಿನಗಾಗಿ ಭರವಸೆಯಿಟ್ಟು ನಿನ್ನೊಳು ನಿನ್ನ ನಾಮಸ್ಮರಣೆಯ ಬಯಕೆ ನಮ್ಮ ಅಂತರಾತ್ಮದೊಳು. ಹಾರೈಸಿದೆ ಎನ್ನಾತ್ಮ ನಿನ್ನನು ಇರುಳೊಳು ಅರಸಿತೆನ್ನ ಮನ ನಿನ್ನನು ಮುಂಜಾನೆಯೊಳು. ನೀನೀಯುವಾಗ ಜಗಕೆ ನ್ಯಾಯತೀರ್ಪನು ಕಲಿತುಕೊಳ್ಳುವರು ಭೂನಿವಾಸಿಗಳು ನ್ಯಾಯನೀತಿಯನು. ಸರ್ವೇಶ್ವರಾ, ನೀಡೆಮಗೆ ಶಾಂತಿ ಸಮಾಧಾನ ನಮ್ಮ ಸತ್ಕಾರ್ಯಗಳೆಲ್ಲವೂ ನಿನ್ನ ಕೃಪಾಸಾಧನ. ನಿನ್ನಾಶ್ರಯ ಕೋರಿದರು, ಸರ್ವೇಶ್ವರಾ, ಜನ ಇಕ್ಕಟ್ಟಿಗೆ ಸಿಕ್ಕಿದಾಗ ಪ್ರಾರ್ಥನೆ ಗೈದರವರು ನಿನ್ನ ಶಿಕ್ಷೆಗೆ ಗುರಿಯಾದಾಗ. ಹೆರಿಗೆ ಹತ್ತಿರವಾದ ಗರ್ಭಿಣಿ ಚೀರುವಂತೆ ಯಾತನೆಪಡುವ ಬೇನೆಯಿಂದಾಕೆ ಅರಚುವಂತೆ ಮಾಡಿರುವೆ, ಸರ್ವೇಶ್ವರಾ, ನಿನಗಾಗಿ ನಾವು ಮೊರೆಯಿಡುವಂತೆ. ಪ್ರಸವವೇದನೆಪಟ್ಟು ನಾವು ಹಡೆದದ್ದು ಗಾಳಿಯನ್ನೆ ಆಗಲಿಲ್ಲ ಜಗಕೆ ನಮ್ಮಿಂದ ಯಾವ ರಕ್ಷಣೆ ನೀಡಲಿಲ್ಲ ನಾವು ಜನ್ಮ ಲೋಕನಿವಾಸಿಗಳಿಗೆ. ಬದುಕುವರು ನಿಧನರಾದ ನಮ್ಮ ಜನರು ಜೀವದಿಂದೇಳುವುವು ನಮ್ಮವರ ಶವಗಳು. ಎದ್ದು ಹರ್ಷಧ್ವನಿಗೈಯಲಿ ನೆಲದಲಿ ಬಿದ್ದಿರುವವರು. ನೀ ಸುರಿಸುವ ಇಬ್ಬನಿ ಜ್ಯೋತಿರ್ಮಯ, ಆದುದರಿಂದ ಸತ್ತವರು ಪುನರುತ್ಥಾನಹೊಂದುವರು ನೆಲದಿಂದ.
ಕೀರ್ತನೆ: 102:13-14, 15, 16-18, 19-21
ಶ್ಲೋಕ: ದೃಷ್ಟಿಸಿದನು ಪ್ರಭು ತನ್ನ ಉನ್ನತ ಪವಿತ್ರ ಸ್ಥಾನದಿಂದ
1. ನೀನಾದರೋ ಪ್ರಭೂ, ಸದಾ ಸಿಂಹಾಸನರೂಢ|
ಮಾಳ್ಪರು ತಲಾತಲಾಂತರಕು ನಿನ್ನ ನಾಮಸ್ಮರಣ||
ಎದ್ದು ಸಿಯೋನಿಗೆ ತೋರು ಸೌಜನ್ಯತೆ|
ಅದಕೆ ದಯೆ ತೋರಿಸುವ ಸಮಯವಿದೇ|
ನಿಯಮಿತ ಕಾಲವಿದೋ ಬಂದು ಬಿಟ್ಟಿದೆ||
ಶ್ಲೋಕ
2. ಅದರ ಕಲ್ಲುಗಳು ನಿನ್ನ ಭಕ್ತರಿಗೆ ಪ್ರಿಯ|
ಅದರ ವಿನಾಶವನು ಕಂಡು ಕರಗಿಹೋಗಿದೆ ಹೃದಯ||
ಹೆದರುವುವು ಪ್ರಭುವೆಂಬ ನಿನ್ನ ನಾಮಕೆ ಜನಾಂಗಗಳು|
ಭಯಪಡುವರು ನಿನ್ನ ಪ್ರತಾಪಕೆ ಭೂ ರಾಜರುಗಳು||
ಶ್ಲೋಕ
3. ಏಕೆನೆ ಪುನರುದ್ದರಿಸುವನು ಸಿಯೋನನು|
ಪ್ರತ್ಯಕ್ಷ ಮಾಡುವನಾತ ತನ್ನ ಮಹಿಮೆಯನು||
ತಿರಸ್ಕರಿಸನಾತ ನಿರ್ಗತಿಕರ ಮೊರೆಯನು|
ನೆರವೇರಿಸದೆ ಬಿಡನು ಅವರ ಕೋರಿಕೆಯನು|
ಶ್ಲೋಕ
4. ಮುಂದಣ ಸಂತತಿಗಿದು ಶಾಸನವಾಗಿಲಿ|| ಮುಂದೆ ಹುಟ್ಟುವ ಪ್ರಜೆ ಪ್ರಭುವನು ಹೊಗಳಲಿ||
ಭೂಲೋಕವನು ವೀಕ್ಷಿಸಿದನು ಪ್ರಭು ಸ್ವರ್ಗದಿಂದ|
ದೃಷ್ಟಿಸಿದನು ತನ್ನ ಉನ್ನತ ಪವಿತ್ರ ಸ್ಥಾನದಿಂದ||
ಆಲಿಸಿದನಾತನು ಬಂಧಿತರ ಗೋಳಾಟವನು|
ಬಿಡಿಸಿಹನು ಮರಣತೀರ್ಪಿಗೆ ಗುರಿಯಾದವರನು||
ಶ್ಲೋಕ
ಘೋಷಣೆ
(ಕೀರ್ತನೆ 119: 105)
ಅಲ್ಲೆಲೂಯ, ಅಲ್ಲೆಲೂಯ.
ನಿನ್ನ ವಾಕ್ಯ ನನಗೆ ದಾರಿದೀಪ| ನನ್ನ ಕಾಲಿನ ನಡೆಗೆ ಕೈದೀಪ||
ಅಲ್ಲೆಲೂಯ.
ಶುಭಸಂದೇಶ: ಮತ್ತಾಯ 11:28-30
ಆ ಸಮಯದಲ್ಲಿ ಯೇಸುಸ್ವಾಮಿ ಜನಸಮೂಹವನ್ನುದ್ದೇಶಿಸಿ: "ದುಡಿದು, ಭಾರ ಹೊತ್ತು, ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುತ್ತೇನೆ. ನಾನು ವಿನಯಶೀಲನು, ದೀನಹೃದಯನು; ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ. ಆಗ ನಿಮಗೆ ವಿಶ್ರಾಂತಿ ಸಿಗುವುದು. ನನ್ನ ನೊಗ ಹಗುರ, ನನ್ನ ಹೊರೆ ಸುಗಮ,” ಎಂದರು.


No comments:
Post a Comment