ಹಿಬ್ರಿಯರಿಗೆ ಬರೆದ ಪತ್ರದಿ೦ದ ವಾಚನ 10:11-18
ಪ್ರತಿಯೊಬ್ಬ ಯಾಜಕನು ಅನುದಿನವೂ ತನ್ನ ಸೇವೆಯನ್ನು ನಿರ್ವಹಿಸುತ್ತಾನೆ. ಆದರೆ ಇವುಗಳಿಂದ ಎಂದಿಗೂ ಪಾಪ ನಿವಾರಣೆ ಆಗದು. ಕ್ರಿಸ್ತ ಯೇಸು ಪಾಪ ನಿವಾರಣೆಗೆಂದು ಎಲ್ಲಾ ಕಾಲಕ್ಕೂ ಏಕೈಕ ಬಲಿಯನ್ನು ಅರ್ಪಿಸಿ ದೇವರ ಬಲಪಾರ್ಶ್ವದಲ್ಲಿ ಆಸೀನರಾಗಿದ್ದಾರೆ. ಅವರ ಶತ್ರುಗಳು ತಮ್ಮ ಕಾಲಡಿಗೆ ಬರುವ ತನಕ ಅಲ್ಲೇ ಕಾದಿರುತ್ತಾರೆ. ತಾವು ಪುನೀತಗೊಳಿಸಿದವರನ್ನು ಒಂದೇ ಒಂದು ಬಲಿಯರ್ಪಣೆಯಿಂದ ಯೇಸು ನಿರಂತರ ಸಿದ್ಧಿಗೆ ತಂದಿದ್ದಾರೆ. ಇದನ್ನು ಕುರಿತು ಪವಿತ್ರಾತ್ಮರು ಕೂಡ ನಮಗೆ ಸಾಕ್ಷಿಕೊಡುತ್ತಾರೆ: “ಆ ದಿನಗಳು ಬಂದ ಮೇಲೆ ನಾನು ಅವರೊಡನೆ ಮಾಡಿಕೊಳ್ಳುವ ಒಡಂಬಡಿಕೆ ಹೀಗಿರುವುದು : ನನ್ನ ಆಜ್ಞೆಗಳನ್ನು ಅವರ ಹೃದಯದಲ್ಲಿ ನಾಟಿಸುವೆನು; ಅವರ ಮನದಲ್ಲಿ ಬರೆಯುವೆನು.” ಎಂದು ಹೇಳಿದ ನಂತರವೇ, “ಅವರ ಪಾಪಗಳನ್ನೂ ತಪ್ಪುನೆಪ್ಪುಗಳನ್ನೂ ನೆನಪಿಗೆ ತಂದುಕೊಳ್ಳೆನು,” ಎಂದಿದ್ದಾರೆ.ಪಾಪಗಳ ಕ್ಷಮಾಪಣೆಯಾದ ಬಳಿಕ ಪಾಪ ಪರಿಹಾರಕ ಬಲಿಯ ಅವಶ್ಯಕತೆ ಇಲ್ಲ.
ಕೀರ್ತನೆ: 110:1, 2, 3, 4
“ಆಸೀನನಾಗಿರು ನೀನು ನನ್ನ ಬಲಗಡೆಗೆ I
ಸಿಯೋನಿನ ಹೊರಗು ವಿಸ್ತರಿಸುವನು
ನಿನ್ನ ವೈರಿ ವಿರೋಧಿಗಳ ನಟ್ಟನಡುವೆಯೆ
ಶುಭ್ರ ವಸ್ತ್ರಧರಿಸಿ ನಿನ್ನ ಯುವಕ ಯೋಧರು I
ಮಾರ್ಕನು ಬರೆದ ಶುಭಸ೦ದೇಶ 4:1-20
ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ಮತ್ತೆ ಬೋಧಿಸಲಾರಂಭಿಸಿದರು. ಜನರು ಕಿಕ್ಕಿರಿದು ಸುತ್ತಲೂ ನೆರೆದುಬಂದಿದ್ದರು. ಆದುದರಿಂದ ಅವರು ಸರೋವರದಲ್ಲಿದ್ದ ದೋಣಿಯೊಂದನ್ನು ಹತ್ತಿ ಕುಳಿತರು. ಜನರು ದಡದಲ್ಲೇ ಉಳಿದರು. ಆಗ ಯೇಸು ಅವರಿಗೆ ಅನೇಕ ವಿಷಯಗಳನ್ನು ಸಾಮತಿಗಳ ಮೂಲಕ ಬೋಧಿಸುತ್ತಾ ಹೀಗೆಂದರು: “ಕೇಳಿ, ಒಬ್ಬ ರೈತ ಬಿತ್ತುವುದಕ್ಕೆ ಹೊರಟ. ಬಿತ್ತನೆಮಾಡುತ್ತಾ ಇದ್ದಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಬಿದ್ದುದೇ ಹಕ್ಕಿಗಳು ಬಂದು ಅವುಗಳನ್ನು ತಿಂದುಬಿಟ್ಟವು. ಬೇರೆ ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಕಲ್ಲುನೆಲದ ಮೇಲೆ ಬಿದ್ದವು. ಅಲ್ಲಿ ಮಣ್ಣು ಬಹಳ ತೆಳ್ಳಗಿದ್ದುದರಿಂದ ಅವು ಬೇಗನೆ ಮೊಳೆತವು; ಬಿಸಿಲೇರಿದಾಗ ಬಾಡಿದವು; ಆಳವಾಗಿ ಬೇರೂರಲು ಆಗದ ಕಾರಣ ಅವು ಒಣಗಿಹೋದವು. ಇನ್ನು ಕೆಲವು ಬೀಜಗಳು ಮುಳ್ಳುಪೊದೆಗಳ ನಡುವೆ ಬಿದ್ದವು. ಮುಳ್ಳುಪೊದೆಗಳು ಸಸ್ಯಗಳ ಸಮೇತ ಅವುಗಳನ್ನು ಅದುಮಿಬಿಟ್ಟವು. ಆದುದರಿಂದ ಅವು ಫಲಕೊಡಲಿಲ್ಲ. ಇನ್ನೂ ಕೆಲವು ಬೀಜಗಳು ಹದವಾದ ಭೂಮಿಯಲ್ಲಿ ಬಿದ್ದವು. ಅವು ಮೊಳೆತು, ಬೆಳೆದು ತೆನೆಬಿಟ್ಟವು. ಅವುಗಳಲ್ಲಿ ಕೆಲವು ಮೂವತ್ತರಷ್ಟು, ಕೆಲವು ಅರವತ್ತರಷ್ಟು ಮತ್ತೆ ಕೆಲವು ನೂರರಷ್ಟು ಫಸಲನ್ನು ಕೊಟ್ಟವು.” ಈ ಸಾಮತಿಯನ್ನು ಹೇಳಿದ ಬಳಿಕ ಯೇಸು, “ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ,” ಎಂದರು. ಈ ಉಪದೇಶವನ್ನು ಕೇಳಿದವರಲ್ಲಿ ಕೆಲವರು, ಯೇಸುಸ್ವಾಮಿ ಒಬ್ಬರೇ ಇದ್ದಾಗ, ಹನ್ನೆರಡುಮಂದಿ ಶಿಷ್ಯರೊಡನೆ ಬಂದು, ಅವರು ಹೇಳಿದ ಸಾಮತಿಗಳನ್ನು ವಿವರಿಸಬೇಕೆಂದು ಕೇಳಿಕೊಂಡರು. ಅದಕ್ಕೆ ಯೇಸು, “ದೇವರ ಸಾಮ್ರಾಜ್ಯದ ರಹಸ್ಯವನ್ನು ನಿಮಗೆ ತಿಳಿಸಲಾಗಿದೆ. ಮಿಕ್ಕವರಿಗಾದರೋ ಅದೆಲ್ಲವೂ ಸಾಮತಿಗಳ ರೂಪದಲ್ಲಿ ಮರೆಯಾಗಿದೆ. ಏಕೆಂದರೆ,
No comments:
Post a Comment