ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

13.01.25 - “ಕಾಲವು ಪರಿಪಕ್ವವಾಗಿದೆ, ದೇವರ ಸಾಮ್ರಾಜ್ಯವು ಸಮೀಪಿಸಿದೆ;"

ಹಿಬ್ರಿಯರಿಗೆ ಬರೆದ ಪತ್ರದಿ೦ದ ವಾಚನ 1:1-6

ಸಹೋದರರೇ, ಪೂರ್ವಕಾಲದಲ್ಲಿ ದೇವರು ನಮ್ಮ ಪಿತೃಗಳೊಡನೆ ಹಲವಾರು ವಿಧದಲ್ಲಿ, ಅನೇಕ ಸಾರಿ ಪ್ರವಾದಿಗಳ ಮುಖಾಂತರ ಮಾತನಾಡಿದರು. ಆದರೆ, ಇತ್ತೀಚಿನ ಅಂತಿಮ ದಿನಗಳಲ್ಲಿ ಅವರು ತಮ್ಮ ಪುತ್ರನ ಮುಖೇನ ನಮ್ಮೊಡನೆ ಮಾತನಾಡಿದ್ದಾರೆ. ದೇವರು ಇಡೀ ವಿಶ್ವವನ್ನು ಉಂಟುಮಾಡಿದ್ದು ಇವರ ಮುಖಾಂತರವೇ; ಸಮಸ್ತಕ್ಕೂ ಬಾಧ್ಯನನ್ನಾಗಿ ನೇಮಿಸಿರುವುದು ಇವರನ್ನೇ. ಇವರೇ ದೇವರ ಮಹಿಮೆಯ ತೇಜಸ್ಸು; ಇವರೇ ದೈವತ್ವದ ಪಡಿಯಚ್ಚು; ತಮ್ಮ ಶಕ್ತಿಯುತ ವಾಕ್ಯದಿಂದ ಇವರೇ ಸಮಸ್ತಕ್ಕೂ ಆಧಾರ; ನಮ್ಮ ಪಾಪಗಳನ್ನು ತೊಡೆದುಹಾಕಿ, ಸ್ವರ್ಗದಲ್ಲಿ ಮಹೋನ್ನತ ದೇವರ ಬಲಪಾರ್ಶ್ವದಲ್ಲಿ ಆಸೀನರಾಗಿರುವವರೂ ಇವರೇ. ಹೀಗೆ ದೇವರ ಪುತ್ರನು ದೇವದೂತರಿಗಿಂತಲೂ ಶ್ರೇಷ್ಠ; ಅವರಿಗಿಂತಲೂ ಹೆಸರುವಾಸಿಯಾದಾತ. ಏಕೆಂದರೆ, ದೇವರು ತಮ್ಮ ದೂತರಲ್ಲಿ ಯಾರಿಗಾದರೂ - “ನೀನೇ ನನ್ನ ಪುತ್ರ; ನಾನೇ ನಿನ್ನನಿಂದು ಪಡೆದವ,” ಎಂದು ಎಂದಾದರೂ ಹೇಳಿದ್ದುಂಟೇ? ಅಥವಾ, “ನಾನಾತನಿಗೆ ಪಿತನು, ಆತನೆನಗೆ ಪುತ್ರನು,” ಎಂದಾಗಲಿ ಹೇಳಿದ್ದುಂಟೇ? ಇದಲ್ಲದೆ ದೇವರು ತಮ್ಮ ಚೊಚ್ಚಲ ಮಗನನ್ನು ಭೂಲೋಕಕ್ಕೆ ಕಳುಹಿಸುವಾಗ” “ದೇವದೂತರೆಲ್ಲರೂ ಆತನನ್ನು ಆರಾಧಿಸಲಿ,” ಎಂದಿದ್ದಾರೆ. 

ಕೀರ್ತನೆ: 97:1-2, 6-7, 9 

ಶ್ಲೋಕ: ಸಜ್ಜನರೇ, ಪ್ರಭುವಿನಲಿ ಆನಂದಿಸಿರಿ ಇದೆ ಪ್ರಭುವಿನ ಕೈಯಲಿ ರಾಜ್ಯಾಧಿಕಾರ I

ಉಲ್ಲಾಸಿಸಲಿ ಧರಣಿಮಂಡಲದಾದ್ಯಂತ I
ಸಂತೋಷಿಸಲಿ ಕಡಲಿನ ದ್ವೀಪಗಳೆಲ್ಲ II
ಇವೇ ಮುಗಿಲೂ ಕಾರ್ಮುಗಿಲೂ ಆತನ ಸುತ್ತಲು I
ನ್ಯಾಯ-ನೀತಿ ಆತನ ಗದ್ದುಗೆಯಸ್ತಿವಾರಗಳು II

ಘೋಷಿಸುತ್ತದೆ ಗಗನಮಂಡಲ ಆತನ ನೀತಿಯನು I
ಕಾಣುತ್ತವೆ ಸಕಲ ಜನಾಂಗ ಆತನ ಮಹಿಮೆಯನು II
ನಾಚಲಿ ವ್ಯರ್ಥವಿಗ್ರಹಗಳನು ಪೂಜಿಸಿ ಹಿಗ್ಗುವವರು I
ಪ್ರಭುವಿಗೆ ಅಡ್ಡಬೀಳಲಿ ಆ ದೇವರುಗಳೆಲ್ಲರು II

ಸರ್ವಾಧಿಕಾರಿ ನೀನು ಲೋಕಕ್ಕೆಲ್ಲಾ I
ಮಹೋನ್ನತನು ನೀನು ದೇವರುಗಳಿಗೆಲ್ಲಾ II

ಮಾರ್ಕನು ಬರೆದ ಶುಭಸ೦ದೇಶ 1:14-20


ಯೊವಾನ್ನನು ಬಂಧಿತನಾದ ಬಳಿಕ ಯೇಸುಸ್ವಾಮಿ ಗಲಿಲೇಯಕ್ಕೆ ಹೋಗಿ ದೇವರ ಶುಭಸಂದೇಶವನ್ನು ಸಾರಿದರು: “ಕಾಲವು ಪರಿಪಕ್ವವಾಗಿದೆ, ದೇವರ ಸಾಮ್ರಾಜ್ಯವು ಸಮೀಪಿಸಿದೆ; ಪಶ್ಚಾತ್ತಾಪಪಟ್ಟು ಪಾಪಜೀವನಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ. ಶುಭಸಂದೇಶದಲ್ಲಿ ವಿಶ್ವಾಸವಿಡಿ,” ಎಂದು ಘೋಷಿಸಿದರು. ಯೇಸುಸ್ವಾಮಿ ಗಲಿಲೇಯ ಸರೋವರದ ತೀರದಲ್ಲಿ ನಡೆದುಹೋಗುತ್ತಿದ್ದಾಗ ಸಿಮೋನನನ್ನೂ ಆತನ ಸಹೋದರ ಅಂದ್ರೆಯನನ್ನೂ ಕಂಡರು. ಬೆಸ್ತರಾದ ಇವರು ಸರೋವರದಲ್ಲಿ ಬಲೆಬೀಸುತ್ತಾ ಇದ್ದರು. ಯೇಸು ಅವರಿಗೆ, “ನನ್ನನ್ನು ಹಿಂಬಾಲಿಸಿ ಬನ್ನಿ, ನಿಮ್ಮನ್ನು ಮನುಷ್ಯರನ್ನೇ ಹಿಡಿಯುವವರನ್ನಾಗಿ ಮಾಡುವೆನು,” ಎಂದು ಕರೆದರು. ತಕ್ಷಣವೇ ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು. ಇನ್ನೂ ಸ್ವಲ್ಪ ಮುಂದಕ್ಕೆ ಹೋಗುತ್ತಿದ್ದಾಗ, ಜೆಬೆದಾಯನ ಮಕ್ಕಳಾದ ಯಕೋಬ ಮತ್ತು ಯೊವಾನ್ನರನ್ನು ಯೇಸು ಕಂಡರು. ಅವರು ದೋಣಿಯಲ್ಲಿ ಕುಳಿತು ತಮ್ಮ ಬಲೆಗಳನ್ನು ಸರಿಪಡಿಸುತ್ತಿದ್ದರು. ಕೂಡಲೇ, ಯೇಸು ಅವರನ್ನು ಕರೆದರು. ಅವರೂ ತಮ್ಮ ತಂದೆ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲೇ ಬಿಟ್ಟು ಯೇಸುವನ್ನು ಹಿಂಬಾಲಿಸಿದರು. 

No comments:

Post a Comment