ಹಿಬ್ರಿಯರಿಗೆ ಬರೆದ ಪತ್ರದಿ೦ದ ವಾಚನ 4:1-5, 11
ದೇವರು ತಮ್ಮ ವಿಶ್ರಾಂತಿಯ ನೆಲೆಯನ್ನು ನೀಡುವುದಾಗಿ ಮಾಡಿದ ವಾಗ್ದಾನ ಇನ್ನೂ ರದ್ದಾಗದೆ ಉಳಿದಿದೆ. ನಿಮ್ಮಲ್ಲಿ ಯಾರೂ ಆ ವಾಗ್ದಾನದ ಫಲವನ್ನು ಪಡೆಯದೆ ಇರಬಾರದು. ಎಂತಲೇ, ನಾವು ಭಯಭಕ್ತಿಯಿಂದ ಬಾಳೋಣ. ಶುಭವಾರ್ತೆಯನ್ನು ಅವರಿಗೆ ಸಾರಲಾದಂತೆ ನಮಗೂ ಸಾರಲಾಯಿತು. ಅವರು ಅದನ್ನು ಆಲಿಸಿದರು; ಆದರೆ ಅವರಲ್ಲಿ ವಿಶ್ವಾಸವಿರಲಿಲ್ಲ. ಈ ಕಾರಣ, ಅವರು ಕೇಳಿದ ಸಂದೇಶದಿಂದ ಫಲ ಪಡೆಯದೆ ಹೋದರು. ಲೋಕಾದಿಯಲ್ಲೇ, ದೇವರು ತಮ್ಮ ಸೃಷ್ಟಿಕಾರ್ಯವನ್ನು ಮುಗಿಸಿದ್ದರೂ ಅವರು, “ಸೇರರು ಎನ್ನ ವಿಶ್ರಾಂತಿಯ ನೆಲೆಯನು ಇವರೆಂದಿಗೂ ಎಂದು ಸಿಟ್ಟುಗೊಂಡು ಶಪಥ ಮಾಡಿದೆನು,” ಎಂದು ಹೇಳಿದ್ದಾರೆ. ವಿಶ್ವಾಸಿಸುವ ನಾವಾದರೋ ಆ ವಿಶ್ರಾಂತಿಯ ನೆಲೆಯನ್ನು ಸೇರುತ್ತೇವೆ. ಪವಿತ್ರಗ್ರಂಥದ ಒಂದೆಡೆಯಲ್ಲಿ, ಏಳನೆಯ ದಿನವನ್ನು ಕುರಿತು: “ದೇವರು ತಮ್ಮ ಸೃಷ್ಟಿಕಾರ್ಯಗಳನ್ನೆಲ್ಲಾ ಮುಗಿಸಿ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು,” ಎಂದು ಬರೆದಿದೆ. ಮೇಲೆ ಹೇಳಿದ ವಚನದಲ್ಲಾದರೋ, “ಸೇರರು ಎನ್ನ ವಿಶ್ರಾಂತಿಯ ನೆಲೆಯನು ಇವರೆಂದಿಗೂ,” ಎಂದಿದೆ. ಆದ್ದರಿಂದ ಈ ವಿಶ್ರಾಂತಿಯನ್ನು ಪಡೆಯಲು ನಾವು ಪ್ರಯತ್ನಪಡೋಣ. ನಮ್ಮಲ್ಲಿ ಯಾರೂ ಆ ಜನರಂತೆ ಅವಿಧೇಯತೆಯಿಂದ ವರ್ತಿಸಿ ವಿಶ್ವಾಸಭ್ರಷ್ಟರಾಗದೆ ಇರೋಣ.
ಕೀರ್ತನೆ: 78:3, 4, 6-7, 8
ಪೇಳ್ವೆವು ನಾವು ಕೇಳಿ ತಿಳಿದುಕೊಂಡವುಗಳನೆ I
ಪೂರ್ವಜರೆಮಗೆ ತಿಳಿಸಿದ ಸಂಗತಿಗಳನೆ I
ಪ್ರಭುವಿನ ಮಹಿಮೆ ಪರಾಕ್ರಮದ ಪವಾಡಗಳನೆ II
ಮರೆಮಾಡೆವು ಅವರ ಸಂತತಿಯಾದ ನಿಮಗೆ I
ವಿವರಿಸುವೆವು ಮುಂಬರಲಿರುವ ಪೀಳಿಗೆಗೆ II
“ಗೊತ್ತಾಗಲಿ ಇವೆಲ್ಲ ಮುಂದಿನ ತಲೆಮಾರಿಗೆ I
ತಿಳಿಸುತ್ತ ಹೋಗಲಿ ಮಕ್ಕಳು ಮೊಮ್ಮಕ್ಕಳಿಗೆ” II
ಆಗ ತಮ್ಮ ಪ್ರಾಚೀನ ಪೂರ್ವಿಕರಂತೆ ಅವರಾಗರು I
ಮೊಂಡರು, ಅವಿಧೇಯರು, ದೈವದ್ರೋಹಿಗಳು, ಚಪಲಚಿತ್ತರು II
ಮರೆಯರು ನನ್ನ ಮಹತ್ಕಾರ್ಯಗಳನು I
ಇಡುವರು ನನ್ನಲ್ಲೇ ಭರವಸೆಯನು I
ಕೈಗೊಳ್ಳುವರು ನನ್ನ ಆಜ್ಞೆಗಳನು II
ಮಾರ್ಕನು ಬರೆದ ಶುಭಸ೦ದೇಶ 2:1-12
ಕೆಲವು ದಿನಗಳು ಕಳೆದ ಬಳಿಕ ಯೇಸುಸ್ವಾಮಿ ಮತ್ತೊಮ್ಮೆ ಕಫೆರ್ನವುಮಿಗೆ ಬಂದರು. ಅವರು ಮನೆಯಲ್ಲಿದ್ದಾರೆಂಬ ಸುದ್ದಿ ಹಬ್ಬಿತು. ಜನರು ಗುಂಪುಗುಂಪಾಗಿ ಅಲ್ಲಿಗೆ ಬಂದರು. ಇದರಿಂದಾಗಿ ಮನೆಯೊಳಗೆ ಮಾತ್ರವಲ್ಲ, ಹೊರಗಡೆಯೂ ಸ್ಥಳ ಸಾಲದೆ ಹೋಯಿತು. ಯೇಸು ಅಲ್ಲಿ ಸೇರಿದ್ದ ಜನಸ್ತೋಮಕ್ಕೆ ದೇವರ ವಾಕ್ಯವನ್ನು ಬೋಧಿಸತೊಡಗಿದರು. ಆಗ ಒಬ್ಬ ಪಾರ್ಶ್ವವಾಯುರೋಗಿಯನ್ನು ನಾಲ್ವರಿಂದ ಹೊರಿಸಿಕೊಂಡು ಕೆಲವರು ಅಲ್ಲಿಗೆ ಬಂದರು. ಜನಸಂದಣಿಯ ನಿಮಿತ್ತ ಅವನನ್ನು ಯೇಸುವಿನ ಸಮೀಪಕ್ಕೆ ಸಾಗಿಸಲು ಸಾಧ್ಯವಾಗಲಿಲ್ಲ. ಆದುದರಿಂದ ಅವರು ಯೇಸು ಇದ್ದ ಮನೆಯ ಮೇಲ್ಛಾವಣಿಯನ್ನು ತೆರೆದು, ದೊಡ್ಡ ಕಿಂಡಿಯೊಂದನ್ನು ಮಾಡಿ, ರೋಗಿಯನ್ನು ಹಾಸಿಗೆಯ ಸಮೇತ ಕೆಳಗಿಳಿಸಿದರು. ಯೇಸು ಅವರ ವಿಶ್ವಾಸವನ್ನು ಮೆಚ್ಚಿ ಆ ಪಾರ್ಶ್ವವಾಯು ರೋಗಿಗೆ, “ಮಗು, ನಿನ್ನ ಪಾಪಗಳನ್ನು ಕ್ಷಮಿಸಲಾಗಿದೆ,” ಎಂದರು.
Praise the lord
ReplyDelete