ಮೊದಲನೆಯ ವಾಚನ – ಹಿಬ್ರಿಯರಿಗೆ 12: 18-19, 21-24
ಸಹೋದರರೇ, ನೀವು ಇಸ್ರಯೇಲರಂತೆ ಮುಟ್ಟಬಹುದಾದ ಸೀನಾಯ್ ಬೆಟ್ಟಕ್ಕೆ ಬಂದಿಲ್ಲ. ಅಲ್ಲಿ ಬೆಂಕಿ ಧಗಧಗಿಸುತ್ತಿತ್ತು. ಕಾರ್ಗತ್ತಲು ಕವಿದಿತ್ತು; ಮೋಡದ ಮಬ್ಬು ಮುಸುಕಿತ್ತು; ಬಿರುಗಾಳಿ ಬೀಸುತ್ತಿತ್ತು; ಕಹಳೆಗಳು ಮೊಳಗುತ್ತಿದ್ದವು. ಆಗ ಧ್ವನಿಯೊಂದು ಕೇಳಿಬಂತು. ಅದನ್ನು ಕೇಳಿದವರು, ಇನ್ನೆಂದಿಗೂ ಆ ಧ್ವನಿ ತಮ್ಮೊಂದಿಗೆ ಮಾತನಾಡುವುದೇ ಬೇಡವೆಂದು ಕೇಳಿಕೊಂಡರು. ಆ ನೋಟ ಎಷ್ಟು ಭಯಂಕರವಾಗಿತ್ತೆಂದರೆ, ಮೋಶೆ ಕೂಡ, “ನಾನು ಭಯದಿಂದ ನಡುಗುತ್ತಿದ್ದೇನೆ,” ಎಂದು ಹೇಳುವಂತಾಯಿತು! ಆದರೆ ನೀವು ಬಂದಿರುವುದು ಸಿಯೋನ್ ಬೆಟ್ಟಕ್ಕೆ, ಜೀವಂತ ದೇವರ ನಗರಕ್ಕೆ; ಸ್ವರ್ಗೀಯ ಜೆರುಸಲೇಮಿಗೆ, ಅಸಂಖ್ಯ ದೇವದೂತರು ಕೂಡಿರುವ ಉತ್ಸವ ಕೂಟಕ್ಕೆ; ಸ್ವರ್ಗದಲ್ಲಿ ದಾಖಲೆಯಾಗಿರುವ ಜೇಷ್ಠಪುತ್ರನ ಸಭೆಗೆ; ನೀವು ಬಂದಿರುವುದು ಸಕಲ ಮಾನವರ ನ್ಯಾಯಮೂರ್ತಿಯಾದ ದೇವರ ಸನ್ನಿಧಿಗೆ; ಸಿದ್ಧಿಗೆ ಬಂದ ಸತ್ಪುರುಷರ ಆತ್ಮಗಳ ಸಮೂಹಕ್ಕೆ; ಹೊಸ ಒಡಂಬಡಿಕೆಯ ಮಧ್ಯಸ್ಥರಾದ ಯೇಸುಸ್ವಾಮಿಯ ಬಳಿಗೆ, ಹೇಬೆಲನ ರಕ್ತಕ್ಕಿಂತಲೂ ಅಮೋಘವಾಗಿ ಮೊರೆಯಿಡುವ ಪ್ರೋಕ್ಷಣಾರಕ್ತದ ಬಳಿಗೆ ನೀವು ಬಂದಿದ್ದೀರಿ.
ಪ್ರಭುವಿನ ವಾಕ್ಯ
ಕೀರ್ತನೆ – 48: 1-3, 8, 9-10, V.9
ಶ್ಲೋಕ: ನಿನ್ನಚಲ ಪ್ರೀತಿಯನು ದೇವಾ, ಸ್ಮರಿಸುವೆವು Iನಿನ್ನ ಮಹದಾಲಯದೊಳು ಅದನು ಧ್ಯಾನಿಸುವೆವು II
ಸರ್ವಸ್ತುತಿಗೆ ಪಾತ್ರ, ಪ್ರಭುವು ಪರಮೋನ್ನತ I
ದೇವನಗರದಲಿ ಆತನ ಪವಿತ್ರ ಪರ್ವತ II
ಎತ್ತರದಲಿ ಸುಂದರ, ಉತ್ತರದಲಿ ಸಿಯೋನ್ ಶಿಖರ I
ಆನಂದದಾಯಕ ರಾಜಾಧಿರಾಜನ ಆ ನಗರ II
ಅದರ ಕೋಟೆಕೊತ್ತಲಗಳ ನಡುವೆ ದೇವನು I
ತಾನೇ ಸುಭದ್ರ ದುರ್ಗವೆಂದು ತೋರಿಹನು II
ಕಿವಿಯಾರೆ ಕೇಳಿದಂತೆಯೆ ಕಣ್ಣಾರೆ ಕಂಡೆವು I
ಸರ್ವಶಕ್ತ ಪ್ರಭುವನು ದೇವನಗರದಲಿ ಕಂಡೆವು II
ನಿನ್ನಚಲ ಪ್ರೀತಿಯನು ದೇವಾ, ಸ್ಮರಿಸುವೆವು I
ನಿನ್ನ ಮಹದಾಲಯದೊಳು ಅದನು ಧ್ಯಾನಿಸುವೆವು II
ನಿನ್ನ ನಾಮದಂತೆ ನಿನ್ನಾ ಹೊಗಳಿಕೆ I
ಮುಟ್ಟುತ್ತದೆ ಜಗದ ಎಲ್ಲೆ ಎಲ್ಲೆಗೆ I
ಶುಭಸಂದೇಶ – ಮಾರ್ಕ 6: 7-13
ಅನಂತರ ಯೇಸುಸ್ವಾಮಿ ಸುತ್ತಮುತ್ತಲಿನ ಊರುಗಳಿಗೆ ಹೋಗಿ ಜನರಿಗೆ ಪ್ರಬೋಧಿಸಿದರು. ಇದಲ್ಲದೆ ಹನ್ನೆರಡು ಮಂದಿ ಶಿಷ್ಯರನ್ನು ಕರೆದು ಅವರಿಗೆ ದೆವ್ವಬಿಡಿಸುವ ಅಧಿಕಾರವನ್ನಿತ್ತು, ಅವರನ್ನು ಇಬ್ಬಿಬ್ಬರನ್ನಾಗಿ ಕಳುಹಿಸಿದರು. ಕಳುಹಿಸುವಾಗ, “ಪ್ರಯಾಣ ದಂಡವೊಂದನ್ನು ಹೊರತು ಇನ್ನೇನನ್ನೂ ತೆಗೆದುಕೊಂಡು ಹೋಗಬೇಡಿ. ಬುತ್ತಿ, ಜೋಳಿಗೆ, ಜೇಬಿನಲ್ಲಿ ಹಣ, ಯಾವುದೂ ಬೇಡ. ಪಾದರಕ್ಷೆಯನ್ನು ಮೆಟ್ಟಿಕೊಂಡರೆ ಸಾಕು. ಎರಡು ಅಂಗಿಗಳನ್ನೂ ತೊಟ್ಟುಕೊಳ್ಳಬೇಡಿ,” ಎಂದು ಅಪ್ಪಣೆ ಮಾಡಿದರು. ಇದಲ್ಲದೆ, “ನೀವು ಯಾವುದೇ ಒಂದು ಊರಿಗೆ ಹೋದಾಗ ಆ ಊರನ್ನು ಬಿಡುವವರೆಗೂ ಆತಿಥ್ಯ ನೀಡುವ ಯಾವುದಾದರೂ ಒಂದು ಮನೆಯಲ್ಲೇ ಉಳಿದುಕೊಳ್ಳಿ. ಯಾವುದೇ ಊರಿನ ಜನರು ನಿಮ್ಮನ್ನು ಸ್ವಾಗತಿಸದೆಯೂ ನಿಮ್ಮ ಬೋಧನೆಗೆ ಕಿವಿಗೊಡದೆಯೂ ಹೋದರೆ, ಆ ಊರನ್ನು ಬಿಟ್ಟುಹೋಗುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಕೂಡ ಝಾಡಿಸಿಬಿಡಿ. ಅವರ ವಿರುದ್ಧ ಅದು ಸಾಕ್ಷಿಯಾಗಿರಲಿ,” ಎಂದರು. ಶಿಷ್ಯರು ಹೊರಟುಹೋಗಿ, “ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗಿ ದೇವರಿಗೆ ಅಭಿಮುಖರಾಗಿರಿ,” ಎಂದು ಜನರಿಗೆ ಸಾರಿ ಹೇಳಿದರು. ದೆವ್ವಹಿಡಿದಿದ್ದ ಅನೇಕರಿಂದ ದೆವ್ವಗಳನ್ನು ಹೊರಗಟ್ಟಿದರು. ತೈಲಲೇಪನಮಾಡಿ ಅನೇಕ ರೋಗಿಗಳನ್ನು ಗುಣಪಡಿಸಿದರು.
ಪ್ರಭುವಿನ ಶುಭಸಂದೇಶ
No comments:
Post a Comment