28.01.25 - "ದೈವೇಚ್ಛೆಯನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ, ತಾಯಿ,"

ಮೊದಲನೇ ವಾಚನ: ಹಿಬ್ರಿಯರಿಗೆ  10:1-10

ರ್ಮಶಾಸ್ತ್ರವು ಬರಲಿದ್ದ ಸೌಭಾಗ್ಯದ ಛಾಯೆಯೇ ಹೊರತು ಅದರ ನಿಜಸ್ವರೂಪವಲ್ಲ. ವರ್ಷವರ್ಷವೂ ನಿರಂತರವಾಗಿ ಅದೇ ಬಲಿಗಳು ಅರ್ಪಿತವಾಗುತ್ತಿವೆ. ಹೀಗಿರುವಲ್ಲಿ, ದೇವರನ್ನು ಅರಸಿ ಬರುತ್ತಿರುವವರನ್ನು ಇಂಥ ಬಲಿಗಳಿಂದ ಸಿದ್ಧಿಗೆ ತರಲು ಹೇಗೆತಾನೆ ಸಾಧ್ಯ?  ಹಾಗೆ ಸಿದ್ಧಿಗೆ ತರಲು ಸಾಧ್ಯವಿದ್ದಿದ್ದರೆ ಬಲಿಯರ್ಪಣೆಯು  ಎಂದೋ ನಿಂತು ಹೋಗುತ್ತಿತ್ತು. ಏಕೆಂದರೆ, ಆಗ ಆರಾಧಕರು ಒಮ್ಮೆಗೇ ಶುದ್ಧಿಹೊಂದಿ ತಾವು ಪಾಪಿಗಳೆಂಬ ಮನವರಿಕೆಯೇ ಇಲ್ಲದೆ ಇರುತ್ತಿದ್ದರು.  ಬದಲಿಗೆ, ಪ್ರತಿ ವರ್ಷವೂ ಸಮರ್ಪಿಸಲಾಗುವ ಬಲಿಯರ್ಪಣೆಗಳು ಪಾಪನಿವಾರಣೆ ಆಗದ್ದನ್ನು ಜ್ಞಾಪಕಕ್ಕೆ  ತರುತ್ತವೆ. ಏಕೆಂದರೆ, ಹೋತ ಹೋರಿಗಳ ರಕ್ತದಿಂದ ಪಾಪನಿವಾರಣೆ ಅಸಾಧ್ಯ. ಆದ್ದರಿಂದಲೇ ಭೂಲೋಕಕ್ಕೆ ಬರಲಿದ್ದ ಕ್ರಿಸ್ತಯೇಸು ದೇವರಿಗೆ  ಇಂತೆಂದರು: "ಬಲಿಯರ್ಪಣೆಗಳೂ ಕಾಣಿಕೆಗಳೂ ನಿಮಗೆ ಬೇಡವಾದವು: ಎಂದೇ ಆಣೆಮಾಡಿ ಕೊಟ್ಟಿರಿ ನನಗೆ ದೇಹವೊಂದನು. ಸರ್ವಾಂಗ ಹೋಮಗಳೂ ಪಾಪಪರಿಹಾರಕ ಬಲಿಗಳೂ ನಿಮಗೆ ತರಲಿಲ್ಲ ತೃಪ್ತಿಯನ್ನು. ಅಗ ಇಂತೆಂದೆ ನಾನು: ಗ್ರಂಥದ ಸುರುಳಿಯಲಿ ನನ್ನನ್ನು ಕುರಿತು ಬರೆದಿರುವಂತೆ, ಓ ದೇವಾ, ಇಗೋ ನಾ ಬಂದೆ ನಿನ್ನ ಚಿತ್ತವನ್ನು    ನೆರವೇರಿಸಲೆಂದೇ." ಧರ್ಮಶಾಸ್ತ್ರದ  ವಿಧಿಗನುಸಾರ ಅರ್ಪಿಸಲಾಗುತ್ತಿದ್ದುವಾದರೂ  "ಬಲಿಯರ್ಪಣೆಗಳು, ಕಾಣಿಕೆಗಳು, ದಹನಬಲಿಗಳು ಮತ್ತು ಪಾಪಪರಿಹಾರಕ ಬಲಿಗಳು ನಿಮಗೆ  ಬೇಡವಾದವು; ಇವು ಯಾವುವೂ ನಿಮಗೆ ತರಲಿಲ್ಲ ತೃಪ್ತಿಯನು," ಎಂದು ಮೊದಲು ಹೇಳುತ್ತಾರೆ. ಆನಂತರ, "ಇಗೋ, ನಾ ಬಂದೆ, ನಿಮ್ಮ ಚಿತ್ತವನ್ನು ನೆರವೇರಿಸಲೆಂದೇ," ಎನ್ನುತ್ತಾರೆ. ಹೀಗೆ ಹೊಸದನ್ನು ಸ್ಥಾಪಿಸಲು ಹಳೆಯದನ್ನು ರದ್ದುಮಾಡಿದ್ದಾರೆ. ಯೇಸುಕ್ರಿಸ್ತರು ಒಮ್ಮೆಗೇ ಎಲ್ಲಾ ಕಾಲಕ್ಕೂ ತಮ್ಮ ದೇಹವನ್ನು ಸಮರ್ಪಿಸಿ, ದೇವರ ಚಿತ್ತವನ್ನು ನೆರವೇರಿಸಿದ್ದರಿಂದಲೇ ನಾವು ಪುನಿತರಾಗಿದ್ದೇವೆ.

ಕೀರ್ತನೆ: 40:2, 4, 7-8, 10, 11
ಶ್ಲೋಕ: ಪ್ರಭೂ, ನಿನ್ನ ಚಿತ್ತಾನುಸಾರ ನಡೆವುದೇ ನನಗೆ ಪರವಾವೇಶ

ಕಾದಿದ್ದೆನು,  ಪ್ರಭುವಿಗಾಗಿ  ಕಾದಿದ್ದೆನು|
ಕೊನೆಗಾತ  ನನ್ನತ್ತ  ಬಾಗಿ  ಕಿವಿಗೊಟ್ಟನು||
ಬರಿಸಿದನು  ನವಗೀತೆಯನು|
ದೇವಸ್ತುತಿಯನು  ನನ್ನ  ಬಾಯಲಿ||

ಬೇಡವಾದವು  ನಿನಗೆ  ಯಜ್ಞಾರ್ಪಣೆ,  ಬಲಿಕಾಣಿಕೆ|
ಬಯಸಿಲ್ಲ  ನೀ  ಹೋಮವನೇ,  ಪರಿಹಾರಿಕ  ಬಲಿಯನೆ||
ಶ್ರವಣಶಕ್ತಿಯನು  ಅನುಗ್ರಹಿಸಿದೆ  ನೀನು  ನನಗೆ|
ನಾನೋಗೊಡುತ  ಇಂತೆಂದೆ:  " ಇಗೋ,   ನಾನೇ  ಬರುತ್ತಿರುವೆ"||  

ಜೀವೋದ್ಧಾರದ  ಶುಭಸಂದೇಶವನು  ಸಾರಿದೆ  ಮಹಾಸಭೆಗೆ|
ನಾ  ಸಾರಿದೆ  ಅದನು  ಮೌನವಿರದೆ,  ಇದು  ಗೊತ್ತಿದೆ  ಪ್ರಭೂ  ನಿನಗೆ||
ಬಚ್ಚಿಟ್ಟುಕೊಳ್ಳಲಿಲ್ಲ  ನನ್ನೆದೆಯೊಳು  ನಿನ್ನ  ಸತ್ಸಂಬಂಧವನು|
ಪ್ರಕಟಿಸಿದೆನು  ಜೀವೋದ್ಧಾರವನು,  ನಿನ್ನ  ಪ್ರಾಮಾಣಿಕತೆಯನು||

ಘೋಷಣೆ                      ಪ್ರೇ.ಕಾ. 16:14
ಅಲ್ಲೆಲೂಯ, ಅಲ್ಲೆಲೂಯ!
ನಿಮ್ಮ  ಬೋಧನೆಗೆ  ಕಿವಿಗೊಟ್ಟು  ಗ್ರಹಿಸುವಂತೆ,  ಪ್ರಭೂ,  ನಮ್ಮ  ಹೃದಯವನ್ನು  ತೆರೆಯಿರಿ,,
ಅಲ್ಲೆಲೂಯ!

ಶುಭಸಂದೇಶ: ಮಾರ್ಕ 3:31-35

ಯೇಸುಸ್ವಾಮಿಯ ತಾಯಿ ಮತ್ತು ಸಹೋದರರು ಅಲ್ಲಿಗೆ ಬಂದರು. ಒಳಗೆ ಜನರು ಯೇಸುವಿನ ಸುತ್ತಲೂ ಗುಂಪಾಗಿ ಕುಳಿತ್ತಿದ್ದರು. ಆದುದರಿಂದ ಅವರು ಹೊರಗೆ ನಿಂತು, ಯೇಸುವಿಗೆ ಬರಬೇಕೆಂದು ಹೇಳಿಕಳುಹಿಸಿದರು. "ನಿಮ್ಮ ತಾಯಿಯೂ ಸಹೋದರರೂ ಹೊರಗೆ ನಿಗಾಗಿ ಕಾದಿದ್ದಾರೆ," ಎಂದು ಯೇಸುವಿಗೆ ತಿಳಿಸಿದರು. ಅದಕ್ಕೆ ಯೇಸು, "ನನಗೆ ತಾಯಿ ಯಾರು?, ಸಹೋದರರು ಯಾರು?" ಎನ್ನುತ್ತಾ ತಮ್ಮ ಸುತ್ತಲೂ ಕುಳಿತಿದ್ದವರ ಮೇಲೆ ದೃಷ್ಟಿ ಹರಿಸಿ, "ಇಗೋ, ನನ್ನ ತಾಯಿ! ಇಗೋ ನನ್ನ ಸಹೋದರರು! ದೈವೇಚ್ಛೆಯನ್ನು ಯಾರು ನೆರವೇರಿಸುತ್ತಾರೋ ಅವರೇ ನನಗೆ ಸಹೋದರ, ಸಹೋದರಿ, ತಾಯಿ," ಎಂದರು.

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...