ಮೊದಲನೆಯ ವಾಚನ: ಯೊವಾನ್ನನು ಬರೆದ ಮೊದಲನೆಯ ಪತ್ರದಿಂದ ಇಂದಿನ ವಾಚನ 2:29-3:6
ಪ್ರಿಯರೇ, ಕ್ರಿಸ್ತಯೇಸು ಸತ್ಯಸ್ವರೂಪಿ ಎಂಬುದನ್ನು ನೀವು ಬಲ್ಲಿರಿ. ಎಂದೇ, ಸತ್ಯಮಾರ್ಗದಲ್ಲಿ ನಡೆಯುವ ಪ್ರತಿಯೊಬ್ಬನೂ ಅವರಿಂದ ಜನಿಸಿದನು ಎಂಬುದು ನಿಮಗೆ ವೇದ್ಯವಾಗಿರಬೇಕು. ನಾವು ದೇವರ ಮಕ್ಕಳು ಎನಿಸಿಕೊಂಡಿರಬೇಕಾದರೆ ಪಿತನು ನಮ್ಮನ್ನು ಎಷ್ಟಾಗಿ ಪ್ರೀತಿಸುತ್ತಾರೆಂಬುದನ್ನು ಗಮನಿಸಿರಿ. ನಿಜಕ್ಕೂ ನಾವು ದೇವರ ಮಕ್ಕಳೇ. ಲೋಕವು ಅವರನ್ನು ಅರಿತುಕೊಲಿಲ್ಲವಾದ ಕಾರಣ ನಾವು ಎಂಥವರೆಂದು ಅದು ಅರಿತಿಲ್ಲ. ಪ್ರಿಯರೇ, ನಾವೀಗ ದೇವರ ಮಕ್ಕಳು. ಮುಂದೆ ನಾವು ಎಂಥವರಾಗುತ್ತೇವೆ ಎಂಬುದು ಇನ್ನೂ ವಿಷದವಾಗಿಲ್ಲ. ಆದರೆ ಕ್ರಿಸ್ತಯೇಸು ಪ್ರತ್ಯಕ್ಷವಾಗುವಾಗ ನಾವೂ ಅವರಂತೆಯೇ ಇರುತ್ತೇವೆಂದು ಬಲ್ಲೆವು. ಏಕೆಂದರೆ, ಅವರನ್ನು ನಾವು ಅವರ ಯಥಾರ್ಥ ರೂಪದಲ್ಲೇ ಕಾಣುತ್ತೇವೆ. ಕ್ರಿಸ್ತಯೇಸುವಿನಲ್ಲಿ ನಂಬಿಕೆ ನಿರೀಕ್ಷೆಯನ್ನಿಟ್ಟಿರುವ ಪ್ರತಿಯೊಬ್ಬನೂ ಅವರು ಶುದ್ದರಾಗಿರುವಂತೆಯೇ ತಮ್ಮನ್ನು ಶುದ್ದವಾಗಿಟ್ಟುಕೊಳ್ಳುತ್ತಾನೆ. ಪಾಪ ಮಾಡುವ ಪ್ರತಿಯೊಬ್ಬನೂ ದೇವರ ಆಜ್ಞೆಯನ್ನು ಮೀರುತ್ತಾನೆ. ದೇವರ ಆಜ್ಞೆಯನ್ನು ಉಲ್ಲಂಘಿಸುವುದೇ ಪಾಪ. ಪಾಪರಹಿತವಾದ ಕ್ರಿಸ್ತಯೇಸು ಪಾಪಪರಿಹಾರ ಮಾಡಲೆಂದೇ ಕಾಣಿಸಿಕೊಂಡರೆಂದು ನೀವು ಬಲ್ಲಿರಿ. ಅವರಲ್ಲಿ ನೆಲೆಸಿರುವ ಪ್ರತಿಯೊಬ್ಬನು ಪಾಪಮಾಡನು. ಪಾಪಮಾಡುವವನು ಅವರನ್ನು ಕಂಡವನೂ ಅಲ್ಲ, ಅರಿತವನೂ ಅಲ್ಲ.
ಕೀರ್ತನೆ: 98:1,3-4,5-6
ಶ್ಲೋಕ: ಕಂಡುಬಂದಿತು ಜಗದ ಎಲ್ಲೆಎಲ್ಲೆಗೆ ನಮ್ಮ ದೇವ ಸಾಧಿಸಿದ ಜಯಗಳಿಕೆ.
ಹಾಡಿರಿ ಪ್ರಭುವಿಗೆ ಹೊಸ ಗೀತೆಯೊಂದನು|
ಎಸಗಿಹನಾತನು ಪವಾಡ ಕಾರ್ಯಗಳನು|
ಗಳಿಸಿತಾತನ ಕೈ ಮಹತ್ವಪೂರ್ಣ ಗೆಲುವನು||
ಕಂಡು ಬಂದಿತು ಜಗದ ಎಲ್ಲೆಎಲ್ಲೆಗೆ| ನಮ್ಮ ದೇವ ಸಾಧಿಸಿದ ಜಯಗಳಿಕೆ||
ಭೂನಿವಾಸಿಗಳೇ ಮಾಡಿರಿ ಜಯಕಾರ ಪ್ರಭುವಿಗೆ|
ಮುದದಿ ಹಾಡಿರಿ, ಮಾಡಿರಿ ಸುಮಧುರ ಭಜನೆ||
ಪ್ರಭುವನು ಸ್ತುತಿಸಿರಿ ಕಿನ್ನರಿಯೊಂದಿಗೆ|
ಭಜಿಸಿರಿ ಆತನನು ವಾದ್ಯಮೇಳದೊಂದಿಗೆ||
ಊದಿರಿ ಕೊಂಬನು ತುತೂರಿಯನು|
ಉದ್ಘೋಷಿಸಿರಿ ಪ್ರಭು ರಾಜನನು||
ಘೋಷಣೆ:
ಅಲ್ಲೆಲೂಯ, ಅಲ್ಲೆಲೂಯ!
ಪವಿತ್ರ ದಿನವೊಂದು ಉದಯಿಸಿದೆ ಜನಾಂಗಗಳೇ, ಬಂದು ಸರ್ವೇಶ್ವರ ಸ್ವಾಮಿಯನ್ನು ಸ್ತುತಿಸಿರಿ | ಏಕೆಂದರೆ ಇಂದು ಪೃಥ್ವಿಯ ಮೇಲೆ ಅತಿಶಯವಾದ ಬೆಳಕೊಂದು ಪ್ರಕಾಶಿಸಿದೆ ||
ಶುಭಸಂದೇಶ: ಯೊವಾನ್ನನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 1:29-34
ಆ ಕಾಲದಲ್ಲಿ ಯೊವಾನ್ನನು, ತಾನಿದ್ದಲ್ಲಿಗೆ ಯೇಸು ಬರುತ್ತಿರುವುದನ್ನು ಕಂಡು, "ಇಗೋ, ನೋಡಿ ಬಲಿಯರ್ಪಣೆಗಾಗಿ ದೇವರು ನೇಮಿಸಿರುವ ಕುರಿಮರಿ; ಲೋಕದ ಪಾಪಗಳನ್ನು ಪರಿಹರಿಸುವವರು ಇವರೇ. ಇವರು "ನನ್ನ ಬಳಿಕ ಬಂದವರಾದರೂ ನನಗಿಂತಲೂ ಮೊದಲೇ ಇದ್ದವರು; ಆದುದರಿಂದ ಇವರು ನನಗಿಂತಲೂ ಶ್ರೇಷ್ಠರು, " ಎಂದು ನಾನು ಹೇಳಿದುದು ಇವರನ್ನು ಕುರಿತೇ. ಇಸ್ರಯೇಲರಿಗೆ ಇವರನ್ನು ತೊರ್ಪಡಿಸಬೇಕೆಂದೇ ನಾನು ನೀರಿನಿಂದ ಸ್ನಾನದೀಕ್ಷೆ ಕೊಡುತ್ತಾ ಬಂದೆನು; ಬರಬೇಕಾಗಿದ್ದವರು ಇವರೇ ಎಂದು ನನಗೂ ತಿಳಿದಿರಳಿಲ್ಲ, "ಎಂದು ನುಡಿದನು. ಯೊವಾನ್ನನು ತನ್ನ ಸಾಕ್ಷ್ಯವನ್ನು ಮುಂದುವರೆಸುತ್ತಾ, "ಪಾರಿವಾಳದ ರೂಪದಲ್ಲಿ ಪವಿತ್ರಾತ್ಮ ಸ್ವರ್ಗದಿಂದ ಇಳಿದುಬಂದು ಅವರ ಮೇಲೆ ನೆಲಸುವುದನ್ನು ನಾನು ನೋಡಿದೆನು. ಬರಬೇಕಾಗಿದ್ದವರು ಇವರೇ ಎಂದು ನನಗೂ ತಿಳಿದಿರಳಿಲ್ಲ. ಆದರೆ ನೀರಿನಿಂದ ಸ್ನಾನದೀಕ್ಷೆ ಕೊಡುವಂತೆ ನನ್ನನ್ನು ಕಳುಹಿಸಿದ ದೇವರು, 'ಪವಿತ್ರಾತ್ಮ ಇಳಿದುಬಂದು ಯಾವ ವ್ಯಕ್ತಿಯ ಮೇಲೆ ನೆಲಸುವುದನ್ನು ನೀನು ನೋಡುವಿಯೋ ಆತನೇ ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೂಡುವಾತ, 'ಎಂದಿದ್ದರು. ಅದನ್ನು ನಾನು ಕಣ್ಣಾರೆ ನೋಡಿದ್ದೇನೆ. ಆದುದರಿಂದ ಅವರೇ ದೇವರ ಪುತ್ರನೆಂದು ಸಾಕ್ಷಿನೀಡುತ್ತಿದ್ದೇನೆ, "ಎಂದು ಹೇಳಿದನು.
No comments:
Post a Comment