ಮೊದಲನೆಯ ವಾಚನ - ಹಿಬ್ರಿಯರಿಗೆ 13: 1-8
ಸೋದರ ಪ್ರೀತಿಯಲ್ಲಿ ನೆಲೆಯಾಗಿ ನಿಲ್ಲಿರಿ. ಅತಿಥಿ ಸತ್ಕಾರ ಮಾಡುವುದನ್ನು ಮರೆಯದಿರಿ. ಅದನ್ನು ಮಾಡುವಾಗ ಅರಿಯದೆ ಕೆಲವರು ದೇವದೂತರನ್ನೇ ಉಪಚರಿಸಿದ್ದಾರೆ. ಸೆರೆಯಲ್ಲಿರುವವರನ್ನು ಸ್ಮರಿಸಿಕೊಳ್ಳಿ. ಅವರ ಸಂಗಡ ನೀವೂ ಸೆರೆಯಲ್ಲಿರುವಂತೆ ಭಾವಿಸಿಕೊಳ್ಳಿ. ಅನ್ಯಾಯಕ್ಕೆ ಒಳಗಾಗಿರುವವರನ್ನು ಜ್ಞಾಪಕದಲ್ಲಿಟ್ಟುಕೊಳ್ಳಿ. ಅನ್ಯಾಯಕ್ಕೆ ಒಳಗಾಗಬಲ್ಲ ದೇಹವೊಂದು ನಿಮಗೂ ಸಹ ಇದೆಯಲ್ಲವೇ? ವಿವಾಹ ಬಂಧನವನ್ನು ಎಲ್ಲರೂ ಗೌರವಿಸಲಿ; ದಂಪತಿಗಳ ಸಂಬಂಧವು ನಿಷ್ಕಳಂಕವಾಗಿರಲಿ. ಕಾಮುಕರೂ ವ್ಯಭಿಚಾರಿಗಳೂ ದೇವರ ನ್ಯಾಯತೀರ್ಪಿಗೆ ಗುರಿಯಾಗುತ್ತಾರೆ.
ಹಣದಾಶೆಗೆ ಬಲಿಯಾಗಬೇಡಿ. ನಿಮಗೆ ಇರುವುದರಲ್ಲಿಯೇ ತೃಪ್ತರಾಗಿರಿ. “ಎಂದೆಂದಿಗೂ ನಾನು ನಿನ್ನ ಕೈಬಿಡಲಾರೆ; ತ್ಯಜಿಸಲಾರೆ,” ಎಂದು ದೇವರೇ ಹೇಳಿದ್ದಾರೆ. ಆದ್ದರಿಂದ, “ಸರ್ವೇಶ್ವರ ನನಗೆ ಸಹಾಯಕ, ನಾನು ಭಯಪಡೆನು; ಮಾನವನು ನನಗೇನು ಮಾಡಬಲ್ಲನು?” ಎಂದು ನಾವು ಧೈರ್ಯದಿಂದ ಹೇಳಲು ಸಾಧ್ಯ.
ದೇವರ ವಾಕ್ಯವನ್ನು ನಿಮಗೆ ಹೇಳಿಕೊಟ್ಟ ಹಿಂದಿನ ಸಭಾನಾಯಕರನ್ನು ಮರೆಯಬೇಡಿ. ಅವರು ಹೇಗೆ ಬಾಳಿದರು, ಎಂಥ ಮರಣವನ್ನು ಪಡೆದರು ಎಂಬುದನ್ನು ಕುರಿತು ಆಲೋಚಿಸಿರಿ. ಅವರ ವಿಶ್ವಾಸ ನಿಮಗೆ ಆದರ್ಶವಾಗಿರಲಿ. ಯೇಸುಕ್ರಿಸ್ತರು, ನಿನ್ನೆ ಇದ್ದಹಾಗೆಯೇ ಇಂದೂ ಎಂದೆಂದೂ ಇದ್ದಾರೆ.
ಪ್ರಭುವಿನ ವಾಕ್ಯ
ಕೀರ್ತನೆ - 27: 1, 3, 5, 8-9 V.1
ನನಗೆ ಬೆಳಕು, ನನಗೆ ರಕ್ಷೆ, ಪ್ರಭುವೆ I
ನಾನಾರಿಗೂ ಅಳುಕೆನು II
ನನಗೆ ಬೆಳಕು, ನನಗೆ ರಕ್ಷೆ, ಪ್ರಭುವೆ I
ನಾನಾರಿಗೂ ಅಳುಕೆನು II
ನನ್ನ ಬಾಳಿಗಾಧಾರ ಪ್ರಭುವೆ I
ನಾನಾರಿಗೂ ಅಂಜೆನು II
ಕೇಡು ಮಾಡಬಂದರೆನಗೆ ಕೊಲೆಗಡುಕರು I
ಎಡವಿಬಿದ್ದರು, ತಾವೇ ಅಳಿದುಹೋದರು II
ಸೇನೆ ಸಮೇತ ಶತ್ರು ಬಂದರೂ ಎದೆಗುಂದೆನು I
ಸಮರಕ್ಕೆರಗಿದರೂ ನಾ ಭರವಸೆಯಿಂದಿರುವೆನು II
ಕೇಡುಕಾಲದಲ್ಲಿ ಅವಿತಿಸಿಡುವನು ನನ್ನನ್ನು ತನ್ನ ಗುಡಾರದಲಿ I
ಇರಿಸುವನು ಮರೆಯಾಗಿ ಗರ್ಭಗುಡಿಯಲಿ, ಸುರಕ್ಷಿತ ಶಿಖರದಲಿ II
“ಅರಸೆನ್ನ ಮುಖದರುಶನವನು", ಎಂದೆ ನೀನು I
“ಅರಸುವೆನು ಅದನೆ", ಎಂದು ಮರುನುಡಿದೆ ನಾನು II
ವಿಮುಖನಾಗಬೇಡ ಪ್ರಭು, ಕೋಪದಿಂದೆನ್ನ ತಳ್ಳಬೇಡಯ್ಯಾ I
ರಕ್ಷಕದೇವಾ, ಎನಗೆ ಸಹಾಯಕಾ, ದಾಸನ ಕೈಬಿಡಬೇಡಯ್ಯಾ II
ಶುಭಸಂದೇಶ - ಮಾರ್ಕ 6: 14-29
ಇಷ್ಟರಲ್ಲಿ ಯೇಸುಸ್ವಾಮಿಯ ಹೆಸರು ಮನೆ ಮಾತಾಯಿತು. ಅದು ಹೆರೋದ ಅರಸನ ಕಿವಿಗೂ ಬಿತ್ತು. ಯೇಸುವಿನ ವಿಚಾರವಾಗಿ ಕೆಲವರು, “ಮಡಿದ ಸ್ನಾನಿಕ ಯೊವಾನ್ನನೇ ಮರಳಿ ಜೀವಂತವಾಗಿ ಬಂದಿದ್ದಾನೆ; ಆದುದರಿಂದಲೇ ಮಹತ್ಕಾರ್ಯಗಳನ್ನು ಮಾಡುವ ಶಕ್ತಿ ಇವನಿಗಿದೆ,” ಎನ್ನುತ್ತಿದ್ದರು. ಇನ್ನು ಕೆಲವರು, ‘ಈತನೇ ಎಲೀಯನು’ ಎಂದೂ ಮತ್ತೆ ಕೆಲವರು, “ಪ್ರಾಚೀನ ಪ್ರವಾದಿಗಳಂತೆ ಈತನೂ ಒಬ್ಬ ಪ್ರವಾದಿ,” ಎಂದೂ ಹೇಳುತ್ತಿದ್ದರು. ಇದನ್ನೆಲ್ಲಾ ಕೇಳಿದ ಹೆರೋದನು, “ಹೌದು, ನಾನು ಶಿರಚ್ಛೇದನ ಮಾಡಿದ ಯೊವಾನ್ನನೇ ಮರಳಿ ಜೀವಂತನಾಗಿ ಬಂದಿದ್ದಾನೆ,” ಎಂದನು.
ಹೆರೋದನು ತಾನು ಇಟ್ಟುಕೊಂಡಿದ್ದ ಹೆರೋದಿಯಳ ನಿಮಿತ್ತ ಯೊವಾನ್ನನನ್ನು ಸೆರೆಹಿಡಿಸಿ ಬಂಧನದಲ್ಲಿರಿಸಿದ್ದನು. ಹೆರೋದಿಯಳು ಹೆರೋದನ ಸಹೋದರ ಫಿಲಿಪ್ಪನ ಧರ್ಮಪತ್ನಿ. ಆದರೂ ಹೆರೋದನು ಆಕೆಯನ್ನು ಹೆಂಡತಿಯಾಗಿ ಇಟ್ಟುಕೊಂಡಿದ್ದನು. ಈ ಕಾರಣ ಯೊವಾನ್ನನು, “ನಿನ್ನ ಸಹೋದರನ ಪತ್ನಿಯನ್ನು ನೀನು ಇಟ್ಟುಕೊಂಡಿರುವುದು ನ್ಯಾಯವಲ್ಲ,” ಎಂದು ಪದೇಪದೇ ಅವನನ್ನು ಎಚ್ಚರಿಸುತ್ತಿದ್ದನು. ಇದರ ನಿಮಿತ್ತ ಹೆರೋದಿಯಳು ಯೊವಾನ್ನನ ಮೇಲೆ ಹಗೆಯಿಟ್ಟು ಆತನನ್ನು ಕೊಲ್ಲಿಸಬೇಕು ಎಂದಿದ್ದಳು. ಆದರೆ ತನ್ನ ಸೇಡನ್ನು ತೀರಿಸಿಕೊಳ್ಳಲು ಅವಳಿಂದಾಗಿರಲಿಲ್ಲ. ಏಕೆಂದರೆ, ಯೊವಾನ್ನನು ಸಂತನು ಹಾಗೂ ಸತ್ಪುರುಷನು ಎಂದು ಹೆರೋದನು ಅರಿತು, ಆತನಿಗೆ ಭಯಪಟ್ಟು ಯಾವ ಅಪಾಯವೂ ಆತನಿಗೆ ಬಾರದಂತೆ ನೋಡಿಕೊಳ್ಳುತ್ತಿದ್ದನು. ಯೊವಾನ್ನನು ಹೇಳುತ್ತಿದ್ದ ಮಾತುಗಳನ್ನು ಕೇಳಿದಾಗಲೆಲ್ಲಾ ಹೆರೋದನ ಮನಸ್ಸು ಅಲ್ಲೋಲಕಲ್ಲೋಲವಾಗುತ್ತಿತ್ತು. ಆದರೂ ಆತನ ಮಾತುಗಳನು ಕಿವಿಗೊಟ್ಟು ಕೇಳುತ್ತಿದ್ದನು.
ಕಡೆಗೊಮ್ಮೆ, ಹೆರೋದಿಯಳಿಗೆ ಅನುಕೂಲವಾದ ಸಂದರ್ಭ ಒದಗಿತು. ಹೆರೋದನು ತನ್ನ ಹುಟ್ಟುಹಬ್ಬದ ದಿನಾಚರಣೆಯಂದು, ಆಸ್ಥಾನಿಕರಿಗೂ ಸೇನಾಧಿಪತಿಗಳಿಗೂ ಗಲಿಲೇಯ ಪ್ರಾಂತ್ಯದ ಪ್ರಮುಖರಿಗೂ ಔತಣಕೂಟವನ್ನು ಏರ್ಪಡಿಸಿದನು. ಆ ಸಮಾರಂಭದಲ್ಲಿ ಹೆರೋದಿಯಳ ಮಗಳು ಔತಣ ಶಾಲೆಗೆ ಬಂದು ನರ್ತನ ಮಾಡಿದಳು. ಹೆರೋದನೂ ಅವನ ಜೊತೆಯಲ್ಲಿ ಭೋಜನಕ್ಕೆ ಕುಳಿತಿದ್ದ ಅತಿಥಿಗಳೂ ಅದನ್ನು ಬಹಳವಾಗಿ ಮೆಚ್ಚಿಕೊಂಡರು. ಆಗ ಅರಸ ಹೆರೋದನು ಅವಳಿಗೆ, “ನಿನಗೆ ಏನುಬೇಕಾದರೂ ಕೇಳು, ಕೊಡುತ್ತೇನೆ” ಎಂದನು. “ನೀನು ಏನು ಕೇಳಿಕೊಂಡರೂ ಸರಿ, ನನ್ನ ರಾಜ್ಯದಲ್ಲಿ ಅರ್ಧವನ್ನು ಕೇಳಿಕೊಂಡರೂ ಅದನ್ನು ನಿನಗೆ ಕೊಡುತ್ತೇನೆ,” ಎಂದು ಪ್ರಮಾಣ ಮಾಡಿದನು. ಅವಳು ತನ್ನ ತಾಯಿಯ ಬಳಿಗೆ ಹೋಗಿ, “ಅಮ್ಮಾ, ನಾನು ಏನನ್ನು ಕೇಳಿಕೊಳ್ಳಲಿ?” ಎಂದು ವಿಚಾರಿಸಿದಳು. “ಸ್ನಾನಿಕ ಯೊವಾನ್ನನ ತಲೆಯನ್ನು ಕೇಳು,” ಎಂದು ಆಕೆ ಮಗಳನ್ನು ಪ್ರೇರೇಪಿಸಿದಳು. ಕೂಡಲೆ ಅವಳು ಅರಸನ ಬಳಿಗೆ ಧಾವಿಸಿ, “ಸ್ನಾನಿಕ ಯೊವಾನ್ನನ ತಲೆಯನ್ನು ಇದೀಗಲೇ ಒಂದು ತಟ್ಟೆಯಲ್ಲಿ ತರಿಸಿಕೊಡಿ; ಇದೇ ನನ್ನ ಬೇಡಿಕೆ,” ಎಂದು ಕೇಳಿಕೊಂಡಳು. ಅರಸನಿಗೆ ಅತೀವ ದುಃಖವಾಯಿತು. ಆದರೂ ಅತಿಥಿಗಳೆಲ್ಲರ ಮುಂದೆ ತಾನು ಮಾಡಿದ ಪ್ರಮಾಣದ ನಿಮಿತ್ತ ಅವಳ ಕೋರಿಕೆಯನ್ನು ನಿರಾಕರಿಸಲಾಗಲಿಲ್ಲ. ಆದುದರಿಂದ ಅವನು ಒಬ್ಬ ಪಹರೆಯವನನ್ನು ಕರೆದು, ಕೂಡಲೇ ಯೊವಾನ್ನನ ತಲೆಯನ್ನು ತರಬೇಕೆಂದು ಅವನಿಗೆ ಆಜ್ಞೆ ಮಾಡಿ ಕಳುಹಿಸಿದನು. ಪಹರೆಯವನು ಸೆರೆಮನೆಗೆ ಹೋಗಿ ಯೊವಾನ್ನನ ತಲೆಯನ್ನು ಕತ್ತರಿಸಿ, ಅದನ್ನು ತಟ್ಟೆಯಲ್ಲಿ ಇಟ್ಟು ಹುಡುಗಿಗೆತಂದುಕೊಟ್ಟನು. ಅವಳು ಅದನ್ನು ತನ್ನ ತಾಯಿಗೆ ಕೊಟ್ಟಳು. ಇದನ್ನು ಕೇಳಿದ ಯೊವಾನ್ನನ ಶಿಷ್ಯರು ಅಲ್ಲಿಗೆ ಬಂದು ಶವವನ್ನು ತೆಗೆದುಕೊಂಡು ಹೋಗಿ ಸಮಾಧಿ ಮಾಡಿದರು.
ಪ್ರಭುವಿನ ಶುಭಸಂದೇಶ