ಜೆರುಸಲೇಮನ್ನು ಪ್ರೀತಿಸುವವರೇ, ನೀವೆಲ್ಲರೂ ಆನಂದಿಸಿರಿ ಆಕೆಯೊಂದಿಗೆ, ಹರ್ಷಗೊಳ್ಳಿರಿ ಆಕೆಯ ಬಗ್ಗೆ. ಆಕೆಯ ನಿಮಿತ್ತ ದುಃಖಿಸುವವರೇ, 'ಸಾಂತ್ವನ ನೀಡುವ ಆಕೆಯ ಸ್ತನ್ಯದಿಂದ ತೃಪ್ತಿಗೊಳ್ಳುವೆವು, ಆಕೆಯ ಸಿರಿಸಮೃದ್ಧಿಯನ್ನು ಹೀರುತ್ತಾ ಹಿಗ್ಗುವೆವು, 'ಎಂದು ನೀವೆಲ್ಲರು ಉಲ್ಲಾಸಪಡಿ ಆಕೆಯೊಂದಿಗೆ. ಸರ್ವೇಶ್ವರಸ್ವಾಮಿ ಹೀಗೆನ್ನುತ್ತಾರೆ "ಇಗೋ, ಆಕೆಗೆ ಹರಿಯ ಮಾಡುವೆನು ಸುಖಶಾಂತಿಯನು ನದಿಯಂತೆ, ನೀಡುವೆ ರಾಷ್ಟ್ರಗಳ ವೈಭವವನು ತುಂಬಿತುಳುಕುವ ತೊರೆಯಂತೆ, ನೀವಿರುವಿರಿ ಹಾಲುಕುಡಿವ ಹಸುಳೆಯಂತೆ, ಎತ್ತಿಕೊಳ್ಳಲಾಗುವುದು ನಿಮ್ಮನು ತಾಯ ಕಂಕುಳಲಿ, ನಲಿದಾಡುವಿರಿ ನೀವು ಆಕೆಯ ಮಡಿಲಲಿ. ನಾನೇ ನಿಮ್ಮನ್ನು ಸಂತೈಸುವೆನು ತಾಯಿಯಂತೆ, ಸಾಂತ್ವನ ದೊರಕುವುದು ನಿಮಗೆ ಜೆರುಸಲೇಮಿನಲೇ. ಇದನ್ನು ಕಂಡಾಗ ನಿಮ್ಮೆದೆ ಸಂತಸದಿಂದ ಉಬ್ಬುವುದು. ಚಿಗುರುವುದು ಹಸಿ ಹುಲ್ಲಂತೆ ನಿಮ್ಮೆಲುಬು. 'ಸರ್ವೇಶ್ವರನ ಕೈಪಾಹಸ್ತ ತನ್ನ ಭಕ್ತರ ಮೇಲೆ' ಎಂಬುವುದು ವ್ಯಕ್ತವಾಗುವುದು ನಿಮಗೆ."
ಸಹೋದರರೇ, ಇತ್ತೀಚಿನ ಅಂತಿಮ ದಿನಗಳಲ್ಲಿ ದೇವರು ತಮ್ಮ ಪುತ್ರನ ಮುಖೇನ ನಮ್ಮೊಡನೆ ಮಾತನಾಡಿದ್ದಾರೆ. ದೇವರು ಇಡೀ ವಿಶ್ವವನ್ನು ಉಂಟುಮಾಡಿದ್ದು ಇವರ ಮುಖಾಂತರವೇ; ಸಮಸ್ತಕ್ಕೂ ಬಾಧ್ಯನನ್ನಾಗಿ ನೇಮಿಸಿರುವುದು ಇವರನ್ನೇ. ಅವರೇ ದೇವರ ಮಹಿಮೆಯ ತೇಜಸ್ಸು; ಇವರೇ ದೈವತ್ವದ ಪಡಿಯಚ್ಚು; ತಮ್ಮ ಶಕ್ತಿಯುತ ವಾಕ್ಯದಿಂದ ಇವರೇ ಸಮಸ್ತಕ್ಕೂ ಆಧಾರ; ನಮ್ಮ ಪಾಪಗಳನ್ನು ತೊಡೆದುಹಾಕಿ, ಸ್ವರ್ಗದಲ್ಲಿ ಮಹೋನ್ನತ ದೇವರ ಬಲ ಪಾರ್ಶ್ವದಲ್ಲಿ ಆಸೀನರಾಗಿರುವವರೂ ಇವರೇ.
ಆ ಕಾಲದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತಲೂ ದೊಡ್ಡವನು ಯಾರು? "ಎಂದು ಕೇಳಿದರು. ಯೇಸು ಒಂದು ಚಿಕ್ಕ ಮಗುವನ್ನು ತಮ್ಮ ಹತ್ತಿರಕ್ಕೆ ಕರೆದು, ಅದನ್ನು ಶಿಷ್ಯರ ನಡುವೆ ನಿಲ್ಲಿಸಿ ಹೀಗೆಂದರು: "ನೀವು ಪರಿವರ್ತನೆ ಹೊಂದಿ ಮಕ್ಕಳಂತೆ ಆಗದಿದ್ದರೆ ಸ್ವರ್ಗಸಾಮ್ರಾಜ್ಯವನ್ನು ಸೇರಲಾರಿರಿ, ಎಂದು ನಿಶ್ಚಯವಾಗಿ ಹೇಳುತ್ತೇನೆ. ಈ ಮಗುವಿನಂತೆ ನಮ್ರಭಾವವುಳ್ಳವನೇ ಸ್ವರ್ಗಸಾಮ್ರಾಜ್ಯದಲ್ಲಿ ಎಲ್ಲರಿಗಿಂತ ದೊಡ್ಡವನು. ನನ್ನ ಹೆಸರಿನಲ್ಲಿ ಇಂತಹ ಮಗುವೊಂದನ್ನು ಸ್ವೀಕಿರಿಸುವವನು ನನ್ನನ್ನೇ ಸ್ವೀಕರಿಸುತ್ತಾನೆ."






































