18.08.2024 - ಸವಿದು ನೋಡು ಪ್ರಭುವಿನ ಮಾಧುರ್ಯವನು

ಮೊದಲನೆಯ ವಾಚನ : ಜ್ಞಾನೋಕ್ತಿಗಳಿಂದ ಇಂದಿನ ಮೊದಲನೆಯ ವಾಚನ 9:1-6

ಜ್ಞಾನವೆಂಬಾಕೆ ಮನೆಯನ್ನು ಕಟ್ಟಿಕೊಂಡಿದ್ದಾಳೆ; ಅದಕ್ಕೆ ಏಳು ಸ್ತಂಭಗಳನ್ನು ಕೆತ್ತಿಸಿದ್ದಾಳೆ. ಪಶುಗಳನ್ನು ಕೊಯ್ಯಿಸಿ ದ್ರಾಕ್ಷಾರಸವನ್ನು ಬೆರೆಸಿ ಔತಣವನ್ನು ಆಕೆ ಸಿದ್ಧಪಡಿಸುತ್ತಿದ್ದಾಳೆ. ನಗರದ ರಾಜಬೀದಿಗಳಿಗೆ ತನ್ನ ದಾಸಿಯನ್ನು ಕಳುಹಿಸುತ್ತಾಳೆ. “ಮುಗ್ಧ ಮನಸ್ಕರು ಯಾರಾದರೂ ಇದ್ದರೆ ಇತ್ತ ಬರಲಿ’’ ಎಂದು ಪ್ರಕಟಿಸುತ್ತಾಳೆ. “ಬನ್ನಿ, ನಾ ಬಡಿಸುವ ಆಹಾರವನ್ನು ಉಣ ಬನ್ನಿ; ನಾ ಬೆರೆಸಿದ ದ್ರಾಕ್ಷಾರಸವನ್ನು ಕುಡಿಯ ಬನ್ನಿ, ಮೂಢರೇ, ನಿಮ್ಮ ಮೂಢತ್ವವನ್ನು ಬಿಟ್ಟು ಬಾಳಿರಿ, ವಿವೇಕ ಮಾರ್ಗದಲ್ಲಿ ನೆಟ್ಟಗೆ ನಡೆಯಿರಿ, 'ಎಂದು ಪ್ರಬೋಧಿಸುತ್ತಾಳೆ.

ಪ್ರಭುವಿನ ವಾಕ್ಯ

ಕೀರ್ತನೆ 34: 1-2, 9-14. ಶ್ಲೋಕ. 8

ಶ್ಲೋಕ:  ಸವಿದು ನೋಡು ಪ್ರಭುವಿನ ಮಾಧುರ್ಯವನು.

1.  ಪ್ರಭುವನು ನಾ ಕೊಂಡಾಡುವೆ ಎಲ್ಲ ಕಾಲದೊಳು
ಆತನ ಸ್ತುತಿ ಸದಾ ಇಹುದು ನನ್ನ ಬಾಯೊಳು
ಪ್ರಭುವಿನಲ್ಲಿದೆ ನನ್ನ ಮನದಭಿಮಾನ
ದೀನರಿದನು ಕೇಳಿ, ಪಡೆಯಲಿ ಸುಮ್ಮಾನ. ಶ್ಲೋಕ
 
2.  ದೇವಜನರೆ, ನಿಮಗಿರಲಿ ಪ್ರಭುವಿನ ಭಯಭಕುತಿ
ಅಂಥವರಿಗಿರದು ಯಾವ ಕುಂದುಕೊರತೆಯ  ಭೀತಿ
ಯುವ ಕೇಸರಿಗೆ ಇರಬಹುದು ಹಸಿವು, ದಾಹ
ಪ್ರಭುವನು ಅರಸುವವರಿಗಿರದು ಒಳಿತಿನ ಅಭಾವ. ಶ್ಲೋಕ
 
3.  ಬನ್ನಿ ಮಿತ್ರರೇ, ಆಲಿಸಿರೀ ಮಾತನು
ಕಲಿಸುವೆನು ನಾ ನಿಮಗೆ ದೇವ ಭಯವನು
ಎಲೈಮಾನವ, ಬಲುದಿನ ಬಾಳಲು ಬಯಸುವೆಯಾ?
ಆಯುರಾರೋಗ್ಯ ಭಾಗ್ಯವನು ಆಶಿಸುವೆಯಾ? ಶ್ಲೋಕ
 
4.  ಕಾದಿಡು ನಾಲಿಗೆಯನು ಕೇಡನು ಆಡದಂತೆ
ಬಿಗಿಯಿಡು ತುಟಿಯನ್ನು ಕುಟಿಲವನು ನುಡಿಯದಂತೆ
ಬಿಡು ಕೆಟ್ಟದನು, ಮಾಡು ಒಳಿತನು
ಹುಡುಕು ಶಾಂತಿಯನು, ಬೆನ್ನಟ್ಟು ಅದನು. ಶ್ಲೋಕ

ಎರಡನೆಯ ವಾಚನ : ಪೌಲನು ಎಫೆಸಿಯರಿಗೆ ಬರೆದ ಪತ್ರದಿಂದ ಇಂದಿನ ಎರಡನೆಯ ವಾಚನ 5:15-21

ಸಹೋದರರೇ, ನಿಮ್ಮ ನಡತೆಯ ವಿಷಯದಲ್ಲಿ ನೀವು ಅತ್ಯಂತ ಜಾಗರೂಕರಾಗಿರಿ; ಮೂಢರಂತಿರದೆ ಜಾಣರಾಗಿ ಜೀವಿಸಿರಿ. ಈ ದಿನಗಳು ಕೆಟ್ಟ ದಿನಗಳಾಗಿರುವುದರಿಂದ ನಿಮಗಿರುವ ಸದವಕಾಶಗಳನ್ನು ಸದ್ವಿನಿಯೋಗಿಸಿಕೊಳ್ಳಿರಿ. ಬುದ್ಧಿಹೀನರಾಗಿರದೆ ಪ್ರಭುವಿನ ಚಿತ್ತವೇನೆಂದು ಗ್ರಹಿಸಿಕೊಳ್ಳಿರಿ. ಮದ್ಯಪಾನ ಮಾಡಿ ಮತ್ತರಾಗಬೇಡಿ. ಅದು ಪಾಪಕೃತ್ಯಗಳಿಗೆ ಎಡೆಮಾಡುತ್ತದೆ. ಬದಲಿಗೆ ಪವಿತ್ರಾತ್ಮಭರಿತರಾಗಿರಿ. ಕೀರ್ತನೆ, ಹಾಡು, ಭಕ್ತಿಗೀತೆ ಇವುಗಳಿಂದ ನಿಮ್ಮ ಭಾವನೆಗಳನ್ನು ಪರಸ್ಪರ ವ್ಯಕ್ತಪಡಿಸಿರಿ. ಹೃದಯಾಂತರಾಳದಿಂದ ಹಾಡಿ ಪ್ರಭುವಿಗೆ ಸುತ್ತಿಸಲ್ಲಿಸಿರಿ. ನಮ್ಮ ಪ್ರಭು ಯೇಸು ಕ್ರಿಸ್ತರ ಹೆಸರಿನಲ್ಲಿ ಯಾವಾಗಲೂ ಎಲ್ಲಾ ವರಗಳಿಗಾಗಿಯೂ ಪಿತನಾದ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ. ಕ್ರಿಸ್ತ ಯೇಸುವಿನಲ್ಲಿ ಭಯ ಭಕ್ತಿಯುಳ್ಳವರಾಗಿದ್ದು, ಒಬ್ಬರಿಗೊಬ್ಬರು ನಮ್ರತೆಯಿಂದ ನಡೆದು ಕೊಳ್ಳಿರಿ.

ಪ್ರಭುವಿನ ವಾಕ್ಯ

 ಘೋಷಣೆ : ಯೊವಾನ್ನ 6:51

ಅಲ್ಲೆಲೂಯ, ಅಲ್ಲೆಲೂಯ!
ನಾನೇ ಸ್ವರ್ಗದಿಂದ ಇಳಿದುಬಂದ ಜೀವಂತ ರೊಟ್ಟಿ |
ಈ ರೊಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ ||
ಅಲ್ಲೆಲೂಯ!

 ಶುಭಸಂದೇಶ - ಯೊವಾನ್ನನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 6:51-58

ಆ ಕಾಲದಲ್ಲಿ ಯೇಸು ಜನ ಸಮೂಹಕ್ಕೆ ಹೀಗೆಂದರು: “ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿ, ಈ ರೊಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ. ಲೋಕೋದ್ಧಾರಕ್ಕಾಗಿ ನಾನು ಅರ್ಪಿಸುವ ನನ್ನ ಮಾಂಸವೇ ನಾನು ಕೊಡುವ ರೊಟ್ಟಿ.’’ ಅಷ್ಟಕ್ಕೆ ಆ ಯೆಹೂದ್ಯರಲ್ಲಿ ತೀವ್ರ ವಾಗ್ವಾದ ಉಂಟಾಯಿತು. “ಈತನು ತನ್ನ ಮಾಂಸವನ್ನು ತಿನ್ನಲು ಹೇಗೆ ಕೊಟ್ಟಾನು?’’ ಎಂದು ಕೇಳತೊಡಗಿದರು. ಅದಕ್ಕೆ ಯೇಸು, “ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ: ನೀವು ನರಪುತ್ರನ ಮಾಂಸವನ್ನು ತಿನ್ನದೆ, ಆತನ ರಕ್ತವನ್ನು ಕುಡಿಯದೆ ಹೋದರೆ ನಿಮ್ಮಲ್ಲಿ ಜೀವ ಇರುವುದಿಲ್ಲ. ನನ್ನ ಮಾಂಸವನ್ನು ತಿಂದು, ನನ್ನ ರಕ್ತವನ್ನು ಕುಡಿಯುವವನಲ್ಲಿ ನಿತ್ಯಜೀವ ಇರುತ್ತದೆ. ಅಲ್ಲದೆ ಅಂತಿಮ ದಿನದಂದು ನಾನು ಅವನನ್ನು ಜೀವಕ್ಕೆ ಎಬ್ಬಿಸುತ್ತೇನೆ. ನನ್ನ ಮಾಂಸವೇ ನಿಜವಾದ ಆಹಾರ; ನನ್ನ ರಕ್ತವೇ ನಿಜವಾದ ಪಾನ. ನನ್ನ ಮಾಂಸವನ್ನು ತಿಂದು, ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ನೆಲೆಸಿರುತ್ತಾನೆ. ನಾನು ಅವನಲ್ಲಿ ನೆಲೆಸಿರುತ್ತೇನೆ. ಜೀವ ಸ್ವರೂಪಿಯಾದ ಪಿತನು ನನ್ನನ್ನು ಕಳುಹಿಸಿಕೊಟ್ಟಿರುವರು, ನಾನು ಅವರಿಂದಲೇ ಜೀವಿಸುತ್ತೇನೆ. ಅಂತೆಯೇ ನನ್ನನ್ನು ಭುಜಿಸುವವನು ನನ್ನಿಂದಲೇ ಜೀವಿಸುತ್ತಾನೆ. ಸ್ವರ್ಗದಿಂದ ಇಳಿದು ಬಂದ ರೊಟ್ಟಿ ಇದೇ. ನಿಮ್ಮ ಪೂರ್ವಜರು ‘ಮನ್ನಾ’ವನ್ನು ತಿಂದರೂ ಸಾವಿಗೆ ತುತ್ತಾದರು. ಇದು" ಹಾಗಲ್ಲ. ಈ ರೊಟ್ಟಿಯನ್ನು ತಿನ್ನುವವನು ಚಿರಕಾಲ ಬಾಳುವನು,’’ ಎಂದು ಹೇಳಿದರು.

ಪ್ರಭುಕ್ರಿಸ್ತರ ಶುಭಸಂದೇಶ

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...