ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

11.08..24

ಮೊದಲನೆಯ ವಾಚನ 1 ಅರಸುಗಳು 19 : 4-8

ಲೀಯನು ತಾನೊಬ್ಬನೇ, ಮರುಭೂಮಿಯಲ್ಲಿ ಒಂದು ದಿವಸದ ಪ್ರಯಾಣದಷ್ಟು ದೂರ ಹೋಗಿ, ಒಂದು ಜಾಲೀಗಿಡದ ಕೆಳಗೆ ಕುಳಿತುಕೊಂಡು ಮರಣವನ್ನು ಅಪೇಕ್ಷಿಸಿದನು. " ಸರ್ವೇಶ್ವರಾ, ನನಗೆ ನನಗೆ ಸಾಕಾಯಿತು ನನ್ನ ಪ್ರಾಣವನ್ನು ತೆಗೆದು ಬಿಡಿ; ನನ್ನ ಪೂರ್ವಜರಿಗಿಂತ ನಾನು ಉತ್ತಮನಲ್ಲ." ಎಂದು ದೇವರನ್ನು ಪ್ರಾರ್ಥಿಸಿದನು ಬಳಿಕ ಅದೇ ಗಿಡದ ಕೆಳಗೆ ಮಲಗಿಕೊಂಡು ನಿದ್ರೆ ಮಾಡಿದನು. ಕೂಡಲೇ ಒಬ್ಬ ದೇವದೂತನು ಅವನನ್ನು ತಟ್ಟಿ, "ಎದ್ದು ಊಟ ಮಾಡು," ಎಂದು ಹೇಳಿದನು. ಎಲೀಯನು ಎದ್ದು ಸುತ್ತಲೂ ನೋಡಿದನು. ಕೆಂಡದ ಮೇಲೆ ಸುಟ್ಟ ರೊಟ್ಟಿಯೂ ಒಂದು ತಂಬಿಗೆ ನೀರೂ ತನ್ನ ತಲೆಯ ಹತ್ತಿರ ಇದ್ದವು.  ಅವುಗಳನ್ನು ತೆಗೆದುಕೊಂಡು ತಿಂದು, ಕುಡಿದು ಪುನ: ಮಲಗಿದನು. ಸರ್ವೇಶ್ವರನ ದೂತನು ಎರಡನೆಯ ಸಾರಿ ಬಂದು ಅವನನ್ನು ತಟ್ಟಿ, "ಎದ್ದು ಊಟ ಮಾಡು; ನೀನು ನಿನ್ನ ಶಕ್ತಿ ಮೀರುವಷ್ಟು ಪ್ರಯಾಣ ಮಾಡಬೇಕಾಗಿದೆ," ಎಂದನು ಅವನು ಎದ್ದು ತಿಂದು ಕುಡಿದು ಅದರ ಬಲದಿಂದ ನಾಲ್ವತ್ತು ದಿವಸ ಹಗಲಿರುಳು ಪ್ರಯಾಣ ಮಾಡಿದನು  

ಕೀರ್ತನೆ 34: 2-3 , 4-5, 6-7, 8-9  
ಶ್ಲೋಕ : ಸವಿದು ನೋಡು ಪ್ರಭುವಿನ ಮಾಧುರ್ಯವನು


ಎರಡನೆಯ ವಾಚನ ಎಫಸಿಯರಿಗೆ 4:30 - 5:2

ದೇವರ ಪವಿತ್ರಾತ್ಮರನ್ನು ನೋಯಿಸದಿರಿ; ವಿವೇಚನೆಯ ದಿನದಂದು ನಿಮಗೆ ದೇವರಿಗೆ ಸೇರಿದವರು ಎಂಬುದನ್ನು ತೋರಿಸಲು ನಿಮ್ಮ ಮೇಲೆ ಒತ್ತಲಾಗಿರುವ ಮುದ್ರೆಯು ಅವರೇ ಎಲ್ಲಾ ವಿಧವಾದ ದ್ವೇಷ ದೂಷಣೆ ಕೋಪ ಕ್ರೋಧ ಮತ್ತು ಕೆಡಕುತನವನ್ನು ನಿಮ್ಮಿಂದ ದೂರ ಮಾಡಿರಿ. ಪರಸ್ಪರ ಕರುಣೆಯಿಂದಲೂ ಕನಿಕರದಿಂದಲೂ ವರ್ತಿಸಿರಿ. ಯೇಸುಕ್ರಿಸ್ತರಲ್ಲಿ ದೇವರು ನಿಮ್ಮನ್ನು ಕ್ಷಮಿಸಿದಂತೆಯೇ ನೀವು ಸಹ ಒಬ್ಬರನ್ನೊಬ್ಬರು ಕ್ಷಮಿಸಿರಿ. ದೇವರ ಅಕ್ಕರೆಯ ಮಕ್ಕಳು ನೀವು. ಆದ್ದರಿಂದ ದೇವರನ್ನೇ ಅನುಸರಿಸಿ ಬಾಳಿರಿ. ಕ್ರಿಸ್ತೇಸು ನಮ್ಮನ್ನು ಪ್ರೀತಿಸಿ ನಮಗೋಸ್ಕರ ತಮ್ಮನ್ನೇ ಸಮರ್ಪಿಸಿದರು. ದೇವರಿಗೆ ಸುಗಂಧ ಕಾಣಿಕೆಯನ್ನಾಗಿಯೂ ಬಲಿಯನ್ನಾಗಿಯೂ ಅರ್ಪಿಸಿದರು. ಅಂತೆಯೇ ನೀವೂ  ಪ್ರೀತಿಯಿಂದ ಬಾಳಿರಿ.

ಶುಭಸಂದೇಶ : ಯೊವಾನ್ನ 6:41- 51 


ಸ್ವರ್ಗದಿಂದ ಇಳಿದು ಬಂದ ರೊಟ್ಟಿ ನಾನೇ ಎಂದು ಹೇಳಿದ್ದಕ್ಕೆ ಯಹೂದ್ಯರು ಗೊಣಗತೊಡಗಿದರು. ಅವರು, " ಈತನು ಜೋಸೆಫನ ಮಗನಾದ ಯೇಸು ಅಲ್ಲವೇ? ಈತನ ತಂದೆ ತಾಯಿ ನಮಗೆ ಗೊತ್ತಿಲ್ಲವೇ? ಅಂದಮೇಲೆ, "ನಾನು ಸ್ವರ್ಗದಿಂದ ಬಂದಿದ್ದೇನೆ" ಎಂದು ಈತನು ಹೇಳುವುದಾದರೂ ಹೇಗೆ?"  ಎಂದರು. ಅದಕ್ಕೆ ಯೇಸು, " ನಿಮ್ಮ ನಿಮ್ಮೊಳಗೆ ಗೊಣಗುಟ್ಟದಿರಿ. ನನ್ನನ್ನು ಕಳುಹಿಸಿಕೊಟ್ಟ ಪಿತನು, ನನ್ನತ್ತ ಸೆಳೆಯದ ಹೊರತು, ಯಾರೂ ನನ್ನ ಬಳಿಗೆ ಬರಲಾರರು. ಬಂದವರನ್ನು ನಾನು ಅಂತಿಮ ದಿನದಂದು ಜೀವಕ್ಕೆ ಎಬ್ಬಿಸುತ್ತೇನೆ. ದೇವರಿಂದಲೇ, ಅವರೆಲ್ಲರೂ ಬೋಧನೆ ಪಡೆಯುವರು,’ ಎಂದು ಪ್ರವಾದಿಗಳ ಗ್ರಂಥದಲ್ಲಿ ಬರೆದಿದೆ. ಪಿತನಿಗೆ ಕಿವಿಗೊಟ್ಟು ಅವರಿಂದಲೇ ಕಲಿತುಕೊಂಡ ಪ್ರತಿಯೊಬ್ಬನೂ ನನ್ನ ಬಳಿಗೆ ಬರುತ್ತಾನೆ. ಹಾಗೆಂದ ಮಾತ್ರಕ್ಕೆ ಪಿತನನ್ನು ಯಾರಾದರೂ ಕಣ್ಣಾರೆ ಕಂಡಿದ್ದಾರೆ ಎಂದಲ್ಲ, ದೇವರಿಂದ ಬಂದಿರುವ ಒಬ್ಬನು ಮಾತ್ರ ಪಿತನನ್ನು ಕಂಡಿದ್ದಾನೆ. ವಿಶ್ವಾಸವುಳ್ಳವನಲ್ಲಿ ನಿತ್ಯ ಜೀವ ಇದೆಯೆಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.  ಜೀವದಾಯಕ ರೊಟ್ಟಿ ನಾನೇ. ನಿಮ್ಮ ಪೂರ್ವಜರು ಮರಳುಗಾಡಿನಲ್ಲಿ ’ಮನ್ನಾ’ ವನ್ನು ತಿಂದರು; ಆದರೂ ಸಾವಿಗೆ ತುತ್ತಾದರು. ಸ್ವರ್ಗದಿಂದ ಇಳಿದು ಬಂದ ರೊಟ್ಟಿಯಾದರೂ ಹಾಗಲ್ಲ. ಇದನ್ನು ತಿನ್ನುವ ಯಾರಿಗೂ ಸಾವೆಂಬುದು ಇಲ್ಲ ನಾನೇ ಸ್ವರ್ಗದಿಂದ ಇಳಿದು ಬಂದ ಜೀವಂತ ರೊಟ್ಟಿ. ಈ ರೊಟ್ಟಿಯನ್ನು ತಿಂದವನು ಚಿರಕಾಲ ಬಾಳುತ್ತಾನೆ. ಲೋಕೋದ್ಧಾರಕ್ಕಾಗಿ ನಾನು ಅರ್ಪಿಸುವ ನನ್ನ ಮಾಂಸವೇ ನಾನು ಕೊಡುವ ರೊಟ್ಟಿ," ಎಂದು ಹೇಳಿದರು.

No comments:

Post a Comment