ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

01.09.24

ಮೊದಲನೆಯ ವಾಚನ: ಧರ್ಮೋಪದೇಶಕಾಂಡ 4:1-2, 6-8

ಇಸ್ರಯೇಲರೇ, ಕೇಳಿ: ನೀವು ಜೀವದಿಂದುಳಿದು ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರ ನಿಮಗೆ ಕೊಡುವ ನಾಡನ್ನು ಸೇರಿ ಸ್ವಾಧೀನಮಾಡಿಕೊಳ್ಳಬೇಕಾದರೆ ನಾನು ಈಗ ಬೋಧಿಸುವ ಆಜ್ಞಾವಿಧಿಗಳನ್ನು ಗಮನದಿಂದ ಅನುಸರಿಸಬೇಕು. ನಿಮ್ಮ ದೇವರಾದ ಸರ್ವೇಶ್ವರ ಕೊಟ್ಟ ಆಜ್ಞೆಗಳನ್ನೇ ನಾನು ನಿಮಗೆ ತಿಳಿಸುತ್ತಾ ಇದ್ದೇನೆ. ಈ ಆಜ್ಞೆಗಳನ್ನು ನೀವು ಕೈಗೊಳ್ಳಬೇಕೇ ಹೊರತು ಅವುಗಳಿಗೆ ಏನೂ ಕೂಡಿಸಬಾರದು, ಅವುಗಳಿಂದ ಏನೂ ತೆಗೆದುಬಿಡಬಾರದು. ಇವುಗಳನ್ನು ಕೈಗೊಂಡು ಅನುಸರಿಸಿರಿ. ಅನುಸರಿಸಿದ್ದೇ ಆದರೆ ಅನ್ಯಜನಗಳು ನಿಮ್ಮನ್ನು ಜ್ಞಾನಿಗಳೂ ವಿವೇಕಿಗಳೂ ಎಂದು ತಿಳಿಯುವರು, ಈ ಆಜ್ಞೆಗಳ ಬಗ್ಗೆ ಅವರು ಅರಿತುಕೊಂಡಾಗ, ' ಈ ದೊಡ್ಡ ಜನಾಂಗ ಎಂಥಾ ಜ್ಞಾನ ವಿವೇಕವುಳ್ಳ ಜನಾಂಗ, ' ಎಂದು ಮಾತಾಡಿಕೊಳ್ಳುವರು. ನಾವು ಮೊರೆಯಿಡುವಾಗಲೆಲ್ಲಾ ನಮ್ಮ ದೇವರಾದ ಸರ್ವೇಶ್ವರ ನಮಗೆ ಸಮೀಪವಾಗಿರುವಂತೆ ಬೇರೆ ಯಾವ ಜನಾಂಗಕ್ಕೆ, ಅದೆಷ್ಟೇ ದೊಡ್ಡದಾಗಿರಲಿ, ಯಾವ ದೇವರು ಹೀಗೆ ಸಮೀಪವಾಗಿರುತ್ತಾರೆ ? ನಾನು ಈ ದಿನ ನಿಮ್ಮ ಮುಂದಿಡುವ ಇಂಥ ನ್ಯಾಯಯುತವಾದ ಆಜ್ಞಾವಿಧಿಗಳನ್ನು ಒಳಗೊಂಡ ಈ ಧರ್ಮಶಾಸ್ತ್ರಕ್ಕೆ ಸಮಾನವಾದುದು ಬೇರೆ ಯಾವ ಜನಾಂಗಕ್ಕೆ ಉಂಟು ?

ಕೀರ್ತನೆ 15:1-2, 3-4, 5
ಶ್ಲೋಕ: ಯೋಗ್ಯನಾರು ಪ್ರಭೂ, ನಿನ್ನ ಗುಡಾರದಲಿ ಬಿಡಾರಮಾಡಲು ?.

ಅರ್ಹನಾರು ನಿನ್ನ ಪವಿತ್ರ ಶಿಖರದಲಿ ವಾಸವಾಗಿರಲು?
ಅಂಥವನಿರಬೇಕು ನಿರ್ದೋಷಿ, ಸನ್ಮಾರ್ಗಿ
ಸತ್ಯವ ನುಡಿಯಬೇಕು ಹೃತ್ಪೂರ್ವಕವಾಗಿ

ಚಾಡಿಯನು ಹೇಳನು, ಕೇಡನು ಮಾಡನನ್ಯರಿಗೆ
ಗುರಿಮಾಡನವನು ನೆರೆಹೊರೆಯವರನು ನಿಂದೆಗೆ
ಭ್ರಷ್ಟರನು ಧಿಕ್ಕರಿಸುವನು, ಭಕ್ತರನ್ನು ಗೌರವಿಸುವನು

ನಷ್ಟವಾದರೂ ಕೊಟ್ಟಮಾತನು ತಪ್ಪನವನು
ಕೊಡುವನು ಕಡವನು, ಬಯಸನು ಬಡ್ಡಿಯನು
ಎಡವರ ಕೇಡಿಗೆ ಪಡೆಯನು ಲಂಚವನು
ಕದಲನೆಂದಿಗೂ ಈಪರಿ ನಡೆವವನು

ಎರಡನೆಯ ವಾಚನ: ಯಕೋಬ 1:17-18, 21-22, 27

ನನ್ನ ಪ್ರಿಯ ಸಹೋದರರೇ, ಎಲ್ಲಾ ಯೋಗ್ಯ ವರಗಳೂ ಉತ್ತಮ ಕೊಡುಗೆಗಳೂ ಬರುವುದು ಮೇಲಿನಿಂದಲೇ. ಜ್ಯೋತಿರ್ಮಂಡಲವನು ಉಂಟುಮಾಡಿದ ದೇವರೇ ಅವುಗಳ ಮೂಲದಾತರು. ಅವರಲ್ಲಿ ಚಂಚಲತೆ ಇಲ್ಲ, ಮಬ್ಬುಮುಸುಕಿದ ಛಾಯೆಯೂ ಇಲ್ಲ. ಸೃಷ್ಟಿಗಳಲ್ಲೆಲ್ಲಾ ನಾವು ಪ್ರಥಮ ಫಲವಾಗುವಂತೆ ದೇವರು ತಮ್ಮ ಸುಚಿತ್ತದ ಪ್ರಕಾರ ಸತ್ಯವಾಕ್ಯದ ಮೂಲಕ ನಮಗೆ ಜೀವವಿತ್ತರು. ನಿಮ್ಮ ಹೃದಯದಲ್ಲಿ ನೆಟ್ಟಿರುವ ವಾಕ್ಯವನ್ನು ನಮ್ರತೆಯಿಂದ ಪರಿಗ್ರಹಿಸಿರಿ. ಇದು ನಿಮ್ಮ ಜೀವೋದ್ಧಾರ ಮಾಡಬಲ್ಲದು. ದೇವರ ವಾಕ್ಯವನ್ನು ಕಿವಿಯಿಂದ ಕೇಳಿದರೆ ಸಾಕೆಂದು ತಿಳಿದು ಮರುಳಾಗದಿರಿ. ಆ ವಾಕ್ಯವನ್ನು ಅನುಸರಿಸಿ ನಡೆಯುವವರಾಗಿರಿ. ಕಷ್ಟಸಂಕಟಗಳಲ್ಲಿರುವ ಅನಾಥರಿಗೂ ವಿಧವೆಯರಿಗೂ ನೆರವಾಗುವುದು ಹಾಗೂ ಪ್ರಾಪಂಚಿಕ ಮಲಿನತೆಯಿಂದ ದೂರವಿರುವುದು -- ನಮ್ಮ ತಂದೆಯಾದ ದೇವರ ಮುಂದೆ ನಿಷ್ಕಳಂಕವಾದ ಮತ್ತು ನಿರ್ಮಲವಾದ ಧರ್ಮವೆನಿಸುತ್ತದೆ.

ಶುಭಸಂದೇಶ: ಮಾರ್ಕ 7:1-8, 15-16, 21-23

ಆ ಕಾಲದಲ್ಲಿ ಒಮ್ಮೆ ಫರಿಸಾಯರು ಮತ್ತು ಜೆರುಸಲೇಮಿನಿಂದ ಕೆಲವು ಮಂದಿ ಧರ್ಮಶಾಸ್ತ್ರಿಗಳು ಯೇಸುವಿನ ಬಳಿಗೆ ಬಂದು ಸೇರಿದರು. ಯೇಸುವಿನ ಶಿಷ್ಯರಲ್ಲಿ ಕೆಲವರು ಅಶುದ್ದ ಕೈಗಳಿಂದ, ಎಂದರೆ ಶುದ್ಧಾಚಾರಕ್ಕೆ ಅನುಗುಣವಾಗಿ ಕೈತೊಳೆದುಕೊಳ್ಳದೆ ಊಟಮಾಡುವುದನ್ನು ಅವರು ನೋಡಿದರು. ಫರಿಸಾಯರು ಇತರ ಯೆಹೂದ್ಯರಂತೆ ಕೈಗಳನ್ನು ವಿಧಿಬದ್ದವಾಗಿ ತೊಳೆಯದೆ ಊಟಮಾಡುವುದಿಲ್ಲ. ಇದು ಅವರ ಪೂರ್ವಜರಿಂದ ಬಂದ ಸಂಪ್ರದಾಯ. ಪೇಟೆ ಬೀದಿಗಳಿಗೆ ಹೋಗಿ ಬಂದರೆ ಸ್ನಾನಮಾಡಿಯೇ ಊಟಮಾಡುವುದು, ತಂಬಿಗೆ, ಚೆಂಬು, ತಪ್ಪಲೆಗಳನ್ನು ಸೂತ್ರಬದ್ದವಾಗಿ ತೊಳೆಯುವುದು, ಇವೇ ಮೊದಲಾದ ಅನೇಕ ಆಚಾರಗಳು ಅವರಲ್ಲಿ ರೂಢಿಯಲ್ಲಿದ್ದವು. ಆದುದರಿಂದ ಫರಿಸಾಯರೂ ಧರ್ಮಶಾಸ್ತ್ರಿಗಳೂ, " ನಿನ್ನ ಶಿಷ್ಯರು ಪೂರ್ವಜರಿಂದ ಬಂದ ಆಚಾರಗಳನ್ನೇಕೆ ಅನುಸರಿಸುವುದಿಲ್ಲ? ಅಶುದ್ದವಾದ ಕೈಗಳಿಂದಲೇ ಅವರು ಊಟಮಾಡುತ್ತಿದ್ದಾರಲ್ಲಾ ? " ಎಂದು ಯೇಸುವನ್ನು ಕೇಳಿದರು. ಅದಕ್ಕೆ ಯೇಸು, " ಕಪಟಿಗಳೇ, ನಿಮ್ಮ ವಿಷಯದಲ್ಲಿ ಯೆಶಾಯನು ಎಷ್ಟೊಂದು ಚೆನ್ನಾಗಿ ಪ್ರವಾದಿಸಿದ್ದಾನೆ: ' ಬರಿಯ ಮಾತಿನ ಮನ್ನಣೆಯನೀಯುತ, ಹೃದಯವನು ದೂರವಿರಿಸುತ, ನರಕಲ್ಪಿತ ಕಟ್ಟಳೆಗಳನೇ ದೇವವಾಕ್ಯವೆಂದು ಉಪದೇಶಿಸುತ, ಈ ಜನರೆನಗೆ ಮಾಡುವ ಆರಾಧನೆ ವ್ಯರ್ಥ ! ಎಂದರು ದೇವರು.' ನೀವು ದೇವರ ಆಜ್ಞೆಯನ್ನು ತೊರೆದು ಮಾನವನಿರ್ಮಿತ ಸಂಪ್ರದಾಯಗಳನ್ನು ನಿಷ್ಠೆಯಿಂದ ಪರಿಪಾಲಿಸುತ್ತೀರಿ. ನಾನು ಹೇಳುವುದನ್ನು ನೀವೆಲ್ಲರೂ ಕೇಳಿ ಗ್ರಹಿಸಿಕೊಳ್ಳಿ: ಹೊರಗಿನಿಂದ ಮನುಷ್ಯನ ಒಳಗೆ ಹೋಗುವ ಯಾವುದೂ ಅವನನ್ನು ಕಲುಷಿತಗೊಳಿಸುವುದಿಲ್ಲ. ಮನುಷ್ಯನ ಅಂತರಂಗದಿಂದ ಹೊರಬರುವಂತಹುದೇ ಅವನನ್ನು ಕಲುಷಿತಗೊಳಿಸುತ್ತದೆ. ಮಾನವನ ಹೃದಯಾಂತರಾಳದಿಂದ ದುರಾಲೋಚನೆ, ಅನೈತಿಕತೆ, ಕಳ್ಳತನ, ಕೊಲೆ, ವ್ಯಭಿಚಾರ, ಲೋಭ, ಕೆಡಕುತನ, ಮೋಸ, ಭಂಡತನ, ಅಸೂಯೆ, ಅಪದೂರು, ಅಹಂಕಾರ, ಮೂರ್ಖತನ ಮೊದಲಾದವು ಹೊರಬರುತ್ತದೆ. ಈ ಎಲ್ಲಾ ಕೇಡುಗಳು ಮಾನವನ ಅಂತರಂಗದಿಂದಲೇ ಉದ್ಭವಿಸಿ, ಅವನನ್ನು ಅಶುದ್ದ ಮಾಡುತ್ತದೆ, " ಎಂದರು.

No comments:

Post a Comment